ಕೋಜಾಗರಿ ಹುಣ್ಣಿಮೆಯನ್ನು ಅಕ್ಟೋಬರ್ ೩೦ ರಂದು ಆಚರಿಸಿ

೩೦.೧೦.೨೦೨೦, ಶುಕ್ರವಾರದಂದು ಸಾಯಂಕಾಲ ೫.೪೬ ನಂತರ ಕೋಜಾಗರಿ ಹುಣ್ಣಿಮೆ ಪ್ರಾರಂಭವಾಗುತ್ತದೆ. ಈ ವರ್ಷ ಅಧಿಕ ಆಶ್ವಯುಜ ಮಾಸ ಇದ್ದುದರಿಂದ ಕೋಜಾಗರಿ ಹುಣ್ಣಿಮೆಯು ನಿಜ ಆಶ್ವಯುಜ ಮಾಸದಲ್ಲಿ ಬಂದಿದೆ.

ಸೌ. ಪ್ರಾಜಕ್ತಾ ಜೋಶಿ

೧. ಆಶ್ವಯುಜ ಹುಣ್ಣಿಮೆಯ ವಿವಿಧ ಹೆಸರುಗಳು

ಆಶ್ವಯುಜ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ, ನವಾನ್ನ ಹುಣ್ಣಿಮೆ ಅಥವಾ ಶರದ ಹುಣ್ಣಿಮೆ ಎಂದೂ ಕರೆಯುತ್ತಾರೆ. ಹುಣ್ಣಿಮೆ ಪೂರ್ತಿಯಾಗುವ ದಿನದಂದು ನವಾನ್ನ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

ಅ. ಆಶ್ವಯುಜ ಹುಣ್ಣಿಮೆಯಂದು ತಡ ರಾತ್ರಿ ಲಕ್ಷ್ಮೀ ದೇವಿಯು ‘ಕೋ ಜಾಗರ್ತಿ ಅಂದರೆ ‘ಯಾರು ಎಚ್ಚರವಾಗಿದ್ದಾರೆ ಎಂದೂ ವಿಚಾರಿಸಲು ಬರುತ್ತಾಳೆ; ಆದುದರಿಂದ ಈ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಆ. ಆಶ್ವಯುಜ ಹುಣ್ಣಿಮೆಯಂದು ರೈತರು ನಿಸರ್ಗದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೊಸ ಫಸಲನ್ನು ಪೂಜಿಸಿ ಅದರ ನೈವೇದ್ಯವನ್ನು ಮಾಡುತ್ತಾರೆ; ಆದುದರಿಂದ ಈ ಹುಣ್ಣಿಮೆಯನ್ನು ನವಾನ್ನ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಇ. ಆಶ್ವಯುಜ ಹುಣ್ಣಿಮೆಯು ಶರದ್ ಋತುವಿನಲ್ಲಿ ಬರುತ್ತದೆ, ಆದುದರಿಂದ ಇದಕ್ಕೆ ಶರದ ಹುಣ್ಣಿಮೆ ಎಂಬ ಹೆಸರೂ ಇದೆ.

೨. ಹುಣ್ಣಿಮೆಯ ತಿಥಿಯು ಎರಡು ದಿನಗಳಂದು ಬಂದಿದ್ದಲ್ಲಿ ಯಾವ ದಿನ ಕೋಜಾಗರಿ ಹುಣ್ಣಿಮೆಯನ್ನು ಆಚರಿಸಬೇಕು ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯೋದಯದ ಸಮಯದಲ್ಲಿ ಇರುವ ತಿಥಿಯನ್ನು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಂಗ ಗಳಿಗನುಸಾರ ಆಶ್ವಯುಜ ತಿಂಗಳಿನ ಮಧ್ಯರಾತ್ರಿಗೆ ಬರುವ ಹುಣ್ಣಿಮೆಗೆ ಕೋಜಾಗರಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವರ್ಷ ೩೦.೧೦.೨೦೨೦, ಸಾಯಂಕಾಲ ೫.೪೬ ರಿಂದ ೩೧.೧೦.೨೦೨೦, ರಾತ್ರಿ ೮.೧೯ ವರೆಗೆ ಹುಣ್ಣಿಮೆಯ ತಿಥಿ ಇದೆ. ೩೦.೧೦.೨೦೨೦ ರಂದು ಮಧ್ಯರಾತ್ರಿ ಹುಣ್ಣಿಮೆ ಇರುವುದರಿಂದ ಕೋಜಾಗರಿ ಹುಣ್ಣಿಮೆಯನ್ನು ಆಚರಿಸಲಾಗುವುದು.

೩. ಕೋಜಾಗರಿ ಹುಣ್ಣಿಮೆಯಂದು ಚಂದ್ರದರ್ಶನ – ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹತ್ವ

ಈ ದಿನದಂದು ಲಕ್ಷ್ಮಿ ಮತ್ತು ಇಂದ್ರ ದೇವನನ್ನು ಪೂಜಿಸುತ್ತಾರೆ. ಈ ರೀತಿಯ ಪೂಜೆಯಿಂದ ಲಕ್ಷ್ಮಿಕೃಪೆಯಾಗಿ ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ರಾತ್ರಿ ಹಾಲಿನಲ್ಲಿ ಚಂದ್ರ ದರ್ಶನ ಪಡೆಯುವುದರಿಂದ ಚಂದ್ರನ ಕಿರಣಗಳ ಮಾಧ್ಯಮ ದಿಂದ ಅಮೃತ ಪ್ರಾಪ್ತವಾಗುತ್ತದೆ. ಆಶ್ವಯುಜ ಹುಣ್ಣಿಮೆಯಂದು, ಅಶ್ವಿನಿ ನಕ್ಷತ್ರವಿರುವಾಗ ಈ ರೀತಿಯ ಫಲ ಸಿಗುತ್ತದೆ. ದೇವ-ದೇವತೆಗಳ ವೈದ್ಯರಾದ ಅಶ್ವಿನಿ ಕುಮಾರರು ಅಶ್ವಿನಿ ನಕ್ಷತ್ರದ ದೇವತೆಗಳಾಗಿದ್ದಾರೆ. ಭಕ್ತಿ ಭಾವದಿಂದ ಮಾಡಿದ ಅವರ ಆರಾಧನೆ ಯಿಂದ ಅಸಾಧ್ಯ ರೋಗಗಳ ನಿವಾರಣೆಯೂ ಆಗುತ್ತದೆ. ಆದುದರಿಂದ ಇತರ ಹುಣ್ಣಿಮೆಗಳ ತುಲನೆಯಲ್ಲಿ ಆಶ್ವಯುಜ ಹುಣ್ಣಿಮೆಯ ಚಂದ್ರದರ್ಶನದಿಂದ ಆಧ್ಯಾತ್ಮಿಕ ತೊಂದರೆ ಆಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರನು ಮನಸ್ಸಿನ ಕಾರಕನಾಗಿದ್ದಾನೆ. ಆದುದರಿಂದ ನಮ್ಮ ಮನಸ್ಸಿನ ಭಾವನೆಗಳು, ಉತ್ಸಾಹ, ನಿರಾಶೆ ಇವೆಲ್ಲವುಗಳ ಸಂಬಂಧವು ಚಂದ್ರನೊಂದಿಗಿದೆ. ಆದುದರಿಂದ ಯಾರ ಜಾತಕದಲ್ಲಿ ಚಂದ್ರಬಲ ಕಡಿಮೆಯಿದೆಯೋ, ಅಂತಹವರಿಗೆ ಹುಣ್ಣಿಮೆಯ ಹತ್ತಿರದ ದಿನಗಳಲ್ಲಿ ಮಾನಸಿಕ ತೊಂದರೆಗಳಾಗುವ ಪ್ರಮಾಣ ಹೆಚ್ಚಾಗುತ್ತದೆ. ಯಾರ ಜಾತಕದಲ್ಲಿ ಚಂದ್ರಬಲ ಉತ್ತಮವಾಗಿದೆಯೋ, ಅಂತಹವರ ಪ್ರತಿಭೆಯು ಹುಣ್ಣಿಮೆಯ ಚಂದ್ರನ, ಅಥವಾ ಬೆಳದಿಂಗಳಲ್ಲಿ ಜಾಗೃತವಾಗುತ್ತದೆ. ಅವರ ಕವಿತ್ವ ಜಾಗೃತವಾಗುತ್ತದೆ. ಚಂದ್ರ ಗ್ರಹವು ಮಾತೃಕಾರಕವಾಗಿದೆ, ಅಂದರೆ ಜಾತಕದಲ್ಲಿರುವ ಚಂದ್ರನಿಂದ ತಾಯಿಯ ಜೊತೆಗಿನ ಬಾಂಧವ್ಯವನ್ನು ಅಳೆಯುತ್ತಾರೆ. ಆಶ್ವಯುಜ ಹುಣ್ಣಿಮೆಯಂದು ಚಂದ್ರನು ಸಾಕ್ಷಿಯಾಗಿದ್ದು ತಾಯಿಯು ಕೃತಜ್ಞತೆಯ ಭಾವವಿಟ್ಟು ತನ್ನ ಜ್ಯೇಷ್ಠ ಮಗುವಿಗೆ ಆರತಿಯನ್ನು ಬೆಳಗುತ್ತಾಳೆ; ಏಕೆಂದರೆ ಮೊದಲನೇ ಮಗು ಹುಟ್ಟಿದ ಮೇಲೆ ಓರ್ವ ಹೆಣ್ಣಿಗೆ ಮಾತೃತ್ವದ ಆನಂದ ಪ್ರಾಪ್ತವಾಗುತ್ತದೆ.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಶಾಸ್ತ್ರ ವಿಶಾರದೆ, ವಾಸ್ತು ವಿಶಾರದೆ, ಸಂಖ್ಯಾಜ್ಯೋತಿಷ್ಯ ವಿಶಾರದೆ, ರತ್ನಶಾಸ್ತ್ರ ವಿಶಾರದೆ, ಅಷ್ಟಕವರ್ಗ ವಿಶಾರದೆ, ಸರ್ಟಿಫೈಡ್ ಡೌಸರ್, ರಮಲ ಪಂಡಿತೆ, ಹಸ್ತಾಕ್ಷರ ಮನೋವಿಶ್ಲೇಷಣಾಶಾಸ್ತ್ರ ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ, ಗೋವಾ (೧೧.೧೦.೨೦೨೦)