ತಿಥಿ : ಆಶ್ವಯುಜ ಶುಕ್ಲ ಪಾಡ್ಯದಿಂದ ನವಮಿ ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯದಂದು ಈ ವ್ರತವು ಪ್ರಾರಂಭವಾಗುತ್ತದೆ.
ಅ. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನದ ಮೇಲೆ ಕುಳಿತಿರುವ ಅಷ್ಟಭುಜ ದೇವಿಯನ್ನು ಹಾಗೂ ನವಾರ್ಣವ ಯಂತ್ರವನ್ನು ಸ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಘಟಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿಪೂರ್ವಕಪೂಜೆಯನ್ನು ಮಾಡುತ್ತಾರೆ.
ಆ. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಘಟಸ್ಥಾಪನೆ ಮತ್ತು ಮಾಲಾಬಂಧನವನ್ನು ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳುಗಳ ಗಾತ್ರದಷ್ಟು ಚೌಕಾಕಾರವನ್ನು ಮಾಡಿ ಅದರಲ್ಲಿ (ಐದು ಅಥವಾ) ಏಳು ಧಾನ್ಯಗಳನ್ನು ಹಾಕಬೇಕು. ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ಸಾವಿಕಾಳು (ತೃಣ ಧಾನ್ಯ) ಮತ್ತು ಕಡಲೆ ಇವು ಸಪ್ತಧಾನ್ಯಗಳಾಗಿವೆ.
ಇ. ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು.
ಈ. ಸಪ್ತಧಾನ್ಯ ಮತ್ತು ಕಲಶ ಸ್ಥಾಪನೆಯ ವೈದಿಕ ಮಂತ್ರಗಳು ಗೊತ್ತಿಲ್ಲದಿದ್ದರೆ, ಪುರಾಣೋಕ್ತ ಮಂತ್ರಗಳನ್ನು ಹೇಳಬೇಕು. ಅವೂ ಬರದಿದ್ದರೆ ಆಯಾ ವಸ್ತುಗಳ ಹೆಸರು ಹೇಳಿ ‘ಸಮರ್ಪಯಾಮಿ’ ಎಂದು ನಾಮಮಂತ್ರದ ಉಪಯೋಗವನ್ನು ಮಾಡಬೇಕು. ಅಲ್ಲದೇ ಕಲಶದೊಳಗೆ ತಲುಪುವಂತೆ ಹೂವಿನ ಮಾಲೆಯನ್ನು ಕಟ್ಟಬೇಕು.
ಉ. ಒಂಬತ್ತು ದಿನಗಳ ವರೆಗೆ ಪ್ರತಿದಿನ ಕುಮಾರಿಯರ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಹೆಚ್ಚಿರುತ್ತದೆ.
ಊ. ಅಖಂಡ ದೀಪಪ್ರಜ್ವಲನೆ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತಿಪಾಠ, ದೇವಿಭಾಗವತ, ಬ್ರಹ್ಮಾಂಡ ಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾ ಪೂಜೆ, ಸರಸ್ವತಿ ಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಸಾಮರ್ಥ್ಯದಂತೆ ನವರಾತ್ರಿ ಆಚರಿಸುತ್ತಾರೆ.
ಎ. ಉಪವಾಸವಿದ್ದರೂ ದೇವತೆಗೆ ಅನ್ನದ ನೈವೇದ್ಯ ಮಾಡಬೇಕು.
ಏ. ಈ ಕಾಲದಲ್ಲಿನ ಆಚಾರದ ಒಂದು ಉತ್ಕೃಷ್ಟ ಅಂಗವೆಂದು ಶಮಶ್ರೂ ಮಾಡದಿರುವುದು (ಗಡ್ಡ ಮೀಸೆ ಮತ್ತು ತಲೆಯ ಕೂದಲನ್ನು ಕತ್ತರಿಸದಿರುವುದು), ಕಠೋರ ಬ್ರಹ್ಮಚರ್ಯ, ಮಂಚ ಮತ್ತು ಹಾಸಿಗೆಯ ಮೇಲೆ ಮಲಗದಿರುವುದು, ಗಡಿಯನ್ನು ಉಲ್ಲಂಘಿಸದಿರುವುದು, ಪಾದರಕ್ಷೆ ಹಾಕದಿರುವುದು ಇತ್ಯಾದಿಗಳನ್ನು ಪಾಲಿಸುತ್ತಾರೆ.
ಐ. ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿಯ ವಿಸರ್ಜನೆಯಾಗುವುದು ಆವಶ್ಯಕವಾಗಿದೆ. ಆ ದಿನ ಸಮಾರಾಧನೆ (ಭೋಜನಪ್ರಸಾದ) ಆದ ನಂತರ ಸಮಯವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಶೋಪಚಾರ ಪೂಜೆ ಮಾಡಬೇಕು, ಸಮಯವಿಲ್ಲದಿದ್ದರೆ ಮರುದಿನ ದೇವರಿಗೆ ಪೂಜಾಭಿಷೇಕ ಮಾಡಬೇಕು.
ಒ. ದೇವಿಯ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಬಿತ್ತಿದ ಸಪ್ತಧಾನ್ಯಗಳ ಸಸಿಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗೂ ‘ಶಾಕಂಭರಿದೇವಿ’ ಎಂದು ತಿಳಿದು ಸ್ತ್ರೀಯರು ಅವುಗಳನ್ನು ತಲೆಯ ಮೇಲೆ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ.
ಓ. ಕೊನೆಗೆ, ಸ್ಥಾಪಿಸಿದ ಘಟ ಮತ್ತು ದೇವಿಯನ್ನು ವಿಸರ್ಜಿಸಬೇಕು.
ಔ. ಕೊಡ ಊದುವುದು: ಅಷ್ಟಮಿಗೆ ಸ್ತ್ರೀಯರು ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಕೊಡ ಊದುತ್ತಾರೆ.
(ಆಧಾರ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)
ನವರಾತ್ರಿಯಲ್ಲಿ ಶ್ರೀ ದುರ್ಗಾದೇವಿಯ ಜಪವನ್ನು ಮಾಡಬೇಕುಆದಿಶಕ್ತಿ ಶ್ರೀ ದುರ್ಗಾದೇವಿಯಿಂದ ಎಲ್ಲಾ ದೇವಿಯರ ನಿರ್ಮಿತಿ ಯಾಗಿದೆ. ನವರಾತ್ರಿಯ ಸಮಯದಲ್ಲಿ ವಾಯುಮಂಡಲದಲ್ಲಿ ಶ್ರೀ ದುರ್ಗಾ ದೇವಿಯ ತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತ ವಾಗಿರುತ್ತದೆ. ಈ ಕಾಲದಲ್ಲಿ ದೇವಿಯ ಆರಾಧನೆ ಮಾಡುವುದರಿಂದ ಹಾಗೆಯೇ ‘ಶ್ರೀ ದುರ್ಗಾದೇವ್ಯೈ ನಮಃ’ ಈ ನಾಮಜಪವನ್ನು ಸತತವಾಗಿ ಮತ್ತು ಭಾವಪೂರ್ಣವಾಗಿ ಮಾಡುವುದರಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ದೇವಿತತ್ತ್ವದ ಲಾಭವಾಗುತ್ತದೆ. ‘ನಾಮಜಪದಿಂದ ಶಕ್ತಿ ಮತ್ತು ಚೈತನ್ಯ ಗ್ರಹಣವಾಗಲಿ’, ಎಂದು ದೇವಿಯಲ್ಲಿ ಆಗಾಗ ಪ್ರಾರ್ಥನೆಯನ್ನು ಮಾಡಬೇಕು. (ಆಧಾರ : ಸನಾತನದ ಗ್ರಂಥ ಮತ್ತು ಕಿರುಗ್ರಂಥ ‘ಶಕ್ತಿ’) |
ನವರಾತ್ರ್ಯುತ್ಸವದಲ್ಲಿನ ಅಯೋಗ್ಯ ಪದ್ಧತಿಗಳನ್ನು ತಡೆಗಟ್ಟಿ ಉತ್ಸವದ ಪಾವಿತ್ರ್ಯವನ್ನು ಕಾಪಾಡಿ !ಹಿಂದೆ ‘ಗರಬಾ ನೃತ್ಯದ ಸಮಯದಲ್ಲಿ ದೇವಿಯ, ಕೃಷ್ಣಲೀಲೆಯ ಮತ್ತು ಸಂತರು ರಚಿಸಿದ ಗೀತೆಗಳನ್ನು ಹೇಳಲಾಗುತ್ತಿತ್ತು. ಇಂದು ಭಗವಂತನ ಈ ಸಾಮೂಹಿಕ ನೃತ್ಯೋಪಾಸನೆಗೆ ವಿಕೃತ ಸ್ವರೂಪವು ಬಂದಿದೆ. ಚಲನಚಿತ್ರಗಳಲ್ಲಿನ ಹಾಡುಗಳ ತಾಳದಲ್ಲಿ ಅಶ್ಲೀಲ ಹಾವಭಾವ ಮಾಡಿ ಗರಬಾವನ್ನು ಆಡಲಾಗುತ್ತದೆ. ಗರಬಾದ ನಿಮಿತ್ತದಿಂದ ವ್ಯಭಿಚಾರವೂ ನಡೆಯುತ್ತದೆ. ಪೂಜಾಸ್ಥಳದಲ್ಲಿ ತಂಬಾಕುಸೇವನೆ, ಮದ್ಯಪಾನ, ಧ್ವನಿಪ್ರದೂಷಣೆ ಮುಂತಾದ ಪದ್ಧತಿಗಳು ನಡೆಯುತ್ತವೆ. ಈ ಅಯೋಗ್ಯಪದ್ಧತಿಗಳೆಂದರೆ ಧರ್ಮ ಮತ್ತು ಸಂಸ್ಕೃತಿಯ ಹಾನಿಯಾಗಿದೆ. ಈ ಅಯೋಗ್ಯಪದ್ಧತಿಗಳನ್ನು ನಿಲ್ಲಿಸು ವುದೆಂದರೆ ಕಾಲಾನುಸಾರ ಆವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಸನಾತನವು ಕೆಲವು ವರ್ಷಗಳಿಂದ ಈ ಅಯೋಗ್ಯ ಪದ್ಧತಿಗಳ ವಿರುದ್ಧ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿದೆ. ಇದರಲ್ಲಿ ನೀವೂ ಸಹಭಾಗಿಯಾಗಿ ! |