ಮಾದಕ ದ್ರವ್ಯಗಳ ಪ್ರಕರಣದಲ್ಲಿ ಶ್ರೀ ತುಳಜಾಭವಾನಿ ದೇವಸ್ಥಾನದ ಅರ್ಚಕರ ಅವಮಾನವನ್ನು ನಿಲ್ಲಿಸಿ ! – ಕಿಶೋರ ಗಂಗಣೆ, ಮಾಜಿ ಅಧ್ಯಕ್ಷರು, ಶ್ರೀ ತುಳಜಾಭವಾನಿ ಪೂಜಾರಿ ಮಂಡಳಿ

ಬಂಧಿತ ಆರೋಪಿಗಳ ಉಪನಾಮ ಮಾತ್ರವೇ ಪೂಜಾರಿ ಎಂದು ಸ್ಪಷ್ಟನೆ !

ಕಿಶೋರ ಗಂಗಣೆ

ಧಾರಾಶಿವ – ಕೆಲವು ವರ್ಷಗಳ ಹಿಂದೆ ತುಳಜಾಪುರ ಪ್ರದೇಶದಲ್ಲಿದ್ದ ಮಾದಕ ದ್ರವ್ಯದ ಪ್ರಕರಣ ಬೆಳಕಿಗೆ ಬಂದಿದೆ. ವಾಸ್ತವವಾಗಿ, ಈ ಪ್ರಕರಣದಲ್ಲಿ ಬಂಧಿತರಾದವರ ಉಪನಾಮಗಳು ಮಾತ್ರ ‘ಪೂಜಾರಿ’ ಆಗಿದೆ. ಆದರೂ ಅವರನ್ನು ‘ಶ್ರೀ ಭವಾನಿ ದೇವಿಯ ಅರ್ಚಕರು’ ಎಂದು ಸಂಬೋಧಿಸಲಾಗುತ್ತಿದೆ. ಕೆಲವು ಮಾಧ್ಯಮಗಳಲ್ಲಿ ಈ ಪ್ರಕರಣದ ಬಗ್ಗೆ ತಪ್ಪು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದ್ದು ಶ್ರೀ ತುಳಜಾಭವಾನಿ ದೇವಸ್ಥಾನದ ಅರ್ಚಕರ ಅವಮಾನವನ್ನು ನಿಲ್ಲಿಸಬೇಕು ಎಂದು ‘ಶ್ರೀ ತುಳಜಾಭವಾನಿ ಪೂಜಾರಿ ಮಂಡಳಿ’ಯ ಮಾಜಿ ಅಧ್ಯಕ್ಷರಾದ ಶ್ರೀ. ಕಿಶೋರ ಗಂಗಣೆಯವರು ವಿನಂತಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು; ಆದರೆ ಅರ್ಚಕರ ಅನಗತ್ಯ ಅವಮಾನವೇಕೆ? – ಅಮರರಾಜೆ ಅಂಬಾದಾಸರಾವ ಕದಮ-ಪರಮೇಶ್ವರ

ಈ ಪ್ರಕರಣದ ಕುರಿತು ‘ಶ್ರೀ ತುಳಜಾಭವಾನಿ ಭೋಪೆ ಪೂಜಾರಿ ಮಂಡಳಿ’ಯ ಅಧ್ಯಕ್ಷರಾದ ಶ್ರೀ. ಅಮರರಾಜೆ ಅಂಬಾದಾಸರಾವ ಕದಮ-ಪರಮೇಶ್ವರರವರು ಮಾತನಾಡುತ್ತ, “ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವವರನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ; ಆದರೆ ಅರ್ಚಕರನ್ನು ಅನಗತ್ಯವಾಗಿ ಅವಮಾನಿಸುವುದು ಏಕೆ ? ನಮ್ಮ ಕುಟುಂಬದ ಅನೇಕರಿಗೆ ಅಡಿಕೆಯ ಚೂರನ್ನು ತಿನ್ನುವ ಅಭ್ಯಾಸವೂ ಇಲ್ಲ, ಇದು ವಸ್ತುಸ್ಥಿತಿಯಾಗಿದೆ. ಆದರೆ ಇದನ್ನು ಯಾರೂ ಹೇಳುವುದಿಲ್ಲ. ಮಾದಕ ದ್ರವ್ಯ ಪ್ರಕರಣವು ತಾರ್ಕಿಕ ಅಂತ್ಯವನ್ನು ತಲುಪಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಮಂಡಳಿಯ ಅಭಿಪ್ರಾಯ. ಈ ಬಗ್ಗೆ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ, ಎಂದು ಹೇಳಿದರು.

ಈ ಬಗ್ಗೆ ‘ಪಾಳೀಕರ ಮಂಡಳಿ’ಯ ಅಧ್ಯಕ್ಷರಾದ ವಿಪಿನ ಶಿಂದೆಯವರು ಮಾತನಾಡಿ, `ನಿಜವಾಗಿ ನೋಡಿದರೆ, 3 ವರ್ಷಗಳ ಹಿಂದೆ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಪೂಜಾರಿ ಮಂಡಳಿಯು ಮೊದಲು ಧ್ವನಿ ಎತ್ತಿತ್ತು. ಈಗ ಮಾದಕ ದ್ರವ್ಯ ಪ್ರಕರಣದಲ್ಲಿ ಕೇಳಿಬರುತ್ತಿರುವ ಹೆಸರುಗಳಿಗೂ ದೇವಿಯ ಪೂಜೆಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ, ಕೆಲವು ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ‘ಮಾದಕ ದ್ರವ್ಯದ ಪ್ರಕರಣದಲ್ಲಿ ಶ್ರೀ ತುಳಜಾಭವಾನಿ ದೇವಿಯ ಅರ್ಚಕರಿಗೆ ಸಂಬಂಧವಿದೆ’ ಎಂಬ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ’ ಎಂದು ಹೇಳಿದರು.