ವಿಜಯದಶಮಿಯ ಆಚರಣೆ

ಅಕ್ಟೋಬರ್ ೧೫

ವ್ಯುತ್ಪತ್ತಿ

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಯಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣಗಳು ಮುಂತಾದವರ ಮೇಲೆ ದೇವಿಯ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ.

ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಆಶ್ವಯುಜ ಶುಕ್ಲ ದಶಮಿಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ಈ ದಿನ ಸೀಮೋಲ್ಲಂಘನ, ಶಮಿ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ನಾಲ್ಕು ಕಾರ್ಯಗಳನ್ನು ಮಾಡಬೇಕಾಗಿರುತ್ತದೆ.

ಅ. ಸೀಮೋಲ್ಲಂಘನ : ಅಪರಾಹ್ನ ಕಾಲದಲ್ಲಿ (ಮಧ್ಯಾಹ್ನ, ೩ ನೆಯ ಪ್ರಹರದಲ್ಲಿ) ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆಗೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮಿವೃಕ್ಷ ಅಥವಾ ಮಂದಾರದ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. (ಶಮಿಯನ್ನು ಅಪರಾಜಿತಾ ಮತ್ತು ಮಂದಾರವನ್ನು ಅಶ್ಮಂತಕ ಎಂದೂ ಕರೆಯುತ್ತಾರೆ. ಇವೆರಡರ ಅರ್ಥ ಶತ್ರುವಿನ ನಾಶ ಮಾಡುವವನು ಎಂದಾಗಿದೆ.)

ಆ. ಶಮಿ ಪೂಜೆ : ಮುಂದಿನ ಶ್ಲೋಕದೊಂದಿಗೆ ಶಮಿ ಪೂಜೆಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಶಮಿ ಶಮಯತೇ ಪಾಪಂ ಶಮಿ ಲೋಹಿತಕಂಟಕಾ

ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯ ವಾದಿನಿ

ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ

ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ

ಅರ್ಥ : ಶಮಿ ಪಾಪಶಮನ ಮಾಡುತ್ತದೆ. ಶಮಿಯ ಮುಳ್ಳುಗಳು ನಸುಗೆಂಪಾಗಿರುತ್ತವೆ. ಶಮಿಯು ರಾಮನಿಗೆ ಪ್ರಿಯವಾದುದನ್ನು ನುಡಿಯುವಂತಹದ್ದು, ಅರ್ಜುನನ ಬಾಣಗಳನ್ನು ಧಾರಣೆ ಮಾಡುವಂತಹದ್ದಾಗಿದೆ. ಎಲೈ ಶಮಿಯೇ, ರಾಮನು ನಿನ್ನನ್ನು ಪೂಜಿಸಿದ್ದನು. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವ ವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು.

ಮಂದಾರವೃಕ್ಷದ ಪೂಜೆ ಮಾಡುವುದಿದ್ದಲ್ಲಿ ಮುಂದಿನ ಮಂತ್ರವನ್ನು ಪಠಿಸುತ್ತಾರೆ.

ಅಶ್ಮಂತಕ ಮಹಾವೃಕ್ಷ ಮಹಾದೋಷ ನಿವಾರಣ

ಇಷ್ಟಾನಾಂ ದರ್ಶನಂ ದೇಹಿ ಕುರು ಶತ್ರುವಿನಾಶನಮ್

ಅರ್ಥ : ಎಲೈ ಅಶ್ಮಂತಕ ಮಹಾ ವೃಕ್ಷವೇ, ನೀನು ಮಹಾ ದೋಷಗಳ ನಿವಾರಣಕಾರಿಯಾಗಿರುವೆ. ನನ್ನ ಮಿತ್ರರ ದರ್ಶನವನ್ನು ಮಾಡಿಸು ಮತ್ತು ನನ್ನ ಶತ್ರುಗಳನ್ನು ನಾಶ ಮಾಡು.

ಅನಂತರ ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ (ಅಥವಾ ತಾಮ್ರದ) ನಾಣ್ಯಗಳನ್ನು ಇಡುತ್ತಾರೆ. ಬಳಿಕ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿ ಎಲೆಗಳನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರವೆಂದು ದೇವರಿಗೆ ಅರ್ಪಿಸುತ್ತಾರೆ ಮತ್ತು ಆಪ್ತಮಿತ್ರರಿಗೆ ಕೊಡುತ್ತಾರೆ. ಈ ಬಂಗಾರ ವನ್ನು ಕಿರಿಯರು ಹಿರಿಯರಿಗೆ ಕೊಡಬೇಕು ಎನ್ನುವ ಸಂಕೇತವಿದೆ.

ಇ. ಅಪರಾಜಿತಾ ಪೂಜೆ : ಶಮಿಯ ಪೂಜೆ ಮಾಡಿದ ಜಾಗದಲ್ಲಿಯೇ ನೆಲದ ಮೇಲೆ ಅಷ್ಟದಳಗಳನ್ನು ಬರೆದು ಅದರ ಮೇಲೆ ಅಪರಾಜಿತಾ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಪ್ರಾರ್ಥಿಸುತ್ತಾರೆ.

ಈ. ಆಯುಧಪೂಜೆ (ಶಸ್ತ್ರಪೂಜೆ) : ಈ ದಿನ ರಾಜರು, ಸಾಮಂತರು, ಸರದಾರರು ತಮ್ಮ ತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

ರಾಜವಿಧಾನ : ದಸರಾ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿಟ್ಟಿದ್ದ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಪಡೆದಿದ್ದನು.

ಈ ದಿನದಂದೇ ಶ್ರೀರಾಮಚಂದ್ರನು ರಾವಣನನ್ನು ವಧಿಸಿ ವಿಜಯ ಪಡೆದಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧ ಪಟ್ಟ ಒಂದು ಲೋಕೋತ್ಸವವಾಗಿತ್ತು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)