ಪಿಒಪಿ ಕುರಿತು ‘ರಾಜೀವ್ ಗಾಂಧಿ ವಿಜ್ಞಾನ ತಂತ್ರಜ್ಞಾನ ಆಯೋಗ’ ತಜ್ಞ ಸಮಿತಿ ಅಧ್ಯಯನ ಮಾಡಲಿದೆ! – ಸಾಂಸ್ಕೃತಿಕ ವ್ಯವಹಾರಗಳ ಸಚಿವ ನ್ಯಾಯವಾದಿ ಆಶಿಶ್ ಶೆಲಾರ್

ಮುಂಬಯಿ – ಪಿಒಪಿಯ (ಪ್ಲಾಸ್ಟರ್ ಆಫ್ ಪ್ಯಾರಿಸ್) ಶ್ರೀ ಗಣೇಶ ಮೂರ್ತಿಗಳ ಬಳಕೆಯ ಬಗ್ಗೆ ಸ್ಪಷ್ಟತೆ ಸಿಗುವಂತೆ ‘ರಾಜೀವ್ ಗಾಂಧಿ ವಿಜ್ಞಾನ ತಂತ್ರಜ್ಞಾನ ಆಯೋಗ’ ತಜ್ಞ ಸಮಿತಿ ಅಧ್ಯಯನ ನಡೆಸಲಿದೆ. ಸರಕಾರ ಮೂರ್ತಿಕಾರರ ಬೆಂಬಲಕ್ಕೆ ದೃಢವಾಗಿ ನಿಂತಿದ್ದು, ಮುಂಬರುವ ಮಾರ್ಚ್ 20 ರಂದು ಸರಕಾರ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಮಂಡಿಸಲಿದೆ. ಇದಕ್ಕಾಗಿ ಅಗತ್ಯ ತಜ್ಞ ವಕೀಲರನ್ನು ಒದಗಿಸಲಾಗುವುದು ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ನ್ಯಾಯವಾದಿ ಆಶಿಶ್ ಶೆಲಾರ್ ಭರವಸೆ ನೀಡಿದರು. ಪಿಒಪಿ ಮೇಲಿನ ನಿಷೇಧದ ವಿರುದ್ಧ ರಾಜ್ಯದ ವಿವಿಧ ಸಂಘಟನೆಗಳು ಮಾರ್ಚ್ 12 ರಂದು ಪರೆಲ್‌ನ ನರೆ ಪಾರ್ಕ್‌ನಲ್ಲಿ ಆಯೋಜಿಸಿದ್ದ ಮೂರ್ತಿಕಾರರ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅದಿತಿ ತಟ್ಕರೆ ಹಾಗೂ ರಾಜ್ಯಾದ್ಯಂತದ ಮೂರ್ತಿಕಾರರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಿಒಪಿ ಬಗ್ಗೆ ಗೊಂದಲ ನಿವಾರಿಸಲು ಸಚಿವ ನ್ಯಾಯವಾದಿ ಆಶಿಶ್ ಶೆಲಾರ್ ಅವರು ‘ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ’ಕ್ಕೆ ಪತ್ರ ಬರೆದು ಈ ಕುರಿತು ತಜ್ಞ ಸಮಿತಿ ನೇಮಿಸಿ ಸಮಗ್ರ ಅಧ್ಯಯನ ನಡೆಸುವಂತೆ ಕೋರಿದ್ದರು. ಸದರಿ ವಿಷಯದಲ್ಲಿ ಆಯೋಗದ ಅಧ್ಯಕ್ಷ ಡಾ. ಅನಿಲ ಕಾಕೋಡ್ಕರ್ ಅವರು ಈ ವಿಷಯದಲ್ಲಿ ತಜ್ಞ ಸಮಿತಿ ನೇಮಿಸಿ ವರದಿ ನೀಡಲಾಗುವುದು ಎಂದು ಸರಕಾರಕ್ಕೆ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹಿಂದೂ ಹಬ್ಬಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಉಲ್ಲೇಖಿಸಿದ ಆಶಿಶ್ ಶೆಲಾರ್, ಈ ಷಡ್ಯಂತ್ರವನ್ನು ವಿಫಲಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಮುಂಬಯಿ ಮಹಾನಗರ ಪಾಲಿಕೆ ಕಳೆದ ಕೆಲವು ವರ್ಷಗಳಿಂದ ಮೂರ್ತಿಕಾರರ ವಿರುದ್ಧ ನಿಲುವು ತಳೆಯುತ್ತಿದೆ ಎಂದು ಆಶಿಶ್ ಶೆಲಾರ್ ಟೀಕಿಸಿದರು.