ಆಂಧ್ರಪ್ರದೇಶದಲ್ಲಿ ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ಹಲ್ಲೆಗಳು : ಹೊಸ ‘ಇನ್ಕ್ವಿಝಿಶನ್ ?

ಸ್ವಾತಂತ್ರ್ಯಪೂರ್ವದಲ್ಲಿ ಪರಕೀಯರಿಂದ ಮತ್ತು ಆಮೇಲೆ ಭಾರತದ ವಿಭಜನೆಯ ನಂತರವೂ ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ಹಲ್ಲೆಗಳು ಇಂದು ಮುಂದುವರಿದಿವೆ. ಇಂದು ದೇಶದಲ್ಲಿ ಯಾವುದೇ ಆಕ್ರಮಣಕಾರರ ರಾಜ್ಯವಿಲ್ಲ. ಸದ್ಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಇತ್ಯಾದಿ ರಾಜ್ಯಗಳಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದೊಡ್ಡ ಸಂಖ್ಯೆಯಲ್ಲಿ ಹಲ್ಲೆಗಳಾಗುತ್ತಿವೆ. ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಮೇ ೨೦೧೯ ರಲ್ಲಿ ಕ್ರೈಸ್ತ ಪಂಥದ ಜಗನಮೋಹನ ರೆಡ್ಡಿಯವರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದೇವಸ್ಥಾನಗಳ ಮೇಲಾಗುತ್ತಿರುವ ಹಲ್ಲೆಗಳ ಸಂಖ್ಯೆ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿ ಒಂದು ರೀತಿಯಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ್ಕೆ ರಾಜಾಶ್ರಯ ದೊರಕಿದೆ. ಈ ವಿಷಯದಲ್ಲಿ ವಿಚಾರಮಂಥನ ಮಾಡುವ ಲೇಖನವನ್ನು ಇಲ್ಲಿ ನೀಡುತ್ತಿದ್ದೇನೆ.

ಸಂಕಲನಕಾರರು : ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

೧. ಬಹುಸಂಖ್ಯಾತ ಹಿಂದೂಗಳ ಭಾರತದಲ್ಲಿ ಹಿಂದೂ ದೇವಸ್ಥಾನಗಳ ಸುರಕ್ಷತೆಯ ಸಮಸ್ಯೆ ಉದ್ಭವ !

ಭಾರತದ ಇತಿಹಾಸದಲ್ಲಿ ಮೊಗಲ ದಾಳಿಕೋರರು ಹಿಂದೂಗಳ ದೇವಸ್ಥಾನಗಳ ಮೇಲೆ ಹಲ್ಲೆ ಮಾಡುವುದು ಮತ್ತು ಅವುಗಳನ್ನು ಲೂಟಿ ಮಾಡಿ ವಿಧ್ವಂಸ ಮಾಡುವುದು ಇತ್ಯಾದಿ ಅನೇಕ ಘಟನೆಗಳ ಉಲ್ಲೇಖವಿದೆ. ಮೊಗಲರ ನಂತರ ಗೋವಾ ಮುಂತಾದ ಪ್ರದೇಶಗಳಲ್ಲಿ ಕ್ರೈಸ್ತ ಪಾದ್ರಿ ಫ್ರಾನ್ಸಿಸ್ ಝೇವಿಯರ್‌ನ ಆದೇಶಕ್ಕನುಸಾರ ‘ಇನ್ಕ್ವಿಝಿಶನ್ ಆಯಿತು, ಅದರಲ್ಲಿಯೂ ಹಿಂದೂಗಳ ದೇವಸ್ಥಾನಗಳನ್ನು ವಿಧ್ವಂಸ ಮಾಡಲಾಯಿತು. ೧೯೪೭ ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿಯೂ ಹಿಂದೂಗಳ ದೇವಸ್ಥಾನಗಳ ಮೇಲೆ ಹಲ್ಲೆಗಳು ನಡೆಯುತ್ತಿದ್ದವು. ಅನಂತರ ೧೯೯೦ ರಲ್ಲಿ ಕಾಶ್ಮೀರದಲ್ಲಿ ಜಿಹಾದಿ ಉಗ್ರವಾದದ ಒಂದು ಹೊಸ ಕಾಲ ಆರಂಭವಾಯಿತು. ಆ ಕಾಲದಲ್ಲಿಯೂ ಅಲ್ಲಿನ ಹಿಂದೂಗಳ ಮೇಲೆ ಭೀಕರ ದೌರ್ಜನ್ಯಗಳಾದವು ಹಾಗೂ ಹಿಂದೂ ದೇವಸ್ಥಾನಗಳೊಂದಿಗೆ ಅಲ್ಲಿನ ಮೂರ್ತಿಗಳನ್ನು ಕೂಡ ಧ್ವಂಸ ಮಾಡಲಾಯಿತು. ಆದ್ದರಿಂದ ಹಿಂದೂಗಳು ಬಹುಸಂಖ್ಯೆಯಲ್ಲಿರುವ ಈ ಭಾರತದಲ್ಲಿ ಹಿಂದೂ ದೇವಸ್ಥಾನಗಳ ಸುರಕ್ಷತೆಯ ಸಮಸ್ಯೆ ಉದ್ಭವಿಸಿದೆ.

೨. ಆಂಧ್ರಪ್ರದೇಶದಲ್ಲಿ ಜಗನಮೋಹನ ರೆಡ್ಡಿಯವರ ಆಡಳಿತಾವಧಿಯಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ಹಲ್ಲೆಗಳಲ್ಲಿ ಹೆಚ್ಚಳ !

ಇಂದು ದೇಶದಲ್ಲಿ ಯಾವುದೇ ಆಕ್ರಮಣಕಾರರ ರಾಜ್ಯವಿಲ್ಲ, ಹಾಗೆಯೇ ಅಧಿಕಾರಕ್ಕೆ ಬರುವ ಹೊಸ ಸರಕಾರವು ಸಹ ಎಲ್ಲ ನಾಗರಿಕರ ಶ್ರದ್ಧೆ ಮತ್ತು ಉಪಾಸನೆಯನ್ನು ಸಮಭಾವದಿಂದ ರಕ್ಷಣೆ ಮಾಡುವ ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ; ಆದರೆ ಸಾಂವಿಧಾನಿಕ ಸರಕಾರಗಳಿರುವಾಗಲೂ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಇತ್ಯಾದಿ ರಾಜ್ಯಗಳಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹಲ್ಲೆಗಳಾಗುತ್ತಿವೆ. ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಮೇ ೨೦೧೯ ರಲ್ಲಿ ವೈ. ಎಸ್.ಆರ್. ಕಾಂಗ್ರೆಸ್ ಪಕ್ಷದ ಕ್ರೈಸ್ತ ಪಂಥೀಯ ಜಗನಮೋಹನ ರೆಡ್ಡಿಯವರ ಸರಕಾರವು ಅಧಿಕಾರವನ್ನು ಸ್ವೀಕರಿಸಿದ ನಂತರ ದೇವಸ್ಥಾನಗಳ ಮೇಲಿನ ದಾಳಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ೧೮ ದೇವಸ್ಥಾನಗಳ ಮೇಲೆ ಹಲ್ಲೆಗಳಾದವು. ಇದರಿಂದ ‘ಗೋವಾದ ‘ಇನ್ಕ್ವಿಝಿಶನ್ನ ನಂತರ ಈಗ ಆಂಧ್ರಪ್ರದೇಶದಲ್ಲಿ ‘ಇನ್ಕ್ವಿಝಿಶನ್ ಆರಂಭ ವಾಗಿದೆಯೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

೩. ಆಂಧ್ರಪ್ರದೇಶದಲ್ಲಿ ಕ್ರೈಸ್ತ ಧರ್ಮಪ್ರಚಾರಕ್ಕೆ ರಾಜಾಶ್ರಯ !

ಅ. ನಾವು ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಆಂಧ್ರಪ್ರದೇಶದ  ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯವರ ಸಹೋದರಿಯ ಪತಿ ಅನೀಲ ಕುಮಾರ ಇವರು ರಾಜ್ಯದ ಸುಪ್ರಸಿದ್ಧ ‘ಇವೆಂಝೆಲಿಸ್ಟ್ (ಕ್ರೈಸ್ತ ಪ್ರಚಾರಕ) ಆಗಿದ್ದಾರೆ. ಅವರು ‘ಅನಿಲ ವರ್ಲ್ಡ್ ಇವೆಂಝಲಿಝಮ್ ಹೆಸರಿನ ಸಂಘಟನೆಯನ್ನು ನಡೆಸುತ್ತಾರೆ. ಒಂದು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅನೀಲ ಕುಮಾರ ಜಗನಮೋಹನ ರೆಡ್ಡಿಯವರ ಸಹೋದರಿ ವೈ. ಎಸ್. ಶರ್ಮಿಲಾ ರೆಡ್ಡಿ ಇವಳೊಂದಿಗೆ ವಿವಾಹವಾದ ನಂತರ ಕ್ರೈಸ್ತ ಪಂಥವನ್ನು ಸ್ವೀಕರಿಸಿದರು. ಅವರು ಒಂದು ಸಂದರ್ಶನದಲ್ಲಿ, ‘ನನಗೆ ಸಣ್ಣ ಊರುಗಳಲ್ಲಿ ಕ್ರೈಸ್ತ ಪ್ರಚಾರ ಮಾಡಲು ಇಷ್ಟವಾಗುತ್ತದೆ. ಅದೇ ರೀತಿ ಹಳ್ಳಿಗಳಲ್ಲಿ ಸಣ್ಣ ಸಣ್ಣ ಚರ್ಚ್‌ಗಳನ್ನು ನಿರ್ಮಿಸುವುದು, ನನ್ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಆ. ಕ್ರೈಸ್ತ ಪ್ರಚಾರಕ್ಕಾಗಿ ಅನೀಲ ಕುಮಾರರಿಗೆ ‘ಡೊನೇಶನ್ ಸಿಗುತ್ತದೆ ಹಾಗೂ ಸ್ವಲ್ಪ ಕಡಿಮೆ ಸಿಕ್ಕಿದರೂ ರೆಡ್ಡಿ ಕುಟುಂಬದವರು ವ್ಯಾಪಾರಿಗಳಾಗಿರುವುದರಿಂದ ಅವರಿಂದ ಹಣದ ಸಹಾಯ ಸಿಗುತ್ತದೆ. ಅವರನ್ನು ಆಂಧ್ರದೇಶದ ಕ್ರೈಸ್ತ ಸಂಘಟನೆಗಳು ಗೌರವಿಸುತ್ತವೆ ಹಾಗೂ ಜಗನಮೋಹನ ರೆಡ್ಡಿ ಪುನಃ ಅಧಿಕಾರಕ್ಕೇರುವುದರ ಹಿಂದೆ ಕ್ರೈಸ್ತ ಜನಸಂಖ್ಯೆಯನ್ನು ಹೆಚ್ಚಿಸಿರುವ ಕ್ರೈಸ್ತರ ‘ವೋಟ್ ಬ್ಯಾಂಕ್ ತಯಾರಿಸಿರುವ ಅನೀಲ ಕುಮಾರರ ಶ್ರಮವೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಇ. ಫೆಬ್ರವರಿ ೨೦೨೦ ರಲ್ಲಿ ಆಂಧ್ರಪ್ರದೇಶದಲ್ಲಿ ಎಲ್ಲ ಪಾದ್ರಿಗಳ ಒಂದು ಸಭೆಯಲ್ಲಿ (‘ದೈವ ಸೇವಾಕುಲಾ ಸದಸ್ಯುರಲ್ಲಿ) ಅನೀಲ ಕುಮಾರರನ್ನು ಮುಖ್ಯ ಅತಿಥಿಗಳೆಂದು ಆಮಂತ್ರಿಸಲಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ಇದು ಕೇವಲ ಪಾದ್ರಿಗಳ ಸಭೆ ಯಾಗಿದ್ದರೂ ಅದರಲ್ಲಿ ಮುಖ್ಯಮಂತ್ರಿ ರೆಡ್ಡಿಯವರ ವೈ.ಎಸ್.ಆರ್. ಕಾಂಗ್ರೆಸ್ಸಿನ ಶಾಸಕಿ ಕೆ. ಭಾಗ್ಯಲಕ್ಷ್ಮಿ ಮತ್ತು ಸೆಟ್ಟಿ ಫಾಲ್ಗುನಾ ಇವರು ಅನೇಕ ಕಾರ್ಯಕರ್ತರೊಂದಿಗೆ ಭಾಗವಹಿಸಿದ್ದರು. ಇದಕ್ಕೆ ಜಾತ್ಯತೀತ ಸಂವಿಧಾನದ ಪಾಲನೆ ಎಂದು ಹೇಳಬಹುದೇ ?

ಈ. ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯವರಂತೂ ಹಜ್ ಯಾತ್ರೆಯಂತೆ ಜೆರುಸಲೇಮ್ ಯಾತ್ರೆಗಾಗಿ ಕ್ರೈಸ್ತರಿಗೂ ಅನುದಾನ ನೀಡುವ ಘೋಷಣೆಯನ್ನು ಮಾಡಿ ತಮ್ಮ ‘ಮತಪೆಟ್ಟಿಗೆಯನ್ನು ಭದ್ರಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ಯಾವಾಗ ರಾಜ್ಯಾಡಳಿತವೇ ಜಾತ್ಯತೀತತೆಯನ್ನು ಬಿಟ್ಟು ಒಂದು ಪಂಥದ ಪ್ರಚಾರಕ್ಕಾಗಿ ಸಹಾಯ ಮಾಡುತ್ತದೆಯೋ, ಆಗ ಆಂಧ್ರಪ್ರದೇಶದ ಹಿಂದೂಗಳಿಗೆ ಹೇಗೆ ನ್ಯಾಯ ಸಿಗುವುದು ? ಈ ಸರಕಾರ ಬಂದಾಗಿನಿಂದ ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳ ಸರಮಾಲೆ ಆರಂಭವಾಗಿದೆ.

೪. ಆಂಧ್ರಪ್ರದೇಶದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ಹಲ್ಲೆಗಳ ಕೆಲವು ಉದಾಹರಣೆಗಳು

ಅ. ಫೆಬ್ರವರಿ ೨೦೨೦ ರಲ್ಲಿ ನೆಲ್ಲೋರ್‌ನಲ್ಲಿ ಪ್ರಸನ್ನಾ ವೆಂಕಟೇಶ್ವರ ದೇವಸ್ಥಾನದ ರಥವನ್ನು ಸುಡಲಾಯಿತು.

ಆ. ಗುಂಟೂರು ಜಿಲ್ಲೆಯಲ್ಲಿ ರೋಮಪೀಚೆರ್ಲಾ ಎಂಬಲ್ಲಿ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನದ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಲಾಯಿತು.

ಇ. ಕೃಷ್ಣಾ ಜಿಲ್ಲೆಯಲ್ಲಿ ವತ್ಸವಯೀ ಮಂಡಲದ ಮಕ್ಕಪೇಟಾ ಊರಿನಲ್ಲಿ ಐತಿಹಾಸಿಕ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ನಂದಿಯ ಮೂರ್ತಿಯನ್ನು ಧ್ವಂಸ ಮಾಡಲಾಯಿತು.

ಈ. ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಅಂತರವೇದಿಯಲ್ಲಿ ಸುಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನವಿದೆ. ೬ ಸಪ್ಟೆಂಬರ್ ೨೦೨೦ ರಂದು ಅಲ್ಲಿನ ೬೨ ವರ್ಷಗಳಷ್ಟು ಹಳೆಯದಾಗಿರುವ ರಥಕ್ಕೆ ಬೆಂಕಿ ಹಚ್ಚಿ ಸುಡಲಾಯಿತು.

ಉ. ಚಿತ್ತೂರು ಜಿಲ್ಲೆಯಲ್ಲಿ ಅಗಾರಾ ಮಂಗಲಮ್ ಎನ್ನುವ ಊರಿದೆ. ೨೭ ಸಪ್ಟೆಂಬರ್ ೨೦೨೦ ರಂದು ಈ ಊರಿನ ಶಿವನ ದೇವಸ್ಥಾನದ ಮೇಲೆ ಹಲ್ಲೆ ಮಾಡಿ ನಂದಿಯ ಮೂರ್ತಿಯನ್ನು ಧ್ವಂಸ ಮಾಡಲಾಯಿತು.

ಊ. ಕೃಷ್ಣಾ ಜಿಲ್ಲೆಯ ನಿದಾಮನೂರು ಎಂಬಲ್ಲಿ ಒಂದು ಮೂರ್ತಿಯನ್ನು ಧ್ವಂಸ ಮಾಡಲಾಯಿತು. ಅನಂತರ ವಿಜಯವಾಡಾದಲ್ಲಿ ಕನಕದುರ್ಗಾ ದೇವಸ್ಥಾನದಲ್ಲಿ ಕಳ್ಳತನವಾಯಿತು ಮತ್ತು ರಥದ ೩ ಬೆಳ್ಳಿಯ ಸಿಂಹಗಳನ್ನು ಅಪಹರಿಸಲಾಯಿತು.

೫. ಹಿಂದೂ ದೇವಸ್ಥಾನಗಳ ಮೇಲಿನ ಹಲ್ಲೆಗಳ ವಿಷಯದಲ್ಲಿ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಸರಕಾರದ ನಿಷ್ಕ್ರಿಯತೆಯೋ ಅಥವಾ ಅಪರಾಧಿಗಳಿಗೆ ಪ್ರೋತ್ಸಾಹವೋ ?

ಈ ಮೇಲಿನವುಗಳು ಆಂಧ್ರಪ್ರೇಶದಲ್ಲಿ ಹಿಂದೂ ದೇವಸ್ಥಾನಗಳನ್ನು ಮೇಲೆ ಗುರಿಯನ್ನಾಗಿಸಿ ಆಕ್ರಮಣಗಳನ್ನು ಮಾಡಲಾದ ಕೆಲವೊಂದು ಘಟನೆಗಳಾಗಿವೆ. ಆದರೆ ಸರಕಾರವು ಈ ಆಕ್ರಮಣ ಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೂರ್ತಿಗಳನ್ನು ಒಡೆಯುವುದು, ದೇವಸ್ಥಾನದಲ್ಲಿ ಪ್ರಾಚೀನ ರಥವನ್ನು ಸುಡುವುದು ಇತ್ಯಾದಿ ವಿಷಯಗಳು ನಡೆಯುತ್ತಿರುವಾಗ ಅದರ ಹಿಂದೆ ಕಳ್ಳತನದ ಉದ್ದೇಶ ನಿಶ್ಚಿತವಾಗಿ ಇಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಇಂತಹ ೧೮ ಘಟನೆಗಳು ಬೆಳಕಿಗೆ ಬಂದಿವೆ; ಆದರೆ ಯಾವುದೇ ಘಟನೆಯಲ್ಲಿ ಅಪರಾಧಿ ಸಿಕ್ಕಿಲ್ಲ ಅಥವಾ ಅವರ ತನಿಖೆಯೂ ಆಗಿಲ್ಲ. ಜಗನಮೋಹನ ರೆಡ್ಡಿ ಇವರ ವಿಷಯದಲ್ಲಿ ಇದು ಮೊದಲ ಬಾರಿಗೆ ನಡೆಯುತ್ತಿದೆ ಎನ್ನುವಂತಿಲ್ಲ. ಅವರು ಅಧಿಕಾರವನ್ನು ಸ್ವೀಕರಿಸಿದ ತಕ್ಷಣವೇ ‘ಕ್ರೈಸ್ತ ಪಂಥದ ಪ್ರಚಾರಕ್ಕೆ ಪ್ರೋತ್ಸಾಹ ಸಿಗಲು ಆರಂಭವಾಗಿದೆ, ಎಂದು ವಿಪಕ್ಷಗಳು ಆರೋಪಿಸಿವೆ. ಕ್ರೈಸ್ತ ಧರ್ಮಪ್ರಚಾರಕ ಮತ್ತು ಮಿಶನರಿ ಸಂಘಟನೆಗಳಿಂದ ರಾಜ್ಯದಲ್ಲಿ ಕಲ್ಪನೆಗೆ ಮೀರಿದ ವಾತಾವರಣವನ್ನು ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಪ್ರೋತ್ಸಾಹ ನೀಡಲು ಜಗನಮೋಹನ ರೆಡ್ಡಿ ಇವರು ಹೆಜ್ಜೆಯಿಟ್ಟಿದ್ದು ಅದಕ್ಕೆ ಅವರು ರಕ್ಷಣೆಯನ್ನು ನೀಡುತ್ತಿದ್ದಾರೆ ಹಾಗೂ ಹಿಂದೂ ದೇವಸ್ಥಾನಗಳ ಮೇಲಿನ ಆಕ್ರಮಣಗಳ ವಿಷಯದಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಹಿಂದೂ ದೇವಸ್ಥಾನಗಳ ಮೇಲೆ ಪದೇ ಪದೇ ಹಲ್ಲೆಯಾಗಲು ಇದೇ ಕಾರಣವಾಗಿದೆ. ದೇವಸ್ಥಾನಗಳ ಮೇಲಿನ ಹಲ್ಲೆಯ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳುವುದಂತೂ ದೂರದ ವಿಷಯವಾಯಿತು. ಅದರಲ್ಲಿಯೂ ಆಂಧ್ರ ಸರಕಾರದ ನಾಗರಿಕ ಪೂರೈಕೆ ಮತ್ತು ಗ್ರಾಹಕ ಪ್ರಕರಣದ ಮಂತ್ರಿಗಳಾದ ಕೊಡಾಲಿ ನಾನೀ ಇವರು ದೇವಸ್ಥಾನಗಳ ಮೇಲಿನ ಆಕ್ರಮಣಗಳ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಅವರು, “ಮೂರ್ತಿಗಳು ನಾಪತ್ತೆಯಾದರೆ ಏನಾಯಿತು ? ಮೂರ್ತಿಗಳನ್ನು ಧ್ವಂಸ ಮಾಡಿದರೆ, ಅದರಿಂದ ದೇವತೆಗಳ ಮೇಲೆ ಪರಿಣಾಮವಾಗುವುದಿಲ್ಲವಲ್ಲ ? ಎಂದು ಹೇಳಿದರು.

೬. ಅಪರಾಧಿಗಳಿಗೆ ಶಿಕ್ಷೆಯಾಗಲು ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರುವುದು ಆವಶ್ಯಕವಾಗಿದೆ !

ಯಾವುದಾದರೊಂದು ಮಸೀದಿ ಅಥವಾ ಚರ್ಚ್‌ದ ಮೇಲೆ ಒಂದು ಕಲ್ಲು ಬಿದ್ದರೂ ದೇಶದ ‘ಸೆಕ್ಯುಲರ್ ಪ್ರಸಾರ ಮಾಧ್ಯಮಗಳು ಆಕಾಶಪಾತಾಳ ಒಂದು ಮಾಡುತ್ತವೆ; ಆದರೆ ಹಿಂದೂ ದೇವಸ್ಥಾನಗಳ ಮೇಲೆ ಒಂದರ ನಂತರ ಒಂದರಂತೆ ಹಲ್ಲೆಗಳಾಗಿ ಮೂರ್ತಿಗಳು ಧ್ವಂಸವಾಗುತ್ತಿರುವಾಗ ಮೌನ ವಹಿಸಿ ಆ ಮೂಲಕ ಹಿಂದುತ್ವದ ವಿರುದ್ಧ ಆಂದೋಲನಗಳನ್ನು ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕ್ರೈಸ್ತೀಕರಣದ ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದರೆ, ಕೇಂದ್ರ ಸರಕಾರ ಇದರ ಕಡೆಗೆ ಗಮನ ಹರಿಸಬೇಕು ಹಾಗೂ ದೇವಸ್ಥಾನ ಆಕ್ರಮಣಗಳಲ್ಲಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವಂತೆ ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಮೇಲೆ ಒತ್ತಡವನ್ನು ಹಾಕಬೇಕು.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.