ಏಪ್ರಿಲ್ ೨೦೨೧ ರ ಕೊನೆಯ ವಾರದಲ್ಲಿ ಆಯುಷ್ ಸಚಿವಾಲಯವು ಒಂದು ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಅದರಲ್ಲಿ ಸಚಿವಾಲಯದ ಮುಂದಾಳತ್ವದಲ್ಲಿ ಸಂಶೋಧನೆಯನ್ನು ಮಾಡಿ ತಯಾರಿಸಿದ ‘ಆಯುಷ್ ೬೪ ಹೆಸರಿನ ಆಯುರ್ವೇದ ಔಷಧಿಯು ಸೌಮ್ಯ ಮತ್ತು ಮಧ್ಯಮ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಉಪಯುಕ್ತವಾಗಿದೆ ಎಂದು ಘೋಷಿಸಲಾಯಿತು. ಈ ಔಷಧಿಯನ್ನು ಕಂಡು ಹಿಡಿಯಲು ಕಳೆದ ೧ ವರ್ಷದಿಂದ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಸಂಶೋಧನೆಗಳು ನಡೆದಿತ್ತು. ಇದರ ವಿವರವು ‘ಕ್ಲಿನಿಕಲ್ ಟ್ರಾಯಲ್ ರಿಜಿಸ್ಟ್ರಿ ಆಫ್ ಇಂಡಿಯಾ ಈ ಜಾಲತಾಣದಲ್ಲಿ ಲಭ್ಯವಿತ್ತು. ಇದರೊಂದಿಗೆ ಇತರ ವಿವಿಧ ಸ್ಥಳಗಳಲ್ಲಿ ಆಯುರ್ವೇದ ಔಷಧಗಳನ್ನು ಕೋವಿಡ್ ರೋಗದ ಮೇಲೆ ಉಪಯೋಗಿಸುವ ಕುರಿತು ವಿವಿಧ ಸಂಶೋಧನೆಗಳನ್ನು ನಡೆಸಲಾಗಿತ್ತು. ಇವುಗಳಲ್ಲಿ ಕೆಲವು ಫಲಿತಾಂಶಗಳು ಬಂದಿವೆ ಮತ್ತು ಇನ್ನೂ ಕೆಲವು ಮುಂಬರುವ ಕಾಲಾವಧಿಯಲ್ಲಿ ಬರಬಹುದು. ಆಯುರ್ವೇದವು ವೈಜ್ಞಾನಿಕ ಮತ್ತು ಆಧುನಿಕ ಕಾಲದ ಸತ್ವಪರೀಕ್ಷೆಯನ್ನು ಗೆಲ್ಲಬೇಕು ಎಂಬ ಅಭಿಪ್ರಾಯವನ್ನು ಮೇಲಿಂದ ಮೇಲೆ ಮಂಡಿಸಲಾಗುತ್ತದೆ. ಆದರೆ ಹೀಗೆ ಮಾಡುತ್ತಿರುವಾಗಲೂ, ಸ್ವತಃ ಸಚಿವಾಲಯದ ಮುಂದಾಳತ್ವದಿಂದ ಬಂದಿರುವ ನಿಷ್ಕರ್ಷವನ್ನು ಕೂಡ ಸಮಾಜಮಾಧ್ಯಮಗಳಲ್ಲಿ ಯದ್ವಾತದ್ವಾ ಹೊಸಕಿ ಹಾಕಿರುವುದು ಕಂಡು ಬಂದಿತು. ಈ ವಿಷಯದಲ್ಲಿ ಸಮಾಜದಲ್ಲಿ ಬೇರೆ ಬೇರೆ ಗಣ್ಯರು ದೂರದರ್ಶನ ಮತ್ತು ‘ಎ.ಎನ್.ಐನಂತಹ ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ಸುದ್ದಿಯನ್ನು ಸಮಾಜ ಮಾಧ್ಯಮಗಳ ಮುಖಾಂತರ ಪ್ರಚಾರ ಮಾಡಿದಾಗ, ಫೇಸಬುಕ್‌ನಂತಹ ಸಾಮಾಜಿಕ ಮಾಧ್ಯಮವು‘ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದರಿಂದ ಈ ಖಾತೆಯ ಮೇಲೆ ೨೪ ಗಂಟೆಗಳ ಕಾಲ ನಿರ್ಬಂಧನವನ್ನು ಹಾಕಿತು ಇದರೊಂದಿಗೆ ಎಷ್ಟೋ ಜನರ ಇಂತಹ ‘ಪೋಸ್ಟ (ಲೇಖನ) ಗಳನ್ನು ಡಿಲೀಟ್ ಮಾಡಲಾಯಿತು. ಒಂದೆಡೆ ಆಯುರ್ವೇದದಲ್ಲಿ ಸಂಶೋಧನೆಯೇ ಆಗುವುದಿಲ್ಲ ಎಂದು ಹೇಳುವುದು ಮತ್ತು ಇನ್ನೊಂದೆಡೆ ಆಗಿರುವ ಸಂಶೋಧನೆಯನ್ನು ಜನರೆದುರು ಇಡಲು ನಿರ್ಬಂಧಿಸುವುದು, ಅಂದರೆ ಇದು ಒಂದು ರೀತಿಯಲ್ಲಿ ತಾಯಿ ಊಟ ಕೊಡುವುದಿಲ್ಲ ಮತ್ತು ತಂದೆ ಭಿಕ್ಷೆ ಬೇಡಲು ಬಿಡುವುದಿಲ್ಲ ಎಂಬ ಸ್ಥಿತಿ ಆಗಿದೆ.
ಕೊರೊನಾದ ಮೇಲೆ ಮಾಡಲಾಗಿರುವ
ಆಯುರ್ವೇದದ ೩ ವೈದ್ಯಕೀಯ ಪರೀಕ್ಷೆಗಳು
೧. ಜಯಪುರದಲ್ಲಿ ಕೊರೊನಾ ರೋಗಿಗಳ ಮೇಲೆ ಆಯುರ್ವೇದ ಉಪಚಾರದಿಂದ ಕಂಡು ಬಂದಿರುವ ವ್ಯತ್ಯಾಸ : ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಕೋವಿಡ್ ಮತ್ತು ಆಯುರ್ವೇದ ಈ ವಿಷಯದಲ್ಲಿನ ೩ ಅತ್ಯಂತ ಉತ್ತಮ ರೀತಿಯ ‘ಕ್ಲಿನಿಕಲ್ ಟ್ರಾಯಲ್ಸ್ ಗಳು (ವೈದ್ಯಕೀಯ ಪ್ರಯೋಗಗಳು) ನಡೆದಿವೆ. ಇವುಗಳಲ್ಲಿನ ಜಯಪುರದಲ್ಲಿ ನಡೆಸಿದ ಟ್ರಾಯಲನಲ್ಲಿ ೧೦೦ ರೋಗಿಗಳಲ್ಲಿನ ಒಂದು ಗುಂಪಿಗೆ ಆಯುರ್ವೇದ ಔಷಧಿಗಳನ್ನು ನೀಡಲಾಯಿತು ಮತ್ತು ಇನ್ನೊಂದು ಗುಂಪಿಗೆ ಪ್ಲ್ಯಾಸಿಬೋ ಇವುಗಳನ್ನು ಕೊಡಲಾಯಿತು, ಆಯುರ್ವೇದ ಉಪಚಾರ ಪಡೆದ ಗುಂಪಿನಲ್ಲಿನ ಶೇ. ೭೧.೨ ರಷ್ಟು ರೋಗಿಗಳು ಚಿಕಿತ್ಸೆ ಪಡೆದ ಮೂರನೇ ದಿನದಂದೇ ಗುಣಮುಖರಾಗುತ್ತಿರುವುದು ಕಂಡು ಬಂದಿತು. ಹಾಗೆಯೇ ‘ಪ್ಲಾಸಿಬೊ ಗುಂಪಿನಲ್ಲಿ ಈ ಅಂಕಿ ಶೇ. ೫೦ ರಷ್ಟಿತ್ತು. ೭ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆ ಪಡೆದ ಗುಂಪಿನಲ್ಲಿ ಶೇ. ೧೦೦ರಷ್ಟು ರೋಗಿಗಳು ಗುಣಮುಖರಾದರು ಮತ್ತು ‘ಕ್ಲಾಸಿಕ ಪ್ಲಾಸಿಬೊದಲ್ಲಿ ಈ ಅಂಕಿ ಶೇ. ೬೦ ರಷ್ಟು ಮಾತ್ರ ಇತ್ತು. ಆಯುರ್ವೇದ ಚಿಕಿತ್ಸೆ ಪಡೆಯುವ ಗುಂಪಿನಲ್ಲಿ ಈ ಸೋಂಕು ಹೆಚ್ಚಳವಾಗುವ ಸಾಧ್ಯತೆಯು ಶೇ. ೪೦ ರಷ್ಟು ಕಡಿಮೆಯಾಗಿರುವುದು ಕಂಡುಬಂದಿತು. (ಆಧಾರ : ಗಣಪತ ದೇವಪುರಾ ಮತ್ತು ಇತರರು, ‘ಫೈಟೋಮೆಡಿಸಿನ್)
ಆ. ಪುಣೆಯಲ್ಲಿ ಕೊರೊನಾ ರೋಗಿಗಳ ಮೇಲೆ ಅಲೋಪಥಿ ಚಿಕಿತ್ಸೆಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಿದಾಗ ಗಮನಕ್ಕೆ ಬಂದ ವ್ಯತ್ಯಾಸ : ಪುಣೆಯ ಒಂದು ಕೋವಿಡ್ ಕೇಂದ್ರದಲ್ಲಿ ೯೯ ರೋಗಿಗಳ ಮೇಲೆ ಪರೀಕ್ಷಣೆಯನ್ನು ಮಾಡಲು, ಅದರಲ್ಲಿನ ೬೦ ರೋಗಿಗಳಿಗೆ ಅಲೋಪಥಿ ಚಿಕಿತ್ಸೆಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು ಹಾಗೂ ೩೯ ರೋಗಿಗಳಿಗೆ ಕೇವಲ ಅಲೋಪಥಿ ಔಷಧಗಳ ಉಪಯೋಗವನ್ನು ಮಾಡಲಾಯಿತು. ಈ ಎರಡೂ ಗುಂಪುಗಳ ತುಲನೆಯನ್ನು ಮಾಡಿದಾಗ ಆಯುರ್ವೇದ ಚಿಕಿತ್ಸೆಯನ್ನು ನೀಡಿರುವ ಗುಂಪಿನಲ್ಲಿನ ರೋಗಿಗಳಲ್ಲಿ ತುಲನೆಯಲ್ಲಿ ಹೆಚ್ಚು ಶೀಘ್ರವಾಗಿ ಸುಧಾರಣೆಯಾಗಿರುವುದು ಕಂಡುಬಂದಿತು. ಈ ಗುಂಪಿನಲ್ಲಿನ ರೋಗಿಗಳ ಆಸ್ಪತ್ರೆಯಲ್ಲಿರುವ ಕಾಲಾವಧಿ ಕಡಿಮೆಯಾಗಿರುವುದೂ ಕಂಡು ಬಂದಿತು. ಆಯುರ್ವೇದ ಚಿಕಿತ್ಸೆ ನೀಡಲಾಗಿರುವ ಗುಂಪಿನ ಶ್ವಾಸಂಗ ವ್ಯೂಹ ಲಕ್ಷಣಗಳಲ್ಲಿ ಮೊದಲನೇ ದಿನ, ಮೂರನೇಯ ದಿನ ಮತ್ತು ಏಳನೇಯ ದಿನ ಅನುಕ್ರಮವಾಗಿ ಶೇ.೫೩, ಶೇ. ೧೬ ಮತ್ತು ಶೇ. ೧.೬ ರಷ್ಟು ವೇಗವಾಗಿ ಕಡಿಮೆಯಾಗುತ್ತಿರುವುದು ಕಂಡು ಬಂದಿತು ಮತ್ತು ಆಯುರ್ವೇದ ಚಿಕಿತ್ಸೆ ಪಡೆಯದ ಗುಂಪಿನಲ್ಲಿ ಈ ೩ ದಿನಗಳ ಕಾಲಾವಧಿಯಲ್ಲಿ ಈ ಲಕ್ಷಣಗಳು ಶೇ. ೪೬, ಶೇ. ೩೮ ಮತ್ತು ಶೇ. ೨೮ ಕಂಡು ಬಂದಿತು. ಇದರರ್ಥ ಆಧುನಿಕ ಚಿಕಿತ್ಸೆಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಿದಾಗ ಗಮನಾರ್ಹ ವ್ಯತ್ಯಾಸಗಳು ಕಂಡು ಬಂದವು. (ಆಧಾರ : ಪಂಕಜ ವಾಂಜರಖೇಡಕರ ಮತ್ತು ಇತರರು, ‘ಜರ್ನಲ್ ಆಫ್ ಆಯುರ್ವೇದ ಎಂಡ್ ಇಂಟಿಗ್ರೇಟಿವ್ ಮೆಡಿಸಿನ್, ೧೯ ಅಕ್ಟೋಬರ ೨೦೨೦)
ಇ. ಲಕ್ಷ್ಮಣಪುರಿಯಲ್ಲಿ ಮಾಡಲಾದ ಚಿಕಿತ್ಸೆಯಲ್ಲಿ ವಿಷಾಣುಗಳು ಹೆಚ್ಚಾಗುವ ವೇಗವು ಕಡಿಮೆಯಾಗುವುದು ಕಂಡು ಬರುವುದು: ಲಕ್ಷ್ಮಣಪುರಿಯಲ್ಲಿ (ಲಖನೌ) ಮಾಡಲಾದ ಮತ್ತೊಂದು ‘ಕ್ಲಿನಿಕಲ್ ಟ್ರಾಯಲ್ ನಲ್ಲಿ ೧೨೦ ಸೋಂಕಿತ ರೋಗಿಗಳು ಭಾಗವಹಿಸಿದ್ದರು. ಅವರನ್ನು ೩ ವಿಭಾಗಗಳಲ್ಲಿ ವಿಂಗಡಿಸಲಾಯಿತು. ಮೂರೂ ಗುಂಪುಗಳು ಚಿಕಿತ್ಸೆ ಪಡೆದ ೫ನೇಯ, ೭ನೇಯ ಮತ್ತು ೧೦ ನೇಯ ದಿನದಂದು ‘ಆರ್.ಟಿ.ಪಿ.ಸಿ.ಆರ್ ತಪಾಸಣೆಯನ್ನು ಮಾಡಲಾಯಿತು. ಇದರಲ್ಲಿ ಆಯುರ್ವೇದ ಚಿಕಿತ್ಸೆಯನ್ನು ನೀಡಿದ ಗುಂಪಿನವರು ಇತರರ ತುಲನೆಯಲ್ಲಿ ಶೀಘ್ರವಾಗಿ ಸೋಂಕಿನಿಂದ ಗುಣ ಮುಖರಾಗಿರುವ ಪ್ರಮಾಣ ಅಧಿಕ ಇರುವುದು ಕಂಡುಬಂದಿತು. ಹಾಗೆಯೇ ಅವರಲ್ಲಿ ಗಣನೀಯ ಸುಧಾರಣೆಯೊಂದಿಗೆ ವಿಷಾಣು ಹೆಚ್ಚಾಗುವ ವೇಗವೂ ಕಡಿಮೆಯಾಗಿರುವುದು ಕಂಡು ಬಂದಿತು.
(ಆದಿಲ್ ರಯೀಸ್ ಮತ್ತು ಇತರರು, ‘ಜರ್ನಲ್ ಆಫ್ ಆಯುರ್ವೇದ ಎಂಡ್ ಇಂಟಿಗ್ರೇಟಿವ್ ಮೆಡಿಸಿನ್, ೨ ಫೆಬ್ರುವರಿ ೨೦೨೧)
ಪಾಶ್ಚಿಮಾತ್ಯ ಔಷಧಿಗಳೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ಪಡೆಯುವುದರಿಂದ ಗಮನಾರ್ಹ ಲಾಭವಾಗುವುದು
ಮೇಲಿನ ೩ ‘ಕ್ಲಿನಿಕಲ್ ಟ್ರಾಯಲ್ಗಳೊಂದಿಗೆ ಸುಮಾರು ೬ ವಿವಿಧ ‘ಕ್ಲಿನಿಕಲ್ ಸ್ಟಡೀಸ್ಗಳು ಇಲ್ಲಿಯವರೆಗೆ ಪ್ರಕಟಗೊಂಡಿವೆ, ಆದರೆ ವಿವಿಧ ಪ್ರಕಾರದ ಷಡ್ಯಂತ್ರಗಳನ್ನು ನಡೆಸಿ ‘ಆಯುರ್ವೇದದ ಕಾರ್ಯ ಜಗತ್ತಿನ ಎದುರಿಗೆ ಬರಲೇ ಬಾರದು, ಎಂದು ಒಂದು ವಿಶಿಷ್ಟ ಲಾಬಿಯ ಆಗ್ರಹ ಇರುವುದರಿಂದ, ನಮ್ಮಂತಹ ಎಷ್ಟೋ ವೈದ್ಯರ ‘ಕೇಸ ರಿಪೋರ್ಟ (ಚಿಕಿತ್ಸೆಯ ವರದಿ) ಗಳನ್ನು ಕಾನೂನಿನ ಕಾರಣಗಳನ್ನು ಒಡ್ಡಿ, ಅವುಗಳನ್ನು ನಿರಾಕರಿಸುವ ಘಟನೆಗಗಳೂ ದೊಡ್ಡ ಪ್ರಮಾಣದಲ್ಲಿ ನಡೆದಿವೆ. ಆಸೇತುಹಿಮಾಚಲ ಶುದ್ಧ ಆಯುರ್ವೇದ ಚಿಕಿತ್ಸಕರು ಸರಿಸುಮಾರು ಎಲ್ಲ ಅವಸ್ಥೆಗಳಲ್ಲಿ ಕೋವಿಡ ರೋಗಿಗಳಿಗೆ ಔಷಧೋಪಚಾರಗಳನ್ನು ನೀಡುತ್ತಿದ್ದಾರೆ. ಗಣನೀಯ ಸಂಖ್ಯೆಯಲ್ಲಿ ಕೇವಲ ಆಯುರ್ವೇದ ಉಪಚಾರದಿಂದ ಅಥವಾ ಆಸ್ಪತ್ರೆಯಲ್ಲಿ ಭರ್ತಿಯಾಗಿರುವ ಮತ್ತು ಕೃತಕ ಆಕ್ಸಿಜನ್‌ನ ಆವಶ್ಯಕತೆಯಿರುವ ರೋಗಿಗಳಿಗೆ ಆಲೋಪತಿ ಉಪಚಾರದೊಂದಿಗೆ ಆಯುರ್ವೇದ ಉಪಚಾರವನ್ನು ನೀಡಿದ್ದರಿಂದ ಸಹಾಯವಾಗಿರುವ ಅಸಂಖ್ಯಾತ ಉದಾಹರಣೆಗಳಿವೆ. ಇಂತಹ ಉದಾಹರಣೆಗಳನ್ನು ‘ಪ್ರಾಕ್ಟೀಸ್ ಬೇಸ್ಡ್ ಎವಿಡೆನ್ಸ್ ಎಂದು ಹೇಳಲಾಗುತ್ತದೆ.
ಸಮರ ಕಾಲದಲ್ಲಿ ಯಾವುದೇ ಚಿಕಿತ್ಸಾ ಶಾಸ್ತ್ರವನ್ನು ತಿರಸ್ಕರಿಸದೇ ಅವುಗಳ ಸಹಾಯ ಪಡೆಯುವುದು ಆವಶ್ಯಕ !
ವಿಶ್ವವೇ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವಾಗ ಸಮರದಂತಹ ಕಾಲದಲ್ಲಿ ಇಂತಹ ಪರೀಕ್ಷಣೆಗಳಿಗೂ ಅಮೂಲ್ಯ ಮಹತ್ವವಿರುತ್ತದೆ. ‘ಆಯುರ್ವೇದದಲ್ಲಿ ಸಂಶೋಧನೆಯಾಗುವುದಿಲ್ಲ, ಎಂದು ನಿರಂತರವಾಗಿ ಹೇಳುತ್ತ ಸಮಾಜದ ದಾರಿ ತಪ್ಪಿಸುವ ಜನರು ಇಂತಹ ಸಂಶೋಧನೆಗಳ ವಿಷಯದಲ್ಲಿ ಚಕಾರವನ್ನೂ ಎತ್ತದೇ ಇರುವುದು ನಮಗೆ ಕಂಡು ಬರುತ್ತಿದೆ. ಇನ್ನೊಂದೆಡೆ ಈಗಿನ ಅಲೋಪಥಿ ವೈದ್ಯರಲ್ಲಿಯೂ ಈ ರೋಗಕ್ಕೆ ಯಾವುದೇ ನಿಖರ ಉಪಾಯವಿಲ್ಲ. ಹೀಗಿರುವಾಗ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಒಂದು ಚಿಕಿತ್ಸಾ ಶಾಸ್ತ್ರವು ಸಹಾಯ ಹಸ್ತ ನೀಡುತ್ತಿದ್ದಲ್ಲಿ, ಅದರಿಂದ ಸಹಾಯವನ್ನು ಪಡೆಯುವುದು ಮಾನವೀಯತೆಯ ದೃಷ್ಟಿಯಿಂದ ಸರ್ವಾರ್ಥದಿಂದ ಮಹತ್ವದ್ದಾಗಿರುತ್ತದೆ. ಆದರೆ ರೋಗಿಗಳ ಆರೋಗ್ಯಕ್ಕಿಂತ ತಮ್ಮ ಉತ್ಪನ್ನಗಳ ಮಾರಾಟದ ಮೇಲೆ ಅಧಿಕ ಗಮನವಿರುವ ಇಂತಹವರು ಉದ್ದೇಶಪೂರ್ವಕವಾಗಿ ಈ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಜನರು ಜಾಗರೂಕತೆಯಿಂದ ತಾವಾಗಿ ತಮ್ಮ ಪರ್ಯಾಯವನ್ನು ಆಯ್ಕೆ ಮಾಡುವುದು ಮಹತ್ವದ್ದಾಗಿದೆ. ಇಲ್ಲಿ ಯಾವುದೇ ಚಿಕಿತ್ಸಾಶಾಸ್ತ್ರದ ದುರಾಗ್ರಹವು ಉಪಯೋಗವಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ಸ್ವತಂತ್ರವಾಗಿ ಮತ್ತು ಎಲ್ಲಿ ಆವಶ್ಯಕತೆಯಿದೆಯೋ ಅಲ್ಲಿ ಇತರ ಚಿಕಿತ್ಸಾಶಾಸ್ತ್ರದ ಸಹಾಯದಿಂದ ಮಾನವಹಿತವನ್ನು ಸಾಧಿಸುವ ಅಂತಿಮ ಧ್ಯೇಯವನ್ನು ಇಟ್ಟುಕೊಂಡು ನಡೆಯುವುದು ಆವಶ್ಯಕವಾಗಿದೆ. ಈ ಲೇಖನದ ನಿಮಿತ್ತದಿಂದ ವಿಚಾರವಂತ ವಾಚಕರಿಗೆ, ಕೋವಿಡ್ ಇರಲಿ ಅಥವಾ ಇತರ ಯಾವುದೇ ರೋಗವಿರಲಿ ನಮ್ಮೆದುರಿಗೆ ಉಪಚಾರಗಳ ಎಲ್ಲ ರೀತಿಯ ಪರ್ಯಾಯಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಬೇಕೆಂದು ಅನಿಸುತ್ತದೆ. ಕಳೆದ ಇಡೀ ವರ್ಷದ ಪ್ರತ್ಯಕ್ಷ ಚಿಕಿತ್ಸೆಯ ಅನುಭವದ ಬಳಿಕ ಖಂಡಿತವಾಗಿ ‘ಕೋವಿಡ್ ರೋಗಿಗಳಿಗೆ ಸ್ವತಂತ್ರವಾಗಿ ಅಥವಾ ಈಗಿನ ಅಲೋಪಥಿಯ ಚಿಕಿತ್ಸೆಯೊಂದಿಗೆ ಎಷ್ಟು ಬೇಗನೆ ಆಯುರ್ವೇದ ಚಿಕಿತ್ಸೆಯನ್ನು ಪ್ರಾರಂಭಿಸುತ್ತೇವೆಯೋ, ಅಷ್ಟು ಅವರಿಗೆ ಅಧಿಕ ಒಳ್ಳೆಯ ಮತ್ತು ದೀರ್ಘಾವಧಿ ಲಾಭವಾಗುವ ಸಾಧ್ಯತೆ ಹೆಚ್ಚುತ್ತದೆ. ನಾವು ಏನು ಅನುಭವಿಸುದೆವೋ ಅದನ್ನು ಹೇಳುತ್ತಿದ್ದೇವೆ. ಅಂತಿಮ ಆಯ್ಕೆ ನಿಮ್ಮದಾಗಿದೆ. – ವೈದ್ಯ ಪರೀಕ್ಷಿತ ಶೇವಡೆ.