ಕೊರೊನಾದ ಲಸಿಕೆ ತೆಗೆದುಕೊಂಡಿದ್ದ ಜನರೂ ಸಹ ‘ಡೆಲ್ಟಾ’ ರೋಗಾಣುವಿಗೆ ತುತ್ತಾಗುತ್ತಿದ್ದಾರೆ

ಲಸಿಕೆ ಹಾಕಿಸಿಕೊಳ್ಳದ ಜನರಲ್ಲಿ ಇದು ಸುಲಭವಾಗಿ ಹರಡುತ್ತದೆ ಎಂದು ತಜ್ಞರ ಅಭಿಪ್ರಾಯ !

ನವ ದೆಹಲಿ : ಕೊರೊನಾದ ‘ಡೆಲ್ಟಾ’ ರೋಗಾಣುವಿನ ವಿಧವು ಮಾರಕವಾಗಿದ್ದು, ಇದು ವಿಶ್ವದಾದ್ಯಂತ ಆತಂಕದ ವಿಷಯವಾಗಿದೆ. ಭಾರತದಲ್ಲಿಯೂ, ಕೊರೊನಾದ ಎರಡನೇ ಅಲೆಯ ಸೋಂಕು ವೇಗವಾಗಿ ಹರಡಲು ಡೆಲ್ಟಾವೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಈ ರೋಗಾಣುವಿನ ಹರಡುವಿಕೆಯ ವೇಗವು ಜಾಸ್ತಿಯಿದ್ದು ಕೊರೊನಾದ ಲಸಿಕೆ ಹಾಕಿಸಿಕೊಂಡ ಜನರಿಗೂ ಸಹ ಸೋಂಕು ತಗಲಿರುವುದು ಅನೇಕ ದೇಶಗಳಲ್ಲಿ ಕಂಡುಬರುತ್ತಿದೆ. ತಜ್ಞರ ಪ್ರಕಾರ, ಲಸಿಕೆ ತೆಗೆದುಕೊಳ್ಳದ ಜನರು ಈ ರೋಗಾಣುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇದೆ ಎಂದು ಹೇಳಿದ್ದಾರೆ.

‘ಪಬ್ಲಿಕ ಹೆಲ್ಥ ಇಂಗ್ಲೆಂಡ್’ ಪ್ರಕಾರ, ಡೆಲ್ಟಾ ರೋಗಾಣುವಿನ ವಿಧದಿಂದ ಸೋಂಕಿಗೆ ಒಳಗಾದ ಒಟ್ಟು ರೋಗಿಗಳಲ್ಲಿ ಶೇ. 22.8 ರಷ್ಟು ಜನರು ಲಸಿಕೆ ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ. ಸಿಂಗಾಪುರದಲ್ಲಿ, ಡೆಲ್ಟಾ ರೋಗಾಣು ಸೋಂಕಿತರಲ್ಲಿ ಶೇಕಡಾ 75 ರಷ್ಟು ಜನರು ಲಸಿಕೆ ಪಡೆದಿದ್ದರು. ಇಸ್ರೇಲ್‍ನಲ್ಲಿ, ಈ ಸಂಖ್ಯೆ ಶೇ. 60 ರಷ್ಟಿದೆ.

‘ಜೀನೋಮಿಕ್ಸ್’ ಶಾಸ್ತ್ರದ ತಜ್ಞ ಎರಿಕ್ ಟೋಪೋಲ್ ಇವರು ನೀಡಿದ ಮಾಹಿತಿಯ ಪ್ರಕಾರ, ಡೆಲ್ಟಾ ರೋಗಾಣುವಿನ ವಿಧವು ಕೊರೋನಾ ಸೋಂಕಿನ ಅತ್ಯಂತ ಅಪಾಯಕಾರಿ ರೂಪವಾಗಿದೆ ಮತ್ತು ಇದರಿಂದ ಅತ್ಯಂತ ವೇಗದಿಂದ ಸೋಂಕು ತಗಲುತ್ತದೆ. ಇದರಿಂದ, ಯಾರು ಕೊರೊನಾದ ಎರಡೂ ಲಸಿಕೆ ತೆಗೆದುಕೊಂಡಿದ್ದಾರೆಯೋ, ಅವರು ಸಹ ಡೆಲ್ಟಾ ವಿಧದ ಬಗ್ಗೆ ಎಚ್ಚರದಿಂದಿರುವ ಅವಶ್ಯಕತೆಯಿದೆ.