ಪಿತೃಪಕ್ಷ(ಮಹಾಲಯ ಪಕ್ಷ)

(ಮಹಾಲಯಾರಂಭ ೨೧.೯.೨೦೨೧)

ಮಹತ್ವ

. ಭಾದ್ರಪದ ಕೃಷ್ಣ ಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.

. ಸೂರ್ಯೇ ಕನ್ಯಾಗತೇ ಶ್ರಾದ್ಧಂ ಯೋ ನ ಕುರ್ಯಾದ್ ಗೃಹಾಶ್ರಮೀ ಧನಂ ಪುತ್ರಾಃ ಕುತಸ್ತಸ್ಯ ಪಿತೃನಿಃಶ್ವಾಸಪೀಡಯಾ  -ಗಾರ್ಗ್ಯ (ಶ್ರಾದ್ಧಕಲ್ಪಲತಾ, ಪುಟ ೯೭)

ಅರ್ಥ : ಯಾವ ಗೃಹಸ್ಥನು ಸೂರ್ಯನು ಕನ್ಯಾರಾಶಿಯಲ್ಲಿದ್ದಾಗ (ಪಿತೃಪಕ್ಷದಲ್ಲಿ) ಶ್ರಾದ್ಧವನ್ನು ಮಾಡುವುದಿಲ್ಲವೋ, ಅಂತಹವನು ಪಿತೃಗಳ ದುಃಖದ ನಿಟ್ಟುಸಿರಿಗೆ ಈಡಾಗಬೇಕಾಗುತ್ತದೆ. ಇಂತಹವನಿಗೆ ಧನ ಮತ್ತು ಪುತ್ರ ಪ್ರಾಪ್ತಿಯು ಹೇಗೆ ಆಗುವುದು ಪಿತೃಲೋಕವು ಭಾದ್ರಪದ ಕೃಷ್ಣ ಪಕ್ಷದಲ್ಲಿ ಖಾಲಿಯಿರುತ್ತದೆ ಎಂದರೆ ಆ ಸಮಯದಲ್ಲಿ ಕುಲದಲ್ಲಿನ ಎಲ್ಲ ಪಿತೃಗಳು ತಮ್ಮ ವಂಶಜರಿಗೆ ಆಶೀರ್ವಾದವನ್ನು ಕೊಡಲು ಪೃಥ್ವಿಯ ಸಮೀಪ ಬಂದಿರುತ್ತಾರೆ ಮತ್ತು ಶ್ರಾದ್ಧವನ್ನು ಮಾಡದಿದ್ದರೆ ಅವರು ನಮಗೆ ಶಾಪವನ್ನು ಕೊಟ್ಟು ಹೊರಟು ಹೋಗುತ್ತಾರೆ. ಆದುದರಿಂದ ಈ ಸಮಯದಲ್ಲಿ ಶ್ರಾದ್ಧವನ್ನು ಮಾಡುವುದು ಮಹತ್ವದ್ದಾಗಿದೆ.

. ಪಿತೃಪಕ್ಷದಲ್ಲಿ ವಾತಾವರಣದಲ್ಲಿನ ತಿರ್ಯಕ್ ಲಹರಿಗಳ (ರಜ-ತಮಾತ್ಮಕ ಲಹರಿಗಳ) ಮತ್ತು ಯಮಲಹರಿಗಳ ಪ್ರಭಾವವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಿದರೆ ರಜ-ತಮಾತ್ಮಕ ಕೋಶಗಳಿರುವ ಪಿತೃಗಳಿಗೆ ಪೃಥ್ವಿಯ ವಾತಾವರಣ ಕಕ್ಷೆಯಲ್ಲಿ ಬರಲು ಸುಲಭವಾಗುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ಹೇಳಲಾದ ವಿಧಿಗಳನ್ನು ಆಯಾ ಕಾಲದಲ್ಲಿ ಮಾಡುವುದು ಹೆಚ್ಚು ಶ್ರೇಯಸ್ಕರವಾಗಿದೆ – ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ)

ಒಂದು ವರ್ಷದವರೆಗೆ ಶ್ರಾದ್ಧವನ್ನು ಮಾಡಿದ ನಂತರ ಪುನಃ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ?

‘ಮೃತ್ಯುವಿನ ನಂತರ ಒಂದು ವರ್ಷದವರೆಗೆ ಮಾಡುವ ಶ್ರಾದ್ಧದಿಂದ ಆಯಾ ವಿಶಿಷ್ಟ ಲಿಂಗದೇಹಗಳಿಗೆ ಗತಿ ಸಿಗಲು ಸಹಾಯವಾಗುತ್ತದೆ. ಇದರಿಂದ ಆಯಾ ವ್ಯಕ್ತಿಗಳ ವ್ಯಷ್ಟಿ ಸ್ತರದಲ್ಲಿನ ಋಣವನ್ನು ತೀರಿಸಲು ಸಹಾಯವಾಗುತ್ತದೆ. ವಾರ್ಷಿಕ ಶ್ರಾದ್ಧವು ವೈಯಕ್ತಿಕ ಸ್ತರದಲ್ಲಿ ಋಣವನ್ನು ತೀರಿಸುವ ಒಂದು ವ್ಯಷ್ಟಿ ಉಪಾಸನೆಯೇ ಆಗಿದೆ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವು ಸಮಷ್ಟಿ ಸ್ತರದಲ್ಲಿ ಪಿತೃಗಳ ಋಣವನ್ನು ತೀರಿಸುವ ಸಮಷ್ಟಿ ಉಪಾಸನೆಯಾಗಿದೆ. ವ್ಯಷ್ಟಿ ಋಣವು ಆಯಾ ಲಿಂಗದೇಹಗಳ ಬಗೆಗಿನ ಪ್ರತ್ಯಕ್ಷ ಕರ್ತವ್ಯ ಪಾಲನೆಯನ್ನು ಕಲಿಸಿದರೆ ಸಮಷ್ಟಿ ಋಣವು ಒಂದೇ ಕಾಲದಲ್ಲಿ ವ್ಯಾಪಕ ಮಟ್ಟದಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ತೀರಿಸುತ್ತದೆ. ನಮ್ಮೊಂದಿಗೆ ಅತಿಹೆಚ್ಚು ಸಂಬಂಧವಿರುವ ಮೊದಲಿನ ಒಂದೆರಡು ಪೀಳಿಗೆಗಳ ಪಿತೃಗಳ ಶ್ರಾದ್ಧವನ್ನು ನಾವು ಮಾಡುತ್ತೇವೆ. ಏಕೆಂದರೆ ಇವರೊಂದಿಗೆ ನಮ್ಮ ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ಬಹಳಷ್ಟು ಇರುತ್ತದೆ. ಇತರ ಪೀಳಿಗೆಗಳಿಗಿಂತ ಈ ಪಿತೃಗಳಲ್ಲಿ ಕುಟುಂಬದಲ್ಲಿ ಸಿಲುಕಿಕೊಳ್ಳುವ ಆಸಕ್ತಿಯ ಪ್ರಮಾಣವು ಹೆಚ್ಚಿಗೆ ಇರುವುದರಿಂದ ಅವರ ಈ ಬಂಧನವು ತೀವ್ರವಾಗಿರುತ್ತದೆ. ಆದುದರಿಂದ ಈ ಬಂಧನವನ್ನು ಕಡಿದು ಹಾಕಲು ವೈಯಕ್ತಿಕ ರೀತಿಯಲ್ಲಿ ಒಂದು ವರ್ಷದವರೆಗೆ ಮಾಡುವ ಶ್ರಾದ್ಧಕ್ಕೆ ಸಂಬಂಧಿಸಿದ ವಿಧಿಗಳನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಇದರ ತುಲನೆಯಲ್ಲಿ ಅದಕ್ಕೂ ಮೊದಲಿನ ಇತರ ಪಿತೃಗಳೊಂದಿಗಿನ ನಮ್ಮ ಸಂಬಂಧದ ತೀವ್ರತೆಯು ಕಡಿಮೆ ಇರುವುದರಿಂದ ಅವರಿಗೆಲ್ಲ ಸಾಮೂಹಿಕವಾಗಿ ಪಿತೃಪಕ್ಷದಲ್ಲಿ ವಿಧಿಯನ್ನು ಮಾಡುವುದು ಸೂಕ್ತವಾಗಿದೆ. ಆದುದರಿಂದ ಒಂದು ವರ್ಷದವರೆಗೆ ಮಾಡುವ ಶ್ರಾದ್ಧ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧ ಇವರೆಡನ್ನೂ ಮಾಡುವುದು ಆವಶ್ಯಕವಾಗಿದೆ. – ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ)

ಪತಿಯ ನಿಧನಕ್ಕಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು (ಮುತ್ತೈದೆ ನವಮಿಯಂದೇ) ಏಕೆ ಮಾಡಬೇಕು ?

‘ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ರಜೋಗುಣೀ ಶಿವಲಹರಿಗಳು ಅಧಿಕವಾಗಿರುತ್ತವೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಚಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾ ಮುತ್ತೈದೆಯರ ಲಿಂಗದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಕಾರ್ಯನಿರತವಾಗಿರುವ ಶಿವಲಹರಿಗಳ ಪ್ರವಾಹವು ಆಯಾ ಲಿಂಗದೇಹಗಳಿಗೆ ಆವಶ್ಯಕವಿರುವ ಲಹರಿಗಳನ್ನು ಸೆಳೆದುಕೊಳ್ಳಲು ಪೋಷಕ ಮತ್ತು ಪೂರಕವಾಗಿರುತ್ತವೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ತ್ವವು ಸೂಕ್ಷ್ಮಶಿವತತ್ತ್ವದೊಂದಿಗೆ ಬೇಗನೇ ಸಂಯೋಗವಾಗುವುದರಿಂದ ಮುತ್ತೈದೆಯರ (ಅವಿಧವೆಯ) ಲಿಂಗದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ. ಈ ದಿನ ಶಿವಲಹರಿಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಮುತ್ತೈದೆಗೆ ಸೂಕ್ಷ್ಮ ಶಿವತತ್ತ್ವದ ಬಲವು ಪ್ರಾಪ್ತವಾಗಿ ಪೃಥ್ವಿಯ ಮೇಲಿನ ಅವಳ ಪತಿಗೆ ಸಂಬಂಧಿಸಿದ ಆಸಕ್ತಿಯುಕ್ತ ಬಂಧನಗಳು ಕಡಿಮೆಯಾಗಿ ಅವಳು ಪತಿಯ ಬಂಧನದಿಂದ ಮುಕ್ತಳಾಗುತ್ತಾಳೆ. ಆದುದರಿಂದ ಶಕ್ತಿ ರೂಪಕ್ಕೆ ಸಂಬಂಧಿಸಿದ ಮುತ್ತೈದೆಯ ಶ್ರಾದ್ಧವನ್ನು ಮಹಾಲಯದಲ್ಲಿನ ಶಿವಲಹರಿಗಳ ಬಾಹುಳ್ಯವಿರುವ ನವಮಿಯಂದು ಮಾಡುತ್ತಾರೆ.

 ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ)

ಪಿತೃತರ್ಪಣ

೧. ವ್ಯಾಖ್ಯೆ : ಪಿತೃಗಳನ್ನು ಉದ್ದೇಶಿಸಿ ನೀಡಿದ ನೀರಿಗೆ ಪಿತೃತರ್ಪಣ ಎನ್ನುತ್ತಾರೆ. ತಂದೆಯು ಜೀವಂತವಿರುವಾಗ ಮಗನಿಗೆ ಪಿತೃತರ್ಪಣ ನಿಷಿದ್ಧವಾಗಿದೆ.

೨. ಮಹತ್ವ : ತರ್ಪಣವನ್ನು ಕೊಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ. ಅಲ್ಲದೇ ತರ್ಪಣ ಕೊಟ್ಟವರಿಗೆ ಆಯುಷ್ಯ, ತೇಜಸ್ಸು, ಬ್ರಹ್ಮವರ್ಚಸ್ಸು, ಸಂಪತ್ತು, ಯಶಸ್ಸು ಮತ್ತು ಅನ್ನಾದ್ಯ ಅಂದರೆ ಭಕ್ಷಿಸಿದ ಅನ್ನವನ್ನು ಜೀರ್ಣ ಮಾಡುವ ಶಕ್ತಿಯನ್ನು ಕೊಟ್ಟು ತೃಪ್ತಗೊಳಿಸುತ್ತಾರೆ.