ಅಫಘಾನಿಸ್ತಾನದ ಸಂಕಟ ಮತ್ತು ಭಾರತದ ಮೇಲೆ ಅದರ ಪರಿಣಾಮ !

ತಾಲಿಬಾನ ಮತ್ತೊಮ್ಮೆ ಅಫಘಾನಿಸ್ತಾನದ ಮೇಲೆ ನಿಯಂತ್ರಣವನ್ನು ಸಾಧಿಸಿದೆ. ಒಂದೇ ಒಂದು ಗುಂಡು ಸಿಡಿಯದ, ರಕ್ತ ಹರಿಯದ ಹಾಗೂ ಮೂರೂವರೆ ಲಕ್ಷ ಸೈನ್ಯ ಶರಣಾದಂತಹ ಈ ಯುದ್ಧವು ಜಗತ್ತಿನ ಮೊದಲ ಯುದ್ಧವಾಗಿದೆ ಎನ್ನಬಹುದು. ಈ ಪರಿಸ್ಥಿತಿ ಭವಿಷ್ಯದಲ್ಲಿ ಭಾರತದ ಮೇಲೆ ಏನು ಪರಿಣಾಮ ಬೀರಲಿದೆ ? ಭಾರತವು ಯಾವ ಅಂಶಗಳ ಮೇಲೆ ಅವರೊಂದಿಗೆ ಹೋರಾಡಬೇಕು ? ಮುಂತಾದ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡುವವರಿದ್ದೇವೆ.

(ನಿವೃತ್ತ) ಬ್ರಿಗೇಡಿಯರ ಹೇಮಂತ ಮಹಾಜನ

೧. ಮೂರೂವರೆ ಲಕ್ಷದಷ್ಟು ಸೈನ್ಯವಿದ್ದರೂ ತಾಲಿಬಾನಿ ಉಗ್ರರ ಎದುರು ಶರಣಾದ ಅಫಘಾನಿಸ್ತಾನ

‘ಕಳೆದ ೨-೩ ವರ್ಷಗಳಿಂದ ತಾಲಿಬಾನರೊಂದಿಗೆ ಚರ್ಚೆ ನಡೆದಿದೆ. ‘ಅಫಘಾನಿಸ್ತಾನದಲ್ಲಿ ಯುದ್ಧ ಗೆಲ್ಲುವುದು ಸಾಧ್ಯವಿಲ್ಲ’, ಎನ್ನುವುದು ಅಮೇರಿಕಾಗೆ ಅರಿವಾಯಿತು. ಅವರು ಈ ಯುದ್ಧದಲ್ಲಿ ಬಹುದೊಡ್ಡ ಬೆಲೆ ತೆರಬೇಕಾಯಿತು. ಅವರ ೨ ಸಾವಿರ ಅಮೇರಿಕನ್ ಸೈನಿಕರು ಹತರಾದರು ಮತ್ತು ೧೦ ಸಾವಿರಕ್ಕಿಂತ ಅಧಿಕ ಸೈನಿಕರು ಗಾಯಗೊಂಡರು. ಅಲ್ಲದೇ ಕಟ್ಟಡ ನಿರ್ಮಾಣದ ಅನೇಕ ಖಾಸಗಿ ಗುತ್ತಿಗೆದಾರರು ಕೊಲ್ಲಲ್ಪಟ್ಟರು. ಇವೆಲ್ಲದರಿಂದ ಅಮೇರಿಕಾಗೆ ಅಫಘಾನಿಸ್ತಾನದಿಂದ ಹೊರಬರಬೇಕಾಗಿತ್ತು. ಅಮೇರಿಕಾಗೆ ಅಫಘಾನಿಸ್ತಾನಕ್ಕೆ ಸಶಕ್ತ ಸೈನ್ಯವನ್ನು ಸಿದ್ಧಪಡಿಸಿಕೊಡಬೇಕು ಎಂದು ಅನಿಸಿತು. ಅದರಂತೆ ಅದು ಅಫಘಾನಿಸ್ತಾನಕ್ಕೆ ಮೂರೂವರೆ ಲಕ್ಷದಷ್ಟು ಸೈನ್ಯವನ್ನು ಸಹ ಸಿದ್ಧಪಡಿಸಿಕೊಟ್ಟಿತು. ಅದರೊಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೂಡ ಒದಗಿಸಿತು. ‘ಅಫಘಾನಿಗಳು ತಮ್ಮ ಸ್ವಂತ ಬಲದ ಮೇಲೆ ದೇಶದ ಆಡಳಿತವನ್ನು ಮಾಡಲು ಸಾಧ್ಯವಾಗಬಹುದು ಮತ್ತು ಸಮಯ ಬಂದರೆ ತಾಲಿಬಾನಿಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಬಹುದು’, ಎಂದು ಅಮೇರಿಕಾಗೆ ಅನಿಸಿತು. ಆ ದೃಷ್ಟಿಯಿಂದ ಅದು ಚರ್ಚೆಯನ್ನು ಪ್ರಾರಂಭಿಸಿತ್ತು. ಅಮೇರಿಕಾವು ಅಫಘಾನಿಸ್ತಾನದಿಂದ ಹಿಂತಿರುಗುವ ನಿರ್ಣಯವನ್ನು ತೆಗೆದುಕೊಂಡ ಕೆಲವೇ ದಿನಗಳಲ್ಲಿ ಅಫಘಾನಿಸ್ತಾನ ಸೈನ್ಯವು ತಾಲಿಬಾನಿಗಳಿಗೆ ಶರಣಾಯಿತು. ಕೇವಲ ಮಾನಸಿಕ ಯುದ್ಧದಿಂದಲೇ ಅವರು ಪರಾಭವಗೊಂಡರು. ಅಲ್ಲಿ ಮದ್ದು-ಗುಂಡುಗಳ ಸದ್ದಿಲ್ಲ, ರಕ್ತದ ಹನಿಯೂ ಚೆಲ್ಲಲಿಲ್ಲ ಮತ್ತು ಮೂರೂವರೆ ಲಕ್ಷ ಸೈನಿಕರು ಏನನ್ನೂ ಮಾಡದೇ ಸೋಲೊಪ್ಪಿಕೊಂಡ ಜಗತ್ತಿನ ಮೊದಲ ಯುದ್ಧ ಇದೆನ್ನಬಹುದು,

೨. ಅಫಘಾನಿಸ್ತಾನದಲ್ಲಿ ನಾಯಕತ್ವದ ಅಭಾವವಿದ್ದ ಕಾರಣ ಅದರ ಸೈನ್ಯ ಮತ್ತು ಸರಕಾರ ಇವು ತಾಲಿಬಾನಿಗಳ ಎದುರು ದುರ್ಬಲರಾಗುವುದು

ಅಫಘಾನಿಸ್ತಾನ ಭೂಮಿಯ ಕ್ಷೇತ್ರಫಲವು ಅಗಾಧವಾಗಿದೆ. ಅದರ ತುಲನೆಯಲ್ಲಿ ಶಸ್ತ್ರಾಸ್ತ್ರಧಾರಿ ತಾಲಿಬಾನಿಗಳ ಸಂಖ್ಯೆ ೫೦ ಸಾವಿರಕ್ಕಿಂತ ಅಧಿಕವಿಲ್ಲ. ತಾಲಿಬಾನ ಅಫಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಾಗ, ಅಫಘಾನಿಸ್ತಾನದ ಪ್ರತಿಯೊಂದು ನಗರದಲ್ಲಿ ೫-೬ ಸಾವಿರ ಸೈನಿಕರು ಮತ್ತು ಕಾಬೂಲ್‌ನ ರಕ್ಷಣೆಗಾಗಿ ೨೦ ರಿಂದ ೩೦ ಸಾವಿರ ಸೈನಿಕರು ನಿಯೋಜನೆಗೊಂಡಿದ್ದರು. ಆದಾಗ್ಯೂ ಅವರು ಹೋರಾಡಲಿಲ್ಲ. ಇದರಿಂದ ‘ಇದೊಂದು ಮಾನಸಿಕ ಯುದ್ಧವಾಗಿತ್ತು’, ಎಂದೇ ಹೇಳಬಹುದಾಗಿದೆ. ಇದರಲ್ಲಿ ಸೈನ್ಯ ಮತ್ತು ಸರಕಾರ ದುರ್ಬಲರಾಗಿ, ತಾಲಿಬಾನ ಜಯ ಸಾಧಿಸಿದ್ದರೂ, ‘ಅದಕ್ಕೆ ಚೀನಾ ಮತ್ತು ಪಾಕಿಸ್ತಾನ ಸಹಾಯ ಮಾಡಿದೆ’, ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಅಮೇರಿಕಾ ಅಷ್ಟೇ ಏಕೆ, ಅಫ್ಘಾನ ಸೈನ್ಯಕ್ಕೂ ಹೋರಾಡುವ ಇಚ್ಛೆ ಇರಲಿಲ್ಲ. ಶಸ್ತ್ರಕ್ಕಿಂತಲೂ ಶಸ್ತ್ರವನ್ನು ಚಲಾಯಿಸುವ ಸೈನಿಕನು ಅಧಿಕ ಮಹತ್ವದವನಾಗಿರುತ್ತಾನೆ. ಅವರ ಬಳಿ ಮುಂದಾಳತ್ವ ಇರಲಿಲ್ಲ, ಇದರಿಂದ ಎಲ್ಲ ಪ್ರಯತ್ನಗಳ ಮೇಲೆ ನೀರೆರೆಚಿದಂತಾಯಿತು.

೩. ಅಫಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನವು ತಾಲಿಬಾನಿಗಳಿಗೆ ಸರ್ವತೋಮುಖವಾಗಿ ಮಾಡಿದ ಸಹಾಯದಿಂದಲೇ ತಾಲಿಬಾನಿಗಳು ಯುದ್ಧವನ್ನು ಗೆದ್ದಿರುವುದು

ತಾಲಿಬಾನ ಮತ್ತು ಪಾಕಿಸ್ತಾನ ಒಂದೇ ಆಗಿವೆ. ಪಾಕಿಸ್ತಾನ ತಾಲಿಬಾನಿಗಳಿಗೆ ಅನೇಕ ವರ್ಷಗಳಿಂದ ಸಹಾಯ ಮಾಡುತ್ತಿದೆ. ಅಮೇರಿಕಾವು ಅಫಘಾನಿಸ್ತಾನದಲ್ಲಿ ತಾಲಿಬಾನ ಮತ್ತು ಪಾಕಿಸ್ತಾನದ ಸಹಾಯದಿಂದಲೇ ‘ಸೋವಿಯತ್ ಯೂನಿಯನ್’ ಅನ್ನು ಸೋಲಿಸಿತ್ತು. ತದನಂತರ ಅಮೇರಿಕಾವು ತಾಲಿಬಾನಿಗಳನ್ನು ದೂರ ಮಾಡಿತು; ಆದರೆ ಪಾಕಿಸ್ತಾನ ಮಾಡಲಿಲ್ಲ. ಬದಲಾಗಿ ಪಾಕಿಸ್ತಾನ ತಾಲಿಬಾನಿಗಳಿಗೆ ವಿವಿಧ ರೀತಿಯಲ್ಲಿ ಸಹಾಯವನ್ನು ಮಾಡುತ್ತಲೇ ಇತ್ತು. ಸದ್ಯದ ಈ ಮಾನಸಿಕ ಯುದ್ಧದ ವಿಚಾರ ಮಾಡಿದರೆ, ಈ ಯುದ್ಧದಲ್ಲಿ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿತ್ತು. ತಾಲಿಬಾನ ಸೈನಿಕರು ಹೋರಾಟಗಾರರಾಗಿದ್ದಾರೆ. ಆದರೆ ಪಾರಂಪರಿಕ ಯುದ್ಧವನ್ನು ಹೇಗೆ ಮಾಡುವುದು ಎನ್ನುವುದು ಅವರಿಗೆ ತಿಳಿದಿಲ್ಲ. ಅಫಘಾನಿಸ್ತಾನದ ಪ್ರತಿಯೊಂದು ಜಿಲ್ಲೆಯಲ್ಲಿ ಸಶಸ್ತ್ರ ಸೈನಿಕರ ಒಂದು ದೊಡ್ಡ ‘ಡಿವಿಜನ್’ ಸಿದ್ಧವಾಗಿತ್ತು; ಆದರೆ ಅವರೂ ಕೂಡ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ. ಇದರಿಂದ ಪಾಕಿಸ್ತಾನಿ ಸೈನ್ಯವೇ ತಾಲಿಬಾನಿಗಳಿಗೆ ಎಲ್ಲ ಮುಖಂಡರನ್ನು ಪೂರೈಸಿತು. ಪಾಕಿಸ್ತಾನವು ತನ್ನ ಕೆಲವು ಸೈನ್ಯಾಧಿಕಾರಿ ಮತ್ತು ವಿಶೇಷ ದಳದ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಪಕ್ಕಕ್ಕೆ ಸರಿಸುತ್ತದೆ, ೨-೩ ವರ್ಷಗಳ ಬಳಿಕ ಅವರನ್ನು ಮರಳಿ ಕೆಲಸಕ್ಕೆ ತೆಗೆದುಕೊಂಡು ಮುಂಬಡ್ತಿಯನ್ನು ನೀಡುತ್ತದೆ. ಸುಮಾರು ೩೦ ರಿಂದ ೪೦ ಸಾವಿರ ಪಾಕಿಸ್ತಾನ ಸೈನ್ಯಾಧಿಕಾರಿಗಳಿಗೆ ಮುಂದಾಳತ್ವವನ್ನು ನೀಡಲಾಯಿತು. ಅವರ ಕ್ಷಮತೆ ಬಹಳ ಉತ್ತಮವಾಗಿತ್ತು. ಯುದ್ಧ ಮಾಡಲು ಸೈನ್ಯದ ನಿಯೋಜನೆಯನ್ನು ಕೂಡ ಪಾಕಿಸ್ತಾನವೇ ಮಾಡಿತ್ತು. ಮದ್ದು-ಗುಂಡುಗಳು, ಸಾಮಗ್ರಿ, ಆಡಳಿತ ಮತ್ತು ನಿಯೋಜನೆ ಇವೆಲ್ಲವನ್ನೂ ಪಾಕಿಸ್ತಾನವೇ ಪೂರೈಸಿತ್ತು. ಆದರೆ ಅದರ ಅವಶ್ಯಕತೆ ಭಾಸವಾಗಲಿಲ್ಲ. ಈ ಕಾರ್ಯ ಅತ್ಯಂತ ನಿಯೋಜನಾಬದ್ಧವಾಗಿ ಜರುಗಿ, ಅವರು ಸಹಜವಾಗಿ ಯುದ್ಧವನ್ನು ಗೆದ್ದರು.

೪. ಅಫಘಾನಿಸ್ತಾನವು ಅಮೇರಿಕಾಗೆ ತೊಂದರೆ ಕೊಡಲು ದೊಡ್ಡ ಅಸ್ತ್ರವಾಗಿರುವುದರಿಂದ ಮತ್ತು ಅಲ್ಲಿ ದೊಡ್ಡ ಪ್ರಮಾಣದಲ್ಲಿರುವ ಖನಿಜ ಸಂಪತ್ತಿನ ಕಾರಣದಿಂದ ಚೀನಾವು ತಾಲಿಬಾನ ನಿಯಂತ್ರಿತ ಅಫಘಾನಿಸ್ತಾನಕ್ಕೆ ಸಹಾಯ ಮಾಡುವುದು

ತಾಲಿಬಾನಿಗಳಿಗೆ ಚೀನಾದ ಬೆಂಬಲವಿದೆ, ಇದರಲ್ಲಿ ಸತ್ಯವಿದೆ. ಕಳೆದ ೨ ವರ್ಷಗಳಿಂದ ಚೀನಾವು ಪಾಕಿಸ್ತಾನದ ಮಾಧ್ಯಮದಿಂದ ಅಫಘಾನಿಸ್ತಾನದಲ್ಲಿ ಸಕ್ರಿಯವಾಗಿ ಸಹಭಾಗಿಯಾಗಲು ಪ್ರಯತ್ನಿಸುತ್ತಿದೆ. ಚೀನಾವು ಅಫಘಾನಿಸ್ತಾನ ಮತ್ತು ತಾಲಿಬಾನಿಗರಿಗೆ ಅನೇಕ ಕನಸುಗಳನ್ನು ತೋರಿಸಿದೆ. ಅದು ಅಫಘಾನಿಸ್ತಾನದ ಭದ್ರತಾ ಮಂಡಳಿಯನ್ನು ತನ್ನ ದೇಶಕ್ಕೆ ಕರೆದುಕೊಂಡು ಹೋಗಿ ಬಹಳಷ್ಟು ವೈಭವವನ್ನು ತೋರಿಸಿತು. ಅವರಿಗೆ ‘ನಾವು ಅಫಘಾನಿಸ್ತಾನದಲ್ಲಿ ಎಷ್ಟು ಬಂಡವಾಳ ಹೂಡಿಕೆ ಮಾಡುತ್ತೇವೆಂದರೆ, ಅಫಘಾನಿಸ್ತಾನವು ಒಂದು ಆಧುನಿಕ ಪ್ರಗತಿಪರ ದೇಶವಾಗುವುದು’ ಎನ್ನುವ ಕನಸು ತೋರಿಸಿತು. ಚೀನಾವು ಅತ್ಯಂತ ಧೂರ್ತ ರಾಷ್ಟ್ರವಾಗಿದೆ. ಅದು ಏಶಿಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಕೈಗೊಂಡಂತಹ ಧೋರಣೆಯನ್ನೇ ಈಗ ಅದು ಅಫಘಾನಿಸ್ತಾನದಲ್ಲಿಯೂ ಕೈಕೊಳ್ಳುವಂತೆ ಕಂಡು ಬರುತ್ತಿದೆ. ಚೀನಾದ ದೃಷ್ಟಿಯಿಂದ ಅಮೇರಿಕಾಕ್ಕೆ ತೊಂದರೆ ಕೊಡಲು ಅಫಘಾನಿಸ್ತಾನವು ಒಂದು ದೊಡ್ಡ ಅಸ್ತ್ರವಾಗಿದೆ. ಅಫಘಾನಿಸ್ತಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಖನಿಜ ಸಂಪತ್ತು ಇದೆ. ಆ ನೈಸರ್ಗಿಕ ಸಂಪತ್ತಿನ ಮೇಲೆಯೂ ಚೀನಾ ಕಣ್ಣಿಟ್ಟಿದೆ.

೫. ಅಫಘಾನಿಸ್ತಾನದಲ್ಲಿ ಸಂಕಟದಲ್ಲಿ ಸಿಲುಕಿರುವ ಹಿಂದೂ ಮತ್ತು ಸಿಕ್ಖ್ ಇವರನ್ನು ಭಾರತ ಸರಕಾರವು ಮರಳಿ ಕರೆತರಬೇಕು !

ಇಲ್ಲಿಯವರೆಗೆ ಯಾವ ಭಾರತೀಯರನ್ನು ಅಫಘಾನಿಸ್ತಾನದಿಂದ ಮರಳಿ ಕರೆತರಲಾಗಿದೆಯೋ, ಅವರಲ್ಲಿ ಬಹುತೇಕವಾಗಿ ರಾಯಭಾರಿ ಕಚೇರಿಯ ಜನರು ಮತ್ತು ಅವರ ಕುಟುಂಬದವರು ಇದ್ದಾರೆ. ಅನೇಕ ಭಾರತೀಯರು ಅಲ್ಲಿ ಗುತ್ತಿಗೆದಾರರ ಮೂಲಕ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವು ಜನರು ಉದ್ಯೋಗ ಅಥವಾ ವ್ಯವಸಾಯ ಮಾಡಲು ಅಲ್ಲಿಗೆ ಹೋಗಿದ್ದಾರೆ. ಅವರ ಸಂಖ್ಯೆಯೂ ಕೆಲವು ಸಾವಿರಗಳಿರಬಹುದು. ಅದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಾರತೀಯ ಹಿಂದೂ ಮತ್ತು ಸಿಕ್ಖ್‌ರು ಇದ್ದಾರೆ. ಅಲ್ಲಿ ಮೊದಲ ಬಾರಿ ತಾಲಿಬಾನ ಆಡಳಿತ ಬರುವುದಕ್ಕಿಂತ ಮೊದಲು ಹಿಂದೂ ಮತ್ತು ಸಿಕ್ಖ್‌ರ ಜನಸಂಖ್ಯೆ ಎರಡೂವರೆ ಲಕ್ಷಕ್ಕಿಂತ ಅಧಿಕವಿತ್ತು. ಕಾಲಾಂತರ ದಲ್ಲಿ ಅಲ್ಲಿಯ ಅನೇಕ ಜನರು ಕೊಲ್ಲಲ್ಪಟ್ಟರು, ಕೆಲವರು ಮತಾಂತರ ಗೊಂಡರು, ಇನ್ನೂ ಕೆಲವರು ಭಾರತಕ್ಕೆ ಓಡಿ ಬರುವಲ್ಲಿ ಯಶಸ್ವಿಯಾದರು. ಇದರಿಂದ ಸದ್ಯದ ಅಂಕಿ-ಸಂಖ್ಯೆಗಳನುಸಾರ ಈ ಸಂಖ್ಯೆ ೧ ಸಾವಿರ ೫೦೦ ರಿಂದ ೨ ಸಾವಿರವಷ್ಟೇ ಇರಬಹುದು. ಅದರಲ್ಲಿ ಸುಮಾರು ೫೦೦ ಜನರು ಕಾಬೂಲ್‌ನ ಗುರುದ್ವಾರದಲ್ಲಿ ಒಂದೆಡೆ ಸೇರಿದ್ದಾರೆ. ಈ ಜನರ ಮೇಲೆ ಅಲ್ಲಿ ಬಹಳ ಅತ್ಯಾಚಾರವಾಗಿದೆ. ತಾಲಿಬಾನ ಅವರಿಗೆ ‘ನಾವು ನಿಮಗೆ ತೊಂದರೆಕೊಡುವುದಿಲ್ಲ, ಎಂದು ಹೇಳುತ್ತಿದೆ. ಆದರೂ ಅವರನ್ನು ಮರಳಿ ಕರೆತರುವ ಅವಶ್ಯಕತೆಯಿದೆ. ಮೊದಲೇ ಅವರ ಸಂಖ್ಯೆ ೩ ಲಕ್ಷದಿಂದ ೧ ಸಾವಿರ ೫೦೦ರ ವರೆಗೆ ಬಂದಿದೆ. ಹಾಗಾಗಿ ಉಳಿದವರನ್ನು ರಕ್ಷಿಸುವುದು ಕರ್ತವ್ಯವಾಗಿದೆ.

೬. ಭಾರತವು ಅಫಘಾನಿಸ್ತಾನದಲ್ಲಿ ಹೂಡಿರುವ ಬಂಡವಾಳ

ಭಾರತವು ಅಫಘಾನಿಸ್ತಾನದಲ್ಲಿ ೩ ಅಬ್ಜ ಡಾಲರ್ಸಗಳಿಗಿಂತ ಅಧಿಕ ಹಣವನ್ನು ಹೂಡಿಕೆ ಮಾಡಿದೆ. ಭಾರತವು ಅಲ್ಲಿ ರಸ್ತೆ, ಮತ್ತು ಆಣೆಕಟ್ಟುಗಳನ್ನು ನಿರ್ಮಿಸಿದೆ. ಅಲ್ಲದೇ ಅಫಘಾನಿಸ್ತಾನದ ಸರಕಾರಿ ನೌಕರರಿಗೆ ತರಬೇತಿಯನ್ನು ನೀಡಿದೆ. ಭಾರತದಿಂದ ಪ್ರತಿವರ್ಷ ಸುಮಾರು ೭೦೦ ಅಫಘಾನಿಗಳಿಗೆ ವಿವಿಧ ಭಾರತೀಯ ಸೈನ್ಯ ಅಕಾಡೆಮಿಯಲ್ಲಿ ಪ್ರಶಿಕ್ಷಣವನ್ನು ನೀಡಲಾಗುತ್ತಿದೆ. ಸಾವಿರಾರು ಅಫಘಾನಿಗಳು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಅಥವಾ ಪ್ರಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇವರೆಲ್ಲರಿಗೂ ಭಾರತದಲ್ಲಿಯೇ ವಾಸಿಸುವ ಇಚ್ಛೆಯಿದೆ; ಆದರೆ ಅವರಿಗೆ ಇಲ್ಲಿ ವಾಸಿಸಲು ಬಿಡಬಾರದು. ಅಫಘಾನಿಸ್ತಾನದ ಪರಿಸ್ಥಿತಿ ತಿಳಿಯಾದ ಬಳಿಕ, ಅವರನ್ನು ಮರಳಿ ಅಲ್ಲಿಗೆ ಕಳುಹಿಸಬೇಕು. ಭಾರತವು ಅವರಿಗೆ ಅಫಘಾನಿಸ್ತಾನಕ್ಕೆ ಹೋಗಿ ಅಲ್ಲಿಯ ಸ್ಥಿತಿಯನ್ನು ಸರಿಪಡಿಸಲು ಪ್ರಶಿಕ್ಷಣವನ್ನು ನೀಡಿದೆ. ಆದುದರಿಂದ ಅವರನ್ನು ಅಲ್ಲಿಗೆ ಕಳುಹಿಸಬೇಕು. ಭಾರತವು ಕಟ್ಟಿರುವ ಅನೇಕ ಕಟ್ಟಡಗಳನ್ನು ತಾಲಿಬಾನಿಗಳು ಹಾನಿ ಮಾಡಲಾರರು; ಆದರೆ ಅವರ ಹಿಂದಿನಿಂದ ಪಾಕಿಸ್ತಾನಿಗಳು ಹಾನಿಯುಂಟು ಮಾಡಬಹುದು !

೭. ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ಸೈನ್ಯವು ಅನೇಕ ಸಲ ಅಫಘಾನಿ ಪಠಾಣರನ್ನು ಸೋಲಿಸಿರುವುದು

ಸದ್ಯಕ್ಕೆ ಮಾಧ್ಯಮಗಳಲ್ಲಿ ‘ತಾಲಿಬಾನಿ ಅಥವಾ ಪಠಾಣರು ಅತ್ಯಂತ ಶೂರರು ಮತ್ತು ಹೋರಾಟಗಾರರು ಆಗಿದ್ದಾರೆ’, ಎಂಬಂತೆ ಪ್ರತಿಮೆಯನ್ನು ಬಿಂಬಿಸಲಾಗುತ್ತಿದೆ. ಭಾರತೀಯ ಸೈನ್ಯ ಅವರೊಂದಿಗೆ ಬಹಳಷ್ಟು ಸಲ ಯುದ್ಧ ಮಾಡಿದೆ. ವರ್ಷ ೧೯೪೭ ರಲ್ಲಿ ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು, ಆ ಸಮಯದಲ್ಲಿ ಅವರ ಬಳಿ ಸೈನ್ಯವಿರಲಿಲ್ಲ. ಆಗ ಅವರು ಪಖ್ತುನಿಸ್ತಾನ ಭಾಗದಲ್ಲಿ ವಾಸಿಸುವ ಆದಿವಾಸಿ ಅಥವಾ ಪಠಾಣರನ್ನು ಯುದ್ಧಕ್ಕೆ ಕಳುಹಿಸಿತ್ತು. ೨೦ ರಿಂದ ೩೦ ಸಾವಿರಕ್ಕಿಂತ ಅಧಿಕ ಪಠಾಣರು ಭಾರತದ ಸರಹದ್ದಿನಲ್ಲಿ ಅತ್ಯಂತ ವೇಗವಾಗಿ ನುಸುಳಿದ್ದರು. ಆ ಸಮಯದಲ್ಲಿ ಭಾರತೀಯ ಸೈನ್ಯವು ೬-೭ ಸಾವಿರ ಪಠಾಣರನ್ನು ಹತ್ಯೆ ಮಾಡಿತ್ತು. ಉಳಿದ ಪಠಾಣರು ಓಡಿ ಹೋಗಿದ್ದರು.

ಆ ಸಮಯದಲ್ಲಿ ಭಾರತೀಯ ಸೈನ್ಯದ ಬಳಿ ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಬಾಂಬ್ ಇರಲಿಲ್ಲ. ಧೈರ್ಯ ಮತ್ತು ಹೋರಾಡುವ ರೀತಿ, ಮುಂದಾಳತ್ವ ಇವುಗಳ ಬಲದಲ್ಲಿ ಭಾರತೀಯ ಸೈನ್ಯವು ಈ ಕಾರ್ಯವನ್ನು ಮಾಡಿತ್ತು. ಕೇವಲ ೧೫ ರಿಂದ ೨೦ ಸಾವಿರ ಭಾರತೀಯ ಸೈನಿಕರು ಪಠಾಣರನ್ನು ಸೋಲಿಸಿದ್ದರು. ಇದೇ ರೀತಿ ಲಡಾಖ್‌ನಲ್ಲಿಯೂ ಭಾರತೀಯ ಸೈನ್ಯವು ಪಠಾಣರನ್ನು ಮಣ್ಣು ಮುಕ್ಕಿಸಿತ್ತು.

ವರ್ಷ ೧೯೬೫ರಲ್ಲಿ ಫೀಲ್ಡ್ ಮಾರ್ಶಲ್ ಆಯ್ಯುಬ್ ಖಾನ ಪಾಕಿಸ್ತಾನದ ಸೇನಾಧಿಕಾರಿಯಾಗಿದ್ದರು. ಅವರೂ ಇದೇ ಖೈಬರ ಪಖ್ತುನವಾ ಪ್ರದೇಶದ ಪಠಾಣರಾಗಿದ್ದರು. ೧೯೬೫ ನೇ ಇಸವಿಯ ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅವರು ಸುಮಾರು ೧ ಸಾವಿರ ೨೦೦ ಪಠಾಣ ಸೈನಿಕರಿದ್ದ ೧೫ ಸೈನ್ಯ ದಳವನ್ನು ರಚಿಸಿದ್ದರು. ಭಾರತೀಯ ಸೈನ್ಯವು ಪಠಾಣ ಸೈನಿಕರನ್ನು ಹತ್ಯೆಗೈದು ವರ್ಷ ೧೯೬೫ ರ ಯುದ್ಧವನ್ನು ಗೆದ್ದರು.

೮. ಚೀನಾವು ಅಫಘಾನಿಸ್ತಾನಕ್ಕೆ ಆರ್ಥಿಕ ಸಹಾಯವನ್ನು ಮಾಡಿ ಅದನ್ನು ಖಾಯಂ ಗುಲಾಮರನ್ನಾಗಿ ಇಡಬಹುದು!

ಸದ್ಯ ಅಫಘಾನಿಸ್ತಾನದಲ್ಲಿರುವ ಜನತೆಯ ಭವಿಷ್ಯವು ಅತ್ಯಂತ ಭಯಾನಕವಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗನುಸಾರ ೧೦ ಲಕ್ಷಕ್ಕಿಂತ ಅಧಿಕ ಅಫ್ಘಾನಿಗಳು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ, ಕೆಲವರು ಇರಾನ್‌ಗೆ ಮತ್ತು ಕೆಲವರು ಸೆಂಟ್ರಲ್ ರಿಪಬ್ಲಿಕ್‌ಗೆ ಓಡಿ ಹೋಗಿದ್ದಾರೆ. ಇನ್ನುಳಿದವರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಯಾವುದೇ ದೇಶವನ್ನು ಮುನ್ನಡೆಸುವುದಿದ್ದರೆ, ಒಂದು ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇದರಿಂದ ತಾಲಿಬಾನಿಗಳು ಸರಕಾರ ಸ್ಥಾಪಿಸುವ ಮೊದಲು ಸರಕಾರಿ ಅಧಿಕಾರಿಗಳನ್ನು ಉಪಯೋಗಿಸಬಹುದು. ಸರಕಾರ ಸ್ಥಾಪಿಸಿ ಮೊಟ್ಟಮೊದಲು ಅಫ್ಘಾನಿ ಜನತೆಗೆ ಸುರಕ್ಷೆಯೊಂದಿಗೆ ಆಹಾರ, ವಸ್ತ್ರ ಮತ್ತು ವಾಸಯೋಗ್ಯ ಮನೆಗಳನ್ನು ಪೂರೈಸಬೇಕಾಗುವುದು. ಪಾಶ್ಚಿಮಾತ್ಯ ದೇಶಗಳು ಅವರಿಗೆ ಹಣ ಕೊಡುವುದಿಲ್ಲ. ಚೀನಾ ಅವರಿಗೆ ಹಣ ಕೊಡಬಹುದು; ಆದರೆ ಅದು ಒಂದು ಕೈಯಿಂದ ಕೊಡುತ್ತದೆ ಮತ್ತು ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತದೆ. ಯಾವ ರೀತಿ ಚೀನಾ ಸಾಲ ಕೊಟ್ಟು ಪಾಕಿಸ್ತಾನ ಮತ್ತು ಆಫ್ರಿಕಾ ದೇಶಗಳನ್ನು ತನ್ನ ಗುಲಾಮರನ್ನಾಗಿ ಮಾಡಿಕೊಂಡಿದೆಯೋ, ಅದೇ ರೀತಿ ಇಲ್ಲಿಯೂ ಮಾಡಬಹುದು. ಹಣದ ಬದಲಾಗಿ ಚೀನಾ ಅವರಿಗೆ ಸುರಕ್ಷತೆಯನ್ನು ಒದಗಿಸುವುದಾಗಿ ಹೇಳುತ್ತಾ ಅಲ್ಲಿಯ ಖನಿಜ ಸಂಪತ್ತನ್ನು ಕಬಳಿಸಲು ಪ್ರಯತ್ನಿಸಬಹುದು.

– (ನಿವೃತ್ತ) ಬ್ರಿಗೇಡಿಯರ ಹೇಮಂತ ಮಹಾಜನ, ಪುಣೆ