ಮುಂಬರುವ ಕಾಲದಲ್ಲಿ ೧ ಸಾವಿರ ವರ್ಷಗಳಿಗಾಗಿ ಸತ್ಯಯುಗದ ಆಗಮನವಾಗುವುದು !

ಮುಂಬರುವ ಕಾಲದ ಬಗ್ಗೆ ಮಥುರಾದ ಸಂತರಾದ ಬಾಬಾ ಜಯ ಗುರುದೇವ ಇವರ ಭವಿಷ್ಯವಾಣಿ !

ಸಂತ ಬಾಬಾ ಜಯ ಗುರುದೇವ

ಮಥುರಾದ ಸಂತರಾದ ಬಾಬಾ ಜಯ ಗುರುದೇವ ಇವರು ೨೦೧೨ ರಲ್ಲಿ ದೇಹ ತ್ಯಾಗ ಮಾಡಿದರು. ಉತ್ತರ ಭಾರತದಲ್ಲಿ ಅವರ ದೊಡ್ಡ ಭಕ್ತ ಪರಿವಾರವಿದೆ. ಅವರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಪ್ರವಚನಗಳನ್ನು ನೀಡುತ್ತಿದ್ದರು. ಮಥುರಾದಲ್ಲಿ ಅವರ ಜಯ ಗುರುದೇವ ನಾಮಯೋಗ ಸಾಧನಾ ಮಂದಿರ ಎಂಬ ಹೆಸರಿನ ಆಶ್ರಮವಿದೆ. ಅವರು ಸಂಪೂರ್ಣ ದೇಶದಲ್ಲಿ ತಿರುಗಾಡಿ ಜಯ ಗುರುದೇವ ಹೆಸರಿನ ಪ್ರಚಾರವನ್ನು ಮಾಡಿದರು. ಯುಟ್ಯೂಬ್‌ನಲ್ಲಿನ ಅವರ ಅನೇಕ ಪ್ರವಚನಗಳಲ್ಲಿ ಒಂದು ಪ್ರವಚನದಲ್ಲಿ ಅವರು ಆಪತ್ಕಾಲ ಮತ್ತು ಅದರ ನಂತರ ಬರುವ ಸತ್ಯಯುಗದ ಬಗ್ಗೆ ಮಾಹಿತಿಯನ್ನು ಹೇಳಿದ್ದಾರೆ. ಅದನ್ನು ಇಲ್ಲಿ ಲೇಖನದ ಸ್ವರೂಪದಲ್ಲಿ ನೀಡುತ್ತಿದ್ದೇವೆ.

ಕಲಿಯುಗದಲ್ಲಿ ಮನುಷ್ಯನು ಪಾಪ ಮತ್ತು ಅಧರ್ಮದ ಗಡಿಯನ್ನು ದಾಟಿ ವಿನಾಶದ ಮಾರ್ಗವನ್ನು ಶೋಧಿಸುವನು !

ಬಾಬಾ ಜಯ ಗುರುದೇವ ಇವರು ಹೇಳಿದುದೇನೆಂದರೆ ಕಲಿಯುಗಾಂತರ್ಗತ ಕಲಿಯುಗ ಬರಲಿದೆ. ಕಲಿಯುಗವು ಇನ್ನೂ ಮುಗಿದಿಲ್ಲ; ಆದರೆ ಮಧ್ಯದಲ್ಲಿ ೧ ಸಾವಿರ ವರ್ಷಗಳ ಸತ್ಯಯುಗ ಬರಲಿದೆ. ಈಗ ಕಲಿಯುಗವು ಪ್ರಾರಂಭವಾಗಿ ಕೇವಲ ೫ ಸಾವಿರದ ೫೦೦ ವರ್ಷಗಳ ಕಾಲಾವಧಿ ಮಾತ್ರ ಮುಗಿದಿದೆ, ಅಂದರೆ ಕಲಿಯುಗವು ಕೊನೆಗೊಳ್ಳಲು ಇನ್ನೂ ನಾಲ್ಕು ಕಾಲು ಲಕ್ಷಗಳಿಗಿಂತ ಹೆಚ್ಚು ವರ್ಷಗಳ ಕಾಲಾವಧಿ ಬಾಕಿಯಿದೆ; ಆದರೆ ಈ ಕಡಿಮೆ ಕಾಲಾವಧಿಯಲ್ಲಿಯೇ ಮನುಷ್ಯನು ಪಾಪ ಮತ್ತು ಅಧರ್ಮದ ಸೀಮೆಯನ್ನು ದಾಟಿ ತನ್ನ ವಿನಾಶದ ಮಾರ್ಗವನ್ನು ಕಂಡು ಹಿಡಿದಿದ್ದಾನೆ. ಪಾಪ ಮತ್ತು ಅಧರ್ಮದ ಪ್ರಮಾಣವು ಕಲಿಯುಗದ ಕೊನೆಯ ಹಂತದಲ್ಲಿ ಎಷ್ಟು ಇರಬೇಕಾಗಿತ್ತೋ,  ಅದನ್ನು ಮನುಷ್ಯನು ಈಗಲೇ ನಿರ್ಮಾಣ ಮಾಡಿದ್ದಾನೆ.

ಮುಂದೆ ಎಂತಹ ರೋಗಗಳು ಬರುತ್ತವೆ ಎಂದರೆ, ಆಧುನಿಕ ವೈದ್ಯರಿಗೂ ಅವುಗಳಿಗೆ ಪರಿಹಾರ ಕೊಡಲಾಗುವುದಿಲ್ಲ !

ಸಂಪೂರ್ಣ ವಿಶ್ವದಲ್ಲಿ ಮಳೆಯ ಅಭಾವದಿಂದ ನದಿ ಮತ್ತು ಝರಿಗಳು ಒಣಗಿ ಹೋಗುವವು. ನದಿ, ಸರೋವರ, ಝರಿಗಳಲ್ಲಿ ಸ್ವಲ್ಪವೂ ನೀರು ಉಳಿಯುವುದಿಲ್ಲ. ಇದರಿಂದ ವಿದ್ಯುತ್ ತಯಾರಿಸಲು ಸಾಧ್ಯವಾಗುವುದಿಲ್ಲ. ಕಾರ್ಖಾನೆಗಳು ಮುಚ್ಚುವವು, ಕೆಲಸಗಳು ಮುಚ್ಚಲ್ಪಡುವುದು, ನೀರಿನ ಮಟ್ಟವು ಕೆಳಗೆ ಹೋಗುವುದು. ಆದ್ದರಿಂದ ರೈತರಿಗೆ ಕೃಷಿಗಾಗಿ ನೀರು ಸಿಗಲಾರದು. ನೀರಿನ ಅಭಾವದಿಂದ ರೈತರಿಗೆ ಧಾನ್ಯಗಳನ್ನು ಬೆಳೆಯಲು ಅಡಚಣೆಗಳು ಬರುವವು. ಸದ್ಯ ನಿಮಗೆ ಹೊಟ್ಟೆ ತುಂಬಾ ಆಹಾರ ಸಿಗುತ್ತಿದೆ. ಆದ್ದರಿಂದ ನೀವು ಕೇಳುವುದಿಲ್ಲ. ಯಾವಾಗ ರೈತರಿಗೆ ಹೊಲದಲ್ಲಿ ಧಾನ್ಯಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲವೋ, ಆಗ ನಿಮ್ಮಲ್ಲಿರುವ ಹಣ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಭೀಕರ ಹಸಿವಿನಿಂದ ಅನೇಕ ಜನರು ಸಾಯುವರು. ಸಂಪೂರ್ಣ ವಿಶ್ವದಲ್ಲಿ ಹಾಹಾಕಾರ ಏಳುವುದು. ಒಂದು ಸಮಯ ಹೇಗೆ ಬರುವುದೆಂದರೆ, ಕಳ್ಳರು ನಿಮ್ಮ ಹಣ ಅಥವಾ ಬಂಗಾರವನ್ನಲ್ಲ, ಧಾನ್ಯಗಳ ಕಳ್ಳತನ ಮಾಡುವರು. ಧಾನ್ಯಗಳನ್ನು ಕದಿಯಲು ಜನರು ಪರಸ್ಪರರ ಹತ್ಯೆಯನ್ನು ಮಾಡುವರು, ರೋಗರುಜಿನಗಳು ಹರಡುವವು. ಇವೆಲ್ಲವುಗಳು ನೀವೇ ಮಾಡಿದ ಪಾಪಗಳ ಫಲವಾಗಿರಲಿವೆ. ಮುಂದೆ ಎಂತಹ ರೋಗಗಳು ಬರುವವೆಂದರೆ, ಆಧುನಿಕ ವೈದ್ಯರಿಗೂ ರೋಗಕ್ಕೆ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ.

ಮುಂಬರುವ ಕಠಿಣ ಕಾಲದಲ್ಲಿ ಗುರುಕೃಪೆ, ಸತ್ಸಂಗ ಮತ್ತು ಸೇವೆ ಇವುಗಳ ಆಧಾರದಿಂದಲೇ ಮನುಷ್ಯನ ರಕ್ಷಣೆಯಾಗುವುದು !

ಮಾಂಸಾಹಾರ, ಗೋಹತ್ಯೆ, ಮದ್ಯಪಾನ, ಭ್ರಷ್ಟಾಚಾರ, ವ್ಯಭಿಚಾರ, ಅನಾಚಾರ, ದುರಾಚಾರಗಳನ್ನು ಬಿಡುವುದು ಆವಶ್ಯಕವಾಗಿದೆ, ಇಲ್ಲದಿದ್ದರೆ ವಿನಾಶ ನಿಶ್ಚಿತವಾಗಿದೆ. ನಾವು ಯಾವುದರ ಕಲ್ಪನೆಯನ್ನು ಸಹ ಮಾಡಿರಲಿಕ್ಕಿಲ್ಲವೋ, ಅಂತಹ ಬಹಳ ದೊಡ್ಡ ಪ್ರಮಾಣದಲ್ಲಿ ಭೂಕಂಪಗಳು ಆಗಲಿವೆ. ಯಾವಾಗ ಪಾಪಗಳ ಪ್ರಮಾಣವು ಬಹಳ ಹೆಚ್ಚಾಗುತ್ತದೆಯೋ, ಆಗ ನಿಸರ್ಗವು ಅಪ್ರಸನ್ನವಾಗಿ ಹಾಹಾಕಾರವೇಳುತ್ತದೆ. ಕೆಲವು ಮಹಾತ್ಮರು ಈ ಪರಿಸ್ಥಿತಿಯನ್ನು ತಡೆಹಿಡಿದಿದ್ದಾರೆ; ಆದರೆ ಸಮಯವು ಕಡಿಮೆ ಉಳಿದಿದೆ. ಪರಿವರ್ತನೆಯ ದಿನಗಳು ಹತ್ತಿರ ಬಂದಿವೆ. ಯಾರು ಮಹಾತ್ಮರ ಅಥವಾ ಸಂತರ ಮಾತುಗಳನ್ನು ಕೇಳುವುದಿಲ್ಲವೋ, ಅವರ ಸ್ಥಿತಿಯು  ಕಲಿಯುಗ ಮತ್ತು ಸತ್ಯಯುಗದ ನಡುವಿನ ಬೀಸುಕಲ್ಲಿನಲ್ಲಿ ಸಿಕ್ಕ ಧಾನ್ಯದಂತೆ ಒಡೆದು ನುಚ್ಚು ನೂರಾಗುವುದು (ತುಂಬಾ ತೊಂದರೆಗಳಲ್ಲಿ ಸಿಲುಕುವರು). ಯಾರು ಧರ್ಮದೊಂದಿಗೆ ಏಕನಿಷ್ಠರು, ಅವರೇ ಇದರಲ್ಲಿ ಉಳಿಯುವರು. ಅಮೇರಿಕಾ, ಚೀನಾ, ಇಂಗ್ಲಂಡ್, ಭಾರತ, ಅರಬ್ ದೇಶಗಳಿಗೆ ಅಳುವ ಪ್ರಸಂಗ ಬರುವುದು (ತುಂಬಾ ದುಃಖಗಳು ಬರುವವು).  ಮುಂಬರುವ ಕಾಲದಲ್ಲಿ ಜೀವಂತವಾಗಿರಲು ಗುರುಕೃಪೆ, ಸತ್ಸಂಗ ಮತ್ತು ಸೇವೆಯ ಆಧಾರ ಪಡೆಯುವುದು ಆವಶ್ಯಕವಾಗಿದೆ. ಈಗಲೇ ಸಮಯವಿದೆ. ಶುದ್ಧ ಶಾಕಾಹಾರಿಯಾಗಿರಿ. ಮಾಂಸಾಹಾರವನ್ನು ಮಾಡಬೇಡಿರಿ. ಧರ್ಮದ ಮಾರ್ಗದಲ್ಲಿ ನಡೆಯಿರಿ, ಮಹಾತ್ಮರು ಹೇಳಿದಂತೆ ಆಚರಣೆಯನ್ನು ಮಾಡಿರಿ. ಪುನಃ ಅವಕಾಶ ಸಿಗಲಾರದು ಇಲ್ಲವಾದರೆ ನಿಮ್ಮ ವಿನಾಶ ನಿಶ್ಚಿತವಾಗಿದೆ.

ಕಲಿಯುಗದಲ್ಲಿ ವಿಶ್ವಯುದ್ಧವು ಕೇವಲ ೧೮ ನಿಮಿಷಗಳದ್ದಾಗಬಹುದು !

ಅಧರ್ಮದ ನಾಶಕ್ಕಾಗಿ ಪುನಃ ಮಹಾಭಾರತವಾಗಲಿದೆ. ಈ ವಿನಾಶದಲ್ಲಿ ಒಂದೇ ಬಾರಿಗೆ ಕೋಟ್ಯಾವದಿ ಜನರು ಸಾಯಬಹುದು. ಮೊದಲು ಸಂಪೂರ್ಣ ವಿಶ್ವವು ಆರ್ಥಿಕ ಸಂಕಟದಲ್ಲಿ ಸಿಲುಕುವುದು, ಧಾನ್ಯಗಳ ಕೊರತೆಯಿಂದ ಹಾಹಾಕಾರವೇಳುವುದು. ಎಲ್ಲ ದೇಶಗಳು ಪರಸ್ಪರರ ವಿರೋಧ ಮಾಡುವವು. ಅನೇಕ ದೇಶಗಳು ಯುದ್ಧಕ್ಕಾಗಿ ವಿಧ್ವಂಸಕ ಉಪಕರಣಗಳ ಸಿದ್ಧತೆಯನ್ನು ಮಾಡಿವೆ. ಸಾವಿರಾರು ಮೈಲು ದೂರದಿಂದ ಕ್ಷೇಪಣಾಸ್ತ್ರವು ಬಂದು ಯಾವ ದೇಶದ ಮೇಲೆ ಬೀಳುವುದೋ, ಆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿನಾಶವಾಗಲಿದೆ. ಈ ವಿಧ್ವಂಸವು ಎಷ್ಟು ತೀವ್ರವಾಗಿರುವುದೆಂದರೆ, ರಾತ್ರಿ ಮಲಗುವಾಗಿನ ದೃಶ್ಯ ಬೇರೆ ಇರುವುದು ಮತ್ತು ಬೆಳಗ್ಗೆ ಎಚ್ಚರವಾದಾಗ ಪೂರ್ತಿ ದೃಶ್ಯವೇ ಬದಲಾಗಿರುವುದು. ದ್ವಾಪರಯುಗದ ಮಹಾಭಾರತದ ಯುದ್ಧವು ೧೮ ದಿನಗಳದ್ದಾಗಿತ್ತು, ಕಲಿಯುಗದಲ್ಲಿನ ಯುದ್ಧವು ಕೇವಲ ೧೮ ನಿಮಿಷಗಳದ್ದಾಗಬಹುದು; ಆದರೆ ಆ ೧೮ ನಿಮಿಷಗಳಲ್ಲಿ ಬಹಳ ನರಸಂಹಾರವಾಗುವುದು. ಬಹಳಷ್ಟು ಅಕಾಲ ಮೃತ್ಯುಗಳಾಗುವವು. ಸಾಧು-ಸಂತರಿಗೆ (ಮಹಾತ್ಮರಿಗೆ) ನಿಮ್ಮ ರಕ್ಷಣೆಯನ್ನು ಮಾಡಬೇಕೆಂದೆನಿಸುತ್ತದೆ; ಆದರೆ ನೀವು ಅವರ ಸಂಪರ್ಕಕ್ಕೆ ಬರುವುದಿಲ್ಲ.