ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಔಷಧಿ ವನಸ್ಪತಿಗಳು ಬಹಳಷ್ಟಿವೆ, ಆದುದರಿಂದ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಪ್ರಸ್ತುತ ಲೇಖನದಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳೆಸಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ. ವಾಚಕರು ಈ ಲೇಖನದಲ್ಲಿ ನೀಡಿದ ವನಸ್ಪತಿಗಳ ವ್ಯತಿರಿಕ್ತ ಇತರ ವನಸ್ಪತಿಗಳನ್ನೂ ಬೆಳೆಸಬಹುದು. ಇಲ್ಲಿಯವರೆಗೆ ಈ ಲೇಖನದಲ್ಲಿ ನಾವು ತುಳಸಿ, ಆಡುಸೋಗೆ, ಅಮೃತಬಳ್ಳಿ, ಲೋಳೆಸರ, ನೆಲಬೇವು ಮತ್ತು ಜಾಜಿ ಮಲ್ಲಿಗೆ ಇತ್ಯಾದಿಗಳ ಮಾಹಿತಿಯನ್ನು ತಿಳಿದುಕೊಂಡೆವು. ಈ ವಾರ ಆ ಲೇಖನದ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:  https://sanatanprabhat.org/kannada/47352.html

ಮಾರ್ಗದರ್ಶಕರು : ಡಾ. ದಿಗಂಬರ ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ವಿದ್ಯಾಪೀಠ ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ  ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

ಸಂಕಲನಕಾರರು : ಶ್ರೀ. ಮಾಧವ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

೧೯. ಶತಾವರಿ

ಶತಾವರಿ ಎಲೆಗಳು ಮತ್ತು ಶತಾವರಿಯ ಬೇರುಗಳು

೧೯ ಅ ಮಹತ್ವ : ಶತಾವರಿಯು ಒಂದು ಉತ್ತಮ ಶಕ್ತಿವರ್ಧಕ ಔಷಧಿಯಾಗಿದೆ. ಮನೆಯಲ್ಲಿ ಶತಾವರಿಯ ೩ ರಿಂದ ೪ ಸಸಿಗಳನ್ನು ನೆಟ್ಟರೂ ಸಾಕಾಗುತ್ತದೆ. ಶತಾವರಿಯ ಬೇರುಗಳ ತಾಜಾ ರಸವನ್ನು ಔಷಧಿಯೆಂದು ಉಪಯೋಗಿಸಬಹುದು.

೧೯ ಆ. ಪರಿಚಯ : ಕರಾವಳಿಯಲ್ಲಿ ಮಳೆಗಾಲದಲ್ಲಿ ಮಾವು, ಗೋಡಂಬಿಯ ತೋಟಗಳಲ್ಲಿ ಅಥವಾ ಪಾಳು ಬಿದ್ದ ಜಾಗಗಳಲ್ಲಿ ಈ ವನಸ್ಪತಿಯು ತಾನಾಗಿಯೇ ಹುಟ್ಟುತ್ತದೆ. ಇದರ ಎಲೆಗಳು ವೈಶಿಷ್ಟ್ಯಪೂರ್ಣವಾಗಿರುತ್ತವೆ. ಬಳ್ಳಿಯ ಬುಡಕ್ಕೆ ಅಗೆದರೆ ಒಂದು ಕಾಂಡಕ್ಕೆ ೫೦ ರಿಂದ ೧೦೦ ಬೇರುಗಳು ಸಿಗುತ್ತವೆ. ೧ ಬೇರನ್ನು ನೆಟ್ಟರೆ ಅದರ ೧೦೦ ಬೇರುಗಳಾಗುತ್ತವೆ, ಆದುದರಿಂದ ಇದಕ್ಕೆ ಶತಾವರಿ ಎಂದು ಹೇಳಿರಬಹುದು.

೧೯ ಇ. ಬೆಳೆಸುವಿಕೆ : ಮಳೆಗಾಲ ಮುಗಿದ ನಂತರ ಇದಕ್ಕೆ ಚಿಕ್ಕ ಹಣ್ಣುಗಳು ಬರುತ್ತವೆ. ಹಣ್ಣುಗಳಲ್ಲಿನ ಬೀಜಗಳಿಂದ ಶತಾವರಿಯ ಸಸಿಗಳನ್ನು ತಯಾರಿಸಿದರೆ ಬೆಳೆಯು ಚೆನ್ನಾಗಿ ಬರುತ್ತದೆ. ಇದರ ಬೇರುಗಳ ಗೊಂಚಲಿನಿಂದ ಒಂದೊಂದು ಬೇರನ್ನು ಬೇರೆ ಮಾಡಿ ನೆಟ್ಟರೂ ಸಸಿಗಳು ತಯಾರಾಗುತ್ತವೆ. ಸಾಮಾನ್ಯವಾಗಿ ಒಂದೂವರೆ ವರ್ಷದಲ್ಲಿ ಒಂದು ಬೇರಿನಿಂದ ಅನೇಕ ಬೇರುಗಳು ತಯಾರಾಗುತ್ತವೆ. ಈ ವನಸ್ಪತಿಯನ್ನು ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು. ಮಹಾರಾಷ್ಟ್ರದಲ್ಲಿ ಅನೇಕ ರೈತರು ವ್ಯಾವಸಾಯಿಕ ಸ್ತರದಲ್ಲಿ ಶತಾವರಿಯ ಕೃಷಿಯನ್ನು ಮಾಡಿದ್ದಾರೆ. ಅವರಿಂದ ಶತಾವರಿಯ ಬೇರುಗಳ ಒಂದು ಗೊಂಚಲನ್ನು ತಂದರೂ, ಅದರಲ್ಲಿ ಎಷ್ಟು ಬೇರುಗಳಿರುತ್ತವೆಯೋ, ಅಷ್ಟು (ಸಾಧಾರಣ ೫೦ ರಿಂದ ೧೦೦) ಸಸಿಗಳು ತಯಾರಾಗುತ್ತವೆ. ಬಿಳಿ ಮತ್ತು ಹಳದಿ ಹೀಗೆ ಶತಾವರಿಯ ೨ ವಿಧಗಳಿವೆ. ಎರಡೂ ವಿಧಗಳ ಶತಾವರಿಗಳನ್ನು ಔಷಧಿಗಳಲ್ಲಿ ಉಪಯೋಗಿಸುತ್ತಾರೆ.

೧೯ ಇ ೧. ದೊಡ್ಡ ಪ್ರಮಾಣದಲ್ಲಿ ಶತಾವರಿಯನ್ನು ಬೆಳೆಸುವುದಿದ್ದರೆ ಶತಾವರಿಯನ್ನು ಸುಲಿಯುವ ವ್ಯವಸ್ಥೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ :

ವ್ಯಾವಸಾಯಿಕ ಸ್ತರದಲ್ಲಿ ಶತಾವರಿಯನ್ನು ಬೆಳೆಸುವುದಿದ್ದರೆ ಶತಾವರಿಯನ್ನು ಸುಲಿಯುವ ಯಂತ್ರ ಇರುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಶತಾವರಿಯನ್ನು ಕೈಗಳಿಂದ ಸುಲಿಯುವುದು ಬಹಳ ಕಷ್ಟದ ಕೆಲಸವಾಗಿದೆ ಮತ್ತು ಅದಕ್ಕೆ ಬಹಳ ಸಮಯವೂ ಬೇಕಾಗುತ್ತದೆ. ಶತಾವರಿಯ ಸಿಪ್ಪೆಯನ್ನು ತೆಗೆಯದ ಹೊರತು ಅದು ಒಣಗುವುದಿಲ್ಲ ಮತ್ತು ಹಾಗೆಯೇ ಇಟ್ಟರೆ ಅದಕ್ಕೆ ಮುಗ್ಗಲು ಹಿಡಿಯುತ್ತದೆ. ಆದುದರಿಂದ ಶತಾವರಿಯನ್ನು ಸುಲಿಯುವ ಯಂತ್ರ ಇಲ್ಲದಿದ್ದರೆ ವ್ಯಾವಸಾಯಿಕ ಸ್ತರದಲ್ಲಿ ಕೃಷಿಯನ್ನು ಮಾಡಬಾರದು.

೨೦. ಅರಿಶಿಣ

ಅರಿಶಿಣದ ಎಲೆಗಳು

೨೦ ಅ. ಮಹತ್ವ : ‘ಪ್ರತಿದಿನ ರಾತ್ರಿ ಮಲಗುವಾಗ ೧ ಚಮಚ ಅರಿಶಿಣ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಂಡರೆ ಶರೀರವು ವಜ್ರದೇಹಿ (ಬಲಿಷ್ಠ) ಆಗುತ್ತದೆ’, ಎಂದು ಹಿರಿಯ ವೈದ್ಯರು ಹೇಳುತ್ತಾರೆ. ಅರಶಿಣವು ರಕ್ತವನ್ನು ಶುದ್ಧ ಮಾಡುವ, ಹಾಗೆಯೇ ಚರ್ಮಕ್ಕೆ ಕಾಂತಿಯನ್ನು ಕೊಡುವ ಔಷಧಿಯಾಗಿದೆ. ಇದರ ಎಲೆಗಳಿಗೆ ಸುಗಂಧ ಬರುತ್ತವೆ. ಹಾಲು ಕಾಯಿಸುವಾಗ ಅಥವಾ ಬೆಣ್ಣೆಯನ್ನು ಕಾಯಿಸಿ ತುಪ್ಪವನ್ನು ಮಾಡುವಾಗ ಅವುಗಳಲ್ಲಿ ಒಂದು ಅರಿಶಿಣದ ಎಲೆಯನ್ನು ಹಾಕಿದರೆ ಹಾಲು ಮತ್ತು ತುಪ್ಪಕ್ಕೆ ಅದರ ಸುಗಂಧ ಬರುತ್ತದೆ.

೨೦ ಆ. ಬೆಳೆಸುವಿಕೆ : ಪೇಟೆಯಲ್ಲಿ ಅರಿಶಿಣ ದೊರಕುತ್ತಿದ್ದರೂ, ಸ್ವಲ್ಪ ಪ್ರಮಾಣದಲ್ಲಿ ಅರಿಶಿಣವನ್ನು ನಾವು ಮನೆಯಲ್ಲಿಯೂ ಬೆಳೆಸಬಹುದು; ಏಕೆಂದರೆ ಪೇಟೆಯಲ್ಲಿ ಸಿಗುವ ಅರಿಶಿಣವನ್ನು ತಯಾರಿಸುವಾಗ ಅದನ್ನು ನೀರಿನಲ್ಲಿ ಕುದಿಸಿರು ತ್ತಾರೆ. ಇದರಿಂದ ಅದರಲ್ಲಿನ ಔಷಧಿ ತತ್ತ್ವವು ಕಡಿಮೆಯಾಗಿರುತ್ತದೆ. ಅರಿಶಿಣದ ಗೆಡ್ಡೆಗಳು ಅರಿಶಿಣದ ಕೃಷಿಯನ್ನು ಮಾಡುವವರ ಬಳಿ ಅಥವಾ ಸ್ಥಳೀಯ ಕೃಷಿಕಾರ್ಯಾಲಯಗಳಲ್ಲಿ ಸಿಗುತ್ತವೆ.

ಅರಿಶಿಣದ ಕೃಷಿಯನ್ನು ಮಳೆಗಾಲದ ಆರಂಭದಲ್ಲಿ ಮಾಡುತ್ತಾರೆ. ಸಾಮಾನ್ಯವಾಗಿ ೯ ತಿಂಗಳುಗಳ ನಂತರ ಅರಿಶಿಣದ ಗೆಡ್ಡೆಗಳು ತೆಗೆಯಲು /ಕೊಯ್ಲಿಗೆ ಬರುತ್ತವೆ. ಅರಿಶಿಣದ ಎಲೆಗಳು ಒಣಗತೊಡಗಿದಾಗ ಅರಿಶಿಣವು ತೆಗೆಯಲು / ಕೊಯ್ಲಿಗೆ ಬಂದಿದೆ ಎಂದು ತಿಳಿಯುತ್ತಾರೆ. ೪ ಜನರ ಕುಟುಂಬಕ್ಕಾಗಿ ಕೇವಲ ಔಷಧಿಗಾಗಿ ಕೃಷಿಯನ್ನು ಮಾಡುವುದಿದ್ದರೆ ಅರಿಶಿಣದ ಅರ್ಧ ಕಿಲೋದಷ್ಟು ಗೆಡ್ಡೆಗಳು ಸಾಕಾಗುತ್ತವೆ. ಮನೆಯ ಸುತ್ತಲೂ ಜಾಗವಿಲ್ಲದಿದ್ದರೆ, ಒಂದೆರಡು ಅರಿಶಿಣದ ಸಸಿಗಳನ್ನು ಕುಂಡಗಳಲ್ಲಿ ನೆಡಬಹುದು. ಇದರಿಂದ ಸಸಿಗಳು ಬೆಳೆದ ನಂತರ ಎಲೆಗಳು ಸಿಗುತ್ತವೆ.

೨೧. ಕಹಿಬೇವು

ಕಹಿಬೇವಿನ ಎಲೆಗಳು

೨೧ ಅ. ಮಹತ್ವ : ಪ್ರತಿನಿತ್ಯ ಕಹಿಬೇವಿನ ಕಡ್ಡಿಗಳಿಂದ (ಟೊಂಗೆಗಳ ಎಳೆಯ ತುದಿಗಳಿಂದ)  ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳ ಆರೋಗ್ಯವು ಚೆನ್ನಾಗಿ ಉಳಿಯುತ್ತದೆ. ಕಹಿಬೇವು ರಕ್ತವನ್ನು ಶುದ್ಧ ಮಾಡುವುದರಿಂದ ಅದು ಚರ್ಮರೋಗಗಳಿಗೆ ಬಹಳ ಉಪಯುಕ್ತವಾಗಿದೆ.

೨೧ ಆ. ಬೆಳೆಸುವಿಕೆ : ದೇಶದಲ್ಲಿ ಕಹಿಬೇವು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತದೆ. ಆದುದರಿಂದ ಇದನ್ನು ಬೆಳೆಸುವ ಆವಶ್ಯಕತೆ ಇರುವುದಿಲ್ಲ; ಆದರೆ ನಮ್ಮ ಅಕ್ಕಪಕ್ಕದ ಪರಿಸರದಲ್ಲಿ ಕಹಿಬೇವಿನ ಗಿಡ ಇಲ್ಲದಿದ್ದರೆ, ನಾವು ಒಂದು ಗಿಡವನ್ನು ಬೆಳೆಸಬೇಕು. ಕಹಿಬೇವಿನ ಸಸಿಗಳು ಸಸ್ಯಶಾಲೆಗಳಲ್ಲಿ (ನರ್ಸರಿಗಳಲ್ಲಿ) ಸಿಗುತ್ತವೆ. ಬೀಜಗಳಿಂದ ಸಸಿಗಳನ್ನು ತಯಾರಿಸಲಾಗುತ್ತದೆ.

೨೨. ಪಾರಿಜಾತ

೨೨ ಅ. ಮಹತ್ವ : ಜ್ವರ ಮತ್ತು ಸಂಧಿವಾತದಲ್ಲಿ ಪಾರಿಜಾತವು ಬಹಳ ಉಪಯೋಗಿಯಾಗಿದೆ. ಮನೆಯ ಪಕ್ಕದಲ್ಲಿ ಒಂದು ಗಿಡವಿರಬೇಕು.

೨೨ ಆ. ಬೆಳೆಸುವಿಕೆ : ಇದನ್ನು ಟೊಂಗೆಗಳಿಂದ ಬೆಳೆಸಲು ಬರುತ್ತದೆ. ಫೆಬ್ರುವರಿ – ಮಾರ್ಚ್ ತಿಂಗಳುಗಳಲ್ಲಿ ಇದರ ಟೊಂಗೆಗಳನ್ನು ಮರಳಿನಲ್ಲಿ ಹೂಳಿಟ್ಟರೆ ಜೂನ್‌ ವರೆಗೆ ಒಳ್ಳೆಯ ಸಸಿಗಳು ತಯಾರಾಗುತ್ತವೆ ಮತ್ತು ಅವುಗಳನ್ನು ಮಳೆಗಾಲದಲ್ಲಿ ನೆಡಬಹುದು.

(ಮುಂದುವರಿಯುವುದು)