ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಔಷಧಿ ವನಸ್ಪತಿಗಳು ಬಹಳಷ್ಟಿವೆ, ಆದುದರಿಂದ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಪ್ರಸ್ತುತ ಲೇಖನದಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳೆಸಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ. ವಾಚಕರು ಈ ಲೇಖನದಲ್ಲಿ ನೀಡಿದ ವನಸ್ಪತಿಗಳ ವ್ಯತಿರಿಕ್ತ ಇತರ ವನಸ್ಪತಿಗಳನ್ನೂ ಬೆಳೆಸಬಹುದು. ಇಲ್ಲಿಯವರೆಗೆ ಈ ಲೇಖನದಲ್ಲಿ ನಾವು ತುಳಸಿ, ಆಡುಸೋಗೆ, ಅಮೃತಬಳ್ಳಿ, ಲೋಳೆಸರ, ನೆಲಬೇವು ಮತ್ತು ಜಾಜಿ ಮಲ್ಲಿಗೆ ಇವುಗಳ ಮಾಹಿತಿಯನ್ನು ತಿಳಿದುಕೊಂಡೆವು. ಈ ವಾರ ಆ ಲೇಖನದ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:  https://sanatanprabhat.org/kannada/46378.html

ಮಾರ್ಗದರ್ಶಕರು : ಡಾ. ದಿಗಂಬರ ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ವಿದ್ಯಾಪೀಠ ಪುಣೆ, ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ  ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

ಸಂಕಲನಕಾರರು   : ಶ್ರೀ. ಮಾಧವ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

೧೨. ವೀಳ್ಯದೆಲೆಯ ಬಳ್ಳಿ

ವೀಳ್ಯದೆಲೆ

೧೨ ಅ. ಮಹತ್ವ : ಮಳೆಗಾಲದ ದಿನಗಳಲ್ಲಿ ಊಟದ ನಂತರ ವೀಳ್ಯದೆಲೆಯನ್ನು ತಿಂದರೆ ಊಟ ಜೀರ್ಣವಾಗಲು ಸಹಾಯವಾಗುತ್ತದೆ. ಕೆಮ್ಮು, ಕಫ ಜೀರ್ಣಶಕ್ತಿ ಮಂದವಾಗಿರುವುದು ಇವುಗಳಿಗಾಗಿ ಇದು ಉಪಯುಕ್ತವಾಗಿದೆ. ೪ ಜನರ ಕುಟುಂಬಕ್ಕಾಗಿ ಒಂದು ವೀಳ್ಯದೆಲೆಯ ಬಳ್ಳಿ ಸಾಕಾಗುತ್ತದೆ.

೧೨ ಆ. ಬೆಳೆಸುವಿಕೆ : ದೊಡ್ಡ ಬಳ್ಳಿಯ ರೆಂಬೆಗಳನ್ನು ಕತ್ತರಿಸಿ ನೆಟ್ಟರೆ ಅವು ಬೆಳೆಯುತ್ತವೆ. ಈ ಬಳ್ಳಿಗಳು ಹೆಚ್ಚಿನ ಜನರ ಮನೆಗಳಲ್ಲಿ ಇರುತ್ತವೆ. ಇದರ ಸಸಿಗಳು ಸಸ್ಯವನಗಳಲ್ಲಿ (ನರ್ಸರಿಗಳಲ್ಲಿ) ಮಾರಾಟಕ್ಕೂ ಸಿಗುತ್ತವೆ. ಈ ಬಳ್ಳಿಗೆ ಆಧಾರ ಬೇಕಾಗುತ್ತದೆ. ಆದುದರಿಂದ ಈ ಬಳ್ಳಿಗಳನ್ನು ನುಗ್ಗೆಕಾಯಿ, ಅಗಸೆ, ತೆಂಗು, ಅಡಿಕೆ ಇವುಗಳಂತಹ ಗಿಡಗಳ ಬುಡದಲ್ಲಿ ನೆಡಬೇಕು. ಒಂದು ಬಾರಿ ಬಳ್ಳಿಯು ಬೆಳೆಯಿತೆಂದರೆ ಅದು ತುಂಬಾ ದೊಡ್ಡದಾಗುತ್ತದೆ.

೧೩. ಹೇಮಸಾಗರ ಗಿಡ (ಪರ್ಣಬೀಜ)

ಹೇಮಸಾಗರ ಗಿಡ

೧೩. ಅ ಮಹತ್ವ : ಇದು ಮೂತ್ರಪಿಂಡದ ಕಲ್ಲುಗಳಿಗೆ ಒಳ್ಳೆಯ ಔಷಧಿಯಾಗಿದೆ. ೪ ಜನರ ಕುಟುಂಬಕ್ಕಾಗಿ ಒಂದು ಗಿಡ ಸಾಕಾಗುತ್ತದೆ.

೧೩ ಆ. ಬೆಳೆಸುವಿಕೆ : ಇದರ ಎಲೆಯನ್ನು ನೆಟ್ಟಗೆ ಮಣ್ಣಿನಲ್ಲಿ ಒಂದು ಚತುರ್ಥಾಂಶದಿಂದ ಅರ್ಧದಷ್ಟು ಹೂಳಬೇಕು. ಇದರಿಂದ ಆ ಎಲೆಗೆ ಹೊಸ ಸಸಿಗಳು ಬರುತ್ತವೆ. ಎಲೆಗಳಿಂದ ಹೊಸ ಸಸಿಗಳು ಬರುತ್ತವೆ ಎಂದು ಇದಕ್ಕೆ ಮರಾಠಿಯಲ್ಲಿ ಪಾನಫುಟಿ ಅಥವಾ ಪರ್ಣಬೀಜ ಎಂದು ಹೇಳುತ್ತಾರೆ. ಬಹುತೇಕ ಮನೆಗಳಲ್ಲಿ ಈ ಗಿಡವಿರುತ್ತದೆ ಅಥವಾ ಇದರ ಸಸಿಗಳು ಸಸ್ಯವನಗಳಲ್ಲಿ (ನರ್ಸರಿಗಳಲ್ಲಿ) ಮಾರಾಟಕ್ಕೆ ಸಿಗುತ್ತವೆ.

೧೪. ಭೃಂಗರಾಜ

ಭೃಂಗರಾಜ

೧೪ ಅ. ಮಹತ್ವ : ಹೊಟ್ಟೆಗೆ ಸಂಬಂಧಿಸಿದ ರೋಗಗಳು, ಕೆಮ್ಮು, ದಮ್ಮು, ಹಾಗೆಯೇ ಕೂದಲುಗಳಿಗೆ ಸಂಬಂಧಿಸಿದ ರೋಗಗಳಿಗೆ ಇದು ತುಂಬಾ ಒಳ್ಳೆಯ ಔಷಧಿಯಾಗಿದೆ. ಭೃಂಗರಾಜ ಮಹಾಲಯ ಪಕ್ಷದಲ್ಲಿ ಬೆಳೆಯುತ್ತದೆ. ಆದುದರಿಂದ ಬಹಳಷ್ಟು ಜನರು ಇದನ್ನು ಮನೆಯಲ್ಲಿ ಬೆಳೆಸುತ್ತಾರೆ. ೪ ಜನರ ಕುಟುಂಬಕ್ಕಾಗಿ ೮ ರಿಂದ ೧೦ ಗಿಡಗಳಿದ್ದರೆ ಸಾಕಾಗುತ್ತದೆ.

೧೪ ಆ. ಬೆಳೆಸುವಿಕೆ : ಮಳೆ ಬಿದ್ದ ನಂತರ ಭೃಂಗರಾಜದ ಸಸಿಗಳು ತಾವಾಗಿಯೇ ಹುಟ್ಟುತ್ತವೆ. ರಸ್ತೆಯ ಬದಿಯಲ್ಲಿ, ಕೆಲವು ಸ್ಥಳಗಳಲ್ಲಿ (ನಗರಗಳಲ್ಲಿಯೂ) ಚರಂಡಿಗಳ ಬದಿಯಲ್ಲಿಯೂ ಭೃಂಗರಾಜದ ಸಸಿಗಳು ಸಿಗುತ್ತವೆ. ಇದು ಒಂದು ರೀತಿಯ ಹುಲ್ಲಾಗಿದ್ದು ಭತ್ತದ ಹೊಲದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಮಳೆಗಾಲದ ನಂತರ ನೀರು ಸಿಗದಿದ್ದರೆ ಈ ಹುಲ್ಲು ಒಣಗುತ್ತದೆ. ಹಾಗಾಗಿ ಅದು ಸಿಕ್ಕಿದಾಗ ಅದನ್ನು ತಂದು ಮನೆಯ ಪರಿಸರದಲ್ಲಿ ಬೆಳೆಸಬೇಕು. ಮಳೆಗಾಲದ ನಂತರ ಇದಕ್ಕೆ ನಿತ್ಯ ನೀರು ಹಾಕಬೇಕು.

೧೫. ದಾಸವಾಳ

ದಾಸವಾಳ

ಕೂದಲುಗಳ ಆರೋಗ್ಯಕ್ಕಾಗಿ ದಾಸವಾಳವು ಬಹಳ ಉಪಯುಕ್ತವಾಗಿದೆ. ರೆಂಬೆಗಳನ್ನು (ಟೊಂಗೆಗಳನ್ನು) ನೆಟ್ಟರೆ ಗಿಡಗಳು ಬೆಳೆಯುತ್ತವೆ. ದೇಶಿ ದಾಸವಾಳವನ್ನು ನೆಡಬೇಕು. ೪ ಜನರ ಕುಟುಂಬಕ್ಕಾಗಿ ೧ ಗಿಡವಿದ್ದರೆ ಸಾಕಾಗುತ್ತದೆ.

೧೬. ಕೊಮ್ಮೆ (ಪುನರ್ನವಾ)

ಕೊಮ್ಮೆ

೧೬ ಅ. ಮಹತ್ವ : ಮೂತ್ರಪಿಂಡಗಳ ವೈಫಲ್ಯದಲ್ಲಿನ (ಕಿಡ್ನಿ ಫೆಲ್ಯುರ್) ರೋಗಿಗಳಿಗೆ ಈ ಔಷಧಿಯು ಸಂಜೀವನಿಯಾಗಿದೆ. ಮೂತ್ರ ಕಲ್ಲು, ಮಲಬದ್ಧತೆ, ಊತ (ಬಾವು) ಇವುಗಳಿಗೆ ಇದು ಅತ್ಯಂತ ಗುಣಕಾರಿಯಾಗಿದೆ. ತುಪ್ಪದ ಒಗ್ಗರಣೆ ಹಾಕಿ ತಯಾರಿಸಿದ ಕೊಮ್ಮೆಯ ಎಳೆಯ ಎಲೆಗಳ ಪಲ್ಲೆಯನ್ನು ವರ್ಷದಲ್ಲಿ ಒಂದು ಬಾರಿಯಾದರೂ ತಿನ್ನಬೇಕು ಎಂದು ಹೇಳುತ್ತಾರೆ. ಇದರಿಂದ ಹೊಟ್ಟೆಯಲ್ಲಿನ ವಿಷಕಾರಿ ಘಟಕಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಮನೆಯ ಸುತ್ತಲೂ ಜಾಗವಿದ್ದರೆ ಹೆಚ್ಚು ಗಿಡಗಳನ್ನು ಬೆಳೆಸಬಹುದು.

೧೬ ಆ. ಪರಿಚಯ ಮತ್ತು ಬೆಳೆಸುವಿಕೆ : ಮಳೆಗಾಲದಲ್ಲಿ ಈ ಗಿಡಗಳು ತಾವಾಗಿಯೇ  ಹುಟ್ಟುತ್ತವೆ. ನಗರಗಳಲ್ಲಿಯೂ ಈ ವನಸ್ಪತಿಯು ಚರಂಡಿಗಳ ಅಥವಾ ರಸ್ತೆಯ ಬದಿಗಳಲ್ಲಿ ಕಂಡು ಬರುತ್ತದೆ. ಕಾಂಡವು ನಸುಗೆಂಪಾಗಿರುತ್ತದೆ. ಎಲೆಗಳು ಗಾಢ ಹಸಿರುಬಣ್ಣದ್ದಾಗಿರುತ್ತವೆ. ಈ ವನಸ್ಪತಿಯು ಹಬ್ಬುತ್ತಾ ಹೋಗುತ್ತದೆ. ಇದಕ್ಕೆ ಗುಲಾಬಿ ಬಣ್ಣದ ಹೂವುಗಳು ಬರುತ್ತವೆ. ಮಳೆಗಾಲದ ನಂತರ ನೀರು ಸಿಗದಿದ್ದರೆ ಗಿಡಗಳು ಒಣಗುತ್ತವೆ; ಆದರೆ ಬೇರು ಜೀವಂತವಾಗಿರುತ್ತದೆ. ಪುನಃ ಮಳೆಗಾಲದಲ್ಲಿ ನೀರು ಸಿಕ್ಕಾಗ ಗಿಡವು ಹುಟ್ಟಿಕೊಳ್ಳುತ್ತದೆ. ಆದುದರಿಂದ ಇದಕ್ಕೆ ಮರಾಠಿಯಲ್ಲಿ ‘ಪುನರ್ನವಾ’ ಎಂದು ಹೇಳುತ್ತಾರೆ. ಇದರ ೩-೪  ಸಸಿಗಳನ್ನು ನೆಟ್ಟರೂ ಒಂದು ವರ್ಷದಲ್ಲಿ ಅದು ೧೦ ರಿಂದ ೧೨ ಚದರ ಮೀಟರ್ ಪರಿಸರದಲ್ಲಿ ಹರಡುತ್ತದೆ. ಈ ವನಸ್ಪತಿಯ ಬೇರುಗಳು ಬಹಳ ಆಳದಲ್ಲಿರುತ್ತವೆ. ಆದುದರಿಂದ ಈ ವನಸ್ಪತಿಯು ಸಿಕ್ಕರೆ, ಅದನ್ನು ಕಿತ್ತು ತೆಗೆಯದೇ ಅಗೆದು ತೆಗೆಯಬೇಕು ಮತ್ತು ಅದನ್ನು ಮನೆಯ ಸಮೀಪ ಲಭ್ಯವಿರುವ ಜಾಗದಲ್ಲಿ ನೆಡಬೇಕು.

೧೭. ಬ್ರಾಹ್ಮಿ

ಬ್ರಾಹ್ಮಿ
ಜಲಬ್ರಾಹ್ಮಿ

೧೭ ಅ. ಮಹತ್ವ : ಮಂಡೂಕಪರ್ಣಿಯು ಸ್ಮೃತಿವರ್ಧಕವೆಂದು ಪ್ರಸಿದ್ಧವಾಗಿದೆ. ಇದು ಶಾಂತ ನಿದ್ದೆ ಬರಲು, ಹಾಗೆಯೇ ಕೂದಲುಗಳ ಆರೋಗ್ಯಕ್ಕಾಗಿ ತುಂಬಾ ಉಪಯುಕ್ತವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದನ್ನು ಮನೆಯ ಸುತ್ತಲೂ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಬೆಳೆಸಬೇಕು.

೧೭ ಆ. ವಿಧ ಮತ್ತು ಬೆಳೆಸುವಿಕೆ : ಇದರ ೨ ವಿಧಗಳಿವೆ, ಒಂದು ಜಲಬ್ರಾಹ್ಮಿ ಮತ್ತು ಇನ್ನೊಂದು ಮಂಡೂಕಪರ್ಣಿ. ಎರಡೂ ವಿಧದ ಗಿಡಗಳ ಗುಣಧರ್ಮಗಳು ಒಂದೇ ಆಗಿವೆ. ಕರಾವಳಿ ಪ್ರದೇಶದಲ್ಲಿನ ತೆಂಗು-ಅಡಿಕೆಗಳ ತೋಟದಲ್ಲಿ ಮಂಡೂಕಪರ್ಣಿಯು ಬೆಳೆಯುತ್ತದೆ. ಬಹಳಷ್ಟು ಜನರು ಮನೆಯ ಸುತ್ತಲೂ ‘ಲಾನ್’ ನ ಬದಲು ಮಂಡೂಕಪರ್ಣಿಯನ್ನು ಬೆಳೆಸುತ್ತಾರೆ. ಈ ವನಸ್ಪತಿಯು ಭೂಮಿಯ ಮೇಲೆ ಹರಡುತ್ತಾ ಹೋಗುತ್ತದೆ. ಇದು ಯಾರ ಬಳಿಯಾದರು ಇದ್ದರೆ, ಅವರಿಂದ ಕೇಳಿ ಅದರ ೫ – ೬ ಸಸಿಗಳನ್ನು ತಂದು ನೆಟ್ಟರೆ ಅದು ಸ್ವಲ್ಪ ದಿನಗಳಲ್ಲಿ ಬಹಳಷ್ಟು ಹಬ್ಬುತ್ತದೆ. ಇದರ ಸಸಿಗಳು ಸಸ್ಯವನಗಳಲ್ಲಿಯೂ (ನರ್ಸರಿಗಳಲ್ಲಿ) ಸಿಗುತ್ತವೆ. ಭತ್ತದ ಹೊಲಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಈ ಹುಲ್ಲು ನಿಶ್ಚಿತವಾಗಿಯೂ ಅಲ್ಲಿ ಸಿಗುತ್ತದೆ. ಇದು ದನಕರುಗಳ ಇಷ್ಟವಾದ ಖಾದ್ಯವಾಗಿರುವುದರಿಂದ ಈ ವನಸ್ಪತಿಯು ಹೆಚ್ಚು ಸಮಯ ಹೊಲದಲ್ಲಿ ಉಳಿಯುವುದಿಲ್ಲ; ಆದರೆ ಎಲ್ಲಿ ಮುಟ್ಟಿದರೆ ಮುನಿಯ ಮುಳ್ಳುಗಳುಳ್ಳ ವನಸ್ಪತಿಯು ಹಬ್ಬಿರುತ್ತದೆಯೋ, ಅಂತಹ ಸ್ಥಳದಲ್ಲಿ ದನಕರುಗಳು ಬಾಯಿ ಹಾಕದಿರುವುದರಿಂದ ಭತ್ತದ ಹೊಲದಲ್ಲಿ ಆ ಸ್ಥಳದಲ್ಲಿ ಬ್ರಾಹ್ಮಿಯ ಸಸಿಗಳು ಸಿಗುತ್ತವೆ. ಈ ಸಸಿಗಳನ್ನು ಯಾವುದಾದರೊಂದು ಕುಂಡದಲ್ಲಿಯೂ ಬೆಳೆಸಬಹುದು. ಕಾಂಡದ ತುಂಡುಗಳಿಂದಲೂ ಬ್ರಾಹ್ಮಿಯನ್ನು ಬೆಳೆಸಬಹುದು. ಬ್ರಾಹ್ಮಿಯನ್ನು ಬೆಳೆಸಲು ಸದಾ ನೀರು ಲಭ್ಯವಾಗುವಂತಹ ಜಾಗವನ್ನು ಆಯ್ಕೆ ಮಾಡಬೇಕು.

೧೮. ಬಜೆ (ವೆಖಂಡ)

ಬಜೆ

೧೮ ಅ. ಮಹತ್ವ : ಈ ಔಷಧಿಯು ನಿಯಮಿತವಾಗಿ ಬೇಕಾಗುವ ಔಷಧಿಯಲ್ಲದಿದ್ದರೂ, ಮನೆಯಲ್ಲಿ ಒಂದು ಸಸಿ ಇರಬೇಕು. ಇದು ‘ಸಂಜ್ಞಾಸ್ಥಾಪನ ಅಂದರೆ ಅರೆ ಪ್ರಜ್ಞಾಸ್ಥಿತಿಯಲ್ಲಿರುವವರನ್ನು ಜಾಗ್ರತಾವಸ್ಥೆಗೆ ತರುವ ‘ಔಷಧಿಯಾಗಿದೆ.

೧೮ ಆ. ಬೆಳೆಸುವಿಕೆ : ಇದಕ್ಕೆ ಬಹಳಷ್ಟು ನೀರು ಬೇಕಾಗುತ್ತದೆ. ಜವುಳು ಭೂಮಿಯಲ್ಲಿ ಬಜೆ ಚೆನ್ನಾಗಿ ಬೆಳೆಯುತ್ತದೆ. ಯಾರ ಬಳಿಯದಾದರೂ ಬಜೆಯ ಸಸಿಗಳಿದ್ದರೆ, ಅವರಿಂದ ಅದನ್ನು ಪಡೆದು ಅದರ ಗಡ್ಡೆಯನ್ನು ಕತ್ತರಿಸಿ ನೆಡಬಹುದು. ಕೆಲವು ಸಸ್ಯವನಗಳಲ್ಲಿ (ನರ್ಸರಿಗಳಲ್ಲಿ) ಇದರ ಸಸಿಗಳು ಸಿಗತ್ತವೆ.

(ಮುಂದುವರಿಯುವುದು)