ಇತ್ತೀಚೆಗಷ್ಟೇ ಮಾರ್ಚ್ ೮ ರಂದು ಜಾಗತಿಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ವರ್ಷದಲ್ಲಿ ಒಮ್ಮೆ ಬರುವ ಈ ದಿನದಂದು ಮಹಿಳೆಯರ ಮೇಲೆ ಶುಭಾಶಯಗಳ ಸುರಿಮಳೆ ಹಾಗೂ ಅವರನ್ನು ವಿವಿಧ ರೀತಿಯಲ್ಲಿ ಗೌರವಿಸುತ್ತಾರೆ. ಆದರೆ ಈ ಸ್ಥಿತಿ ನಿರಂತರವಾಗಿರುವುದಿಲ್ಲ. ಮಹಿಳೆಯರನ್ನು ಕೀಳಾಗಿ ನೋಡುವುದು, ಅವರ ಮೇಲಾಗುತ್ತಿರುವ ಅತ್ಯಾಚಾರಗಳ ಮೂಲಕ ನಮಗೆ ‘ಅದೇ ರಾಗ, ಅದೇ ಹಾಡುಎಂಬಂತೆ ಪುನಃ ಪುನಃ ಅನುಭವಕ್ಕೆ ಬಂದೇ ಬರುತ್ತದೆ. ಈ ಸಮಸ್ಯೆ ಹೇಳಿದಷ್ಟು ಮುಗಿಯುವುದಿಲ್ಲ. ಇದೇ ರೀತಿ ಎಲ್ಲರ ಗಮನ ಸೆಳೆಯುವ ಒಂದು ವಿಶಿಷ್ಟವಾದ ಘಟನೆ ಅಮೇರಿಕಾದ ಮೆಕ್ಸಿಕೋ ದೇಶದಲ್ಲಿ ಘಟಿಸಿತು. ಅಲ್ಲಿನ ಮಹಿಳೆಯರು ಅವರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಇಲ್ಲಿಯವರೆಗಿನ ಅತಿ ದೊಡ್ಡ ಚಳುವಳಿಯನ್ನು ನಡೆಸಿದರು. ಓರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ರಾಷ್ಟ್ರಪತಿ ಲೊಪೆಝ ಒಬ್ರಾಡೋರ ಇವರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪಗಳಾಯಿತು. ರಾಷ್ಟ್ರಪತಿಯವರೇ ಒಂದು ವೇಳೆ ಆರೋಪಿಗೆ ರಕ್ಷಣೆಯನ್ನು ನೀಡುತ್ತಿದ್ದರೆ ಮಹಿಳೆಯು ನ್ಯಾಯಕ್ಕಾಗಿ ಯಾರ ಕಡೆಗೆ ಆಸೆಯಿಂದ ನೋಡುವುದು ? ಅವರ ಸಹನೆಯ ಕಟ್ಟೆ ಒಡೆಯುವುದು ಸಹಜವೇ ಆಗಿದೆ. ಇದರಿಂದ ಈ ಚಳುವಳಿ ಸಾಮಾನ್ಯವಾಗಿರದೇ ಅದು ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತು. ಸುತ್ತಿಗೆ, ದೊಣ್ಣೆ, ಗ್ಯಾಸ್ ಸಿಲಿಂಡರಗಳಂತಹ ವಸ್ತುಗಳನ್ನು ತೆಗೆದುಕೊಂಡು ಮಹಿಳೆಯರು ಚಳುವಳಿಗೆ ಧುಮುಕಿದ್ದರು. ‘ರಾಷ್ಟ್ರಪತಿಗಳು ತಮ್ಮ ಹುದ್ದೆಯನ್ನು ತ್ಯಜಿಸಬೇಕು ಎನ್ನುವ ಘೋಷಣೆಗಳೊಂದಿಗೆ ಮಹಿಳೆಯರು ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಇಲ್ಲಿಯವರೆಗೆ ಮಿತಿಯನ್ನು ಮಿರಿ ಅತ್ಯಾಚಾರಗಳ ಅತಿರೇಕ ಆಗಿದ್ದರೂ ಗಡಿಯನ್ನು ದಾಟಿದ್ದರೂ ಸರಕಾರವು ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಮಹಿಳೆಯರು ಆಕ್ರಮಣಕಾರಿಯಾದರು. ಪೊಲೀಸರ ಮೇಲೆಯೂ ಆಕ್ರಮಣ ಮಾಡಲು ಅವರು ಹೆದರಲಿಲ್ಲ.
ಇದರಿಂದ ಮಹಿಳೆಯರಿಂದಾದ ಈ ದಾಳಿಯಲ್ಲಿ ೬೨ ಪೊಲೀಸರು ಗಾಯಗೊಂಡರು. ಮೆಕ್ಸಿಕೋದಲ್ಲಾದ ಈ ಘಟನೆಯು ಎಲ್ಲ ದೇಶಗಳ ಸಮಾಜದ ಮುಖಂಡರು ವಿಚಾರ ಮಾಡುವಂತಹದ್ದಾಗಿದೆ. ಆದರೆ ಅವರು ನಡೆಸಿರುವ ಹಿಂಸಾಚಾರ ವನ್ನು ಸಮರ್ಥಿಸಲು ಸಾಧ್ಯವಿಲ್ಲ; ಆದರೆ ಆ ಹಿಂಸಾಚಾರದ ಹಿಂದಿರುವ ಕಾರಣಗಳನ್ನು ಮೆಕ್ಸಿಕೋ ಸರಕಾರವು ಗಾಂಭೀರ್ಯದಿಂದ ವಿಚಾರ ಮಾಡಬೇಕು. ಸ್ತ್ರೀಶಕ್ತಿ ಸಂಘಟಿತವಾದರೆ, ಯಾವ ಮಟ್ಟಕ್ಕೆ ಹೋಗಬಹುದು ಎನ್ನುವ ಅನುಭವ ಮೆಕ್ಸಿಕೋದ ಘಟನೆಯಿಂದ ಗಮನಕ್ಕೆ ಬರುತ್ತದೆ.
ಸಂವೇದನಾಶೂನ್ಯ ಸರಕಾರ !
ಮೆಕ್ಸಿಕೋ ದೇಶದ ಭಯಾನಕ ವಾಸ್ತವಿಕತೆಯೆಂದರೆ ಅಲ್ಲಿ ಪ್ರತಿದಿನ ೧೦ ಮಹಿಳೆಯರ ಹತ್ಯೆಯಾಗುತ್ತದೆ. ಇಷ್ಟೇ ಅಲ್ಲ, ೨೦೨೦ ನೇ ಇಸವಿಯಲ್ಲಿ ಕೊರೊನಾದಿಂದ ಅಲ್ಲಿ ಘೋಷಿಸಿದ ಸಂಚಾರ ನಿಷೇಧದ ಕಾಲಾವಧಿಯಲ್ಲಿ ಸಾಧಾರಣವಾಗಿ ೧ ರಿಂದ ಒಂದೂವರೆ ತಿಂಗಳಿನ ಕಾಲಾವಧಿಯಲ್ಲಿ ಸಂಸಾರಿಕ ಹಿಂಸಾಚಾರದ ಕಾರಣದಿಂದ ಸುಮಾರು ೧ ಸಾವಿರ ಮಹಿಳೆಯರ ಹತ್ಯೆಯಾಯಿತು. ಇಷ್ಟೆಲ್ಲ ಘಟಿಸಿದರೂ ಸರಕಾರವು ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಮಾಣ ಕೇವಲ ಶೇ. ೧೦ ರಷ್ಟು ಇದೆ ಎಂದು ಹೇಳಿದೆ. ಮಹಿಳೆಯರು ಮರಣ ಹೊಂದುತ್ತಿರುವುದು ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಸರಕಾರವು ಈ ರೀತಿ ಸ್ಪಷ್ಟೀಕರಣವನ್ನು ನೀಡುವುದನ್ನು ನೋಡಿದರೆ, ಅಲ್ಲಿಯ ಸರಕಾರವು ಮಹಿಳೆಯರ ವಿಷಯದಲ್ಲಿ ಎಷ್ಟು ಸಂವೇದನಾಶೂನ್ಯವಾಗಿದೆಯೆಂದು ಕಂಡು ಬರುತ್ತದೆ. ಹಿಂಸಾಚಾರವು ಮಿತಿಮೀರಿದ್ದರಿಂದ ಅಲ್ಲಿಯ ಮಹಿಳೆಯರಿಗೆ ಸಂಚಾರ ನಿಷೇಧದ ಅವಧಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ರಸ್ತೆಗಿಳಿದು ಪ್ರತಿಭಟನೆಗಳನ್ನು ನಡೆಸಬೇಕಾಯಿತು. ಇಷ್ಟು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮಹಿಳೆಯರಿಗೆ ಅತ್ಯಾಚಾರಗಳ ವಿರುದ್ಧ ರಸ್ತೆಗಿಳಿಯಬೇಕಾಗುತ್ತಿದೆ ಎನ್ನುವುದು ಸರಕಾರಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ೨೦೧೯ ನೇ ಇಸವಿಯಲ್ಲಿಯಂತೂ ಮೆಕ್ಸಿಕೋದಲ್ಲಿ ಅತ್ಯಾಚಾರದ ವಿರುದ್ಧ ಸಂಘಟಿತರಾಗಿದ್ದ ಮಹಿಳೆಯರು ಕಾದಡಾಂಬರಿನ ಮೇಲೆ ನಡೆದು ಸ್ವತಃ ಖಂಡಿಸಿದ್ದರು. ಇದು ಅಕ್ಷರಶಃ ಮೈ ನವಿರೇಳಿಸುವ ಮತ್ತು ಅಷ್ಟೇ ಆಘಾತಕಾರಿ ವಿಷಯವಾಗಿದೆ.
ಅಲ್ಲಿಯ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ ಹೆಚ್ಚಳವಾಗುತ್ತಿರುವುದನ್ನು ಗಮನಿಸಿ ಅರುಸಿ ಉಂಡಾ ಎಂಬ ಮಹಿಳೆಯು ‘ಬ್ರುಜಸ್ ಡೆಲ್ ಮಾರ್ ಹೆಸರಿನಿಂದ ಸ್ತ್ರೀವಾದಿ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಮಾರ್ಚ್ ೯ ರಂದು ದೇಶದ ಮಹಿಳೆಯರನ್ನು ಅತ್ಯಾಚಾರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಸತ್ಯಾಗ್ರಹ ನಡೆಸಲು ಪ್ರಚೋದಿಸಿದರು. ಮೆಕ್ಸಿಕೊದಲ್ಲಿ ಮಹಿಳೆಯರು ಅಥವಾ ಸ್ತ್ರೀವಾದಿ ಸಂಘಟನೆಗಳ ಮುಂದಾಳತ್ವದಿಂದ ಅನ್ಯಾಯದ ವಿರುದ್ಧ ಸಿಡಿದರು. ಅಲ್ಲಿಯ ಮಹಿಳೆಯರ ಆಕ್ರೋಶ ಇಂದು ಸಂಪೂರ್ಣ ಜಗತ್ತಿಗೆ ತಲುಪುತ್ತಿದೆ. ಇದು ಖಂಡಿತವಾಗಿಯೂ ಸ್ತುತ್ಯಾರ್ಹ ಹೆಜ್ಜೆಯಾಗಿದೆ. ದುಃಖದ ವಿಷಯವೆಂದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿರುವಾಗ ಜಾಗತಿಕ ಮಾನವಾಧಿಕಾರ ಸಂಘಟನೆ ಮಾತ್ರ ಈ ವಿಷಯದಲ್ಲಿ ಜಾಣ ಮೌನವನ್ನು ತಾಳಿದೆ. ಮೆಕ್ಸಿಕೋದ ಸ್ತ್ರೀಯರಿಗೆ ಮಾನವಾಧಿಕಾರವಿಲ್ಲವೇ ? ಅಲ್ಲದೇ ಮೆಕ್ಸಿಕೋದ ಸ್ತ್ರೀಯರು ಅನುಭವಿಸಿರುವ ಅತ್ಯಾಚಾರಗಳ ವಿಷಯದಲ್ಲಿ ಹೇಳಿಕೆಗಳನ್ನು ಕೂಡ ನೀಡಲಿಲ್ಲ. ಆದರೆ ಅಲ್ಪಸಂಖ್ಯಾತರ ವಿಷಯದಲ್ಲಿ ಎಲ್ಲಿಯಾದರೂ ಸ್ವಲ್ಪ ಹೆಚ್ಚುಕಡಿಮೆಯಾದರೂ ಮಾನವಾಧಿಕಾರ ಸಂಘಟನೆ ತಕ್ಷಣವೇ ಬಿಲದಿಂದ ಹೊರಗೆ ಬಂದು ಮುಂದೆಹಿಂದೆ ಯೋಚಿಸದೇ ಆರೋಪ ಮಾಡತೊಡಗುತ್ತದೆ. ಈ ರೀತಿ ದ್ವಿಮುಖ ನೀತಿಯನ್ನು ಹೊಂದಿರುವ ಸಂಘಟನೆಗಳಿಗೆ ಅವರ ಸ್ಥಾನವನ್ನು ತೋರಿಸಬೇಕಾಗಿದೆ. ಮೆಕ್ಸಿಕೋದ ಈ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ ಮೇಲಿನ ಘಟನೆಯಿಂದ ಅದರ ವ್ಯಾಪಕತೆ ಎಲ್ಲರನ್ನೂ ಅಸ್ವಸ್ಥಗೊಳಿಸುತ್ತದೆ. ಆದುದರಿಂದ ಮೆಕ್ಸಿಕೋದ ಈ ದುಃಸ್ಥಿತಿಯನ್ನು ನಿರ್ಲಕ್ಷಿಸಬಾರದು. ಪ್ರತಿಯೊಂದು ಸಮಯದಲ್ಲಿಯೂ ಮಹಿಳೆಯರಿಗೆ ಅನ್ಯಾಯದ ವಿರುದ್ಧ ಹೋರಾಡಲು ಚಳುವಳಿಯೆಂಬ ಹೆಸರಿನ ಆಯುಧವನ್ನು ಹೊರ ತೆಗೆಯಬೇಕಾಗುತ್ತದೆ ಎನ್ನುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಬಗ್ಗೆ ಮೆಕ್ಸಿಕೋ ಸರಕಾರ ವಿಚಾರ ಮಾಡಬೇಕಾಗಿದೆ.
ರಾಮರಾಜ್ಯದ ಆವಶ್ಯಕತೆ
ಕೇವಲ ಮೆಕ್ಸಿಕೋದಲ್ಲಿ ಮಾತ್ರವಲ್ಲ, ಇತರೆ ದೇಶಗಳಲ್ಲಿಯೂ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಮನೆ ಮತ್ತು ಸಮಾಜ ಎಲ್ಲಿಯೇ ಇರಲಿ, ಮಹಿಳೆಯರು ಅತ್ಯಾಚಾರವನ್ನು ಎದುರಿಸಲೇ ಬೇಕಾಗುತ್ತಿದೆ. ಫ್ರಾನ್ಸ್ ಸರಕಾರವುನೊಂದ ಮಹಿಳೆಯರಿಗಾಗಿ ತಾತ್ಕಾಲಿಕ ಸ್ವರೂಪದಲ್ಲಿ ಸರಕಾರಿ ವೆಚ್ಚದಲ್ಲಿ ಉಪಹಾರಗೃಹಗಳಲ್ಲಿ (ಹೊಟೆಲಗಳಲ್ಲಿ) ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದು, ಆ ಉಪಹಾರ ಗೃಹಗಳ ಬಾಡಿಗೆ ಮತ್ತು ಊಟೋಪಚಾರಗಳ ವೆಚ್ಚವನ್ನು ಸರಕಾರದ ವತಿಯಿಂದ ಭರಿಸಲಾಗುತ್ತಿದೆ. ಸರಕಾರದ ಈ ಪ್ರಯತ್ನ ಸ್ತುತ್ಯಾರ್ಹವಾಗಿದ್ದರೂ, ವೆಚ್ಚದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕೈಕೊಂಡಿರುವ ಕ್ರಮಗಳಿಗಿಂತ ಮಹಿಳೆಯರ ಮೇಲೆ ಅತ್ಯಾಚಾರವಾಗದಂತೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವುದೂ ಅಷ್ಟೇ ಅತ್ಯಾವಶ್ಯಕವಾಗಿದೆ. ರಶಿಯಾದಂತಹ ಸಾಮ್ಯವಾದಿ ದೇಶದಲ್ಲಿಯೂ ಮಹಿಳೆಯರ ದುಃಸ್ಥಿತಿ ಇದೇ ರೀತಿಯಿದೆ. ಸಾಮ್ಯವಾದಿ ಇರಲಿ ಅಥವಾ ಪಾಶ್ಚಿಮಾತ್ಯ ವಿಚಾರಸರಣಿಯನ್ನು ಅವಲಂಬಿಸಿರಲಿ, ಯಾವುದೇ ದೇಶದ ಮಹಿಳೆಯರು ಸುರಕ್ಷಿತವಾಗಿಲ್ಲ ಎನ್ನುವುದೇ ಸತ್ಯವಾಗಿದೆ. ಸಂಪೂರ್ಣ ವಿಶ್ವ ಇಂದು ಆಧುನೀಕರಣದ ಮತ್ತು ಏಕೀಕರಣದ ಹೊಸ್ತಿಲಲ್ಲಿದೆ. ಅಲ್ಲಲ್ಲ ಹೊಸ್ತಿಲನ್ನು ಎಂದೋ ದಾಟಿದೆ. ಇಂದಿನ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಾಳತ್ವವನ್ನು ವಹಿಸಿ ಸಬಲರಾಗುತ್ತಿದ್ದಾರೆ. ಆದರೆ ಅವಳ ಮೇಲಾಗುವ ಅತ್ಯಾಚಾರಗಳ ವಾಸ್ತವಿಕತೆಯು ಅಷ್ಟೇ ಕೆಳಮಟ್ಟಕ್ಕೆ ಇಳಿದಿದೆ. ‘ಸ್ತ್ರೀಮುಕ್ತಿ, ‘ಸ್ತ್ರೀ ಸ್ವಾತಂತ್ರ್ಯ ಎಂದು ಬಡಾಯಿ ಕೊಚ್ಚುವವರು ಸ್ತ್ರೀಯರ ಸದ್ಯದ ಸ್ಥಿತಿಯನ್ನು ವಿಚಾರ ಮಾಡಬೇಕು. ರಾಮರಾಜ್ಯದ ಸ್ತ್ರೀಯರು ನಿಜವಾದ ಅರ್ಥದಿಂದ ಸುರಕ್ಷಿತರಾಗಿದ್ದರು ಹಾಗೂ ಆದ್ದರಿಂದಲೇ ಆನಂದಿತ ಮತ್ತು ಸಮಾಧಾನಿಗಳಾಗಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರವನ್ನು ತಡೆಯಲು ರಾಮರಾಜ್ಯವನ್ನು ಸ್ಥಾಪಿಸುವುದೇ ಏಕೈಕ ಉಪಾಯವಾಗಿದೆ. ಇದರಿಂದ ಸಂಪೂರ್ಣ ವಿಶ್ವದಲ್ಲಿ ಸ್ತ್ರೀಯರಿಗೆ ಗೌರವ, ಸಮ್ಮಾನ ನೀಡುವ ರಾಮರಾಜ್ಯವನ್ನು ಆದಷ್ಟು ಬೇಗನೆ ಸ್ಥಾಪಿಸುವುದೇ ಇಂದಿನ ಕಾಲದ ಆವಶ್ಯಕತೆಯಾಗಿದೆ.