ಯುಆರ್‌ಎಸ್ ಏಷ್ಯಾ ಒನ್ ಸಂಸ್ಥೆಯಿಂದ ಪ್ರಶಸ್ತಿ ಘೋಷಣೆ
ಮಂಗಳೂರು : ಪದ್ಮವಿಭೂಷಣ, ಕರ್ನಾಟಕ ರತ್ನ ಪುರಸ್ಕೃತರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಪ್ರತಿಷ್ಠಿತ ‘ಏಷ್ಯಾದ ಶ್ರೇಷ್ಠ ನಾಯಕ’ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಡಾ. ಹೆಗ್ಗಡೆಯವರ ಮುಂದಾಳತ್ವದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವು ‘ಏಷ್ಯಾದ ಹೆಮ್ಮೆ’ (ಪ್ರೈಡ್ ಆಫ್ ಏಷ್ಯಾ) ಪ್ರಶಸ್ತಿ ಲಭಿಸಿದೆ. ಇದು ೨೦೨೦-೨೧ನೆಯ ಸಾಲಿನ ಯುಆರ್‌ಎಸ್ ಏಷ್ಯಾ ಒನ್ ಸಂಸ್ಥೆ ನೀಡುವ ಪ್ರಶಸ್ತಿಗಳ ೬ ನೆಯ ಆವೃತ್ತಿಯಾಗಿದೆ.
ಸಮಾಜಮುಖಿ ಕಾರ್ಯ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ. ವಿರೇಂದ್ರ ಹೆಗ್ಗಡೆ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಲಕ್ಷಾಂತರ ಜನರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಅಲ್ಲದೇ ಸಾಮೂಹಿಕ ವಿವಾಹದಂತಹ ಕಲ್ಪನೆಯನ್ನು ಜ್ಯಾರಿಗೆ ತಂದು ಬಡಕುಟುಂಬಗಳಿಗೆ ಆಧಾರವೆನಿಸಿದ್ದಾರೆ, ಅಲ್ಲದೇ ಮದ್ಯ ವ್ಯಸನಿಗಳ ವ್ಯಸನವನ್ನು ದೂರ ಮಾಡಿ ಅದರಿಂದ ಕೌಟುಂಬಿಕ ನೆಮ್ಮದಿ ನೀಡಲು ಪ್ರಯತ್ನಿಸುವ ಕಾರ್ಯವೂ ಆಗುತ್ತಿದೆ. ಅಲ್ಲದೇ ಅನೇಕ ಶಾಲೆ, ಮಹಾವಿದ್ಯಾಲಯಗಳ ಮೂಲಕ ವಿದ್ಯಾದಾನದ ಮಾಡಿ ಭಾರತದಾದ್ಯಂತ ಎಲ್ಲ ಕ್ಷೇತ್ರಗಳಲ್ಲಿ ಒಳ್ಳೆಯ ತಜ್ಞರನ್ನು ನೀಡಿರುವುದು ಈ ಸಂಸ್ಥೆಯ ಮುಖ್ಯ ಕಾರ್ಯವಾಗಿದೆ.
ಧಾರ್ಮಿಕ ಕಾರ್ಯಗಳಿಗೂ ಸಹಕಾರ
ಲಕ್ಷದೀಪೋತ್ಸವದಿಂದ ಹಿಡಿದು ಅನೇಕ ದೇವಸ್ಥಾನಗಳ ಜೀರ್ಣೋದ್ಧಾರದಂತಹ ಕಾರ್ಯಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸನಾತನ ಸಂಸ್ಥೆಯಿಂದ ಅಭಿನಂದನೆ
ಸನಾತನ ಸಂಸ್ಥೆಯ ಧಾರ್ಮಿಕ ಕಾರ್ಯದಲ್ಲಿಯೂ ಡಾ. ಹೆಗ್ಗಡೆಯವರು ಸಹಕಾರ ನೀಡುತ್ತಿದ್ದಾರೆ. ಪ್ರಸಕ್ತ ಪ್ರಶಸ್ತಿ ಲಭಿಸಿದಕ್ಕಾಗಿ ಡಾ. ಹೆಗ್ಗಡೆಯವರಿಗೆ ಸನಾತನ ಸಂಸ್ಥೆಯ ವತಿಯಿಂದ ಶುಭಕೋರಲಾಗಿದ್ದು ತಮ್ಮ ಈ ಕಾರ್ಯನಿರತ ಮುನ್ನಡೆಯಲೆಂದು ಶ್ರೀಮಂಜುನಾಥನ ಚರಣಗಳಲ್ಲಿ ಪ್ರಾರ್ಥನೆ.