೧. ‘ವಿಐಪಿ (very important person)ಗಳ ಸುರಕ್ಷತೆಯ ಮಹತ್ವವನ್ನು ಕಡಿಮೆ ಮಾಡಿ ಪೊಲೀಸ ದಳವನ್ನು ಜನಸಾಮಾನ್ಯರ ಭದ್ರತೆಗಾಗಿ ನಿಯೋಜಿಸುವುದು !
ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಪ್ರವಾಸಗಳಲ್ಲಿ ಪೊಲೀಸ ಪಡೆಗಳನ್ನು ಉಪಯೋಗಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅನೇಕ ಬಾರಿ ಪೊಲೀಸರಿಂದ ನಿರ್ಲಕ್ಷವಾಗುತ್ತದೆ. ಕೇಂದ್ರ ಸರಕಾರವು ‘ವಿಐಪಿ ಸುರಕ್ಷತೆಯಿಂದ ‘ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಹಿಂಪಡೆಯಲು ನಿರ್ಣಯಿಸಿತು. ಅದಕ್ಕಿಂತ ಮೊದಲು ಗಾಂಧಿ ಕುಟುಂಬದ ‘ಎಸ್‌ಪಿಜಿ (ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್- ವಿಶೇಷ ಭದ್ರತಾ ದಳ) ಹಿಂಪಡೆಯಲಾಗಿತ್ತು ಮತ್ತು ಅವರ ‘ವಿಐಪಿ ಸುರಕ್ಷತೆಯನ್ನು ಕಡಿತಗೊಳಿಸಲಾಯಿತು. ಭಯೋತ್ಪಾದನಾವಿರೋಧಿ ವಿಶೇಷ ದಳದ ಸೈನಿಕರು ಅರ್ಥಾತ್ ‘ಬ್ಲಾಕ್ ಕ್ಯಾಟ್ ಕಮಾಂಡೋ ಇವರನ್ನು ಸುಮಾರು ೨ ದಶಕಗಳ ಬಳಿಕ ‘ವಿಐಪಿ ಸುರಕ್ಷತೆಯ ಸೇವೆಯಿಂದ ಕೈಬಿಡಲಾಯಿತು.
೨. ರಾಷ್ಟ್ರೀಯ ಭದ್ರತಾ ಪಡೆಯ ಕಾರ್ಯದ ಉದ್ದೇಶವೇ ಬೇರೆಯಾಗಿರುವುದರಿಂದ ‘ವಿಐಪಿಗಳ ‘ಎನ್‌ಎಸ್‌ಜಿ ರಕ್ಷಣೆಯನ್ನು ಹಿಂಪಡೆಯಲಾಯಿತು
೧೯೮೪ ನೇ ಇಸವಿಯಲ್ಲಿ ‘ಎನ್‌ಎಸ್‌ಜಿ ಸ್ಥಾಪನೆಯಾಯಿತು. ಈ ಪಡೆಯ ಮೂಲ ಕಾರ್ಯದಲ್ಲಿ ‘ವಿಐಪಿಗಳ ಸುರಕ್ಷತೆಯ ಕಾರ್ಯವೇ ಇರಲಿಲ್ಲ. ‘ಎನ್‌ಎಸ್‌ಜಿ ಕಮಾಂಡೋ ಬಳಿ ‘ಝಡ್‌ಪ್ಲಸ್ ಸುರಕ್ಷತೆ ಇರುವ ೧೩ ‘ಹೈ ಪ್ರೊಫೈಲ್ ವ್ಯಕ್ತಿಗಳಿಗೆ ಭದ್ರತೆ ಪೂರೈಸುವ ಜವಾಬ್ದಾರಿ ಇತ್ತು. ಈ ಭದ್ರತೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತ ಸುಮಾರು ೨ ಡಝನ್ ಕಮಾಂಡೋಗಳನ್ನು ಪ್ರತಿಯೊಬ್ಬ ‘ವಿಐಪಿಯ ಸುರಕ್ಷತೆಗಾಗಿ ನಿಯೋಜಿಸಲಾಗಿರುತ್ತದೆ. ಈಗ ಈ ಜವಾಬ್ದಾರಿಯನ್ನು ಅರೆಸೇನಾ ಪಡೆಗೆ ವಹಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಎನ್.ಎಸ್.ಜಿ.ಯ ಮೂಲ ಕಾರ್ಯವು ಭಯೋತ್ಪಾದನೆಯನ್ನು ತಡೆಯುವುದು, ವಿಮಾನಗಳ ಅಪಹರಣಗಳ ವಿರುದ್ಧ ಕಾರ್ಯಾಚರಣೆ ಮಾಡುವುದಾಗಿದೆ. ‘ವಿಐಪಿಗಳ ‘ಎನ್‌ಎಸ್‌ಜಿ ಸುರಕ್ಷತೆಯನ್ನು ಹಿಂಪಡೆಯಲು ಇದೇ ಮುಖ್ಯ ಕಾರಣವಾಗಿದೆ.
೩. ‘ವಿವಿಐಪಿ (very very important person) ಸಂಸ್ಕೃತಿಯ ಅತಿರೇಕವಾಗುತ್ತಿದ್ದರೆ, ಸಾಮಾನ್ಯ ಜನತೆಯ ರಕ್ಷಣೆಯನ್ನು ಯಾರು ಮಾಡುವುದು ?
ಅತಿಗಣ್ಯ ವ್ಯಕ್ತಿಗಳಿಗೆ ಒದಗಿಸಲಾಗುವ ಸುರಕ್ಷತೆಯು ಯಾವಾಗಲೂ ಚರ್ಚೆಯ ವಿಷಯವಾಗಿರುತ್ತದೆ. ‘ವಿವಿಐಪಿ (ವಿಶೇಷ ಅತಿಗಣ್ಯ ವ್ಯಕ್ತಿಗಳು) ಸಂಸ್ಕೃತಿಯನ್ನು ತೊಲಗಿಸುವ ಬಗ್ಗೆ ಅನೇಕ ಬಾರಿ ಚರ್ಚೆಗಳಾಗುತ್ತವೆ; ಆದರೆ ಯಾವುದೇ ಕೃತಿ ಆಗುವುದಿಲ್ಲ. ಈ ಸರಕಾರ ಮಾತ್ರ ಅದನ್ನು ಕಾರ್ಯರೂಪಕ್ಕೆ ತಂದಿದೆ. ಪೊಲೀಸ್ ಸಂಶೋಧನೆ ಮತ್ತು ವಿಕಾಸ ಸಂಸ್ಥೆಯು (‘ಬ್ಯುರೋ ಆಫ್ ಪೊಲೀಸ್ ರಿಸರ್ಚ್) ಮಾಡಿರುವ ಅಧ್ಯಯನದಲ್ಲಿ ಬಹಳಷ್ಟು ಜನರಿಗೆ ಯಾವುದೇ ಅಪಾಯವಿಲ್ಲದಿರುವಾಗಲೂ ಪೊಲೀಸ್ ಸುರಕ್ಷತೆಯನ್ನು ಒದಗಿಸಲಾಗುತ್ತದೆ ಎಂಬುದು ಕಂಡುಬಂದಿದೆ. ಇಂದು ಮೊದಲೇ ದೇಶದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆಯಿರುವಾಗ, ಅದರಲ್ಲಿ ಹೆಚ್ಚಿನ ಪೊಲೀಸರು ‘ವಿಐಪಿ ವ್ಯಕ್ತಿಗಳಿಗಾಗಿ ನಿಯೋಜಿಸಿದರೆ ಜನಸಾಮಾನ್ಯರ ರಕ್ಷಣೆಯನ್ನು ಯಾರು ಮಾಡುವುದು ?
ಭಾರತದಲ್ಲಿ ‘ವಿವಿಐಪಿ ಸಂಸ್ಕೃತಿ ಕಡಿಮೆಯಾಗುವ ಬದಲು ಹೆಚ್ಚಾಗುತ್ತ್ತಾ ಹೋಯಿತು. ‘ಭಾರತೀಯ ಪೊಲೀಸರು ಜನ ಸಾಮಾನ್ಯರ ರಕ್ಷಣೆಗಾಗಿರದೇ ವಿಐಪಿಗಳ ರಕ್ಷಣೆಗಾಗಿಯೇ ಇದ್ದಾರೆಯೇ ?, ಎನ್ನುವ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುತ್ತ್ತದೆ. ಇಂದು ದೇಶಾದ್ಯಂತ ಜನಸಾಮಾನ್ಯರ ಸುರಕ್ಷೆ, ಅಪರಾಧಿಗಳಲ್ಲಿ ಭಯ ಹುಟ್ಟಿಸುವುದು, ಭಯೋತ್ಪಾದನೆ ಅಥವಾ ನಕ್ಸಲ್‌ವಾದ ಇವುಗಳ ವಿರುದ್ಧ ಕಾರ್ಯಾಚರಣೆ ಮಾಡಲು ಪೊಲೀಸ್ ಸಿಬ್ಬಂದಿ ಕಡಿಮೆ ಬೀಳುತ್ತಿದೆ. ಆದುದರಿಂದ ತಜ್ಞರ ಸಮಿತಿಯು ಈ ಹಿಂದೆ ‘ವಿವಿಐಪಿಗಳ ಸುರಕ್ಷತೆ ಗಾಗಿರುವ ಪೊಲೀಸರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಅನೇಕ ಬಾರಿ ಹೇಳಿತ್ತು.
೪. ಮುಕ್ತವಾಗಿರುವ ಎನ್‌ಎಸ್‌ಜಿ ಕಮಾಂಡೋಗಳನ್ನು ಹೊಸ ಸ್ಥಳಗಳಲ್ಲಿ ನೇಮಿಸುವುದು
ವಿಐಪಿ ಸುರಕ್ಷತೆಯಿಂದ ‘ಎನ್‌ಎಸ್‌ಜಿ ಸಂರಕ್ಷಣೆಯನ್ನು ಹಿಂಪಡೆದ ಬಳಿಕ ಸುಮಾರು ೪೫೦ ಕಮಾಂಡೋಗಳನ್ನು ದೇಶದಲ್ಲಿ ಎನ್‌ಎಸ್‌ಜಿಯ ೫ ನೆಲೆಗಳಲ್ಲಿ ನೇಮಿಸಲು ನಿರ್ಧರಿಸಲಾಗಿದೆ. ‘ಎನ್‌ಎಸ್‌ಜಿ ಸಂರಕ್ಷಣೆಯನ್ನು ಹಿಂಪಡೆದ ಬಳಿಕ ಸಂಬಂಧಪಟ್ಟ ವಿಐಪಿ ವ್ಯಕ್ತಿಗಳ ಸುರಕ್ಷತೆಯ ಜವಾಬ್ದಾರಿಯನ್ನು ‘ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ದಳ) ಮತ್ತು ‘ಸಿಐಎಸ್‌ಎಫ್ (ಕೇಂದ್ರೀಯ ಔದ್ಯೋಗಿಕ ರಕ್ಷಣಾ ದಳ) ಇವರಿಗೆ ವಹಿಸಲು ನಿರ್ಣಯಿಸಲಾಗಿದೆ. ಇವೆರಡೂ ದಳಗಳು ೧೩೦ ಜನ ಪ್ರಮುಖ ವ್ಯಕ್ತಿಗಳಿಗೆ ಸಂಯುಕ್ತ ರೀತಿಯಲ್ಲಿ ಸುರಕ್ಷತೆಯನ್ನು ಒದಗಿಸುತ್ತವೆ.
೫. ಸಿಆರ್‌ಪಿಎಫ್ ಮತ್ತು ಸಿಐಎಸ್‌ಎಫ್ ಬಳಿ ಅನೇಕ ಅತಿಗಣ್ಯ ವ್ಯಕ್ತಿಗಳ ಸುರಕ್ಷಕತೆಯ ಜವಾಬ್ದಾರಿ ಇದೆ
‘ಸಿಆರ್‌ಪಿಎಫ್ ಬಳಿ ಇತ್ತೀಚೆಗಷ್ಟೇ ಮಾಜಿ ಪ್ರಧಾನಮಂತ್ರಿ ಮನಮೋಹನ ಸಿಂಹ ಮತ್ತು ಅವರ ಪತ್ನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಕಾಂಗ್ರೆಸ್ಸಿನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇವರ ಸುರಕ್ಷತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಈ ೫ ಜನರಿಗೆ ಈ ಮೊದಲು ‘ಎಸ್‌ಪಿಜಿ ಸುರಕ್ಷತೆಯನ್ನು ಒದಗಿಸಲಾಗಿತ್ತು. ಲೋಕಸಭೆಯ ಅಧ್ಯಕ್ಷರಾಗಿರುವ ಓಂ ಬಿರ್ಲಾ ಇವರ ಸುರಕ್ಷತೆಯ ಜವಾಬ್ದಾರಿಯೂ ಸಿಆರ್‌ಪಿಎಫ್ ಬಳಿಯೇ ಇದೆ ಮತ್ತು ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ. ಮೋಹನ ಭಾಗವತ ಇವರಲ್ಲದೇ ಇತರೆ ಪ್ರಮುಖ ವ್ಯಕ್ತಿಗಳ ಸುರಕ್ಷತೆಯ ಜವಾಬ್ದಾರಿಯೂ ಸಿಐಎಸ್‌ಎಫ್ ಬಳಿಯೇ ಇದೆ.
೬. ವಿವಿಐಪಿ (very very important person) ಗಳ ಸುರಕ್ಷತೆ ಮತ್ತು ಅದರಿಂದ ಜನಸಾಮಾನ್ಯರ ಮೇಲಾಗಿರುವ ಪರಿಣಾಮ
೬ ಅ. ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಹತ್ಯೆಗಳ ಬಳಿಕ ವಿವಿಐಪಿ ಸುರಕ್ಷತೆಯ ಕಾರ್ಯ ಹೆಚ್ಚಾಯಿತು : ೧೯೮೪ ನೇ ಇಸ್ವಿಯಲ್ಲಿ ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರನ್ನು ಭಯೋತ್ಪಾದಕನು ಹತ್ಯೆ ಮಾಡಿದನು. ಆಗ ಭಾರತದಲ್ಲಿ ಅತಿಗಣ್ಯ ವ್ಯಕ್ತಿಗಳ ಸುರಕ್ಷತೆಗೆ ಹೆಚ್ಚು ಮಹತ್ವ ಬಂದಿತು. ತದನಂತರ ಮುಂದಿನ ೭ ವರ್ಷಗಳ ಬಳಿಕ ಪ್ರಧಾನಮಂತ್ರಿ ರಾಜೀವ ಗಾಂಧಿಯವರು ‘ಎಲ್‌ಟಿಟಿಇಯ ಭಯೋತ್ಪಾದಕರು ಮಾಡಿದ ಆತ್ಮಾಹುತಿ ದಾಳಿಯಲ್ಲಿ ನಿಧನರಾದರು. ತದನಂತರ ಅತಿಗಣ್ಯ ವ್ಯಕ್ತಿಗಳ ಸುರಕ್ಷತೆಯ ಕಾರ್ಯವು ಇನ್ನೂ ಹೆಚ್ಚಾಯಿತು.
೬ ಆ. ಪಂಜಾಬನಲ್ಲಿ ಭಯೋತ್ಪಾದನೆ ಮುಗಿದರೂ ನಿರಂತರವಾಗಿ ಅತಿಗಣ್ಯ ವ್ಯಕ್ತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು : ಪಂಜಾಬನಲ್ಲಿ ಯಾವಾಗ ಭಯೋತ್ಪಾದನೆ ನಡೆದಿತ್ತೋ, ಆಗ ಆ ಸುರಕ್ಷತೆಯ ಅವಶ್ಯಕತೆಯಿತ್ತು. ತದನಂತರ ೧೯೯೦ ರ ದಶಕದಲ್ಲಿ ಪಂಜಾಬನಲ್ಲಿ ಭಯೋತ್ಪಾದನೆ ಸಂಪೂರ್ಣ ಮುಗಿಯಿತು. ಪಂಜಾಬಿನ ಭಯೋತ್ಪಾದನೆಯಲ್ಲಿ ಎಷ್ಟು ಹತ್ಯೆಗಳನ್ನು ಮಾಡಲಾಯಿತೋ, ಅಷ್ಟು ಹತ್ಯೆಗಳನ್ನು ಉಗ್ರ ಭಯೋತ್ಪಾದಕರು ಇನ್ನುಳಿದ ಭಾರತದಲ್ಲಿ ಮಾಡಲಿಲ್ಲ; ಆದರೆ ವಿವಿಐಪಿ ಸುರಕ್ಷತೆಯ ಕಾರ್ಯದಲ್ಲಿ ಹೆಚ್ಚಳವಾಗುತ್ತಲೇ ಹೋಯಿತು. ಹಾಗೆಯೇ ಅದರಲ್ಲಿ ನಿರಂತರವಾಗಿ ಹೊಸ ಹೊಸ ಅತಿಗಣ್ಯ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು.
೬ ಇ. ಜನಸಾಮಾನ್ಯರ ತೆರಿಗೆಯ ಹಣವನ್ನು ವಿವಿಐಪಿಗಳ ಸುರಕ್ಷತೆಗಾಗಿ ಖರ್ಚು ಮಾಡುವುದು : ವಿವಿಐಪಿಗಳ ಸುರಕ್ಷತೆಗಾಗಿ ದೇಶದ ಬಹಳಷ್ಟು ಸಂಪತ್ತು ಖರ್ಚಾಗುತ್ತದೆ. ಜನಸಾಮಾನ್ಯರ ತೆರಿಗೆಯ ಹಣವು ಈ ಸುರಕ್ಷತೆಯ ಹೆಸರಿನಲ್ಲಿ, ಅಂದರೆ ಅವರಿಗೆ ನೀಡಲಾಗುವ ಹೆಚ್ಚುವರಿ ವಾಹನಗಳು, ಹೆಲಿಕಾಪ್ಟರ್, ವಿಮಾನಗಳಿಗಾಗಿ ಖರ್ಚಾಗುತ್ತದೆ. ಭಯೋತ್ಪಾದನೆಯನ್ನು ಸಂಪೂರ್ಣ ಕಿತ್ತುಹಾಕಲು ‘ಎನ್‌ಎಸ್‌ಜಿಯನ್ನು ಸ್ಥಾಪಿಸಿಲಾಗಿತ್ತು. ಆದರೆ ಭಾರತೀಯ ಸೈನ್ಯದ ಅತ್ಯುತ್ತಮ ಕಮಾಂಡೋಗಳನ್ನು ಈ ಅತಿಗಣ್ಯ ವ್ಯಕ್ತಿಗಳ ಸುರಕ್ಷತೆಗಾಗಿ ಉಪಯೋಗಿಸಲಾಯಿತು.
೬ ಈ. ಅತಿಗಣ್ಯ ವ್ಯಕ್ತಿಗಳ ಸಂಬಂಧಿಕರಿಗೆ ಸುರಕ್ಷತೆಯನ್ನು ಒದಗಿಸುವುದು, ನಿಯಮದ ದುರುಪಯೋಗವಾಗಿದೆ : ೧೯೮೬ ನೇ ಇಸವಿ ಬಳಿಕ ಅತಿಗಣ್ಯ ವ್ಯಕ್ತಿಗಳ ಮೇಲೆ ಯಾವುದೇ ಆಕ್ರಮಣಗಳೇ ಆಗಿಲ್ಲ. ಅಲ್ಲದೇ ಭಯೋತ್ಪಾದನೆಯ ಅಥವಾ ನಕ್ಸಲ್‌ವಾದಿ ಆಕ್ರಮಣಗಳನ್ನು ಜನಸಾಮಾನ್ಯರನ್ನು ಗುರಿಯಾಗಿಟ್ಟೇ ಮಾಡಲಾಗಿದೆ. ಆದುದರಿಂದ ಸುರಕ್ಷತೆಯ ಆವಶ್ಯಕತೆ ಜನಸಾಮಾನ್ಯರಿಗೆ ಹೆಚ್ಚಿದೆ. ಇಷ್ಟೇ ಅಲ್ಲದೇ ಅತಿಗಣ್ಯ ವ್ಯಕ್ತಿಗಳ ಸಂಬಂಧಿಕರಿಗೆ ಸುರಕ್ಷತೆಯನ್ನು ಒದಗಿಸುವುದು ನಿಯಮದ ದುರುಪಯೋಗವಾಗಿತ್ತು. ‘ಬ್ಲ್ಯಾಕ್ ಕಮಾಂಡೋಗಳು ತಮ್ಮ ಹಿಂದೆ-ಮುಂದೆ ಇರುವುದು ವಿಐಪಿ ಸಂಸ್ಕೃತಿಯ ಲಕ್ಷಣವೆಂದು ತಿಳಿಯಲಾಗಿತ್ತು. ಆದುದರಿಂದ ಈ ಎಲ್ಲ ಸುರಕ್ಷತೆಯಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಯಿತು.
೭. ಅತಿಗಣ್ಯ ವ್ಯಕ್ತಿಗಳಿಗೆ ಸುರಕ್ಷತೆಯನ್ನು ನೀಡುವುದು ಅವರ ಜೀವಕ್ಕಿರುವ ಅಪಾಯದ ತೀವ್ರತೆಯನ್ನು ಅವಲಂಬಿಸಿರುತ್ತದೆ
ಅತಿಗಣ್ಯ ವ್ಯಕ್ತಿಗಳಿಗೆ ಸುರಕ್ಷತೆಯನ್ನು ನೀಡಬೇಕೋ ಅಥವಾ ಬೇಡವೋ ಎನ್ನುವುದನ್ನು ಅವರ ಜೀವಕ್ಕಿರುವ ಅಪಾಯದ ತೀವ್ರತೆ ಅಥವಾ ಅವರ ಮಟ್ಟವನ್ನು ಅವಲಂಬಿಸಿರುತ್ತದೆ. ಅವರ ಜೀವಕ್ಕೆ ಎಷ್ಟು ಅಪಾಯವಿದೆ ಎನ್ನುವುದನ್ನು ಪೊಲೀಸರು ತನಿಖೆ ಮಾಡುತ್ತಾರೆ. ಸದ್ಯದ ಸ್ಥಿತಿಯಲ್ಲಿ ಮಾತ್ರ ಅಗತ್ಯವಿಲ್ಲದವರಿಗೆ ಮತ್ತು ಅಗತ್ಯವಿಲ್ಲದ್ದಷ್ಟು ಜನರಿಗೆ ಸುರಕ್ಷತೆಯನ್ನು ನೀಡಲಾಗುತ್ತಿದೆ. ಯಾವುದಾದರು ಅತೀ ಮಹತ್ವದ ವ್ಯಕ್ತಿಗೆ ನಿಜವಾಗಿಯೂ ಭಯೋತ್ಪಾದಕರಿಂದ ಮತ್ತು ನಕ್ಸಲವಾದಿಗಳಿಂದ ಅಪಾಯವಿದ್ದರೆ ಅವರಿಗೆ ಸುರಕ್ಷತೆಯನ್ನು ಒದಗಿಸುವುದು ಸೂಕ್ತವಾಗಿದೆ; ಆದರೆ ಸಾರಾಸಗಟಾಗಿ ಎಲ್ಲರಿಗೂ ಪೊಲೀಸ್ ಸುರಕ್ಷತೆಯ ಆವಶ್ಯಕತೆಯಿರುವುದಿಲ್ಲ.
೭ ಅ. ಬಂಗಾಲ ಅಥವಾ ಜಮ್ಮೂ-ಕಾಶ್ಮೀರದಲ್ಲಿ ಆವಶ್ಯಕತೆ ಇಲ್ಲದಿರುವಾಗಲೂ ಸಾವಿರಾರು ಅತಿಗಣ್ಯ ವ್ಯಕ್ತಿಗಳಿಗೆ ಸುರಕ್ಷತೆಯನ್ನು ಒದಗಿಸುವುದು, ಹಾಗೆಯೇ ಭಾರತದ ವಿಭಜನೆಯ ಮಾತುಗಳನ್ನಾಡುವವರಿಗೆ ಸರಕಾರದಿಂದ ಸುರಕ್ಷೆಯನ್ನು ಒದಗಿಸುವುದು ಖೇದಜನಕವಾಗಿದೆ : ಬಂಗಾಲದಲ್ಲಿ ೨ ಸಾವಿರ ೨೦೭ ಜನ ಅತಿಗಣ್ಯ ವ್ಯಕ್ತಿಗಳಿದ್ದಾರೆ; ಆದರೆ ಅವರಿಗೆ ಯಾವುದೇ ಅಪಾಯವಿಲ್ಲ. ಜಮ್ಮೂ-ಕಾಶ್ಮೀರದಲ್ಲಿ ೨ ಸಾವಿರ ೭೫ ಜನ ಅತಿಗಣ್ಯ ವ್ಯಕ್ತಿಗಳಿದ್ದಾರೆ; ಆದರೆ ಅವರೆಲ್ಲರಿಗೂ ಅಪಾಯವಿದೆ ಎಂದೇನಿಲ್ಲ. ಭಾರತದ ವಿರುದ್ಧದ ಮತ್ತು ದೇಶದ್ರೋಹಿ ಹುರಿಯತ್ ಕಾನ್ಫರೆನ್ಸ್ ಸಂಘಟನೆಗೆ ಪೊಲೀಸ್ ಸುರಕ್ಷತೆಯನ್ನು ಒದಗಿಸಲಾಗಿತ್ತು. ಈಗ ಅದನ್ನು ಕಡಿತಗೊಳಿಸಲಾಗಿದೆ. ಭಾರತದ ತುಕಡೆಗಳನ್ನು ಮಾಡುವ ಮಾತುಗಳನ್ನಾಡುವವರಿಗೆ ಸರಕಾರವೇ ಸುರಕ್ಷತೆಯನ್ನು ನೀಡಿದರೆ, ಅದು ಅತ್ಯಂತ ಖೇದದ ವಿಷಯವಾಗಿದೆ.
ಅಧಿಕಾರದಿಂದ ದೂರ ಎಸೆಯಲಾಗಿರುವ, ಅನೇಕ ರಾಜಕೀಯ ಮುಖಂಡರ ಜೀವಕ್ಕೆ ಯಾವುದೇ ಅಪಾಯವಿಲ್ಲದಿರುವಾಗಲೂ ಅವರು ಪೊಲೀಸ್ ಸುರಕ್ಷತೆಯಲ್ಲಿ ತಿರುಗಾಡುತ್ತಿದ್ದಾರೆ. ಇದೆಲ್ಲ ವನ್ನು ಕೂಡಲೇ ತಡೆಯಬೇಕು.
೭ ಆ. ೬೬೩ ಜನ ನಾಗರಿಕರ ಸುರಕ್ಷತೆಗಾಗಿ ಕೇವಲ ಒಬ್ಬ ಪೊಲೀಸನನ್ನು ನಿಯುಕ್ತಗೊಳಿಸುವುದು ಜನಸಾಮಾನ್ಯರ ಸುರಕ್ಷತೆಯ ವಿಷಯದಲ್ಲಿ ಮಾಡಿರುವ ನಿರ್ಲಕ್ಷವೇ ಆಗಿದೆ ! : ‘ಪೊಲೀಸ್ ರಿಸರ್ಚ್ ಬ್ಯೂರೋ ಎಂಬ ಹೆಸರಿನ ಪೊಲೀಸರ ಒಂದು ಸಂಘಟನೆಯಿದೆ. ಸಂಸ್ಥೆಯ ೨೦೧೮ ರ ಅಂಕಿ-ಅಂಶಗಳಿಗನುಸಾರ ೫೭ ಸಾವಿರಕ್ಕಿಂತ ಅಧಿಕ ಪೊಲೀಸರು ೨೦ ಸಾವಿರ ೮೨೦ ವಿವಿಐಪಿ ಮತ್ತು ವಿಐಪಿ ಜನರ ಸುರಕ್ಷತೆಗಾಗಿ ನಿಯೋಜಿಸಲ್ಪಟ್ಟಿದ್ದಾರೆ. ಒಬ್ಬ ವಿಐಪಿಗೆ ೩ ಜನ ಪೊಲೀಸರ ಸುರಕ್ಷತೆಯಿದೆ; ಆದರೆ ಇನ್ನೊಂದೆಡೆ ಜನಸಾಮಾನ್ಯರ ಸುರಕ್ಷತೆಯ ವಿಷಯದಲ್ಲಿ ನಿರ್ಲಕ್ಷ್ಯವಾಗುತ್ತಿರುವುದು ಕಂಡು ಬರುತ್ತದೆ; ಏಕೆಂದರೆ ೬೬೩ ಜನ ನಾಗರಿಕರ ಸುರಕ್ಷತೆಗಾಗಿ ಕೇವಲ ಒಬ್ಬ ಪೊಲೀಸನನ್ನು ನಿಯೋಜಿಲಾಗಿದೆ.
೮. ಸರಕಾರದ ಸ್ತುತ್ಯ ನಿರ್ಣಯ !
ಈ ಸರಕಾರಿ ಅಪವ್ಯಯದೊಂದಿಗೆ ಅನೇಕ ಅನಾನುಕೂಲತೆಗಳನ್ನು ಕೂಡ ಮಾಡಲಾಗುತ್ತದೆ, ಉದಾ. ರಸ್ತೆಗಳನ್ನು ತಡೆಯುವುದು, ಅನೇಕ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಪ್ರವೇಶವನ್ನು ನಿರ್ಬಂಧಿಸುವುದು ಇತ್ಯಾದಿ. ಈ ತೊಂದರೆದಾಯಕ ನಿಯಮಗಳಿಂದ ಈಗಿನ ಸರಕಾರವು ‘ಎನ್‌ಎಸ್‌ಜಿ ಸುರಕ್ಷತೆಯನ್ನು ಹಿಂಪಡೆದುಕೊಂಡು ಅಲ್ಲಿ ಸಿಆರ್‌ಪಿಎಫ್, ಸಿಐಎಸ್‌ಎಫ್ ಇವುಗಳನ್ನು ಸುರಕ್ಷತೆಗಾಗಿ ನಿಯೋಜಿಸಿ ಸ್ತುತ್ಯ ನಿರ್ಣಯವನ್ನು ತೆಗೆದುಕೊಂಡಿದೆ. ಇದರಿಂದ ದೇಶದ ಅತ್ಯುತ್ತಮ ಕಮಾಂಡೋಗಳು ಭಯೋತ್ಪಾದಕರ ವಿರುದ್ದದ ಕಾರ್ಯಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಬಹುದು.
೯. ಸರಕಾರ ತೆಗೆದುಕೊಂಡ ನಿರ್ಣಯಗಳಿಗೆ ಖಂಡಿತವಾಗಿಯೂ ನಾಗರಿಕರು ಸಮರ್ಥನೆಯನ್ನು ನೀಡುವರು !
ಬಹಳಷ್ಟು ಸಲ ‘ಫ್ಯಾಶನ್ ಎಂದು ಕ್ರಿಕೆಟ್ ಆಟಗಾರರು, ಚಲನಚಿತ್ರ ಕಲಾವಿದರು ಮತ್ತು ಇತರ ‘ಸೆಲೆಬ್ರೆಟಿಗಳಿಗೆ ಸುರಕ್ಷತೆಯನ್ನು ಒದಗಿಸಲಾಗುತ್ತದೆ. ದೇಶದ ಅತ್ಯಧಿಕ ಗಮನವು ಆಂತರಿಕ ಭದ್ರತೆಗೆ ಎದುರಾಗಿರುವ ಅಪಾಯಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಹಾಗೂ ಭಯೋತ್ಪಾದಕರು ಮತ್ತು ನಕ್ಸಲರ ಕ್ಷಮತೆಯನ್ನು ಕಡಿಮೆ ಗೊಳಿಸುವುದರ ಕಡೆಗೆ ಇರಬೇಕು. ಇದರಿಂದ ಜನಸಾಮಾನ್ಯರ ಸುರಕ್ಷತೆಯ ಜೊತೆಗೆ ವಿಐಪಿಗಳ ಸುರಕ್ಷತೆಯೂ ಆಗುವುದು. ಆದ್ದರಿಂದಲೇ ಸರಕಾರವು ತೆಗೆದುಕೊಂಡ ನಿರ್ಣಯ ಅತ್ಯುತ್ತಮವಾಗಿದೆ. ಅದಕ್ಕೆ ದೇಶದಲ್ಲಿನ ಎಲ್ಲ ನಾಗರಿಕರು ಖಂಡಿತವಾಗಿಯೂ ಸಮರ್ಥನೆಯನ್ನು ನೀಡುವರು.
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.