ರಷ್ಯಾದ ಶಸ್ತ್ರಾಸ್ತ್ರಗಳಲ್ಲಿ ಭಾರತೀಯ ಉಪಕರಣಗಳು ಪತ್ತೆ: ಉಕ್ರೇನಿಯನ್ ಸೇನೆಯ ದಾವೆ!

ಕೀವ್ – ರಷ್ಯಾದ ಶಸ್ತ್ರಾಸ್ತ್ರಗಳಲ್ಲಿ ಮೊದಲ ಬಾರಿಗೆ ಭಾರತೀಯ ನಿರ್ಮಿತ ಉಪಕರಣಗಳು ಪತ್ತೆಯಾಗಿವೆ ಎಂದು ಉಕ್ರೇನಿಯನ್ ಸೇನೆಯು ದಾವೆ ಮಾಡಿದೆ. ‘ಕೀವ್ ಇಂಡಿಪೆಂಡೆಂಟ್’ ನ ವರದಿಯ ಪ್ರಕಾರ, ಉಕ್ರೇನ್‌ನ ಸೇನಾಪಡೆಯ ಗುಪ್ತಚರ ಸಂಸ್ಥೆಯು ತನ್ನ ವರದಿಯಲ್ಲಿ ಈ ದಾವೆ ಮಾಡಿದೆ. ಹೀಗೆ ದಾವೆ ಮಾಡುವ ಮೂಲಕ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತವು ರಷ್ಯಾಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ, ಎಂದು ಉಕ್ರೇನ್ ತೋರಿಸಲು ಪ್ರಯತ್ನಿಸುತ್ತಿದೆ ಎಂದು ಕೆಲವು ತಜ್ಞರ ಹೇಳಿಕೆ ಆಗಿದೆ.

1. ಉಕ್ರೇನ್ ಯುದ್ಧ ಆರಂಭವಾದಾಗಿನಿಂದ, ಪಾಶ್ಚಿಮಾತ್ಯ ದೇಶಗಳು ಭಾರತವು ರಷ್ಯಾಕ್ಕೆ ಸಹಾಯ ಮಾಡುತ್ತಿದೆ ಎಂದು ಆರೋಪಿಸುತ್ತಿವೆ. ಉಕ್ರೇನ್ ಮೇಲೆ ಯುದ್ಧ ಹೇರಿದ ನಂತರ, ಅಮೆರಿಕವು ರಷ್ಯಾದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತ್ತು. ಭಾರತ ಅದನ್ನು ತಪ್ಪಿಸಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕೆಂದು ಅಮೆರಿಕದ ಇಚ್ಛೆ ಇದೆ; ಆದರೆ ಮೋದಿ ಸರಕಾರ ಇದಕ್ಕೆ ಸಿದ್ಧವಿಲ್ಲ. ಇದರಿಂದಾಗಿ ಉಕ್ರೇನ್ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಅಸಮಾಧಾನ ಹೊಂದಿವೆ.

2. ಕಳೆದ ಹಲವಾರು ವರ್ಷಗಳಿಂದ ರಷ್ಯಾ ಭಾರತದ ಶಸ್ತ್ರಾಸ್ತ್ರಗಳ ಎಲ್ಲಕ್ಕಿಂತ ಅತಿದೊಡ್ಡ ಪೂರೈಕೆದಾರ ಆಗಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿದ ನಂತರ ಭಾರತ ಫ್ರಾನ್ಸ್‌ನಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ.

3. ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಭಾರತ ಮತ್ತು ರಷ್ಯಾ ಇವರ ನಡುವಿನ ವ್ಯಾಪಾರವು ದಾಖಲೆಯ ಮಟ್ಟವನ್ನು ತಲುಪಿದೆ.

4. ರಷ್ಯಾ ಜೊತೆಗಿನ ಸ್ನೇಹವನ್ನು ಮುರಿಯುವುದಿಲ್ಲ ಎಂದು ಭಾರತವು ಅಮೆರಿಕಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಭಾರತವು ರಷ್ಯಾದೊಂದಿಗೆ ಹಲವಾರು ಹೊಸ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ.

ಸಂಪಾದಕೀಯ ನಿಲುವು

ಉಕ್ರೇನ್ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶಕ್ಕೆ ಉಕ್ರೇನ್ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಸರಿಯೇ? ಹಾಗಾಗಿ ರಷ್ಯಾದ ಶಸ್ತ್ರಾಸ್ತ್ರಗಳಲ್ಲಿ ಭಾರತೀಯ ಉಪಕರಣಗಳು ಕಂಡುಬಂದರೆ ಉಕ್ರೇನ್ ಗೆ ಏಕೆ ಸಮಸ್ಯೆ ?