ಸಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಏಕತೆಗಾಗಿ ಸಮಾನ ನಾಗರಿಕ ಸಂಹಿತೆ ಅಗತ್ಯ ! – ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್

ಸಮಾಜದ ಕೆಲವು ವರ್ಗಗಳು ಈ ಕಾನೂನನ್ನು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಟೀಕಿಸಿದರು !

ಸೂರತ್ (ಗುಜರಾತ್) – ಸಮಾನ ನಾಗರಿಕ ಸಂಹಿತೆಯನ್ನು ನಾನು ಬಹಳ ಪ್ರಗತಿಪರ ಕಾನೂನು ಎಂದು ನೋಡುತ್ತೇನೆ. ಈ ಕಾನೂನು ವಿವಿಧ ಸಂಪ್ರದಾಯಗಳ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಈ ಕಾನೂನು ಜಾರಿಗೆ ಬಂದರೆ, ಎಲ್ಲಾ ನಾಗರಿಕರಿಗೂ, ಅವರ ಧರ್ಮ ಏನೇ ಇರಲಿ, ಏಕರೂಪದ ವೈಯಕ್ತಿಕ ಕಾನೂನು ಇರುತ್ತದೆ. ಇದು ವಿವಾಹ, ವಿಚ್ಛೇದನ, ದತ್ತು, ಆನುವಂಶಿಕತೆ ಮತ್ತು ನಿರ್ವಹಣೆ ಇತ್ಯಾದಿ ವಿಷಯಗಳಿಗೆ ಅನ್ವಯಿಸುತ್ತದೆ. ಸಮಾನ ನಾಗರಿಕ ಸಂಹಿತೆ ಒಂದು ಸಂವಿಧಾನಾತ್ಮಕ ಉದ್ದೇಶವಾಗಿದೆ ಮತ್ತು ಸಂವಿಧಾನದ ಆರ್ಟಿಕಲ್ ೪೪ ರಲ್ಲಿ ಇದರ ಉಲ್ಲೇಖವಿದೆ. ಆದ್ದರಿಂದ ಇದರ ಮೇಲೆ ಯಾವುದೇ ವಿವಾದವಿಲ್ಲ. ನಾವು ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿರಬೇಕು. ಸಾಮಾಜಿಕ ನ್ಯಾಯವನ್ನು ಸಾಧಿಸಲು ಮತ್ತು ರಾಷ್ಟ್ರೀಯ ಏಕತೆಯತ್ತ ಹೆಜ್ಜೆ ಇಡಲು ಈ ಕಾನೂನನ್ನು ಜಾರಿಗೊಳಿಸುವುದು ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಈಗ ರಾಜ್ಯಸಭೆಯ ಸದಸ್ಯರಾದ ರಂಜನ್ ಗೊಗೊಯ್ ಇವರು ಈ ಕಾನೂನಿಗೆ ಬೆಂಬಲ ಸೂಚಿಸಿದರು. ಅವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮಾಜಿ ಮುಖ್ಯ ನ್ಯಾಯಮೂರ್ತಿ ಗೊಗೊಯ್ ಅವರು ಮಂಡಿಸಿದ ಅಂಶಗಳು

೧. ಗೋವಾದಲ್ಲಿನ ಸಮಾನ ನಾಗರಿಕ ಸಂಹಿತೆಯು ಧರ್ಮಕ್ಕೆ ಸಂಬಂಧಿಸಿಲ್ಲ

ಗೋವಾದಲ್ಲಿ ಸಮಾನ ನಾಗರಿಕ ಸಂಹಿತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಈ ಕಾನೂನು ಧರ್ಮಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಈ ಕಾನೂನಿನ ಸಂಬಂಧದಲ್ಲಿ ತಪ್ಪಾದ ಮಾಹಿತಿಯನ್ನು ತಡೆಯುವ ಅಗತ್ಯವಿದೆ.

೨. ಸುಪ್ರೀಂ ಕೋರ್ಟ್‌ನ ಸೂಚನೆ

ಸುಪ್ರೀಂ ಕೋರ್ಟ್ ಶಾಹ ಬಾನೋ ಪ್ರಕರಣದಿಂದ ಮುಸ್ಲಿಂ ಮಹಿಳೆಯರ ಜೀವನಾಂಶಕ್ಕೆ ಸಂಬಂಧಿಸಿದ ೫ ಪ್ರಕರಣಗಳಲ್ಲಿ ‘ಸರಕಾರವು ಸಮಾನ ನಾಗರಿಕ ಸಂಹಿತೆಯನ್ನು ಪರಿಗಣಿಸಬೇಕು’ ಎಂದು ಹೇಳಿದೆ.

೩. ಸಮಾನ ನಾಗರಿಕ ಸಂಹಿತೆಯು ದೇಶವನ್ನು ಒಗ್ಗೂಡಿಸುವ ಮತ್ತು ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಬೀರುವ ನಾಗರಿಕ ಮತ್ತು ವೈಯಕ್ತಿಕ ವಿಷಯಗಳ ಮೇಲೆ ನಿಯಂತ್ರಣವನ್ನು ಹೊಂದಿರುವ ವಿವಿಧ ಕಾನೂನುಗಳಿಂದ ಉಂಟಾದ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸುವ ಮಾರ್ಗವಾಗಿದೆ.

೪. ಸರಕಾರ ಆತುರಪಡಬಾರದು, ಒಮ್ಮತ ಸೃಷ್ಟಿಸಬೇಕು

ನಾನು ಸರಕಾರ ಮತ್ತು ಸಂಸದರಿಗೆ ವಿನಂತಿ ಮಾಡುತ್ತೇನೆ, ಅವರು ಆತುರಪಡಬಾರದು. ಈ ಕಾನೂನಿನ ಸಂಬಂಧದಲ್ಲಿ ಒಮ್ಮತವನ್ನು ಸೃಷ್ಟಿಸಿ. ಈ ದೇಶದ ಜನರಿಗೆ ಈ ಕಾನೂನು ನಿಖರವಾಗಿ ಏನು ಎಂದು ಹೇಳಿ. ಒಮ್ಮೆ ನೀವು ಒಮ್ಮತವನ್ನು ಸೃಷ್ಟಿಸಿದರೆ, ಜನರಿಗೆ ಅರ್ಥವಾಗುತ್ತದೆ. ಸಮಾಜದ ಒಂದು ವರ್ಗ ಈ ಕಾನೂನನ್ನು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಅರ್ಥ ಮಾಡಿಕೊಳ್ಳದಂತೆ ನಟಿಸುತ್ತಾರೆ.