ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ, ‘ಸ್ವರಾಜ್ಯದಿಂದ ಸುರಾಜ್ಯದೆಡೆಗೆ ನಡೆಯೋಣ …’ ಈ ವಿಷಯದ ಕುರಿತು ವಿಶೇಷ ‘ಆನ್‌ಲೈನ್’ ಸಂವಾದ !

ಪ್ರಭು ಶ್ರೀರಾಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ರಚಿಸಿದ ಆದರ್ಶ ವ್ಯವಸ್ಥೆಯನ್ನು ಸ್ಥಾಪಿಸಬೇಕಾಗಿದೆ ! – ನ್ಯಾಯವಾದಿ ನೀಲೇಶ್ ಸಾಂಗೋಲ್ಕರ್

ದೇಶ ಸ್ವತಂತ್ರಗೊಂಡು 74 ವರ್ಷಗಳು ಕಳೆದರೂ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದರೂ, ದೇಶದ ಸ್ಥಿತಿ ಚಿಂತಾಜನಕ ಮತ್ತು ದುರ್ಬಲವಾಗಿದೆ. ದೇಶದಲ್ಲಿ ದುರ್ವರ್ತನೆ ಹೆಚ್ಚಾಗಿದೆ, ಮತ್ತು ನಮ್ಮ ದೇಶ ಭ್ರಷ್ಟಾಚಾರಕ್ಕೆ ಗುರುತಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ರೀತಿಯ ತೊಂದರೆಯಲ್ಲಿ ಸಿಲುಕಿದ್ದಾನೆ. ಭ್ರಷ್ಟಾಚಾರವಿಲ್ಲದ ಯಾವುದೇ ಕ್ಷೇತ್ರ ದೇಶದಲ್ಲಿ ಉಳಿದಿಲ್ಲ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಆಂಗಸ್ ಮ್ಯಾಡಿಸನ್ ಅವರ ಪ್ರಕಾರ, ಸ್ವಾತಂತ್ರ್ಯಕ್ಕಿಂತ ಮೊದಲು ಭಾರತದ ಜಿ.ಡಿ.ಪಿ (ರಾಷ್ಟ್ರೀಯ ಉತ್ಪನ್ನ) ವಿಶ್ವದಲ್ಲೇ ಉನ್ನತ ಸ್ಥಾನದಲ್ಲಿತ್ತು. ಮೊಘಲರು ಮತ್ತು ಬ್ರಿಟಿಷರು ಬರುವ ಮೊದಲು ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವಾಗಿತ್ತು; ಆದರೆ ಈಗ ಪ್ರಜಾಪ್ರಭುತ್ವ ವಿಫಲವಾಗುತ್ತಿರುವುದು ಕಂಡು ಬರುತ್ತಿದೆ. ನಮಗೆ ಆದರ್ಶ ವ್ಯವಸ್ಥೆ ಬೇಕಾದರೆ, ಜನರು ಜಾಗೃತರಾಗಿರಬೇಕು ಮತ್ತು ತಮ್ಮ ಹಕ್ಕುಗಳಿಗಾಗಿ ಸಾಂವಿಧಾನಿಕ ರೀತಿಯಲ್ಲಿ ಹೋರಾಡಬೇಕು ಮತ್ತು ಭಾರತದಲ್ಲಿ ಪ್ರಭು ಶ್ರೀರಾಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಇದ್ದ ಆದರ್ಶ ವ್ಯವಸ್ಥೆಯನ್ನು ಸ್ಥಾಪಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ‘ಸುರಾಜ್ಯ ಅಭಿಯಾನ’ದ ಸಮನ್ವಯಕರಾದ ನ್ಯಾಯವಾದಿ ನೀಲೇಶ್ ಸಾಂಗೋಲ್ಕರ್ ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಆರೋಗ್ಯ ಸಹಾಯ ಸಮಿತಿ ಮತ್ತು ‘ಸುರಾಜ್ಯ ಅಭಿಯಾನ’ ಆಯೋಜಿಸಿದ್ದ ‘ಸ್ವರಾಜ್ಯದಿಂದ ಸುರಾಜ್ಯದೆಡೆಗೆ ನಡೆಯೊಣ…’ ಎಂಬ ವಿಶೇಷ ಆನ್‌ಲೈನ್ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಸುರಾಜ್ಯ ಬಾರದೇ ಇರುವ ಕಾರಣಗಳನ್ನು ಸ್ಪಷ್ಟಪಡಿಸುತ್ತಿರುವಾಗ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆಯವರು, ‘ಸ್ವಾತಂತ್ರ್ಯಕ್ಕಿಂತ ಮೊದಲು, ನಮಗೆ ಗುರುಕುಲ ಶಿಕ್ಷಣ ಪದ್ದತಿಯಲ್ಲಿ ವ್ಯವಹಾರಿಕ ಶಿಕ್ಷಣದೊಂದಿಗೆ ರಾಷ್ಟ್ರೀಯತೆ, ಕರ್ತವ್ಯನಿಷ್ಠೆ, ಪರೋಪಕಾರದ ನೈತಿಕ ಮೌಲ್ಯಗಳನ್ನು ಕಲಿಸಲಾಗುತ್ತಿತ್ತು; ಆದರೆ ದೇಶ ಸ್ವತಂತ್ರಗೊಂಡು 74 ವರ್ಷಗಳ ನಂತರವೂ ನಮ್ಮದೇ ಶಿಕ್ಷಣ ವ್ಯವಸ್ಥೆ ಇಲ್ಲ. ಪ್ರಸ್ತುತ ‘ಮೆಕಾಲೆ’ಯ ಶಿಕ್ಷಣ ವ್ಯವಸ್ಥೆಯಿಂದಾಗಿ, ಜನರು ಕೇವಲ ಸುಶಿಕ್ಷಿತರಾಗುತ್ತಿದ್ದಾರೆ ಆದರೆ ಸುಸಂಸ್ಕೃತರಾಗುತ್ತಿಲ್ಲ. ಆದ್ದರಿಂದ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ವೈದ್ಯಕೀಯ, ಕಾನೂನು ಇತ್ಯಾದಿ ಕ್ಷೇತ್ರಗಳಲ್ಲಿ ಬೆಳೆದು ದೊಡ್ಡವರಾದ ಜನರು ಸಾಮಾನ್ಯ ಜನರ ಹಗಲು ದರೋಡೆ ಮಾಡುವುದು ಮತ್ತು ಭ್ರಷ್ಟಾಚಾರ ಮಾಡುವುದು ಕಂಡುಬರುತ್ತದೆ. ಭಾರತದಲ್ಲಿ ಜನರಿಗೆ ಕಾನೂನಿನ ಭಯವಿಲ್ಲ. ಪೊಲೀಸ್ ಠಾಣೆಯಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಎಷ್ಟೇ ಅಲೆದಾಡಿದರೂ ನ್ಯಾಯ ಮಾತ್ರ ದೂರದ ಮಾತಾಗಿರುತ್ತದೆ. ಇಂದು, ಯುವ ಪೀಳಿಗೆಯ ಮುಂದೆ ಭ್ರಷ್ಟ ನಾಯಕರ ಮತ್ತು ಅನೈತಿಕ ಚಲನಚಿತ್ರ ನಟರ ಆದರ್ಶವನ್ನು ಇಡಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಬೇಕು ಮತ್ತು ಸುರಾಜ್ಯವನ್ನು ಸ್ಥಾಪಿಸಲು ಸಂಘಟಿತರಾಗುವುದು ಅಗತ್ಯವಿದೆ.’

ಸನಾತನ ಪ್ರಭಾತ ನಿಯತಕಾಲಿಕೆಯ ಪ್ರತಿನಿಧಿ ಸೌ. ಗೌರಿ ಕುಲಕರ್ಣಿ ಇವರು, ‘ಪ್ರಸಾರ ಮಾಧ್ಯಮದ ಶಕ್ತಿ ದೊಡ್ಡದಾಗಿದೆ. ಪ್ರಸಾರ ಮಾಧ್ಯಮಗಳು ರಾಷ್ಟ್ರಹಿತ ಮತ್ತು ಸಾಮಾಜಿಕ ಹಿತವನ್ನು ಕಾಪಾಡುವ ಧೋರಣೆಯನ್ನು ತಾಳಿ, ಕೇವಲ ಸಮಸ್ಯೆಯನ್ನು ಹೇಳದೇ ಸಮಸ್ಯೆಯ ಮೂಲ ಕಾರಣಕ್ಕೆ ಹೋಗಿ ಅದರ ಬಗ್ಗೆ ಹೇಳುವುದು ಆವಶ್ಯಕವಾಗಿದೆ. ಹೀಗಾದಲ್ಲಿ ಸುರಾಜ್ಯ ಸ್ಥಾಪನೆಯ ಉಪಕ್ರಮದಲ್ಲಿ ಪತ್ರಿಕೋದ್ಯಮವೂ ಕೊಡುಗೆ ನೀಡಿದಂತಾಗುತ್ತದೆ. ಲೋಕಮಾನ್ಯ ತಿಲಕರ ದೇಶಭಕ್ತಿಯ ಪತ್ರಿಕೋದ್ಯಮದ ಆದರ್ಶವನ್ನು ಪತ್ರಕರ್ತರು ಅನುಸರಿಸಬೇಕು’ ಎಂದು ಹೇಳಿದರು.