ಶಾರದೀಯ ಋತುಚರ್ಯೆ- ಶರದ ಋತುವಿನಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದೀಯ ಉಪಾಯಗಳು !

ವೈದ್ಯ ಮೇಘರಾಜ ಪರಾಡಕರ್

೧. ಶರದ ಋತು ಇದು ರೋಗಗಳು ಹೆಚ್ಚಾಗುವ ಕಾಲ

‘ಮಳೆಗಾಲ ಮುಗಿದ ನಂತರ ಸೂರ್ಯನ ಪ್ರಖರ ಕಿರಣಗಳು ಭೂಮಿಯ ಮೇಲೆ ಬೀಳತೊಡಗುತ್ತವೆ, ಆಗ ಶರದ ಋತು ಆರಂಭವಾಗುತ್ತದೆ. ಮಳೆಗಾಲದಲ್ಲಿ ಶರೀರ ತಂಪು ವಾತಾವರಣ ದೊಂದಿಗೆ ಹೊಂದಿಕೊಂಡಿರುತ್ತದೆ. ಶರದಋತು ಆರಂಭವಾದ ಮೇಲೆ ಒಮ್ಮೆಲೆ ಉಷ್ಣತೆಯ ಪ್ರಮಾಣ ಹೆಚ್ಚಾಗುವುದರಿಂದ ನೈಸರ್ಗಿಕವಾಗಿ ಪಿತ್ತದೋಷ ಹೆಚ್ಚಾಗುತ್ತದೆ ಹಾಗೂ ಕಣ್ಣು ಬರುವುದು (ಕಂಜಂಕ್ಟಿವಾಯಿಟಿಸ್), ಕುರವಾಗುವುದು, ಮೂಲವ್ಯಾಧಿಯ ತೊಂದರೆ ಹೆಚ್ಚಾಗುವುದು, ಜ್ವರ ಬರುವುದು, ಇತ್ಯಾದಿ ರೋಗಗಳಾಗುತ್ತವೆ. ಶರದ ಋತುವಿನಲ್ಲಿ ರೋಗಗಳಾಗುವ ಸಾಧ್ಯತೆ ಅತೀ ಹೆಚ್ಚಿರುತ್ತದೆ, ಆದ್ದರಿಂದ ‘ವೈದ್ಯರಿಗೆ ಶಾರದೀ ಮಾತಾ | ಅಂದರೆ ‘(ರೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ) ಶರದಋತು ವೈದ್ಯರ ತಾಯಿಯೇ ಆಗಿದ್ದಾಳೆ, ಎಂದು ತಮಾಷೆಯಿಂದ ಹೇಳಲಾಗುತ್ತದೆ.

೨. ಋತುವಿಗನುಸಾರ ಆಹಾರ

೨ ಅ. ಶರದಋತುವಿನಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ?

೨ ಆ. ಆಹಾರಕ್ಕೆ ಸಂಬಂಧಿಸಿದ ಕೆಲವು ಮಹತ್ವದ ವಿಷಯಗಳು

೨ ಆ ೧. ಹಸಿವಾದ ಮೇಲೆ ಊಟ ಮಾಡಬೇಕು : ಮಳೆಗಾಲದಲ್ಲಿ ಜೀರ್ಣಶಕ್ತಿ ಮಂದವಾಗಿರುತ್ತದೆ. ಶರದ ಋತುವಿನಲ್ಲಿ ಅದು ಕ್ರಮೇಣ ಹೆಚ್ಚಾಗುತ್ತದೆ. ಆದುದರಿಂದ ಹಸಿವಾದ ಮೇಲೆಯೇ ಊಟ ಮಾಡಬೇಕು. ಹಸಿವಿಲ್ಲದಾಗ ಊಟ ಮಾಡಿದರೆ, ಜೀರ್ಣ ಶಕ್ತಿ ಹಾಳಾಗುತ್ತದೆ ಹಾಗೂ ಪಿತ್ತದ ತೊಂದರೆಯಾಗುತ್ತದೆ.

೨ ಆ ೨. ಪ್ರತಿಯೊಂದು ತುತ್ತನ್ನು ೩೨ ಸಲ ಜಗಿದು ತಿನ್ನಬೇಕು : ‘ಹೀಗೆ ಜಗಿಯುತ್ತಾ ಕುಳಿತುಕೊಂಡರೆ ಸಮಯ ವ್ಯರ್ಥವಾಗುತ್ತದೆ ಎಂದು ಕೆಲವರಿಗೆ ಅನಿಸಬಹುದು; ಆದರೆ ಈ ಪದ್ಧತಿಯಿಂದ ಊಟ ಮಾಡಿದರೆ ಸ್ವಲ್ಪ ಊಟ ಮಾಡಿದರೂ ಸಮಾಧಾನವಾಗುತ್ತದೆ ಮತ್ತು ಅನ್ನವು ಸರಿಯಾಗಿ ಜೀರ್ಣವಾಗುತ್ತದೆ. ಪ್ರತಿಯೊಂದು ತುತ್ತನ್ನು ೩೨ ಸಲ ಜಗಿಯುವುದರಿಂದ ಅದರಲ್ಲಿ ಲಾಲಾರಸ ಸರಿಯಾಗಿ ಮಿಶ್ರಣವಾಗುತ್ತದೆ. ಹೀಗೆ ಲಾಲಾರಸ ಮಿಶ್ರಿತ ಅನ್ನವು ಹೊಟ್ಟೆಯಲ್ಲಿ ಹೋಗುವುದರಿಂದ ‘ನನಗೆ ಇಂತಹ ಪದಾರ್ಥಗಳಿಂದ ಪಿತ್ತವಾಗುತ್ತದೆ’, ನನಗೆ ಇಂತಹ ಪದಾರ್ಥಗಳು ಜೀರ್ಣವಾಗುವುದಿಲ್ಲ’, ಎಂದು ಹೇಳುವ ಪ್ರಸಂಗಗಳು ಬರುವುದಿಲ್ಲ; ಏಕೆಂದರೆ ಲಾಲಾರಸವು (ಜೊಲ್ಲು) ಆಮ್ಲದ ವಿರುದ್ಧ ಗುಣದ್ದಾಗಿದೆ. ಅದು ಹೆಚ್ಚು ಪ್ರಮಾಣದಲ್ಲಿ ಹೊಟ್ಟೆಗೆ ಹೋದ ಮೇಲೆ ಹೆಚ್ಚಾಗಿರುವ ಪಿತ್ತದ ಪ್ರಮಾಣವು ತಾನಾಗಿಯೇ ಕಡಿಮೆಯಾಗುತ್ತದೆ. ಸ್ವಾಮಿ ರಾಮಸುಖದಾಸಜೀ ಮಹಾರಾಜರು ಅವರ ಒಂದು ಪ್ರವಚನದಲ್ಲಿ ‘ಪ್ರತಿಯೊಂದು ತುತ್ತನ್ನು ೩೨ ಸಲ ಜಗಿದಾಗಿದೆ, ಎಂಬುದನ್ನು ಹೇಗೆ ಗುರುತಿಸಬೇಕು, ಎಂಬುದರ ಬಗ್ಗೆ ಒಂದು ಸುಂದರ ಮಾರ್ಗದರ್ಶನ ಮಾಡಿದ್ದಾರೆ. ಪ್ರತಿಯೊಂದು ತುತ್ತನ್ನು ಜಗಿಯುವಾಗ ‘ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ | ಹರೆ ಕೃಷ್ಣ  ಹರೆ ಕೃಷ್ಣ  ಕೃಷ್ಣ ಕೃಷ್ಣ ಹರೆ ಹರೆ ||’ ಈ ನಾಮಜಪದ ಪ್ರತಿಯೊಂದು ಶಬ್ದವನ್ನು ೨ ಬಾರಿ ಹೇಳಬೇಕು. ಪ್ರತಿ ಯೊಂದು ಶಬ್ದದ ವೇಗದಲ್ಲಿ ಜಗಿಯಬೇಕು. ಈ ಜಪದಲ್ಲಿ ೧೬ ಶಬ್ದಗಳಿವೆ. ಆದ್ದರಿಂದ ಒಂದು ತುತ್ತಿಗೆ ೨ ಬಾರಿ ಜಪ ಮಾಡುವುದರಿಂದ ೩೨ ಬಾರಿ ಜಗಿಯಲಾಗುತ್ತದೆ ಹಾಗೂ ಭಗವಂತನ ಸ್ಮರಣೆಯೂ ಆಗುತ್ತದೆ.

೩. ಶರದ ಋತುವಿನಲ್ಲಿ ಇತರ ಆಚಾರಗಳು

೩ ಅ. ಸ್ನಾನದ ಮೊದಲು ನಿಯಮಿತವಾಗಿ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದು : ಈ ಋತುವಿನಲ್ಲಿ ಸ್ನಾನದ ಮೊದಲು ನಿಯಮಿತವಾಗಿ ಶರೀರಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿದರೆ ಚರ್ಮದ ಮೇಲೆ ಬೊಕ್ಕೆಗಳು ಏಳುವುದಿಲ್ಲ. ‘ತುಂಬಾ ಬೆವರು ಬರುವುದು’ ಮುಂತಾದ ಉಷ್ಣತೆಯಿಂದಾಗುವ ರೋಗಗಳಿಗೂ ಇಡೀ ಶರೀರಕ್ಕೆ ಎಣ್ಣೆಯನ್ನು ಹಚ್ಚುವುದು ಲಾಭದಾಯಕವಾಗಿದೆ.

೩ ಆ. ಸುಗಂಧದ ಹೂವುಗಳನ್ನು ಜೊತೆಗಿಟ್ಟುಕೊಳ್ಳುವುದು : ಸುಗಂಧದ ಹೂವುಗಳು ಪಿತ್ತ ಶಮನದ ಕಾರ್ಯವನ್ನು ಮಾಡುತ್ತವೆ. ಆದ್ದರಿಂದ ಯಾರಿಗೆ ಸಾಧ್ಯವಿದೆಯೋ ಅವರು ಪಾರಿಜಾತ, ಸಂಪಿಗೆ ಇತ್ಯಾದಿ ಹೂವುಗಳನ್ನು ಜೊತೆಗಿಟ್ಟು ಕೊಳ್ಳಬೇಕು.

೩ ಇ. ಬಟ್ಟೆಗಳು : ಹತ್ತಿಯ (ನೂಲಿನ), ಸಡಿಲವಾದ ಹಾಗೂ ಬಿಳಿ ಬಣ್ಣದ್ದಾಗಿರಬೇಕು.

೩ ಈ. ನಿದ್ರೆ : ರಾತ್ರಿ ಜಾಗರಣೆ ಮಾಡಿದರೆ ಪಿತ್ತ ಹೆಚ್ಚಾಗುತ್ತದೆ, ಆದುದರಿಂದ ಈ ಋತುವಿನಲ್ಲಿ ಜಾಗರಣೆ ಮಾಡಬಾರದು, ಬೆಳಗ್ಗೆ ಬೇಗ ಏಳಬೇಕು. ಈ ದಿನಗಳಲ್ಲಿ ಮನೆಯ ಟೆರೇಸ್‌ನಲ್ಲಿ ಅಥವಾ ಅಂಗಳದಲ್ಲಿ ಬೆಳದಿಂಗಳಲ್ಲಿ ಮಲಗುವುದರಿಂದ ಶಾಂತ ನಿದ್ರೆ ಬರುತ್ತದೆ ಹಾಗೂ ಎಲ್ಲ ನಿರುತ್ಸಾಹ ಮತ್ತು ದಣಿವು ದೂರವಾಗುತ್ತವೆ. ಈ ಋತುವಿನಲ್ಲಿ ಹಗಲಿನಲ್ಲಿ ಮಲಗುವುದು ನಿಷಿದ್ಧವಾಗಿದೆ.

೪. ಶರದ ಋತುವಿನಲ್ಲಿ ಸಾಮಾನ್ಯ ರೋಗಗಳಿಗೆ ಸುಲಭ ಆಯುರ್ವೇದೀಯ ಚಿಕಿತ್ಸೆ

೪ ಅ. ಶೋಧನ ಅಥವಾ ಪಂಚಕರ್ಮ : ವಿಶಿಷ್ಟ ಋತುವಿನಲ್ಲಿ ಶರೀರದಲ್ಲಿ ಹೆಚ್ಚಾಗುವ ದೋಷಗಳನ್ನು ಶರೀರದಿಂದ ಹೊರಗೆ ಹಾಕುವುದಕ್ಕೆ ‘ಶೋಧನ’ ಅಥವಾ ‘ಪಂಚಕರ್ಮ’ ಎಂದು ಹೇಳುತ್ತಾರೆ.

೪ ಅ ೧. ವಿರೇಚನ : ಈ ಋತುವಿನ ಆರಂಭದಲ್ಲಿ ವಿರೇಚನ ಅಂದರೆ ಭೇದಿಯಾಗಲು ಔಷಧವನ್ನು ತೆಗೆದುಕೊಳ್ಳಬೇಕು, ಇದರಿಂದ ಶರೀರ ಆರೋಗ್ಯವಂತವಾಗಿರಲು ಸಹಾಯವಾಗುತ್ತದೆ. ಇದಕ್ಕಾಗಿ ನಿರಂತರ ೮ ದಿನಗಳವರೆಗೆ ರಾತ್ರಿ ಮಲಗುವಾಗ ೧ ಚಮಚ ಔಡಲ ಎಣ್ಣೆ ಅಥವಾ ಅಷ್ಟೆ ಪ್ರಮಾಣದಲ್ಲಿ ‘ಗಂಧರ್ವ ಹರಿತಕೀ ಚೂರ್ಣ’ (ಇದು ಆಯುರ್ವೇದದ ಅಂಗಡಿಗಳಲ್ಲಿ ಸಿಗುತ್ತದೆ.) ಬಿಸಿ ನೀರಿನಲ್ಲಿ ತೆಗೆದುಕೊಳ್ಳಬೇಕು.

೪ ಅ ೨. ರಕ್ತಮೋಕ್ಷಣ : ಶರೀರಸ್ವಾಸ್ಥ್ಯಕ್ಕಾಗಿ ರಕ್ತ ನಾಳಗಳಿಂದ ರಕ್ತವನ್ನು ತೆಗೆಯುವುದು, ಇದಕ್ಕೆ ಆಯುರ್ವೇದದಲ್ಲಿ ‘ರಕ್ತಮೋಕ್ಷಣ’ ಎಂದು ಹೇಳುತ್ತಾರೆ. ಆರೋಗ್ಯರಕ್ಷಣೆಗಾಗಿ ಪ್ರತಿಯೊಂದು ಶರದ ಋತುವಿನಲ್ಲಿ ಒಮ್ಮೆ ರಕ್ತಮೋಕ್ಷಣ ಮಾಡಿಸಬೇಕು, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ರಕ್ತಮೋಕ್ಷಣದಿಂದ ಮುಖದ ಮೇಲೆ ಮೊಡವೆಗಳು ಏಳುವುದು, ಮೂಗಿನಿಂದ ರಕ್ತ ಬರುವುದು, ಕಣ್ಣು ಬರುವುದು, ಕುರಗಳಾಗುವುದು ಇಂತಹ ರೋಗಗಳು ಬರುವುದಿಲ್ಲ. ರಕ್ತದಾನ ಮಾಡುವುದು ಕೂಡ ಒಂದು ಪ್ರಕಾರದ ರಕ್ತಮೋಕ್ಷಣವೇ ಆಗುತ್ತದೆ. ಆದ್ದರಿಂದ ಯಾರಿಗೆ ಸಾಧ್ಯವಿದೆಯೋ ಅವರು ಈ ಋತುವಿನ ಆರಂಭದ ೧೫ ದಿನಗಳಲ್ಲಿ ಒಮ್ಮೆ ಮಾತ್ರ ರಕ್ತದಾನ ಮಾಡಬೇಕು. ರಕ್ತದಾನವು ತಜ್ಞ ವೈದ್ಯರ ಮಾರ್ಗದರ್ಶನದಲ್ಲಿಯೇ ಆಗುವುದ ರಿಂದ ಇದರಲ್ಲಿ ಚಿಂತೆ ಮಾಡುವ ಕಾರಣವಿರುವುದಿಲ್ಲ.

೪ ಅ ೨ ಅ. ರಕ್ತದಾನದ ವಿಷಯದಲ್ಲಿನ ಒಂದು ಬೇರೆ ವಿಚಾರ : ಅಲೋಪಥಿ ಶಾಸ್ತ್ರಕ್ಕನುಸಾರ ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ಕೊಡುವಾಗ ರಕ್ತದಾನ ಮಾಡುವ ಮತ್ತು ರಕ್ತವನ್ನು ಸ್ವೀಕರಿಸುವ ವ್ಯಕ್ತಿಯ ರಕ್ತದ ಗುಂಪುಗಳು ಹೊಂದಾಣಿಕೆ ಆಗುತ್ತವೆ ಅಥವಾ ಇಲ್ಲ ಎಂಬುದನ್ನು ನೋಡಲಾಗುತ್ತದೆ. ರಕ್ತವನ್ನು ಕೊಡುವವನ ರಕ್ತದಲ್ಲಿ ಹಾನಿಕರ ರೋಗಜಂತುಗಳಿಲ್ಲವಲ್ಲ ಎಂದೂ ಪರಿಶೀಲನೆಯನ್ನು ಮಾಡಲಾಗುತ್ತದೆ; ಆದರೆ ಇಬ್ಬರ ರಕ್ತದಲ್ಲಿನ ವಾತ, ಪಿತ್ತ, ಮತ್ತು ಕಫ ಇವುಗಳ ಸ್ಥಿತಿಯನ್ನು ಗಮನದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಹೀಗಿರುವಾಗ ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ನೀಡುವುದು ಒಂದು ಸಂಶೋಧನೆಯ ವಿಷಯವಾಗುವುದು. ಏಕೆಂದರೆ, ರಕ್ತವನ್ನು ಸ್ವೀಕರಿಸುವ ರೋಗಿಯ ಶರೀರದಲ್ಲಿ ಪಿತ್ತ ಹೆಚ್ಚಾಗಿರುವಾಗ ಅವನಿಗೆ ಪುನಃ ಪಿತ್ತದ ಪ್ರಮಾಣ ಹೆಚ್ಚಿರುವ ರಕ್ತವನ್ನು ನೀಡಿದರೆ, ರಕ್ತವನ್ನು ಸ್ವೀಕರಿಸುವ ರೋಗಿಯ ಪಿತ್ತವು ಇನ್ನೂ ಹೆಚ್ಚಾಗಿ ಅವನ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ವಿಚಾರವನ್ನು ಇಂದು ಅಲೋಪಥಿಯವರು ಮಾಡದಿದ್ದರೂ ಆಯುರ್ವೇದದ ಅಧ್ಯಯನಕಾರನೆಂದು ನಾನು ಈ ವಿಚಾರವನ್ನು ಇಲ್ಲಿ ಮಂಡಿಸಿದ್ದೇನೆ.

೪ ಆ. ಮನೆಮದ್ದು : ಈ ದಿನಗಳಲ್ಲಿ ಆಗುವ ಎಲ್ಲ ಉಷ್ಣತೆಯ ರೋಗಗಳಿಗೆ ಚಂದನ, ಬಾಳದ ಬೇರು, ಆಡುಸೋಗೆ, ಅಮೃತಬಳ್ಳಿ, ಕಿರಾಯಿತ, ಕಹಿಬೇವು, ತೆಂಗಿನ ಎಣ್ಣೆ, ತುಪ್ಪ ಇತ್ಯಾದಿ ಮನೆಮದ್ದುಗಳು ತುಂಬಾ ಲಾಭದಾಯಕವಾಗಿವೆ. ಇವುಗಳನ್ನು ಈ ಮುಂದಿನಂತೆ ಉಪಯೋಗಿಸಬಹುದು –

೧. ಚಂದನವನ್ನು ಸಾಣೆಕಲ್ಲಿನ ಮೇಲೆ ತೇಯ್ದು ಬೆಳಗ್ಗೆ-ಸಾಯಂಕಾಲ ಅರ್ಧ ಚಮಚ ಗಂಧವನ್ನು ೧ ಲೋಟ ನೀರಿನೊಂದಿಗೆ ಸೇವಿಸಬೇಕು ಅಥವಾ ತೇಯ್ದಿರುವ ಗಂಧವನ್ನು ಚರ್ಮಕ್ಕೆ ಹಚ್ಚಿಕೊಳ್ಳಬೇಕು. (೪ ರಿಂದ ೭ದಿನಗಳು)

೨. ಬಾಳದ ಬೇರುಗಳನ್ನು ನೀರಿನಲ್ಲಿಟ್ಟು ಆ ನೀರನ್ನು ಕುಡಿಯಬೇಕು.

೩. ಆಡುಸೋಗೆ, ಅಮೃತಬಳ್ಳಿ ಅಥವಾ ಕಿರಾಯಿತ ಇವುಗಳ ಕಶಾಯ ಮಾಡಿ ೧ – ೧ ಕಪ್ ದಿನದಲ್ಲಿ ೩ ಬಾರಿ ಸೇವಿಸಬೇಕು. (೪ – ೭ ದಿನ)

೪. ಕಹಿಬೇವಿನ ಎಲೆಗಳ ಒಂದು ಬಟ್ಟಲು ರಸವನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. (೪ – ೭ ದಿನ) ಕಲ್ಲುಸಕ್ಕರೆಯ ಮೇಲೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಅದನ್ನು ನೆಕ್ಕಬೇಕು.

ಟಿಪ್ಪಣಿ : ೪ ರಿಂದ ೭ ದಿನಗಳು ತೆಗೆದುಕೊಳ್ಳುವ ಔಷಧಗಳನ್ನು ಅದಕ್ಕಿಂತ ಹೆಚ್ಚು ದಿನ ತೆಗೆದುಕೊಳ್ಳಬಾರದು.

೫. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು !

ಈ ಋತುವಿನಲ್ಲಿ ಉರಿಬಿಸಿಲಿನಲ್ಲಿ ತಿರುಗಾಡುವುದು, ನೀರಿನ ಶವರ್ ಮೈಮೇಲೆ ತೆಗೆದುಕೊಳ್ಳುವುದು (ಶಾವರ ಬಾತ್), ಮಂಜಿನಲ್ಲಿ ನೆನೆಯುವುದು, ನಿರಂತರವಾಗಿ ಪಂಕದ ರಭಸದ ಗಾಳಿಯನ್ನು ಮೈಮೇಲೆ ತೆಗೆದುಕೊಳ್ಳುವುದು, ಕೋಪಗೊಳ್ಳುವುದು, ಕಿರಿಕಿರಿ ಮಾಡುವುದು ಮುಂತಾದ ವಿಷಯಗಳನ್ನು ಮಾಡಬಾರದು. ಈ ವಿಷಯಗಳಿಂದ ಶರೀರದಲ್ಲಿನ ವಾತ ಮುಂತಾದ ದೋಷಗಳ ಸಮತೋಲನ ಕೆಡುತ್ತದೆ ಹಾಗೂ ರೋಗಗಳು ನಿರ್ಮಾಣ ವಾಗುತ್ತವೆ. ‘ಈ ಶಾರದೀಯ (ಶರದ ಋತುವಿನ) ಋತುಚರ್ಯೆಯನ್ನು ಪಾಲನೆ ಮಾಡಿ ಸಾಧಕರು ಆರೋಗ್ಯವಂತರಾಗಲಿ ಹಾಗೂ ಎಲ್ಲರ ಆಯುರ್ವೇದದಲ್ಲಿ ಶ್ರದ್ಧೆ ಹೆಚ್ಚಾಗಲಿ’, ಎಂದು ಭಗವಾನ ಧನ್ವಂತರಿಯವರ ಚರಣಗಳಲ್ಲಿ ಪ್ರಾರ್ಥನೆ !’

– ವೈದ್ಯ ಮೇಘರಾಜ ಪರಾಡ್ಕರ್, ಸನಾತನ ಆಶ್ರಮ, ರಾಮನಾಥಿ ಗೋವಾ.