ಲಡಾಖ್‌ನಲ್ಲಿ ರಕ್ಷಣೆಯ ದೃಷ್ಟಿಯಿಂದ ಚೀನಾಗಿಂತ ಒಂದು ಹೆಜ್ಜೆ ಮುಂದಿರುವ ಭಾರತೀಯ ಸೈನ್ಯ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಕೆಲವು ದಿನಗಳ ಹಿಂದೆ ಲಡಾಖ್‌ನಲ್ಲಿ ೨ ಅತ್ಯಂತ ಮಹತ್ವದ ಘಟನೆಗಳು ಘಟಿಸಿದವು. ಭಾರತ-ಚೀನಾ ಹೋರಾಟದಲ್ಲಿ ಈ ಎರಡು ಘಟನೆಗಳು ಬಹುದೊಡ್ಡ ಪ್ರಭಾವ ಬೀರಲಿವೆ. ಆ ಘಟನೆಗಳ ವಿಷಯದಲ್ಲಿ ಭಾರತೀಯ ಸೈನ್ಯದ ಮಹತ್ವವನ್ನು ತಿಳಿದುಕೊಳ್ಳೋಣ.

೧. ಚೀನಾಕ್ಕೆ ಆಕ್ರಮಣದ ಸಾಧ್ಯತೆಯನ್ನು ಕಠಿಣಗೊಳಿಸಿದ ಗುಡ್ಡಗಳಲ್ಲಿ ನಿಯೋಜಿಸಲ್ಪಟ್ಟಿರುವ ಭಾರತೀಯ ಸೇನೆ

ಮೊಟ್ಟಮೊದಲು ಭಾರತೀಯ ಸೈನ್ಯವು ಎತ್ತರದಲ್ಲಿರುವ ಅನೇಕ ಗುಡ್ಡಗಳನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಸೈನಿಕರನ್ನು ನಿಯೋಜಿಸಿತು. ಹಿಂದೆ ಚೀನಾದ ಸೈನ್ಯವು ಅತಿಕ್ರಮಣ ಮಾಡುವಾಗ ರಸ್ತೆಯ ಮೇಲೆ ಬಂದು ಭಾರತದ ಭೂಮಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿತ್ತು. ಅವರಲ್ಲಿ ಯಾವುದೇ ಗುಡ್ಡದ ಮೇಲೆ ಹೋಗುವ ಇಚ್ಛೆ ಎಂದಿಗೂ ಇರಲಿಲ್ಲ. ಈಗ ಭಾರತೀಯ ಸೈನ್ಯವು ಅತ್ಯಂತ ಯೋಗ್ಯ ಹೆಜ್ಜೆಯನ್ನಿಟ್ಟಿದೆ. ಈ ಭಾಗದಲ್ಲಿ ಎಲ್ಲ ಸ್ಥಳಗಳ ಶಿಖರಗಳ ಮೇಲೆ ಸೈನಿಕರ ನಿಯೋಜನೆಯನ್ನು ಮಾಡಿದ್ದರಿಂದ ಯುದ್ಧವಾದರೆ ಚೀನಾವು ಪ್ರಚಂಡ ಸೈನ್ಯದೊಂದಿಗೆ ಭಾರತದ ಮೇಲೆ ಆಕ್ರಮಣ ಮಾಡಬೇಕಾಗುತ್ತದೆ; ಏಕೆಂದರೆ ಭಾರತೀಯ ಸೈನ್ಯವು ಗುಡ್ಡಗಳ ಶಿಖರಗಳ ಮೇಲಿರುವಾಗ, ಆಕ್ರಮಣ ಮಾಡುವ ಚೀನಾಗೆ ಭಾರತೀಯ ಸೈನ್ಯದ ೧೫ ರಿಂದ ೨೦ ಪಟ್ಟು ಹೆಚ್ಚು ಸೈನಿಕರನ್ನು ಕರೆದುಕೊಂಡು ಬರಬೇಕಾಗುವುದು. ಮೊದಲು ಚೀನಾ ನಮ್ಮೊಂದಿಗೆ ಮಾನಸಿಕ ಯುದ್ಧವನ್ನು ಮಾಡುತ್ತಿತ್ತು; ಆದರೆ ಭಾರತವು ಅದಕ್ಕೆ, ‘ಕೇವಲ ಎಚ್ಚರಿಕೆ ನೀಡಿ ಮತ್ತು ಅಪಪ್ರಚಾರ ಮಾಡಿ ಯುದ್ಧವನ್ನು ಜಯಿಸಲು ಬರುವುದಿಲ್ಲ. ಯುದ್ಧವನ್ನು ಜಯಿಸುವುದಿದ್ದರೆ, ಸೈನಿಕರಿಗೆ ಇನ್ನೊಂದು ರಾಷ್ಟ್ರದ ಸೈನಿಕರ ಮೇಲೆ ಆಕ್ರಮಣ ಮಾಡಿ ಅವರ ಭೂಮಿಯನ್ನು ಗೆಲ್ಲಬೇಕಾಗುತ್ತದೆ, ಎಂದು ತೋರಿಸಿಕೊಟ್ಟಿತು.

ಭಾರತೀಯ ಮಾಧ್ಯಮಗಳಲ್ಲಿ ಕೆಲವು ಚೀನಾಪ್ರೇಮಿಗಳು, ಚೀನಾ ನಮ್ಮ ಕೆಲವು ಸಾವಿರ ಕಿಲೋಮೀಟರ್ ಭೂಭಾಗವನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಅಪಪ್ರಚಾರ ಮಾಡಿದ್ದರು. ಚೀನಾ ನಮ್ಮ ಇಷ್ಟು ದೊಡ್ಡ ಭಾಗವನ್ನು ಎಂದಿಗೂ ವಶಕ್ಕೆ ತೆಗೆದುಕೊಂಡಿರಲಿಲ್ಲ. ಅವರ ಸೈನ್ಯವು ರಸ್ತೆಗಳಿರುವ ಪೆಂಗಾಂಗ್ ತ್ಸೋ ಕೊಳ ಮತ್ತ ಗಲವಾನದ ಕಣಿವೆಗಳ ಭಾಗದಲ್ಲಿ ೨ ರಿಂದ ೩ ಕಿಲೋಮೀಟರ್ ಒಳಗಡೆ ಬಂದಿತ್ತು. ಸದ್ಯ ಅವರು ಒಂದು ರಸ್ತೆಯ ಮೇಲೆ ಒಳಗೆ ಬಂದಿದ್ದಾರೆ; ಆದರೆ ಈಗ ಅವರಿಗೆ ಯಾವುದೇ ಭಾಗದ ಮೇಲೆ ನಿಯಂತ್ರಣವಿಡಲು ಸಾಧ್ಯವಾಗುವುದಿಲ್ಲ; ಏಕೆಂದರೆ ಈಗ ಆ ರಸ್ತೆಗಳ ಮೇಲಿನ ಗುಡ್ಡಗಳ ಮೇಲೆ ಭಾರತೀಯ ಸೈನ್ಯವನ್ನು ನಿಯೋಜಿಸಲಾಗಿದೆ.

೨. ಭಾರತವು ಚೀನಾಗಿಂತ ಒಂದು ಹೆಜ್ಜೆ ಮುಂದೆ !

ಇನ್ನೊಂದು ಮಹತ್ವದ ಘಟನೆ ಎಂದರೆ ಲಡಾಖ್‌ನಲ್ಲಿ ನಾವು ರಸ್ತೆಗಳನ್ನು, ಸದ್ಯದ ‘ಲ್ಯಾಂಡಿಂಗ್ ಗ್ರೌಂಡ್ಸ್ ಮತ್ತು ‘ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಗ್ರೌಂಡ್ಸ್ಗಳನ್ನು ಸದೃಢ ಮಾಡುತ್ತಿದ್ದೇವೆ. ಭಾರತವು ಈ ಗಡಿಯಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಿದೆ. ಭಾರತೀಯ ಸೈನ್ಯಕ್ಕೆ ಕಿರಾಣಿ ಮತ್ತು ಸೈನ್ಯಸಾಮಗ್ರಿಗಳನ್ನು ತಲುಪಿಸಲು ೨ ರಸ್ತೆಗಳು ತಯಾರಾಗಿವೆ. ಒಂದು ರಸ್ತೆ ಶ್ರೀನಗರದಿಂದ ಕಾರ್ಗಿಲ್ ಮಾರ್ಗದಿಂದ ಲೇಹವನ್ನು ತಲುಪುತ್ತದೆ; ಆದರೆ ಆ ರಸ್ತೆಯು ೫ ರಿಂದ ೬ ತಿಂಗಳು ಹಿಮಪಾತದಿಂದಾಗಿ ಮುಚ್ಚಿರುತ್ತದೆ. ಇನ್ನೊಂದು ಹೊಸ ರಸ್ತೆಯು ಹಿಮಾಚಲದ ಬದಿಯಿಂದ ಹೋಗುತ್ತದೆ, ಅದು ಮನಾಲಿ ಅಥವಾ ಖರ್ದುಂಗಲಾ ಮಾರ್ಗದಿಂದ  ಲೇಹವನ್ನು ತಲುಪುತ್ತದೆ. ಮೊದಲು ಈ ರಸ್ತೆಯೂ ೫ ರಿಂದ ೬ ತಿಂಗಳು ಹಿಮ ಬೀಳುವುದರಿಂದ ಮುಚ್ಚಿರುತ್ತಿತ್ತು. ಈಗ ಸರಕಾರವು ಅಲ್ಲಿ ಸುರಂಗಗಳನ್ನು ಕೊರೆದಿರುವುದರಿಂದ ಈಗ ಈ ರಸ್ತೆಯು ೮ ರಿಂದ ೯ ತಿಂಗಳು ತೆರೆದಿರಬಹುದು. ಹಾಗೆಯೇ ಇನ್ನೂ ೨ ಸುರಂಗಮಾರ್ಗಗಳನ್ನು ಅಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಈ ರಸ್ತೆಯು ವರ್ಷವಿಡಿ ತೆರೆದಿರಬಹುದು.

ಇದಕ್ಕಿಂತಲೂ ಮಹತ್ವದ್ದೆಂದರೆ, ಲೇಹದ ಕಡೆಗೆ ಹೋಗುವ ಈ ರಸ್ತೆಯು ಗುಡ್ಡದ ಹಿಂದೆ ಅಡಗಿದೆ. ಆದ್ದರಿಂದ ಚೀನಾಗೆ ಈ ರಸ್ತೆಯ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ. ಚೀನಾಗೆ ಭಾರತದ ಮೇಲೆ ಸೈನಿಕ ಆಕ್ರಮಣ ಮಾಡುವುದಿದ್ದರೆ, ಅದಕ್ಕೆ ತುಂಬಾ ವಿಚಾರ ಮಾಡಬೇಕಾಗುವುದು. ಭಾರತವು ಚೀನಾವನ್ನು ಹಿಂದೆ ಹಾಕಿ ಜಯ ಸಾಧಿಸಿದೆ; ಆದ್ದರಿಂದ ಭಾರತೀಯ ಸೈನ್ಯವು ಯುದ್ಧದ ಸಂದರ್ಭದಲ್ಲಿ ಚೀನಾಗಿಂತ ಒಂದು ಹೆಜ್ಜೆ ಮುಂದಿದೆ, ಎಂದು ಹೇಳಬಹುದು.- (ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ, ಪುಣೆ.