ಭಾರತೀಯರೇ, ಚೀನಾದ ಅಪಪ್ರಚಾರದ ಯುದ್ಧದ ವಿರುದ್ಧ ಸನ್ನದ್ಧರಾಗಿ ಮತ್ತು ಕೃತಿಶೀಲರಾಗಿ ಚೀನಾಗೆ ಪಾಠ ಕಲಿಸಿ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಚೀನಾ ಮತ್ತು ಪಾಕಿಸ್ತಾನ ಇವುಗಳಿಂದ ಭಾರತದ ವಿರುದ್ಧ ಅಪಪ್ರಚಾರದ ಯುದ್ಧ ನಡೆದಿದೆ. ಈ ಯುದ್ಧದಿಂದ ಭಾರತದ ಮೇಲೆ ಏನು ಪರಿಣಾಮವಾಗುತ್ತಿದೆ ? ಭಾರತೀಯ ಸೈನ್ಯ ಅದನ್ನು ಹೇಗೆ ಎದುರಿಸುತ್ತಿದೆ ? ಈ ಯುದ್ಧದಲ್ಲಿ ಭಾರತೀಯರು ನಮ್ಮ ಸೈನಿಕರ ಬೆಂಬಲಕ್ಕೆ ನಿಂತು ಹೇಗೆ ಸಹಾಯ ಮಾಡಬೇಕು ?, ಈ ವಿಷಯದಲ್ಲಿ (ನಿವೃತ್ತ) ಬ್ರಿಗೇಡಿಯರ್ಹೇ ಮಂತ ಮಹಾಜನ ಇವರು ಮಾಡಿದ ವಿಶ್ಲೇಷಣೆಯನ್ನು ಈ ಲೇಖನದ ಮೂಲಕ ಪ್ರಕಟಿಸುತ್ತಿದ್ದೇವೆ.

೧. ವಿವಿಧ ಮಾಧ್ಯಮಗಳ ಮೂಲಕ ನಿರಂತರವಾಗಿ ನಡೆಯುತ್ತಿರುವ ಈ ಅಪಪ್ರಚಾರದ ಬಗ್ಗೆ ಜನರನ್ನು ಜಾಗೃತಗೊಳಿಸುವುದು ಆವಶ್ಯಕ !

ಹಿಂದಿನ ಕಾಲದಲ್ಲಿ ಯುದ್ಧಗಳು ನಡೆದಾಗ ದಿನಪತ್ರಿಕೆಗಳ ಮೂಲಕ ಅಥವಾ ‘ಆಲ್ ಇಂಡಿಯಾ ರೇಡಿಯೋದಲ್ಲಿ ದಿನದಲ್ಲಿ ಒಮ್ಮೆ ಮಾತ್ರ ವಾರ್ತೆಗಳು ಬರುತ್ತಿದ್ದವು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುದ್ದದ ವಾರ್ತೆಗಳು ದೂರದರ್ಶನದಲ್ಲಿ ೨೪ ಗಂಟೆ ಪ್ರಸಾರವಾದವು. ಸದ್ಯದ ಕಾಲದಲ್ಲಿ ಭಾರತ-ಚೀನಾ ಸಂಘರ್ಷವಿರಲಿ ಅಥವಾ ಉಗ್ರವಾದಿಗಳ ಆಕ್ರಮಣಗಳಿರಲಿ ಇವುಗಳ ವಾರ್ತೆಗಳು ದಿನವಿಡೀ ಇಲೆಕ್ಟ್ರಾನಿಕ್ ಮಾಧ್ಯಮಗಳಿಂದ, ದಿನಪತ್ರಿಕೆಗಳಿಂದ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಿಗುತ್ತಿರುತ್ತವೆ. ಇದರಿಂದ ಪ್ರತಿಯೊಬ್ಬರಿಗೂ ಘಟನೆಗಳ ವಿಷಯದಲ್ಲಿ ಉತ್ಸುಕತೆ ಇರುತ್ತದೆ ಮತ್ತು ಕ್ರಿಕೇಟ್‌ನಂತಹ ವಿಶ್ಲೇಷಣೆ ಆಲಿಸಬೇಕು ಎಂಬ ಅಪೇಕ್ಷೆಯೂ ಇರುತ್ತದೆ. ಇವುಗಳಲ್ಲಿ ನಡೆದಿರುವ ಅಪಪ್ರಚಾರಕ್ಕೂ ನಾವು ಬಲಿಯಾಗುತ್ತೇವೆ; ಆದ್ದರಿಂದ ಜನರನ್ನು ಜಾಗೃತಗೊಳಿಸುವುದು ಅತ್ಯಾವಶ್ಯಕವಾಗಿದೆ. ಹೀಗೆ ಮಾಡದಿದ್ದರೆ, ಜನರ ಮನಸ್ಸಿನಲ್ಲಿ ನಮ್ಮದೆಲ್ಲ ಸರಿಯಾಗಿ ಇದೆಯೇ ಇಲ್ಲವೋ ? ಎಂಬ ಸಂಶಯ ಮೂಡುತ್ತದೆ. ಆಂಗ್ಲದಲ್ಲಿ ಒಂದು ಗಾದೆಯಿದೆ – ‘ನೋ ನ್ಯೂಸ್ ಈಸ್ ಗುಡ್ ನ್ಯೂಸ್ ! ಅಂದರೆ ನಮಗೆ ಯಾವುದೇ ವಾರ್ತೆ ಬರದಿದ್ದರೆ, ಎಲ್ಲವೂ ಸರಿಯಾಗಿಯೇ ನಡೆದಿದೆ ಎಂದು ಅರ್ಥ ಮತ್ತು ಯಾವುದಾದರೊಂದು ಕೆಟ್ಟ ವಾರ್ತೆ ಇದ್ದರೆ ಅದನ್ನು ನಿಮಗೆ ಖಂಡಿತ ಹೇಳುತ್ತೇವೆ ಎಂದೂ ಅರ್ಥ. ಆದ್ದರಿಂದ ಧೈರ್ಯದಿಂದಿರಿ. ಏನೂ ಕಾಳಜಿ ಮಾಡಬೇಡಿರಿ.

೨. ಭಾರತವು ತನ್ನ ಇಚ್ಛೆಗನುಸಾರ ವರ್ತಿಸಬೇಕೆಂಬ ಒತ್ತಡ ಹೇರುತ್ತಿರುವ ಚೀನಾ

ಭಾರತ-ಚೀನಾ ದೇಶಗಳ ನಡುವೆ ಸಂಘರ್ಷ ಆರಂಭವಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯವಾಯಿತು. ಚೀನಾ ಭಾರತದ ವಿಷಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಅಪಪ್ರಚಾರವನ್ನು ಮಾಡುತ್ತಿದೆ. ಅದಕ್ಕೆ ಭಾರತದ ತಥಾಕಥಿತ ನಿವೃತ್ತ ಸೈನ್ಯಾಧಿಕಾರಿಗಳು, ತಥಾಕಥಿತ ತಜ್ಞರು ಮತ್ತು ಪ್ರಸಾರಮಾಧ್ಯಮಗಳ ಕೆಲವರು ಸಹಕರಿಸುತ್ತಿದ್ದಾರೆ. ಅವರು ಚೀನಾಕ್ಕೆ ಅನುಕೂಲಕರ ವಿಚಾರಗಳನ್ನು ಪ್ರಸಾರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಾರೆ. ನಿರಂತರವಾಗಿ ಅಪ ಪ್ರಚಾರ ಮಾಡುತ್ತಿರುವುದು ಯುದ್ಧದ ಒಂದು ಮುಖ್ಯ ಉದ್ದೇಶವೇ ಆಗಿರುತ್ತದೆ. ಅದಕ್ಕಾಗಿ ಸುಳ್ಳು ವದಂತಿ ಅಥವಾ ವಾರ್ತೆಗಳನ್ನು ಹರಡುವುದು, ನಕಲಿ ಧ್ವನಿಚಿತ್ರಮುದ್ರಿಕೆಗಳನ್ನು ಪ್ರಸಾರ ಮಾಡುವುದು ಮತ್ತು ಭಾರತೀಯರ ಮೇಲೆ ಮಾನಸಿಕ ಒತ್ತಡವನ್ನು ತರುವುದು, ಈ ರೀತಿ ನಡೆದಿರುತ್ತದೆ. ಇದರಿಂದ ‘ಭಾರತೀಯರು ಚೀನಾದ ಬೇಡಿಕೆಗಳನ್ನು ಸುಮ್ಮನಿದ್ದು ಒಪ್ಪಿಕೊಳ್ಳುವರು, ಎಂಬುದು ಚೀನಾದ ವಿಚಾರವಾಗಿದೆ. ‘ನಾವು ಹೇಳಿದಂತೆ ನೀವು ಗಡಿಯಲ್ಲಿ ನಡೆದು ಕೊಳ್ಳಬೇಕು. ಭಾರತವು ನಿರ್ಬಂಧ ಹೇರಿದ ನಮ್ಮ ಹೂಡಿಕೆಗಳನ್ನು ಪುನಃ ಆರಂಭಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಸ್ಥಾನ ಭಾರತದ ಬಳಿಯಿದೆ. ಆದ್ದರಿಂದ ಜಗತ್ತಿಗೆ ಅನಿಸುವಂತೆ ನಮ್ಮ ತನಿಖೆಯಾಗದಂತೆ ನೋಡಿಕೊಳ್ಳಬೇಕು. ಭಾರತ ಅಮೇರಿಕಾದ ಸಹಾಯವನ್ನು ಪಡೆಯಬಾರದು, ಎಂದು ಚೀನಾಗೆ ಅನಿಸುತ್ತದೆ.

೩. ಚೀನಾದ ಶತ್ರುದೇಶಗಳೊಂದಿಗೆ ಸ್ನೇಹ ಬೆಳೆಸುವ ಮೂಲಕ ಜಂಟಿ ಸೇನೆಯನ್ನು ಸಿದ್ಧಗೊಳಿಸುವುದು ಆವಶ್ಯಕವಾಗಿದೆ !

ಚೀನಾ ನಮ್ಮೊಂದಿಗೆ ಏಕಕಾಲದಲ್ಲಿ ಅನೇಕ ಪದ್ಧತಿಗಳಿಂದ ಯುದ್ಧ ಮಾಡುತ್ತಿದೆ. ಇದಕ್ಕೆ ‘ಹೈಬ್ರಿಡ್ ವಾರ್ ಎನ್ನುತ್ತಾರೆ. ಗಡಿಯ ಯುದ್ಧವೂ ಅದರ ಒಂದು ಭಾಗವೇ ಆಗಿದೆ ಮತ್ತು ವ್ಯಾಪಾರ ಯುದ್ಧ ಅಥವಾ ಆರ್ಥಿಕ ನುಸುಳುವಿಕೆಯು ಅದರ ಎರಡನೇಯ ಭಾಗವಾಗಿದೆ. ಚೀನಾ ರಾಜಕೀಯ ಯುದ್ಧವನ್ನು ಕೂಡ ಮಾಡುತ್ತಿದೆ. ಚೀನಾವು ಅಧಿಕಾರಕ್ಕೆ ತಂದಿರುವ ನೇಪಾಳದ ಸರಕಾರ ಚೀನಾದ ಭಾಷೆಯಲ್ಲಿ ಮಾತನಾಡುತ್ತಿದೆ. ಅದೇ ಪ್ರಯತ್ನವನ್ನು ಅದು ಮಾಲ್ದೀವ್‌ನಲ್ಲಿಯೂ ಮಾಡಿತ್ತು, ಆದರೆ ಮಾಲ್ದೀವ್‌ನಲ್ಲಿ ಪುನಃ ಅಧಿಕಾರ ಬದಲಾಯಿತು. ಚೀನಾ ನಮ್ಮ ನೆರೆಯ ರಾಷ್ಟ್ರಗಳಿಗೆ ಭಾರತಕ್ಕಿಂತ ೧೦ ಪಟ್ಟು ಹೆಚ್ಚು ಆರ್ಥಿಕ ಸಹಾಯ ಮಾಡುತ್ತದೆ. ಆದ್ದರಿಂದ ಭಾರತದ ಮಿತ್ರ ರಾಷ್ಟ್ರಗಳ ವರ್ತನೆ ಮಿತ್ರರಂತೆ ಇಲ್ಲ. ನೇಪಾಳಕ್ಕೆ ಚೀನಾದ ಜೊತೆಗೆ ಹೋಗುವುದಿದೆ. ಚಾಣಕ್ಯರು ಹೇಳಿದಂತೆ ‘ಶತ್ರುವಿನ ಶತ್ರು ನಮ್ಮ ಮಿತ್ರ ಎಂಬಂತೆ ಚೀನಾದ ಶತ್ರುಗಳಾಗಿರುವ ವಿಯೆಟ್ನಾಮ್, ದಕ್ಷಿಣ ಪೂರ್ವದಲ್ಲಿನ ಏಶಿಯಾದ ದೇಶಗಳೊಂದಿಗೆ ಮಿತ್ರತ್ವ ಬೆಳೆಸಬೇಕು. ಜಪಾನ್, ಅಮೇರಿಕಾ ಇವು ನಮ್ಮ ಮಿತ್ರ ರಾಷ್ಟ್ರಗಳಾಗಿವೆ. ಅದನ್ನು ಬಳಸಿ ಕೊಂಡು ನಾವು ‘ಜಂಟಿ ಸೈನ್ಯವನ್ನು ಮಾಡಿಕೊಳ್ಳಬೇಕು. ಭಾರತವು ‘ಕ್ವಾಡ್ರಿಲೆಟರಲ್ ಆಪರೇಶನ್ನಲ್ಲಿ ಪಾಲ್ಗೊಳ್ಳಬಾರದು ಎಂದು ಚೀನಾಕ್ಕೆ ಅನಿಸುತ್ತದೆ. ಇದನ್ನು ನಮಗೆ ಹೇಳಲು ನೀವ್ಯಾರು ? ನಾವು ಲಡಾಖನಲ್ಲಿ ಮೂಲಭೂತ ಸೌಲಭ್ಯಗಳನ್ನು ಅಥವಾ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಅವುಗಳಿಂದ ಲಡಾಖಗೆ ತಲುಪಲು ಮೊದಲು ೭ ದಿನಗಳು ತಗಲುತ್ತಿದ್ದವು ಈಗ ೧-೨ ದಿನಗಳಲ್ಲಿಯೇ ತಲಪಬಹುದು ಮತ್ತು ಸೈನ್ಯಕ್ಕೆ ಸಹಾಯವನ್ನೂ ಕಳುಹಿಸಬಹುದು. ಆದ್ದರಿಂದ ಚೀನಾ ರಸ್ತೆ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿದೆ. ಈ ರಸ್ತೆ ನಿರ್ಮಾಣವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಎನ್ನುವುದರಲ್ಲಿ ಸಂಶಯವೇ ಇಲ್ಲ. ಚೀನಾ ನಮ್ಮೊಂದಿಗೆ ಅಪಪ್ರಚಾರದ ಯುದ್ಧವನ್ನೂ ಮಾಡುತ್ತಿದೆ ಮತ್ತು ನಮ್ಮ ಮೇಲೆ ಮಾನಸಿಕ ಒತ್ತಡ ಹೇರಿ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

೪. ತಥಾಕಥಿತ ಭಾರತೀಯ ಮಿಲಿಟರಿ ತಜ್ಞರ ಮತ್ತು ವಿಶ್ಲೇಷಕರಿಂದ ಅಪಪ್ರಚಾರ ಮಾಡುವ ಚೀನಾ

೨೦೧೯ ರಲ್ಲಿ ಇಂದಿನ ಸರಕಾರ ಎರಡನೆಯ ಬಾರಿ ಆರಿಸಿ ಬಂದಿತು, ಆಗ ಚೀನಾಕ್ಕೆ ಈ ಸರಕಾರ ದೃಢ ಸರಕಾರವಾಗಿದೆ, ಈ ಸರಕಾರ ತನ್ನ ರಾಷ್ಟ್ರೀಯ ಹಿತವನ್ನು ಕಾಪಾಡುವುದು ಮತ್ತು ಚೀನಾದ ಅಥವಾ ಪಾಕಿಸ್ತಾನದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅನಿಸಿತು. ಅನಂತರ ಚೀನಾ ‘ಹೈಬ್ರೀಡ್ ವಾರ್ನ ಪ್ರಮಾಣವನ್ನು ಹೆಚ್ಚಿಸಿತು. ಚೀನಾಕ್ಕೆ ಎಲ್ಲ ದೇಶಗಳಲ್ಲಿ ತನ್ನ ಮಾತನ್ನು ಕೇಳುವ ಸರಕಾರ ಬೇಕಾಗಿರುತ್ತದೆ. ಅದರ ಮಾತುಗಳನ್ನು ಕೇಳುವ ಜನರಿಗೇ ಅದು ಸಹಾಯ ಮಾಡುತ್ತದೆ. ಚೀನಾ ಕೆಲವು ತಥಾಕಥಿತ ತಜ್ಞರನ್ನು ಮತ್ತು ವಿಶ್ಲೇಷಕರನ್ನು ಬೀಜಿಂಗ್, ಟಿಬೇಟ್, ಮಾನಸರೋವರದ ಪ್ರವಾಸ ಮಾಡಿಸುತ್ತದೆ. ಅನಂತರ ಅವರು ಭಾರತದ ವಿರುದ್ಧ ಲೇಖನಗಳನ್ನು ಬರೆಯಲು ಆರಂಭಿಸುತ್ತಾರೆ. ಇದರಲ್ಲಿ ‘ಭಾರತದಲ್ಲಿ ಅಲ್ಪ ಸಂಖ್ಯಾತರು ಹೇಗೆ ಅಸುರಕ್ಷಿತರಾಗಿದ್ದಾರೆ? ಅವರ ಮೇಲೆ ಹೇಗೆ ದೌರ್ಜನ್ಯವಾಗುತ್ತದೆ ?, ಎಂಬಂತಹ ಸುಳ್ಳು ಮಾಹಿತಿಗಳನ್ನು ನೀಡಲಾಗುತ್ತದೆ. ತಜ್ಞರಿಗೆ ಅಲ್ಪಸಂಖ್ಯಾತರು ಭಾರತದಲ್ಲಿಯೇ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಚೀನಾದಲ್ಲಿ ಝಿಆನ್ ಪ್ರಾಂತದಲ್ಲಿ ೨ ಕೋಟಿ ಉಯಿಘರ ಮುಸಲ್ಮಾನರಿದ್ದಾರೆ. ಅಲ್ಲಿ ಅವರು ಅವರ ಧರ್ಮದ ಆಚರಣೆಯನ್ನು ಮಾಡುವ ಹಾಗಿಲ್ಲ. ಅವರು ಮಸೀದಿಗೆ ಹೋಗುವ ಹಾಗಿಲ್ಲ. ಅಜಾನ್ ನೀಡುವ ಹಾಗಿಲ್ಲ. ತಲೆಯ ಮೇಲೆ ಅವರ ಟೊಪ್ಪಿಯನ್ನು ಸಹ ಹಾಕುವಂತಿಲ್ಲ. ಇಂದು ೨೦ ಲಕ್ಷಕ್ಕಿಂತ ಹೆಚ್ಚು ಮುಸಲ್ಮಾನರು ಸೆರೆಮನೆಯಲ್ಲಿದ್ದಾರೆ. ಅಂದರೆ ಈ ಧರ್ಮದ ಮೇಲೆ ಸಂಪೂರ್ಣ ನಿರ್ಬಂಧವನ್ನೇ ಹೇರಲಾಗಿದೆ.

ಈ ರೀತಿಯ ದೌರ್ಜನ್ಯಗಳು ಟಿಬೇಟ್‌ನಲ್ಲಿಯೂ ನಡೆಯುತ್ತವೆ. ಟಿಬೇಟ್‌ನ ಜನಸಂಖ್ಯೆ ಸಾಧಾರಣ ೫೦ ಲಕ್ಷಕ್ಕಿಂತ ಹೆಚ್ಚಿದೆ. ಟಿಬೇಟ್‌ನ ಜನರ ಧರ್ಮದ ಮೇಲೆಯೂ ಅತಿಕ್ರಮಣವಾಗುತ್ತಿದೆ. ಅವರ ಪ್ರಾರ್ಥನಾಸ್ಥಳಗಳನ್ನು ಮುಚ್ಚಲಾಗಿದೆ. ಆದ್ದರಿಂದ ಭಾರತೀಯ ತಜ್ಞರು ದಯವಿಟ್ಟು ಉಯಿಘರ ಮುಸಲ್ಮಾನರ ಮತ್ತು ಟಿಬೇಟ್‌ನ ಜನರ ಬಗ್ಗೆ ಬರೆಯಬೇಕು. ಹಾಂಕ್‌ಕಾಂಗ್‌ನಲ್ಲಿ ಚೀನಾದ ಸೈನಿಕರು ವಿದ್ಯಾರ್ಥಿಗಳನ್ನು ಹೇಗೆ ಥಳಿಸುತ್ತಾರೆ, ಎಂಬ ಬಗ್ಗೆ ಬರೆಯಬೇಕು. ಕೇವಲ ಭಾರತದ ಕಡೆಗೆ ಬೊಟ್ಟು ಮಾಡಲು ಪ್ರಯತ್ನಿಸಬಾರದು.

೪ ಅ. ಚೀನಾದ ಅಪಪ್ರಚಾರಕ್ಕೆ ಬಲಿಯಾಗಬೇಡಿ !

ಚೀನಾವು, ‘ನಾವು ಅತ್ಯಂತ ಬಲಿಷ್ಠರಾಗಿದ್ದೇವೆ, ನಮ್ಮ ಆರ್ಥಿಕ ಸ್ಥಿತಿ ತುಂಬಾ ಉತ್ತಮವಿದೆ. ಆದ್ದರಿಂದ ನಿಮಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ಆಗುವುದಿಲ್ಲ ಎಂದು ಇನ್ನೂ ಒಂದು ರೀತಿಯ ಅಪ ಪ್ರಚಾರವನ್ನು ಮಾಡುತ್ತಿದೆ. ಇದು ನಿಜವೇನು ? ಇಲ್ಲವೇ ಇಲ್ಲ ! ನಾವು ಚೀನಾದ ಆರ್ಥಿಕ ಬಲದೊಂದಿಗೆಯೂ ಹೋರಾಡಬಲ್ಲೇವು. ಅದರ ಆರ್ಥಿಕ ಬಲ ಹೆಚ್ಚಿದೆ, ಆದರೆ ನನ್ನ ಅಭಿಪ್ರಾಯ ದಂತೆ ‘ಚೀನಾದ ಸ್ಥಿತಿ ವಿಜಯ ಮಲ್ಯಾನ ಹಾಗೆ ಆಗಲಿದೆ. ಆದ್ದರಿಂದ ಅದರ ಆರ್ಥಿಕ ಬಲದ ಕಾಳಜಿಯನ್ನು ಮಾಡಬೇಕಾಗಿಲ್ಲ. ಅದೇ ರೀತಿ ಚೀನಾದ ಸೈನ್ಯ ಶಕ್ತಿಯೂ ನಮ್ಮನ್ನು ಸೋಲಿಸಲಾರದು. ೧೯೬೨ ರ ಭಾರತ-ಚೀನಾ ಯುದ್ಧದಲ್ಲಿ ನಾವು ಕೇವಲ ಶೇ. ೧೦ ರಷ್ಟು ಸೈನ್ಯವನ್ನು ಮಾತ್ರ ಉಪಯೋಗಿಸಿದ್ದೆವು. ೧೯೬೭ ರಲ್ಲಿ ನಾಥುಲಾದ ಚೋಲಾದಲ್ಲಿ ಭಾರತವು ೩೨೦ ಕ್ಕಿಂತಲೂ ಹೆಚ್ಚು ಚೀನಾ ಸೈನಿಕರ ಹತ್ಯೆ ಮಾಡಿತು. ಅಲ್ಲಿ ಭಾರತದ ಒಟ್ಟು ೭೨ ಸೈನಿಕರು ಹುತಾತ್ಮರಾಗಿದ್ದರು. ೧೯೮೭ ರಲ್ಲಿ ಸೂಮದೋರೋಂಗ ಚೂಮ್‌ದಲ್ಲಿ ಭಾರತ ಚೀನಾಕ್ಕೆ ಒಳ್ಳೆಯ ಪಾಠ ಕಲಿಸಿತ್ತು. ಅದೇ ರೀತಿ ಡೋಕಲಾಮನಲ್ಲಿಯೂ ಚೀನಾವನ್ನು ೭೨ ದಿನಗಳ ಸಂಘರ್ಷದ ನಂತರ ಹೇಗೆ ಹಿಮ್ಮೆಟ್ಟಿಸಿತ್ತು ಎಂಬುದು ತಮ್ಮೆಲ್ಲರಿಗೂ ತಿಳಿದಿದೆ. ಆದ್ದರಿಂದ ಚೀನಾದ ಅಪಪ್ರಚಾರಕ್ಕೆ ಬಲಿಯಾಗುವ ಆವಶ್ಯಕತೆಯಿಲ್ಲ.

೪ ಆ. ಲಡಾಖ್‌ನಲ್ಲಿ ಚೀನಾ ಸೇನೆ ನುಸುಳಿದೆ ಎನ್ನುವ ಅಪಪ್ರಚಾರ ಸುಳ್ಳು !

ಲಡಾಖ್‌ನ ಸಂಘರ್ಷದ ನಂತರ ಭಾರತದಲ್ಲಿನ ಕೆಲವು ನಿವೃತ್ತ ಅಧಿಕಾರಿಗಳು ಮತ್ತು ತಜ್ಞರು ಚೀನಾದ ಪರ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಅಭಿಪ್ರಾಯದಂತೆ ಲಡಾಖನಲ್ಲಿ ಚೀನಾದ ಸೈನ್ಯ ದೊಡ್ಡ ಪ್ರಮಾಣದಲ್ಲಿ ನುಸುಳಿದೆ. ಹೇಗೆ ಕಾರ್ಗಿಲ್ ನಲ್ಲಿ ನುಸುಳುವಿಕೆ ನಡೆದಿತ್ತೋ, ಹಾಗೆಯೇ ಇಲ್ಲಿಯೂ ನಡೆದಿದೆ ಎಂದು ಬರೆಯುತ್ತಿದ್ದಾರೆ. ಆದರೆ ಇದು ಸತ್ಯವಲ್ಲ. ಭಾರತ-ಚೀನಾದ ಗಡಿಯು ಭಾರತ-ಪಾಕಿಸ್ತಾನದ ಗಡಿಗಿಂತ ಭಿನ್ನವಾಗಿದೆ, ಅಂದರೆ ಅಲ್ಲಿನ ಗಡಿಯನ್ನು ನಿರ್ಧರಿಸಲಿಲ್ಲ, ಭಾರತೀಯರು ಇದನ್ನು ತಿಳಿದುಕೊಳ್ಳಬೇಕು. ಈ ಬದಿಗೆ ಭಾರತ ಮತ್ತು ಆ ಬದಿಗೆ ಚೀನಾ ಇದೆ. ನಡುವೆ ‘ಎಲ್‌ಎಸಿ (ವಾಸ್ತವಿಕ ನಿಯಂತ್ರಣ ರೇಖೆ) ಇದೆ. ‘ಎಲ್‌ಎಸಿ ಯು ಒಂದು ಅಂದಾಜಾಗಿರತ್ತದೆ, ಉದಾ. ಈ ಮರದಿಂದ ಆ ಮರದ ವರೆಗೆ, ಇದು ಒಂದು ರೀತಿಯ ‘ಎಲ್‌ಎಸಿ ಆಗಿದೆ. ಈಗಲೂ ‘ಎಲ್‌ಎಸಿಯಲ್ಲಿ ಕೆಲವು ವಿವಾದಾತ್ಮಕ ಪ್ರದೇಶಗಳಿವೆ. ಆದ್ದರಿಂದ ಎರಡೂ ಬದಿಯ ಜನರಿಗೆ ‘ಸಂಬಂಧಿತ ಪ್ರದೇಶವು ತಮ್ಮದೆ ಆಗಿದೆಂದು ಅನಿಸುತ್ತದೆ. ಚೀನಾವು ೨-೩ ಕಿಲೋಮೀಟರ್ ಒಳಗೆ ಬಂದಿದೆ ಎಂದರೆ ಅದು ವಿವಾದಾತ್ಮಕ ಪ್ರದೇಶದೊಳಗೆ ಬಂದಿದೆ; ಆದರೆ ಭಾರತೀಯ ಸೈನ್ಯವು ಅವರನ್ನು ತಕ್ಷಣ ತಡೆದು ಮುಂದೆ ಬರಲು ಬಿಡಲಿಲ್ಲ. ಈ ಸಂಘರ್ಷ ಮುಗಿಯುವುದರಲ್ಲಿ ಅಲ್ಲಿಂದ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತಕ್ಕೆ ಸಾಧ್ಯವಾಗುವುದು, ಎಂಬುದು ನನ್ನ ನಂಬಿಕೆಯಾಗಿದೆ. ನಾವು ಸೇನಾ ಕಾರ್ಯಾಚರಣೆಯನ್ನು ಕೂಡ ಮಾಡಿದ್ದೇವೆ, ನಾವು ಯುದ್ಧ ಮಾಡದೆಯೇ ನಮ್ಮ ಭೂಮಿಯನ್ನು ಅವರಿಗೆ ಕೊಟ್ಟಿದ್ದೇವೆ ಎಂದೇನಿಲ್ಲ. ತಥಾಕಥಿತ ತಜ್ಞರಿಗೆ ಇದು ಅಪಪ್ರಚಾರವಾಗಿದೆ ಎಂಬುದು ತಿಳಿಯಬೇಕು.

ಹೇಗೆ ಭಾರತ-ಪಾಕ್ ಗಡಿಯಲ್ಲಿ ವಿವಿಧ ಪ್ರಕಾರದ ಶಸ್ತ್ರಗಳಿಂದ ಗುಂಡು ಹಾರಾಟವನ್ನು ಮಾಡಲಾಗುತ್ತದೆಯೋ, ಹಾಗೆ ಚೀನಾದ ಗಡಿಯಲ್ಲಿ ಆಗುವುದಿಲ್ಲ. ೨೦೦೯ ರಲ್ಲಿ ಎರಡೂ ದೇಶಗಳ ನಡುವೆ ಆಗಿರುವ ‘ಶಾಂತಿ ಒಪ್ಪಂದ (ಪೀಸ್ ಎಂಡ್ ಟ್ರ್ಯಾಂಕವಿಲಿಟಿ ಎಗ್ರಿಮೆಂಟ್) ಕ್ಕನುಸಾರ ‘ಈ ಸ್ಥಳದಲ್ಲಿ ಯಾವುದೇ ಸೈನಿಕ ಬಂಕರಗಳನ್ನು ಅಥವಾ ರಸ್ತೆಗಳನ್ನು ಮಾಡಲಾಗದು. ಇಲ್ಲಿ ಗುಂಡು ಹಾರಾಟ ಮಾಡುವ ಹಾಗಿಲ್ಲ, ಒಂದು ವೇಳೆ ನಾವು ಪರಸ್ಪರರ ಪ್ರದೇಶದಲ್ಲಿ ಪ್ರವೇಶ ಮಾಡಿದರೆ, ‘ನೀವು ನಮ್ಮ ಪ್ರದೇಶದೊಳಗೆ ಬಂದಿದ್ದೀರಿ, ಎಂದು ಒಂದು ಫಲಕವನ್ನು ತೋರಿಸಬೇಕು, ಹೀಗೆ ನಿರ್ಧರಿಸಲಾಗಿದೆ; ಆದರೆ ಕಾಲಾಂತರದಲ್ಲಿ ಚೀನಾದ ಸೈನಿಕರು ಹೆಚ್ಚೆಚ್ಚು ಆಕ್ರಮಕವಾಗುತ್ತಾ ಹೋದರು. ಅವರು ನೂಕುನುಗ್ಗಾಟ ಮಾಡಲು ಪ್ರಾರಂಭಿಸಿದರು; ಆದರೆ ಭಾರತೀಯ ಸೈನಿಕರು ಅವರಿಗೆ ಪ್ರತ್ಯುತ್ತರ ನೀಡಿದರು. ಈ ಬಾರಿ ಹೆಚ್ಚು ಹಿಂಸಾಚಾರವಾಯಿತು.

ಚೀನಾ ಸೈನಿಕರು ಮೊಳೆಗಳನ್ನು ಹೊಡೆದಿರುವ ಕೋಲುಗಳನ್ನು ಜೊತೆಗೆ ತಂದಿದ್ದರು. ಮೊದಲಿಗೆ  ಅವರು ಕೋಲುಗಳಿಂದ ಆಕ್ರಮಣ ಮಾಡಿದರು. ಅದರಿಂದ ನಮ್ಮ ಸೈನಿಕರಿಗೆ ಹೆಚ್ಚು ಗಾಯಗಳಾಗುವ ಸಂಭವವಿತ್ತು; ಏಕೆಂದರೆ ಕೋಲುಗಳ ವಿರುದ್ಧ ಕೈಗಳಿಂದ ಹೋರಾಡುವುದು ಸುಲಭವಲ್ಲ. ಅನಂತರ ನಾವೂ ಅವರಿಗೆ ಹಾಗೆಯೇ ಉತ್ತರ ನೀಡಿದೆವು.

‘ಲಡಾಖ್‌ನಲ್ಲಿ ಚೀನಾ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ತಂದಿದೆ, ಎಂದು ಹೇಳಲಾಯಿತು, ಆದರೆ ಚೀನಾಗೆ ಹೀಗೆ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ತರಲು ಆಗುವುದಿಲ್ಲ. ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತದ ಒಂದುವರೆ ಲಕ್ಷ ಸೈನಿಕರಿದ್ದಾರೆ, ಸಿಕ್ಕಿಮ್ ಗಡಿಯಲ್ಲಿ ಭಾರತದ ೬೦ ಸಾವಿರ ಸೈನಿಕರಿದ್ದಾರೆ. ಉತ್ತರಾಖಂಡ ಗಡಿಯಲ್ಲಿ ೩೦ ಸಾವಿರಕ್ಕಿಂತಲು ಹೆಚ್ಚು ಸೈನಿಕರಿದ್ದಾರೆ ಮತ್ತು ಲಡಾಖ್ನಲ್ಲಿ ೩೦ ರಿಂದ ೪೦ ಸಾವಿರ ಸೈನಿಕರನ್ನು ನೇಮಿಸಲಾಗಿದೆ. ಇದರೊಂದಿಗೆ  ೧೫೦ ಕ್ಕಿಂತಲೂ ಹೆಚ್ಚು ಯುದ್ಧವಾಹನಗಳಿವೆ (ಟ್ಯಾಂಕಗಳಿವೆ). ಸ್ವಲ್ಪದರಲ್ಲಿ ಹೇಳುವುದಾದರೆ, ಮನಸ್ಸಿಗೆ ಬಂದಾಗ ನಮಗೆ ಸೈನ್ಯವನ್ನು ಹೆಚ್ಚಿಸಲು ಬರುವುದಿಲ್ಲ. ಒಂದು ವೇಳೆ ಅಲ್ಲಿ ಯುದ್ಧವಾದರೆ ಅತೀ ಕೆಟ್ಟ ಪರಿಸ್ಥಿತಿಯಲ್ಲಿಯೂ ಚೀನಾ ಹೆಚ್ಚೆಂದರೆ ಎಷ್ಟು ಸೈನ್ಯವನ್ನು ತರಬಹುದು, ಎನ್ನುವುದನ್ನು ಅಭ್ಯಾಸ ಮಾಡಿಯೇ ನಾವು ಸಂರಕ್ಷಣಾತ್ಮಕ ಉಪಾಯಗಳನ್ನು ಮಾಡಿದ್ದೇವೆ. ಆದ್ದರಿಂದ ಚೀನಾ ಎಷ್ಟು ಸೈನ್ಯವನ್ನು ತಂದಿದೆ ಎನ್ನುವುದಕ್ಕೆ ಮಹತ್ವವಿಲ್ಲ. ಅವಶ್ಯಕತೆಯಿದ್ದರೆ ನಾವು ಅಲ್ಲಿಗೆ ಇನ್ನೂ ಹೆಚ್ಚು ಸೈನ್ಯವನ್ನು ಒಯ್ಯಬಹುದು; ಆದರೆ ಈಗಿರುವ ಸೈನ್ಯವೂ ಸಾಕಾಗುತ್ತದೆ.

೫. ಭಾರತೀಯ ಸೈನಿಕರು ಲಡಾಖ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಯುದ್ಧನೀತಿಯನ್ನು ಬಳಸಿದರು !

ಚೀನಾದ ಸೈನಿಕರು ‘ಭಾರತ ತುಂಬಾ ಭಯಭೀತಗೊಂಡಿದೆ, ಎಂದು ಅಪಪ್ರಚಾರ ಮಾಡಿದರು. ಅನಂತರ ಚೀನಾದಲ್ಲಿ ೩ ಸಾವಿರಕ್ಕೂ ಹೆಚ್ಚು ಯುದ್ಧಟ್ಯಾಂಕ್‌ಗಳಿವೆ, ಎಂಬ ವಾರ್ತೆ ಬಂದಿತ್ತು. ಚೀನಾವು ಭಾರತದ ಗಡಿಯಲ್ಲಿ ೩ ಸಾವಿರ ಯುದ್ಧ ಟ್ಯಾಂಕ್‌ಗಳನ್ನು ಬಳಸ ಬಹುದೇ ? ಈ ಗಡಿಯು ಹಿಮಾಲಯ ಮತ್ತು ಗುಡ್ಡಕಾಡು ಪ್ರದೇಶಗಳಲ್ಲಿದೆ. ಆದ್ದರಿಂದ ಲಡಾಖ್‌ನಲ್ಲಿ ಹೆಚ್ಚೆಂದರೆ ೧೦೦ ರಿಂದ ೧೨೦ ಟ್ಯಾಂಕ್‌ಗಳನ್ನು ಸೈನ್ಯ ಪದ್ಧತಿಯಲ್ಲಿ ಬಳಸಬಹುದು. ಅವುಗಳಿಗೆ ಪ್ರತ್ಯುತ್ತರ ನೀಡಲು ಭಾರತದ ಟ್ಯಾಂಕ್‌ಗಳು ಮೊದಲೇ ಅಲ್ಲಿ ಸನ್ನದ್ಧಗೊಂಡಿವೆ.

‘ಚೀನಾದಲ್ಲಿ ದೊಡ್ಡ ಕ್ಷಿಪಣಿಗಳಿವೆ, ಎಂದು ಅಪಪ್ರಚಾರ ಮಾಡಲಾಗುತ್ತದೆ; ಆದರೆ ಇದರಿಂದ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಚೀನಾದಲ್ಲಿ ಅಣುಬಾಂಬ್‌ಗಳಿವೆ. ಚೀನಾದ ಗಡಿಯಲ್ಲಿ ಅತ್ಯಾಧುನಿಕ ಯುದ್ಧ ಸಲಕರಣೆಗಳನ್ನು ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಅಲ್ಲಿ ಸೈನಿಕರು ರೈಫಲ್ ಹಿಡಿದೇ ಯುದ್ಧ ಮಾಡಬೇಕಾಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸುಲಭವಾಗುತ್ತದೆ. ಒಂದು ವೇಳೆ ಚೀನಾದ ಸೈನಿಕರು ಭಾರತದ ಮೇಲೆ ದಾಳಿ ಮಾಡಲಿಕ್ಕಿದ್ದರೆ, ನಮ್ಮ ಒಬ್ಬ ಸೈನಿಕನೆದುರು ಚೀನಾದ ೧೨ ಪಟ್ಟು ಸೈನಿಕರನ್ನು ನೇಮಕ ಮಾಡಬೇಕಾಗುತ್ತದೆ. ನಿಮಗೆ ತಿಳಿದಿರುವಂತೆ ಛತ್ರಪತಿ ಶಿವಾಜಿ ಮಹಾರಾಜರು ಗುಡ್ಡಗಾಡು ಪ್ರದೇಶಗಳಲ್ಲಿ ಯುದ್ಧ ಮಾಡಿದರು. ಇಂದು ಭಾರತದ ಸೈನಿಕರು ಅದೇ ಯುಕ್ತಿಯನ್ನು ಭಾರತ-ಚೀನಾದ ಗಡಿಯಲ್ಲಿ ಉಪಯೋಗಿಸುತ್ತಿದ್ದಾರೆ. ಇನ್ನೊಂದು ಮಹತ್ವದ ವಿಷಯವೆಂದರೆ, ಚೀನಾದ ಸೈನಿಕರಿಗೆ ಸ್ವಲ್ಪವೂ ಯುದ್ಧದ ಅನುಭವವಿಲ್ಲ. ಭಾರತೀಯ ಸೈನಿಕರು ಅನೇಕ ಯುದ್ಧಗಳನ್ನು ಮಾಡಿದ್ದಾರೆ. ಭಾರತೀಯ ಸೈನಿಕರು ಕಾಶ್ಮೀರದಲ್ಲಿಯೂ ಹೋರಾಡುತ್ತಿದ್ದಾರೆ. ಆದ್ದರಿಂದ ನಮಗೆ ಯುದ್ಧ ಮಾಡುವ ಅನುಭವ ಹೆಚ್ಚಿದೆ. ಚೀನಾ ೧೯೭೮ ರಲ್ಲಿ ವಿಯೇಟ್ನಾಮ್‌ನ ವಿರುದ್ಧ ಯುದ್ಧ ಮಾಡಿತ್ತು ಹಾಗೂ ಅದರಲ್ಲಿ ಚೀನಾಗೆ ವಿಯೇಟ್ನಾಮಅನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಚೀನಾದ ಎಲ್ಲ ನಾಗರಿಕರು ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಅನಂತರ ಅವರು ಹೊರಗೆ ಬರುತ್ತಾರೆ; ಏಕೆಂದರೆ ಚೀನಾ ನಗರೀಕರಣವಾಗಿರುವುದರಿಂದ ಸೇನೆಗೆ ಸೇರಲು ಯಾರೂ ಮುಂದೆ ಬರುವುದಿಲ್ಲ. ಅಮೇರಿಕಾದ ಸೈನ್ಯದಲ್ಲಿ ಶೇ. ೩೦ ರಷ್ಟು ಅಮೇರಿಕಾದ ಹೊರಗಿನ ಸೈನಿಕರಿದ್ದಾರೆ. ಒಂದು ವೇಳೆ ನಿಮಗೆ ಅಮೇರಿಕಾದ ಪೌರತ್ವ ಬೇಕಾಗಿದ್ದರೆ, ನೀವು ಸೈನ್ಯಕ್ಕೆ ಸೇರಬೇಕು. ಹಾಗೆ ಮಾಡಿದರೆ ಮಾತ್ರ ಶಾಶ್ವತ ಪೌರತ್ವವನ್ನು ನೀಡಲಾಗುವುದು. ಯುರೋಪ್‌ನಲ್ಲಿಯೂ ಅದೇ ರೀತಿ ನಡೆಯುತ್ತದೆ; ಏಕೆಂದರೆ ದೇಶದ ಆರ್ಥಿಕ ಪ್ರಗತಿ ಹೆಚ್ಚಾಗುತ್ತಾ ಹೋದಂತೆ ಯಾರೂ ಸೈನ್ಯಕ್ಕೆ ಸೇರಲು ಮುಂದೆ ಬರುವುದಿಲ್ಲ. ಈಗ ಚೀನಾದಲ್ಲಿ ಅದೇ ಪರಿಸ್ಥಿತಿ ಉದ್ಭವಿಸಿದೆ. ಚೀನಾದ ಸುಶಿಕ್ಷಿತರು ಸೇನೆಗೆ ಸೇರುವುದಿಲ್ಲ ಹಾಗೂ ಯಾರೇ ಬಂದರೂ ಅವರು ಒತ್ತಡಕ್ಕೆ ಮಣಿದು ಬರುತ್ತಾರೆ.

೬. ಭಾರತೀಯ ಸೈನ್ಯಾಧಿಕಾರಿಗಳು ಸ್ವತಃ ಮುಂದೆ ನಿಂತು ಹೋರಾಡುವುದರಿಂದ ಭಾರತೀಯ ಸೈನಿಕರು ಪರಾಕ್ರಮವನ್ನು ತೋರಿಸುತ್ತಾರೆ !

ಭಾರತದ ಯುವ ಅಧಿಕಾರಿಗಳು ಅತ್ಯಂತ ಶೂರರಾಗಿದ್ದಾರೆ. ಅವರು ಸೈನ್ಯದ ನೇತೃತ್ವವನ್ನು ಮಾಡುತ್ತಾರೆ. ಒಂದು ಸಂಶೋಧನೆಗನುಸಾರ, ಯಾವಾಗ ಸೈನಿಕರ ನೇತೃತ್ವ ಅವರ ಜೊತೆಗಿರುತ್ತದೆಯೋ, ಆಗ ಸೈನಿಕರು ಯುದ್ಧ ಮಾಡುತ್ತಾರೆ ಹಾಗೂ ಮಹಾಪರಾಕ್ರಮವನ್ನು ತೋರುತ್ತಾರೆ. ಈ ಹಿಂದೆ ಕುಪವಾಡಾದಲ್ಲಿ ಘರ್ಷಣೆಯಾಗಿತ್ತು, ಅದರಲ್ಲಿ ಕರ್ನಲ್ ಅನುರಾಗ ಇವರು ಪ್ರಾಣಾರ್ಪಣೆ ಮಾಡಿದರು. ಆಗ ಅವರು ಮುಂದೆ ನಿಂತು ಸೈನ್ಯದ ನೇತೃತ್ವ ವಹಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಅಫ್ಝಲಖಾನ್‌ನನ್ನು ವಧಿಸಲು ಸ್ವತಃ ಹೋಗಿದ್ದರು. ಅವರಿಗೆ ಹೋಗುವ ಅವಶ್ಯಕತೆಯೇನಿತ್ತು ? ಅವರು ಇಂದಿನ ರಾಜಕೀಯ ಪಕ್ಷಗಳಂತೆ ಯಾರಿಗಾದರೂ ಪತ್ರ ಬರೆದು ಅಫ್ಝಲಖಾನನನ್ನು ವಧಿಸಿ ಅದರ ವರದಿಯನ್ನು ನೀಡಿ, ಎಂದು ಹೇಳಬಹುದಿತ್ತು; ಆದರೆ ಅವರು ಹಾಗೆ ಮಾಡಲಿಲ್ಲ. ಯಾವಾಗ ಅವರ ಮಾವಳೆಯರಿಗೆ ತಮ್ಮ ನಾಯಕ ನಮ್ಮ ಜೊತೆಗಿದ್ದಾನೆ, ಎಂದು ತಿಳಿಯುತ್ತದೆಯೊ, ಆಗ ಅವರು ಪರಾಕ್ರಮವನ್ನು ತೋರಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಶಾಹಿಸ್ತೇಖಾನ್‌ನನ್ನು ವಧಿಸಲು ಕೂಡ ಸ್ವತಃ ಹೋಗಿದ್ದರು. ನಿಜವಾಗಿ ನೋಡಿದರೆ, ಅವರಲ್ಲಿ ಶಿವಾಜಿಯಂತೆ ಸರಿಸಮಾನ ಶೂರರಿದ್ದರು. ಅವರನ್ನು ಕೂಡ ಕಳುಹಿಸಬಹುದಿತ್ತು. ಸೈನಿಕರಿಗೆ ತಮ್ಮ ರಾಜ ತಮ್ಮೊಂದಿಗಿದ್ದು ನಮ್ಮಷ್ಟೇ ಅಪಾಯವನ್ನು ಎದುರಿಸಿ ಯುದ್ಧ ಮಾಡುತ್ತಿದ್ದಾನೆ ಎಂದು ತಿಳಿದಾಗ ಅವರು ತಮ್ಮ ಪರಾಕ್ರಮವನ್ನು ತೋರಿಸುತ್ತಾರೆ. ಈ ನೇತೃತ್ವವು ಭಾರತೀಯ ಸೈನ್ಯದಲ್ಲಿದೆ. ಚೀನಾದ ಸೈನ್ಯದಲ್ಲಿಲ್ಲ. ಆದ್ದರಿಂದ ನಾವು ಚೀನಾದ ಸೈನಿಕರಿಂದ ಬಹಳ ಮುಂದಿದ್ದೇವೆ. ಚೀನಾ ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿದರೆ, ಭಾರತೀಯ ಯುವ ಅಧಿಕಾರಿಗಳು ಕಾರ್ಗಿಲ್‌ನಲ್ಲಿ ತೋರಿಸಿದಂತಹ ಪರಾಕ್ರಮಗಳನ್ನು ಇಲ್ಲಿ ಸಹ ತೋರಿಸುವರು.

೭. ಚೀನಾ ಇತರ ದೇಶಗಳಿಗೆ ನುಸುಳಲು ಅಪಾರ ಹಣವನ್ನು ಖರ್ಚು ಮಾಡುತ್ತದೆ !

ಅಪಪ್ರಚಾರ ಯುದ್ಧದ ೪ ಉದ್ದೇಶಗಳು

ಅ. ಭಾರತದಲ್ಲಿನ ವಿವಿಧ ಘಟಕಗಳ ಮನಸ್ಸಿಗೆ ಆಘಾತ ಮಾಡಿ ಮಾನಸಿಕ ಒತ್ತಡ ಹೇರುವುದು. ಅಂದರೆ ಚೀನಾದ ಮಾತನ್ನು ಕೇಳುವರು.

ಆ. ಭಾರತ ಸರಕಾರ ಅದರ ಮೊದಲ ಘಟಕವಾಗಿದೆ. ಚೀನಾದ ನೇರ ವಿದೇಶಿ ಹೂಡಿಕೆಯನ್ನು ಭಾರತದಲ್ಲಿ ಆರಂಭಿಸಬೇಕು. ‘ಲಡಾಖ್‌ನಲ್ಲಿ ರಸ್ತೆ ನಿರ್ಮಾಣ ಮಾಡಬಾರದು ಹಾಗೂ ವಿಚಾರಣೆ ಮಾಡಬಾರದು, ಇತ್ಯಾದಿ ಚೀನಾಗೆ ಅನಿಸುತ್ತದೆ. ತದ್ವಿರುದ್ಧ ಚೀನಾದ ಮನಸ್ಸಿನಂತೆ ಮಾಡದೇ ನಾವು ನಮ್ಮ ರಾಷ್ಟ್ರೀಯ ಹಿತ ಕಾಪಾಡಲು ಪ್ರಯತ್ನಿಸಿದೆವು, ಅದರಿಂದ ಚೀನಾ ಹೊಡೆದಿರುವ ಈ ಬಾಣ ವ್ಯರ್ಥವಾಗಿದೆ.

ಇ. ಚೀನಾದ ಇನ್ನೊಂದು ಉದ್ದೇಶವೆಂದರೆ ಭಾರತೀಯ ಸೈನಿಕರ ಮನೋಬಲವನ್ನು ಕುಗ್ಗಿಸುವುದು ಹಾಗೂ ಅವರು ಯುದ್ಧ ಮಾಡದೆ ಹಿಂದೆ ಹೋಗುವ ಹಾಗೆ ಮಾಡುವುದು; ಆದರೆ ಹಾಗೆ ಮಾಡದೇ ಭಾರತೀಯ ಸೈನ್ಯವು ಯಾವುದೇ ರೀತಿಯ ಯುದ್ಧಕ್ಕೆ ಸಿದ್ಧವಾಗಿದೆ. ಆದ್ದರಿಂದ ಈ ಬಾಣವೂ ವ್ಯರ್ಥವಾಗಿದೆ.

ಈ. ಮೂರನೇ ಘಟಕವೆಂದರೆ ಭಾರತೀಯ ಪ್ರಸಾರಮಾಧ್ಯಮಗಳು. ಪ್ರಸಾರಮಾಧ್ಯಮಗಳಲ್ಲಿ ‘ಬ್ರೇಕಿಂಗ್ ನ್ಯೂಸ್ನಲ್ಲಿ ವಿವಿಧ ವಿಷಯಗಳನ್ನು ತೋರಿಸುವುದರಿಂದ ಅಪಪ್ರಚಾರವಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ವಿವಿಧ ಸುಳ್ಳು ವಾರ್ತೆಗಳು ಅಥವಾ ಧ್ವನಿಚಿತ್ರಮುದ್ರಿಕೆಗಳು ಪ್ರಸಾರವಾಗುತ್ತಿರುತ್ತಿದೆ. ಕೆಲವರು ಅದಕ್ಕೆ ಬಲಿಯಾಗುವುದು ಖಂಡಿತ. ಕೆಲವು ‘ನ್ಯೂಸ್ ಪೋರ್ಟಲ್ಸ್ (ವಾರ್ತೆಗಳ ಜಾಲತಾಣ) ಅಥವಾ ಕೆಲವು ಲೇಖಕರು ಚೀನಾದ ಹೇಳಿಕೆಯನ್ನು ಮಂಡಿಸುತ್ತಾರೆ.

ಕೆಲವು ದಿನಗಳ ಹಿಂದೆ ಅಮೇರಿಕಾದ ಒಂದು ವರದಿ ಪ್ರಕಾಶನವಾಯಿತು. ಅದಕ್ಕನುಸಾರ ಚೀನಾ ಅಮೇರಿಕಾದ ಮಾಧ್ಯಮಗಳನ್ನು ಖರೀದಿಸಲು ೬೦ ಕೋಟಿ ಡಾಲರ್ಸ್‌ನಷ್ಟು ಖರ್ಚು ಮಾಡಿತು. ಅಮೇರಿಕಾದ ‘ವಾಶಿಂಗ್ಟನ್ ಪೋಸ್ಟ್, ‘ನ್ಯೂಯಾರ್ಕ್ ಟೈಮ್ಸ್ ಇಂತಹ ಅನೇಕ ದೊಡ್ಡ ದಿನಪತ್ರಿಕೆಗಳಲ್ಲಿ ಅವರು ಜಾಹೀರಾತುಗಳನ್ನು ನೀಡಿ ಒತ್ತಡ ಹೇರಲು ಪ್ರಯತ್ನ ಮಾಡಿದರು. ಇದನ್ನು ಸ್ವತಃ ಅಮೇರಿಕಾ ಹೇಳಿದೆ. ಇದು ಯುರೋಪ್‌ನಲ್ಲಿಯೂ ನಡೆಯುತ್ತಿದೆ. ಇತ್ತೀಚೆಗೆ ಒಂದು ವಾರ್ತೆ ಬಂದಿತ್ತು. ಆಸ್ಟ್ರೇಲಿಯಾದ ಒಂದು ವರದಿಗನುಸಾರ ಚೀನಾ ಆಸ್ಟ್ರೇಲಿಯಾದಲ್ಲಿ ವಿವಿಧ ಸ್ತರಗಳಲ್ಲಿ ನುಸುಳಲು ಪ್ರಯತ್ನಿಸುತ್ತಿದೆ.

೮. ರಾಜಕೀಯ ಪಕ್ಷ, ಮಾಧ್ಯಮಗಳು, ತಥಾಕಥಿತ ತಜ್ಞರಿಂದಾಗುವ ಅಪಪ್ರಚಾರವನ್ನು ಹೇಗೆ ಎದುರಿಸುವುದು ?

ಚೀನಾ ಭಾರತದ ರಾಜಕೀಯ ಪಕ್ಷ, ಮಾಧ್ಯಮಗಳು, ತಥಾಕಥಿತ ತಜ್ಞರು ಇತ್ಯಾದಿಗಳಲ್ಲಿ ನುಸುಳಲು ಪ್ರಯತ್ನಿಸುತ್ತಿದೆ. ಅವುಗಳ ಮೂಲಕ ನಮಗೆ ಮಾನಸಿಕ ಒತ್ತಡ ತರಲು ಪ್ರಯತ್ನಿಸುತ್ತಿದೆ. ನಾವು ಇದೆಲ್ಲವನ್ನು ಹೇಗೆ ಎದುರಿಸುವುದು ? ಎಂಬುದನ್ನು ನೋಡೋಣ.

ಈ ಅಪಪ್ರಚಾರ ಯುದ್ಧದಲ್ಲಿ ನಾವೆಲ್ಲರೂ ಸೈನಿಕರಾಗಿದ್ದೇವೆ. ಸ್ವಾತಂತ್ರ್ಯವೀರ ಸಾವರಕರ್ ಇವರು ‘ಭಾರತವನ್ನು ಸೈನಿಕೀಕರಣ ಮಾಡುವ ಅವಶ್ಯಕತೆಯಿದೆ, ಎಂದು ಹೇಳಿದ್ದರು, ಅಂದರೆ ಪ್ರತಿಯೊಬ್ಬ ನಾಗರಿಕನೂ ಸೈನಿಕನಾಗಬೇಕು. ಸೈನಿಕನೆಂದರೆ ಕೈಯಲ್ಲಿ ಬಂದೂಕು ಹಿಡಿದುಕೊಂಡು ಪುಣೆ-ಮುಂಬಯಿಯಲ್ಲಿ ತಿರುಗಾಡುವ ಅವಶ್ಯಕತೆಯಿಲ್ಲ. ನಾವು ಯಾವುದಾದರೂ ದಿನನಪತ್ರಿಕೆ, ವಾರ್ತಾವಾಹಿನಿ ಅಥವಾ ಸಾಮಾಜಿಕ ಮಾಧ್ಯಮಗಳ  (ಸೋಶಿಯಲ್ ಮೀಡಿಯಾಗಳಿಂದ) ಮೇಲೆ ಗಮನವಿಡಬೇಕು. ಯಾವುದೇ ಅಪಪ್ರಚಾರವಾಗುತ್ತಿದ್ದರೆ, ಅದನ್ನು ಮುಂದೆ ಹೋಗಲು ಬಿಡಬೇಡಿ. ವಾಸ್ತವವನ್ನು ಮಂಡಿಸಿದರೆ ನಾವು ಸಹ ಚೆನ್ನಾಗಿ ಹೇಳಿ, ದೇಶ ರಕ್ಷಣೆ ಮಾಡಿದಂತಾಗುತ್ತದೆ.

ಇಂದು ಅಂದಾಜು ಶೇ. ೭೦ ರಿಂದ ೮೦ ರಷ್ಟು ಭಾರತೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲಿ ಯಾವುದೇ ತಪ್ಪು ವಾರ್ತೆ ಬಂದರೆ, ‘ಯೋಗ್ಯ ವಾರ್ತೆ ಏನು ? ಎಂಬುದನ್ನು ಎಲ್ಲರಿಗೂ ಹೇಳಲು ಪ್ರಯತ್ನಿಸಿ. ತಥಾಕಥಿತ ಲೇಖಕರ ಲೇಖನ ಅಯೋಗ್ಯವೆನಿಸಿದರೆ, ಅದಕ್ಕೆ ವೈಚಾರಿಕ ಪ್ರತ್ಯುತ್ತರವನ್ನು ನೀಡಿರಿ, ಇದರಿಂದ ಇತರ ವಾಚಕರಿಗೂ ನಿಜವೇನೆಂದು ತಿಳಿಯುವುದು. ಮಾಧ್ಯಮಗಳಲ್ಲಿ ಒಂದು ಪ್ರಸಿದ್ಧ ಗಾದೆಯಿದೆ, ‘ಮನುಷ್ಯನಿಗೆ ನಾಯಿ ಕಚ್ಚಿದರೆ, ಅದೊಂದು ವಾರ್ತೆಯಾಗುವುದಿಲ್ಲ; ಆದರೆ ನಾಯಿಗೆ ಮನುಷ್ಯ ಕಚ್ಚಿದರೆ, ಅದು ವಾರ್ತೆಯಾಗುತ್ತದೆ. ಆದ್ದರಿಂದ ಇಂದು ಮಾಧ್ಯಮಗಳಲ್ಲಿನ ಎಲ್ಲ ಮಹತ್ವದ ವಾರ್ತೆಗಳು ಬಲಾತ್ಕಾರ, ಹಿಂಸಾಚಾರ, ಕಳ್ಳತನ, ಅಪಘಾತ ಇವುಗಳ ಬಗ್ಗೆ ಇರುತ್ತವೆ. ನಕಾರಾತ್ಮಕ  ವಾರ್ತೆಗಳು ದೊಡ್ಡದಾಗಿರುತ್ತವೆ ಹಾಗೂ ಇದರಿಂದ ನಮಗೆ ದೇಶದಲ್ಲಿ ಏನಾಗುತ್ತಿದೆ ? ಎನ್ನುವ ಪ್ರಶ್ನೆ ನಿರ್ಮಾಣವಾಗುತ್ತದೆ. ದೇಶದಲ್ಲಿ ಅನೇಕ ಒಳ್ಳೆಯ ವಿಷಯಗಳೂ ನಡೆಯುತ್ತವೆ. ಆದ್ದರಿಂದ ಪತ್ರಕರ್ತ ಮಿತ್ರರಿಗೆ ಸಕಾರಾತ್ಮಕ ಹಾಗೂ ಒಳ್ಳೆಯ ವಾರ್ತೆಗಳನ್ನು ತೋರಿಸಲು ಹೇಳಿರಿ.

೯. ಚೀನಾದ ಅಪಪ್ರಚಾರ ಯುದ್ಧಕ್ಕೆ ‘ಮುಯ್ಯಿಗೆ ಮುಯ್ಯಿ ಎನ್ನುವ ಉತ್ತರವನ್ನು ನೀಡಿ ದೇಶಸೇವೆಯನ್ನು ಮಾಡಿ !

ಚೀನಾ ಆರಂಭಿಸಿದ ಅಪಪ್ರಚಾರ ಯುದ್ಧದಿಂದ ಭಾರತೀಯ ಸೈನಿಕರ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಕೇಂದ್ರ ಸರಕಾರದ ಮಟ್ಟದಲ್ಲಿ ಅವರಿಗೆ ಸ್ವಲ್ಪವೂ ಯಶಸ್ಸು ಸಿಕ್ಕಿಲ್ಲ; ಆದರೆ ಮಾಧ್ಯಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಗೂ ಜನಸಾಮಾನ್ಯರ ಮಟ್ಟದಲ್ಲಿ ಅವರಿಗೆ ಖಂಡಿತ ಯಶಸ್ಸು ಸಿಗುತ್ತಿದೆ. ಅಪಪ್ರಚಾರ ಯುದ್ಧದಲ್ಲಿ ಎರಡು ವಿಧಗಳಿವೆ. ಒಂದು ‘ಡಿಫೆನ್ಸಿವ್ ಅಂದರೆ ತನ್ನ ಸರಕಾರ, ಮಾಧ್ಯಮಗಳು, ಸೈನ್ಯ ಮತ್ತು ನಾಗರಿಕರ ಮನೋಬಲದ ರಕ್ಷಣೆ ಮಾಡುವುದು, ಇನ್ನೊಂದು ‘ಓಫೆನ್ಸಿವ್ (OFFENSIVE)  ಅಂದರೆ ಚೀನಾ ನಮ್ಮ ಮಾಧ್ಯಮಗಳಲ್ಲಿ ನುಸುಳುತ್ತಿದೆ, ಅಂತಹ ನುಸುಳುವಿಕೆಯನ್ನು ನಾವು ಚೀನಾದ ಮಾಧ್ಯಮಗಳಲ್ಲಿ ಮತ್ತು ನಾಗರಿಕರ ಮನಸ್ಸಿನಲ್ಲಿಯೂ ಮಾಡಬೇಕು. ಇಂದು ಭಾರತದಲ್ಲಿ ಚೀನಾದ ಅನೇಕ ನಾಗರಿಕರಿದ್ದಾರೆ. ಅವರ ಮನಸ್ಸಿನಲ್ಲಿ ನಾವು ನುಸುಳಬೇಕು. ಭಾರತದಿಂದ ಚೀನಾಗೆ ಹೋಗುವವರಿಗೆ ಅಲ್ಲಿ ಭಾರತದ ವಿಷಯದಲ್ಲಿ ಸಕಾರಾತ್ಮಕವಾಗಿ ಮಾತನಾಡಲು ಹೇಳಬೇಕು. ಅವರ ಮನಸ್ಸಿನಲ್ಲಿ ಸಂದೇಹ ಮೂಡಿಸಬೇಕು, ಅಂದರೆ, ಹಾಂಗ್‌ಕಾಂಗ್‌ನಲ್ಲಿ ಏನು ನಡೆಯುತ್ತಿದೆಯೋ, ಅದು ಸರಿಯಲ್ಲ. ನಿಮ್ಮನ್ನು ಬಲವಂತವಾಗಿ ಸೈನ್ಯಕ್ಕೆ ಕಳುಹಿಸುತ್ತಾರೆ. ನಮ್ಮಲ್ಲಿ ಹಾಗಿಲ್ಲ. ನೀವು ನಿಮ್ಮ ಭವಿಷ್ಯದ ವಿಚಾರ ಮಾಡಬೇಕು. ಚೀನಾ ಸರಕಾರ ತನ್ನ ನಾಗರಿಕರ ಮೇಲೆ ತುಂಬಾ ದೌರ್ಜನ್ಯ ಮಾಡುತ್ತಿದೆ, ಎಂಬುದು ನಮಗೆ ತಿಳಿದಿರಬೇಕು. ಚೀನಾದಲ್ಲಿ ‘ಸೋಶಿಯಲ್ ಮಿಡಿಯಾ ಆಪ್ ಇಲ್ಲ. ಆದ್ದರಿಂದ ಚೀನಾದೊಳಗೆ ನುಸುಳಲು ಚೀನಾ ಭಾಷೆ ಕಲಿಯ ಬೇಕಾಗುವುದು. ಚೀನಾದ ಅನೇಕ ಜನರಿಗೆ ಈಗ ಆಂಗ್ಲ ಭಾಷೆ ಬರುತ್ತದೆ. ಯಾವ ರೀತಿ ಚೀನಾ ಅಥವಾ ಚೀನಾಪ್ರೇಮಿ ಲೇಖಕರು ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬಂದು ಲೇಖನಗಳನ್ನು ಬರೆಯುತ್ತಾರೆ. ಹಾಗೆಯೇ ನಾವು ಸಹ ಮಾಡಬೇಕು. ಹೀಗೆ ದೇಶ ಸೇವೆ ಮಾಡಿ ನಾವು ಈ ಅಪಪ್ರಚಾರ ಯುದ್ಧವನ್ನು ಚೀನಾಗೆ ತಲುಪಿಸೋಣ. ಟಿಬೇಟ್ ನಲ್ಲಿ ಅಥವಾ ಚೀನಾದಲ್ಲಿ ಉಯಿಘರ್ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆ ವಿಷಯದ ‘ಲಿಂಕ್ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕು. ಚೀನಾ ಪಾಕಿಸ್ತಾನವನ್ನು ಹೇಗೆ ಸಾಲದಲ್ಲಿ ಮುಳುಗಿಸಿತು, ಎನ್ನುವ ವಿಷಯವನ್ನು ಪ್ರಸಾರ ಮಾಡಿರಿ, ಅಂದರೆ ಚೀನಾದ ಆಂಗ್ಲ ಮಾಧ್ಯಮಗಳಲ್ಲಿ ಚೀನಾದ ನಕಾರಾತ್ಮಕ ವಿಷಯಗಳನ್ನು ಬೆಳಕಿಗೆ ತನ್ನಿ. ಅದರಿಂದ ಭಾರತ ಕೂಡ ಅಪಪ್ರಚಾರ ಮಾಡಲು ಸಾಧ್ಯವಿದೆ, ಎಂಬುದು ಚೀನಾಗೆ ತಿಳಿಯುತ್ತದೆ. ಸಂಕ್ಷಿಪ್ತದಲ್ಲಿ, ಚೀನಾದ ವಿರುದ್ಧ ಆಕ್ರಮಕ ಅಪ್ರಚಾರ ಮಾಡಿ ಪ್ರತ್ಯುತ್ತರ ನೀಡಬೇಕು.  – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ