ಭಾರತದ ಮುತ್ಸದ್ದಿತನದ ಪ್ರಭಾವ : ನೇಪಾಳ ಪುನಃ ಭಾರತದ ಪರ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ನೇಪಾಳಿ ಸರಕಾರದ ಭಾರತವಿರೋಧಿ ನಡೆ

೧ ಅ. ನೇಪಾಳವು ವಿವಾದಿತ ನಕಾಶೆಯನ್ನು ಶಾಲೆಯ ಪಠ್ಯಕ್ರಮದಲ್ಲಿ ಸೇರಿಸುವುದು : ಭಾರತವು ಲಿಪು ಲೇಖದಿಂದ ಹಾದು ಹೋಗುವ ಕೈಲಾಸ ಮಾನಸ ಸರೋವರ ‘ಲಿಂಕ್ ರೋಡ್ ನ ಉದ್ಘಾಟನೆ ಮಾಡಿತು. ಅದಕ್ಕೆ ತಕ್ಷಣವೇ ನೇಪಾಳ ಆಕ್ಷೇಪವನ್ನು ವ್ಯಕ್ತಪಡಿಸಿತು. ನೇಪಾಳವು ಭಾರತಕ್ಕೆ ಯುದ್ಧದ ದೃಷ್ಟಿಯಿಂದ ಮಹತ್ವದ್ದಾಗಿರುವ ಕಾಲಾಪಾನಿ, ಲಿಪುಲೇಖ ಮತ್ತು ಲಿಂಪಿಯಾಧುರಾ ಈ ಸಂಪೂರ್ಣ ೩೫ ಕಿಲೋಮೀಟರ್ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳಿತು. ತದನಂತರ ನೇಪಾಳವು ವಿವಾದಿತ ನಕಾಶೆಯನ್ನು ಶಾಲೆಯ ಪಠ್ಯಕ್ರಮದಲ್ಲಿ ಸೇರಿಸಿತು. ಹಾಗೆಯೇ ಹೊಸ ನಕಾಶೆಯನ್ನು ತನ್ನ ದೇಶದ ಒಂದು ಮತ್ತು ಎರಡು ರೂಪಾಯಿಗಳ ನಾಣ್ಯಗಳ ಮೇಲೆಯೂ ಮುದ್ರಿಸುವ ನಿರ್ಣಯವನ್ನು ತೆಗೆದುಕೊಂಡಿತು. ‘ಲಿಂಪಿಯಾಧುರಾ, ಲಿಪುಲೇಖ ಮತ್ತು ಕಾಲಾಪಾನಿ ಇವು ನೇಪಾಳದ ಭಾಗವಾಗಿದ್ದು, ಭಾರತವು ಈ ೫೪೨ ಚ.ಕಿ.ಮೀ ಕ್ಷೇತ್ರದ ಮೇಲೆ ನಿಯಂತ್ರಣವನ್ನು ಪಡೆದಿದೆ ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ.

೧ ಆ. ನೇಪಾಳ ಸರಕಾರವು ಭಾರತೀಯ ಸುದ್ಧಿವಾಹಿನಿಗಳನ್ನು ನಿಷೇಧಿಸುವುದು : ಇಲ್ಲಿಯವರೆಗೆ ಅತ್ಯುತ್ತಮ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಬಂಧವಿರುವ ನೇಪಾಳವು ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಹಾಗೂ ಚೀನಾ ದೇಶದ ಒತ್ತಡದಿಂದ ಗಡಿ ಪ್ರಶ್ನೆಯ ಮೇಲೆ ಭಾರತದೊಂದಿಗೆ ವಾದ ಮಾಡತೊಡಗಿತು. ನೇಪಾಳ ಮತ್ತು ಭಾರತದ ಸಂಬಂಧದಲ್ಲಿ ಉದ್ಭವಿಸಿರುವ ಉದ್ವಿಗ್ನತೆಯ ಬಳಿಕ ನೇಪಾಳ ಸರಕಾರವು ಭಾರತೀಯ ಸುದ್ಧಿವಾಹಿನಿಗಳನ್ನು ನಿಷೇಧಿಸಿತು. ಭಾರತೀಯ ಸುದ್ಧಿವಾಹಿನಿಗಳು ನೇಪಾಳ ಸರಕಾರ ಮತ್ತು ನೇಪಾಳದ ಪ್ರಧಾನಮಂತ್ರಿಗಳ ಮಾನಹಾನಿ ಮಾಡುತ್ತಿದೆ ಎನ್ನುವುದು ಅವರ ಆರೋಪವಾಗಿತ್ತು.

೧ ಇ. ಚೀನಾದ ನುಸುಳುವಿಕೆ ವಿರುದ್ಧ ಚಕಾರ ಎತ್ತದಿರುವುದು : ನೇಪಾಳಿನ ರುಯಿ ಎಂಬ ಊರಿನ ಮೇಲೆ ಕಳೆದ ೩ ವರ್ಷಗಳಿಂದ ಚೀನಾ ಅನಧಿಕೃತವಾಗಿ ನಿಯಂತ್ರಣವನ್ನು ಹೊಂದಿರುವುದು ಇತ್ತೀಚೆಗಷ್ಟೇ ಬಯಲಾಗಿದೆ; ಆದರೆ ಕಾಲಾಪಾನಿ, ಲಿಪುಲೇಖ ಮತ್ತು ಲಿಂಪಿಯಾಧುರಾ ಈ ಪ್ರದೇಶಗಳ ಕುರಿತು ಭಾರತ ವಿರೋಧಿ ನಿರ್ಣಯವನ್ನು ತೆಗೆದುಕೊಳ್ಳುವ ನೇಪಾಳದ ಕೆ.ಪಿ. ಶರ್ಮಾ ಓಲಿ ಸರಕಾರವು ಚೀನಾದ ನುಸುಳುವಿಕೆಯ ವಿರುದ್ಧ ಚಕಾರವನ್ನು ಎತ್ತಲಿಲ್ಲ. ಭಾರತದ ವಿರುದ್ಧ ನಿರಂತರವಾಗಿ ಬಡಬಡಾಯಿಸುವ ನೇಪಾಳಿ ಕಮ್ಯುನಿಸ್ಟ್ ಪಾರ್ಟಿಯೂ ದೇಶದ ಅನಧಿಕೃತ ಭೂಮಿಯನ್ನು ಚೀನಾ ಕಬಳಿಸುವುದನ್ನು ವಿರೋಧಿಸುವ ಬದಲಾಗಿ ಮೌನವಹಿಸಿತು. ನೇಪಾಳಿ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ಧಿಗನುಸಾರ ಚೀನಾ ಇತರ ೧೧ ಪ್ರದೇಶಗಳಲ್ಲಿಯೂ ನುಸುಳಿದೆ.

೧ ಈ. ನೇಪಾಳದ ವಿದೇಶಾಂಗ ಸಚಿವಾಲಯದ ಭಾರತವಿರೋಧಿ ಹೇಳಿಕೆ : ನೇಪಾಳದ ಕೃಷಿ ಸಚಿವಾಲಯದ ವರದಿಗನುಸಾರ ನೇಪಾಳದ ಡೋಲಖಾ, ಗೋರಖಾ, ಧಾರಚುಲಾ, ಹುಮಲಾ, ಸಿಂಧಪಾಲ ಚೌಕ, ಸಂಖುಆಸಭಾ ಮತ್ತು ರಸುಆ ಇವುಗಳಲ್ಲಿ ೭ ಜಿಲ್ಲೆಗಳ ಮೇಲೆ ಇಲ್ಲಿಯವರೆಗೆ ಚೀನಾ ತನ್ನ ಹಕ್ಕನ್ನು ಸಾಧಿಸಿದೆ. ಈ ಭಾಗದಲ್ಲಿ ಮೊದಲಿನ ನೇಪಾಳಿ ಊರುಗಳು ಈಗ ಚೀನಾದಲ್ಲಿ ಸೇರ್ಪಡೆಯಾಗಿವೆ. ಈ ಪ್ರದೇಶದಲ್ಲಿ ಚೀನಾ ರಸ್ತೆಗಳನ್ನು ನಿರ್ಮಾಣ ಮಾಡುವುದರೊಂದಿಗೆ, ಇತರೆ ನಿರ್ಮಾಣ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಿದೆ. ‘ಚೀನಾ ತನ್ನ ವಶಕ್ಕೆ ಪಡೆದಿರುವ ಭೂಭಾಗವನ್ನು ತಕ್ಷಣವೇ ಹಿಂಪಡೆಯಬೇಕು ಎನ್ನುವ ನಿರ್ಣಯವನ್ನು ನೇಪಾಳದ ಸಂಸತ್ತಿನಲ್ಲಿ ಕಳೆದ ವರ್ಷ ವಿರೋಧ ಪಕ್ಷದವರು ಮಂಡಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಯಿತು. ಬದಲಾಗಿ ‘ಭಾರತದೊಂದಿಗೆ ನೇಪಾಳದ ಗಡಿ ವಿವಾದವಿದೆ, ಎಂದು ನೇಪಾಳದ ವಿದೇಶಾಂಗ ಸಚಿವರು ಹೇಳಿದರು.

೨. ನೇಪಾಳದ ಕಮ್ಯುನಿಸ್ಟ್ ಪಕ್ಷವು ಚೀನಾ ದೇಶದ ಗುಲಾಮ !

ಚೀನಾದ ಬೆನ್ನುಬಿದ್ದು ಭಾರತವನ್ನು ಎದುರು ಹಾಕಿಕೊಳ್ಳುತ್ತಿರುವ ನೇಪಾಳಿನ ಪ್ರಧಾನಮಂತ್ರಿಗಳಾಗಿದ್ದ ಕೆ.ಪಿ. ಶರ್ಮಾ ಓಲಿ ಚೀನಾದ ಅಡಿಯಾಳಂತೆ ವರ್ತಿಸುತ್ತಿದ್ದಾರೆ. ನೇಪಾಳಿನ ಕಮ್ಯುನಿಸ್ಟ್ ಪಕ್ಷವು ಚೀನಾ ಕಮ್ಯುನಿಸ್ಟ್ ಪಕ್ಷದ ಸಂಪೂರ್ಣ ಗುಲಾಮವಾಗಿದೆ. ಆದುದರಿಂದ ‘ಚೀನಾ ಹೇಳಿದ್ದೇ ವೇದವಾಕ್ಯ, ಎನ್ನುವಂತೆ ಸದ್ಯದ ನೇಪಾಳಿನ ನಿಲುವಾಗಿದೆ. ಲಿಪಿಲೇಖ-ಕಾಲಾಪಾನಿ ಪ್ರಕರಣವನ್ನೂ ಓಲಿಯವರು ಚೀನಾದ ಚಿತಾವಣೆಯ ಕಾರಣದಿಂದಲೇ ವಿವಾದಿತಗೊಳಿಸಿದ್ದರು. ಈ ಮೂಲಕ ‘ಭಾರತ ವಿಸ್ತಾರವಾದಿಯಾಗಿದ್ದು ಕ್ರಮೇಣ ನೇಪಾಳದ ಭೂಮಿಯನ್ನು ಕಬಳಿಸುತ್ತಿದೆ, ಎನ್ನುವುದನ್ನು ಚೀನಾಕ್ಕೆ ತೋರಿಸಬೇಕಾಗಿತ್ತು.

೩. ಚೀನಾ ನೇಪಾಳಿನ ದೊಡ್ಡ ದೊಡ್ಡ ಮುಖಂಡರನ್ನು ಭ್ರಷ್ಟರನ್ನಾಗಿಸಿ ನೇಪಾಳಿನ ಮೇಲೆ ತನ್ನ ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸುವುದು

ಕಳೆದ ಕೆಲವು ತಿಂಗಳುಗಳಿಂದ ನೇಪಾಳದ ಚೀನಾ ನಿಲುವಿನಿಂದಾಗಿ ಭಾರತ-ನೇಪಾಳ ನಡುವಿನ ಸಂಬಂಧವು ತೀರಾ ಹದಗೆಟ್ಟಿತ್ತು. ಆರ್ಥಿಕ ದೃಷ್ಟಿಯಿಂದ ಸುದೃಢವಾಗಿಲ್ಲದ ನೇಪಾಳಿನಲ್ಲಿ ಚೀನಾ ಅನೇಕ ದೊಡ್ಡ ಮುಖಂಡರನ್ನು ಭ್ರಷ್ಟರನ್ನಾಗಿಸಿತು. ಕಾಠ್ಮಂಡುವಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳನ್ನು ಚೀನಾ ತನ್ನ ಇಶಾರೆಯ ಮೇಲೆ ಕುಣಿಸುತ್ತದೆ. ಚೀನಾ ರಾಯಭಾರಿ ಕಚೇರಿಯು ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು ಮತ್ತು ಪ್ರಧಾನಮಂತ್ರಿ ಓಲಿಯವರ ವಿದೇಶನೀತಿ ಸಲಹೆಗಾರರಾಗಿರುವ ವ್ಯಕ್ತಿಗೆ ನೇಪಾಳ-ಭಾರತ ಸಂಬಂಧದ ಮೇಲೆ ಸಂಶೋಧನೆಯ ವರದಿಯನ್ನು ಸಿದ್ಧಪಡಿಸಲು ೧೫ ಲಕ್ಷ ನೇಪಾಳಿ ರೂಪಾಯಿಗಳ ಕರಾರು ಮಾಡಿಕೊಂಡಿದ್ದರು. ನೇಪಾಳಿನ ರಾಜಕೀಯ ಅವ್ಯವಸ್ಥೆಯ ಪರಿಸ್ಥಿತಿಯ ಮೇಲೆ ‘ಗ್ಲೋಬಲ್ವಾಚ್ ಅನಾಲಿಸಿಸ್ವು ಇತ್ತೀಚೆಗಷ್ಟೇ ಒಂದು ಸವಿಸ್ತಾರ ವರದಿಯನ್ನು ಪ್ರಕಟಿಸಿದೆ. ಈ ವರದಿಯ ನಿರೀಕ್ಷಣೆ ಮತ್ತು ನಿಷ್ಕರ್ಷವು ‘ನೇಪಾಳ ಮತ್ತೊಂದು ಟಿಬೇಟ ಆಗುವ ಮಾರ್ಗದಲ್ಲಿದೆ ಎಂದು ತೋರಿಸುತ್ತದೆ. ಈ ವರದಿಯ ಲೇಖಕ ರ‍್ವಾಲೆಂಡ್ ಜಾಕ್ವಾರ್ಡ ಇವರ ಅಭಿಪ್ರಾಯದಂತೆ ಆರ್ಥಿಕ ದೃಷ್ಟಿಯಿಂದ ದುರ್ಬಲವಾಗಿರುವ ದೇಶಗಳನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಚೀನಾ ಆ ದೇಶದ ದೊಡ್ಡ ಮುಖಂಡರನ್ನು ಭ್ರಷ್ಟರನ್ನಾಗಿಸುತ್ತದೆ. ಹಠಾತ್ತಾಗಿ ತನ್ನ ವಿದೇಶ ನೀತಿಯನ್ನು ಬದಲಾಯಿಸುವ ನೇಪಾಳಿನ ನಡೆಯೂ ಅದೇ ದಿಶೆಯಲ್ಲಿ ಮುಂದುವರಿದಿದೆ. ಇದರಿಂದ ಜಾಕ್ವಾರ್ಡ ಇವರ ಅಭಿಪ್ರಾಯವೇನೆಂದರೆ, ಎಷ್ಟೋ ಅಧಿಕಾರಿಗಳನ್ನು, ಮುಖಂಡರನ್ನು, ನೇಪಾಳ ಕಮ್ಯುನಿಸ್ಟ್ ಪಕ್ಷದ ಸದಸ್ಯರನ್ನು ಚೀನಾ ವಿವಿಧ ಆಮಿಷಗಳನ್ನು ತೋರಿಸಿ ಅವರನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದೆ. ನೇಪಾಳಿ ಕಮ್ಯುನಿಸ್ಟ್ ಪಕ್ಷ ಮತ್ತು ಪರ್ಯಾಯವಾಗಿ ನೇಪಾಳದ ಅಧಿಕಾರವೂ ಕ್ರಮೇಣ ಚೀನಾದ ಕೈಗೆ ಜಾರುತ್ತಿದೆ. ನೇಪಾಳದಂತಹ ಚಿಕ್ಕ ದೇಶಕ್ಕೆ ಚೀನಾ ಸಾಲದ ರೂಪದಲ್ಲಿ ಸಹಾಯ ಮಾಡುತ್ತದೆ. ಆ ಸಾಲದ ಬದಲಾಗಿ ಚೀನಾ ನೇಪಾಳದಲ್ಲಿ ತನ್ನ ಕೈ-ಕಾಲು ಚಾಚುತ್ತಿದೆ.

೪.‘ರಾ ಮುಖ್ಯಸ್ಥರ ನೇಪಾಳ ಪ್ರವಾಸದ ಬಳಿಕ ನೇಪಾಳದ ನೀತಿಯಲ್ಲಿ ಬದಲಾವಣೆಯಾಗುವುದು ಮತ್ತು ನೇಪಾಳವು ಭಾರತದ ಸೇನಾಧಿಕಾರಿ ಜನರಲ್ ಮನೋಜ ನರವಣೆಯವರನ್ನು ಭರ್ಜರಿಯಾಗಿ ಸ್ವಾಗತಿಸುವುದು

೪ ಅ. ನೇಪಾಳಕ್ಕೆ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವುದು ಮಹತ್ವದ್ದಾಗಿದೆ ಎಂದು ಅನಿಸುವುದು : ನೇಪಾಳ ಚೀನಾದ ಬೆನ್ನಿಗೆ ಬಿದ್ದು, ಭಾರತವನ್ನು ವಿರೋಧಿಸುತ್ತಿತ್ತು. ಆದರೆ ಈಗ ಕಳೆದ ಕೆಲವು ದಿನಗಳಿಂದ ನೇಪಾಳದ ವಿರೋಧವು ಸೌಮ್ಯವಾಗಿದೆ. ಅದು ತನ್ನ ಹೊಸ ನಕಾಶೆಯನ್ನು ಸುತ್ತಿಟ್ಟು ಪುನಃ ಹಳೆಯ ನಕಾಶೆಯನ್ನೇ ಕಾಯಂಗೊಳಿಸಲು ನಿರ್ಧರಿಸಿದೆ. ಇದರರ್ಥ ನೇಪಾಳಕ್ಕೆ ಭಾರತದೊಂದಿಗೆ ವಾದವನ್ನು ಮುಂದುವರಿಸುವ ಆಸಕ್ತಿಯಿಲ್ಲ, ಅದಕ್ಕೆ ಭಾರತದೊಂದಿಗೆ ಸಂಬಂಧವನ್ನು ಸುಧಾರಿಸುವುದು ಮಹತ್ವದ್ದಾಗಿದೆ ಎಂದು ಅನಿಸುತ್ತಿರುವುದು ಕಂಡುಬರುತ್ತಿದೆ. ಹಾಗೆಯೇ ನೇಪಾಳ ಇದೇ ಕಾಲದಲ್ಲಿ  ಭಾರತದ ಸೇನಾಧಿಕಾರಿ ಜನರಲ್ ಮನೋಜ ನರವಣೆಯರವನ್ನು ಆಮಂತ್ರಿಸಿತು. ಅದಕ್ಕಿಂತ ಮೊದಲು ‘ರಿಸರ್ಚ ಎನಾಲಿಸಿಸ್ ವಿಂಗ್ ‘ರಾ ದ ಮುಖ್ಯಸ್ಥರೊಂದಿಗೆ ೯ ಜನರ ಸಮಿತಿ ಸದಸ್ಯರು ನೇಪಾಳದ ಪ್ರವಾಸವನ್ನು ಕೈಕೊಂಡಿದ್ದರು. ‘ರಾದ ಮುಖ್ಯಸ್ಥರು ಈ ಸಮಯದಲ್ಲಿ ನೇಪಾಳದ ಪ್ರಧಾನಮಂತ್ರಿ ಗಳೊಂದಿಗೆ ಹಿರಿಯ ಮುಖ್ಯಸ್ಥರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿದರು ಮತ್ತು ಸೇನಾಧಿಕಾರಿಗಳ ಪ್ರವಾಸದ ಪೂರ್ವಸಿದ್ಧತೆಯನ್ನು ಮಾಡಿದರು.

೪ ಆ. ನೇಪಾಳದಲ್ಲಿ ಮನೋಜ ನರವಣೆಯವರಿಗೆ ‘ಮಾನದ ಸೇನಾಧ್ಯಕ್ಷ ಎಂಬ ಪದವಿಯಿಂದ ಸನ್ಮಾನ ! : ‘ರಾ ದ ಹಿರಿಯ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರ ಪ್ರವಾಸದ ಬಳಿಕ ನೇಪಾಳದ ರಾಜಕಾರಣದಲ್ಲಿ ಒಂದು ಮಹತ್ವದ ಘಟನೆ ಜರುಗಿತು. ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿಯವರು ಕಟು ಭಾರತವಿರೋಧಿ ಉಪಪ್ರಧಾನಮಂತ್ರಿಗಳಾದ ಈಶ್ವರ ಪೊಖರೆಲ ಇವರಿಂದ ರಕ್ಷಣಾ ಖಾತೆಯ ಕಾರ್ಯಭಾರವನ್ನು ಹಿಂಪಡೆದುಕೊಂಡು ತಮ್ಮ ಬಳಿ ಇಟ್ಟುಕೊಂಡರು. ಪೊಖರೆಲ ಇವರು ಜನರಲ್ ನರವಣೆಯವರ ನೇಪಾಳ ಪ್ರವಾಸವನ್ನು ಕಟುವಾಗಿ ವಿರೋಧಿಸುತ್ತಿದ್ದರು. ಈ ಕಾರಣದಿಂದ ಅವರಿಂದ ರಕ್ಷಣಾ ಖಾತೆಯ ಕಾರ್ಯಭಾರವನ್ನು ಹಿಂಪಡೆದುಕೊಂಡರು. ಓಲಿಯವರ ಈ ನಿರ್ಣಯವನ್ನು ಭಾರತದೊಂದಿಗೆ ಸಂಬಂಧವನ್ನು ಸುಧಾರಿಸುವ ಹೆಜ್ಜೆಯೆಡೆಗೆ ಒಂದು ಸಕಾರಾತ್ಮಕ ಸಂಕೇತವೆಂದು ತಿಳಿಯಲಾಯಿತು. ಈಗಂತೂ ನೇಪಾಳದಲ್ಲಿ ಮನೋಜ ನರವಣೆಯವರ ಭರ್ಜರಿ ಸ್ವಾಗತವನ್ನೂ ಮಾಡಲಾಯಿತು. ಹಾಗೆಯೇ ಅವರನ್ನು ‘ಗೌರವಾನ್ವಿತ ಸೇನಾಧ್ಯಕ್ಷ ಪದವಿಯಿಂದ ಸನ್ಮಾನಿಸಿದರು. ಇದರಿಂದ ನೇಪಾಳ ಸರಿಯಾದ ಮಾರ್ಗದಲ್ಲಿರುವುದು ಕಂಡು ಬರುತ್ತಿದೆ. ತದನಂತರವೇ ನೇಪಾಳ ಭಾರತದ ವಿಷಯದಲ್ಲಿ ಸೌಮ್ಯವಾಯಿತು ಮತ್ತು ಇಂದು ನೇಪಾಳ ಭಾರತದೊಂದಿಗೆ ಪುನಃ ಒಮ್ಮೆ ಸಂಬಂಧವನ್ನು ದೃಢಪಡಿಸಿಕೊಳ್ಳುವ ಪರಿಸ್ಥಿತಿಗೆ ಬಂದಿದೆ.

೫. ನೇಪಾಳವು ಭಾರತದ ಜೊತೆಗೆ ಉತ್ತಮ ಸಂಬಂಧವನ್ನು ಪ್ರಸ್ಥಾಪಿಸಲು ಪ್ರಯತ್ನಿಸುತ್ತಿದೆ

ಅ. ಈ ಕಾಲಾವಧಿಯಲ್ಲಿ ನೇಪಾಳದ ಪ್ರಧಾನಮಂತ್ರಿ ಓಲಿಯವರ ಭಾರತದ ವಿಷಯದಲ್ಲಿ ಬದಲಾದ ನಡುವಳಿಕೆ ಮತ್ತು ನರವಣೆಯವರ ಪ್ರವಾಸ ಇತ್ಯಾದಿಗಳನ್ನು ನೋಡಿ ಮಾವೋವಾದಿ ಮುಖಂಡರಾದ ಪುಷ್ಪಕಮಲ ದಹಲ ಪ್ರಚಂಡ ಇವರು ಅಸಮಾಧಾನರಾಗಿದ್ದು, ಅವರು ನಿರಂತರವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಚೀನಾ ದೇಶವೂ ಇದೇ ಸಮಯದಲ್ಲಿ ನೇಪಾಳದ ಭೂಮಿಯನ್ನು ವಶಪಡಿಸಿಕೊಂಡಿತು ಮತ್ತು ಅದರಿಂದ ನೇಪಾಳಕ್ಕೆ ದೊಡ್ಡ ಆಘಾತವಾಯಿತು. ಈಗ ನೇಪಾಳ ಭಾರತದೊಂದಿಗೆ ಸಂಬಂಧವನ್ನು ಸುಧಾರಿಸಿಕೊಂಡು ಸಹಾಯವನ್ನು ಕೇಳುವ ಮನಃಸ್ಥಿತಿಗೆ ಬಂದಿದೆ. ಭಾರತವನ್ನು ವಿರೋಧಿಸುವುದರಿಂದ ಆರ್ಥಿಕ ಹಾಗೂ ಇತರ ವಿವಿಧ ಕ್ಷೇತ್ರಗಳಲ್ಲಿ ದೇಶದ ಹಾನಿಯಾಗುವುದು ಎನ್ನುವುದು ಓಲಿಯವರಿಗೆ ಅರಿವಾಗಿದೆ. ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವ ಪ್ರಯತ್ನಗಳು ನಡೆದಿದ್ದು, ಚೀನಾ ಮಾತ್ರ ಇದರಲ್ಲಿ ಹಿಂದೆ ಬಿದ್ದಿದೆ.

ಆ. ನೇಪಾಳಕ್ಕೆ ಭಾರತದ ಸಹಾಯದಿಂದ ಮಹಾಕಾಲಿ ನದಿಯ ಮೇಲಿನ ಪಂಚೇಶ್ವರ ಬಹುಉದ್ದೇಶಿತ ಯೋಜನೆಯನ್ನು ಹೊಸದಾಗಿ ಪ್ರಾರಂಭ ಮಾಡುವುದಿದ್ದು, ಆ ವಿಷಯದಲ್ಲಿ ಎದುರಾಗಿದ್ದ ಬಹುತೇಕ ಅಡೆತಡೆಗಳನ್ನು ನಿವಾರಿಸಲಾಗಿದೆ. ಈಗಾಗಲೇ ಭಾರತವು ನೇಪಾಳದಲ್ಲಿ ೨ ಜಲವಿದ್ಯುತ್ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಚೀನಾದ ಸಾಲದಲ್ಲಿ ಸಿಲುಕುವುದಕ್ಕಿಂತ ಭಾರತದ ಸಹಾಯ ಅಧಿಕ ಉಪಯುಕ್ತವೆಂದು ಸಿದ್ಧವಾಗಿದೆ. ಇದರಿಂದ ಮುಂಬರುವ ಕೆಲವು ದಿನಗಳಲ್ಲಿ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಲ್ಲಿ ಮತ್ತು ನೇಪಾಳದ ರಾಜಕಾರಣದಲ್ಲಿಯೂ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುವುದನ್ನು ನೋಡಬಹುದಾಗಿದೆ. ಈ ಕ್ಷಣ ಮಾತ್ರ ನೇಪಾಳ ಖಂಡಿತವಾಗಿಯೂ ಭಾರತದಪರವಾಗಿದೆ. ಇದರಿಂದ ನೇಪಾಳದ ಭಾರತವಿರೋಧಿ ಚಟುವಟಿಕೆಗಳು ಕಡಿಮೆಯಾಗಬಹುದು.  – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.