ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶಗಳಿಗೆ ಹೊಂದಿಕೊಂಡಿರುವ ಚೀನಾದ ಗಡಿಯಲ್ಲಿ ಭಾರತದ ಭದ್ರತೆ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಚೀನಾದ ತಾತ್ಕಾಲಿಕ ಹಿನ್ನಡೆ !

‘ಸದ್ಯ ಚೀನಾದ ಸೇನೆ ಲಡಾಖ್-ಭಾರತ ಗಡಿಯಿಂದ ಹಿಂದೆ ಸರಿಯುತ್ತಿದೆ. ಹೀಗೆ ಮೊದಲ ಬಾರಿ ಆಗುತ್ತಿದೆ. ಆದ್ದರಿಂದ ಇದು ಭಾರತದ ದೊಡ್ಡ ಯಶಸ್ಸೆಂದೇ ಹೇಳಬಹುದು. ಇದರ ಅರ್ಥ ಅದು ಪುನಃ ಭಾರತಕ್ಕೆ ತೊಂದರೆಗಳನ್ನು ನೀಡಲಾರದು ಎಂದು ಹೇಳಲು ಆಗುವುದಿಲ್ಲ. ಸದ್ಯ ಚೀನಾ ತನ್ನ ಸೈನ್ಯವನ್ನು ಆಧುನೀಕರಣಗೊಳಿಸುತ್ತಿದೆ. ಗಡಿಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ ಹಾಗೂ ಹೆಚ್ಚೆಚ್ಚು ಪ್ರಮಾಣದಲ್ಲಿ ಸೈನ್ಯವನ್ನು ಒಟ್ಟುಗೂಡಿಸುತ್ತಿದೆ. ಆದ್ದರಿಂದ ಚೀನಾದ ಈ ಹಿನ್ನಡೆ ತಾತ್ಕಾಲಿಕವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ. ಭವಿಷ್ಯದಲ್ಲಿ ಭಾರತಕ್ಕೆ ತೊಂದರೆ ಕೊಡಲು ಅದು ಖಂಡಿತವಾಗಿಯೂ ಹಿಂದಿರುಗಿ ಬರುವುದು. ಭಾರತವು ಚೀನಾದ ಮೊದಲ ಕ್ರಮಾಂಕದ ಶತ್ರುವಾಗಿದೆ. ಆದ್ದರಿಂದ ಅದಕ್ಕೆ ಭಾರತದ ಆರ್ಥಿಕ ಪ್ರಗತಿ ಯಾಗುವುದು ಇಷ್ಟವಿಲ್ಲ. ಸದ್ಯ ಭಾರತ-ಚೀನಾ ಗಡಿ ಶಾಂತವಾಗಿದೆ. ಇದರ ಲಾಭ ಪಡೆದು ಭಾರತವು ಗಡಿಯಲ್ಲಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚು ಬಲಿಷ್ಠ ಮಾಡಬೇಕು. ಇಂದು ಭಾರತೀಯ ಸೈನ್ಯವು ಅದನ್ನೇ ಮಾಡುತ್ತಿದೆ. ಚೀನಾದ ಗಡಿಯು ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡು ಇದೆ. ಈ ಪ್ರದೇಶದಲ್ಲಿ ಚೀನಾವು ಭಾರತಕ್ಕೆ ತೊಂದರೆಗಳನ್ನು ಕೊಡಬಹುದು, ಎನ್ನುವ ವಾರ್ತೆಗಳು ಕೇಳಿಬರುತ್ತಿವೆ. ಸಿಕ್ಕಿಮ್, ಭೂತಾನ ಮತ್ತು ಚೀನಾ ಇವುಗಳ ‘ಟ್ರಾಯ್ ಜಂಕ್ಶನ್ ನಲ್ಲಿಯೂ ಚೀನಾ ನುಸುಳಿತ್ತು. ಆದ್ದರಿಂದ ಭಾರತವು ಈ ಗಡಿಯಲ್ಲಿ ಹೆಚ್ಚು ಗಮನವಿಡುತ್ತಿದೆ.

೨. ಈಶಾನ್ಯ ಭಾರತದಲ್ಲಿ ಬಂಡಾಯ ಕಡಿಮೆಯಾಗಿರುವುದರಿಂದ ಅಲ್ಲಿನ ಸೈನ್ಯವನ್ನು ಭಾರತ-ಚೀನಾ ಗಡಿಗೆ ಸ್ಥಳಾಂತರಿಸಬಹುದು !

ಈಶಾನ್ಯ ಭಾರತದಲ್ಲಿ ಆಂತರಿಕ ಹಾಗೂ ಬಾಹ್ಯ ಸುರಕ್ಷೆಯ ದೃಷ್ಟಿಯಿಂದ ೩ ಅಥವಾ ೪ ದೊಡ್ಡ ಸಮಸ್ಯೆಗಳಿವೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ನುಸುಳುಕೋರರು ನುಗ್ಗುತ್ತಿರುತ್ತಾರೆ. ಭಾರತದ ಸೈನ್ಯವು ಹೆಚ್ಚು ಕಡಿಮೆ ಈ ಬಂಡುಕೋರರ ಸೊಂಟವನ್ನು ಮುರಿದಿದೆ. ಈಶಾನ್ಯ ಭಾರತದಲ್ಲಿ ಈಗ ನುಸುಳುಕೋರರ ಪ್ರಮಾಣ ತಗ್ಗಿದ್ದರೂ ಬಂಗಾಲ ರಾಜ್ಯದಲ್ಲಿ ಇನ್ನೂ ಮುಂದುವರಿದಿದೆ. ಬಂಡಾಯದ ಪ್ರಮಾಣವು ಕಡಿಮೆಯಾಗಿದೆ. ಆದ್ದರಿಂದ ಅಲ್ಲಿರುವ ಭಾರತೀಯ ಸೈನ್ಯದ ೨ ‘ಡಿವಿಜನ್ಗಳನ್ನು ಭಾರತ-ಚೀನಾ ಗಡಿಗೆ ತರಲಾಗುತ್ತಿದೆ. ಆ ಭಾಗದಲ್ಲಿ ಈಗ ‘ಆಸಾಮ್ ರೈಫಲ್ ಈ ಅರೆಸೇನಾ ಪಡೆ ಇದೆ. ಅದರಲ್ಲಿ ೨೦ ಬಟಾಲಿಯನ್‌ಗಳನ್ನು ಭಾರತ-ಮ್ಯಾನ್ಮಾರ ಗಡಿಯಲ್ಲಿ ಉಪಯೋಗಿಸಲಾಗತ್ತಿದ್ದು ಉಳಿದುದನ್ನು ಈಶಾನ್ಯ ಭಾರತದ ಬಂಡುಕೋರರ ವಿರುದ್ಧ ಉಪಯೋಗಿಸಲಾಗುತ್ತಿದೆ.

೩. ಭಾರತ-ಮ್ಯಾನ್ಮಾರ ಗಡಿಭದ್ರತೆಯು ಅತ್ಯಂತ ಮಹತ್ವದ್ದಾಗಿದೆ !

ಭಾರತ-ಮ್ಯಾನ್ಮಾರ ಗಡಿಯಲ್ಲಿ ಭದ್ರತೆಯು ಅತ್ಯಂತ ಮಹತ್ವದ್ದಾಗಿದೆ ಈ ಗಡಿಯು ಇತರ ಗಡಿಗಳಿಗಿಂತ ಭಿನ್ನವಾಗಿದೆ. ಇಲ್ಲಿ ಬೇಲಿಯನ್ನು ಹಾಕಲು ಸಾಧ್ಯವಿಲ್ಲ. ಹಳೆಯ ಕಾನೂನುಗಳ ಪ್ರಕಾರ ಈ ಗಡಿಯಲ್ಲಿರುವ ನಾಗರಿಕರು ಅವರ ಸಂಬಂಧಿಕರನ್ನು ಭೇಟಿಯಾಗಲು ಮ್ಯಾನ್ಮಾರಗೆ ಹೋಗಬಹುದು ಮತ್ತು ಅಲ್ಲಿಯ ಜನರು ಭಾರತಕ್ಕೆ ಬರಬಹುದು. ಈ ಹಳೆಯ ಪರಂಪರೆಯು ಇನ್ನೂ ಮುಂದುವರಿದಿದೆ. ಈ ಪರಂಪರೆಯು ತಪ್ಪಲ್ಲ; ಆದರೆ ಅದರಿಂದ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ನಡೆಯುತ್ತದೆ. ಕಳೆದ ವರ್ಷ ‘ಆಸಾಮ್ ರೈಫಲ್ ಈ ಪ್ರದೇಶದಿಂದಲೇ ೯೦೦ ಕೋಟಿ ರೂಪಾಯಿಗಳ ಅಮಲು ಪದಾರ್ಥಗಳನ್ನು ವಶಪಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಗಡಿಯನ್ನು ರಕ್ಷಿಸುವುದು ಮಹತ್ವದ್ದಾಗಿದೆ.

‘ಇಲ್ಲಿ ಇನ್ನೂ ೧೦ ಬಟಾಲಿಯನ್‌ಗಳನ್ನು ಹೆಚ್ಚಿಸಲಾಗುವುದು, ಎಂದು ಜನರಲ್ ನರವಣೆಯವರು ಹೇಳಿದ್ದಾರೆ. ದಕ್ಷಿಣ ಏಶಿಯಾದ ಜನರು ಬರಲು-ಹೋಗಲು ಈ ಪ್ರದೇಶವನ್ನು ಉಪಯೋಗಿಸುತ್ತಾರೆ. ಈಶಾನ್ಯ ಪ್ರದೇಶದಲ್ಲಿ ಬಂಡಾಯವು ಕಡಿಮೆಯಾಗಿದೆ. ಆದ್ದರಿಂದ ಅವರ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದ ಸ್ವಲ್ಪ ಸೈನ್ಯವನ್ನು ಭಾರತ-ಚೀನಾದ ಗಡಿಗೆ ಕಳುಹಿಸಲಾಗುತ್ತಿದೆ. ಆದರೂ ಈ ಪ್ರದೇಶದಲ್ಲಿ ಪುನಃ ಬಂಡಾಯವೆದ್ದರೆ ಅಲ್ಲಿ ಸಿ.ಎ.ಪಿ.ಎಫ್. (ಕೇಂದ್ರೀಯ ಸಶಸ್ತ್ರ ಪೊಲೀಸ್ ದಳ), ಸಿ.ಆರ್.ಪಿ.ಎಫ್ (ಕೇಂದ್ರೀಯ ಮೀಸಲು ಪೊಲೀಸ್ ದಳ) ಮತ್ತು ‘ಇಂಡಿಯಾ ರಿಝರ್ವ್ ಬಟಾಲಿಯನ್ನ ಸೈನಿಕರನ್ನು ನೇಮಿಸಲಾಗುತ್ತಿದೆ. ಅಗತ್ಯಬಿದ್ದರೆ, ಬಂಡುಕೋರರ ವಿರುದ್ಧ ಅಲ್ಲಿ ಪುನಃ ಸೈನ್ಯವನ್ನು ನೇಮಿಸಬಹುದು.

೪. ಈಶಾನ್ಯ ಭಾರತದಲ್ಲಿ ಸಂಚಾರಸಾರಿಗೆ ಸೌಲಭ್ಯವು ಗಡಿರಕ್ಷಣೆಗಾಗಿ ಲಾಭದಾಯಕವಾಗಿದೆ !

ಈಶಾನ್ಯ ಪ್ರದೇಶದಲ್ಲಿ ಸಂಚಾರಸಾರಿಗೆಯ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಅರುಣಾಚಲ ಪ್ರದೇಶವು ನದಿಗಳ ವಿವಿಧ ಕಣಿವೆಗಳಲ್ಲಿ ವಿಭಜಿಸಲ್ಪಟ್ಟಿದೆ. ಈ ಕಣಿವೆಗಳನ್ನು ರಸ್ತೆಗಳಿಂದ ಜೋಡಿಸಲಾಗುವುದು. ಅದರಿಂದ ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಹೋಗಲು ಸಾಧ್ಯವಾಗುವುದು ಹಾಗೂ ಅಲ್ಲಿ ಸೈನಿಕರಿಗೂ ಕಾರ್ಯವನ್ನು ಮಾಡಲು ಸುಲಭವಾಗುವುದು. ಇದರಿಂದ ಈಶಾನ್ಯ ಭಾರತದ ಭದ್ರತೆಯು ಇನ್ನೂ ಬಲಿಷ್ಠವಾಗಲಿದೆ.

– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ