ಮಹಿಳೆಯರೇ, ನವರಾತ್ರಿಯಲ್ಲಿ ವಿವಿಧ ಬಣ್ಣಗಳ ಸೀರೆಗಳನ್ನು ಧರಿಸುವುದರಿಂದಲ್ಲ, ದೇವಿಯ ಬಗೆಗಿನ ಶುದ್ಧ ಸಾತ್ತ್ವಿಕ ಭಾವವನ್ನು ಜಾಗೃತಗೊಳಿಸಿ ಅವಳ ಕೃಪೆ ಸಂಪಾದಿಸಿ !

‘ನವರಾತ್ರಿಯ ಒಂಭತ್ತು ದಿನಗಳಲ್ಲಿ ಪ್ರತಿಯೊಂದು ದಿನ ನಿರ್ದಿಷ್ಟ ಬಣ್ಣದ ಸೀರೆಯನ್ನು ಉಟ್ಟುಕೊಳ್ಳಬೇಕು, ಎಂದು ಇತ್ತೀಚೆಗೆ ಬಹಳ ಪ್ರಚಾರವಾಗುತ್ತದೆ. ‘ಇದರ ಹಿಂದೆ ನಿಖರವಾಗಿ ಜ್ಯೋತಿಷ್ಯ ಶಾಸ್ತ್ರೀಯ ಕಾರಣವೇನಾದರೂ ಇದೆಯೇ ?’ ಎಂಬ ಪ್ರಶ್ನೆಯನ್ನು ಅನೇಕ ಜನರು ಕೇಳಿದರು ಕೆಲವು ಸ್ತ್ರೀಯರು ‘ನನ್ನ ಬಳಿ ಈ ಬಣ್ಣದ ಸೀರೆ ಇಲ್ಲ, ಹಾಗಾದರೆ ನನ್ನ ಮೇಲೆ ದೇವಿಯು ಪ್ರಸನ್ನಳಾಗುವುದಿಲ್ಲವೇ ? ನನ್ನ ವ್ರತಭಂಗವಾಗುವುದೇ ? ದೇವಿಯು ಕೋಪಗೊಳ್ಳುವಳೇ ?’ ಇಂತಹ ಅನೇಕ ಪ್ರಶ್ನೆಗಳನ್ನು ಕೇಳಿದರು. ಇಂತಹ ಪ್ರಶ್ನೆಗಳಿಂದ ಸ್ತ್ರೀಯರ ಮನಸ್ಸಿನಲ್ಲಿ ದೇವಿಯ ಭಕ್ತಿಗಿಂತ ಭಯವೇ ಹೆಚ್ಚು ಇದೆ ಎಂದು ಗಮನಕ್ಕೆ ಬಂದಿತು. ‘ನವರಾತ್ರಿಯ ಉತ್ಸವವು ಭಕ್ತಿಮಯವಾಗಿರಬೇಕು, ಅದು ಭೀತಿಮಯವಾಗಿರಬಾರದು’ ಎಂದೆನಿಸುತ್ತದೆ.

ಸೌ. ಪ್ರಾಜಕ್ತಾ ಜೋಶಿ

ವಾಸ್ತವದಲ್ಲಿ ದೇವತೆಗಳ ಪೂಜೆಯನ್ನು ಮಾಡುವಾಗ ‘ಧೂತ ವಸ್ತ್ರ’ ಅಂದರೆ ‘ಸ್ವಚ್ಛವಾಗಿ ತೊಳೆದ ಬಟ್ಟೆಗಳನ್ನು ಧರಿಸಬೇಕು’. ‘ಇಂತಿಂತಹ ಒಂದು ಬಣ್ಣದ ಬಟ್ಟೆಯನ್ನು ಧರಿಸಬೇಕು’ ಎಂದು ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿಲ್ಲ. ಯಾರಿಗೆ ಸಾಧ್ಯವಿದೆಯೋ, ಅವರು ವಿವಿಧ ಬಣ್ಣಗಳ ಸೀರೆಗಳನ್ನು ಉಟ್ಟುಕೊಳ್ಳಬೇಕು; ಆದರೆ ಯಾರಿಗೆ ಸಾಧ್ಯವಿಲ್ಲವೋ, ಅವರು ಯಾವುದೇ ಬಣ್ಣದ ಸ್ವಚ್ಛವಾಗಿ ತೊಳೆದಿರುವ ಬಟ್ಟೆಯನ್ನು ಉಪಯೋಗಿಸಬೇಕು. ನಿಶ್ಚಿತ ಬಣ್ಣದ ಸೀರೆಯನ್ನು ಧರಿಸಲು ಸಾಧ್ಯವಾಗದಿದ್ದರೆ, ದೇವಿಯು ಕೋಪಗೊಳ್ಳುವುದಿಲ್ಲ. ಏಕೆಂದರೆ ದೇವಿ-ದೇವತೆಗಳಿಗೆ ಭಕ್ತರ ಮನಸ್ಸಿನ ಶುದ್ಧ ಸಾತ್ತ್ವಿಕ ಭಾವವು ಹೆಚ್ಚು ಪ್ರಿಯವಾಗಿರುತ್ತದೆ.

ಪಾಡ್ಯದಿಂದ ನವರಾತ್ರಿಯ ವರೆಗೆ ಒಂಭತ್ತು ದಿನ ದೇವಿಯ ಒಂಭತ್ತು ರೂಪಗಳನ್ನು ಪೂಜಿಸುತ್ತಾರೆ, ೧. ಶೈಲಪುತ್ರಿ, ೨. ಬ್ರಹ್ಮಚಾರಿಣಿ, ೩. ಚಂದ್ರಘಂಟಾ, ೪. ಕೂಷ್ಮಾಂಡ, ೫. ಸ್ಕಂದಮಾತಾ, ೬. ಕಾತ್ಯಾಯನಿ, ೭. ಕಾಲರಾತ್ರಿ, ೮. ಮಹಾಗೌರಿ, ೯. ಸಿದ್ಧಿದಾತ್ರಿ, ಹೀಗೆ ದೇವಿಯ ಒಂಭತ್ತು ರೂಪಗಳಿವೆ. ಅಖಂಡ ನಂದಾದೀಪವನ್ನು ಪ್ರಜ್ವಲಿಸಿ ಆದಿಮಾಯೆಯನ್ನು ಒಂಭತ್ತು ದಿನಗಳ ಕಾಲ ಮನಃಪೂರ್ವಕವಾಗಿ ಪೂಜಿಸುತ್ತಾರೆ. ನವರಾತ್ರಿಯ ಕಾಲಾವಧಿಯಲ್ಲಿ ‘ಕುಂಕುಮಾರ್ಚನೆ ಮಾಡುವುದು, ದೇವಿಯ ಮಹಾತ್ಮ್ಯೆಯನ್ನು ಓದುವುದು, ದೇವಿಗೆ ಹೂವುಗಳ ಮಾಲೆಯನ್ನು ಅರ್ಪಿಸುವುದು, ಸಪ್ತಶತಿ ಗ್ರಂಥದ ವಾಚನ ಮಾಡುವುದು, ಇವುಗಳಿಗೆ ವಿಶೇಷ ಮಹತ್ವವಿದೆ.

ನವರಾತ್ರಿಯಲ್ಲಿ ‘ಶ್ರವಣ, ಕೀರ್ತನೆ, ಸ್ಮರಣೆ, ವಂದನೆ, ಅರ್ಚನೆ, ಪಾದಸೇವನೆ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ, ಈ ನವವಿಧ ಭಕ್ತಿಯನ್ನು ಮಾಡಿ ದೇವಿಗೆ ಅನನ್ಯ ಭಾವದಿಂದ ಶರಣಾಗೋಣ. ‘ನವರಾತ್ರಿಯಲ್ಲಿ ಒಂಭತ್ತು ದಿನ ಒಂಭತ್ತು ಬಣ್ಣಗಳ ಸೀರೆಗಳನ್ನು ಉಟ್ಟುಕೊಳ್ಳುವುದು’ ಎಂದರೆ ನವರಾತ್ರೋತ್ಸವವನ್ನು ಆಚರಿಸುವುದು, ಎಂದಲ್ಲ. ದೇವಿ-ದೇವತೆಗಳು ವ್ಯಕ್ತಿಯ ಬಾಹ್ಯ ಬಣ್ಣದಿಂದಲ್ಲ, ಆದರೆ ಅಂತರ್ಮನದಲ್ಲಿನ ಶುದ್ಧ ಸಾತ್ತ್ವಿಕ ಭಕ್ತಿಯಿಂದ ಪ್ರಸನ್ನರಾಗುತ್ತಾರೆ. ದೇವರಿಗೆ ಭಾವವು ಪ್ರಿಯವಾಗಿದೆ. ‘ಪ್ರತಿಯೊಬ್ಬರೂ ಶರಣಾಗತಭಾವದಿಂದ ಅಂತಃಕರಣಪೂರ್ವಕ ದೇವಿಯ ಉಪಾಸನೆಯನ್ನು ಭಕ್ತಿಭಾವದಿಂದ ಮಾಡಿ ಧರ್ಮಪಾಲನೆಯನ್ನು ಮಾಡುವುದು’ ಇದೇ ದೇವಿಯ ನಿಜವಾದ ಉಪಾಸನೆಯಾಗಿದೆ.

ದೇವಿಯು ಅನೇಕ ಅಸುರರನ್ನು ನಾಶ ಮಾಡಿದ್ದಾಳೆ. ಕೆಟ್ಟ ವಿಚಾರಗಳನ್ನು ಮತ್ತು ಅಪಪ್ರಚಾರಗಳನ್ನು ಧೈರ್ಯದಿಂದ ನಾಶಗೊಳಿಸಿ ಭಕ್ತಿಯನ್ನು ಹೆಚ್ಚಿಸುವಂತೆ ದೇವಿಯಲ್ಲಿ ಪ್ರಾರ್ಥಿಸೋಣ. ಧರ್ಮಗ್ರಂಥ ಮತ್ತು ಪುರಾಣಗಳಿನುಸಾರ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಲು ಶಾರದೀಯ ನವರಾತ್ರಿಯು ಉತ್ತಮ ಕಾಲವಾಗಿದೆ.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ್ಯ ವಿಶಾರದ, ರತ್ನ ಶಾಸ್ತ್ರ  ವಿಶಾರದ, ಅಷ್ಟಕವರ್ಗ ವಿಶಾರದ, ಸರ್ಟಿಫೈಡ್ ಡೌಸರ್, ರಮಲ ಪಂಡಿತ, ಹಸ್ತಾಕ್ಷರ  ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಫೋಂಡಾ, ಗೋವಾ (೧೩.೧೦.೨೦೨೦)