‘ಕೆಲವು ಸಂಸ್ಥೆಗಳು ಯಾವುದೇ ಕಾರ್ಯವಿದ್ದರೂ ಅದನ್ನು ಚೆನ್ನಾಗಿ ಮಾಡುತ್ತಿರುತ್ತವೆ, ಉದಾ. ಸ್ನಾಯು ಮತ್ತು ಎಲುಬಿನ ರೋಗಗಳಿಗೆ ಮಸಾಜ್ ಮಾಡಲು ಶಿಬಿರವನ್ನು ಆಯೋಜಿಸಿ ಕಲಿಸುತ್ತವೆ. ಕೆಲವು ಸಂಸ್ಥೆಗಳು ನೇತ್ರಚಿಕಿತ್ಸೆಯನ್ನು ಆಯೋಜಿಸು ತ್ತವೆ. ಅವುಗಳಲ್ಲಿ ಕೆಲವೊಂದಕ್ಕೆ ಸರಕಾರ ಅಲ್ಪಸ್ವಲ್ಪ ಸಹಾಯ ಮಾಡುತ್ತದೆ. ಸರಕಾರೇತರ ಸಂಘಸಂಸ್ಥೆಗಳು ಇಂತಹ ಶಿಬಿರಗಳನ್ನು ಆಯೋಜಿಸುತ್ತವೆ. ಆದರೆ ಇದು ಏನನ್ನು ತೋರಿಸುತ್ತದೆಯೆಂದರೆ ಸರಕಾರಿ ಆರೋಗ್ಯ ಇಲಾಖೆಯಲ್ಲಿ ಯೋಗ್ಯ ರೀತಿಯಲ್ಲಿ ಈ ಕಾರ್ಯ ನಡೆಯುವುದಿಲ್ಲ. ಇದು ಸರಕಾರಕ್ಕೆ ಲಜ್ಜಾಸ್ಪದವಾಗಿದೆ. ‘ಜನರ ಚಿಕಿತ್ಸೆಗಾಗಿ ತಾನೇ ಎಲ್ಲ ಸೌಲಭ್ಯಗಳನ್ನು ಒದಗಿಸುವುದು, ಇದು ಸರಕಾರದ ಕರ್ತವ್ಯವಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ.
‘ಆರೋಗ್ಯದಾಯಕ ಜೀವನವು ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಅಧಿಕಾರವಾಗಿದೆ. ಅದಕ್ಕಾಗಿ ಎಲ್ಲ ನಾಗರಿಕರಿಗೆ ವಿವಿಧ ರೀತಿಯ ಆರೋಗ್ಯ ಸೇವೆ ಮತ್ತು ಸೌಲಭ್ಯಗಳನ್ನು ಪೂರೈಸುವುದು ಸರಕಾರ ಮತ್ತು ಆಡಳಿತದವರ ಕರ್ತವ್ಯವಾಗಿದೆ. ಸಮಾಜದ ಎಲ್ಲ ಘಟಕಗಳಿಗೆ ಆರೋಗ್ಯ ಸೇವೆಯನ್ನು ತಲುಪಿಸಲು ಸರಕಾರ ಮತ್ತು ಆಡಳಿತ ಬಾಧ್ಯವಾಗಿರುತ್ತದೆ. ರೋಗವಾದ ನಂತರ ಚಿಕಿತ್ಸೆ ಮಾಡಲಿಕ್ಕಲ್ಲ, ವ್ಯಾಧಿ ಆಗಲೇಬಾರದೆಂದು ಪ್ರತಿಬಂಧಕ ಆರೋಗ್ಯ ಸೌಲಭ್ಯವನ್ನು ಪೂರೈಸುವುದೂ ಸರಕಾರದ ಕರ್ತವ್ಯವಾಗಿದೆ. ಪ್ರತ್ಯಕ್ಷದಲ್ಲಿ ಮಾತ್ರ ಈ ಹೊಣೆಯನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದು ಕಾಣಿಸುವುದಿಲ್ಲ. ಸರಕಾರದ ಮಟ್ಟದಲ್ಲಿ ಆರೋಗ್ಯ ಸೇವೆಯನ್ನು ನೀಡಲು ದೊಡ್ಡ ವ್ಯವಸ್ಥೆಯಿದೆ. ಪ್ರತಿಯೊಂದು ರಾಜ್ಯದಲ್ಲಿ ಮೂಲೆ ಮೂಲೆಗಳವರೆಗೆ ಈ ಸೇವೆಯು ತಲುಪಬೇಕು, ಎನ್ನುವ ರಚನೆಯೂ ಇದೆ; ಆದರೆ ಈ ಸೇವೆಯು ಅನೇಕ ಕಾರಣಗಳಿಂದ ದುರ್ಬಲವಾಗಿದೆ. ಅದಕ್ಕೆ ಕಾರಣವಾಗಿರುವ ಘಟಕ ಯಾವುದು ? ಎಂದು ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಭಾರತದ ಆರೋಗ್ಯ ಸೇವೆಯ ವಿಭಜನೆ
೧ ಅ. ನಗರ ಪ್ರದೇಶ (Urban Area) : ನಗರ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆಯ ರಚನೆಯು ಈ ಮುಂದಿನಂತಿರುತ್ತದೆ.
೧ ಅ ೧. ಜಿಲ್ಲಾ ಆಸ್ಪತ್ರೆ (Civil or District Hospital) : ‘ಜಿಲ್ಲಾ ಆಸ್ಪತ್ರೆಯು ಆ ಜಿಲ್ಲೆಯ ನಾಗರಿಕರಿಗೆ ಆರೋಗ್ಯ ಸೇವೆಯನ್ನು ನೀಡುವ ಮುಖ್ಯ ಆಸ್ಪತ್ರೆಯಾಗಿರುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಜಿಲ್ಲಾ ಆಸ್ಪತ್ರೆ ಇರುತ್ತದೆ. ಭಾರತದಲ್ಲಿ ಒಟ್ಟು ೬೦೪ ಜಿಲ್ಲಾ ಆಸ್ಪತ್ರೆಗಳಿವೆ.
೧ ಅ ೨. ಉಪಜಿಲ್ಲಾ ಆಸ್ಪತ್ರೆ (Sub-District Hospital) : ಸುಮಾರು ೧ ರಿಂದ ೫ ಲಕ್ಷ ಜನಸಂಖ್ಯೆ ಇರುವಲ್ಲಿ ಉಪಜಿಲ್ಲಾ ಆಸ್ಪತ್ರೆಯು ಆರೋಗ್ಯ ಸೇವೆಯನ್ನು ಪೂರೈಸುತ್ತದೆ. ಭಾರತದಲ್ಲಿ ಸುಮಾರು ೧ ಸಾವಿರದ ೨೦೦ ಉಪಜಿಲ್ಲಾ ಆಸ್ಪತ್ರೆಗಳಿವೆ.
೧ ಅ ೩. ಗ್ರಾಮೀಣ ಆಸ್ಪತ್ರೆಗಳು ( Rural Hospital or Community Health Centre) : ೮೦ ಸಾವಿರದಿಂದ ೧.೨೦ ಲಕ್ಷದಷ್ಟು ಜನಸಂಖ್ಯೆ ಇರುವಲ್ಲಿ ಗ್ರಾಮೀಣ ಆಸ್ಪತ್ರೆಯು ಆರೋಗ್ಯ ಸೇವೆಯನ್ನು ಪೂರೈಸುತ್ತದೆ. ಭಾರತದಲ್ಲಿ ಸುಮಾರು ೫ ಸಾವಿರದ ೫೬೮ ಗ್ರಾಮೀಣ ಆಸ್ಪತ್ರೆಗಳಿವೆ. ನಗರಗಳಲ್ಲಿ ಈ ಆರೋಗ್ಯ ಸಂಸ್ಥೆಗಳು ಜಿಲ್ಲಾ ಆಸ್ಪತ್ರೆಗಳ ‘ಜಿಲ್ಲಾ ಶಸ್ತ್ರಚಿಕಿತ್ಸಕರ (District Civil Surgeon), ನಿಯಂತ್ರಣದಲ್ಲಿರುತ್ತವೆ.
೧ ಆ. ಗ್ರಾಮೀಣ ಪ್ರದೇಶ (Rural Area) : ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯ ರಚನೆಯು ಈ ಮುಂದಿನಂತೆ ಇರುತ್ತದೆ.
೧ ಆ ೧. ಪ್ರಾಥಮಿಕ ಆರೋಗ್ಯ ಕೇಂದ್ರ (Primary Health Centre) : ಸುಮಾರು ೨೦ ರಿಂದ ೩೦ ಸಾವಿರ ಜನಸಂಖ್ಯೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವು ಆರೋಗ್ಯ ಸೇವೆಯನ್ನು ಪೂರೈಸುತ್ತದೆ. ಭಾರತದಲ್ಲಿ ಸುಮಾರು ೨೩ ಸಾವಿರದ ೬೭೩ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.
೧ ಆ ೨. ಆರೋಗ್ಯ ಉಪಕೇಂದ್ರಗಳು (Sub-Centre) : ಸುಮಾರು ೩ ರಿಂದ ೫ ಸಾವಿರ ಜನಸಂಖ್ಯೆಗಾಗಿ ಉಪಕೇಂದ್ರಗಳು ಆರೋಗ್ಯಸೇವೆಯನ್ನು ನೀಡುತ್ತವೆ. ಭಾರತದಲ್ಲಿ ಸುಮಾರು ೧ ಲಕ್ಷದ ೫೬ ಸಾವಿರದ ೨೩೧ ಆರೋಗ್ಯ ಉಪಕೇಂದ್ರಗಳಿವೆ.
ಗ್ರಾಮೀಣ ಪ್ರದೇಶದಲ್ಲಿ ಈ ಆರೋಗ್ಯ ಸಂಸ್ಥೆಗಳು ಜಿಲ್ಲಾ ಪರಿಷತ್ತು, ಆರೋಗ್ಯ ವಿಭಾಗದ ‘ಜಿಲ್ಲಾ ಆರೋಗ್ಯ ಅಧಿಕಾರಿಯ (District Health Officer) ನಿಯಂತ್ರಣದಲ್ಲಿರುತ್ತವೆ.
ಆರೋಗ್ಯ ವ್ಯವಸ್ಥೆಯ ದುರವಸ್ಥೆಗೆ ಸರಕಾರ ಮತ್ತು ಆಡಳಿತದವರ ಉದಾಸೀನತೆಯೇ ಕಾರಣವಾಗಿದೆ !
ದೇಶದಲ್ಲಿ ಇಷ್ಟು ದೊಡ್ಡ ಆರೋಗ್ಯ ವ್ಯವಸ್ಥೆಯಿದ್ದರೂ ಆರೋಗ್ಯ ಪ್ರದೇಶಗಳ ಸ್ಥಿತಿ ಮಾತ್ರ ಅತ್ಯಂತ ದಯನೀಯವಾಗಿದೆ. ಸರಕಾರಿ ವ್ಯವಸ್ಥೆಯು ನಿರುಪಯುಕ್ತವಾಗಿರುವುದರಿಂದ ಖಾಸಗಿ ವ್ಯವಸಾಯಗಳ ಪ್ರಭಾವ ಹೆಚ್ಚಾಗಿದ್ದು ಅವರಿಂದ ಜನಸಾಮಾನ್ಯರ ಲೂಟಿಯಾಗುತ್ತಿದೆ. ಸರಕಾರಿ ಆರೋಗ್ಯ ವ್ಯವಸ್ಥೆಯ ದುರ್ಗತಿಗೆ ಕೆಲವು ಕಾರಣಗಳು ಈ ಮುಂದಿನಂತಿವೆ.
೨ ಅ. ಆರೋಗ್ಯ ಸಂಸ್ಥೆಗಳಲ್ಲಿ ಸೌಲಭ್ಯಗಳ ಕೊರತೆಯಿರುವುದು : ಸೌಲಭ್ಯಗಳ ಅಭಾವದಿಂದ ಆರೋಗ್ಯ ಸಂಸ್ಥೆಗಳಲ್ಲಿ ರೋಗಿಗಳಿಗೆ ಯೋಗ್ಯ ಸಮಯದಲ್ಲಿ ಹಾಗೂ ಯೋಗ್ಯವಾದ ಸ್ಥಳದಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಅವರಿಗೆ ಚಿಕಿತ್ಸೆ ಪಡೆಯಲು ಹಲವಾರು ಕಿ.ಮೀ. ದೂರ ಪ್ರಯಾಣಿಸಬೇಕಾಗುತ್ತದೆ. ಅವರ ಜೀವಕ್ಕೆ ಅಪಾಯವಿರುತ್ತದೆ. ಅದೇ ರೀತಿ ಅವರ ಸಮಯ ಮತ್ತು ಹಣ ಕೂಡ ವ್ಯರ್ಥವಾಗುತ್ತದೆ.
೨ ಆ. ವೈದ್ಯಕೀಯ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ನಿವಾಸ ವ್ಯವಸ್ಥೆ ಇರುವುದಿಲ್ಲ : ಆರೋಗ್ಯ ಸೇವೆಯು ಮಾನವನ ಜೀವನದ ಅತ್ಯಂತ ಮಹತ್ವದ ಸೇವೆಯಾಗಿರುವುದರಿಂದ ಅದು ೨೪ ಗಂಟೆ ಉಪಲಬ್ಧವಿರಬೇಕಾಗುತ್ತದೆ. ಅದಕ್ಕಾಗಿ ಆರೋಗ್ಯ ಸಂಸ್ಥೆಗಳು ಮತ್ತು ಸೌಲಭ್ಯಗಳು ವ್ಯವಸ್ಥಿತವಾಗಿರಬೇಕು. ವಾಸ್ತವದಲ್ಲಿ ಸರಕಾರಿ ಆರೋಗ್ಯ ಸಂಸ್ಥೆಗಳ ಸ್ಥಿತಿಯೇ ಅತ್ಯಂತ ಗಂಭೀರವಾಗಿದೆ. ಅನೇಕ ಸ್ಥಳಗಳಲ್ಲಿ ಆರೋಗ್ಯ ಸಂಸ್ಥೆಗಳ ಕಟ್ಟಡಗಳು ಪಾಳುಬಿದ್ದಿವೆ. ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ಇರುವ ಸರಕಾರಿ ನಿವಾಸಸ್ಥಾನಗಳು ವಾಸಿಸಲು ಯೋಗ್ಯವಾಗಿರುವುದಿಲ್ಲ. ಕೆಲವೊಮ್ಮೆ ಕಟ್ಟಡಗಳು ಬಿದ್ದಿರುವುದರಿಂದ ಅಧಿಕಾರಿ ಅಥವಾ ಸಿಬ್ಬಂದಿಗಳು ಅಲ್ಲಿ ವಾಸಿಸಲು ಸಾಧ್ಯವಿಲ್ಲ ಅಥವಾ ಕಾರ್ಮಿಕರು ಅಲ್ಲಿ ವಾಸಿಸದಿರುವುದರಿಂದ ಹಾಗೂ ಅಲ್ಲಿ ಯಾರೂ ನಿರ್ವಹಣೆ ಮಾಡದ ಕಾರಣ ಕಟ್ಟಡಗಳು ಸುಸ್ಥಿತಿಯಲ್ಲಿರುವುದಿಲ್ಲ. ಈ ವಿಷಯದಲ್ಲಿ ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿಯಂತ್ರಣವಿರುವುದಿಲ್ಲ, ಎಂಬುದು ಇದರಿಂದ ಸಿದ್ಧವಾಗುತ್ತದೆ. ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ೨೪ ಗಂಟೆಗಳ ಕಾಲ ಕಾರ್ಯಕ್ಷೇತ್ರದಲ್ಲಿರುವುದು ಕಡ್ಡಾಯವಾಗಿದ್ದರೂ ಈ ನಿಯಮದ ಪಾಲನೆಯಾಗುವುದಿಲ್ಲ.
೨ ಇ. ಬಿಲ್ ಬಾಕಿ ಇರುವುದರಿಂದ ವಿದ್ಯುತ್ ಹಾಗೂ ನೀರಿನ ಪೂರೈಕೆ ಇಲ್ಲದ ಕಾರಣ ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ : ಕೆಲವು ಆರೋಗ್ಯ ಸಂಸ್ಥೆಗಳ ಕಟ್ಟಡಗಳು ವ್ಯವಸ್ಥಿತವಾಗಿರುತ್ತವೆ; ಆದರೆ ಅಲ್ಲಿ ನೀರು ಅಥವಾ ವಿದ್ಯುತ್ತಿನ ಸೌಲಭ್ಯ ಇರುವುದಿಲ್ಲ. ಕೆಲವೊಮ್ಮೆ ಕೆಂಪುಪಟ್ಟಿಯ ದರ್ಬಾರಿನಲ್ಲಿ ವಿದ್ಯುತ್ ಬಿಲ್ ಯಾವ ನಿಧಿಯಿಂದ ತುಂಬಿಸಬೇಕು ?, ಎನ್ನುವ ನಿರ್ಣಯ ಇಲ್ಲದಿರುವುದರಿಂದ ಈ ಬಿಲ್‌ಗಳು ಬಾಕಿಯಾಗಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿರುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ನಿರ್ವಹಣೆ ದುರಸ್ತಿಗಾಗಿ ನಿಧಿ ಸಿಗುತ್ತಿದ್ದರೂ ಈ ಬಿಲ್‌ಗಳನ್ನು ತುಂಬಿಸಿ ಸೇವೆಯನ್ನು ಆರಂಭಿಸುವುದಿಲ್ಲ. ಅನೇಕ ಬಾರಿ ವೈದ್ಯಕೀಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಕ್ಷೇತ್ರದಲ್ಲಿರಲು ಉದಾಸೀನರಾಗಿರು ವುದರಿಂದಲೂ ಈ ಸೌಲಭ್ಯಗಳನ್ನು ತತ್ಪರತೆಯಿಂದ ಆರಂಭಿಸುವುದಿಲ್ಲ, ಎಂಬುದೂ ಕಂಡು ಬರುತ್ತದೆ.
೨ ಈ. ಸೌಲಭ್ಯಗಳನ್ನು ನೀಡಿದ್ದರೂ ಮನುಷ್ಯಬಲದ ಅಭಾವದಿಂದ ಅವುಗಳನ್ನು ಉಪಯೋಗಿಸಲು ಸಾಧ್ಯವಾಗದಿರುವುದು : ಆರೋಗ್ಯ ಸಂಸ್ಥೆಗಳಲ್ಲಿ ಆವಶ್ಯಕತೆ ಇರುವಷ್ಟು ವೈದ್ಯಕೀಯ ಅಧಿಕಾರಿಗಳು, ದಾದಿಯರು, ಆರೋಗ್ಯ ಸೇವಕಿಯರು, ತಜ್ಞ ತಂತ್ರಜ್ಞರು, ಸಿಪಾಯಿಗಳು ಇತ್ಯಾದಿ ಹುದ್ದೆಗಳ ನೇಮಕಾತಿಯಾಗಿರುವುದಿಲ್ಲ. ಕೆಲವೊಮ್ಮೆ ಎರಡು ವೈದ್ಯಕೀಯ ಅಧಿಕಾರಿಗಳ ಹುದ್ದೆಯಿರುತ್ತದೆ, ಆದರೆ ನೇಮಕಾತಿಯಾಗಿರುವುದಿಲ್ಲ. ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಷ-ಕಿರಣ ತಂತ್ರಜ್ಞ (ಎಕ್ಸ್‌ರೇ ಟೆಕ್ನಿಶಿಯನ್), ಡಯಾಲಿಸಿಸ್ ತಂತ್ರಜ್ಞ (ಟೆಕ್ನಿಶಿಯನ್) ಈ ಹುದ್ದೆ ಇರುತ್ತದೆ. ಆದರೆ ಅದನ್ನು ತುಂಬಿಸಿರುವುದಿಲ್ಲ. ಅದರ ಪರಿಣಾಮದಿಂದ ಲಕ್ಷಗಟ್ಟಲೆ ಬೆಲೆಬಾಳುವ ಯಂತ್ರಗಳು ಧೂಳು ತಿನ್ನುತ್ತಾ ಬಿದ್ದಿರುತ್ತವೆ. ಈ ಯಂತ್ರಗಳನ್ನು ಉಪಯೋಗಿಸದಿರುವುದರಿಂದ ಅವುಗಳು ಕೆಟ್ಟು ಹೋಗುತ್ತವೆ, ಕೊನೆಗೆ ಯಂತ್ರಗಳ ದುರಸ್ತಿಗಾಗಿ ನಿಧಿ ಇಲ್ಲದಿರುವುದರಿಂದ ತಂತ್ರಜ್ಞರು ಉಪಲಬ್ಧವಿದ್ದರೂ, ಸೇವೆ ಮಾತ್ರ ಇರುವುದಿಲ್ಲ. ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞ, ಬಾಲರೋಗತಜ್ಞ, ಅರವಳಿಕೆ ತಜ್ಞ ಇತ್ಯಾದಿ ಹುದ್ದೆಗಳೂ ಇರುತ್ತವೆ. ಆದರೆ ಅವುಗಳಿಗೆ ನೇಮಕಾತಿಯಾಗಿರುವುದಿಲ್ಲ. ಕೆಲವೊಮ್ಮೆ ತಜ್ಞರ ನೇಮಕ ಆಗಿರುತ್ತದೆ. ಆದರೆ ಅವರು ತಮ್ಮ ಸ್ವಂತದ ವ್ಯವಸಾಯವನ್ನು ಆರಂಭಿಸಿರುವುದರಿಂದ ಅವರು ಸರಕಾರಿ ಸಂಸ್ಥೆಗಳಿಗೆ ಬರುವುದಿಲ್ಲ.
೨ ಉ. ರೋಗಿಗಳಿಗೆ ಖರ್ಚಿನ ದಾರಿಗಳನ್ನು ತೋರಿಸುವ ಖಾಸಗಿ ವ್ಯವಸಾಯ ಮಾಡುವ ವೈದ್ಯಕೀಯ ಅಧಿಕಾರಿಗಳು ! : ಕೆಲವು ಸಿಬ್ಬಂದಿಗಳು ಅಥವಾ ವಾಹನ ಚಾಲಕರು ‘ಕಮಿಶನ್ಗಾಗಿ ಸರಕಾರಿ ಆಸ್ಪತ್ರೆಗಳಿಗೆ ಹೋಗುವ ಕೆಲವು ರೋಗಿಗಳನ್ನು ವೈಯಕ್ತಿಕ ವ್ಯವಸಾಯ ಮಾಡುವ ಆರೋಗ್ಯ ತಜ್ಞರ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಾರೆ ಹಾಗೂ ಅದರಿಂದ ‘ಕಮಿಶನ್ ಪಡೆದು ರೋಗಿಗಳ ಜೇಬು ಖಾಲಿ ಮಾಡಿಸುತ್ತಾರೆ. ವಿಶೇಷವೆಂದರೆ, ಇಂತಹ ಖಾಸಗಿ ವ್ಯವಸಾಯ ಮಾಡುವ ವೈದ್ಯಕೀಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದು ಕೊಳ್ಳುವುದಿಲ್ಲ. ಸರಕಾರಿ ಮೇಲಧಿಕಾರಿಗಳ ಸಹಕಾರದಿಂದ ಈ ವ್ಯಾಪಾರ ಸರಾಗವಾಗಿ ನಡೆಯುತ್ತವೆ ಹಾಗೂ ಅದರಲ್ಲಿ ಜನಸಾಮಾನ್ಯರು ಮೋಸ ಹೋಗುತ್ತಾರೆ. ಇದು ಆಡಳಿತದವರ ವೈಫಲ್ಯವಾಗಿದೆ.
೨ ಊ. ಯಂತ್ರಸಾಮಾಗ್ರಿ ಲಭ್ಯವಿಲ್ಲದಿರುವಾಗ ನೇಮಕ ಮಾಡಿದ ತಂತ್ರಜ್ಞರಿಗೆ ಕೆಲಸವಿಲ್ಲದೆಯೇ ವೇತನವನ್ನು ನೀಡಲಾಗುತ್ತದೆ ಮತ್ತು ಶಿಫಾರಸ್ಸಿನಿಂದ ತುಂಬಿದ ಹುದ್ದೆಗಳಿಂದ ಸಂಬಂಧಪಟ್ಟವರನ್ನು ತೆಗೆಯುವ ಧೈರ್ಯ ಯಾರಲ್ಲಿಯೂ ಇಲ್ಲ : ಕೆಲವೊಮ್ಮೆ ಉಪಕರಣ ಅಥವಾ ಯಂತ್ರಗಳು ಬಂದ್ ಇರುತ್ತವೆ ಅಥವಾ ಲಭ್ಯವಿರುವುದಿಲ್ಲ. ಆದರೂ ಈ ಯಂತ್ರಗಳನ್ನು ನಡೆಸಲು ಬೇಕಾಗುವ ಈ ತಂತ್ರಜ್ಞರ ಹುದ್ದೆಯನ್ನು ತುಂಬಿಸಿಕೊಂಡಿರುವ ದಾಖಲೆಯನ್ನು ನೀಡಿ ತಂತ್ರಜ್ಞರನ್ನು ನೇಮಕ ಮಾಡಿ ಅವರಿಗೆ ವೇತನವನ್ನು ನೀಡಲಾಗುತ್ತದೆ. ಈ ತೊಡಕುಗಳು ಇಷ್ಟಕ್ಕೇ ನಿಲ್ಲುವುದಿಲ್ಲ, ಕೆಲವು ಆಸ್ಪತ್ರೆಗಳಲ್ಲಿ ಹುದ್ದೆಯ ಅವಕಾಶವಿದ್ದರೂ ಶಾಶ್ವತವಾಗಿ ತಂತ್ರಜ್ಞರನ್ನು ನೇಮಕ ಮಾಡದಿರುವುದರಿಂದ ಆ ಹುದ್ದೆಗೆ ಗುತ್ತಿಗೆಯ ಆಧಾರದಲ್ಲಿ ತಂತ್ರಜ್ಞರನ್ನು ನೇಮಕ ಮಾಡಲಾಗುತ್ತದೆ ಹಾಗೂ ಅವರಿಗೂ ಕೆಲಸವಿಲ್ಲದೆಯೇ ವೇತನ ನೀಡಲಾಗುತ್ತದೆ. ಕೆಲವೊಮ್ಮೆ ಈ ಹುದ್ದೆಯನ್ನು ಶಾಸಕ, ಸಂಸದ, ಇತರ ಪದಾಧಿಕಾರಿ ಅಥವಾ ಯಾರಾದರೂ ದೊಡ್ಡ ಅಧಿಕಾರಿಯ ಶಿಫಾರಸ್ಸಿನಿಂದ ಅಥವಾ ಲಂಚಪಡೆದು ತುಂಬಿಸಿಕೊಳ್ಳಲಾಗುತ್ತದೆ. ಆದ್ದರಿಂದ ಅವರನ್ನು ಆ ಹುದ್ದೆಯಿಂದ ತೆಗೆಯುವ ಧೈರ್ಯವೂ ಈ ಅಧಿಕಾರಿಗಳಲ್ಲಿ ಇರುವುದಿಲ್ಲ. ಈ ಕಾರ್ಮಿಕರು ಯೋಗ್ಯ ರೀತಿಯಲ್ಲಿ ಸೇವೆ ಮಾಡದಿದ್ದರೂ ಅವರಿಗೆ ಗದರಿಸುವ ಗೋಜಿಗೆ ಹೋಗುವುದಿಲ್ಲ. ಇಂತಹ ಎಲ್ಲ ವಿಚಿತ್ರ ಕಾರುಬಾರಿನ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗುತ್ತದೆ.
೨ ಎ. ಸರಕಾರಿ ಯೋಜನೆಯನ್ನು ಹಮ್ಮಿಕೊಳ್ಳಲು ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಉದಾಸೀನತೆ ಇರುವುದರಿಂದ ಅದರಿಂದ ವಿಪರೀತ ಪರಿಣಾಮವಾಗುತ್ತದೆ : ಸರಕಾರದಿಂದ ವಿವಿಧ ಪ್ರಕಾರದ ಆರೋಗ್ಯ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ; ಆದರೆ ಸರಕಾರಿ ಯೋಜನೆಯ ಮಾಹಿತಿಯು ಜನಸಾಮಾನ್ಯರ ತನಕ ತಲಪುವುದಿಲ್ಲ. ಅವರಿಗೆ ಆ ಮಾಹಿತಿ ಸಿಗಬೇಕೆಂಬ ವಿಷಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಉದಾಸೀನತೆ ಇರುತ್ತದೆ. ಕೆಲವೊಮ್ಮೆ ನಾಗರಿಕರಿಗೆ ಯೋಜನೆಯ ಮಾಹಿತಿ ಇದ್ದರೂ ಕಾಗದಪತ್ರಗಳಿಗಾಗಿ ಅನಾವಶ್ಯಕ ಕಿರುಕುಳ ಕೊಡಲಾಗುತ್ತದೆ. ಉದಾ. ‘ಜನನೀ ಸುರಕ್ಷಾ ಯೋಜನೆಯ ಮೂಲಕ ಆದಿವಾಸಿ ಅಥವಾ ಬಡತನರೇಖೆಯ ಕೆಳಗಿನ ಮಹಿಳೆಯ ಪ್ರಸೂತಿಯು ಸರಕಾರಿ ಆಸ್ಪತ್ರೆಯಲ್ಲಾದರೆ ಅವಳಿಗೆ ಖರ್ಚಿಗಾಗಿ ೪೦೦ ರೂಪಾಯಿ ನಗದು ನೀಡುವ ವ್ಯವಸ್ಥೆ ಇದೆ. ಕೆಲವೊಮ್ಮೆ ಬಡವರು ಅಥವಾ ಆದಿವಾಸಿ ಕುಟುಂಬದವರು ಈ ಯೋಜನೆಯ ಹಣಕ್ಕಾಗಿ ವಿಚಾರಿಸಿದರೆ ಅವರಿಗೆ ತಮ್ಮ ಊರಿಗೆ ಹೋಗಿ ಪಡಿತರಚೀಟಿ ತರಲು ಹೇಳಲಾಗುತ್ತದೆ. ಅವರ ಊರು ಎಷ್ಟು ದೂರ ಇರುತ್ತದೆಯೆಂದರೆ, ಅವರಿಗೆ ಊರಿಗೆ ಹೋಗಿ ಬರಲು ಹೆಚ್ಚು ಕಡಿಮೆ ೪೦೦ ರೂಪಾಯಿ ಖರ್ಚಾಗುತ್ತದೆ. ನಿಜವಾಗಿ ನೋಡಿದರೆ, ಈ ಯೋಜನೆಯ ಮೂಲಕ ಲಾಭ ಪಡೆಯಲು ನಾಗರಿಕರು ಯಾವೆಲ್ಲ ಕಾಗದಪತ್ರಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಮತ್ತು ತೋರಿಸುವುದು ಆವಶ್ಯಕವಾಗಿದೆ ? ಅದರ ನಿಯಮಗಳೇನು ? ಎಂಬುದು ಕೆಳಗಿನ ಹಂತದ ವರೆಗೆ ಪ್ರತಿಯೊಬ್ಬ ವ್ಯಕ್ತಿಗೆ ತಿಳಿಯಬೇಕೆಂಬ ತಳಮಳವು ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಇರುವುದಿಲ್ಲ. ಅದರ ಪರಿಣಾಮದಿಂದ ಆ ಯೋಜನೆಗಾಗಿ ಬಿಡುಗಡೆ ಮಾಡಿದ ಹಣವು ಖರ್ಚಾಗದೆ ಹಾಗೆಯೇ ಉಳಿಯುತ್ತದೆ ಅಥವಾ ಆ ಕಾಗದಪತ್ರಗಳನ್ನು ಖರ್ಚಿನಲ್ಲಿ ತೋರಿಸಲಾಗುತ್ತದೆ.
೩. ಸರಕಾರದಲ್ಲಿ ವಿವಿಧ ತಜ್ಞರಿದ್ದರೂ ಮುಂದಾಳತ್ವ ತೆಗೆದುಕೊಳ್ಳದಿರುವುದರಿಂದ ಸಾಮಾಜಿಕ ಸಂಸ್ಥೆಗಳಿಗೇ ಶಿಬಿರಗಳ ಆಯೋಜನೆ ಮಾಡಬೇಕಾಗುವುದು
ನಾಗರಿಕರಿಗೆ ವಿವಿಧ ವ್ಯಾಧಿಗಳ ಪರೀಕ್ಷಣೆ ಮಾಡಲು ಸರಕಾರದಲ್ಲಿ ತಜ್ಞರಿರುತ್ತಾರೆ. ಅದಕ್ಕಾಗಿ ಶಿಬಿರಗಳನ್ನು ಆಯೋಜಿಸಲು ನಿಧಿಯೂ ಇರುತ್ತದೆ. ಆದರೂ ಇಂತಹ ಶಿಬಿರಗಳ ಆಯೋಜನೆಯಾಗಿರುವುದು ಕಂಡುಬರುವುದಿಲ್ಲ. ಯಾರಾದರೂ ರಾಜಕೀಯ ನೇತಾರನ ಹುಟ್ಟುಹಬ್ಬದ ನಿಮಿತ್ತ ಶಿಬಿರಗಳನ್ನು ಆಯೋಜಿಸಲಾಗುತ್ತದೆ; ಆದರೆ ನಿಜವಾಗಿಯೂ ಅದರ ಫಲಶ್ರುತಿ ಕಡಿಮೆಯಿರುತ್ತದೆ. ಸರಕಾರಿ ನಿಧಿ ಉಪಲಬ್ಧವಿದ್ದರೂ ಆರೋಗ್ಯವಂತ ಸಮಾಜಕ್ಕಾಗಿ ಇಂತಹ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸದಿರುವವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳುವುದಿಲ್ಲವೇಕೆ, ಎಂಬುದು ಆಶ್ಚರ್ಯದ ವಿಷಯವಾಗಿದೆ. ಸರಕಾರ ಸ್ವತಃ ಮುಂದಾಳತ್ವ ತೆಗೆದುಕೊಂಡು ಚಿಕಿತ್ಸೆ ನೀಡುವುದಿಲ್ಲ ಅಥವಾ ನಿಧಿಯಿದ್ದರೂ ಜನರಿಗೆ ಲಾಭ ಸಿಗುವುದಿಲ್ಲ, ಇದು ಆರೋಗ್ಯ ಇಲಾಖೆಯು ಯೋಗ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸದಿರುವುದರ ಲಕ್ಷಣವಾಗಿದೆ. ಜನರಿಗೆ ಸಿಕಿತ್ಸೆಗಾಗಿ ಸೌಲಭ್ಯ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಹಾಗೂ ಸರಕಾರ ಅದನ್ನು ನಿರ್ವಹಿಸಲೇ ಬೇಕು. ಇವೆಲ್ಲ ವ್ಯವಸ್ಥೆಗಳನ್ನು ಸುಧಾರಿಸಲು ನಿಯಂತ್ರಣ ಅಧಿಕಾರಿಯು ಸಕ್ಷಮ ಹಾಗೂ ದಕ್ಷನಾಗಿರುವುದು ಮಹತ್ವದ್ದಾಗಿದೆ. ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕಿಂತ ಹುದ್ದೆಯನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿ ಸುವ್ಯವಸ್ಥೆಯನ್ನು ನಿರ್ಮಿಸುವ ತಳಮಳವು ಸರಕಾರಿ ಅಧಿಕಾರಿಗಳಲ್ಲಿ ಇದ್ದರೆ, ಮಾತ್ರ ಮುಂಬರುವ ಕಾಲದಲ್ಲಿ ಜನಸಾಮಾನ್ಯರಿಗೆ ಒಳ್ಳೆಯ ಪ್ರಕಾರದ ಆರೋಗ್ಯ ಸೇವೆ ಸಿಗಬಹುದು. – ಅಶ್ವಿನಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೬.೫.೨೦೨೦)
ವೈದ್ಯಕೀಯ ಕ್ಷೇತ್ರದಲ್ಲಿ ನುಸುಳಿರುವ ಅನೇಕ ದುಷ್ಪ್ರವೃತ್ತಿಗಳನ್ನು ಕಾನೂನು ಮಾರ್ಗದಲ್ಲಿ ತಡೆಗಟ್ಟಲು ‘ಆರೋಗ್ಯ ಸಹಾಯ ಸಮಿತಿ ಅಭಿಯಾನ ವೈದ್ಯಕೀಯ ಕ್ಷೇತ್ರದಲ್ಲಿ ನುಸುಳಿರುವ ಅನೇಕ ದುಷ್ಪ್ರವೃತ್ತಿಗಳನ್ನು ಕಾನೂನು ಮಾರ್ಗದಲ್ಲಿ ತಡೆಗಟ್ಟಲು ರಾಷ್ಟ್ರಪ್ರೇಮಿ ನಾಗರಿಕರು ಸಂಘಟಿತರಾಗುವ ಅವಶ್ಯಕತೆಯಿದೆ. ತಮಗೆ ವೈದ್ಯಕೀಯ ಕ್ಞೇತ್ರದ ಇಂತಹ ಕಹಿ ಅನುಭವ ಆಗಿದ್ದರೆ ಹಾಗೂ ತಮ್ಮ ಪರಿಸರದಲ್ಲಿ ಇಂತಹ ಅನುಚಿತ ಘಟನೆಗಳು ಘಟಿಸುತ್ತಿದ್ದರೆ, ಆ ವಿಷಯವನ್ನು ತಕ್ಷಣ ನಮಗೆ ತಿಳಿಸಿರಿ.
ಒಳ್ಳೆಯ ಆಧುನಿಕ ವೈದ್ಯರಿಗೆ ಮತ್ತು ದಾದಿಯರಿಗೆ ಸವಿನಯ ವಿನಂತಿ !
ಹಣವನ್ನು ಲೂಟಿ ಮಾಡುವ ಹಾಗೂ ರೋಗಿಗಳಿಗೆ ಮೋಸ ಮಾಡುವ ಈ ಆಧುನಿಕ ವೈದ್ಯರ ಹೆಸರನ್ನು ಬೆಳಕಿಗೆ ತರಲು ದಯವಿಟ್ಟು ಸಹಕರಿಸಿರಿ. ಇದು ನಿಮ್ಮ ಸಾಧನೆಯಾಗುವುದು. ನೀವು ಇಚ್ಛಿಸಿದರೆ ನಿಮ್ಮ ಹೆಸರನ್ನು ಗುಪ್ತವಾಗಿ ಇಡಲಾಗುವುದು. ತಮ್ಮ ಅನುಭವವನ್ನು ತಿಳಿಸಲು ಮತ್ತು ಆಂದೋಲನದಲ್ಲಿ ಭಾಗವಹಿಸಲು
ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಆರೋಗ್ಯ ಸಹಾಯ ಸಮಿತಿ, ‘ಮಧುಸ್ಮೃತಿ, ಸತ್ಯನಾರಾಯಣ ಮಂದಿರದ ಸಮೀಪ, ಫೋಂಡಾ ಗೋವಾ. ಪಿನ್ -೪೦೩ ೪೦೧ ಸಂಪರ್ಕ ಕ್ರ. 7058885610
ವಿ-ಅಂಚೆ : [email protected]