ಚೀನಾದ ‘ಸೂಪರ್ ಸೋಲ್ಜರ್ಸ್ (ಅಸಾಧಾರಣ ಸೈನಿಕರು) ಮತ್ತು ಭಾರತ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಚೀನಾ ಲಡಾಖ್‌ನಲ್ಲಿ ಸೇನಾಕಾರ್ಯಾಚರಣೆಯನ್ನು ನಡೆಸಿ ಭಾರತವನ್ನು ಸೋಲಿಸಲು ಕಳೆದ ೭ ತಿಂಗಳುಗಳಿಂದ ಪ್ರಯತ್ನಿಸಿ ಸಂಪೂರ್ಣ ಸೋತಿದೆ. ಆದುದರಿಂದ ಈಗ ಚೀನಾವು ಸೇನಾ ಕಾರ್ಯಾಚರಣೆಯನ್ನು ಬಿಟ್ಟು ಇತರ ಕ್ರಮಗಳನ್ನು ಅನುಸರಿಸಿ ಭಾರತ-ಚೀನಾ ಗಡಿಯಲ್ಲಿ ನಿರಂತರ ಉದ್ವಿಗ್ನದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಗಡಿಯಲ್ಲಿ ನಿರಂತರ ವಿವಾದಗಳಿದ್ದಲ್ಲಿ ಭಾರತಕ್ಕೆ ಅಲ್ಲಿ ಬೃಹತ್ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಬೇಕಾಗುವುದು  ಮತ್ತು ಇದರಿಂದ ಭಾರತದ ರಕ್ಷಣಾವೆಚ್ಚದಲ್ಲಿ ಹೆಚ್ಚಳವಾಗಿ ಪ್ರಗತಿಯ ವೇಗ ಕುಂಠಿತಗೊಳ್ಳುವುದು ಎಂಬುದು ಅದರ ಉದ್ದೇಶವಾಗಿದೆ.

೧. ಸೈನಿಕರ ಜೈವಿಕ ಕ್ಷಮತೆಯನ್ನು ಹೆಚ್ಚಿಸಲು ಚೀನಾದ ಪ್ರಯತ್ನ

ಕಳೆದ ವರ್ಷ ಇಬ್ಬರು ಅಮೇರಿಕನ್ ವಿಜ್ಞಾನಿಗಳು ಯುದ್ಧದ ಕ್ಷೇತ್ರದಲ್ಲಿ ‘ಬಯೋಟೆಕ್ನಾಲಾಜಿಯನ್ನು ತರುವ ಚೀನಾದ ಮಹತ್ವಾಕಾಂಕ್ಷೆಯ ಬಗ್ಗೆ ಪರೀಕ್ಷಣೆಯನ್ನು ನಡೆಸಿದ್ದರು. ಅವರಿಗೆ ಈ ಅಧ್ಯಯನದಲ್ಲಿ ಚೀನಾವು ಮಾನವನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ‘ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವುದು ಕಂಡುಬಂದಿತು. ಚೀನಾ ಜಗತ್ತಿನಲ್ಲಿ ದೊಡ್ಡ ದೊಡ್ಡ ಕಂಪನಿಗಳ ಬೌದ್ಧಿಕ ಸಂಪತ್ತನ್ನು ಲೂಟಿ ಮಾಡುತ್ತದೆ, ಅವರ ತಂತ್ರಜ್ಞಾನವನ್ನು ನಕಲು ಮಾಡುತ್ತದೆ ಮತ್ತು ತದನಂತರ ಮಾರುಕಟ್ಟೆಯಲ್ಲಿ ಆ ಕಂಪನಿಗಳ ಸ್ಥಾನವನ್ನು ಆಕ್ರಮಿಸುತ್ತದೆ. ‘ಚೀನಾ ತನ್ನ ಸೈನಿಕರ ಜೈವಿಕ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಇದರಿಂದ ಜಗತ್ತಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಅಮೇರಿಕಾ ಹೇಳಿದೆ. ಚೀನಾ ದೇಶವು ಜೈವಿಕ ಸಾಮರ್ಥ್ಯವನ್ನು ಹೆಚ್ಚಿಸಲು ತನ್ನ ಸೈನಿಕರ ಮೇಲೆ ಅನೇಕ ಜೈವಿಕ ಪರೀಕ್ಷಣೆಗಳನ್ನು ಮಾಡಿದೆ. ಇದರಿಂದ ‘ಸೂಪರ್ ಸೋಲ್ಜರ್ಸ್ (ಅಸಾಧಾರಣ ಸೈನಿಕ)ರನ್ನು ತಯಾರಿಸುತ್ತಿರಬಹುದು ಎನ್ನುವ ಮಾಹಿತಿಯನ್ನು ಅಮೇರಿಕಾದ ‘ನ್ಯಾಶನಲ್ ಇಂಟೆಲಿಜೆನ್ಸ್ನ ನಿರ್ದೇಶಕರಾದ ಜಾನ್ ರ‍್ಯಾಟ್‌ಕ್ಲಿಫ್ ಇವರು ನೀಡಿದ್ದಾರೆ. ಈ ವಿಷಯದ ಮಾಹಿತಿಯು ಅಮೇರಿಕಾದ ಪ್ರಸಿದ್ಧ ಪತ್ರಿಕೆ ‘ವಾಲ್‌ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಚೀನಾ ವಿವಿಧ ರೀತಿಯ ಅನೇಕ ಪರೀಕ್ಷಣೆ ಗಳನ್ನು ಮಾಡುತ್ತಿದೆ. ಇದರಿಂದ ಚೀನಿ ಸೈನಿಕರ ಯುದ್ಧಕ್ಷಮತೆ ಹೆಚ್ಚಾಗಲು ಸಹಾಯವಾಗುವುದು.

೨. ‘ಅಥಲೆಟಿಕ್ಸ್ ಸ್ಪರ್ಧೆಯ ಸಮಯದಲ್ಲಿ ಅನೇಕ ಕ್ರೀಡಾಪಟುಗಳು ತಮ್ಮ ಕ್ಷಮತೆಯನ್ನು ಹೆಚ್ಚಿಸಲು ಅನೇಕ ಅನಧಿಕೃತ ವಿಷಯಗಳನ್ನು ಉಪಯೋಗಿಸುವುದು

ಚೀನಾ ಕ್ಷಮತೆಯನ್ನು ಹೆಚ್ಚಿಸಲು ಜೈವಿಕ ತಂತ್ರಜ್ಞಾನವನ್ನು ಈ ಹಿಂದೆಯೂ ಬಳಸಿತ್ತು. ಅಥಲೆಟಿಕ್ಸ್ ಸ್ಪರ್ಧೆಯ ಸಮಯದಲ್ಲಿ ಕ್ಷಮತೆಯನ್ನು ಹೆಚ್ಚಿಸಲು ಅನೇಕ ಜನರು ಹಾರ್ಮೋನ್ಸ್‌ಗಳ ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಸ್ಟೆರಾಯ್ಡ್‌ಗಳ ಸೇವನೆಯನ್ನೂ ಮಾಡುತ್ತಾರೆ. ಇದರಿಂದ ನಿರ್ದಿಷ್ಟ ಅವಧಿಯವರೆಗೆ ಅವರ ಕ್ಷಮತೆಯು ಹೆಚ್ಚಾಗುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ದಾಖಲೆ ನಿರ್ಮಿಸಲು ಅವರಿಗೆ ಸಹಾಯವಾಗುತ್ತದೆ.

ಆದರೆ ಹೀಗೆ ಮಾಡಿದ್ದರಿಂದ ಅನೇಕ ಜಾಗತಿಕ ಮಟ್ಟದ ಕ್ರೀಡಾಪಟುಗಳು ತೊಂದರೆಗಳಲ್ಲಿ ಸಿಲುಕಿದ್ದಾರೆ. ಕೆಲವು ವರ್ಷಗಳ ಹಿಂದೆ ಜ್ಯೋ ಗ್ರಿಫಿಶ್ ಜಾಯ್‌ನರ್ ಹೆಸರಿನ ಅಮೇರಿಕನ್ ಮಹಿಳಾ ಕ್ರೀಡಾಪಟು ಎರಡು ಬಾರಿ ವಿಶ್ವಮಟ್ಟದಲ್ಲಿ ಬಂಗಾರದ ಪದಕವನ್ನು ಗೆದ್ದಿದ್ದಳು. ೧೦ ಸೆಕೆಂಡ್‌ಗಳಲ್ಲಿ ೧೦೦ ಮೀಟರ್ ಅಂತರವನ್ನು ಪಾರು ಮಾಡುವಲ್ಲಿ ಅವಳು ಜಗತ್ತಿನ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಳು. ಅವಳು ಯಾವುದಾದರೂ ಅಮಲು ಪದಾರ್ಥವನ್ನು ಸೇವಿಸುತ್ತಿರಬಹುದೆಂದು, ಆ ಸಮಯದಲ್ಲಿ ಸಂಶಯವನ್ನು ವ್ಯಕ್ತಪಡಿಸಲಾಗಿತ್ತು. ಆ ಸಂಶಯ ನಂತರ ನಿಜವಾಯಿತು. ಅವಳು ಮಾಡಿದ ವಿಶ್ವಮಟ್ಟದ ದಾಖಲೆಯನ್ನು ತಿರಸ್ಕರಿಸಲಾಯಿತು. ಅದಾದ ೨ ವರ್ಷಗಳಲ್ಲಿಯೇ ಅವಳು ಮೃತಪಟ್ಟಳು.

ಭವಿಷ್ಯದಲ್ಲಿ ಯುದ್ಧಗಳಲ್ಲಿ ಈ ತಂತ್ರಜ್ಞಾನದ ಉಪಯೋಗವಾಗಬಹುದು. ‘ಸೂಪರ್ ಸೋಲ್ಜರ್ಸ್ಸ್ ಸಂಕಲ್ಪನೆಯನ್ನು ವೈಜ್ಞಾನಿಕ ಕಥೆಗಳಿಂದ ತೆಗೆದುಕೊಳ್ಳಲಾಗಿದೆ. ಅದರಲ್ಲಿ  ಡಿ.ಎನ್.ಎ. ಅಥವಾ ಜೀನ್ಸ್‌ಗಳ ರಚನೆಯಲ್ಲಿ ಬದಲಾವಣೆ ಮಾಡಿ ಮಾನವನ ಕ್ಷಮತೆಯನ್ನು ಹೆಚ್ಚಿಸಬಹುದು ಎಂಬುದು ಕೆಲವು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಂತೆಯೇ ಶರೀರದ ಅವಯವಗಳು ತನ್ನಿಂತಾನೇ ಬೆಳೆಯುವಂತಹ ವಿಷಯಗಳು ಭವಿಷ್ಯದಲ್ಲಿ ಅಸ್ತಿತ್ವದಲ್ಲಿ ಬರಬಹುದು; ಆದರೆ ನಿಸರ್ಗದ ವಿರುದ್ಧ ಹೋಗಿ ಮಾನವನ ಶರೀರದಲ್ಲಿ ಬದಲಾವಣೆಗಳನ್ನು ಮಾಡುವುದು ಸೂಕ್ತವಲ್ಲವೆಂದು ವಿಜ್ಞಾನಿಗಳು ಮತ್ತು ಸಮಾಜವು ಇಂತಹ ಸಂಶೋಧನೆಗಳನ್ನು ವಿರೋಧಿಸುತ್ತದೆ.

೩. ಚೀನಾ ಜೈವಿಕ ಸಂಶೋಧನೆಯನ್ನು ಉಪಯೋಗಿಸಿ ಸೈನಿಕರ ಕ್ಷಮತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದರ ಕಾರಣಗಳು

ಜೈವಿಕ ಸಂಶೋಧನೆಯನ್ನು ಉಪಯೋಗಿಸಿ ನಮ್ಮ ಶಾರೀರಿಕ ಕ್ಷಮತೆಯನ್ನು ಸ್ವಲ್ಪ ಸಮಯಕ್ಕಾಗಿ ಹೆಚ್ಚಿಸಬಹುದು ಅಥವಾ ಕೆಲವು ನಿರ್ದಿಷ್ಟ ಕಾಲಾವಧಿಯವರೆಗೆ ಹೆಚ್ಚಿಸಬಹುದು, ಆದರೆ ಇದರಿಂದ ಮಾನವನ ಶರೀರದ ಮೇಲೆ ದುಷ್ಪರಿಣಾಮಗಳೂ ಆಗುತ್ತವೆ. ಹೀಗಿರುವಾಗ ಚೀನಾ ಹೀಗೇಕೆ ಮಾಡುತ್ತಿದೆ ಎಂದರೆ, ಚೀನಿ ಸೈನಿಕರಲ್ಲಿ ಅತ್ಯಂತ ಎತ್ತರದ ಸ್ಥಳಗಳಲ್ಲಿ ಹೋರಾಡುವ ಕ್ಷಮತೆ ಕಡಿಮೆ ಬೀಳುತ್ತದೆ. ಈ ಕಾರಣದಿಂದ ಆ ಪ್ರದೇಶಗಳಲ್ಲಿರುವ ಸೈನಿಕರ ಕ್ಷಮತೆಯನ್ನು ಹೆಚ್ಚಿಸಲು ಚೀನಾ ‘ಸೂಪರ್ ಸೋಲ್ಜರ್ಸ್ರನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದೆ. ಇಂತಹ ‘ಸೂಪರ್ ಸೋಲ್ಜರ್ಸ್ ರಾತ್ರಿಯ ಸಮಯದಲ್ಲಿಯೂ ಚೆನ್ನಾಗಿ ಕಾರ್ಯವನ್ನು ನಿರ್ವಹಿಸಬಲ್ಲರು. ಅವರ ಶಕ್ತಿ, ಕ್ಷಮತೆ ಮತ್ತು ಚಾತುರ್ಯ ಬಹಳ ಹೆಚ್ಚಾಗುವುದು, ಹಾಗೆಯೇ ಸಾಮಾನ್ಯ ಚೀನಾ ಸೈನಿಕರ ತುಲನೆಯಲ್ಲಿ ಅತ್ಯಧಿಕ ಸಮಯದವರೆಗೆ ಈ ಕಠಿಣ ಸ್ಥಳಗಳಲ್ಲಿ ಅವರು ಒಳ್ಳೆಯ ಪದ್ಧತಿಯಿಂದ ಕಾರ್ಯವನ್ನು ಮಾಡಿ ಶತ್ರುಗಳನ್ನು ಸೋಲಿಸಬಹುದು.

೪. ಚೀನಾದ ಜೈವಿಕ ಸಂಶೋಧನೆಯನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಒತ್ತಡವನ್ನು ಹೆಚ್ಚಿಸುವುದು ಆವಶ್ಯಕ !

ಚೀನಾವು ಜಗತ್ತಿನ ಅತಿದೊಡ್ಡ ಮಹಾಶಕ್ತಿಯಾಗಲು ನೈತಿಕತೆಯ ಪಾಲನೆಯನ್ನು ಮಾಡಿಲ್ಲ. ಈ ರೀತಿ ಅವರು ವ್ಯೂಹಾನ್ ಪ್ರಯೋಗಾಲಯದಲ್ಲಿ ಚೀನಿ ವಿಷಾಣುಗಳನ್ನು ನಿರ್ಮಾಣ ಮಾಡಿ ಜಗತ್ತಿನ ಸೊಂಟವನ್ನೇ ಮುರಿದಿದ್ದಾರೆ. ಅದೇ ರೀತಿ ಮಾನವನ ಮೇಲೆ ಜೈವಿಕ ಸಂಶೋಧನೆಯನ್ನು ಮಾಡಿ ಜಗತ್ತಿನ ಮೇಲೆ ಅಧಿಕಾರ ನಡೆಸುವುದು ಚೀನಾದ ಮಹತ್ವಾಕಾಂಕ್ಷೆಯಾಗಿದೆ. ಆದುದರಿಂದ ಜಗತ್ತು ಈ ವಿಷಯವನ್ನು ಗಂಭೀರವಾಗಿ ವಿಚಾರ ಮಾಡಬೇಕು. ಚೀನಾದ ಈ ಕಾರ್ಯವನ್ನು ತಡೆಯಲು ಜಗತ್ತು ಏನು ಮಾಡಬಹುದು? ಅಂತರರಾಷ್ಟ್ರೀಯ ಕಾನೂನು ಜೈವಿಕ ಅಥವಾ ರಾಸಾಯನಿಕ ಸಂಶೋಧನೆಯು ಮನುಕುಲದ ವಿರುದ್ಧವಿದ್ದರೆ ಅದನ್ನು ಮಾಡಬಾರದು ಎಂದು ಹೇಳುತ್ತದೆ. ಈ ಕಾನೂನನ್ನು ಚೀನಾದ ವಿರುದ್ಧ ಉಪಯೋಗಿಸಿ ಈ ರೀತಿಯ ಸಂಶೋಧನೆಗಳನ್ನು ತಡೆಯಲು ಅವರ ಮೇಲೆ ಒತ್ತಡವನ್ನು ಹೇರುವುದು ಆವಶ್ಯಕವಾಗಿದೆ. ಚೀನಾ ಈ ಒತ್ತಡಕ್ಕೆ ಮಣಿಯುವುದೇ ? ಅದರ ಉತ್ತರ ಇಲ್ಲವೆಂದೇ ಹೇಳಬೇಕಾಗುವುದು. ಚೀನಾವು ಅನೇಕ ಅಂತರರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವುದಿಲ್ಲ, ಹಾಗೆಯೇ ಇದರ ಬಗ್ಗೆಯೂ ಆಗಬಹುದು. ಆದುದರಿಂದ ಸಾಮಾನ್ಯ ಚೀನಿ ನಾಗರಿಕರಿಗಾಗಿ ಒಂದು ಮಾನಸಿಕ ಯುದ್ಧವನ್ನು ಮಾಡಬೇಕಾಗುವುದು. ಅವರಿಗೆ  ಚೀನಾ ಸರಕಾರವು ಚೀನಿ ನಾಗರಿಕರ ಮೇಲೆ ಸಂಶೋಧನೆಯನ್ನು ಮಾಡಿ, ಅವರ ಆರೋಗ್ಯಕ್ಕೆ ಅಪಾಯ ತರುತ್ತಿದೆ ಎಂದು ಹೇಳಬೇಕಾಗುವುದು.

೫. ಚೀನಾದ ಮೇಲೆ ಸೂಕ್ಷ್ಮ ಕಣ್ಣಿಡಬೇಕು !

ಕೆಲವು ವರ್ಷಗಳ ಹಿಂದೆ ಚೀನಿ ಆಟಗಾರರು ಜಗತ್ತಿನ ಮೇಲೆ ತಮ್ಮ ವರ್ಚಸ್ಸನ್ನು ಬೀರಲು ಪ್ರಾರಂಭಿಸಿದ್ದರು. ಆ ಸಮಯದಲ್ಲಿಯೂ ಚೀನಿ ಆಟಗಾರರು ಆಕಸ್ಮಿಕವಾಗಿ ಹೇಗೆ ವಿಶ್ವದರ್ಜೆಯ ಆಟಗಾರರಾಗುತ್ತಿದ್ದಾರೆ ಎನ್ನುವ ಸಂಶಯವೂ ನಿರ್ಮಾಣವಾಗಿತ್ತು. ಆಗಲೂ ಅವರು ಅಮಲು ಪದಾರ್ಥಗಳಿಂದ, ಪ್ರಚೋದಿಸುವ ಉತ್ತೇಜನಕಾರಿ ಇಂಜೆಕ್ಷನ್‌ಗಳಿಂದ ಹಾಗೂ ಜೈವಿಕ ಸಂಶೋಧನೆಗಳಿಂದ ಅವರ ಕ್ಷಮತೆಯನ್ನು ಹೆಚ್ಚಿಸಿರಬೇಕು, ಅಲ್ಲದೇ ಇಂತಹ ವಿಷಯಗಳು ಈ ಮೊದಲೂ ಆಗಿರಬಹುದು. ಚೀನಾಗೆ ಇದನ್ನೆಲ್ಲ ಮಾಡುವ ಕ್ಷಮತೆ ಖಂಡಿತವಾಗಿಯೂ ಇದೆ. ಆದುದರಿಂದ ಚೀನಾ ನಿರ್ದಿಷ್ಟವಾಗಿ ಏನು ಮಾಡುತ್ತಿದೆ ಎಂಬುದರ ಕಡೆಗೆ ಜಗತ್ತು ಸೂಕ್ಷ್ಮವಾಗಿ ಗಮನವನ್ನು ಇಡಬೇಕು.

೬. ಇತರ ದೇಶಗಳ ‘ಸೂಪರ್ ಸೋಲ್ಜರ್ಸ್ ಅಭಿವೃದ್ಧಿ ಪಡಿಸುವ ಪ್ರಯತ್ನ

ಅಮೇರಿಕಾದ ಸೈನ್ಯದಿಂದಲೂ ‘ಸೂಪರ್ ಸೋಲ್ಜರ್ಸ್ರನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಗಳು ನಡೆದಿದ್ದವು. ಅದರಲ್ಲಿ ನೋವನ್ನು ಹೋಗಲಾಡಿಸುವುದು, ಟೆಲಿಪಥಿ ಅಥವಾ ರೊಬೊಟ್ಸಗಳೊಂದಿಗೆ ವಿಚಾರ ವಿನಿಮಯ ಮಾಡಿ ಸೈನಿಕರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನ ನಡೆದವು. ಇತರ ದೇಶಗಳೂ ಇಂತಹ ಸಂಶೋಧನೆಗಳಲ್ಲಿ ಬಂಡವಾಳವನ್ನು ಹೂಡಿದ್ದವು. ಅದರಲ್ಲಿ ವಿಶೇಷ ಪ್ರಗತಿಯಾಗಲಿಲ್ಲ; ಆದರೆ ಆ ಸಂಶೋಧನೆ ಸ್ಥಗಿತಗೊಳ್ಳಲಿಲ್ಲ. ‘ಸ್ಪೋರ್ಟ್ ಮೆಡಿಸಿನ್ನಲ್ಲಿ ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವಿರತ ಸಂಶೋಧನೆಯನ್ನು ನೈತಿಕತೆಯ ಪರಿಧಿಯೊಳಗೆ ನಡೆಸಲಾಗುತ್ತಿದೆ.

೭. ಭಾರತವು ಜಗತ್ತು ಮಾನ್ಯತೆಯನ್ನು ನೀಡಿದ ಪದ್ಧತಿಯಲ್ಲಿ ಸಂಶೋಧನೆಯನ್ನು ಮಾಡಬೇಕು.

ಭಾರತದ ವಿಚಾರವನ್ನು ಮಾಡಿದರೆ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಜೈವಿಕ ಪದ್ಧತಿಯನ್ನು ಉಪಯೋಗಿಸಬಹುದು. ಚೀನಿ ವಿಷಾಣುಗಳ ವಿರುದ್ಧ ಲಸಿಕೆಯ ಸಂಶೋಧನೆಯನ್ನು ನಡೆಸಲಾಗುತ್ತಿದೆ.  ಜಗತ್ತು ಮಾನ್ಯತೆಯನ್ನು ನೀಡಿದ ಪದ್ಧತಿಯಿಂದ ಭಾರತೀಯ ವಿಜ್ಞಾನಿಗಳು ಕೂಡ ಸಂಶೋಧನೆಯನ್ನು ಪ್ರಾರಂಭಿಸಬೇಕು, ಅಂದರೆ ಈ ರೀತಿಯ ಜೈವಿಕ ಅಪಾಯಗಳನ್ನು ಎದುರಿಸಲು ಭಾರತವು ಸಜ್ಜಾಗಿರಬಹುದು. ಚೀನಾದ ‘ಸೂಪರ್ ಸೋಲ್ಜರ್ಸ್ ಬಗ್ಗೆ ಹೇಳುವುದಾದರೆ, ಚೀನಾದ ಮೇಲೆ ಸೂಕ್ಷ್ಮ ಕಣ್ಗಾವಲನ್ನು ಇಟ್ಟು ಅವಶ್ಯಕತೆಯೆನಿಸಿದರೆ, ಜಗತ್ತಿನ ಸಹಾಯವನ್ನು ಪಡೆದು ಚೀನಾದ ಅಪಾಯಕಾರಿ ಸಂಶೋಧನೆಯನ್ನು ಸ್ಥಗಿತಗೊಳಿಸುವ ಆವಶ್ಯಕತೆಯಿದೆ. ಜಗತ್ತಿನಲ್ಲಿ ವಿವಿಧ ಕಾನೂನುಗಳನ್ನು ಉಪಯೋಗಿಸಿ ಚೀನಾವನ್ನು ತಡೆಯಲು ಪ್ರಯತ್ನಿಸಬೇಕು.

೮. ಚೀನಾದ ಜೈವಿಕ ಸಂಶೋಧನೆಯನ್ನು ಇಸ್ರೈಲ್‌ನ ಪದ್ಧತಿಯಿಂದ ಉತ್ತರಿಸಬಹುದೇ ?

ಇಸ್ರೈಲ್ ದೇಶವು ಜಗತ್ತಿನ ವಿರುದ್ಧ ಸಂಶೋಧನೆಯನ್ನು  ಮಾಡುವ ಸಂಶೋಧನಕಾರರ ಮೇಲೆ ಅಥವಾ ಸಂಶೋಧನೆಯನ್ನು ಮಾಡುವ ಸಂಸ್ಥೆಗಳ ಮೇಲೆ ಅನೇಕ ಬಾರಿ ಆಕ್ರಮಣ ಮಾಡಿದೆ.  ಉದಾ. ಕಳೆದ ತಿಂಗಳು ಇರಾನ್‌ಗಾಗಿ ಅಣುಬಾಂಬ್ ತಯಾರಿಸುತ್ತಿದ್ದ ಇರಾನಿನ ಅಣುವಿಜ್ಞಾನಿಯನ್ನು ಹತ್ಯೆ ಮಾಡಲಾಯಿತು. ಇದರಿಂದ ಇರಾನಿನ ಅಣು ಸಂಶೋಧನಾ ಕಾರ್ಯಕ್ಕೆ ಹಿನ್ನೆಡೆಯಾಯಿತು. ಇಂತಹ ಕ್ರಮಗಳನ್ನು ಅಮೇರಿಕಾ ಮತ್ತು ಇತರ ಯುರೋಪಿನ ದೇಶಗಳು ಚೀನಾದ ವಿರುದ್ಧ ಮಾಡಬಲ್ಲವೇ ?  ನಮ್ಮ ಬಳಿ ಚೀನಾದ ಸಂಶೋಧನೆಗೆ ಪ್ರತ್ಯುತ್ತರ ನೀಡಲು ಸಮಯವಿದೆ. ಈ ಸಮಯದ ಸದುಪಯೋಗಪಡಿಸಿಕೊಂಡು ನಾವೂ ನಮ್ಮ ಸಂಶೋಧನೆಯ ವೇಗವನ್ನು ಹೆಚ್ಚಿಸಬೇಕು.

–  (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.