ಮ್ಯಾಕ್‌ಮೋಹನ ರೇಖೆ ಮತ್ತು ಚೀನಾದ ವಿರೋಧ

೧೦೬ ವರ್ಷಗಳ ಹಿಂದೆ ಲಂಡನ್‌ನ ಸರಕಾರಿ ಮುಖ್ಯಾಲಯದಿಂದ ಶಿಮ್ಲಾಗೆ ಒಂದು ತಂತಿ ವರ್ತಮಾನವನ್ನು (ಟೆಲಿಗ್ರಾಮ್) ಕಳುಹಿಸಲಾಗಿತ್ತು; ಆದರೆ ಅದು ತಲುಪಲು ತಡವಾಯಿತು ಮತ್ತು ‘ಮ್ಯಾಕ್‌ಮೋಹನ ರೇಖೆ ಹೆಸರಿನ ಒಂದು ಮಗು ಜನಿಸಿತು. ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಎರಡು ದೇಶಗಳಲ್ಲಿ ‘ಶಿಮ್ಲಾ ಒಪ್ಪಂದ ಆಗಿರುವುದು ಅನೇಕರಿಗೆ ಗೊತ್ತಿದೆ, ಆದರೆ ೧೯೧೪ ರಲ್ಲಿ ಶಿಮ್ಲಾದಲ್ಲಿ ಇನ್ನೊಂದು ಒಪ್ಪಂದವಾಗಿತ್ತು. ಆ ಒಪ್ಪಂದದ ಪರಿಣಾಮವಾಗಿ ಭಾರತ-ಚೀನಾದ ಗಡಿಯಲ್ಲಿ ‘ಮ್ಯಾಕ್‌ಮೋಹನ ರೇಖೆಯು ಅಸ್ತಿತ್ವಕ್ಕೆ ಬಂದಿತು.

ಭಾರತ-ಚೀನಾ ಗಡಿವಿವಾದದ ನಿವಾರಣೆಗಾಗಿ ‘ಶಿಮ್ಲಾ ಒಪ್ಪಂದ

ಬ್ರಿಟಿಷರ ಆಡಳಿತದ ಭಾರತದ ವಿದೇಶ ಸಚಿವ ಸರ್ ಹೆನ್ರಿ ಮ್ಯಾಕ್‌ಮೋಹನರವರ ಮುಂದಾಳತ್ವದಲ್ಲಿ ಭಾರತ-ಚೀನಾ ಗಡಿವಿವಾದವನ್ನು ನಿವಾರಿಸಲು ಶಿಮ್ಲಾದಲ್ಲಿ ಒಂದು ಸಭೆ ನಡೆಯಿತು. ಭಾರತ, ಚೀನಾ ಮತ್ತು ಆ ಸಮಯದಲ್ಲಿ ಸ್ವತಂತ್ರವಾಗಿದ್ದ ಟಿಬೇಟ್ ಈ ಮೂರು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಹಾಗೂ ೮೮೫ ಕಿಲೋಮೀಟರ್ ಉದ್ದದ ಒಂದು ಗಡಿಯನ್ನು ನಿರ್ಧರಿಸಲಾಯಿತು. ಈ ಗಡಿರೇಖೆಗೆ ‘ಮ್ಯಾಕ್ ಮೋಹನ ರೇಖೆ ಎಂದು, ಹೆಸರಿಡಲಾಯಿತು. ಆದರೆ ಚೀನಾ ಈ ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ಟಿಬೇಟ್ ಸ್ವತಂತ್ರವಾಗಿದ್ದರಿಂದ ಚೀನಾದ ಸಮ್ಮತಿಯ ಅವಶ್ಯಕತೆಯಿಲ್ಲ, ಎಂದು ಬ್ರಿಟಿಷ ಸರಕಾರಕ್ಕೆ ಅನಿಸಿತು. ಆದ್ದರಿಂದ ಚೀನಾದ ವಿರೋಧವನ್ನು ಕಡೆಗಣಿಸಿ ಭಾರತ ಮತ್ತು ಟಿಬೇಟ್ ಶಿಮ್ಲಾ ಒಪ್ಪಂದಕ್ಕೆ ಮಾನ್ಯತೆಯನ್ನು ನೀಡಿದವು. ಮುಂದೆ ೧೯೫೦ ರಲ್ಲಿ ಚೀನಾ ಟಿಬೇಟನ್ನು ಕಬಳಿಸಿತು ಮತ್ತು ಚೀನಾ ಹೊಸ ತಗಾದೆ ತೆಗೆಯಿತು. ‘ಟಿಬೇಟ್‌ಗೆ ಇಂತಹ ಒಪ್ಪಂದವನ್ನು ಮಾಡಿಕೊಳ್ಳುವ ಅಧಿಕಾರವೇ ಇರಲಿಲ್ಲ. ಟಿಬೇಟ್‌ನ ಮೇಲೆ ನಮ್ಮ ಅಧಿಕಾರವಿತ್ತು. ನಾವು ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಆದ್ದರಿಂದ ಮ್ಯಕ್‌ಮೋಹನ ಗಡಿರೇಖೆಯು ನಮಗೆ ಒಪ್ಪಿಗೆಯಿಲ್ಲ, ಎಂದು ಚೀನಾ ನಿಲುವು ತಳೆಯಿತು ಹಾಗೂ ಅದು ಇಂದಿಗೂ ಹಾಗೆಯೇ ಇದೆ.

ಮ್ಯಾಕ್‌ಮೋಹನ ರೇಖೆ

ಈ ರೇಖೆಯು ಭೂತಾನದ ಪೂರ್ವ ಗಡಿಯಿಂದ ಆರಂಭವಾಗಿ ಹಿಮಾಲಯದ ಶಿಖರಗಳು ಮತ್ತು ಬ್ರಹ್ಮಪುತ್ರಾದ ದೊಡ್ಡ ತಿರುವುಗಳವರೆಗೆ, ಅಂದರೆ ಬ್ರಹ್ಮಪುತ್ರಾ ಟಿಬೇಟ್‌ನಿಂದ ಆಸಾಮ್‌ನ ಕಣಿವೆಗಳ ವರೆಗಿದೆ. ಈ ರೇಖೆಯ ಜನನದಿಂದಲೇ ಸಮಸ್ಯೆ ಯಿತ್ತು. ಒಂದೆಂದರೆ, ಅದನ್ನು ಚಿಕ್ಕ ನಕಾಶೆಯ ಮೇಲೆ ಬಿಡಿಸಲಾಗಿತ್ತು. ಅದರಲ್ಲಿ ಸವಿಸ್ತಾರ ಮಾಹಿತಿಯ ಅಭಾವವಿತ್ತು. ‘೮ ಮೈಲ್ ಅಂದರೆ ‘೧ ಇಂಚ್ ಈ ಪ್ರಮಾಣದಲ್ಲಿ ಸಿದ್ಧವಾಗಿರುವ ನಕಾಶೆಯ ಮೇಲೆ ಚೀನಾ ಹಸ್ತಾಕ್ಷರ ಮಾಡಿರಲಿಲ್ಲ. ಮ್ಯಾಕ್‌ಮೋಹನ ರೇಖೆಯ ವಿಷಯದಲಿ ಬಹಳಷ್ಟು ಗೊಂದಲವಿದೆ.

ರಶ್ಯಾದ ಭೀತಿಯಿಂದ ಶಿಮ್ಲಾ ಒಪ್ಪಂದವನ್ನು ಗುಪ್ತವಾಗಿಡಲಾಗಿತ್ತು

ಬ್ರಿಟಿಷ ಶಾಸಕರಿಗೆ ರಶ್ಯಾದ ಹೆದರಿಕೆಯಿತ್ತು ಹಾಗೂ ಹೆದರಿಕೆಯಿಂದಲೇ ಅವರು ಕೆಲವು ನಿರ್ಣಯಗಳನ್ನು ತೆಗೆದು ಕೊಳ್ಳುತ್ತಿದ್ದರು. ೧೯೦೭ ರಲ್ಲಿ ಬ್ರಿಟಿಷ ಆಡಳಿತವು ರಶ್ಯಾದ ಮೇಲೆ ಸೇಂಟ್ ಪೀಟಸ್‌ಬರ್ಗ್ ಸಮ್ಮೇಳನವನ್ನು ಹೇರಿತು. ಈ ಸಮ್ಮೇಳನದ ಒಂದು ನಿರ್ಣಯಕ್ಕನುಸಾರ ರಶ್ಯಾ ಮತ್ತು ಬ್ರಿಟನ್ ಎರಡೂ ಸರಕಾರಗಳು ಟಿಬೇಟ್‌ನಿಂದ ದೂರವಿರಬೇಕೆಂದು ನಿರ್ಣಯಿಸಲಾಗಿತ್ತು. ಅವರಿಗೆ ಟಿಬೇಟ್‌ನ ವಿಷಯದಲ್ಲಿ ಏನಾದರೂ ಚರ್ಚೆಯನ್ನು ಮಾಡಲಿಕ್ಕಿದ್ದರೆ, ಅವರು ಚೀನಾದ ಮಧ್ಯಸ್ತಿಕೆಯಲ್ಲಿ ಅದನ್ನು ಮಾಡಬೇಕೆಂದು ಈ ಸಮ್ಮೇಳನದಲ್ಲಿ ನಿರ್ಧರಿಸಲಾಗಿತ್ತು. ೧೯೧೩ ರಲ್ಲಿ ಬ್ರಿಟಿಷ ಸರಕಾರದ ಮುಂದಾಳತ್ವದಲ್ಲಿ ಶಿಮ್ಲಾದಲ್ಲಿ ಭಾರತ, ಚೀನಾ ಮತ್ತು ಟಿಬೇಟ್ ಈ ತ್ರಿಪಕ್ಷಗಳ ಚರ್ಚೆ ಆರಂಭವಾಯಿತು. ಭಾರತದ ಉತ್ತರಗಡಿಯನ್ನು ನಿಶ್ಚಯಿಸುವುದರ ನಿಮಿತ್ತ ಮಾಡಿ ಶಿಮ್ಲಾದಲ್ಲಿ ಸರ್ ಮ್ಯಾಕ್‌ಮೋಹನ ಮತ್ತು ಟಿಬೇಟ್‌ನ ನೇತಾರ ಲೋಂಚೆನ್ ಮಾತ್ರಾ ಇವರಲ್ಲಿ ಚರ್ಚೆಯನ್ನು ಆರಂಭಿಸಲಾಯಿತು. ಈ ಚರ್ಚೆಯಲ್ಲಿ ಚೀನಾವನ್ನು ಸೇರಿಸಿಕೊಳ್ಳಲಾಗಿತ್ತು; ಏಕೆಂದರೆ ಪೀಟಸ್‌ಬರ್ಗ್ ಸಮ್ಮೇಳನವು ಬ್ರಿಟನ್‌ಗೆ ಹಾಗೆ ಶರತ್ತನ್ನು ಹಾಕಿತ್ತು. ಚೀನಾ ಚರ್ಚೆಯಲ್ಲಿ ಭಾಗವಹಿಸಿತು; ಆದರೆ ೧೯೧೪ ರ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ಶಿಮ್ಲಾ ಚರ್ಚೆಯ ಹಿಂದೆ ಬ್ರಿಟಿಷ ಸರಕಾರದ ಒಂದು ದೂರದೃಷ್ಟಿಯ ಯೋಜನೆಯಿತ್ತು. ಟಿಬೇಟ್ನಲ್ಲಿನ ಮಾಂಚೂ ಮನೆತನವು ಅಸ್ತವಾಗಿದ್ದರಿಂದ ಟಿಬೇಟ್ ಒಂದು ರೀತಿಯಲ್ಲಿ ಸ್ವತಂತ್ರವಾಗಿತ್ತು. ಟಿಬೇಟ್‌ನ ಈ  ಸ್ವಾತಂತ್ರ್ಯಕ್ಕೆ ಮನ್ನಣೆಯನ್ನು ಕೊಡುವುದು ಮತ್ತು ಭಾರತ-ಚೀನಾದ ನಡುವೆ ‘ಬಫರ (ಆಘಾತವಿರೋಧಿತಂತ್ರ) ಎಂದು ಅದನ್ನು ಉಪಯೋಗಿಸುವುದು, ಇದು ಬ್ರಿಟಿಷರ ಯೋಜನೆಯಾಗಿತ್ತು. ಇದರಲ್ಲಿ ಟಿಬೇಟನ್ನು ‘ಔಟರ್ ಟಿಬೇಟ್ (ಬಾಹ್ಯಟಿಬೇಟ್) ಮತ್ತು ‘ಇನ್ನರ್ ಟಿಬೇಟ್ (ಆಂತರಿಕ ಟಿಬೇಟ್) ಹೀಗೆ ವಿಭಜನೆಯನ್ನು ಮಾಡಲಿಕ್ಕಿತ್ತು. ಶಿಮ್ಲಾದಲ್ಲಿ ನಡೆಯುವ ಈ ಎಲ್ಲ ವಿಷಯ ಚೀನಾಗೆ ಒಪ್ಪಿಗೆಯಿರಲಿಲ್ಲ; ಆದರೆ ಚೀನಾದ ವಿರೋಧವನ್ನು ಕಡೆಗಣಿಸಿ ಈ ಪರಿಷತ್ತಿನ ಆಯೋಜಕರಾದ ಸರ್ ಮ್ಯಾಕ್‌ಮೋಹನ ಇವರು ಮುಂದೆ ಸಾಗಲು ನಿರ್ಧರಿಸಿದರು. ಅವರು (ಸರ್ ಮ್ಯಾಕ್‌ಮೋಹನ ಇವರು) ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಲಂಡನ್‌ನಿಂದ ತಂತಿ ವರ್ತಮಾನ (ಟೆಲಿಗ್ರಾಮ್) ಕಳುಹಿಸಲಾಗಿತ್ತು; ಆದರೆ ಅದು ಅವರಿಗೆ ತಡವಾಗಿ ತಲುಪಿತು ಹಾಗೂ ಅಷ್ಟರಲ್ಲಿವರೆಗೆ ಅವರು ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದರು ಹಾಗೂ ಮ್ಯಕ್‌ಮೋಹನ ರೇಖೆಯ ಜನ್ಮವಾಗಿತ್ತು. ನಂತರ ಬ್ರಿಟಿಷ ಆಡಳಿತಗಾರರು ಈ ರೇಖೆಗೆ ಮನ್ನಣೆಯನ್ನು ನೀಡಿದರು; ಏಕೆಂದರೆ ಆ ಕಾಲದಲ್ಲಿ ಚೀನಾ ತುಂಬಾ ದುರ್ಬಲವೆಂದು ತಿಳಿಯಲಾಗುತ್ತಿತ್ತು. ಶಿಮ್ಲಾ ಒಪ್ಪಂದವು ರಶ್ಯಾಗೆ ತಿಳಿದರೆ ಅದಕ್ಕೆ ಬೇಸರವಾಗಬಹುದೆಂಬ ಭಯದಿಂದ ಬ್ರಿಟಿಷ ಸರಕಾರ ಈ ಒಪ್ಪಂದವನ್ನು ಅಡಗಿಸಿಟ್ಟಿತ್ತು. ‘ಐಟಿಚಿಸನ್ ಒಪ್ಪಂದದ ಕಾಗದಪತ್ರದಲ್ಲಿ ಅದನ್ನು ಪ್ರಸಿದ್ಧಪಡಿಸಲಿಲ್ಲ. ಇದೆಲ್ಲವನ್ನೂ ೧೯೩೮ ರಲ್ಲಿ ಮಾಡಲಾಯಿತು. ೧೯೧೪ ರಲ್ಲಿ ಶಿಮ್ಲಾ ಒಪ್ಪಂದದಲ್ಲಿ ಮ್ಯಾಕ್‌ಮೋಹನ ರೇಖೆಯನ್ನು ಸ್ವೀಕರಿಸಲಾಯಿತು; ಆದರೆ ೨೧ ವರ್ಷಗಳಲ್ಲಿ ಎಲ್ಲರಿಗೂ ಈ ರೇಖೆಯು ಮರೆತುಹೋಗಿತ್ತು. ಚೀನಾವಂತೂ ಈ ರೇಖೆಯನ್ನು ನಿರಾಕರಿಸಿತ್ತು; ಆದರೆ ಬ್ರಿಟಿಷರ ಆಡಳಿತದ ಭಾರತಕ್ಕೂ ಈ ರೇಖೆ ಮರೆತು ಹೋಗಿತ್ತು. ಆ ಮೇಲೆ ಬೇರೆಯೇ ಒಂದು ಘಟನೆಯಿಂದ ಈ ಒಪ್ಪಂದವು ಬೆಳಕಿಗೆ ಬಂದಿತು.

೨೧ ವರ್ಷಗಳ ನಂತರ ಸರಕಾರ ‘ಮ್ಯಾಕ್‌ಮೋಹನ ಗಡಿರೇಖೆಯನ್ನು ಸ್ವೀಕರಿಸುವುದು

ಬ್ರಿಟಿಷ ಪರ್ವತಾರೋಹಿ ಮತ್ತು ಜೈವಿಕ ವಿಜ್ಞಾನಿ ಕ್ಯಾಪ್ಟನ್ ಕಿಂಗ್ಡನ್ ವಾರ್ಡ್ ಇವರು ಟಿಬೇಟ್ ಸರಕಾರದ ಅನುಮತಿಯನ್ನು ಪಡೆದು ಅನೇಕ ಬಾರಿ ಟಿಬೇಟ್‌ಗೆ ಹೋಗಿದ್ದರು. ಇಸವಿ ೧೯೩೫ ರಲ್ಲಿ ಅವರು ಟಿಬೇಟ್ ಸರಕಾರದ ಅನುಮತಿ ಪಡೆಯದೇ ತವಾಂಗ ಮಾರ್ಗದಿಂದ ಟಿಬೇಟ್ ವನ್ನು ಪ್ರವೇಶ ಮಾಡಿದರು. ಇದು ಟಿಬೇಟ್ ಸರಕಾರಕ್ಕೆ ತಿಳಿದಾಕ್ಷಣ ಅದು ಕ್ಯಾಪ್ಟನ್ ಕಿಂಗ್ಡನ್ ವಾರ್ಡ್‌ರನ್ನು ಬಂಧಿಸಿತು. ‘ತವಾಂಗದ ಅಧಿಕಾರಿಗಳ ಅನುಮತಿಯನ್ನು ಪಡೆದು ತಾನು ಟಿಬೇಟ್‌ನಲ್ಲಿ ಪ್ರವೇಶ ಮಾಡಿದ್ದೇನೆ, ಎಂದು ವಾರ್ಡ್ ಯುಕ್ತಿವಾದ ಮಾಡಿದರು. ಟಿಬೇಟ್ ಸರಕಾರವು ಇದರ ಬಗ್ಗೆ ಹಿರಿಯ ಬ್ರಿಟಿಷ ಅಧಿಕಾರಿಗಳಿಗೆ ದೂರನ್ನು ನೀಡಿತು. ಚೀನಾದಿಂದಾಗಿ ಬ್ರಿಟಿಷ ಸರಕಾರವು ಮೊದಲೇ ಚಿಂತೆಯಲ್ಲಿತ್ತು. ಬ್ರಿಟಿಷ ಸರಕಾರವು ಇವೆಲ್ಲ ಪ್ರಕರಣವನ್ನು ಓಲಾಫ ಕಾರೋಯೀ ಈ ಅಧಿಕಾರಿಗೆ ಒಪ್ಪಿಸಿತು. ಅವರು ಎಲ್ಲ ಕಾಗದ ಪತ್ರಗಳನ್ನು ತರಿಸಿದರು. ಅದರಲ್ಲಿ ಅವರಿಗೆ ಇಂದಿನವರೆಗೆ ಧೂಳು ತಿನ್ನುತ್ತಾ ಬಿದ್ದಿರುವ ಶಿಮ್ಲಾ ಒಪ್ಪಂದದ ಕಾಗದವೂ (ಎಫಿಡ್‌ವಿಟ್) ಸಿಕ್ಕಿತು. ಕ್ಯಾಪ್ಟನ್ ವಾರ್ಡ್ ಇವರನ್ನು ಬಿಡಿಸಲು ಓಲಾಫ ಕಾರೋಯಿ ಇವರು ಈ ಒಪ್ಪಂದದ ಮೇಲಿನ ಧೂಳನ್ನು ಕೆಡವಿದರು ಮತ್ತು ಅದನ್ನು ಸ್ವೀಕರಿಸುವಂತೆ ಬ್ರಿಟಿಷ ಸರಕಾರದ ಮನವೊಲಿಸಿದರು. ಈ ರೀತಿಯಲ್ಲಿ ೨೧ ವರ್ಷಗಳ ನಂತರ ಮ್ಯಾಕ್ ಮೋಹನ ರೇಖೆಯ ಪುನರ್ಜನ್ಮವಾಯಿತು. ‘ಸರ್ವೇ ಆಫ್ ಇಂಡಿಯಾವು ೧೯೩೭ ರಲ್ಲಿ ಒಂದು ನಕಾಶೆಯನ್ನು ಪ್ರಕಟಿಸಿ ಮ್ಯಾಕ್‌ಮೋಹನ ಗಡಿರೇಖೆಯು ‘ಭಾರತ-ಚೀನಾದ ನಡುವಿನ ಗಡಿರೇಖೆ ಆಗಿದೆಯೆಂದು ಸ್ಪಷ್ಟಪಡಿಸಿತು. ೧೯೩೮ ರಲ್ಲಿ ಬ್ರಿಟಿಷ ಸರಕಾರ ಇನ್ನೊಂದು ಕಾಗದಪತ್ರದಲ್ಲಿ ಈ ಗಡಿ ರೇಖೆಯನ್ನು ಸ್ವೀಕರಿಸಿತು. ಅಂದಿನಿಂದ ಮ್ಯಾಕ್ ಮೋಹನ ರೇಖೆಯನ್ನು ಭಾರತ-ಚೀನಾದ ನಡುವಿನ ಗಡಿರೇಖೆಯೆಂದು ಒಪ್ಪಿಕೊಳ್ಳಲಾಗುತ್ತದೆ; ಆದರೆ ಚೀನಾ ಅದನ್ನು ಯಾವತ್ತೂ ಸ್ವೀಕರಿಸಲಿಲ್ಲ. ಮ್ಯಾಕ್ ಮೋಹನ ರೇಖೆಯ ಸ್ವಲ್ಪ ಭಾಗವನ್ನು ‘ಮ್ಯಾಕ್ ಮೋಹನ-ಕೆರೋಯಿ ರೇಖೆ ಎಂದೂ ಗುರುತಿಸಲಾಗುತ್ತದೆ. ಬ್ರಿಟಿಷರು ಟಿಬೇಟ್ ಮೊದಲು ರಶ್ಯಾದ ಮತ್ತು ನಂತರ ಚೀನಾದ ವಶಕ್ಕೆ ಹೋಗ ಬಾರದೆಂದು ತುಂಬಾ ಪ್ರಯತ್ನ ಮಾಡಿದರು. ರಶ್ಯಾಗೆ ಮಟ್ಟ ಹಾಕಲು ಅವರು ಚೀನಾವನ್ನು ‘ಬಫರ್ ಎಂದು ಉಪಯೋಗಿಸಿದರು ಹಾಗೂ ನಂತರ ಚೀನಾಗೆ ಮಟ್ಟ ಹಾಕಲು ಟಿಬೇಟನ್ನು ‘ಬಫರ್ ಎಂದು ಉಪಯೋಗಿಸಿದರು.

ಸದ್ಯದ ಸ್ಥಿತಿಯಲ್ಲಿ ಭಾರತ-ಚೀನಾ ಗಡಿ ವಿವಾದದಲ್ಲಿನ ಎಲ್ಲ ರೇಖೆಗಳನ್ನು ಮುರಿಯುವ ಚೀನಾದ ಪ್ರಯತ್ನದ ನಂತರದ ಘಟನಾಕ್ರಮಗಳು ಸಂಪೂರ್ಣ ಇತಿಹಾಸವನ್ನು ಬದಲಾಯಿಸಿದವು. ೧೯೪೭ ರಲ್ಲಿ ಬ್ರಿಟಿಷರಿಗೆ ಭಾರತವನ್ನು ಬಿಡಬೇಕಾಯಿತು, ಅನಂತರ ೩ ವರ್ಷಗಳಲ್ಲಿ ಅಂದರೆ ೧೯೫೦ ರಲ್ಲಿ ಚೀನಾ ಟಿಬೇಟನ್ನು ಕಬಳಿಸಿತು. ೧೯೫೪ ರಲ್ಲಿ ಭಾರತ-ಚೀನಾದ ನಡುವೆ ಪಂಚಶೀಲ ಒಪ್ಪಂದವಾಯಿತು; ಆದರೆ ಅದೇ ಸಮಯದಲ್ಲಿ ಭಾರತ ಸ್ವತಃ ಗಡಿಯನ್ನು ಸ್ಥಾಪಿಸಲು ಆರಂಭಿಸಿತು. ಅಂದಿನಿಂದ ಗಡಿಯಲ್ಲಿ ಚಿಕ್ಕ-ದೊಡ್ಡ ಘರ್ಷಣೆಗಳು ನಡೆಯತೊಡಗಿದವು. ‘ಬ್ರಿಟನ್ನಿನ ಜಾಗತಿಕ ಮಹಾಶಕ್ತಿ ಎಂಬ ಬಿರುದು ಆಗಲೇ ಅಸ್ತವಾಗಿತ್ತು. ಈ ಮಧ್ಯದ ಕಾಲದಲ್ಲಿ ಸೋವಿಯೆತ್ ಯೂನಿಯನ್‌ನ ವಿಭಜನೆಯಾಯಿತು. ಶೇ. ೮೫ ರಷ್ಟು ಸೋವಿಯೆತ್ ಯೂನಿಯನ್ ಭೂಭಾಗವಿರುವ ರಶ್ಯಾಕ್ಕೆ ಮಹಾಶಕ್ತಿ ಎಂಬ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಜಾಗತಿಕ ರಾಜಕಾರಣದಲ್ಲಿ ಚೀನಾ ಕ್ರಮೇಣ ತನ್ನ ವರ್ಚಸ್ಸನ್ನು ಸ್ಥಾಪಿಸಲು ಆರಂಭಿಸಿತು. ಒಂದು ಜಾಗತಿಕ ಮಹಾಶಕ್ತಿಯೆಂದು ಚೀನಾದ ಉದಯವಾಗಲು ಆರಂಭವಾಯಿತು. ಇಸವಿ ೨೦೨೦ ಇದು ಚೀನಾಗೆ ಬಹಳ ಮಹತ್ವದ ವರ್ಷವಾಯಿತು. ಸಂಪೂರ್ಣ ಜಗತ್ತು ಕೊರೋನಾ ವೈರಾಣುವಿನೊಂದಿಗೆ ಹೋರಾಡುತ್ತಿರುವಾಗ ಚೀನಾ ಮಾತ್ರ ತನ್ನ ಸೈನ್ಯ ಶಕ್ತಿಯನ್ನು ಪ್ರದರ್ಶಿಸಲು ಆರಂಭಿಸಿತು. ಲಡಾಖ್‌ವು ಅದಕ್ಕೆ ಒಂದು ಆಟದ ಮೈದಾನವಾಯಿತು. ಭಾರತ-ಚೀನಾ ಗಡಿವಿವಾದದಲ್ಲಿನ ಇಂದಿನವರೆಗಿನ ಎಲ್ಲ ರೇಖೆಗಳನ್ನು ಮುರಿದು ಒಂದು ಹೊಸ ರೇಖೆಯನ್ನು ಎಳೆಯಲು ಚೀನಾ ಪ್ರಯತ್ನಿಸುತ್ತಿದೆ. – ರವೀಂದ್ರ ದಾಣಿ (ಆಧಾರ : ದೈನಿಕ ‘ತರುಣ ಭಾರತ, ೬.೯.೨೦೨೦)