ಆಪತ್ಕಾಲದ ಪೂರ್ವತಯಾರಿಯ ದೃಷ್ಟಿಯಿಂದ ಮನೆಯ ಮೇಲ್ಛಾವಣಿಯ ಮೇಲೆ ತರಕಾರಿ ಬೆಳೆಸಲು ಸಾಧಕರು ಮಾಡಿದ ಪ್ರಯತ್ನ ಹಾಗೂ ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅವರು ಅನುಭವಿಸಿದ ಗುರುಕೃಪೆ !

ದೈನಿಕ ‘ಸನಾತನ ಪ್ರಭಾತದಲ್ಲಿ ‘ಆಪತ್ಕಾಲದ ಪೂರ್ವಸಿದ್ಧತೆಯ ಬಗ್ಗೆ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಮನೆಯ ಪರಿಸರದಲ್ಲಿ ಬೆಳೆಸಬಹುದಾದ ತರಕಾರಿಗಳ ಮಾಹಿತಿಯನ್ನು ನೀಡಲಾಗಿತ್ತು. ಆ ಲೇಖನವನ್ನು ಓದಿ ಗುರುಕೃಪೆಯಿಂದ ನಮಗೆ ‘ನಾವು ಇಂದೇ ಕೃತಿಯನ್ನು ಆರಂಭಿಸೋಣ, ಎಂಬ ಪ್ರೇರಣೆಯೂ ಸಿಕ್ಕಿತು ಮತ್ತು ನಮ್ಮ ಬಳಿಯಿರುವ ಕೆಲವು ಕುಂಡಗಳಲ್ಲಿ ಮತ್ತು ಪ್ಲಾಸ್ಟಿಕ್‌ನ ಟಬ್‌ಗಳಲ್ಲಿ ನಾವು ಕೆಲವು ಬೀಜಗಳನ್ನು ಹಾಕಿದೆವು. ನಮಗೆ ತೋಟಗಾರಿಕೆಯ ಬಗ್ಗೆ ಯಾವುದೇ ಅನುಭವ ಇರಲಿಲ್ಲ, ಆದರೂ ‘ಇದನ್ನು ಮಾಡಲು ನಮಗೆ ಸಾಧ್ಯವಾಗಬಹುದೇ ?, ಎಂಬ ಸಂದೇಹವು ದೇವರ ಕೃಪೆಯಿಂದ ನಮ್ಮ ಮನಸ್ಸಿನಲ್ಲಿ ಬರಲಿಲ್ಲ.

ಶ್ರೀ. ಮಯೂರೇಶ ಕೋನೆಕರ
ಸೌ. ರಾಘವಿ ಕೊನೇಕರ

೧. ತರಕಾರಿಗಳನ್ನು ಬೆಳೆಸುವ ಬಗೆಗಿನ ಮಾಹಿತಿಯನ್ನು ವಿವಿಧ ಮಾಧ್ಯಮಗಳಿಂದ ಅಧ್ಯಯನ ಮಾಡುವುದು ಮತ್ತು ಕೃಷಿಯ ಬಗ್ಗೆ ಮಾಹಿತಿಯಿರುವ ಶ್ರೀ. ಸಂದೀಪ ಚವ್ಹಾಣ  ಇವರ ಮಾರ್ಗದರ್ಶನವನ್ನು ಪಡೆಯುವುದು

ನಾವು ಅಂತರ್ಜಾಲದಲ್ಲಿ (ಇಂಟರನೆಟ್‌ನಲ್ಲಿನ) ‘ಯು ಟ್ಯೂಬ್’ನಲ್ಲಿ ತರಕಾರಿಗಳನ್ನು ಬೆಳೆಸಲು ಬೇಕಾದ ಮಾಹಿತಿಯನ್ನು ಓದಿದೆವು, ಹಾಗೆಯೇ ಕೃಷಿಯ ಬಗ್ಗೆ ಮಾಹಿತಿ ಇರುವ ಶ್ರೀ. ಸಂದೀಪ ಚವ್ಹಾಣ ಇವರ ಮಾರ್ಗದರ್ಶನವನ್ನೂ ಪಡೆದುಕೊಂಡೆವು ಮತ್ತು ಅವರ ಅನೇಕ ಲೇಖನಗಳನ್ನೂ ಓದಿದೆವು. ಇದರಿಂದ ನಮಗೆ ಕ್ರಮೇಣ ತರಕಾರಿಗಳನ್ನು ಬೆಳೆಸುವಾಗ ‘ಏನು ಮಾಡಬೇಕು ಮತ್ತು ಏನು ಮಾಡಬಾರದು ?’ ಎಂಬುದು ನಮ್ಮ ಗಮನಕ್ಕೆ ಬಂದಿತು.

೨. ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿ ಪದ್ಧತಿಯಿಂದ ತರಕಾರಿಗಳನ್ನು ಬೆಳೆಸುವುದೆಂದು ನಿರ್ಧರಿಸುವುದು, ಗೋವಾದ ಮಣ್ಣು ಕಲ್ಲು ಮಿಶ್ರಿತವಾಗಿರುವುದರಿಂದ ಫಲವತ್ತತೆ ಕಡಿಮೆ ಇರುವುದು, ಹಾಗಾಗಿ ಫಲವತ್ತತೆಯನ್ನು ಹೆಚ್ಚಿಸಲು ಪರಿಶ್ರಮ ಪಡುವುದು

ಗೋವಾದ ಆರ್ದ್ರ ಹವಾಮಾನವು ಕೀಟಗಳು ಮತ್ತು ಹುಳಗಳ ಹೆಚ್ಚಳಕ್ಕೆ ಪೂರಕವಾಗಿದೆ. ಆದುದರಿಂದ ‘ಸಾವಯವ ಕೃಷಿ ಪದ್ಧತಿಯಿಂದ (ನೈಸರ್ಗಿಕ ಸಾಧನಗಳನ್ನು ಬಳಸಿ ಮತ್ತು ರಸಾಯನಗಳ ಬಳಕೆಯನ್ನು ತಡೆಗಟ್ಟಿ) ತರಕಾರಿಗಳನ್ನು ಬೆಳೆಸುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ’, ಎಂದು ನಮ್ಮ ಗಮನಕ್ಕೆ ಬಂದಿತು. ಆದರೂ ಆರೋಗ್ಯದ ದೃಷ್ಟಿಯಿಂದ ‘ತರಕಾರಿಗಳನ್ನು ಬೆಳೆಸಲು ರಾಸಾಯನಿಕಗಳನ್ನು ಬಳಸಬಾರದು’, ಎಂದು ನಾವು ನಿರ್ಧರಿಸಿದೆವು. ಗೋವಾದ ಮಣ್ಣಿನಲ್ಲಿ ಕಲ್ಲಿನಂಶದ ಪ್ರಮಾಣವು ಹೆಚ್ಚಿರುವುದರಿಂದ ಅದರ ಫಲವತ್ತತೆ ಕಡಿಮೆಯಿದೆ. ಆದುದರಿಂದ ‘ಈ ಮಣ್ಣಿನಲ್ಲಿ ಒಳ್ಳೆಯ ಬೆಳೆಯನ್ನು ಪಡೆಯಲು ವಿವಿಧ ಸಾವಯವ ಕೃಷಿ ಘಟಕ (ಹೊಲದಲ್ಲಿನ ಬೆಳೆಗಳ ಅವಶೇಷಗಳು, ಸೆಗಣಿ, ಗೋಮೂತ್ರ ಇತ್ಯಾದಿ)ಗಳನ್ನು ಸೇರಿಸಿ ಅದು ಪೋಷಕಾಂಶಗಳಿಂದ ತುಂಬಿಕೊಳ್ಳಲು ಬಹಳ ಪರಿಶ್ರಮವನ್ನು ಪಡುವ ಆವಶ್ಯಕತೆ ಇದೆ’, ಎಂದು ನಮ್ಮ ಗಮನಕ್ಕೆ ಬಂದಿತು. ಆದುದರಿಂದ ನಾವು ಮೊದಲಿಗೆ ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದೆವು.

೩. ಮನೆಯಲ್ಲಿನ ಹಸಿ ಕಸ ಮತ್ತು ತೋಟದಲ್ಲಿನ ಒಣ ಕಸದಿಂದ ‘ಕಾಂಪೋಸ್ಟ್’ ಗೊಬ್ಬರವನ್ನು ತಯಾರಿಸುವುದು 

ನಂತರ ನಾವು ತೋಟದಲ್ಲಿನ ಒಣ ಕಸ ಮತ್ತು ಮನೆಯಲ್ಲಿನ ಹಸಿ ಕಸ (ತರಕಾರಿ ಮತ್ತು ಹಣ್ಣುಗಳ ಸಿಪ್ಪೆ), ಇವುಗಳಿಂದ ‘ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಲು ಆರಂಭಿಸಿದೆವು. ಈ ಗೊಬ್ಬರದಿಂದ ಎರಡು ಬಗೆಯ ಲಾಭವಾಯಿತು.ತೋಟದಲ್ಲಿ ಬಿದ್ದಿರುವ ಒಣ ಕಸ ಮತ್ತು ಮನೆಯಲ್ಲಿನ ಹಸಿ ಕಸ, ಇವುಗಳನ್ನು ‘ಕಾಂಪೋಸ್ಟ್’ ಗೊಬ್ಬರವನ್ನು ತಯಾರಿಸಲು ಉಪಯೋಗಿಸಿದ್ದರಿಂದ, ಗಿಡಗಳಿಗೆ ಅತ್ಯಂತ ಪೋಷಕ ಗೊಬ್ಬರ ಮನೆಯಲ್ಲಿಯೇ ಉಚಿತವಾಗಿ ತಯಾರಾಗತೊಡಗಿತು ಮತ್ತು ಎರಡನೇಯ ಲಾಭವೆಂದರೆ ಅದು ಪರಿಸರಪೂರಕವಾಯಿತು.

೪. ಗಿಡಗಳಿಗೆ ಮಣ್ಣಿನಲ್ಲಿನ ಘಟಕಗಳು ಸಿಗಲು ಅದರಲ್ಲಿನ ಸೂಕ್ಷ್ಮ ಜೀವಾಣುಗಳ ಸಂಖ್ಯೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ ಹಾಗೂ ಅದಕ್ಕಾಗಿ ಬೇಕಾಗುವ ‘ಜೀವಾಮೃತ’ವನ್ನು ತಯಾರಿಸಲು ಆವಶ್ಯಕವಾಗಿರುವ ದೇಶಿ ಆಕಳ ತಾಜಾ ಸೆಗಣಿ ಮತ್ತು ಗೋಮೂತ್ರವು ದೇವರ ಕೃಪೆಯಿಂದ ಸಹಜವಾಗಿ ಮತ್ತು ಉಚಿತವಾಗಿ ಸಿಗುವುದು

ಮಣ್ಣಿನಲ್ಲಿನ ಸೂಕ್ಷ್ಮ ಜೀವಾಣುಗಳು ಗಿಡಗಳಿಗೆ ಆವಶ್ಯಕವಾಗಿರುವ ಎಲ್ಲ ಘಟಕಗಳನ್ನು ಪೂರೈಸುವ ಕಾರ್ಯವನ್ನು ಮಾಡುತ್ತವೆ. ಮಣ್ಣಿನಲ್ಲಿ ಎಷ್ಟೇ ಗೊಬ್ಬರವನ್ನು ಹಾಕಿದರೂ ಗಿಡಗಳಿಗೆ ಮಣ್ಣಿನಲ್ಲಿನ ಘಟಕಗಳು ಸಿಗಲು ಅದರಲ್ಲಿನ ಸೂಕ್ಷ್ಮ ಜೀವಾಣುಗಳ ಸಂಖ್ಯೆಯನ್ನು ಹೆಚ್ಚಿಸುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ದೇಶಿ ಆಕಳ (ದನ, ಗೋವು) ತಾಜಾ ಸೆಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ‘ಜೀವಾಮೃತ’ ಸಾವಯವ ಗೊಬ್ಬರವನ್ನು ಕೃಷಿಗಾಗಿ ಉಪಯೋಗಿಸುತ್ತಾರೆ. ನಾವು ಇದನ್ನು ಅಂತರ್ಜಾಲದಿಂದ ತಿಳಿದುಕೊಂಡೆವು. ನಂತರ ನಮ್ಮ ಮನೆಗೆ ಹಾಲು ಕೊಡಲು ಬರುವವರಿಗೆ ದೇಶಿ ಆಕಳ ಸೆಗಣಿ ಮತ್ತು ಗೋಮೂತ್ರವನ್ನು ತಂದು ಕೊಡುವ ಬಗ್ಗೆ ಕೇಳಿದೆವು. ಅವರು ಕೂಡಲೇ ನಮಗೆ ಅವುಗಳನ್ನು ಉಚಿತವಾಗಿ ತಂದು ಕೊಡಲು ಆರಂಭಿಸಿದರು. ಈ ರೀತಿ ಗಿಡಗಳಿಗೆ ಆವಶ್ಯಕವಾಗಿರುವುದನ್ನು ಈಶ್ವರನು ನಮಗೆ ಲಭ್ಯ ಮಾಡಿಕೊಡುತ್ತಿದ್ದನು ಮತ್ತು ‘ನಾನು ನಿಮ್ಮೊಂದಿಗಿದ್ದೇನೆ’, ಎಂಬ ಅನುಭೂತಿಯನ್ನು ಕೊಡುತ್ತಿದ್ದನು. ಈ ಪ್ರಕ್ರಿಯೆಯಿಂದ ನಮಗೆ ದೇಶಿ ಆಕಳುಗಳ ಮಹತ್ವವೂ ಗಮನಕ್ಕೆ ಬಂದಿತು.

(‘ಜೀವಾಮೃತ’ವನ್ನು ತಯಾರಿಸುವ ಕೃತಿ (ಪದ್ದತಿ) : ಒಂದು ಪ್ಲಾಸ್ಟಿಕಿನ ಬಕೇಟ್‌ನಲ್ಲಿ ೧೦ ಲೀಟರ್ ನೀರು, ಅರ್ಧ ಕಿಲೋ ದೇಶಿ ಗೋವಿನ ತಾಜಾ ಸೆಗಣಿ, ಅರ್ಧ ಲೀಟರ್ ಗೋಮೂತ್ರ, ಯಾವುದೇ ಬೇಳೆಯ ೧೦೦ ಗ್ರಾಮ್ ಹಿಟ್ಟು, ೧೦೦ ಗ್ರಾಮ್ ನೈಸರ್ಗಿಕ ಬೆಲ್ಲ ಮತ್ತು ೧ ಮುಷ್ಟಿಯಷ್ಟು ಮಣ್ಣು, ಇವೆಲ್ಲವುಗಳನ್ನು ಒಟ್ಟು ಮಾಡಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ಅದನ್ನು ಹತ್ತಿ ಬಟ್ಟೆಯಿಂದ ಅಥವಾ ಗೋಣಿಚೀಲದಿಂದ ಮುಚ್ಚಬೇಕು. ೩ ದಿನ ಈ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಕೋಲಿನಿಂದ ೨ ನಿಮಿಷ ಚೆನ್ನಾಗಿ ತಿರುವಬೇಕು (ಮಿಶ್ರಣ ಮಾಡಬೇಕು). ಈ ರೀತಿ ‘ಜೀವಾಮೃತ’ವು ತಯಾರಾಗುತ್ತದೆ. ಅನಂತರ ೧ ಲೀಟರ್ ಜೀವಾಮೃತ ಮತ್ತು ೧೦ ಲೀಟರ್ ನೀರು, ಈ ಪ್ರಮಾಣದಲ್ಲಿ ಬೆರೆಸಿ ಅದನ್ನು ಗಿಡಗಳಿಗೆ ಹಾಕಬೇಕು.)

‘ಗ್ರೋ ಬ್ಯಾಗ್ಸ್’ ಗಳಲ್ಲಿ(ಗಿಡಗಳನ್ನು ಬೆಳೆಸಲು ಉಪಯುಕ್ತವಾಗಿರುವ ಚೀಲದ ಒಂದು ವಿಧಿ) ಬೆಳೆಸಲಾದ ವಿವಿಧ ತರಕಾರಿಗಳ ಗಿಡಗಳು

೫. ಅಗ್ನಿಹೋತ್ರದ ವಿಭೂತಿಯನ್ನು ಬಳಸಿದ ನಂತರ ಅದರಿಂದ ಬಹಳ ಒಳ್ಳೆಯ ಪರಿಣಾಮ ಕಂಡು ಬಂದಿತು

ನನ್ನ ತಂದೆ ಶ್ರೀ. ಪ್ರಕಾಶ ಕರಂದೀಕರ ಇವರು ಕಳೆದ ಕೆಲವು ವರ್ಷಗಳಿಂದ ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಾರೆ. ನಾವು ಆ ಅಗ್ನಿಹೋತ್ರದ ವಿಭೂತಿಯನ್ನು (ಬೂದಿ) ಮಣ್ಣಿನಲ್ಲಿ ಬೆರೆಸಿದೆವು ಮತ್ತು ಅದನ್ನು ಕೀಟನಾಶಕವೆಂದೂ ಉಪಯೋಗಿಸಿದೆವು. ಅದರ ಒಳ್ಳೆಯ ಪರಿಣಾಮ ನಮ್ಮ ಗಮನಕ್ಕೆ ಬಂದಿತು.

೬. ಋತುಮಾನಕ್ಕನುಸಾರ ತರಕಾರಿಗಳನ್ನು ಬೆಳೆಸುವುದು ಮತ್ತು ಪೂರ್ವಾನುಭವ ಇಲ್ಲದಿದ್ದರೂ ತರಕಾರಿಗಳ ಒಳ್ಳೆಯ ಬೆಳೆ ಬರುವುದು

ಈ ಒಂದು ವರ್ಷದಲ್ಲಿ ನಾವು ಬೆಂಡೆಕಾಯಿ, ಸೌತೆಕಾಯಿ, ಬದನೆ, ಮೆಣಸಿನಕಾಯಿ, ಟೊಮೆಟೊ, ಮೂಲಂಗಿ, ಪಾಲಕ, ಮೆಂತ್ಯೆ, ಕೊತ್ತಂಬರಿ, ಕೆಂಪು ಹರಿವೆ, ಅಲಸಂದೆ, ಹೂಕೋಸು, ಹಸಿಶುಂಠಿ, ಅರಿಶಿಣ, ಈರುಳ್ಳಿ, ಪುದಿನಾ, ಚವಳೀಕಾಯಿ, ಕೆಂಪು ಕುಂಬಳಕಾಯಿ, ಹಾಲು ಕುಂಬಳಕಾಯಿ, ಹೀರೆಕಾಯಿ ಈ ಎಲ್ಲ ತರಕಾರಿಗಳನ್ನು ಆಯಾ ಋತುಗಳಿಗನುಸಾರ ಬೆಳೆಸಿದೆವು ಮತ್ತು ಗುರುಕೃಪೆಯಿಂದ ಅದರಲ್ಲಿ ನಮಗೆ ಯಶಸ್ಸೂ ಸಿಕ್ಕಿತು.

ಅಂತರ್ಜಾಲದಲ್ಲಿನ ಜನರು ಕಳೆದ ೧೦-೧೨ ವರ್ಷಗಳಿಂದ ತೋಟಗಾರಿಕೆಯನ್ನು ಮಾಡುತ್ತಿದ್ದಾರೆ. ಅವರ ವಿಡಿಯೋಗಳನ್ನು ನೋಡಿ ನಾವು ಕೃತಿ ಮಾಡುತ್ತಿದ್ದೆವು. ಅವರ ಉತ್ಪಾದನೆ ಹಾಗೂ ನಮ್ಮ ಉತ್ಪಾದನೆ ಹೆಚ್ಚುಕಡಿಮೆ ಒಂದೇ ಆಗಿತ್ತು.

ನಮಗೆ ಕೇವಲ ಕೆಲವು ತಿಂಗಳುಗಳ ಅನುಭವ ಮಾತ್ರ ಇದೆ, ಆದರೂ ನಮಗೆ ತರಕಾರಿಗಳ ಉತ್ಪಾದನೆ ಅವರಷ್ಟೇ ಸಿಕ್ಕಿತು. ಆಗ ‘ದೇವರಿಗೆ ಯಾವುದೂ ಅಸಾಧ್ಯವಿಲ್ಲ, ಎಂಬುದನ್ನು ಅನುಭವಿಸಿ ದ್ದರಿಂದ ನಮ್ಮ ಮನಸ್ಸು ಕೃತಜ್ಞತೆಯಿಂದ ತುಂಬಿಬಂದಿತು.

೭. ತರಕಾರಿಗಳೊಂದಿಗೆ ಔಷಧಿ ವನಸ್ಪತಿಗಳನ್ನೂ ಬೆಳೆಸುವುದು

ತರಕಾರಿಗಳೊಂದಿಗೆ ಆಪತ್ಕಾಲದಲ್ಲಿ ಉಪಯೋಗವಾಗುವಂತಹ ಕೆಲವು ಔಷಧಿ ವನಸ್ಪತಿಗಳನ್ನು ನಾವು ಬೆಳೆಸಿದ್ದೇವೆ. ಉದಾ. ಕೃಷ್ಣ ತುಳಸಿ, ರಾಮ ತುಳಸಿ, ಮಜ್ಜಿಗೆ ಹುಲ್ಲು, ಲೋಳೆಸರ, ವೀಳ್ಯದೆಲೆ, ಗರಿಕೆ, ಬಿಲ್ವಪತ್ರೆ, ಬ್ರಾಹ್ಮಿ, ಮಂಡುಕಪರ್ಣಿ (ಒಂದು ಪ್ರಕಾರದ ಚಿಕ್ಕ ಬಳ್ಳಿ, ಇದರಲ್ಲಿ ಗುಲಾಬಿ ಬಣ್ಣದ ಹೂವುಗಳಿದ್ದು ಅವುಗಳ ಎಲೆಗಳು ಇಲಿಗಳ ಕಿವಿಗಳಂತೆ ಇರುತ್ತವೆ. ಇಲಿಗಳ ಕಡಿತದಿಂದ ಉಂಟಾದ ವಿಷವನ್ನು ದೂರ ಮಾಡಲು ಮಂಡುಕಪರ್ಣಿಯ ರಸವನ್ನು ಸೇವಿಸುತ್ತಾರೆ), ಸರ್ಪಗಂಧ (Rauwolfia Serpentina) ಶತಾವರಿ, ಅಜ್ವಾನ (ಓಮಕಾಳು), ಹಿಪ್ಪಲಿ, ಅಮೃತಬಳ್ಳಿ, ಅರಿಶಿಣ. ಕಹಿಬೇವು ಇತ್ಯಾದಿ.

ಶ್ರೀ ಮತ್ತು ಸೌ. ಕೊನೇಕರ ಇವರ ಮೇಲ್ಛಾವಣಿಯಲ್ಲಿ ಬೆಳೆದ ಹೀರಿಕಾಯಿಯ ಬಳ್ಳಿ

೮. ಮನೆಯಲ್ಲಿ, ಬೆಳೆದ ತರಕಾರಿಗಳ ಬಗ್ಗೆ ಗಮನಕ್ಕೆ ಬಂದ ವೈಶಿಷ್ಟ್ಯಪೂರ್ಣ ಅಂಶಗಳು

. ಮನೆಯಲ್ಲಿ ಬೆಳೆದ ತರಕಾರಿಗಳು ಮಾರುಕಟ್ಟೆಯಲ್ಲಿನ ತರಕಾರಿಗಳಿಗಿಂತ ಹೆಚ್ಚು ರುಚಿಕರವಾಗಿರುತ್ತವೆ.

ಆ. ಈ ತಾಜಾ ತರಕಾರಿಗಳು ಕೂಡಲೇ, ಅಂದರೆ ಕೇವಲ ೧೦ ನಿಮಿಷದೊಳಗೆ ಬೇಯುತ್ತವೆ.

. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿನ ಬೆಂಡೆಕಾಯಿಗಳನ್ನು ಬೇಯಿಸುವಾಗ ಅವುಗಳಿಗೆ ಒಂದು ಬಗೆಯ ಅಂಟು ಬಿಟ್ಟು ಅವು ಸ್ವಲ್ಪ ಜಿಗುಟಾಗುತ್ತವೆ. ‘ಬೆಂಡೆಕಾಯಿಗಳಿಗೆ ಅಂಟು ಬರಬಾರದೆಂದು, ಅದರಲ್ಲಿ ಏನಾದರೂ ಹುಳಿ ಪದಾರ್ಥವನ್ನು ಹಾಕಬೇಕಾಗುತ್ತದೆ. ಮನೆಯಲ್ಲಿ ಬೆಳೆದ ಎಳೆಯ ತಾಜಾ ಬೆಂಡೆಕಾಯಿಗಳ ಪಲ್ಯವನ್ನು ಮಾಡಿದರೆ, ಅದು ಜಿಗುಟಾಗುವುದಿಲ್ಲ.

. ಮಾರುಕಟ್ಟೆಯಿಂದ ತಂದ ಸೋರೆಕಾಯಿಯನ್ನು ಹೆರೆಯುವಾಗ ಅದರ ಮೇಲೆ ಅಂಟುರಸ ಬಂದು ಅದು ಕಪ್ಪಾಗ ತೊಡಗುತ್ತದೆ; ಆದರೆ ಮನೆಯಲ್ಲಿ ಸಾವಯವ ಕೃಷಿ  ಪದ್ಧತಿಯಿಂದ ಬೆಳೆದ ಸೋರೆಕಾಯಿ ಹೀಗಾಗದೆ ಹಸಿರಾಗಿರುತ್ತದೆ.

. ಮಾರುಕಟ್ಟೆಯಿಂದ ತಂದ ಮೂಲಂಗಿಯನ್ನು ಬೇಯಿಸುವಾಗ ಅದರ ವಿಶಿಷ್ಟ ಉಗ್ರ ವಾಸನೆಯು ಮನೆ ತುಂಬಾ ಹರಡುತ್ತದೆ; ಆದರೆ ಮನೆಯಲ್ಲಿ ಬೆಳೆದ ತಾಜಾ ಮೂಲಂಗಿಯ ಪಲ್ಯವನ್ನು ಮಾಡುವಾಗ ಇಂತಹ ವಾಸನೆಯು ಬರುವುದಿಲ್ಲ.

. ಮನೆಯಲ್ಲಿ ಬೆಳೆದ ಮೊದಲ ಬೆಳೆಯಾದ ಟೊಮೆಟೊ ಮತ್ತು ಬದನೆಕಾಯಿಗಳನ್ನು ನಾವು ಆಶ್ರಮಕ್ಕೆ ಕಳುಹಿಸಿದ್ದೆವು. ಆ ತರಕಾರಿಗಳನ್ನು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ತೋರಿಸಿದಾಗ ಅವರು ‘ಅವುಗಳಿಂದ ಸಾತ್ತ್ವಿಕ ಸ್ಪಂದನಗಳು ಬರುತ್ತಿವೆ, ಎಂದು ಹೇಳಿದರು.

೯. ಗಿಡಗಳಿಂದ ಕಲಿಯಲು ಸಿಕ್ಕಿದ ಅಂಶಗಳು

. ‘ಪ್ರದೂಷಣೆಯನ್ನು ಕಡಿಮೆ ಮಾಡಲು ಗಿಡಗಳು ಸಹಾಯ ಮಾಡುತ್ತವೆ, ಎಂದು ನಾವು ವಿಜ್ಞಾನದ ಪುಸ್ತಕಗಳಲ್ಲಿ ಓದಿದ್ದೆವು; ಆದರೆ ‘ಗಿಡಗಳ ಸಾನ್ನಿಧ್ಯದಲ್ಲಿ ಮನಸ್ಸು ಸಕಾರಾತ್ಮಕವಾಗುವುದು, ಮನಸ್ಸು ಪ್ರಸನ್ನವಾಗುವುದು ಮತ್ತು ಹೊಸ ಉತ್ಸಾಹ ಬರುವುದು, ಈ ಅನುಭವಗಳನ್ನು ನಾವು ಈ ವರ್ಷವಿಡಿ ಅನುಭವಿಸಿದೆವು.

. ಬಿಸಿಲು, ಗಾಳಿ ಅಥವಾ ಮಳೆ ಇಂತಹ ಎಲ್ಲ ಪರಿಸ್ಥಿತಿಗಳಲ್ಲಿ ಗಿಡಗಳು ಸ್ಥಿರವಾಗಿ, ಗಟ್ಟಿಯಾಗಿ ನಿಲ್ಲುತ್ತವೆ, ಹಾಗೆಯೇ ‘ನಾವೂ ಎಲ್ಲ ಸ್ಥಿತಿಗಳಲ್ಲಿ ಸ್ಥಿರವಾಗಿ ಇರಬೇಕು, ಎಂಬುದು ಕಲಿಯಲು ಸಿಕ್ಕಿತು.

ಇ. ಗಿಡಗಳು ಯಾರಿಂದಲೂ ಯಾವುದೇ ಅಪೇಕ್ಷೆಯನ್ನು ಮಾಡದೇ ಸತತವಾಗಿ ಇತರರಿಗೆ ಏನಾದರೂ ಕೊಡುತ್ತಿರುತ್ತವೆ, ಹಾಗೆಯೇ ನಮ್ಮ ಕೈಗಳೂ ಸಹ ಸತತವಾಗಿ ಇತರರಿಗೆ ಏನಾದರೂ ಕೊಡು ವಂತಹ ಮತ್ತು ಇತರರಿಗೆ ಸಹಾಯ ಮಾಡುವಂತಹುಗಳು ಆಗಬೇಕು, ಎಂಬುದು ಕಲಿಯಲು ಸಿಕ್ಕಿತು.

ಈ. ಒಂದು ಸಲ ಸೌತೆಕಾಯಿಯ ಬಳ್ಳಿಗೆ ೩ – ೪ ಸೌತೆಕಾಯಿಗಳು ಬಂದಿದ್ದವು. ಆಗ ನಮಗೆ ತುಂಬಾ ಆನಂದವಾಯಿತು; ಆದರೆ ೨ ದಿನಗಳ ನಂತರ ಅವುಗಳಲ್ಲಿನ ಒಂದು  ಸೌತೆಕಾಯಿಯನ್ನು ಒಂದು ಅಳಿಲು ತಿಂದು ಹೋಯಿತು. ಆಗ ನನಗೆ ಬಹಳ ಹಾಳೆನಿಸಿತು. ನಂತರ ಇದರ ಬಗ್ಗೆ ಚಿಂತನೆಯನ್ನು ಮಾಡಿದಾಗ ‘ಯಾವ ಬಳ್ಳಿಯು ಈ  ಸೌತೆಕಾಯಿಗಳನ್ನು ನಿರ್ಮಿಸಿತೋ, ಅದರ  ಸೌತೆಕಾಯಿಗಳನ್ನು ಯಾರೇ ತಿಂದರೂ, ಆ ಬಳ್ಳಿಗೆ ಯಾವುದೇ ತಕರಾರು ಇರುವುದಿಲ್ಲ, ಎಂಬುದು ನನ್ನ ಗಮನಕ್ಕೆ ಬಂದಿತು. ಇದರ ಅರ್ಥ ‘ನಿಸರ್ಗ ನಿರ್ಮಿಸಿದ ತೋಟದಲ್ಲಿನ ಎಲ್ಲವೂ ನನ್ನದಾಗಿದೆ, ಎಂದು ನಮಗೆ ಹೇಳಲು ಆಗುವುದಿಲ್ಲ. ‘ಅದರಲ್ಲಿ ಕೀಟಗಳ, ಪಶುಗಳ ಮತ್ತು ಪಕ್ಷಿಗಳ ಪಾಲು ಸಹ ಇರುತ್ತದೆ, ಎಂದು ಸ್ವೀಕರಿಸಿದಾಗ ನಮಗೆ ದುಃಖವಾಗಲಿಲ್ಲ.

೧೦. ‘ತತ್ಪರತೆಯಿಂದ ಗುರ್ವಾಜ್ಞಾಪಾಲನೆಯನ್ನು ಮಾಡಿದರೆ ದೇವರ ಸಂಕಲ್ಪ ಕಾರ್ಯನಿರತವಾಗುತ್ತದೆ, ಎಂಬುದು ಗಮನಕ್ಕೆ ಬರುವುದು

‘ಸನಾತನ ಪ್ರಭಾತದಲ್ಲಿ ‘ತರಕಾರಿಗಳ ತೋಟಗಾರಿಕೆ ಮಾಡಿರಿ !, ಎಂಬ ಸೂಚನೆ ಬಂದ ನಂತರ ಕೂಡಲೇ ತರಕಾರಿಗಳ ತೋಟವನ್ನು ಮಾಡುವ ವಿಚಾರವನ್ನು ದೇವರು ನಮ್ಮ ಮನಸ್ಸಿನಲ್ಲಿ ಹಾಕಿದನು ಹಾಗೂ ನಮ್ಮಿಂದ ಆ ರೀತಿಯ ಕೃತಿಯನ್ನೂ ಮಾಡಿಸಿಕೊಂಡನು. ತತ್ಪರತೆಯಿಂದ ಗುರ್ವಾಜ್ಞಾಪಾಲನೆಯನ್ನು ಮಾಡಿದರೆ ದೇವರ ಸಂಕಲ್ಪ ಕಾರ್ಯನಿರತವಾಗುತ್ತದೆ, ಎಂಬುದು ಸಹ ಈ ಪ್ರಸಂಗದಿಂದ ನಮಗೆ ಕಲಿಯಲು ಸಿಕ್ಕಿತು.

೧೧. ಕೃತಜ್ಞತೆ ಮತ್ತು ಪ್ರಾರ್ಥನೆ

ಯಾವುದೇ ಪೂರ್ವಾನುಭವ ಇಲ್ಲದಿರುವಾಗ ಅಲ್ಪಾವಧಿಯಲ್ಲಿ ನಮಗೆ ಅನೇಕ ಪ್ರಕಾರದ ತರಕಾರಿಗಳನ್ನು ಬೆಳೆಸಲು ಸಾಧ್ಯವಾಯಿತು ಮತ್ತು ೨ ಕುಟುಂಬಗಳಿಗೆ ಸಾಕಾಗುವಷ್ಟು ತರಕಾರಿ ಸಿಗತೊಡಗಿತು. ‘ದೇವರು ನಮ್ಮನ್ನು ಮಾಧ್ಯಮವನ್ನಾಗಿಸಿ ಈ ಹೊಸ ಸೇವೆಯನ್ನು ಕಲಿಸಿದನು ಮತ್ತು ಗುರುಕೃಪೆಯ ಅನುಭೂತಿಯನ್ನೂ ನೀಡಿದನು, ಇದಕ್ಕಾಗಿ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! ‘ಮುಂದಿನ ಆಪತ್ಕಾಲದಲ್ಲಿ ಮನೆಯಲ್ಲಿ ಬೆಳೆಸಿದ ಆಹಾರ ಪದಾರ್ಥಗಳು ಸಾಧಕರಿಗೆ ಸಿಗಲಿ, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !

– ಶ್ರೀ. ಮಯೂರೇಶ ಕೊನೇಕರ ಮತ್ತು ಸೌ. ರಾಘವಿ ಕೊನೇಕರ, ಢವಳಿ, ಫೋಂಡಾ, ಗೋವಾ. (೧.೫.೨೦೨೧)