ಮಾಸ್ಕ್ ಹಾಕಿಕೊಳ್ಳದವರಿಗೆ ೫ ರಿಂದ ೧೫ ದಿನಗಳವರೆಗೆ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಿ ! – ಗುಜರಾತ ಉಚ್ಚ ನ್ಯಾಯಾಲಯ

ಮಾಸ್ಕ್ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಂತಹ ಶಿಕ್ಷೆಯನ್ನು ಈಗ ಕಡ್ಡಾಯಗೊಳಿಸಬೇಕು. ದಂಡವನ್ನು ಪಾವತಿಸುವ ಮೂಲಕ ಬಿಡುಗಡೆ ಹೊಂದಿದ ಜನರಲ್ಲಿ ಯಾವುದೇ ಶಿಸ್ತು ಬರದಿರುವುದರಿಂದ ಅಂತಹ ಶಿಕ್ಷೆಯನ್ನು ಜನರಿಗೆ ನೀಡುವುದು ಈಗ ಅನಿವಾರ್ಯವಾಗಿದೆ !

ಕರ್ಣಾವತಿ (ಗುಜರಾತ) – ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನರಿಗೆ ಯಾವುದಾದರೊಂದು ಕೋವಿಡ್ ಕೇಂದ್ರದಲ್ಲಿ ಕನಿಷ್ಠ ೫ ರಿಂದ ಗರಿಷ್ಠ ೧೫ ದಿನಗಳವರೆಗೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸಬೇಕು. ಅವರಿಂದ ದಿನಕ್ಕೆ ೪-೫ ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುವಂತೆ ಗುಜರಾತ ಉಚ್ಚನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ.

‘ಸ್ವಚ್ಛತೆ, ಆಹಾರ ತಯಾರಿಸುವುದು, ನೆರವು, ಸೇವೆ ಮಾಡುವುದು, ಇತರ ಚಟುವಟಿಕೆಗಳು, ಜೊತೆಗೆ ಮಾಹಿತಿ ಸಂಗ್ರಹ ಕೂಡ ಮಾಡಿಸಿಕೊಳ್ಳಬೇಕು’, ಎಂದು ನ್ಯಾಯಾಲಯ ಹೇಳಿದೆ. ನಿಯಮಗಳ ಉಲ್ಲಂಘನೆ ಮಾಡುವವರ ವಯಸ್ಸು, ಅರ್ಹತೆ ಮತ್ತು ಲಿಂಗಕ್ಕೆ ಅನುಗುಣವಾಗಿ ಈ ಶಿಕ್ಷೆಯನ್ನು ನಿರ್ಧರಿಸಲಾಗುತ್ತದೆ. ಡಿಸೆಂಬರ್ ೨೪ ರೊಳಗೆ ಕಾರ್ಯದ ವರದಿ ಸಲ್ಲಿಸುವಂತೆ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ವಿಶಾಲ ಅವತಣಿ ಇವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.