ಚೀನಾದ ಶಿನ್‌ಜಿಯಾಂಗ್‌ನಲ್ಲಿ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳು !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಚೀನಾದ ಜನರೇ ಚೀನಾದ ದೊಡ್ಡ ಶತ್ರುಗಳು !

‘ಚೀನಾದ ಜನಸಂಖ್ಯೆ ಸುಮಾರು ೧೩೫ ರಿಂದ ೧೪೦ ಕೋಟಿಯಷ್ಟಿದೆ. ಅಲ್ಪಸಂಖ್ಯಾತರು ಚೀನಾದ ಒಟ್ಟು ಜನಸಂಖ್ಯೆಯ ಶೇ. ೧೦ ರಷ್ಟಿದ್ದಾರೆ. ಶಿನ್‌ಜಿಯಾಂಗ್‌ನಲ್ಲಿ ೨ ಕೋಟಿ ಉಯಿಘರ್ ಮುಸಲ್ಮಾನರಿದ್ದಾರೆ. ಟಿಬೇಟ್‌ನಲ್ಲಿ ೫೦ ಲಕ್ಷ ಟಿಬೇಟಿಯನ್ನರಿದ್ದಾರೆ.

ಚೀನಾದ ವಿರುದ್ಧ ಮಾತನಾಡುವಲ್ಲೆಲ್ಲ ಚೀನಾ ಸಾಕಷ್ಟು ದಬ್ಬಾಳಿಕೆ ನಡೆಸುತ್ತದೆ ಮತ್ತು ಆ ಜನರನ್ನು ಹತ್ತಿಕ್ಕಲು ಪ್ರಯತ್ನಿಸುತ್ತದೆ. ಆದ್ದರಿಂದ ಉಯಿಘರ್ ಮುಸಲ್ಮಾನರು ಮತ್ತು ಟಿಬೇಟಿಯನ್ನರು ಹಾಗೆಯೇ ಚೀನಾದ ಇತರ ಅಲ್ಪಸಂಖ್ಯಾತರು ಸಹ ಚೀನಾದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಒಂದು ರೀತಿಯಲ್ಲಿ ಚೀನೀಯರೇ ಚೀನಾದ ಅತಿ ದೊಡ್ಡ ಶತ್ರುಗಳಾಗಿದ್ದಾರೆ.

೨. ಮಸೀದಿಗಳ ಧ್ವಂಸ

ಶಿನ್‌ಜಿಯಾಂಗ್‌ನಲ್ಲಿ ೧೬ ಸಾವಿರಕ್ಕಿಂತಲೂ ಹೆಚ್ಚು ಮುಸಲ್ಮಾನರ ಮಸೀದಿಗಳಿದ್ದವು. ಈಗ ಅವುಗಳನ್ನು ನೆಲಸಮ ಮಾಡಲಾಗಿದೆ. ಇಂದು ೨೦ ಲಕ್ಷಕ್ಕಿಂತಲೂ ಹೆಚ್ಚು ಮುಸಲ್ಮಾನರನ್ನು ‘ಕಾನ್ಸಂಟ್ರೇಶನ್ ಕ್ಯಾಂಪ್ನಲ್ಲಿ ಇಡಲಾಗಿದೆ ಮತ್ತು ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

೩. ಚೀನಾವು ಶಿನ್‌ಜಿಯಾಂಗ್‌ನಲ್ಲಿ ಬಹುದೊಡ್ಡ ‘ಸರ್ವೇಲೆನ್ಸ್ ಸೆಂಟರ್ (ಕಾವಲು ಮಾಡುವ ಸ್ಥಳ) ಸ್ಥಾಪಿಸಿದೆ. ಅದರ ಮೂಲಕ ಗಣ್ಯ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುತ್ತದೆ ಮತ್ತು ಚೀನಾ ಸರಕಾರದ ವಿರುದ್ಧ ಯಾರಾದರೂ ಏನಾದರೂ ಮಾತನಾಡಿದರೆ, ಅವರನ್ನು ಸೆರೆಮನೆಗೆ ತಳ್ಳಲಾಗುತ್ತದೆ.

೪. ಉಯಿಘರ್ ಮುಸಲ್ಮಾನರಿಗೆ ತಮ್ಮ ಭಾಷೆ, ತಮ್ಮ ಧರ್ಮ ಮತ್ತು ಸಂಸ್ಕತಿಯ ಅಧ್ಯಯನ ಮಾಡುವ ಅವಕಾಶವಿಲ್ಲ. ಅವರಿಗೆ ಅವರ ರೂಢಿ, ಪರಂಪರೆಗಳು, ಹಬ್ಬ, ಈದ್ ಮತ್ತು ರಮ್ಝಾನ್ ಇಂತಹ ಉತ್ಸವಗಳನ್ನು ಆಚರಿಸಲು ಅನುಮತಿಯಿಲ್ಲ.

೫. ಜಗತ್ತಿನಲ್ಲಿ ೫೦ ರಿಂದ ೬೦ ಮುಸಲ್ಮಾನ ದೇಶಗಳಿವೆ; ಆದರೆ ಈ ದೌರ್ಜನ್ಯಗಳ ವಿರುದ್ಧ ಮಾತನಾಡಲು ಒಬ್ಬರಿಗೂ ಧೈರ್ಯವಿಲ್ಲ. ಚೀನಾದ ಜೊತೆಗಿನ ಸಂಬಂಧವು ಉತ್ತಮವಾಗಿರುವುದರಿಂದ ಅಲ್ಲಿನ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳ ಕಡೆಗೆ ಅವು ಸಂಪೂರ್ಣ ದುರ್ಲಕ್ಷ ಮಾಡುತ್ತಿವೆ.

೬. ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ

ಈ ಪ್ರದೇಶದಲ್ಲಿ ಪ್ರತಿ ೫ ವ್ಯಕ್ತಿಗಳಿಗೆ ಒಬ್ಬ ಪೊಲೀಸ್ ಅಧಿಕಾರಿ ಎಂಬಂತೆ ಪ್ರಮಾಣವಿದೆ. ಆಧುನಿಕ ತಂತ್ರಜ್ಞಾನ ಹಾಗೆಯೇ ‘ಸಿಸಿಟಿವಿಗಳ ಮೂಲಕ ಜನರ ಮೇಲೆ ನಿಗಾ ಇಡಲಾಗುತ್ತದೆ. ಈ ಪ್ರದೇಶದಲ್ಲಿ ‘ಒಂದು ಮಗು ನೀತಿ (ವನ್ ಚೈಲ್ಡ ಪಾಲಿಸಿ)ಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಅಲ್ಲಿನ ಜನರಿಗೆ ಸ್ವಲ್ಪವೂ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ.

೭. ಸರಕಾರದ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮ !

‘ವಿಶ್ವ ಸಂಸ್ಥೆಯ ಮಾನವಾಧಿಕಾರ ಆಯೋಗದಲ್ಲಿ ಉಯಿಘರ್ ಮುಸಲ್ಮಾನರ ಓರ್ವ ಪ್ರತಿನಿಧಿ ಭಾಷಣ ಮಾಡಿದನು. ಅವನು, ಸಾವಿರಾರು ಉಯಿಘರ್ ಮುಸಲ್ಮಾನರು ನಾಪತ್ತೆಯಾಗಿದ್ದಾರೆ ಮತ್ತು ಸಾವಿರಾರು ಜನರು ಸೆರೆಮನೆಯಲ್ಲಿದ್ದಾರೆ. ಸರಕಾರದ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಸರಕಾರದ ವಿರುದ್ಧ ಮಾತನಾಡುವವರನ್ನು ಚೀನಾದ ವಿವಿಧ ಪ್ರದೇಶಗಳಿಗೆ ಕಾರ್ಮಿಕರೆಂದು ಕಳುಹಿಸಲಾಗುತ್ತದೆ ಎಂದು ಹೇಳಿದ್ದನು.

ಟಿಬೇಟಿಯನ್ನರ ಮೇಲೆ ಚೀನಾವು ಮಾಡುತ್ತಿರುವ ದೌರ್ಜನ್ಯ !

೧. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಿ ಅದನ್ನು ಪ್ರವಾಸಿ ತಾಣವೆಂದು ವಿಕಸಿತಗೊಳಿಸುವುದು : ಚೀನಾದಲ್ಲಿ ಟಿಬೇಟಿಯನ್ನರ ಸ್ಥಿತಿ ಉಯಿಘರ್ ಮುಸಲ್ಮಾನರಂತೆಯೇ ಇದೆ. ಟಿಬೇಟಿಯನ್ನರು ಅತ್ಯಂತ ಶಾಂತ ಮತ್ತು ಸಹಿಷ್ಣುಗಳಾಗಿದ್ದಾರೆ; ಆದರೆ ಚೀನಾ ಅವರ ಮೇಲೆ ಅಪಾರ ಪ್ರಮಾಣದಲ್ಲಿ ದೌರ್ಜನ್ಯವೆಸಗುತ್ತದೆ. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಲಾಗಿದೆ. ದೊಡ್ಡ ಮಠಗಳ ಸ್ಥಳದಲ್ಲಿ ‘ಶಾಪಿಂಗ್ ಮಾಲ್ಗಳನ್ನು ಕಟ್ಟಲಾಗಿದೆ. ಅಲ್ಲಿ ಪ್ರವಾಸೀತಾಣಗಳನ್ನು ವಿಕಸಿತಗೊಳಿಸಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪಾವಿತ್ರ್ಯವು ಸಂಪೂರ್ಣ ನಾಶವಾಗಿದೆ.

೨. ಟಿಬೇಟಿಯನ್ನರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ : ಟಿಬೇಟಿಯನ್ನರು ಅವರ ಭಾಷೆಯಲ್ಲಿ ಮಾತನಾಡುವಂತಿಲ್ಲ, ತಮ್ಮ ಸಂಸ್ಕೃತಿ ಅಥವಾ ಯಾವುದೇ ರೂಢಿ-ಪರಂಪರೆಗಳನ್ನು ಪಾಲಿಸುವಂತಿಲ್ಲ ಅಥವಾ ಯಾವುದೇ ಹಬ್ಬಗಳನ್ನು ಆಚರಿಸುವಂತಿಲ್ಲ. ಆದ್ದರಿಂದ ಅವರ ಜೀವನ ಅತ್ಯಂತ ದಯನೀಯವಾಗಿದೆ.

೩. ಈಗ ಚೀನಾವು ದಲಾಯಿ ಲಾಮಾ ಇವರ ನಂತರ ಚೀನಾಪರವಾಗಿರುವ ದಲಾಯಿ ಲಾಮಾರನ್ನು ತರಲು ಪ್ರಯತ್ನಿಸುತ್ತಿದೆ. ಹೀಗಾಯಿತೆಂದರೆ, ಟಿಬೇಟ್ ಸಂಪೂರ್ಣ ಚೀನಾದ ನಿಯಂತ್ರಣಕ್ಕೊಳಗಾಗುವುದು ಏಕೆಂದರೆ ದಲಾಯಿ ಲಾಮಾ ಇವರು ಟಿಬೇಟಿಯನ್ನರ ಧರ್ಮಗುರುಗಳಾಗಿದ್ದಾರೆ ಮತ್ತು ಅವರಿಗೆ ಅತಿ ದೊಡ್ಡ ಭಕ್ತಸಮೂಹವಿದೆ.

೪. ದೇಶದ ಹೊರಗೆ, ಅಂದರೆ ಭಾರತ, ಅಮೇರಿಕಾ ಅಥವಾ ಯುರೋಪ್ ದೇಶಗಳಿಗೆ ಹೋಗುವ ಟಿಬೇಟಿಯನ್ನರು ಮತ್ತು ಉಯಿಘರ್ ಮುಸಲ್ಮಾನರ ಮೇಲೆ ಚೀನಾದ ಗುಪ್ತಚರರು ನಿಯಮಿತವಾಗಿ ನಿಗಾ ಇಟ್ಟಿರುತ್ತಾರೆ. ಅವರು ಚೀನಾದ ವಿರುದ್ಧ ಏನಾದರೂ ಮಾತನಾಡಿದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಯತ್ನವಾಗುತ್ತದೆ.

– ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ