ಶತ್ರುರಾಷ್ಟ್ರಗಳ ಮೈತ್ರಿ !

ಅಮೇರಿಕಾದ ಮಧ್ಯಸ್ಥಿಕೆಯೊಂದಿಗೆ ಸಂಯುಕ್ತ ಅರಬ್ ಎಮಿರೇಟ್ (ಯುಎಇ) ಮತ್ತು ಬಹರೀನ್ ಈ ಇಸ್ಲಾಮೀ ದೇಶಗಳು ಇಸ್ರೇಲ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಈ ಮೂರೂ ದೇಶಗಳು ಈಗ ‘ಮಿತ್ರ ದೇಶಗಳೆಂದು ಗುರುತಿಸಲ್ಪಡುವವು ಹಾಗೂ ವ್ಯಾಪಾರ, ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಅವುಗಳಿಗೆ ಒಟ್ಟಾಗಿ ಕಾರ್ಯ ಮಾಡಲಿಕ್ಕಿವೆ. ಇತ್ತೀಚೆಗಷ್ಟೇ ಸಂಯುಕ್ತ ಅರಬ್ ಎಮಿರೇಟ್ ಮತ್ತು ಇಸ್ರೇಲ್ ಇವುಗಳ ನಡುವೆ ಶಾಂತಿ ಒಪ್ಪಂದವಾಯಿತು. ಈಗ ಈ ಮೂರೂ ದೇಶಗಳ ನಡುವೆ ಆಗಿರುವ ಒಪ್ಪಂದವು ಅಂತರರಾಷ್ಟ್ರೀಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. ಇದರ ಒಂದು ವೈಶಿಷ್ಟ್ಯವೆಂದರೆ, ಬಹರೀನ್ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿರುವುದು. ಬಹರೀನ್ ಇದು ಸೌದಿ ಅರೇಬಿಯಾದ ಸೆರಗು ಹಿಡಿದು ನಡೆಯುವ ದೇಶವಾಗಿದೆ. ಇದಕ್ಕೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಸೌದಿ ಅರೇಬಿಯಾದ ಅಭಿಪ್ರಾಯವು ಮಹತ್ವದ್ದಾಗಿರುತ್ತದೆ. ಸೌದಿ ಅರೇಬಿಯಾ ಮತ್ತು ಇಸ್ರೇಲ್‌ನ ನಡುವೆ ಹಾವು-ಮುಂಗೂಸಿಯಂತೆ ಸಂಬಂಧವಿದ್ದಂತಿದೆ. ಹಾಗೆ ನೋಡಿದರೆ, ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್‌ನ ನಡುವೆ ಯಾವಾಗ ಒಳ್ಳೆಯ ಸಂಬಂಧವಿತ್ತು ? ಎಂಬುದೇ ಪ್ರಶ್ನೆಯಾಗಿದೆ. ಇರಲಿ ಬಿಡಿ, ಇದರಲ್ಲಿನ ಮುಖ್ಯ ವಿಷಯವೆಂದರೆ, ಒಂದು ಕಟ್ಟರವಾದಿ ಇಸ್ಲಾಮೀ ದೇಶದ ಆಶ್ರಯದಲ್ಲಿರುವ ಬಹರೀನ್‌ನಂತಹ ಇಸ್ಲಾಮೀ ರಾಷ್ಟ್ರವು ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೆಂದರೆ ಇದು ಆಶ್ಚರ್ಯಗೊಳಿಸುವ ವಿಷಯವಾಗಿದೆ. ಸೌದಿ ಅರೇಬಿಯಾ ಈ ಒಪ್ಪಂದದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಅದಕ್ಕಿಂತಲೂ ಮುಂದೆ ಹೋಗಿ ಕೆಲವು ಷರತ್ತುಗಳೊಂದಿಗೆ ಸೌದೀ ಅರೇಬಿಯಾ ಸಹ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಲು ಸಿದ್ಧವಿದೆ, ಎಂಬ ಮಾತು ಸಹ ಕೇಳಿ ಬರುತ್ತಿದೆ. ಈಜಿಪ್ತ್ ಮತ್ತು ಜಾರ್ಡನ್ ಇವು ಕೆಲವು ವರ್ಷಗಳ ಹಿಂದೆಯೇ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈಗ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಲು ಟ್ಯುನೀಶಿಯಾ, ಸುಡಾನ್, ಓಮನ್ ಇತ್ಯಾದಿ ಇಸ್ಲಾಮಿ ದೇಶಗಳು ಸಾಲುಕಟ್ಟಿನಿಂತಿರುವ ದೃಶ್ಯ ಕಾಣಿಸುತ್ತಿದೆ. ಯಾವ ರಾಷ್ಟ್ರಗಳು ಇಸ್ರೇಲ್‌ಗೆ ಹಿಡಿಶಾಪ ಹಾಕುತ್ತಿದ್ದವೋ, ಆ ದೇಶಗಳೇ ಈಗ ಆಲಿಂಗನ ಮಾಡುತ್ತಾ ಇಸ್ರೇಲ್‌ನೊಂದಿಗೆ ಮೈತ್ರಿ ಮಾಡಲು ಮುಂದೆ ಸರಿಯುತ್ತಿವೆ. ಸಮಾನ ವಿಚಾರವುಳ್ಳವರಲ್ಲಿ ಮೈತ್ರಿಯಾಗುವುದು ನೈಸರ್ಗಿಕವಾಗಿರುತ್ತದೆ; ಆದರೆ ಯಾರಲ್ಲಿ ಸ್ವಲ್ಪವೂ ಸಮಾನತೆಯಿಲ್ಲವೋ, ಇಂತಹವರಲ್ಲಿ ಮೈತ್ರಿಯಾದರೆ ಏನಾಗಬಹುದು ? ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳಲ್ಲಿನ ಮೈತ್ರಿಯಿಂದಾಗಿ ಎಲ್ಲರಿಗೂ ಹಾಗೆಯೇ ಅನಿಸುತ್ತದೆ. ಆದ್ದರಿಂದ ಇದರ ಹಿಂದಿನ ರಾಜಕಾರಣವನ್ನು ತಿಳಿದುಕೊಳ್ಳುವ ಆವಶ್ಯಕತೆಯಿದೆ.

‘ಶಾಂತಿ ಎಂಬ ಹೆಸರಿನ ಒಪ್ಪಂದ !

ಇಸ್ರೇಲ್ ಇರಾನ್‌ನನ್ನು ಮೊದಲ ಕ್ರಮಾಂಕದ ಶತ್ರು ಎಂದು ತಿಳಿಯುತ್ತದೆ, ಅದೇ ರೀತಿ ಸಂಯುಕ್ತ ಅರಬ್ ಎಮಿರೇಟ್ ಮತ್ತು ಇರಾನ್ ಇವುಗಳ ನಡುವೆಯೂ ಹಾವು-ಮುಂಗೂಸಿಯ ವೈರತ್ವವಿದೆ. ಇರಾನ್ ಶಿಯಾಬಹುಸಂಖ್ಯಾತ ದೇಶವಾಗಿದೆ, ಆದರೆ ಸಂಯುಕ್ತ ಅರಬ್ ಎಮಿರೇಟ್ ಇದು ಸುನ್ನೀ ಬಹುಸಂಖ್ಯಾತ ದೇಶವಾಗಿದೆ. ಬಹರೀನ್ ಶಿಯಾಬಹುಸಂಖ್ಯಾತವಾಗಿದೆ; ಆದರೆ ರಾಜರು ಸುನ್ನಿಗಳಾಗಿದ್ದಾರೆ. ಆದ್ದರಿಂದ ಅಲ್ಲಿನ ರಾಜಕಾರಣದ ಮೇಲೆ ಸುನ್ನಿಗಳ ಪ್ರಭುತ್ವವಿದೆ. ಈ ಅರಬ್ ರಾಷ್ಟ್ರಗಳಲ್ಲಿ ಶಿಯಾ-ಸುನ್ನಿ ವಿವಾದವು ಯಾವಾಗಲೂ ಭುಗಿಲೇಳುತ್ತಾ ಇರುತ್ತದೆ. ಆದ್ದರಿಂದ ಈ ಒಪ್ಪಂದಕ್ಕೆ ಕೆಲವು ಇಸ್ಲಾಮೀ ರಾಷ್ಟ್ರಗಳು ಬೆಂಬಲ ನೀಡಿವೆ ಹಾಗೂ ಕೆಲವು ಅದನ್ನು ವಿರೋಧಿಸಿವೆ. ಈ ಒಪ್ಪಂದವನ್ನು ವಿಮರ್ಶೆ ಮಾಡುವಾಗ ಶಿಯಾ-ಸುನ್ನಿ ವಿವಾದವನ್ನು ದುರ್ಲಕ್ಷ ಮಾಡುವಂತಿಲ್ಲ. ಈ ಒಪ್ಪಂದದಿಂದ ಅತೀ ಹೆಚ್ಚು ಲಾಭ ಯಾರಿಗೆ ಆಗುವುದು, ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಹಾಗೆ ನೋಡಿದರೆ ಎಲ್ಲರೂ ಇದರಿಂದ ತಮ್ಮ ಸ್ವಾರ್ಥವನ್ನು ಸಾಧಿಸಲಿಕ್ಕಿದ್ದಾರೆ. ಇಸ್ರೇಲ್‌ಗೆ ಸಂಯುಕ್ತ ಅರಬ್ ಎಮಿರೇಟ್ ಮತ್ತು ಬಹರೀನ್ ಈ ದೇಶಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಹೆಚ್ಚಿಸಿ ತನ್ನ ಹಿತ ಕಾಪಾಡಲಿಕ್ಕಿದೆ. ಈ ಇಸ್ಲಾಮೀ ರಾಷ್ಟ್ರಗಳಲ್ಲಿ ಮುಕ್ತವಾಗಿ ನುಸುಳಿ ಅದಕ್ಕೆ ಇರಾನಿನ ಚಲನವಲನದ ಮೇಲೆ ನಿಗಾ ಇಡಲಿಕ್ಕಿದೆ. ಈ ಇಸ್ಲಾಮೀ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿರುವುದರಿಂದ ರಹಸ್ಯದ ಮಾಹಿತಿಗಳ ಕೊಡು-ಕೊಳ್ಳುವಿಕೆಯನ್ನು ಮಾಡಲೂ ಅದಕ್ಕೆ ಸಾಧ್ಯವಾಗಲಿದೆ. ಈ ಮಾಹಿತಿಯಿಂದಾಗಿ ಜಿಹಾದಿ ಉಗ್ರವಾದಿಗಳ ಇಸ್ರೇಲ್‌ವಿರೋಧಿ ಚಟುವಟಿಕೆಗಳ ಮಾಹಿತಿಗಳು ಸಿಗಬಹುದು ಹಾಗೂ ಅದಕ್ಕನುಸಾರ ಯೋಗ್ಯವಾದ ಕಾರ್ಯಾಚರಣೆ ಮಾಡಲು ಇಸ್ರೇಲ್‌ಗೆ ಸುಲಭವಾಗಲಿದೆ. ಬಹರೀನ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಗೆ ‘ಇರಾನ್ ಹೆಸರಿನ ತಲೆನೋವು ಪೀಡಿಸುತ್ತಿದೆ. ಆದ್ದರಿಂದ ಅದು ಕಾಲು ಕೆದರಿದರೆ, ಈ ದೇಶಗಳಿಗೆ ಇಸ್ರೇಲ್‌ನ ಸಹಾಯ ಸಿಗುವುದು ಹಾಗೂ ಇಸ್ರೇಲ್‌ಗೆ ಕೂಡ ಇರಾನಿನ ವಿರುದ್ಧ ಕತ್ತಿಮಸಿಯಲು ಸಿದ್ಧ ಅವಕಾಶ ಸಿಗುವುದು. ತುರ್ಕಸ್ತಾನದಂತಹ ರಾಷ್ಟ್ರಗಳು ಇಸ್ಲಾಮೀ ರಾಷ್ಟ್ರಗಳ ನೇತೃತ್ವ ವಹಿಸಬೇಕೆನ್ನುವ ಅಭಿಲಾಷೆಯನ್ನಿಟ್ಟುಕೊಂಡಿವೆ. ‘ಇಸ್ಲಾಮೀ ಕಾರ್ಡ್ನ ಆಟವಾಡಿ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿರುವ ದೇಶಗಳಿಗೆ ‘ದ್ರೋಹಿಗಳು, ‘ಮುಸಲ್ಮಾನರ ಬೆನ್ನಿಗೆ ಇರಿಯುವವರು ಎಂದು ಬಣ್ಣಿಸಿ ಆ ದೇಶಗಳನ್ನು ಒಬ್ಬಂಟಿ ಮಾಡುವ ಆಟವನ್ನು ಕೂಡ ತುರ್ಕಸ್ತಾನ ಆರಂಭಿಸಲು ನೋಡುತ್ತಿದೆ. ಪ್ಯಾಲೆಸ್ಟೈನ್ ಕೂಡ ಈ ಒಪ್ಪಂದದ ನಂತರ ಹೌಹಾರಿದೆ; ಆದರೆ ಇವೆರಡೂ ದೇಶಗಳ ವಿರೋಧವನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ.

ಮೈತ್ರಿ ಉಳಿಯಬಹುದೇ ?

ಈ ಮೈತ್ರಿ ಎಷ್ಟು ಕಾಲ ಉಳಿಯಬಹುದು ಅಥವಾ ಇಸ್ಲಾಮೀ ರಾಷ್ಟ್ರಗಳು ಇಸ್ರೇಲ್‌ನ ಪರವಾಗಿ ಎಷ್ಟು ಕಾಲ ನಿಲ್ಲುವವು, ಎಂಬುದು  ಪ್ರಶ್ನೆಯಾಗಿದೆ. ಇದರ ಮುಖ್ಯ ಕಾರಣವೆಂದರೆ, ಇವೆಲ್ಲ ದೇಶಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ, ‘ಇಸ್ಲಾಮ್ ಖತರೆಮೆ ಹೈ ಎಂದು ಕರೆ ನೀಡಿದಾಗ ಎಲ್ಲ ಇಸ್ಲಾಮೀ ದೇಶಗಳು ಎಲ್ಲವನ್ನೂ ಮರೆತು ಸಂಘಟಿತವಾಗುವವು. ಇಸ್ರೇಲ್‌ಗಾಗಿ ‘ರಾಷ್ಟ್ರ ಪ್ರಥಮ ಎಂಬುದಕ್ಕೆ ಪ್ರಾಧಾನ್ಯತೆ ನೀಡುವುದರಿಂದ ಅದು ಯಾವತ್ತೂ ಇಂತಹ ಒಪ್ಪಂದಗಳನ್ನು ಕಂಕುಳಲ್ಲಿಟ್ಟುಕೊಂಡು ಯಾವುದೇ ದೇಶದೊಂದಿಗೆ ಹೋರಾಡಲು ಸಿದ್ಧವಾಗುವುದು. ಆದ್ದರಿಂದ ಇಂತಹ ಒಪ್ಪಂದಗಳು ಎಷ್ಟೇ ಇದ್ದರೂ, ಅವುಗಳ ಪಾಲನೆ ಎಷ್ಟಾಗುತ್ತದೆ, ಎಂಬುದನ್ನು ಮುಂಬರುವ ಕಾಲವೇ ನಿರ್ಧರಿಸುವುದು. ಅಂತರರಾಷ್ಟ್ರೀಯ ರಾಜಕಾರಣವು ಹೀಗೆಯೇ ಅವಿಶ್ವಾಸದಿಂದ ಕೂಡಿರುತ್ತದೆ. ಇಂದು ಮಿತ್ರರಾಗಿರುವ ದೇಶಗಳು ನಾಳೆ ಒಂದು ಇನ್ನೊಂದರ ಮುಂದೆ ನಿಂತು ಹೋರಾಡುತ್ತವೆ ಮತ್ತು ಶತ್ರು ದೇಶ ಮಿತ್ರವಾಗುತ್ತದೆ. ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ತಜ್ಞರು ಈ ಒಪ್ಪಂದದ ವಿಷಯದಲ್ಲಿ ಚಿಂತನೆ ಮಾಡಲು ಆರಂಭಿಸಿದ್ದಾರೆ. ಇಸ್ರೇಲ್, ಬಹರೀನ್ ಮತ್ತು ಸಂಯುಕ್ತ ಅರಬ್ ಎಮಿರೇಟ್ ಇವುಗಳ ನಡುವೆ ಒಪ್ಪಂದ ಮಾಡಲು ಅಮೇರಿಕಾ ಮಧ್ಯಸ್ಥಿಕೆ ಮಾಡಿದ್ದರೂ ಈ ಒಪ್ಪಂದದ ನಿಜವಾದ ನಾಯಕ ಇಸ್ರೇಲ್ ಆಗಿದೆ. ಯಾವ ದೇಶದಿಂದ ತನಗೆ ಅಪಾಯವಿದೆ ಹಾಗೂ ಯಾವ ದೇಶಗಳಿಂದ ಇಲ್ಲ, ಎಂಬುದನ್ನು ಸರಿಯಾಗಿ ಅಭ್ಯಾಸ ಮಾಡಿ ಇಸ್ರೇಲ್ ಹೆಜ್ಜೆಯಿಡುತ್ತಿದೆ. ಅರಬ್ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಪರಿಸರದಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ಜ್ಯೂಗಳನ್ನು ಹಿಂದಕ್ಕೆ ಕರೆಯುತ್ತದೆಯೇ, ಎನ್ನುವ ಪ್ರಶ್ನೆ ಮುಂದೆ ಬರುತ್ತಿದೆ. ಇಸ್ರೇಲ್ ಈ ಪ್ರಶ್ನೆಯನ್ನು ಚಾತುರ್ಯದಿಂದ ದುರ್ಲಕ್ಷ ಮಾಡಿದೆ. ಆದ್ದರಿಂದ ಒಪ್ಪಂದ ಮಾಡಿ ಇಸ್ಲಾಮೀ ರಾಷ್ಟ್ರಗಳನ್ನು ಖುಶಿಪಡಿಸಲು ಅದು ಹೀಗೇನಾದರೂ ಮಾಡಬಹುದು, ಎನ್ನುವ ದೃಶ್ಯ ಕಾಣಿಸುವುದಿಲ್ಲ. ಸದ್ಯ ಸ್ಥಿತಿಯಲ್ಲಿ ಶತ್ರು ರಾಷ್ಟ್ರಗಳು ಒಪ್ಪಂದ ಮಾಡುವಂತೆ ಮಾಡಿ ಇಸ್ರೇಲ್ ‘ಝುಕತಿ ಹೈ ದುನಿಯಾ, ಝುಕಾನೆವಾಲ ಚಾಹಿಯೇ, ಎಂಬುದನ್ನು ಮತ್ತೊಮ್ಮೆ ಸಿದ್ಧಪಡಿಸಿದೆ. ರಾಷ್ಟ್ರಹಿತಕ್ಕಾಗಿ ಯಾವುದೇ ಹಂತಕ್ಕೆ ಹೋಗುವ ಇಸ್ರೇಲ್‌ನಿಂದ ಭಾರತವೂ ಸಾಕಷ್ಟು ಕಲಿಯಲಿಕ್ಕಿದೆ. ನಾವು ಬಲಾಢ್ಯ ಹಾಗೂ ಶಸ್ತ್ರಸಜ್ಜಾಗಿದ್ದರೆ, ಅಂತರರಾಷ್ಟ್ರೀಯ ರಾಜಕಾರಣದಲ್ಲಿ ವರ್ಚಸ್ಸನ್ನು ನಿರ್ಮಾಣ ಮಾಡಬಹುದು. ಭಾರತದಿಂದಲೂ ಹಾಗೆ ಆಗಬೇಕೆಂಬ ಅಪೇಕ್ಷೆಯಿದೆ.