ಇಂದು ‘ಆತ್ಮನಿರ್ಭರ ಪದವು ಚಾಲನೆಯಲ್ಲಿದೆ, ಕೆಲವರು ಇದನ್ನು ಹೊಗಳುತ್ತಿದ್ದಾರೆ ಮತ್ತು ಕೆಲವರು ಇದರ ತಮಾಷೆ ಮಾಡುತ್ತಿದ್ದಾರೆ; ಇಲ್ಲಿ ‘ಆತ್ಮನಿರ್ಭರ ಭಾರತಕ್ಕಾಗಿ ತನ್ನ ಪ್ರಾಣವನ್ನೇ ಆಹುತಿ ನೀಡಿದ ಬಾಬೂ ಗೇನೂ ಇವರ ಬಗ್ಗೆ ಹೇಳಬೇಕೆನಿಸುತ್ತದೆ. ‘ಆತ್ಮನಿರ್ಭರ ಭಾರತಕ್ಕಾಗಿ ಹುತಾತ್ಮರಾದವರಲ್ಲಿ ಬಾಬೂ ಗೇನೂ ಮೊದಲಿಗರು. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದರು. ಆ ಕಾಲದಲ್ಲಿ ‘ಆತ್ಮನಿರ್ಭರ ಈ ಶಬ್ದಕ್ಕೆ ಮಹತ್ವವಿರಲಿಲ್ಲ, ಅದು ಸ್ವದೇಶಕ್ಕಿತ್ತು. ಒಂದು ರೀತಿಯಲ್ಲಿ ನೋಡಿದರೆ ಅರ್ಥ ಹೆಚ್ಚುಕಡಿಮೆ ಅದೇ ಆಗಿತ್ತು. ಸ್ವದೇಶಿ ಚಳುವಳಿಯನ್ನು ಹಮ್ಮಿಕೊಂಡಾಗ ಬಾಬೂ ಗೇನೂ ಇವರು ಅರ್ಥತಜ್ಞರಾಗಿರಲಿಲ್ಲ. ಅರ್ಥಶಾಸ್ತ್ರದ ಬಗ್ಗೆ ಅವರಿಗೆ ಪುಸ್ತಕದ ಜ್ಞಾನವೂ ಇರಲಿಲ್ಲ. ಪುಸ್ತಕಗಳನ್ನು ಓದಲು ಮತ್ತು ಆಭ್ಯಾಸ ಮಾಡಲು ಅವರು ಶಾಲೆಗೆ ಹೋಗಿರಲಿಲ್ಲ.
ಲೇಖಕ : ದ್ವಾರಕಾನಾಥ ಸಂಝಗಿರಿ
ಬಾಬೂ ಗೇನೂ ಇವರ ಮನೆಯ ಆರ್ಥಿಕ ಪರಿಸ್ಥಿತಿ
ಬಾಬೂ ಗೇನೂ ಇವರ ಜನ್ಮಸ್ಥಳ ಮ್ಹಾಳುಂಗೆ ಪಡವಳ, ತಾಲೂಕು ಆಂಬೆಗಾವ್, ಪುಣೆ ಜಿಲ್ಲೆ ಆಗಿದ್ದು ಅವರುಗೇನೂ ಕೃಷ್ಣಾಜಿ ಸೈದ ಎಂಬ ಹೆಸರಿನ ಓರ್ವ ಬಡ ಕೃಷಿಕರ ಮನೆಯಲ್ಲಿ ಜನಿಸಿದರು. ಅವರ ಕುಟುಂಬದಲ್ಲಿ ತಾಯಿ, ತಂದೆ, ಇಬ್ಬರು ಅಣ್ಣಂದಿರು ಮತ್ತು ಒಬ್ಬಳು ಸಹೋದರಿಯಿದ್ದಳು. ಮನೆಯಲ್ಲಿ ತುಂಬಾ ಬಡತನವಿತ್ತು. ಅವರಲ್ಲಿದ್ದ ಐಶ್ವರ್ಯದ ಒಂದು ಸಂಕೇತವೆಂದರೆ ಅದು ಅವರ ಒಂದು ಎತ್ತು ! ಅದು ಅವರಿಗೆ ಬೇಸಾಯ ಮಾಡಲು ಸಹಾಯ ಮಾಡುತಿತ್ತು. ಬಾಬೂ ಎರಡು ವರ್ಷದವನಾಗಿರುವಾಗ ಗೇನೂ ಸೈದರ(ತಂದೆಯ) ನಿಧನವಾಯಿತು, ಅನಂತರ ಅವರ ಎತ್ತೂ ಹೋಯಿತು ಮತ್ತು ಮನೆಯಲ್ಲಿ ದಾರಿದ್ರ್ಯದ ಕರಿನೆರಳು ಹರಡಿತು. ಆ ಕರಿನೆರಳಿನಲ್ಲಿ ಕನಿಷ್ಟ ಒಂದು ಹಣತೆಯನ್ನಾದರೂ ಉರಿಸಬೇಕೆಂದು ಬಾಬೂ ಗೇನುವಿನ ತಾಯಿ ಮುಂಬಯಿಗೆ ಬಂದು ಮನೆ ಮನೆಗಳಿಗೆ ಹೋಗಿ ಮನೆಕೆಲಸಗಳನ್ನು ಮಾಡಲು ಆರಂಭಿಸಿದಳು. ಅವಳು ಮಕ್ಕಳನ್ನು ನೆರೆಮನೆಯವರ ವಿಶ್ವಾಸದ ಮೇಲೆ ಬಿಟ್ಟು ಹೋಗಿದ್ದಳು. ಅವಳು ಮುಂಬಯಿಗೆ ಹೋಗುವಾಗ ಅವಳ ಹೃದಯವನ್ನು ಎಷ್ಟು ಗಟ್ಟಿಮಾಡಿರಬೇಕು, ಎಂಬುದನ್ನು ನಾವು ವಿಚಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಬಾಬೂ ಗೇನೂ ಮತ್ತು ಪುಸ್ತಕಗಳ ಶಿಕ್ಷಣಕ್ಕೆ ಯಾವುದೇ ಸಂಬಂಧವೂ ಬರಲಿಲ್ಲ; ಆದರೆ ಮನುಷ್ಯ ಕೇವಲ ಪುಸ್ತಕದಿಂದಲೇ ಕಲಿಯುತ್ತಾನೆ, ಎಂದೇನಿಲ್ಲ. ಮನುಷ್ಯನು ಜಾಣನಾಗಿದ್ದರೆ ಮತ್ತು ಅವನ ಮನಸ್ಸು ಸಂವೇದನಾಶೀಲವಾಗಿದ್ದರೆ, ಜಗತ್ತಿನಲ್ಲಿ ಸುತ್ತಾಡುವಾಗ ಅವನು ಜ್ಞಾನವನ್ನು ಸಂಗ್ರಹಿಸುತ್ತಾ ಹೋಗುತ್ತಾನೆ. ಬಾಬೂ ಗೇನೂ ಇವರೂ ಅದನ್ನೇ ಮಾಡಿದರು.
ಬಾಬೂ ಗೇನೂ ಮುಂಬಯಿಯಲ್ಲಿಗಿರಣಿ ಕಾರ್ಮಿಕನೆಂದು ಕೆಲಸಕ್ಕೆ ಸೇರುವುದು
ಬಾಬೂ ಗೇನು ಸ್ವಲ್ಪ ದೊಡ್ಡವನಾದ ಬಳಿಕ ಮುಂಬಯಿಯ ಬಂದು ಗಿರಣಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಅವರಿಗೆ ಕೆಲವೊಮ್ಮೆ ಕೆಲಸ ಸಿಗುತಿತ್ತು, ಕೆಲವೊಮ್ಮೆ ಸಿಗುತ್ತಿರಲಿಲ್ಲ. ಗಿರಣಿಯಲ್ಲಿ ಹೆಸರಿಗೆ ತಂದೆಯ ಹೆಸರನ್ನು ಜೋಡಿಸುವ ಪದ್ಧತಿಯಿತ್ತು. ಆದ್ದರಿಂದ ಬಾಬೂ ಗೇನೂ ಸೈದದಿಂದ ‘ಬಾಬೂ ಗೇನೂ ಆಯಿತು. ಅವರು ‘ಫಿನಿಕ್ಸ್ ಮಿಲ್ಲ್ನ ಚಾಳ್‌ನಲ್ಲಿ ವಾಸಿಸುತ್ತಿ ದ್ದರು. ಈಗ ಅಲ್ಲಿನ ಜಗತ್ತು ತುಂಬಾ ಬದಲಾಗಿದೆ. ಈಗ ಆ ವಸತಿ ಕೋಟಿಗಟ್ಟಲೆ ಬೆಲೆಯದ್ದಾಗಿದೆ. ಅವರಿಗೆ ಸ್ವದೇಶಿಯ ಯಾವುದೇ ಸಂಬಂಧವಿಲ್ಲ.
ಬಾಬೂ ಗೇನೂ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವದೇಶಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು
ಮುಂಬಯಿಯಲ್ಲಿ ವಾಸ್ತವ್ಯವಿದ್ದಾಗ ಬಾಬೂ ಗೇನೂ ಮೋಹನದಾಸ ಗಾಂಧೀಜಿಯವರ ‘ಸ್ವದೇಶಿ ಚಳುವಳಿಯ ಕಡೆಗೆ ಆಕರ್ಷಿಸಲ್ಪಟ್ಟರು. ಭಗತಸಿಂಗ್ ಅವರಿಗೆ ಸ್ಫೂರ್ತಿಯನ್ನು ನೀಡುತ್ತಿದ್ದರು; ಆದರೆ ಗಾಂಧೀಜಿಯವರ ಅಹಿಂಸಾತ್ಮಕ ಮಾರ್ಗದ ಮೇಲೆ ಅವರಿಗೆ ವಿಶ್ವಾಸವಿತ್ತು. ಆದ್ದರಿಂದ ಅವರು ನಾಲ್ಕಾಣೆಯನ್ನು ಕೊಟ್ಟು ಕಾಂಗ್ರೆಸ್ಸಿನ ಸದಸ್ಯರಾದರು (ದಾಖಲೆ ಕ್ರ. ೮೧೯೪೧) ಇಂದಿನ ಕಾಂಗ್ರೆಸ್ಸಿನವರಿಗೆ ಅವರ ಹೆಸರೂ ಗೊತ್ತಿರಲಿಕ್ಕಿಲ್ಲ. ಅವರಿಗೆ ರಾಜಕೀಯ ಕಾರ್ಯದಿಂದಾಗಿ ಸ್ವಂತ ಅಣ್ಣನ ಮದುವೆಗೆ ಕೂಡ ಹೋಗಲು ಸಾಧ್ಯವಾಗಲಿಲ್ಲ. ತಾಯಿ ತೀರಿದ ನಂತರ ಬಾಬೂ ಗೇನು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಮುಕ್ತರಾದರು. ೧೯೩೦ ರ ಸುಮಾರಿಗೆ ಗಾಂಧೀಜಿಯವರು ವಿದೇಶಿ ಬಟ್ಟೆಗಳ ಬಹಿಷ್ಕಾರ ಚಳುವಳಿಯನ್ನು ಆರಂಭಿಸಿದ್ದರು. ಬಾಬೂ ಗೇನೂರವರಿಗೆ ಅದರ ಹಿಂದಿನ ಜಾಗತಿಕ ಅರ್ಥಕಾರಣ ತಿಳಿಯುತ್ತಿರಲಿಲ್ಲ. ಅವರಿಗೆ ಆಂಗ್ಲರು ಕಚ್ಚಾವಸ್ತುಗಳನ್ನು ಮ್ಯಾಂಚೆಸ್ಟರ್‌ಗೆ ಕಳುಹಿಸುತ್ತಾರೆ ಹಾಗೂ ಅಲ್ಲಿನ ಗಿರಣಿಗಳಲ್ಲಿ ತಯಾರಾಗಿರುವ ವಸ್ತ್ರಗಳನ್ನು ಭಾರತಕ್ಕೆ ಕಳುಹಿಸಿ ಸಾಕಷ್ಟು ಲಾಭವನ್ನುಗಳಿಸುತ್ತಾರೆ, ಎಂಬುದಷ್ಟೆ ತಿಳಿಯುತ್ತಿತ್ತು. ಆಂಗ್ಲರು ಇಲ್ಲಿನ ಕಾರ್ಮಿಕರ (ನೇಕಾರರ) ಹೊಟ್ಟೆಗೆ ಇಲ್ಲದಂತೆ ಮಾಡುವುದು, ಒಂದು ಸಲ ಆಂಗ್ಲರು ನೇಕಾರನ ಕೈಗಳನ್ನು ಮುರಿಯುವುದು, ಬಡಜನರು ಕಳೆದುಕೊಳ್ಳುವ ನೌಕರಿ, ಇವೆಲ್ಲವೂ ತಿಳಿಯುವಷ್ಟು ಜಾಣತನ ಬಾಬೂ ಗೇನುವಿನಲ್ಲಿತ್ತು. ಆರ್ಥಿಕ ಲೂಟಿಯೇ ಬ್ರಿಟಿಷರ ಮೂಲ ಉದ್ದೇಶವಾಗಿತ್ತು ಹಾಗೂ ಅವರ ಈ ಕುತಂತ್ರವನ್ನು ನಿಯಂತ್ರಿಸಲು ಈ ಚಳುವಳಿ ಆರಂಭವಾಗಿತ್ತು ಎಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ವಿದೇಶಿ ವಸ್ತುಗಳ ಟ್ರಕ್‌ಗಳನ್ನು ಅಡ್ಡಗಟ್ಟುವುದು, ವಿದೇಶಿ ವಸ್ತುಗಳ ವಿರುದ್ಧದ ಚಳುವಳಿಯಲ್ಲಿ ಭಾಗವಹಿಸುವುದು ಇತ್ಯಾದಿ ಆರಂಭಿಸಿದರು.
ಬಾಬೂ ಗೇನೂ ಇವರು ವಿದೇಶಿ ವಸ್ತುಗಳ ಟ್ರಕ್‌ನ ಮುಂದೆ ಮಲಗುವುದು, ಬ್ರಿಟೀಷ ಪೊಲೀಸ್ ಸಾರ್ಜಂಟ್ ಇವರು ಅವರ ಮೇಲಿನಿಂದ ಟ್ರಕ್ ನಡೆಸುವುದು
ಹೀಗೆ ಮಾಡುತ್ತಿರುವಾಗ ಮುಂದೆ ೧೨ ಡಿಸೆಂಬರ್ ೧೯೩೦ ರಂದು ಮುಂಬಯಿಯ ಕಾಳಬಾದೇವಿಯ ಮೂಳಜಿ ಜೆಠಾ ಮಾರ್ಕೆಟ್‌ನಿಂದ ವಿದೇಶಿ ವಸ್ತುಗಳು ಟ್ರಕ್‌ನ ಸಹಾಯದಿಂದ ಹೊರಗೆ ಹೋಗಲಿಕ್ಕಿದ್ದವು. ಕಾಂಗ್ರೆಸ್ಸಿನ ಕಾರ್ಯಕರ್ತರು ಅಲ್ಲಿ ಒಟ್ಟಾದರು. ಅವರು ಟ್ರಕ್ಕನ್ನು ಅಡ್ಡಗಟ್ಟಿದರು. ಆ ಟ್ರಕ್ ಫ್ರೇಜರ್ ಎಂಬ ಒಬ್ಬ ಉದ್ಯಮಿಯದ್ದಾಗಿತ್ತು. ಬಾಬೂ ಗೇನೂ ಇವರ ತಂಡದ ಹೆಸರು ತಾನಾಜಿ ಪಥಕ ಆಗಿತ್ತು ! ಅವರು ಟ್ರಕ್ಕನ್ನು ಅಡ್ಡಗಟ್ಟಿದರು. ಪೊಲೀಸರು ಅವರನ್ನು ಚದುರಿಸಿದರು. ಅವರು ಪುನಃ ಟ್ರಕ್‌ನ ಮುಂದೆ ಬಂದು ಮಲಗಿದರು, ಬ್ರಿಟಿಷ ಪೊಲೀಸ್ ಸಾರ್ಜಂಟ್ ‘ಅವರ ಮೇಲಿನಿಂದ ಟ್ರಕ್ಕನ್ನು ನಡೆಸಿಕೊಂಡು ಹೋಗು ಎಂದು ಆದೇಶ ನೀಡಿದನು. ಟ್ರಕ್ ಡ್ರೈವರ್ ಭಾರತೀಯನಾಗಿದ್ದನು. ಅವನ ಹೆಸರು ಬಲವೀರ ಎಂದು ಕೆಲವರು ಹೇಳುತ್ತಾರೆ ಮತ್ತು ಕೆಲವರು ವಿಠಲ ದೋಂಡೂ ಎಂದು ಹೇಳುತ್ತಾರೆ. ಅವನು ಬ್ರೇಕ್ ಹಾಕಿ ವಾಹನವನ್ನು ನಿಲ್ಲಿಸಿದನು ಹಾಗೂ ಇವರು ನನ್ನ ದೇಶಬಾಂಧವರು, ನಾನು ಇವರ ಮೇಲಿನಿಂದ ಟ್ರಕ್ ನಡೆಸಿಕೊಂಡು ಹೋಗುವುದಿಲ್ಲ, ಎಂದು ಹೇಳಿದನು. ಬಿಳಿ (ಬ್ರಿಟಿಷ) ಪೊಲೀಸ್ ಸಾರ್ಜಂಟ್‌ನಿಗೆ ತುಂಬಾ ಸಿಟ್ಟುಬಂದಿತು. ಅವನು ಸ್ವತಃ ಟ್ರಕ್ ನಡೆಸಲು ಮುಂದಾದನು. ಆದರೂ ಬಾಬೂ ಗೇನೂ ವಿಚಲಿತರಾಗಲಿಲ್ಲ. ಅವರು ಟ್ರಕ್‌ನ ಮುಂದೆ ಮಲಗಿದರು. ಆ ನಿರ್ದಯಿ ಸಾರ್ಜಂಟ್ ಅವರ ಮೇಲಿನಿಂದ ಟ್ರಕ್ ನಡೆಸಿಕೊಂಡು ಹೋದನು. ಅದನ್ನು ನೋಡಿ ಜನರು ದಂಗಾದರು ಮತ್ತು ನಂತರ ಅವರು ರೊಚ್ಚಿಗೆದ್ದರು. ಬಾಬೂ ಗೇನೂ ಇವರನ್ನು ಸಮೀಪದ ಜಿ.ಟಿ. ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಮೆದುಳಿಗೆ ದೊಡ್ಡ ಆಘಾತವಾಗಿತ್ತು ಹಾಗೂ ಅವರು ತಮ್ಮ ೨೨ ನೇ ವಯಸ್ಸಿನಲ್ಲಿ ಆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಎಷ್ಟು ಧೈರ್ಯ ಮತ್ತು ಹೇಗೆ ಪ್ರಾಣವನ್ನು ಪಣಕ್ಕಿಟ್ಟು ಜೀವಿಸುವುದು !
ಕೊರೋನಾದ ಕಾಲದಲ್ಲಿ ಪ್ರಾಣಭಯದಿಂದ ಶವವನ್ನು ತೆಗೆದುಕೊಳ್ಳಲು ಕೂಡ ಹೋಗದಿರುವ ಸಂಬಂಧಿಕರನ್ನು ನೋಡಿದರೆ, ಬಾಬೂ ಗೇನೂ ಇವರ ಧೈರ್ಯವು ಬಾನೆತ್ತರಕ್ಕೆ ತಲುಪುತ್ತದೆ. ಅನಂತರ ರಸ್ತೆಯಲ್ಲಿ ಎಲ್ಲಿ ಬಾಬೂ ಗೇನೂ ಇವರ ರಕ್ತ ಹರಿದಿತ್ತೋ ಅಲ್ಲಿ ಜನರು ಹೂವುಗಳನ್ನು ಅರ್ಪಿಸಿದರು. ಅನಿರೀಕ್ಷಿತವಾಗಿ ಆ ಸ್ಥಾನ ತೀರ್ಥ ಕ್ಷೇತ್ರವಾಯಿತು ಹಾಗೂ ಅಲ್ಲಿಂದ ಹೋಗುವಾಗ ಜನರು ಟೊಪ್ಪಿಗೆಯನ್ನು ತೆಗೆದು ಹೋಗಲು ಆರಂಭಿಸಿದರು.
ಬ್ರಿಟಿಷರು ಬಾಬೂ ಗೇನೂ ಇವರ ಘಟನೆಯನ್ನು ‘ಅಪಘಾತವೆಂದು ದಾಖಲಿಸಿಕೊಂಡರು
ಬ್ರಿಟಿಷರು ಮಾತ್ರ ಈ ಘಟನೆಯನ್ನು ‘ಅಪಘಾತವೆಂದು ದಾಖಲಿಸಿಕೊಂಡರು. ‘ಚಾಲಕನ ಪ್ರಜ್ಞೆ ತಪ್ಪಿ ಬಿದ್ದಿರುವುದರಿಂದ ಬ್ರಿಟಿಷ ಸಾರ್ಜಂಟ್ ವಾಹನದ ಸ್ಟೇರಿಂಗ್ ತಮ್ಮ ಕೈಯಲ್ಲಿ ತೆಗೆದುಕೊಂಡರು. ಅವರ ನಿಯಂತ್ರಣ ತಪ್ಪಿ ದುರ್ಭಾಗ್ಯದಿಂದ ಟ್ರಕ್ ಬಾಬೂ ಗೇನುವಿನ ಮೇಲಿನಿಂದ ಹೋಯಿತು. ಅವನ ಮೇಲೆ ಟ್ರಕ್ ಚಲಾಯಿಸುವಂತಹದ ಉದ್ದೇಶವಿರಲಿಲ್ಲ, ಎಂದು ಬ್ರಿಟಿಷರು ಸ್ಪಷ್ಟೀಕರಣ ನೀಡಿದರು; ಆದರೆ ಮುಂಬಯಿ ಜನರು ಆ ಸ್ಪಷ್ಟೀಕರಣವನ್ನು ಸ್ವೀಕರಿಸಲಿಲ್ಲ. ಮುಂಬಯಿಯಲ್ಲಿ ದಂಗೆ ಭುಗಿಲೆದ್ದಿತು ಹಾಗೂ ಎಲ್ಲೆಡೆ ವಿದೇಶಿ ವಸ್ತ್ರಗಳನ್ನು ಸುಡುವುದು ಪ್ರಾರಂಭವಾಯಿತು. ಸಾವಿರಾರು ಜನರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು. ಅವರಿಗೆ ಬಾಬೂ ಗೇನೂ ಇವರ ಅಂತಿಮ ಸಂಸ್ಕಾರವನ್ನು ಲೋಕಮಾನ್ಯ ಟಿಳಕರ ಅಂತಿಮ ಸಂಸ್ಕಾರವಾದ ಪಕ್ಕದ ಸ್ಥಳದಲ್ಲಿ, ಅಂದರೆ ಚೌಪಾಟಿಯಲ್ಲಿ ಮಾಡಬೇಕಾಗಿತ್ತು. ಬ್ರಿಟಿಷ ಅಧಿಕಾರಿಗಳು ಹೇಗೇಗೋ ಅವರ ಮನವೊಲಿಸಿದರು ಮತ್ತು ಗಿರ್‌ಗಾವ್‌ನ ಸ್ಮಶಾನದಲ್ಲಿ ಅವರ ಅಂತಿಮಕ್ರಿಯೆ ನಡೆಯಿತು.
‘ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹುತಾತ್ಮ ಬಾಬೂ ಗೇನೂ ಇವರ ನೆನಪಿಡುವುದು ಆವಶ್ಯಕ !
ಇಂದು ಮುಂಬಯಿಯ ಪರೇಲ್‌ನಲ್ಲಿ ಮೊದಲ ಹುತಾತ್ಮ ಬಾಬೂ ಗೇನೂ ಇವರ ಒಂದು ಪ್ರತಿಮೆಯಿದೆ. ಕಾಲ್ಬಾದೇವಿಯಲ್ಲಿ ಅವರ ಹೆಸರಿನ ಒಂದು ರಸ್ತೆಯಿದೆ; ಆದರೆ ಅದು ಯಾರಿಗೆ ಗೊತ್ತಿದೆ ? ಬಾಬೂ ಗೇನೂ ಇಂದು ಯಾರಿಗೆ ನೆನಪಾಗುತ್ತಾರೆ ? ವಿಸ್ಮೃತಿಯ ಪರದೆಯ ಮರೆಯಲ್ಲಿ ಅದೆಲ್ಲವೂ ಹೊರಟು ಹೋಗಿವೆ. ‘ಆತ್ಮನಿರ್ಭರ ಭಾರತವನ್ನು ನಿರ್ಮಿಸುವಾಗಲಾದರೂ ಅವರನ್ನು ನೆನಪಿಡುವುದು ಆವಶ್ಯಕವಾಗಿದೆ. ಅವರಿಗಾಗಿ ಒಂದಿಷ್ಟು ಕಣ್ಣೀರನ್ನು ಉಳಿಸಿಕೊಳ್ಳಿ. ಬಾಬೂ ಗೇನೂ ಇವರಂತಹ ಅನೇಕ ಜನರು ತಮ್ಮ ಪ್ರಾಣವನ್ನು ನೀಡಿದ್ದಾರೆ; ಆದ್ದರಿಂದ ಇಂದು ನಾವು ಸುಖದಲ್ಲಿದ್ದೇವೆ, ಸ್ವಾತಂತ್ರ್ಯದಲ್ಲಿ ಜೀವಿಸುತ್ತಿದ್ದೇವೆ ಕೇವಲ ಇಷ್ಟು ಅರಿವಿಟ್ಟರೂ ಬಹಳಷ್ಟಾಯಿತು.