ಯುದ್ಧದಲ್ಲಿ ಕುಶಲ ನೇತೃತ್ವದ ಮಹತ್ವ ! 

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಸ್ವಾತಂತ್ರ್ಯದ ನಂತರ ಸೈನ್ಯದ ಆಧುನೀಕರಣಗೊಳಿಸದ ಕಾರಣ ೧೯೬೨ ರ ಯುದ್ಧದಲ್ಲಿ ಭಾರತಕ್ಕೆ ಸೋಲು

‘ಜವಾಹರಲಾಲ ನೆಹರೂರವರ ನಂತರ ಲಾಲಬಹಾದ್ದೂರ್ ಶಾಸ್ತ್ರಿ ಭಾರತದ ಪ್ರಧಾನಮಂತ್ರಿಗಳಾದರು. ಅವರು ದೇಶದ ನೇತೃತ್ವವನ್ನು ಸ್ವೀಕರಿಸಿದಾಗ ದೇಶ ಸಂಕಟದಲ್ಲಿತ್ತು. ಆಗಷ್ಟೇ ೧೯೬೨ ರ ಭಾರತ-ಚೀನಾ ಯುದ್ಧ ನಡೆದು ಹೋಗಿತ್ತು. ಪಾಕಿಸ್ತಾನಕ್ಕೆ, ‘ಚೀನಾದ ವಿರುದ್ಧ ಭಾರತ ಸೋತಿದೆ, ಆದ್ದರಿಂದ ಕಾಶ್ಮೀರವನ್ನು ವಶಪಡಿಸಲು ಇದುವೇ ಯೋಗ್ಯ ಸಮಯವಾಗಿದೆ ಎಂದು ಅನಿಸಿತು. ಪಾಕಿಸ್ತಾನವು ೧೯೬೫ ರಲ್ಲಿ ಭಾರತದೊಂದಿಗೆ ಯುದ್ಧವನ್ನು ಆರಂಭಿಸಿತು. ಭಾರತ-ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದ ಸ್ಥಿತಿ ಚೆನ್ನಾಗಿರಲಿಲ್ಲ. ಭಾರತದಲ್ಲಿ ಅತ್ಯಂತ ಹಳೆಯ ಶಸ್ತ್ರಗಳಿದ್ದವು. ಭಾರತದ ಕಡೆ ಸೆಂಚೂರಿಯನ್ ಮತ್ತು ಶೆರಮಾನ್ ನಿರ್ಮಿತ ಟ್ಯಾಂಕ್‌ಗಳಿದ್ದವು. ಅವುಗಳನ್ನು ಎರಡನೆಯ ಮಹಾಯುದ್ಧದಲ್ಲಿ ಉಪಯೋಗಿಸಲಾಗಿತ್ತು. ಅವುಗಳನ್ನು ಭಾರತ ಬಿಟ್ಟು ಜಗತ್ತಿನಲ್ಲಿ ಬೇರೆ ಯಾರೂ ಬಳಸುತ್ತಿರಲಿಲ್ಲ. ಅಲ್ಲದೇ ಭಾರತೀಯ ವಾಯುದಳದ ಬಳಿ ಇದ್ದ ವಿಮಾನಗಳೂ ಎರಡನೆಯ ಮಹಾಯುದ್ಧದಲ್ಲಿ ಉಪಯೋಗಿಸಲಾಗಿತ್ತು. ಅದರ ತುಲನೆಯಲ್ಲಿ ಪಾಕಿಸ್ತಾನದ ಬಳಿ ಅತ್ಯಂತ ಆಧುನಿಕ ಶಸ್ತ್ರಗಳಿದ್ದವು. ಅವರ ಅವರಲ್ಲಿ ಅಮೇರಿಕಾ ನಿರ್ಮಿತ ಪ್ಯಾಟನ್ ಟ್ಯಾಂಕ್‌ಗಳಿದ್ದವು. ಪ್ಯಾಟನ್ ಟ್ಯಾಂಕ್‌ಗಳು ಆ ಸಮಯದಲ್ಲಿ ಅತ್ಯಂತ ಆಧುನಿಕ ಟ್ಯಾಂಕ್‌ಗಳಾಗಿದ್ದವು. ಅಷ್ಟು ಮಾತ್ರವಲ್ಲ, ಆ ಸಮಯದ ಆಧುನಿಕ ಜೆಟ್ ವಿಮಾನಗಳೂ ಪಾಕಿಸ್ತಾನದ ಬಳಿಯಿದ್ದವು. ಆಧುನಿಕತೆಯ ವಿಚಾರ ಮಾಡಿದರೆ, ಪಾಕಿಸ್ತಾನದ ಸೈನ್ಯ ಭಾರತಕ್ಕಿಂತ ತುಂಬಾ ಮುಂದಿತ್ತು. ಆ ಸಮಯದಲ್ಲಿ ಭಾರತೀಯ ನೇತೃತ್ವವು ಸೈನ್ಯದ ಶಸ್ತ್ರಸಿದ್ಧತೆಯ ಕಡೆಗೆ ಸ್ವಲ್ಪವೂ ಗಮನ ಹರಿಸಿರಲಿಲ್ಲ.

ಇದು ೧೯೬೨ ರ ವಿಷಯವಾಗಿದೆ. ಆಗ ಜನರಲ್ ತಿಮ್ಮಯ್ಯ ಇವರು ಭಾರತೀಯ ಸೈನ್ಯದ ಪ್ರಮುಖರಾಗಿದ್ದರು. ಅವರು ದೇಶದ ಭದ್ರತೆಯ ವಿಷಯದಲ್ಲಿ ನೆಹರುರವರೊಂದಿಗೆ ಮಾತನಾಡಲು ಹೋಗಿದ್ದರು. ಆಗ ನೆಹರುರವರಿಗೆ ತುಂಬಾ ಕೋಪ ಬಂದಿತು. ಆಗ ಅವರು, “ನಮಗೆ ಸೈನ್ಯದ ಅವಶ್ಯಕತೆಯಿಲ್ಲ. ನಮ್ಮಲ್ಲಿ ಸಾಕಾಷ್ಟು ಪೊಲೀಸರಿದ್ದಾರೆ ಅವರೇ ಸಾಕು. ಭಾರತ-ಚೀನಾದ ನಡುವೆ ಯುದ್ಧ ನಡೆಯುವುದಿಲ್ಲ. ಒಂದು ವೇಳೆ ನಡೆದರೆ, ನಾನು ಅದನ್ನು ರಾಜನೀತಿಯ ಮೂಲಕ ನಿಲ್ಲಿಸುವೆನು ಎಂದು ಹೇಳಿದರು. ೧೯೬೨ ರಲ್ಲಿ ಭಾರತೀಯ ಸೈನ್ಯವಲ್ಲ, ನಮ್ಮ ನೇತೃತ್ವ ಸೋತಿತು. ಅದು ಹೇಗಾಯಿತು ಎನ್ನುವ ಇತಿಹಾಸವು ಎಲ್ಲರಿಗೂ ತಿಳಿದಿದೆ. ಭಾರತದ ಸೈನ್ಯ ಪ್ರಬಲವಾಗಿತ್ತು; ಆದರೆ ಸ್ವಾತಂತ್ರ್ಯದ ನಂತರ ಸೈನ್ಯವನ್ನು ಆಧುನೀಕರಣಗೊಳಿಸುವ ಪ್ರಯತ್ನ ನಡೆದಿರಲಿಲ್ಲ.

೨. ದೇಶದ ನೇತೃತ್ವವು ಚೆನ್ನಾಗಿರುವುದರಿಂದ ಭಾರತೀಯ ಸೈನ್ಯವು ಇತಿಹಾಸವನ್ನು ಸೃಷ್ಟಿಸುವುದು

೧೯೬೫ ರಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧವನ್ನು ಆರಂಭಿಸಿತು, ಆಗ ಅವರ ಟ್ಯಾಂಕ್‌ಗಳು ಛಂಬಮಾರ್ಗದಿಂದ ಅಖನೂರದ ಕಡೆಗೆ ಬರುತ್ತಿದ್ದವು. ಅಖನೂರಿನ ಸಮೀಪ ಪೂಂಛ ರಾಜೋರಿಯತ್ತ ಹೋಗುವ ಮಾರ್ಗವಿತ್ತು. ಒಂದು ವೇಳೆ ಅದು ಬಂದ್ ಆಗುತ್ತಿದ್ದರೆ, ನಮ್ಮ ಪೂಂಛ ರಾಜೋರಿಗಿನ ಸಂಪರ್ಕ ಬಂದ್ ಆಗುತಿತ್ತು. ಇದನ್ನು ಗಮನದಲ್ಲಿಟ್ಟು  ಸೈನ್ಯದಳ ಮುಖ್ಯಸ್ಥ ಜನರಲ್ ಜೆ.ಎನ್. ಚೌಧರಿ ಇವರು ಆ ಸಮಯದ ರಕ್ಷಣಾಸಚಿವರಾದ ಯಶವಂತರಾವ್ ಚವ್ಹಾಣರ ಬಳಿ ಹೋದರು. ಅವರಿಗೆ, “ನಮಗೆ ಪಾಕಿಸ್ತಾನದ ಸೈನ್ಯವನ್ನು ತಡೆಯಲು ಸಾಧ್ಯವಿಲ್ಲ. ನಮಗೆ ವಾಯುದಳವನ್ನು ಉಪಯೋಗಿಸುವುದು ಅನಿವಾರ್ಯವಿದೆ ಎಂದು ಹೇಳಿದರು. ಆಗ ಚವ್ಹಾಣರು ವಾಯು ದಳವನ್ನು ಉಪಯೋಗಿಸುವುದಿದ್ದರೆ ನನಗೆ ಸಂಸತ್ತಿಗೆ ಮನವರಿಕೆ ಮಾಡಿಕೊಡಬೇಕಾಗುವುದು ಎಂದು ಹೇಳಿದರು, ‘ಅದಕ್ಕೆ ನಮ್ಮಲ್ಲಿ ಸ್ವಲ್ಪವೂ ಸಮಯವಿಲ್ಲ, ನೀವೇ ಅದರ ನಿರ್ಧಾರ ತೆಗೆದು ಕೊಳ್ಳಬೇಕು, ಹೀಗಾಗದಿದ್ದರೆ, ನಮ್ಮ ಮಾರ್ಗ ಬಂದ್ ಆಗುವುದು ಹಾಗೂ ಸೈನಿಕರಿಗೆ ಇದೊಂದು ದೊಡ್ಡ ಹಿನ್ನಡೆಯಾಗಿದೆ ಎಂದು ಚೌಧರಿಯವರು ಹೇಳಿದರು. ಅದಕ್ಕೆ ಕೂಡಲೇ ಚವ್ಹಾಣರು ವಾಯುದಳವನ್ನು ಉಪಯೋಗಿಸಲು ಅನುಮತಿ ನೀಡಿದರು. ಅನಂತರ ೪೦ ನಿಮಿಷಗಳಲ್ಲಿ ಭಾರತೀಯ ವಾಯುದಳದ ವಿಮಾನಗಳು ಬಂದು ಪಾಕಿಸ್ತಾನದ ಸೈನ್ಯವನ್ನು ತಡೆದವು. ಯಶವಂತರಾವ್ ಇವರಿಗೆ ಯುದ್ಧದಲ್ಲಿ ಅನುಭವವಿರಲಿಲ್ಲ; ಆದರೆ ನೇತೃತ್ವ ಚೆನ್ನಾಗಿದ್ದರೆ ಏನಾಗುತ್ತದೆ, ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.

ಆ ಯುದ್ಧವು ಮುಂದುವರಿಯಿತು. ಒಂದು ದಿನ ಅನಿರೀಕ್ಷಿತವಾಗಿ ಪಾಕಿಸ್ತಾನವು ಟ್ಯಾಂಕ್‌ಗಳೊಂದಿಗೆ ಪಂಜಾಬ್‌ನೊಳಗೆ ನುಸುಳಿತು. ಜನರಲ್ ಚೌಧರಿ ಅಂದಿನ ಪ್ರಧಾನಮಂತ್ರಿ ಲಾಲ್‌ಬಹಾದ್ದೂರ ಶಾಸ್ತ್ರಿಯವರಿಗೆ ಇದನ್ನು ಹೇಳಿದರು, ‘ಪಾಕಿಸ್ತಾನದ ಸೈನ್ಯ ಟ್ಯಾಂಕ್‌ಗಳೊಂದಿಗೆ ನಮ್ಮ ಖೇಮಕರಣದತ್ತ ಬರುತ್ತಿವೆ. ಅವುಗಳನ್ನು ತಡೆಯಲು ನಮಗೆ ಪಾಕಿಸ್ತಾನದ ವಿರುದ್ಧ ಬೇರೆಕಡೆ ಯುದ್ಧವನ್ನು ಪ್ರಾರಂಭಿಸಬೇಕಾಗುವುದು, ನಾವು ತಕ್ಷಣ ಲಾಹೋರ್‌ನತ್ತ ಮುನ್ನುಗ್ಗಬೇಕಾಗುವುದು ಎಂದು ಜನರಲ್ ಚೌಧರಿ ಹೇಳಿದರು. ಆಗ ಶಾಸ್ತ್ರಿಯವರು, “ಇಲ್ಲ ! ಅದಕ್ಕಾಗಿ ನನಗೆ ಸಂಸತ್ತಿನ ಅನುಮತಿ ಪಡೆಯಬೇಕಾಗುವುದು, ಎಂದು ಹೇಳಿದರು, ಅದಕ್ಕೆ ಜನರಲ್ ಚೌಧರಿ ಇವರು, “ನಮ್ಮ ಬಳಿ ಅದಕ್ಕೆ ಸಮಯವಿಲ್ಲ. ನೀವು ತಕ್ಷಣ ಒಪ್ಪಿಕೊಳ್ಳ ಬೇಕು ಎಂದು ಹೇಳಿದರು. ಅದಕ್ಕೆ ಶಾಸ್ತ್ರಿಯವರು “ಸರಿ, ಹಾಗಾದರೆ ಆಕ್ರಮಣ ಮಾಡಿರಿ, ಪಾಕಿಸ್ತಾನದೊಳಗೆ ನುಸುಳಲು ನಾನು ಅನುಮತಿ ನೀಡುತ್ತೇನೆ ಎಂದು ಹೇಳಿದರು. ಭಾರತೀಯ ಸೈನ್ಯವು ೧೯೪೭ ರ ನಂತರ ಮೊದಲ ಬಾರಿಗೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ಸಿಯಾಲಕೋಟ ಮತ್ತು ಲಾಹೋರ ದಿಕ್ಕಿಗೆ ಮುನ್ನುಗ್ಗಲು ಆರಂಭಿಸಿತು. ಅನಂತರ ಏನಾಯಿತೋ ಅದೊಂದು ಗೌರವಶಾಲಿ ಇತಿಹಾಸವಾಗಿದೆ. ಈ ಯುದ್ಧದಲ್ಲಿ ಭಾರತೀಯ ಸೈನ್ಯವು ಅತ್ಯಂತ ಉತ್ತಮ ಕಾರ್ಯವನ್ನು ಮಾಡಿತು. ೧೯೬೨ ರ ಆಘಾತದ ನಂತರ ೧೯೬೫ ರ ಯುದ್ಧವನ್ನು ಗೆಲ್ಲುವುದು ಭಾರತಕ್ಕೆ ಮಹತ್ವದ ವಿಷಯವಾಗಿತ್ತು.

– ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ