ಡ್ರೋನ್ ಯುದ್ಧದಲ್ಲಿ ಆಶ್ಚರ್ಯಕರವಾಗಿ ಬಾನೆತ್ತರಕ್ಕೆ ಹಾರಿದ ಭಾರತ !

ಭಾರತೀಯ ಸೈನ್ಯ ಉಪಯೋಗಿಸುತ್ತಿರುವ ಡ್ರೋನ್‌ಗಳು

೧. ಆರ್ಮಿ ಡೇ ಯಂದು (ಸೈನಿಕ ದಿನಾಚರಣೆಯ ದಿನ) ಭಾರತೀಯ ಸೈನ್ಯದಿಂದ ಡ್ರೋನ್‌ಯುದ್ಧದ ಪ್ರದರ್ಶನ !

೧೫ ಜನವರಿ ೨೦೨೧ ರಂದು ಭಾರತದ ಸೈನಿಕ ದಿನಾಚರಣೆಯನ್ನು ಆಚರಿಸಲಾಯಿತು. ಅದರಲ್ಲಿ ಭಾರತೀಯ ಸೈನ್ಯವು ಪಥಸಂಚಲನವನ್ನು ಮಾಡಿತು. ಆ ದಿನ ಸೈನ್ಯವು ಡ್ರೋನ್‌ ಯುದ್ಧದ ಪ್ರದರ್ಶನವನ್ನು ಮಾಡಿತು. ಈ ಸಮಯದಲ್ಲಿ ೭೫ ಡ್ರೋನ್‌ಗಳನ್ನು ಆಕಾಶದಲ್ಲಿ ಬಿಟ್ಟು, ಅವು ಭೂಮಿಯ ಮೇಲಿನ ಶತ್ರುಗಳ ವಿವಿಧ ಸ್ಥಳಗಳನ್ನು ಗುರಿ ಮಾಡಿ ಒಂದೇ ಸಮಯಕ್ಕೆ ಹೇಗೆ ದಾಳಿ ಮಾಡುತ್ತವೆ, ಎಂಬುದನ್ನು ಪ್ರಾತ್ಯಕ್ಷಿಕೆಯ ಮುಖಾಂತರ ತೋರಿಸಲಾಯಿತು. ಇದರಿಂದ ಭಾರತದ ಒಂದು ದೊಡ್ಡ ಕ್ಷಮತೆ ಜಗತ್ತಿನೆದುರಿಗೆ ಬಂದಿತು. ಡ್ರೋನ್ ಯುದ್ಧದಲ್ಲಿ ಸದ್ಯ ಅಮೇರಿಕಾ ಎಲ್ಲಕ್ಕಿಂತ ಮುಂದಿದ್ದು, ತದನಂತರ ಚೀನಾ ಬರುತ್ತದೆ. ಚೀನಾ ಅನೇಕ ದೇಶಗಳಿಗೆ ಡ್ರೋನ್‌ಗಳನ್ನು ಪೂರೈಸಿದೆ. ಯಾವುದು ಚೀನಾದ ಬಳಿಯಿರುವುದೋ, ಅದು ಪಾಕಿಸ್ತಾನದ ಬಳಿ ಇದ್ದೇ ಇರುತ್ತದೆ. ಇತ್ತೀಚೆಗೆ ಪಾಕಿಸ್ತಾನಕ್ಕೆ ಭಾರತದ ಗಡಿಗೆ ಬಂದು ಭಯೋತ್ಪಾದಕರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅದು ಡ್ರೋನ್‌ಗಳ ಸಹಾಯದಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ. ಆಕಾಶದ ಗಡಿ ಬಹಳ ದೊಡ್ಡದಾಗಿರುತ್ತದೆ. ಇದರಿಂದ ಯಾವುದಾದರೂ ಡ್ರೋನ್ ಒಳಗೆ ಪ್ರವೇಶಿಸಿದರೆ, ಅದನ್ನು ಸಹಜವಾಗಿ ತಡೆಗಟ್ಟಲು ಸೈನಿಕರಿಗೆ ಅಸಾಧ್ಯವಾಗುತ್ತದೆ.

೨. ಜನವರಿ ೧೫ ರಂದು ಸೈನಿಕರ ದಿನಾಚರಣೆಯನ್ನು ಆಚರಿಸುವುದರ ಹಿಂದಿನ ಕಾರಣ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಜನವರಿ ೧೫ ರಂದು ಭಾರತೀಯ ಸೈನ್ಯಾಧಿಕಾರಿಯು ಸೈನ್ಯದ ಎಲ್ಲಕ್ಕಿಂತ ಉನ್ನತ ಸೇನಾಪತಿ (ಚೀಫ್ ಆಫ್ ಆರ್ಮಿ ಸ್ಟಾಫ್) ಆದರು. ಜನರಲ್ ಕೆ. ಎಮ್. ಕರಿಯಪ್ಪಾ ಇವರು ಭಾರತದ ಮೊದಲ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದರು. ಈ ಮೊದಲು ದೇಶ ಸ್ವತಂತ್ರವಾಗಿದ್ದರೂ ಅಂದಾಜು ೨ ವರ್ಷಗಳ ವರೆಗೆ ಭಾರತೀಯ ಸೈನ್ಯದ ನೇತೃತ್ವವು ಬ್ರಿಟಿಷ್ ಅಧಿಕಾರಿಗಳ ಬಳಿಯೇ ಇತ್ತು. ವರ್ಷ ೧೯೪೭ರಲ್ಲಿ ಭಾರತ-ಪಾಕಿಸ್ತಾನದ ಯುದ್ಧ ಪ್ರಾರಂಭವಾದಾಗ, ಭಾರತೀಯ ಸೈನ್ಯದ ನೇತೃತ್ವ ಬ್ರಿಟಿಷ್ ಅಧಿಕಾರಿಗಳ ಬಳಿ ಇತ್ತು. ಅವರು ಭಾರತೀಯ ಸೈನ್ಯಕ್ಕೆ ಆಕ್ರಮಣಕಾರಿ ಕಾರ್ಯವನ್ನು ಮಾಡಲು ಅನುಮತಿಯನ್ನು ನೀಡುತ್ತಿರಲಿಲ್ಲ. ಜನರಲ್ ಕರಿಯಪ್ಪ, ಅಂದರೆ ಭಾರತೀಯ ಸೈನ್ಯದ ಅಧಿಕಾರಿಗಳು ಸೈನ್ಯದ ನೇತೃತ್ವವನ್ನು ವಹಿಸಿಕೊಂಡು ಆಕ್ರಮಣಕಾರಿ ಯುದ್ಧವನ್ನು ಮಾಡಿದರು. ಭಾರತೀಯ ಸೈನ್ಯ ಮುಝಪ್ಪರಾಬಾದದವರೆಗೆ ತಲುಪಿತ್ತು. ನಾವು ಕಾಶ್ಮೀರವನ್ನು ಭಾರತಕ್ಕೆ ಸೇರಿಸಿದೆವು; ಆಗಿನ ಭಾರತದ ನೇತಾರರು ಸೈನ್ಯಕ್ಕೆ ಮುಂದೆ ಹೋಗಲು ಅವಕಾಶವನ್ನು ನೀಡಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಗಿಲಗಿಟ್, ಬಾಲ್ಟಿಸ್ತಾನವೂ ಭಾರತದ ವಶದಲ್ಲಿರುತ್ತಿತ್ತು. ಇದು ಆರ್ಮಿ ಡೇಯ (ಸೈನಿಕ ದಿನಾಚರಣೆ) ಮಹತ್ವವಾಗಿದೆ. ಈ ದಿನದಂದು ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ದಿನದಂದು ಭಾರತ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಡ್ರೋನ್ ಯುದ್ಧದ ಪ್ರಾತ್ಯಕ್ಷಿಕೆಯನ್ನು ತೋರಿಸಿ ನಾವು ಚೀನಾಕ್ಕಿಂತ ಕಡಿಮೆಯೇನಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟೆವು.

೩. ಅಝರಬೈಜಾನ್ ದೇಶವು ಡ್ರೋನ್‌ಗಳ ಸಹಾಯದಿಂದ ಆರ್ಮೇನಿಯಾ ದೇಶದ ಮೇಲೆ ವಿಜಯವನ್ನು ಸಾಧಿಸುವುದು

ಇತ್ತೀಚೆಗಷ್ಟೇ ಆರ್ಮೇನಿಯಾ ಮತ್ತು ಅಝರಬೈಜಾನ್ ದೇಶಗಳ ನಡುವೆ ಯುದ್ಧ ನಡೆಯಿತು. ಅದರಲ್ಲಿ ಡ್ರೋನ್‌ಗಳ ಕೌಶಲ್ಯ ಕಂಡು ಬಂದಿತು. ಆರ್ಮೇನಿಯಾ ಬಳಿ ಯುದ್ಧವಾಹನ (ಟ್ಯಾಂಕ್)ಗಳು, ತೋಪು, ಆಧುನಿಕ ಶಸ್ತ್ರಾಸ್ತ್ರಗಳಿದ್ದವು. ಅಲ್ಲದೇ ರಶಿಯಾದ ವಾಯುಸೇನೆಯ ಬೆಂಬಲವೂ ಅದಕ್ಕಿತ್ತು. ಇಷ್ಟೆಲ್ಲ ಇರುವಾಗಲೂ ಅಝರಬೈಜಾನ್ ದೇಶವು ಆರ್ಮೇನಿಯಾ ಮೇಲೆ ಸ್ವಾರ್ಮ ಡ್ರೋನ್‌ಗಳ ಸಹಾಯದಿಂದ ದಾಳಿ ಮಾಡಿತು. ಸ್ವಾರ್ಮ ಡ್ರೋನ್‌ಗಳೆಂದರೆ ಒಂದೇ ಸಮಯದಲ್ಲಿ ೫೦, ೧೦೦ ಅಥವಾ ೨೦೦ ಡ್ರೋನ್‌ಗಳು ಒಮ್ಮೆಲೆ ದಾಳಿ ಮಾಡಿ ವಿವಿಧ ಗುರಿಗಳನ್ನು ನಾಶ ಮಾಡುವುದು. ಈ ಹೋರಾಟದಲ್ಲಿ ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಅಝರಬೈಜಾನ್ ದೇಶವು ಆರ್ಮೇನಿಯಾದ ಮೇಲೆ ವಿಜಯವನ್ನು ಸಾಧಿಸಿತು. ಈ ವಿಜಯದ ಹಿಂದಿನ ಮಹತ್ವದ ಕಾರಣವೆಂದರೆ, ಅವರ ಡ್ರೋನ್‌ಗಳಿಂದ ಯುದ್ಧ ಮಾಡುವ ಕ್ಷಮತೆ.

ಯಾವಾಗ ಈ ರೀತಿಯ ಹೊಸ ಸಂಶೋಧನೆ ಅಥವಾ ಶಸ್ತ್ರಾಸ್ತ್ರಗಳು ಜಗತ್ತಿನಲ್ಲಿ ಬರುತ್ತವೆಯೋ, ಆಗ ಅವು ಭಾರತದ ಬಳಿಯೂ ಇರಬೇಕು ಮತ್ತು ಅವುಗಳನ್ನು ಉಪಯೋಗಿಸಬೇಕು. ‘ಆರ್ಮಿ ಡೇ’ಯ ದಿನದಂದು ಭಾರತೀಯ ಸೈನ್ಯವು ನಿರ್ದಿಷ್ಟವಾಗಿ ಅದನ್ನೇ ಮಾಡಿತು. ಆ ದಿನ ಭಾರತವು ಡ್ರೋನ್‌ಗಳನ್ನು ಯಾವ ರೀತಿಉಪಯೋಗಿಸಬಹುದು ಎನ್ನುವ ಪ್ರಾತ್ಯಕ್ಷಿಕತೆಯನ್ನು ತೋರಿಸಿತು.

೪. ಯುದ್ಧ ವಿಮಾನಗಳಿಗಿಂತ ಡ್ರೋನ್‌ಗಳನ್ನು ಉಪಯೋಗಿಸುವುದು ಲಾಭದಾಯಕ !

ವಿವಿಧ ಕ್ಷಮತೆಯ ಡ್ರೋನ್‌ಗಳಿರುತ್ತವೆ. ಡ್ರೋನ್‌ಗಳಲ್ಲಿ ೭-೮ ಗಂಟೆಗಳ ಕಾಲ ಆಕಾಶದಲ್ಲಿರುವಷ್ಟು ಕ್ಷಮತೆಯಿದೆ. ಒಂದು ಡ್ರೋನ್ ೧೦೦ ರಿಂದ ೪೦೦ ಕಿಲೋ ಅಥವಾ ೨ ಟನ್ ಭಾರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಅವುಗಳ ರೇಂಜ ೨೦೦ ಕಿಲೋಮೀಟರ್‌ಗಳಿಂದ ೪೦೦ ರಿಂದ ೫೦೦ ಕಿಲೋಮೀಟರ್‌ಗಳ ವರೆಗೆ ಇರುತ್ತದೆ. ಡ್ರೋನ್‌ಗಳ ಬೆಲೆ ಯುದ್ಧ ವಿಮಾನಗಳ ತುಲನೆಯಲ್ಲಿ ಕಡಿಮೆ ಇರುತ್ತದೆ, ಉದಾ. ಒಂದು ರಾಫೇಲ್ ವಿಮಾನದ ಬೆಲೆ ೧ ಸಾವಿರ ೫೦೦ ಕೋಟಿಯಿಂದ ೧ ಸಾವಿರ ೬೦೦ ಕೋಟಿಗಳಷ್ಟಿದೆ. ಒಂದು ತೇಜಸ್ ವಿಮಾನದ ಬೆಲೆ ೫೦೦ ರಿಂದ ೬೦೦ ಕೋಟಿಗಳಷ್ಟಿದೆ. ಅದೇ ಅತ್ಯಾಧುನಿಕ ಒಂದು ಡ್ರೋನದ ಬೆಲೆ ೫ ರಿಂದ ೬ ಕೋಟಿಗಿಂತಲೂ ಕಡಿಮೆಯಿದೆ. ಯುದ್ಧ ವಿಮಾನ ಕೆಳಗೆ ಬಿದ್ದರೆ, ಪೈಲೆಟ್‌ನ ಜೀವ ಹೋಗಬಹುದು ಅಥವಾ ಶತ್ರು ಅವನನ್ನು ಬಂಧಿಸಬಹುದು, ಆದರೆ ಡ್ರೋನ್ ಬಗ್ಗೆ ಹಾಗಾಗುವುದಿಲ್ಲ. ಅದು ಕೆಳಗೆ ಬಿದ್ದರೂ ದೊಡ್ಡ ಹಾನಿಯೇನೂ ಆಗುವುದಿಲ್ಲ.

೫. ಭಾರತದ ಶಸ್ತ್ರಾಸ್ತ್ರ ನಿರ್ಮಾಣದ ಕಾರ್ಯ ವೇಗದಲ್ಲಿ !

ಈ ಮೊದಲು ಯಾವುದಾದರೂ ಶಸ್ತ್ರದ ಮೇಲೆ ಸಂಶೋಧನೆಯನ್ನು ಮಾಡಿ ಅದನ್ನು ಯಶಸ್ವಿಯಾಗಿ ಸೈನ್ಯದಲ್ಲಿ ಸೇರ್ಪಡೆಗೊಳಿಸುವವರೆಗೆ ಭಾರತಕ್ಕೆ ೨೫ ರಿಂದ ೩೦ ವರ್ಷಗಳು ತಗಲುತ್ತಿದ್ದವು. ಭಾರತದ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ತೇಜಸ ಯುದ್ಧ ವಿಮಾನ ನಿರ್ಮಾಣವಾಗಲು ೨೫ ರಿಂದ ೩೦ ವರ್ಷಗಳು ತಗುಲಿದವು. ಅರ್ಜುನ ಯುದ್ಧವಾಹನ (ಬ್ಯಾಟಲ್ ಟ್ಯಾಂಕ್) ತಯಾರಿಸಲು ಭಾರತಕ್ಕೆ ೫೦ ವರ್ಷಗಳು ತಗುಲಿದವು. ಅರಿಹಂತ ಹೆಸರಿನ ಸಬ್‌ಮರೀನ ನಿರ್ಮಾಣದ ಕಾರ್ಯವು ೩೦ ರಿಂದ ೩೫ ವರ್ಷಗಳಿಂದ ನಡೆದಿದೆ. ಜಗತ್ತು ಹೊಸ ಸಂಶೋಧನೆಯ ಕಡೆಗೆ ಮುಖ ಮಾಡಿದಾಗ, ನಾವು ತಯಾರಿಸುವ ಶಸ್ತ್ರಾಸ್ತ್ರಗಳು ಸಂಪೂರ್ಣ ಹಳೆಯದಾಗಿರುತ್ತಿದ್ದವು. ಆದುದರಿಂದ ಯಾವ ವೇಗದಿಂದ ಭಾರತವು ಡ್ರೋನ್‌ಗಳನ್ನು ಸಿದ್ಧಪಡಿಸಿದೆಯೋ ಅದು ಅಭಿನಂದನೀಯವಾಗಿದೆ. ಭಾರತವು ಕಳೆದ ೫-೬ ತಿಂಗಳುಗಳಲ್ಲಿ ಕ್ಷೇಪಣಾಸ್ತ್ರಗಳ ೪೦ ರಿಂದ ೫೦ ಪರೀಕ್ಷಣೆಗಳನ್ನು ಮಾಡಿದೆ. ವಿವಿಧ ರೀತಿಯ ಕ್ಷೇಪಣಾಸ್ತ್ರಗಳಿರುತ್ತವೆ. ಆದುದರಿಂದ ಅವುಗಳಲ್ಲಿ ವಿವಿಧ ಪರಿಸ್ಥಿತಿಯಲ್ಲಿ ಕಾರ್ಯವನ್ನು ಮಾಡಲು ಬದಲಾವಣೆಗಳಾಗುತ್ತಿವೆ ಮತ್ತು ತದನಂತರ ಅವುಗಳ ಪರೀಕ್ಷಣೆಯನ್ನೂ ನಡೆಸಲಾಗುತ್ತಿದೆ. ಈಗ ಇದರ ವೇಗವೂ ಬಹಳ ಹೆಚ್ಚಾಗಿದೆ.

೬. ಡ್ರೋನ್‌ಗಳಲ್ಲಿ ವಿವಿಧ ರೀತಿಯಕಾರ್ಯಗಳನ್ನು ಮಾಡುವ ಕ್ಷಮತೆಯಿರುವುದು

೬ ಅ. ಆತ್ಮಾಹುತಿ ಬಾಂಬರ್ ಎಂದು ಕಾರ್ಯನಿರ್ವಹಿಸುವ ಡ್ರೋನ್ ! : ಈ ಡ್ರೋನ್‌ಅನ್ನು ಭಾರತವು ಒಂದು ಖಾಸಗಿ ಕಂಪನಿಯ ಸಹಾಯದಿಂದ ನಿರ್ಮಿಸಿದೆ. ಇದಕ್ಕೆ ಕಾಮಿಕಾಝೆ ಎಂದು ಹೇಳಲಾಗುತ್ತದೆ. ಕಾಮಿಕಾಝೆಯನ್ನು ಮೊತ್ತಮೊದಲಿಗೆ ಜಪಾನವು ತಯಾರಿಸಿತು. ಜಪಾನಿನ ಪೈಲಟ್ ಯುದ್ಧ ವಿಮಾನದಲ್ಲಿ ಕುಳಿತುಕೊಂಡು ಅದನ್ನು ಅಮೇರಿಕಾದ ಯುದ್ಧ ವಿಮಾನಕ್ಕೆ ಡಿಕ್ಕಿ ಹೊಡೆದು ಅದನ್ನು ನಾಶ ಮಾಡುತ್ತಿದ್ದನು. ಈ ಆತ್ಮಾಹುತಿ ಕೃತಿಯಿಂದ ಕಾಮಿಕಾಝೆ ಶಬ್ದವನ್ನು ಉಪಯೋಗಿಸಲು ಪ್ರಾರಂಭವಾಯಿತು. ಡ್ರೋನವೂ ಒಂದು ಆತ್ಮಾಹುತಿ ಬಾಂಬ ಎಂದು ಕಾರ್ಯವನ್ನು ಮಾಡಬಲ್ಲದು. ಈ ಕಾರ್ಯಕ್ಷಮತೆಯನ್ನು ಆ ದಿನ ಭಾರತವು ತೋರಿಸಿತು. ಡ್ರೋನ್ ಭಯೋತ್ಪಾದಕರ ಪ್ಯಾಡ್, ಲಾಂಚ್‌ಪ್ಯಾಡ್, ಶತ್ರುಗಳ ಹೆಲಿಪ್ಯಾಡ್, ಇಂಧನಗಳ ಸಂಗ್ರಹಾಗಾರ, ಯುದ್ಧವಾಹನ (ಟ್ಯಾಂಕ್), ಇತ್ಯಾದಿಗಳನ್ನು ಗುರಿ ಮಾಡಿ ಅವುಗಳನ್ನು ನಾಶ ಮಾಡಬಲ್ಲದು.

೬ ಆ. ಡ್ರೋನ್‌ಗಳ ಮಾಧ್ಯಮದಿಂದ ವಿವಿಧ ರೀತಿಯ ಸಹಾಯವನ್ನು ಪೂರೈಸಲಾಗುತ್ತದೆ : ಡ್ರೋನ್‌ಗಳಲ್ಲಿ ೨-೩ ರೀತಿಯ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತದೆ. ಇದರಿಂದ ಮನುಷ್ಯ ಹಾನಿಯನ್ನು ತಡೆಗಟ್ಟಬಹುದು. ಈ ಡ್ರೋನ್‌ಗಳು ಸೈನ್ಯಕ್ಕೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ವಿಶೇಷವಾಗಿ ಅತಿ ಎತ್ತರದ ಪರ್ವತಗಳ ಭಾಗದಲ್ಲಿ ಜೀವನಾವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ಮಾಡಬಲ್ಲವು. ಪ್ರತಿಯೊಂದು ಡ್ರೋನ್‌ವು ಸೈನಿಕರಿಗೆ ೬೦೦ ಕಿಲೋಗಳವರೆಗಿನ ತಿಂಡಿತಿನಿಸು-ನೀರು ಇತ್ಯಾದಿಗಳನ್ನು (ರೇಶನ್) ತಲುಪಿಸಬಲ್ಲದು. ಅತ್ಯಂತ ಚಳಿಯ ಹವಾಮಾನದಲ್ಲಿ ಹಿಮಪಾತವಾಗುತ್ತಿರುವಾಗ ಯಾವಾಗ ಹೇಸರಗತ್ತೆ, ಒಂಟೆ ಅಥಾ ಸ್ವತಃ ಸೈನಿಕರು ಅಥವಾ ಹೆಲಿಕಾಪ್ಟರ್‌ಗಳೂ ಕೂಡ ಸೈನ್ಯಕ್ಕೆ ಸಾಮಗ್ರಿಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲವೋ, ಆಗ ಡ್ರೋನ್‌ಗಳನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಈ ಕ್ಷಮತೆಯನ್ನು ಭಾರತವು ಸಂಪಾದಿಸಿದೆ.

೬ ಇ. ಆಕ್ರಮಣದಲ್ಲಿ ನೈಪುಣ್ಯತೆಯನ್ನು ಹೊಂದಿರುವುದು : ಮದರ ಡ್ರೋನ್, ಅಂದರೆ ಒಂದು ದೊಡ್ಡ ಡ್ರೋನ್‌ನಿಂದ ಇತರ ೪-೫ ಡ್ರೋನ್‌ಗಳು ಹೊರಬರುತ್ತವೆ ಮತ್ತು ವಿವಿಧ ಗುರಿಗಳನ್ನು ಧ್ವಂಸಗೊಳಿಸುತ್ತವೆ. ಅವುಗಳ ಬಳಿ ಅವುಗಳ ರಡಾರ್, ಕ್ಯಾಮರಾ, ಶಸ್ತ್ರಾಸ್ತ್ರಗಳಿರುತ್ತವೆ. ಈ ಡ್ರೋನ್‌ಗಳು ಗಾಳಿಯಲ್ಲಿ ಸದ್ದಿಲ್ಲದೇ ಹಾರುತ್ತಿರುತ್ತವೆ ಮತ್ತು ಸೂಕ್ತ ಗುರಿ ಕಂಡ ಕೂಡಲೇ ಅವುಗಳನ್ನು ಸೆರೆಹಿಡಿಯುತ್ತವೆ. ಹೇಗೆ ಕಿವುಡು ಗಿಡುಗ ಪಕ್ಷಿಯು ಗಾಳಿಯಲ್ಲಿ ಹಾರಾಡುತ್ತಿದ್ದರೂ, ಅದರ ಗಮನವೆಲ್ಲ ಭೂಮಿಯ ಮೇಲೆಯೇ ಇರುತ್ತದೆ. ಅದಕ್ಕೆ ಭೂಮಿಯ ಮೇಲೆ ಒಳ್ಳೆಯ ಭಕ್ಷ್ಯ ಕಂಡಕೂಡಲೇ ಅದು ಆಕಸ್ಮಿಕವಾಗಿ ಕೆಳಗೆ ಬಂದು ಅದನ್ನು ಹಿಡಿದುಕೊಂಡು ಹಾರಿ ಹೋಗುತ್ತದೆ.

ಅದೇ ರೀತಿಯ ಕಾರ್ಯವನ್ನು ಈ ಭಾರತೀಯ ಡ್ರೋನ್‌ಗಳು ಮಾಡಬಲ್ಲವು. ಇಷ್ಟೇ ಅಲ್ಲ, ಒಂದು ಗುರಿಯ ಮೇಲೆ ಆಕ್ರಮಣವನ್ನು ಮಾಡಿ ಅದನ್ನು ನಾಶ ಮಾಡಿದ ಬಳಿಕ ಅದೇ ಸಮಯದಲ್ಲಿ ಬೇರೆ ಗುರಿ ಎದುರಿಗೆ ಬಂದರೆ ತಕ್ಷಣವೇ ಅದರ ಮೇಲೆಯೂ ಆಕ್ರಮಣ ಮಾಡಬಲ್ಲವು.

೭. ನೌಕಾದಳ ಮತ್ತು ವಾಯುದಳಇವುಗಳಿಂದ ಡ್ರೋನ್‌ಗಳ ಉಪಯೋಗ

೭ ಅ. ಈ ಡ್ರೋನ್‌ಗಳು ಸೈನ್ಯದಲ್ಲಿಯಂತೂ ಖಂಡಿತ ಉಪಯೋಗಆಗುವುದು, ಅಲ್ಲದೇ ಇತರ ಸ್ಥಳಗಳಲ್ಲಿಯೂ ಅವುಗಳ ಉಪಯೋಗವಾಗಬಹುದು. ಅನೇಕ ದುರ್ಗಮ ಸ್ಥಳಗಳಲ್ಲಿ ಗಸ್ತು ಹಾಕುವುದು ಸಾಧ್ಯವಾಗುವುದಿಲ್ಲ. ಅಂತಹ ಸ್ಥಳಗಳಲ್ಲಿ ಡ್ರೋನವನ್ನು ಉಪಯೋಗಿಸಬಹುದು. ಭಾರತದ ಸಮುದ್ರದಂಡೆ ೭ ಸಾವಿರದ ೬೦೦ ಕಿಲೋಮೀಟರ ಉದ್ದವಿದೆ. ಅಲ್ಲಿಯೂ ಡ್ರೋನ್‌ಗಳು ಉಪಯುಕ್ತವಾಗಿದೆ. ಈಗ ದೋಣಿ ಮತ್ತು ಹಡಗುಗಳ ಮೂಲಕ ಸಮುದ್ರದ ಸೀಮೆಗಳ ಮೇಲೆ ಗಸ್ತನ್ನು ಹಾಕಲಾಗುತ್ತದೆ. ಈ ಕೆಲಸವನ್ನು ಅಗ್ಗದ ಬೆಲೆಯ ಡ್ರೋನ್‌ಗಳ ಸಹಾಯದಿಂದ ಮಾಡಿದರೆ ಹಣದ ಉಳಿತಾಯವಾಗುತ್ತದೆ. ವಾಯುದಳದಲ್ಲಿಯೂ ಇದರ ಉಪಯೋಗವಾಗುವ ಸಾಧ್ಯತೆಯಿದೆ; ಮಾತ್ರ ಇದರ ಬಗ್ಗೆ ಸಂಶೋಧನೆ ಆಗಬೇಕು.

೭ ಆ. ಯುದ್ಧ ನಡೆಯುತ್ತಿರುವಾಗ ಶತ್ರುವಿನ ಬಂದರದಲ್ಲಿರುವ ವಿಮಾನನಿರೋಧಕ ವ್ಯವಸ್ಥೆಯನ್ನು ಅಥವಾ ರಡಾರ್‌ಗಳನ್ನು ಮೊದಲು ನಾಶ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅದರಿಂದ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಇಂತಹ ಸಮಯದಲ್ಲಿ ಡ್ರೋನ್‌ಗಳನ್ನು ಉಪಯೋಗಿಸಿ ಶತ್ರುವಿನ ಏರ್ ಡಿಫೆನ್ಸ್ ಸಿಸ್ಟಮ್, ಶತ್ರುಗಳ ಗಸ್ತು ಹಾಕುವ ವ್ಯವಸ್ಥೆ, ಕಮಾಂಡ್ ಕಂಟ್ರೋಲ್ ಸಿಸ್ಟಮ್ ಇವುಗಳನ್ನು ಮೊದಲು ನಾಶ ಮಾಡಬೇಕಾಗುತ್ತದೆ. ಇವುಗಳ ಮೇಲೆ ಸಂಶೋಧನೆ ನಡೆಯುತ್ತಿದೆ.

೭ ಇ. ಭಾರತದ ಬಳಿಯಿರುವ ಜಗ್ವಾರ ಯುದ್ಧ ವಿಮಾನದಲ್ಲಿ ೨೪ಚಿಕ್ಕ ಡ್ರೋನಗಳನ್ನು ಇಡುವವರಿದ್ದಾರೆ. ಅವುಗಳನ್ನು ಗಾಳಿಯಲ್ಲಿ ಬಿಟ್ಟಾಗ ಅವು ಶತ್ರುವಿನ ವಿವಿಧ ಸ್ಥಳಗಳ ಮೇಲೆ ಆಕ್ರಮಣಗಳನ್ನು ಮಾಡಬಲ್ಲವು. ಇದಕ್ಕಾಗಿ ಭಾರತೀಯ ವಾಯುದಳ ಹಿಂದೂಸ್ಥಾನ ಏರೋನಾಟಿಕ್ಸ್ ಲಿ. ಸಹಾಯವನ್ನು ಪಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಐ.ಐ.ಟಿ. ಪದವಿ ಪಡೆದಿರುವ ವಿದ್ಯಾರ್ಥಿಗಳು ಸ್ಟಾರ್ಟಅಪ್ ಕಂಪನಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಅವರು ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಐಐಟಿಯ ಪದವಿ ಪಡೆದವರನ್ನು ಜಗತ್ತಿನಲ್ಲಿ ತುಂಬಾ ಬುದ್ಧಿವಂತರೆಂದು ತಿಳಿಯಲಾಗುತ್ತದೆ. ಅವರ ಸ್ಟಾರ್ಟಅಪ್ ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೆ, ಅದು ದೇಶಕ್ಕೆ ಬಹಳ ಒಳ್ಳೆಯದಾಗಿದೆ.

೮. ಭಾರತವು ಅಲ್ಪ ಕಾಲದಲ್ಲಿ ಡ್ರೋನ್‌ಯುದ್ಧದ ಕ್ಷಮತೆಯನ್ನು ನಿರ್ಮಾಣಮಾಡಿರುವುದು ಹೆಮ್ಮೆಯ ವಿಷಯವಾಗಿದೆ!

ಭಾರತೀಯ ನೌಕಾದಳವು ತಟರಕ್ಷಣೆಗಾಗಿ ಡ್ರೋನ್‌ಗಳನ್ನು ಉಪಯೋಗಿಸುತ್ತಿದೆ. ಭಾರತದ ಅಂಡಮಾನ-ನಿಕೋಬಾರ, ಲಕ್ಷದ್ವೀಪಗಳಂತಹ ದ್ವೀಪಗಳ ಮೇಲೆ ಗಮನವಿಡಲು ಡ್ರೋನ್‌ಗಳನ್ನು ಉಪಯೋಗಿಸುವುದು ಪ್ರಾರಂಭವಾಗಿದೆ. ಭಾರತದ ಡ್ರೋನ್‌ಗಳ ಬೇಡಿಕೆ ಬಹಳ ದೊಡ್ಡದಾಗಿದೆ. ಈ ಬೇಡಿಕೆಯನ್ನು ಪೂರ್ಣಗೊಳಿಸಲು ಖಂಡಿತವಾಗಿಯೂ ಕಾಲಾವಕಾಶ ಬೇಕಾಗುವುದು. ಆದರೆ ಈ ಪ್ರವಾಸವು ಪ್ರಾರಂಭವಾಗಿದೆ. ಭಾರತದ ಡ್ರೋನ್ ಯುದ್ಧಮಾಡುವ ಕಾರ್ಯಕ್ಷಮತೆ ಬಹಳಷ್ಟಿದೆ. ಆರ್ಮಿ ಡೇಯ ದಿನದಂದು ತೋರಿಸಲಾಗಿರುವ ಪ್ರಾತ್ಯಕ್ಷಿಕೆಯಿಂದ ಭಾರತದ ಸುರಕ್ಷತೆಯು ಅಧಿಕ ಸುದೃಢವಾಗುತ್ತಿರುವುದು ಕಂಡು ಬಂದಿದೆ. ಇಷ್ಟು ಅಲ್ಪ ಕಾಲಾವಧಿಯಲ್ಲಿ ಈ ರೀತಿಯ ಕ್ಷಮತೆಯನ್ನು ನಿರ್ಮಾಣ ಮಾಡಿರುವ ವಿಷಯದಲ್ಲಿ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಬೇಕು.

– ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.