ಧರ್ಮಾಧಿಷ್ಠಿತ ರಾಜಕಾರಣ !

ಬ್ರಿಟನ್ ಪ್ರಧಾನಮಂತ್ರಿಗಳಾದ ಬೋರಿಸ್ ಜಾನ್ಸನ್ ಇವರಿಗೆ ಆರ್ಥಿಕ ಮುಗ್ಗಟ್ಟು (ಅಡಚಣೆ) ಉಂಟಾಗಿರುವುದರಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ಪತ್ರವನ್ನು ನೀಡುವ ವಿಚಾರದಲ್ಲಿದ್ದಾರೆ. ಈ ಮಾಹಿತಿಯು ಬ್ರಿಟೀಷ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಯಾವುದಾದರೊಂದು ದೇಶದ ಪ್ರಮುಖನು ಆರ್ಥಿಕ ಕಾರಣಗಳಿಗಾಗಿ ತನ್ನ ಹುದ್ದೆಯ ತ್ಯಾಗ ಮಾಡುವುದು ಬಹುಶಃ ಇದು ಮೊದಲ ಉದಾಹರಣೆಯಾಗಿರಬಹುದು. ಭಾರತೀಯರಿಗಾಗಿ ಮಾತ್ರ ಇದು ಒಂದು ಆಶ್ಚರ್ಯದ ಸಂಗತಿಯಾಗಿದೆ; ಏಕೆಂದರೆ ‘ರಾಜಕಾರಣಿಗಳಿಗೆ ಇಂತಹ ಸಮಸ್ಯೆ ಎದುರಾಗಬಹುದೇನು ಎಂಬ ವಿಚಾರವೇ ಭಾರತದಲ್ಲಿ ಅರಗಿಸಿಕೊಳ್ಳಲು ಕಠಿಣವಾಗಿದೆ. ಭಾರತದಲ್ಲಿ ರಾಜಕಾರಣ ಕಲಂಕಿತವಾಗಿದೆ. ‘ಜನರ ಸೇವೆಯನ್ನು ಮಾಡಲು ರಾಜಕಾರಣದಲ್ಲಿ ಬಂದಿದ್ದೇವೆ’, ಎಂದು ಕೇವಲ ಬಾಯಿಮಾತಿಗೆ ಹೇಳಲಾಗುತ್ತದೆ; ಆದರೆ ರಾಜಕಾರಣವನ್ನು ಮಾಡಿ ಕೇವಲ ತಮ್ಮ ಕಲ್ಯಾಣವನ್ನೇ ಮಾಡಿಕೊಳ್ಳಲಾಗುತ್ತದೆ, ಇಂತಹ ಉದಾಹರಣಗಳೇ ನಮಗೆ ನೋಡಲು ಸಿಗುತ್ತವೆ. ಕೆಲವು ಉದಾಹರಣೆಗಳು ಇದಕ್ಕೆ ಅಪವಾದಾತ್ಮಕವಾಗಿದ್ದರೂ ಅಂತಹಗಳು ವಿರಳ ಎನ್ನಬಹುದು ! ಒಂದು ಸಾಮಾನ್ಯ ಮನೆಯಲ್ಲಿರುವ ವ್ಯಕ್ತಿಯು ರಾಜಕಾರಣದಲ್ಲಿ ಪ್ರವೇಶಿಸಿ ಬಂಗಲೆಯಲ್ಲಿ ಅಥವಾ ಸುಖವಿಲಾಸಗಳಲ್ಲಿ ಇರತೊಡಗಿದ ಅನೇಕ ಉದಾಹರಣೆಗಳಿವೆ. ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಯು ಚುನಾವಣಾ ಆಯೋಗಕ್ಕೆ ತನ್ನ ಆಸ್ತಿಪಾಸ್ತಿಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅದರ ಅಭ್ಯಾಸ ಮಾಡಿದರೆ ಅನೇಕ ಶಾಸಕರ-ಸಂಸದರ ಸಂಪತ್ತು ಕೆಲವು ವರ್ಷಗಳಲ್ಲಿ ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತದೆ. ‘ಗಳಿಕೆಯ ಯಾವುದೇ ಆರ್ಥಿಕ ಮೂಲಗಳಿಲ್ಲದಿರುವಾಗಲೂ ಇದು ಹೇಗೆ ಸಾಧ್ಯ ?’, ಎಂಬುದು ಈಗ ಒಗಟಾಗಿ ಉಳಿದಿಲ್ಲ. ಇದು ಭ್ರಷ್ಟಾಚಾರದಗಳಿಕೆಯಾಗಿದೆ. ರಾಜಕಾರಣ ಮತ್ತು ಭ್ರಷ್ಟಾಚಾರ ಇವು ಒಂದೇ ನಾಣ್ಯದ ಎರಡು ಮುಖಗಳಾಗಿವೆ, ಇದುವೇ ಭಾರತದಲ್ಲಿ ನೋಡಲು ಸಿಗುತ್ತದೆ. ಹೀಗಿದ್ದರೂ ಬೋರಿಸ್ ಜಾನ್ಸನ್‌ರವರ ಈ ನಿರ್ಣಯದಿಂದ ಒಂದು ಬೇರೆಯೇ ಆಯಾಮ ನಮ್ಮೆದುರಿಗೆ ಬಂದಿದೆ.

ಬೋರಿಸ್ ಜಾನ್ಸನ್ ಇವರಿಗೆ ವರ್ಷಕ್ಕೆ ಸುಮಾರು ೧ ಕೋಟಿ ೪೩ ಲಕ್ಷ ರೂಪಾಯಿಗಳಷ್ಟು ವೇತನ ಸಿಗುತ್ತದೆ. ‘ಪ್ರಧಾನಮಂತ್ರಿ ಹುದ್ದೆಯಿಂದ ದೂರವಾಗಿ ದಿನಪತ್ರಿಕೆಗಳಿಗೆ ಲೇಖನಗಳನ್ನು ಬರೆದರೆ ಇದಕ್ಕಿಂತಲೂ ಹೆಚ್ಚು ಹಣವನ್ನು ಪಡೆಯಬಹುದು’, ಎಂಬುದು ಜಾನ್ಸನ್ ಇವರ ವಿಚಾರವಾಗಿದೆ. ಹಾಗಾದರೆ, ‘ರಾಜಕಾರಣವನ್ನು ಮಾಡುವವರು ತಾವು ಆರ್ಥಿಕ ದೃಷ್ಟಿಯಿಂದ ಸಮೃದ್ಧವಾಗಬೇಕು’, ಎಂಬ ಇಚ್ಛೆಯನ್ನಿಟ್ಟುಕೊಳ್ಳುವುದು ತಪ್ಪಾಗಿದೆಯೇ ? ಇಲ್ಲವಲ್ಲ,  ಅಥವಾ ‘ಅದಕ್ಕಾಗಿ ರಾಜಕಾರಣವನ್ನು ತ್ಯಜಿಸಿದರೆ ಅದರಲ್ಲಿ ಏನು ತಪ್ಪಿದೆ ?’, ಹೀಗೂ ಪ್ರಶ್ನೆಗಳು ಉದ್ಭವಿಸಬಹದು. ತಮ್ಮ ಐಹಿಕ ಉತ್ಕರ್ಷವನ್ನು ಸಾಧಿಸುವುದರಲ್ಲಿ ಯಾವುದೇ ತಪ್ಪಿಲ್ಲ; ಆದರೆ ತಮ್ಮ ಐಹಿಕ ಉತ್ಕರ್ಷಕ್ಕೆ ರಾಜಕಾರಣ ಮಾರ್ಗವಾಗಬಾರದು. ಹಿಂದೆ ಭಾರತದಲ್ಲಿ ಧರ್ಮಾಧಿಷ್ಠಿತ ರಾಜಕಾರಣವನ್ನು ಮಾಡಲಾಗುತ್ತಿತ್ತು.

ರಾಜಕಾರಣ ಅಥವಾ ರಾಜ್ಯಾಡಳಿತದಲ್ಲಿ ಸಹಭಾಗಿಯಾಗಿರುವ ವ್ಯಕ್ತಿಯು ತನ್ನ ಐಹಿಕ ಸುಖಕ್ಕಾಗಿ ಅಲ್ಲ, ಜನರ ಸುಖಕ್ಕಾಗಿಯೇ ರಾಜ್ಯಾಡಳಿತವನ್ನು ಮಾಡುತ್ತಿದ್ದನು. ಹಿಂದೂ ಧರ್ಮದಲ್ಲಿ ರಾಜನನ್ನು ಶ್ರೀವಿಷ್ಣುವಿನ ಸ್ವರೂಪವೆಂದು ತಿಳಿಯಲಾಗುತ್ತದೆ. ಶ್ರೀವಿಷ್ಣುವು ಪ್ರಜೆಗಳ ಪಾಲನಕರ್ತನಾಗಿದ್ದಾನೆ. ಆದ್ದರಿಂದ ರಾಜನು ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಪಾಡುವುದು ಮತ್ತು ಅವರ ಪಾಲನೆಪೋಷಣೆ ಮಾಡುವುದೇ ಅವನ ಕರ್ತವ್ಯವಾಗಿರುತ್ತದೆ. ಅದರಲ್ಲಿ ತನ್ನ ವೈಯಕ್ತಿಕ ಜೀವನ, ತನ್ನ ಸುಖ ಹೀಗೆ ಯಾವುದೂ ಇರುವುದಿಲ್ಲ. ಇದರಿಂದ ‘ರಾಜಕಾರಣದಿಂದ ಸಮಾಜಕಾರಣ ಮಾಡುವುದು ಎಷ್ಟು ಕಠಿಣವಾಗಿದೆ’, ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಜನರಹಿತಕ್ಕಾಗಿ ತನ್ನ ಸಂಪೂರ್ಣ ಜೀವನವನ್ನು ಸಮರ್ಪಿಸುವುದು, ಅಷ್ಟು ಸುಲಭವಲ್ಲ. ಧರ್ಮಾಧಿಷ್ಠಿತ ರಾಜ್ಯಾಡಳಿತ ಮಾಡುವ ಅನೇಕ ರಾಜರು ಭಾರತದಲ್ಲಿ ಆಗಿ ಹೋದರು; ಆದರೆ ರಾಜಕಾರಣದಲ್ಲಿದ್ದೂ ತ್ಯಾಗಿ ಮತ್ತು ನಿಸ್ವಾರ್ಥ ಜೀವನವನ್ನು ಜೀವಿಸಿದ ಮಾಜಿ ಪ್ರಧಾನಮಂತ್ರಿ ಲಾಲಬಹಾದ್ದೂರ ಶಾಸ್ತ್ರಿಗಳಂತಹ ಬಹಳ ಕಡಿಮೆ ಉದಾಹರಣೆಗಳು ನಮಗೆ ನೋಡಲು ಸಿಗುತ್ತವೆ. ಬೋರಿಸ್ ಜಾನ್ಸನ್ ಇವರ ನಿರ್ಣಯದಿಂದ ಸಮಾಜಕ್ಕೆ ಧರ್ಮಾಧಿಷ್ಠಿತ ರಾಜಕಾರಣಿಗಳು ದೊರಕುವುದರ ಅವಶ್ಯಕತೆಯೂ ಮತ್ತೊಮ್ಮೆ ಸಿದ್ಧವಾಯಿತು !