ಸಲಿಂಗ ವಿವಾಹವು ಮೂಲಭೂತ ಹಕ್ಕಲ್ಲ, ಆದ್ದರಿಂದ ಅದಕ್ಕೆ ಮಾನ್ಯತೆ ನೀಡಬಾರದು ! – ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಮನವಿ


ನವ ದೆಹಲಿ : ಸಲಿಂಗ ವಿವಾಹವು ಮೂಲಭೂತ ಹಕ್ಕಲ್ಲ. ಸಲಿಂಗ ದಂಪತಿಗಳು ಈ ರೀತಿ ಒಟ್ಟಿಗೆ ವಾಸಿಸುವುದು ಮತ್ತು ಸಂಬಂಧವಿಡುವುದು ಭಾರತೀಯ ಕೌಟುಂಬಿಕ ಸಂಪ್ರದಾಯಕ್ಕೆ ಅನುಗುಣವಾಗಿಲ್ಲ. ಇದು ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಧಕ್ಕೆ ತರಬಹುದು. ಆದ್ದರಿಂದ ಇದಕ್ಕೆ ಮಾನ್ಯತೆ ನೀಡಬಾರದು ಎಂದು ಕೇಂದ್ರ ಸರಕಾರ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಆಗ್ರಹಿಸಿದೆ. ಹಿಂದೂ ವಿವಾಹ ಕಾಯ್ದೆ ಮತ್ತು ವಿಶೇಷ ಕಾನೂನುಗಳ ಅಡಿಯಲ್ಲಿ ಸಲಿಂಗ ವಿವಾಹವನ್ನು ಕೋರಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಅರ್ಜಿಯನ್ನು ಸಲ್ಲಿಸಲಾಗಿದೆ. ಭಾರತದಲ್ಲಿ ಸಲಿಂಗ ವಿವಾಹಕ್ಕೆ ಅನುಮತಿಯಿಲ್ಲ. ಭಾರತೀಯ ದಂಡ ಸಂಹಿತೆಯ ಕಲಮು ೩೭೭ ರ ಅಡಿಯಲ್ಲಿ ಸಲಿಂಗ ಸಂಬಂಧವನ್ನು ಅಪರಾಧವೆಂದು ಪರಿಗಣಿಸಲಾಗಿತ್ತು. ಅದಕ್ಕಾಗಿ ೧೦ ವರ್ಷಗಳ ಜೈಲು ಶಿಕ್ಷೆಯ ವ್ಯವಸ್ಥೆ ಇತ್ತು; ಆದರೆ ೬ ಸೆಪ್ಟೆಂಬರ್ ೨೦೧೮ ರಂದು ಸರ್ವೋಚ್ಚ ನ್ಯಾಯಾಲಯವು ಸಲಿಂಗ ಸಂಬಂಧವಿಡುವುದನ್ನು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು.

ಕೇಂದ್ರ ಸರಕಾರ ಪ್ರತಿಜ್ಞಾ ಪತ್ರದಲ್ಲಿ ಹೀಗೆ ಹೇಳಿದೆ,

. ಪುರುಷ ಮತ್ತು ಮಹಿಳೆಯ ನಡುವಿನ ವಿವಾಹವನ್ನು ಭಾರತದಲ್ಲಿ ಸ್ವೀಕರಿಸಲಾಗಿದ್ದರೂ, ಇದು ವಯಸ್ಸು, ಪದ್ಧತಿಗಳು, ಸಂಪ್ರದಾಯಗಳು, ಸಾಂಸ್ಕೃತಿಕ ನಡವಳಿಕೆಯಂತಹ ಅನೇಕ ಸಾಮಾಜಿಕ ಮೌಲ್ಯಗಳನ್ನು ಆಧರಿಸಿದೆ. ಸಂವಿಧಾನದ ೨೧ ನೇ ಕಲಮಿನ ಅಡಿಯಲ್ಲಿ ಅರ್ಜಿದಾರರು ಕೋರಿದ ಮೂಲಭೂತ ಹಕ್ಕುಗಳ ಅಡಿಯಲ್ಲಿ ಸಲಿಂಗ ವಿವಾಹವನ್ನು ಸೇರಿಸಲಾಗುವುದಿಲ್ಲ.

೨. ವೈವಾಹಿಕ ಸಂಬಂಧಗಳು ಅಲಿಖಿತ ಭಾರತೀಯ ಸಂಸ್ಕೃತಿ ಮತ್ತು ಲಿಖಿತ ಸಂವಿಧಾನದ ಭಾಗವಾಗಿದೆ ಮತ್ತು ಸಲಿಂಗ ವಿವಾಹವು ಎರಡೂ ವಿಷಯಗಳ ಉಲ್ಲಂಘನೆಯಾಗಿದೆ ಎಂದು ಸರಕಾರ ಹೇಳಿದೆ. ಆದ್ದರಿಂದ, ಅಲಿಖಿತ ಭಾರತೀಯ ಸಂಸ್ಕೃತಿ ಮತ್ತು ಲಿಖಿತ ಸಂವಿಧಾನ ಎರಡೂ ಮುರಿಯಲ್ಪಡುತ್ತವೆ. ಆದ್ದರಿಂದ, ಅರ್ಜಿಯನ್ನು ಗಮನಿಸದೆ ನ್ಯಾಯಾಲಯ ವಜಾಗೊಳಿಸಬೇಕು.

. ಕುಟುಂಬದ ವಿಷಯವು ಒಂದೇ ಲಿಂಗದ ಜನರಲ್ಲಿ ವಿವಾಹ ನೋಂದಣಿ ಮತ್ತು ಮಾನ್ಯತೆಯನ್ನು ಮೀರಿದೆ. ಸಲಿಂಗಕಾಮಿಗಳು ಜೊತೆಗಾರರೆಂದು ಒಟ್ಟಿಗೆ ವಾಸಿಸುತ್ತಾರೆ ಮತ್ತು ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ಅದನ್ನು ಭಾರತೀಯ ಕುಟುಂಬ ಭಾವನೆಯ ಗಂಡ, ಹೆಂಡತಿ ಮತ್ತು ಮಕ್ಕಳ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ.