ಭಾರತದೊಂದಿಗೆ ಚೀನಾದ ಸೈಬರ್ ಯುದ್ಧ : ಒಂದು ಸವಾಲು !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಮಾಹಿತಿ ಮತ್ತು ಮೂಲಭೂತ ಸೌಕರ್ಯಗಳ ‘ನೆಟ್‌ವರ್ಕ್’ನ ರಕ್ಷಣೆ ಮಾಡುವುದು ಭಾರತದ ಮುಂದಿರುವ ಸವಾಲು!

ಭಾರತವನ್ನು ಸೈನ್ಯದೊಂದಿಗೆ ಹೋರಾಡಿ ಯುದ್ಧದಲ್ಲಿ ಸೋಲಿಸುವುದು ಸುಲಭವಲ್ಲ, ಎಂದು ಚೀನಾದ ಗಮನಕ್ಕೆ ಬಂದಿತು. ಆದುದರಿಂದ ಅದು ಭಾರತದ ಮಹತ್ವಪೂರ್ಣ ಮಾಹಿತಿ ಮತ್ತು ಮೂಲಭೂತ ಸೌಕರ್ಯದ ಕ್ಷೇತ್ರಗಳ ಮೇಲೆ ಸೈಬರ್ ದಾಳಿ ನಡೆಸಿ ಅವುಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತದೆ. ಈ ಆಕ್ರಮಣಗಳನ್ನು ಹೇಗೆ ತಡೆಗಟ್ಟುವುದು ಮತ್ತು ದೇಶದ ಮಾಹಿತಿಯನ್ನು ಹೇಗೆ ರಕ್ಷಿಸುವುದು ?,

ಇದು ಭಾರತದೆದುರು ದೊಡ್ಡ ಸವಾಲೇ ಆಗಿದೆ. ಅಮೇರಿಕಾದ ಒಂದು ದಿನಪತ್ರಿಕೆಯಲ್ಲಿ, ‘ಚೀನಾ ಮುಂಬಯಿಯ ಇಂಧನ ಕ್ಷೇತ್ರದ ಮೇಲೆ ಆಕ್ರಮಣ ಮಾಡಿತ್ತು’, ಎಂದು ಇತ್ತೀಚೆಗಷ್ಟೇ ಒಂದು ಸುದ್ದಿಯು ಪ್ರಕಟವಾಯಿತು. ಆದುದರಿಂದ ಅಲ್ಲಿನ ವಿದ್ಯುತ್ ಪೂರೈಕೆ ೧೨ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಈ ವಾರ್ತೆಯ ನಂತರ ಬಂದ ಹೇಳಿಕೆಗಳು ಆಶ್ಚರ್ಯಕರವಾಗಿದ್ದವು. ಭಾರತದ ಇಂಧನಮಂತ್ರಿ ಆರ.ಕೆ. ಸಿಂಹ ಇವರು, ‘ದಾಳಿಯಾಗಿತ್ತು; ಆದರೆ ಅದನ್ನು ಯಾರು ಮಾಡಿದರು ಎಂದು ನಮಗೆ ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ’, ಎಂದು ಹೇಳಿದರು. ಈ ಘಟನೆಯು ಚೀನಾದೊಂದಿಗೆ ನೇರ ಸಂಬಂಧವಿರುವ ಬಗ್ಗೆ ಸಿದ್ಧ ಮಾಡಲು ಆಗಲಿಲ್ಲ. ರಾಜ್ಯದ ಇಂಧನಮಂತ್ರಿಗಳೂ ಬೇರೆ ಏನೂ ಮಾತನಾಡಲಿಲ್ಲ. ಅವರು, ಯಾವುದೋ ಅಪಾಯವು ನಿರ್ಮಾಣವಾಗಿತ್ತು; ಆದರೆ ಅದನ್ನು ನಾವು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆವು’, ಎಂದು ಹೇಳಿದರು. ಇಂತಹ ಸೌಮ್ಯ ಪ್ರತಿಕ್ರಿಯೆಯನ್ನು ಕೇಂದ್ರ ಮತ್ತು ರಾಜ್ಯ ಸ್ತರಗಳಲ್ಲಿ ನೀಡಲಾಯಿತು.

೨. ಸೈಬರ್ ಅಪರಾಧದಲ್ಲಿ ಪಾಲ್ಗೊಳ್ಳುವಿಕೆಯನ್ನು ಸಿದ್ಧ ಮಾಡುವುದು ಕಠಿಣವಿರುವುದರಿಂದ ಚೀನಾವನ್ನು ಬಹಿರಂಗವಾಗಿ ಆರೋಪಿಸುವುದು ಅಸಾಧ್ಯ !

ಚೀನಾವು ಭಾರತದ ಮೇಲೆ ದಾಳಿ ಮಾಡಿತು, ಎಂದು ಎಲ್ಲರಿಗೂ ಗೊತ್ತಿದೆ; ಆದರೆ ನಾವು ಅದನ್ನು ಬಹಿರಂಗವಾಗಿ ಹೇಳಲು ಸಿದ್ಧರಿಲ್ಲ. ಅಂದರೆ ಆರೋಪಿಸುವುದು ಸುಲಭವಾಗಿರುತ್ತದೆ; ಆದರೆ ಅದನ್ನು ಸಿದ್ಧ ಮಾಡುವುದು ಕಠಿಣವಾಗಿರುತ್ತದೆ. ಚೀನಾ ಈ ಎಲ್ಲ ವಿಷಯವನ್ನು ‘ಔಟಸೋರ್ಸ್’ ಮಾಡಿದೆ. ಅವರ ‘ಹ್ಯಾಕರ್ಸ್’ ವಿವಿಧ ಸ್ಥಳಗಳಲ್ಲಿ ಅಥವಾ ವಿವಿಧ ದೇಶಗಳಲ್ಲಿ ಇರುತ್ತಾರೆ. ಆದುದರಿಂದ ಯಾರಾದರೊಬ್ಬ ‘ಹ್ಯಾಕರ್’ನನ್ನು ನಾವು ಹಿಡಿದರೂ, ಅವನ ಸಂಬಂಧವನ್ನು ಚೀನಾದೊಂದಿಗೆ ಜೋಡಿಸುವುದು ಸುಲಭವಾಗಿರುವುದಿಲ್ಲ. ಮೂರನೇಯ ವ್ಯಕ್ತಿಯಿಂದ ಇಂತಹ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಆದುದರಿಂದ ಅದರಲ್ಲಿ ಮುಖ್ಯ ವ್ಯಕ್ತಿಯನ್ನು ಶೋಧಿಸಲು ಅನೇಕ ವರ್ಷಗಳು ಬೇಕಾಗುತ್ತವೆ. ೧೯೯೩ರಲ್ಲಿ ಮುಂಬಯಿಯಲ್ಲಿ ನಡೆದ ಬಾಂಬ್‌ಸ್ಫೋಟ್‌ನ ಖಟ್ಲೆಗಳು ಇಂದಿಗೂ ಮುಗಿದಿಲ್ಲ. ನಿಜವಾದ ರೂವಾರಿಯನ್ನು ಹುಡುಕುವುದು ಅತ್ಯಂತ ಕಠಿಣವಾಗಿರುತ್ತದೆ, ಇದು ಚೀನಾಗೆ ಚೆನ್ನಾಗಿ ಗೊತ್ತಿದೆ. ಆದುದರಿಂದ ಚೀನಾ ಇತರ ದೇಶಗಳ ವಿರುದ್ಧ ಇಂತಹ ವಿಧದ ಸೈಬರ್ ದಾಳಿಗಳನ್ನು ಮಾಡುತ್ತಿದೆ. ಹೀಗಿದ್ದರೂ ಚೀನಾ ಕೂಡ ಇದರಿಂದ ಹೊರತಾಗಿಲ್ಲ. ಚೀನಾದ ಮೇಲೆಯೂ ಸೈಬರ್ ದಾಳಿಗಳು ಆಗುತ್ತಲೇ ಇರುತ್ತವೆ.

೩. ಭಾರತದ ಸೈಬರ್ ಭದ್ರತಾ ವ್ಯವಸ್ಥೆಯು ಜಾಗರೂಕವಾಗಿರುವುದರಿಂದ ಚೀನಾದ ದಾಳಿಗಳಿಂದ ದೇಶದ ನೆಟ್‌ವರ್ಕ್‌ನ ರಕ್ಷಣೆಯಾಗುವುದು

ಭಾರತದ ವಿಚಾರ ಮಾಡಿದರೆ, ಶೇ. ೯೦ ರಷ್ಟು ದಾಳಿಗಳು ಚೀನಾದಿಂದ ಮತ್ತು ಶೇ. ೫ ರಿಂದ ೬ ರಷ್ಟು ದಾಳಿಗಳು ಪಾಕಿಸ್ತಾನದಿಂದ ಆಗುತ್ತವೆ ಮತ್ತು ಉಳಿದ ಶೇ. ೨-೪ ರಷ್ಟು ದಾಳಿಗಳು ಇತರರಿಂದ ಆಗುತ್ತವೆ. ಅಂದರೆ ಇತರ ದೇಶಗಳಿಂದ ಆಗುವ ದಾಳಿಗಳು ಕಳ್ಳತನದ ಉದ್ದೇಶದಿಂದ ಆಗುತ್ತಿರುತ್ತವೆ ಮತ್ತು ಅವರಿಗೆ ಏನಾದರೂ ಬೌದ್ಧಿಕ ಸಂಪತ್ತನ್ನು ಕಳ್ಳತನ ಮಾಡುವುದಿರುತ್ತದೆ. ಭಾರತೀಯ ‘ಸಿ.ಈ.ಆರ್.ಟಿ.’ (ಸೈಬರ್ ಎಮರ್ಜನ್ಸಿ ರಿಸ್ಪಾನ್ಸ್ ಟೀಮ್) ಈ ಸಂಸ್ಥೆಯು ಚೀನಾದ ಹೆಚ್ಚಿನ ಸೈಬರ್ ದಾಳಿಗಳಿಂದ ಭಾರತದ ನೆಟ್‌ವರ್ಕ್‌ನ ರಕ್ಷಣೆಯನ್ನು ಮಾಡಿದೆ. ಇನ್ನೊಂದು ‘ನ್ಯಾಶನಲ್ ಕ್ರಿಟಿಕಲ್ ಇನ್ಫ್ರಾಸ್ಟ್ರಕ್ಚರ್ ಪ್ರೊಟೆಕ್ಶನ್ ಕಮಿಟಿ’ ಈ ಸಂಸ್ಥೆಯೂ ಅತ್ಯಂತ ಉತ್ತಮ ಕೆಲಸ ಮಾಡುತ್ತಿದೆ. ಆದುದರಿಂದ ದೇಶದ ಯಾವುದೇ ವ್ಯವಸ್ಥೆಯನ್ನು ಹೆಚ್ಚು ಕಾಲ ನಿಲ್ಲಿಸಲು ಚೀನಾಗೆ ಯಶಸ್ಸು ಸಿಕ್ಕಿಲ್ಲ.

೪. ಇಂಧನ ಕ್ಷೇತ್ರದಲ್ಲಿರುವ ಚೀನಾ ಉಪಕರಣಗಳ ಮಾಧ್ಯಮದಿಂದ ಭಾರತದ ಇಂಧನ ಕ್ಷೇತ್ರಕ್ಕೆ ಅಪಾಯವನ್ನು ತಂದೊಡ್ಡಲು ಚೀನಾದ ಪ್ರಯತ್ನ

ಹಿಂದೆ ಇಂಧನದ ನಿರ್ಮಿತಿಯಲ್ಲಿ ಭಾರತದ ‘ಬಿ.ಎಚ್.ಈ.ಎಲ್.’ (ಭಾರತ ಹೆವಿ ಇಲೆಕ್ಟ್ರಿಕಲ್ ಲಿ.) ಹೆಸರಿನ ಕಂಪನಿ ಇತ್ತು. ಅದರಿಂದ ದೇಶಕ್ಕಾಗಿ ಬೇಕಾಗುವ ಯಂತ್ರ ಅಥವಾ ಜನರೇಟರ್‌ಗಳು ದೊರಕುತ್ತಿದ್ದವು. ಚೀನಾ ಕ್ರಮಬದ್ಧವಾಗಿ ಈ ಕಂಪನಿಯನ್ನು ಕೊನೆಗಾಣಿಸಿತು. ಅನಂತರ ಭಾರತದ ಇಂಧನ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಚೀನಾ ಉಪಕರಣಗಳ ಬಳಕೆಯು ಪ್ರಾರಂಭವಾಯಿತು. ಭಾರತವು ಕಳೆದ ೪ ರಿಂದ ೫ ವರ್ಷಗಳಿಂದ ಚೀನಾ ಉಪಕರಣಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ; ಆದರೆ ಅವರ ಆಯುಷ್ಯವು ಇನ್ನೂ ಕೆಲವು ವರ್ಷಗಳು ಇರಲಿದೆ. ಆದುದರಿಂದ ಅದು ಇನ್ನೂ ಕಾರ್ಯನಿರತವಾಗಿದೆ. ಆ ಉಪಕರಣಗಳಲ್ಲಿ ಚೀನಾದ ‘ಟ್ರೋಜನ್ ಹಾರ್ಸೆಸ್’ (ವಿಷಾಣು) ಇವೆ. ಅವುಗಳ ಮಾಧ್ಯಮದಿಂದ ಚೀನಾ ಯಾವುದೇ ಕ್ಷಣದಲ್ಲಿ ಈ ಯಾಂತ್ರಿಕ ವ್ಯವಸ್ಥೆಯನ್ನು ನಿಲ್ಲಿಸಬಹುದು. ಹಿಂದೆ ಚೀನಾದ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಭಾರತಕ್ಕೆ ‘ನೀವು ಒಂದು ವೇಳೆ ನಾವು ಹೇಳುವುದನ್ನು ಕೇಳದಿದ್ದರೆ, ನಾವು ಈ ‘ಟ್ರೋಜನ್ ಹಾರ್ಸೆಸ್’ಗಳನ್ನು ಸಕ್ರಿಯಗೊಳಿಸುವೆವು. ಅದರ ಸಂಕೇತಾಂಕ (ಕೊಡ್) ನಮ್ಮ ಬಳಿ ಇದೆ. ಆದುದರಿಂದ ನಿಮ್ಮ ಇಂಧನ ಕ್ಷೇತ್ರಕ್ಕೆ ಅಪಾಯವುಂಟಾಗುತ್ತದೆ’, ಎಂದು ಬಹಿರಂಗವಾಗಿ ಎಚ್ಚರಿಕೆಯನ್ನು ನೀಡಿತ್ತು. ಚೀನಾ ಇದನ್ನು ನಿಜ ಮಾಡಿ ತೋರಿಸುತ್ತಿದೆ. ಮುಂಬಯಿಯ ವಾರ್ತೆಯು ಬಂದ ನಂತರ ತಕ್ಷಣ ತೆಲಂಗಾಣದ ವಾರ್ತೆಯೂ ಬಂದಿತು. ಅಲ್ಲಿನ ಇಂಧನ ಕ್ಷೇತ್ರದ ಉಪಕರಣಗಳ ಮೇಲೆಯೂ ಆಕ್ರಮಣವನ್ನು ಮಾಡುವ ಪ್ರಯತ್ನವಾಯಿತು; ಆದರೆ ‘ಸಿ.ಈ.ಆರ್.ಟಿ.’ಯು ಅದರ ಮೇಲೆ ಅದೇ ಸಮಯಕ್ಕೆ ನಿಯಂತ್ರಣ ಸಾಧಿಸಿತು.

೫. ಭಾರತವೂ ಚೀನಾದ ಮೇಲೆ ಸೈಬರ್ ದಾಳಿ ಮಾಡಿ ಅದಕ್ಕೆ ನಮ್ಮ ಕ್ಷಮತೆಯನ್ನು ತೋರಿಸಿಕೊಡಬೇಕು !

ಈ ಘಟನೆಯ ನಂತರ, ಭಾರತದ ಲಸಿಕೆಯನ್ನು ತಯಾರಿಸುವ ಕಾರ್ಖಾನೆಗಳ ಮೇಲೆಯೂ ದಾಳಿಯಾಯಿತು. ಈ ಮೂಲಕ ಅವರು ಲಸಿಕೆಯ ಸೂತ್ರಗಳನ್ನು ಕಳ್ಳತನ ಮಾಡಿರುವ ಸಾಧ್ಯತೆ ಇದೆ’, ಎಂಬ ವಾರ್ತೆಯು ಬಂದಿತು.

‘ಸಿ.ಈ.ಆರ್.ಟಿ.’ ಚೀನಾದ ಸೈಬರ್ ದಾಳಿಗಳಿಂದ ದೇಶದ ರಕ್ಷಣೆಯನ್ನು ಮಾಡುವ ಕೆಲಸವನ್ನು ಮಾಡುತ್ತಿದೆ. ಹೀಗಿದ್ದರೂ ಶತ್ರುವಿಗೆ ಅನೇಕ ಬಾರಿ ಅವರ ಧ್ಯೇಯವನ್ನು ಸಾಧಿಸಲು ಯಶಸ್ಸು ಸಿಗತ್ತದೆ. ಆದುದರಿಂದ ಭಾರತವು ಚೀನಾದ ವಿರುದ್ಧ ಆಕ್ರಮಕ ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ. ಅಂತಹ ಕಾರ್ಯಾಚರಣೆಯನ್ನು ನಾವು ಮಾಡುತ್ತಿದ್ದೇವೆಯೇ ? ಈ ಕುರಿತು ‘ಓಪನ್ ಡೊಮೇನ್’ನಲ್ಲಿ ಮಾಹಿತಿ ಇಲ್ಲ.

ಒಂದು ಜಾಗತಿಕ ಸಂಸ್ಥೆಯ ಹೇಳಿಕೆಗನುಸಾರ, ಜಗತ್ತಿನಲ್ಲಿ ಅತ್ಯಧಿಕ ದಾಳಿಗಳು ಚೀನಾದ ಮೂಲಸೌಕರ್ಯಗಳ ಮೇಲಾಗಿವೆ. ಇದು ಸತ್ಯವಾಗಿದ್ದರೂ ಇದರಲ್ಲಿ ಚೀನಾಕ್ಕೆ ವಿಶೇಷ ಹಾನಿಯಾಗಿಲ್ಲ. ಈ ದಾಳಿಗಳು ಅಮೇರಿಕಾ, ಇಸ್ರೈಲ್ ಮತ್ತು ಜಪಾನ ಮುಂತಾದ ದೇಶಗಳಿಂದ ಆಗುತ್ತವೆ. ಆರ್ಯ ಚಾಣಕ್ಯರು, ‘ಶತ್ರುವಿನ ಶತ್ರುವೇ ನಮ್ಮ ಮಿತ್ರ’ ! ಎಂದು ಹೇಳಿದ್ದರು. ಅದಕ್ಕನುಸಾರ ಈ ದೇಶಗಳಿಗೆ ಸಹಕಾರ ನೀಡಿ ನಾವೂ ಚೀನಾದ ಮೇಲೆ ತೀವ್ರ ಆಕ್ರಮಣಗಳನ್ನು ಮಾಡಬೇಕು. ಚೀನಾವು ಭಾರತದ ಇಂಧನ ಕ್ಷೇತ್ರದ ಮೇಲೆ ದಾಳಿ ಮಾಡಿದರೆ ಭಾರತವೂ ಅವರ ಇಂಧನ ಕ್ಷೇತ್ರದ ಮೇಲೆ ದಾಳಿ ಮಾಡಬೇಕು. ಅವರು ನಮ್ಮ ಲಸಿಕೆಯ ಸೂತ್ರಗಳನ್ನು ಕದಿಯುವ ಪ್ರಯತ್ನ ಮಾಡಿದರು, ನಾವೂ ಅವರ ಬೌದ್ಧಿಕ ಸಂಪತ್ತನ್ನು ಕದಿಯ ಬೇಕು. ಅಂದರೆ ಇದು ಬಹಳ ದೊಡ್ಡ ಸವಾಲಾಗಿದೆ. ನಾವು ಚೀನಾಗಿಂತ ಬಹಳ ಹಿಂದೆ ಉಳಿದಿರುವುದರಿಂದ ಅವರ ಸಮಾನರಾಗಲು ಸಮಯವು ತಗುಲಲಿದೆ. ಈಗ ನಾವು ಸಂಶೋಧನೆಯನ್ನು ಮಾಡಿ ಚೀನಾ ‘ವೈರಸ್’ನೊಂದಿಗೆ (ವಿಷಾಣುಗಳೊಂದಿಗೆ) ಹೋರಾಡಲು ಸಮಯವು ಕಡಿಮೆ ಇದೆ. ಆದುದರಿಂದ ನಾವು ಜಪಾನ್, ತೈವಾನ್ ಅಥವಾ ಯುರೋಪ್ ಇವುಗಳಲ್ಲಿ ಕೆಲವು ದೇಶಗಳಿಗೆ ಸಹಕಾರ ನೀಡಿ ನಮ್ಮ ಸಂರಕ್ಷಣೆಯ ವ್ಯವಸ್ಥೆಯನ್ನು ಬಲಿಷ್ಠ ಮಾಡಬೇಕು. ಮಹತ್ವದ್ದೆಂದರೆ ಚೀನಾದ ಮೇಲೆ ದಾಳಿ ಮಾಡುವ ನಮ್ಮ ಕ್ಷಮತೆಯನ್ನು ತೋರಿಸಿಕೊಡಬೇಕು.

೬. ಚೀನಾದ ವಿರುದ್ಧದ ಸೈಬರ್ ಯುದ್ದದಲ್ಲಿ ಪ್ರತಿಯೊಬ್ಬ ನಾಗರಿಕರು ಪಾಲ್ಗೊಳ್ಳುವುದು ಆವಶ್ಯಕ !

ಮುಂಬಯಿಯ ಮೇಲೆ ದಾಳಿಯಾದ ವಾರ್ತೆಯು ಬಂದ ನಂತರ ತಕ್ಷಣ ಚೀನಾದ ಮೇಲೆ ದಾಳಿಯಾಗಿತ್ತು, ಇಂತಹ ವಾರ್ತೆಯು ‘ಗ್ಲೋಬಲ್ ಟೈಮ್ಸ್’ನಲ್ಲಿ ಬರಬೇಕು. ಅಂದರೆ ಇವೆಲ್ಲವನ್ನು ಮಾಡಿ ಪ್ರಾಮಾಣಿಕವಾಗಿಯೂ ಅದನ್ನು ನಿರಾಕರಿಸಲೂ ಬರಬೇಕು. ಯಾವ ರೀತಿ ನಮಗೆ ಸೈಬರ್ ದಾಳಿಗಳಿಂದ ಯಾಂತ್ರಿಕ ವ್ಯವಸ್ಥೆಗಳ ರಕ್ಷಣೆಯನ್ನು ಮಾಡುವುದು ಕಠಿಣವಿದೆಯೋ, ಅದೇ ರೀತಿ ಚೀನಾದ ಎದುರೂ ಇದು ದೊಡ್ಡ ಸವಾಲಾಗಿದೆ. ಚೀನಾಗೆ ಒಂದು ಬಾರಿಯಲ್ಲ, ಪ್ರತಿಯೊಂದು ಬಾರಿ ಪ್ರತ್ಯುತ್ತರ ವನ್ನು ನೀಡಲೇಬೇಕು. ಚೀನಾ ಹೇಳುವವರು ಕೇಳುವವರು ಇಲ್ಲದ ಸ್ವತಂತ್ರ ದೇಶವಾಗಿದೆ. ಅದು ನಮಗೆ ಹಾನಿಯನ್ನು ಮಾಡುತ್ತಲೇ ಇರುವುದು. ಭಾರತವು ‘ಸೈಬರ್ ಡೋಮೆನ್’ನಲ್ಲಿ ಆಗಾಗ ‘ಸರ್ಜಿಕಲ್ ಸ್ಟ್ರೈಕ್’ ಮಾಡಬೇಕಾದ ಆವಶ್ಯಕತೆ ಇದೆ. ಅದಕ್ಕಾಗಿ ಸೈಬರ್ ದಾಳಿಯ ವಿರುದ್ಧ ನಮ್ಮ ಕ್ಷಮತೆಯನ್ನು ಪ್ರಚಂಡ ವೇಗದಿಂದ ಹೆಚ್ಚು ಮಾಡಬೇಕಾಗುತ್ತದೆ. ಭಾರತವು ‘ಸಾಫ್ಟ್‌ವೇರ್’ ಕ್ಷೇತ್ರದಲ್ಲಿ ತುಂಬಾ ಮುಂದಿದೆ; ಆದರೆ ‘ಹಾರ್ಡ್‌ವೇರ್’ನಲ್ಲಿ ಇನ್ನೂ ಹಿಂದೆ ಇದೆ. ಯುದ್ಧವೆಂದರೆ, ನಮಗೂ ಸ್ವಲ್ಪಮಟ್ಟಿಗೆ ಹಾನಿ ಯಾಗುತ್ತದೆ; ಏಕೆಂದರೆ ಪ್ರತಿಯೊಂದು ಯುದ್ಧವನ್ನು ಜಯಿಸಲು ಸಾಧ್ಯವಾಗುವುದಿಲ್ಲ. ಗಲ್ವಾನದಲ್ಲಿ ಚೀನಾಗೆ ಭಾರತವನ್ನು ಸೋಲಿಸಲು ಸಾಧ್ಯವಾಗಲಿಲ್ಲವೆಂದು, ಅದು ತಂತ್ರಜ್ಞಾನದ ಕ್ಷೇತ್ರದಲ್ಲಿ ನಮ್ಮೊಂದಿಗೆ ಹೋರಾಡಲು ಪ್ರಯತ್ನಿಸುತ್ತಿದೆ. ಇಂತಹ ಈ ಸೈಬರ್ ಯುದ್ಧದಲ್ಲಿ ಪ್ರತಿಯೊಬ್ಬ ನಾಗರಿಕನು ಪಾಲ್ಗೊಳ್ಳುವುದು ಆವಶ್ಯಕವಾಗಿದೆ.

– (ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ, ಪುಣೆ.