ದೋಹಾ (ಕತಾರ್) – ಜೂನ್ 30 ರಂದು ಅಫ್ಘಾನಿಸ್ತಾನದ ವಿಷಯದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ 25 ದೇಶಗಳಲ್ಲಿ ಭಾರತವೂ ಒಂದಾಗಿತ್ತು. ವಿಶೇಷವೆಂದರೆ, ಅಫ್ಘಾನಿಸ್ತಾನದ ಬಗ್ಗೆ ಚರ್ಚಿಸಲು ತಾಲಿಬಾನ್ ನಾಯಕರು ಭಾಗವಹಿಸಿದ್ದು ಇದೇ ಮೊದಲಬಾರಿಯಾಗಿದೆ. ಈ ಮೊದಲು ಅಫ್ಘಾನಿಸ್ತಾನವು ವಿಶ್ವಸಂಸ್ಥೆಯ ಇಂತಹ ಸಭೆಗಳನ್ನು ಬಹಿಷ್ಕರಿಸುತ್ತಿತ್ತು.
1.ತಾಲಿಬಾನ್‌ಗೆ ಮನ್ನಣೆ ನೀಡುವುದು ಈ ಸಭೆಯ ಉದ್ದೇಶವಲ್ಲ, ಎಂದು ವಿಶ್ವಸಂಸ್ಥೆ ಸ್ಪಷ್ಟಗೊಳಿಸಿದೆ.
2..ಹೀಗಿರುವಾಗಲೂ ಅನೇಕ ಮಾನವ ಹಕ್ಕುಗಳ ಸಂಘಟನೆಗಳು ಈ ಸಭೆಯನ್ನು ಟೀಕಿಸಿವೆ. ಎಲ್ಲಿಯವರೆಗೆ ತಾಲಿಬಾನ್ ಮಹಿಳೆಯರ ಅಧಿಕಾರಗಳನ್ನು ಉಲ್ಲಂಘನೆ ಮಾಡುತ್ತದೆಯೋ, ಅಲ್ಲಿಯವರೆಗೆ ಅವರೊಂದಿಗೆ ಮಾತನಾಡಬಾರದು ಮತ್ತು ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಬಾರದೆಂದು ಈ ಸಂಘಟನೆಗಳು ಕೋರಿವೆ.
3. ಸಭೆಯಲ್ಲಿ ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಜೆ.ಪಿ. ಸಿಂಗ್ ಭಾಗವಹಿಸಿದ್ದರು. ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ದೋಹಾ ನಗರದಲ್ಲಿಯೇ ಇದ್ದರು; ಆದರೆ ಅವರು ಸಭೆಗೆ ಮಾತ್ರ ಹಾಜರಾಗಿರಲಿಲ್ಲ.
4. ತಜ್ಞರ ಅಭಿಪ್ರಾಯದಂತೆ ಅಫ್ಘಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯಿಂದಾಗಿ, ಭಾರತವು ತಾಲಿಬಾನ್ ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ, ಅದು ಅಫ್ಘಾನಿಸ್ತಾನಕ್ಕೆ ಮನ್ನಣೆ ನೀಡದಿದ್ದರೂ, ಅಲ್ಲಿ ಮಾನವೀಯ ನೆರವು ನೀಡುವ ಮೂಲಕ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದನ್ನು ಮುಂದುವರೆಸಿದೆ.
ನಮ್ಮ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿರಿ ! – ತಾಲಿಬಾನ್
ತಾಲಿಬಾನ್ ಪ್ರತಿನಿಧಿ ಜಬೀವುಲ್ಲಾ ಮುಜಾಹಿದ್ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಅವರು ಪ್ರಸಾರಮಾಧ್ಯಮಗಳ ಜೊತೆ ಮಾತನಾಡಿ, ನಮಗೆ ಎಲ್ಲ ದೇಶಗಳೆದುರು ನಮ್ಮ ಅಭಿಪ್ರಾಯ ಮಂಡಿಸುವ ಅವಕಾಶ ಸಿಕ್ಕಿದೆ. ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಅಫಘಾನಿಸ್ತಾನದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಅಫಘಾನಿಸ್ತಾನದ ಆರ್ಥಿಕತೆಯು ಗಣನೀಯವಾಗಿ ದುರ್ಬಲಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಮನವಿ ಮಾಡಿದರು.