ಅಮೇರಿಕಾ, ಯುರೋಪಿಯನ್ ಒಕ್ಕೂಟ ಮತ್ತು ಅನೇಕ ದೇಶಗಳು ಚೀನಾದ ವಿರುದ್ಧ ಒಗ್ಗೂಡುವಿಕೆ ಮತ್ತು ಚೀನಾಗೆ ಆಕ್ರಮಣಕಾರಿ ಪ್ರತ್ಯುತ್ತರ ನೀಡಲು ಭಾರತದ ಸಿದ್ಧತೆ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಚೀನಾದ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಮೇರಿಕ ಉತ್ಸುಕ !

ಅಮೇರಿಕದ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಇವರು ಕೊರೋನಾವನ್ನು ‘ಚೀನಾ ವಿಷಾಣು ಎಂದು ಕರೆದಿದ್ದು, ‘ಚೀನಾದಿಂದಾಗಿ ೧ ಲಕ್ಷಕ್ಕಿಂತ ಹೆಚ್ಚು ಅಮೇರಿಕಾದ ನಾಗರಿಕರು ಮರಣಹೊಂದಿದ್ದಾರೆ, ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಅವರು ಹೇಳುವುದರಲ್ಲಿ ಸಾಕಷ್ಟು ಸತ್ಯಾಂಶವೂ ಇದೆ. ಮೊದಲ ಮತ್ತು ಎರಡನೇಯ ಮಹಾಯುದ್ಧಗಳಲ್ಲಿ ಆಗಿರುವುದಕ್ಕಿಂತ ಅಧಿಕ ಹಾನಿ ಈಗ ಆಗಿದೆ. ಇದರಿಂದ ಅಮೇರಿಕದ ಜನರ ಮನಸ್ಸಿನಲ್ಲಿ ಚೀನಾದ ವಿಷಯದಲ್ಲಿ ಆಕ್ರೋಶವಿದೆ. ಅಮೇರಿಕದ ಎರಡು ದೊಡ್ಡ ರಾಜಕೀಯ ಪಕ್ಷಗಳಾದ ಡೆಮೊಕ್ರೆಟಿಕ್ ಮತ್ತು ರಿಪಬ್ಲಿಕ್ ಇವೆರಡೂ ಒಗ್ಗಟ್ಟಿನಿಂದ ಚೀನಾದ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಚಿಂತನೆ ನಡೆಸುತ್ತಿವೆ. ಮೊದಲನೇಯದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಕೈಗೊಂಬೆಯಾಗಿತ್ತು. ಆದರೆ ಈಗ ಅಮೇರಿಕ ಅದರೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ. ಅಮೇರಿಕವು ಒಂದು ‘ಮಾಸ್ಟರ್ ಪ್ಲಾನ್ ಸಿದ್ಧಗೊಳಿಸುತ್ತಿದ್ದು, ತನ್ಮೂಲಕ ಚೀನಾ ಕಂಪನಿಗಳ ಮೇಲೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ. ಚೀನಾದಲ್ಲಿರುವ ಅಮೇರಿಕದ ಉದ್ಯೋಗಗಳನ್ನು ಭಾರತ ಅಥವಾ ಇತರ ದೇಶಗಳಿಗೆ ಸ್ಥಳಾಂತರಿಸುವ ಪ್ರಯತ್ನಗಳು ಪ್ರಾರಂಭವಾಗಿವೆ.

೨. ಸಂಪೂರ್ಣ ವಿಶ್ವವು ಚೀನಾದ ವಿರುದ್ಧ ಒಗ್ಗೂಡಿರುವುದರಿಂದ ಚೀನಾದ ಅರ್ಥವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ !

‘ಯುರೋಪಿಯನ್ ಒಕ್ಕೂಟವೂ ಚೀನಾದ ಮೇಲೆ ಕ್ರಮ ಕೈಗೊಳ್ಳುತ್ತಿದೆ. ‘ಚೀನಾದ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯು ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಮುಖ್ಯವಾಗಿ ಕೊರೋನಾ ಹೇಗೆ ಹಬ್ಬಿತು, ಎನ್ನುವುದು ತಿಳಿಯುವುದು, ಎಂದು ಅದಕ್ಕೆ ಅನಿಸುತ್ತದೆ. ‘ಈ ವಿಷಾಣು ಚೀನಾದಲ್ಲಿ ಹರಡದೇ ವಿಶ್ವಾದ್ಯಂತ ಎಲ್ಲೆಡೆ ಹಬ್ಬಿತು. ಆದುದರಿಂದ ಚೀನಾದ ವಿಚಾರಣೆಯನ್ನು ಮಾಡಿ, ಎಲ್ಲ ದೇಶಗಳಿಗೆ ಆಗಿರುವ ಹಾನಿಯನ್ನು ಭರಿಸುವಂತೆ ಚೀನಾದ ಮೇಲೆ ಒತ್ತಡ ಹೇರಬೇಕು, ಎಂದು ೭೨ ದೇಶಗಳು ಹೇಳಿವೆ. ‘ಚೀನಾದಿಂದ ಬರುವ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಎಂಬ ಬೇಡಿಕೆಯ ಧ್ವನಿಯು ಗಟ್ಟಿಯಾಗುತ್ತಿದೆ, ಆದರೆ ಇದು ಶೀಘ್ರವಾಗುವ ವಿಷಯವಲ್ಲ; ಏಕೆಂದರೆ ಜಗತ್ತಿನ ಸುಮಾರು ಶೇ. ೨೦ ರಷ್ಟು ಉತ್ಪಾದನೆಗಳು ಚೀನಾದಲ್ಲಿ ತಯಾರಾಗುತ್ತವೆ. ಆದುದರಿಂದ ಚೀನಾ ವಿಶ್ವದ ‘ಮ್ಯಾನ್ಯುಫ್ಯಾಕ್ಚರಿಂಗ್ ಹಬ್ (ಉತ್ಪಾದನೆಗಳ ಕೇಂದ್ರ) ಆಗಿದೆ. ಹೀಗಿರುವಾಗಲೂ ಅಮೇರಿಕಾ, ಏಶಿಯಾ, ಆಫ್ರಿಕಾಗಳೊಂದಿಗೆ ಇಡೀ ವಿಶ್ವದಲ್ಲಿ ಚೀನಾದ ವಿರುದ್ಧ ಆಕ್ರೋಶ ಮೂಡಿದೆ. ಎಲ್ಲ ದೇಶಗಳು ತಾವೇ ಏನಾದರೂ ಮಾಡಲು ಪ್ರಯತ್ನಿಸುತ್ತಿವೆ. ಇದರಿಂದ ಚೀನಾದ ಅರ್ಥವ್ಯವಸ್ಥೆಗೆ ಧಕ್ಕೆಯಾಗಲಿದೆ.

೩. ಆರ್ಥಿಕ ಬಲದಿಂದ ಇತರ ದೇಶಗಳ ಮೇಲೆ ಚೀನಾದ ದರ್ಪ !

ಚೀನಾ ತನ್ನ ಆರ್ಥಿಕ ಬಲದಿಂದ ಇತರ ದೇಶಗಳ ಮೇಲೆ ದರ್ಪ ತೋರಲು ಪ್ರಯತ್ನಿಸುತ್ತಿದೆ. ಚೀನಿ ವಿಷಾಣುವಿನ ಸಂದರ್ಭದಲ್ಲಿ ಚೀನಾ ದೇಶದ ವಿಚಾರಣೆಯನ್ನು ಮಾಡಬೇಕು ಎಂದು ಆಸ್ಟ್ರೇಲಿಯಾ ಹೇಳಿದಾಕ್ಷಣ, ‘ಹಾಗಿದ್ದರೆ, ನಾವು ನಿಮ್ಮಿಂದ ಆಮದು ಮಾಡಿಕೊಳ್ಳುವ ಎರಡು ದೊಡ್ಡ ಸಾಮಗ್ರಿಗಳನ್ನು ಸ್ಥಗಿತಗೊಳಿಸುತ್ತೇವೆ, ಎಂದು ಚೀನಾ ಬೆದರಿಕೆಯೊಡ್ಡಿತು. ಆದಾಗ್ಯೂ ಆಸ್ಟ್ರೇಲಿಯಾ ಹೆದರಲಿಲ್ಲ. ಚೀನಾವು ತೈವಾನ ತಮ್ಮದೆಂದು ಹೇಳುತ್ತದೆ. ಚೀನಾದ ಒಬ್ಬ ಹಿರಿಯ ಸೈನ್ಯಾಧಿಕಾರಿಯು ‘ನಾವು ತೈವಾನ ಮೇಲೆ ಆಕ್ರಮಣವನ್ನು ನಡೆಸಬಲ್ಲೆವು, ಎನ್ನುವ ಎಚ್ಚರಿಕೆಯನ್ನು ನೀಡಿದ್ದಾನೆ. ಇದಕ್ಕೆ ಅಮೇರಿಕ ಅಂತಹ ಪರಿಸ್ಥಿತಿಯಲ್ಲಿ ತೈವಾನಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಿದೆ. ಈಗ ತೈವಾನವೂ ಚೀನಾವನ್ನು ವಿರೋಧಿಸುತ್ತಿದೆ. ಜಪಾನ ಕೂಡ ತನ್ನ ಉದ್ಯೋಗಗಳನ್ನು ಚೀನಾದಿಂದ ಸ್ಥಳಾಂತರಿಸಬಹುದು. ಆದರೆ ಅದಕ್ಕೆ ಸಮಯ ಬೇಕಾಗುವುದು; ಆದರೆ ಜಪಾನ ಅದನ್ನು ಖಂಡಿತವಾಗಿಯೂ ಮಾಡುತ್ತದೆ. ಇದರಲ್ಲಿ ಸಂಶಯವೇ ಇಲ್ಲ.

೪. ಚೀನಾ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಚೀನಾ ಕೊರೋನಾ ವಿಷಾಣು ಹಬ್ಬಿಸಿತೇ ?

‘ಚೀನಾದಲ್ಲಿ ನಡೆಯುವ ಆಂತರಿಕ ಬೆಳವಣಿಗೆಗಳಿಂದ ಚೀನಾದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಚೀನಾ ಈ ಕೊರೊನಾ ವಿಷಾಣುವನ್ನು ಹಬ್ಬಿಸಿರಬೇಕು, ಎನ್ನುವ ಮಾತು ಕೇಳಿಬರುತ್ತಿದೆ. ಇದರಲ್ಲಿ ಬಹಳ ಸತ್ಯಾಂಶವಿದೆ. ಇಂದು ಚೀನಾದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಚೀನಾದ ಜನರಲ್ಲಿ ಅಸಮಾಧಾನವಿದೆ; ಆದರೆ ಚೀನಾ ಸರಕಾರ ಎಷ್ಟು ಬಲಿಷ್ಠವಾಗಿದೆಯೆಂದರೆ, ಅಲ್ಲಿ ಭಾರತದಂತೆ ಚಳುವಳಿ ಇತ್ಯಾದಿ ಎಂದಿಗೂ ನಡೆಯುವುದಿಲ್ಲ. ಚೀನಾದ ಅರ್ಥವ್ಯವಸ್ಥೆಗೆ ಧಕ್ಕೆಯಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ; ಏಕೆಂದರೆ ಎಲ್ಲೆಡೆ ‘ಚೀನಾದ ವಸ್ತುಗಳನ್ನು ನಿಷೇಧಿಸಿ, ಎನ್ನುವ  ಕೂಗೆದ್ದಿದೆ.

೫. ಚೀನಾದ ಕೃತ್ಯಗಳಿಗೆ ಪ್ರತ್ಯುತ್ತರವನ್ನು ನೀಡಲು ಭಾರತೀಯ ಸೈನ್ಯವು ಸಿದ್ಧವಾಗಿದೆ !

ಈ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಪರಿಸ್ಥಿತಿ ಹೇಗಿದೆ ? ಸದ್ಯಕ್ಕೆ ಚೀನಾ ಲಡಾಖನಲ್ಲಿ ೨ – ೩ ಸ್ಥಳಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಿದೆ. ಅಂದರೆ ಅದಕ್ಕೆ ಭಾರತೀಯ ಸೈನ್ಯ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದೆ. ನಾವು ಯಾವುದೇ ಕಾರಣಕ್ಕಾಗಿ ಹಿಂದೆ ಸರಿಯಬಾರದು. ಯಾವ ರೀತಿ ಡೋಕ್ಲಾಮ್‌ನಲ್ಲಿ ನಾವು ಚೀನಾವನ್ನು ಹಿಂದಕ್ಕೆ ಸರಿಯುವಂತೆ ಮಾಡಿದೆವೋ, ಹಾಗೆಯೇ ಈ ಸಲವೂ ಮಾಡಬೇಕು. ‘ಚೀನಾ ೫ ರಿಂದ ೬ ಸಾವಿರ ಸೈನಿಕರನ್ನು ಲಡಾಖ ಪ್ರದೇಶದಲ್ಲಿ ನೇಮಿಸಿದೆ, ಎಂದು ಹೇಳಲಾಗುತ್ತಿದೆ. ಕೆಲವು ಸೈನಿಕರನ್ನು ಸಿಕ್ಕಿಂ ವಿರುದ್ಧ ನಾಕುಲಾದಲ್ಲಿಯೂ ನೇಮಿಸಿದೆ. ಈ ಪ್ರದೇಶದಲ್ಲಿ ಯುದ್ಧ ಮಾಡುವುದು ಸುಲಭವಲ್ಲ. ೧೯೬೭ ನೇ ಇಸವಿಯಲ್ಲಿ ಚೀನಾದೊಂದಿಗೆ ಭಾರತದ ಸಂಘರ್ಷವಾಗಿತ್ತು. ಆಗಲೂ ೧೦೦ ಭಾರತೀಯ ಸೈನಿಕರು ಮರಣ ಹೊಂದಿದ್ದರು. ತದನಂತರ ೧೯೮೬ ರಲ್ಲಿ ಅರುಣಾಚಲ ಪ್ರದೇಶದ ಸಂದ್ಗೋಂಚ್ಯುದಲ್ಲಿಯೂ ಭಾರತವು ಚೀನಾಕ್ಕೆ ಪ್ರತ್ಯುತ್ತರವನ್ನು ನೀಡಿತ್ತು. ಡೋಕ್ಲಾಮ್‌ನಲ್ಲಿಯೂ ಭಾರತವು ಚೀನಾಗೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಇದರಿಂದ ಚೀನಾ ಹೆಚ್ಚಿನ ಸೈನ್ಯವನ್ನು ತಂದರೆ, ಭಾರತವೂ ಹೆಚ್ಚುವರಿ ಸೈನ್ಯವನ್ನು ತರಬೇಕಾಗಬಹುದು. ಅಂದರೆ ನಾವು ಖಂಡಿತ ತರುವವರೇ ಇದ್ದೇವೆ. ತದನಂತರ ಚೀನಾ ಆಕ್ರಮಣಕಾರಿ ಕ್ರಮವನ್ನು ಕೈಕೊಂಡರೆ, ನಾವೂ ಕೂಡಲೇ ಪ್ರತ್ಯುತ್ತರವನ್ನು ನೀಡಬೇಕಾಗುವುದು. ಇದಕ್ಕಾಗಿ ಭಾರತೀಯ ಸೈನ್ಯ ಸಿದ್ಧವಾಗಿದೆ.

೬.ಭಾರತೀಯ ಸೈನ್ಯವು ಚೀನಾದೊಂದಿಗೆ ಹೋರಾಡಲು ಸಕ್ಷಮವಾಗಿರುವುದರಿಂದ ಹಿಂದಕ್ಕೆ ಸರಿಯಬಾರದು !

ಕೆಲವು ತಥಾಕಥಿತ ವಿಚಾರವಂತರು ಚೀನಾದ ಸೈನ್ಯಬಲ ಬಹಳ ಹೆಚ್ಚಿದೆ, ಅವರ ಯುದ್ಧವಾಹನಗಳೂ ಅಧಿಕವಾಗಿವೆ ಎಂದು ಹೇಳುತ್ತಾ, ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಚಿಂತಿಸಬಾರದು. ಭಾರತೀಯ ಸೈನ್ಯಕ್ಕೆ ಭಯೋತ್ಪಾದಕರ ವಿರುದ್ಧ ಹೋರಾಡುವ ಒಳ್ಳೆಯ ಅನುಭವವಿದೆ. ಇದರಿಂದ ಅವರು ಚೀನಾಗಿಂತ ಒಳ್ಳೆಯ ಕಾರ್ಯವನ್ನು ನಿರ್ವಹಿಸುವರು. ಪರ್ವತಗಳ ಪ್ರದೇಶದಲ್ಲಿ ನಮ್ಮ ರಕ್ಷಣೆಯನ್ನು ಸುಲಭವಾಗಿ ಮಾಡಿಕೊಳ್ಳಲು ನಮಗೆ ತಿಳಿದಿದೆ. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಸ್ವರಾಜ್ಯವನ್ನು ಪರ್ವತಪ್ರದೇಶಗಳಲ್ಲಿ ಅಥವಾ ಕೋಟೆಗಳಲ್ಲಿ ಮಾಡಿದ್ದರು; ಏಕೆಂದರೆ ಅಲ್ಲಿ ಮೊಗಲ ಸೈನ್ಯದಿಂದ ರಕ್ಷಣೆಯನ್ನು ಪಡೆಯುವುದು ಸುಲಭವಾಗಿತ್ತು. ಈಗಲೂ ಅದನ್ನೇ ಮಾಡಬಹುದು. ಭಾರತೀಯ ನೌಕಾಪಡೆಯು ಚೀನಾವನ್ನು ಮಲಕ್ಕಾದ ಜಲಸಂಧಿಯಲ್ಲಿ ತಡೆಯಬಹುದು. ಭಾರತೀಯ ವಾಯುಪಡೆಯ ಕ್ಷಮತೆ ಚೆನ್ನಾಗಿದೆ. ಇದರಿಂದ ನಾವು ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದು; ಆದರೆ ನಾವು ಅಲ್ಲಿಂದ ಹಿಮ್ಮೆಟ್ಟಬಾರದು, ಎನ್ನುವುದು ಮಹತ್ವದ್ದಾಗಿದೆ.

೭. ೧೩೦ ಕೋಟಿ ಜನರು ನಿರ್ಧರಿಸಿದರೆ ಚೀನಾವನ್ನು ಸೋಲಿಸುವುದು ಸುಲಭ ಸಾಧ್ಯ !

ಶೇರು ಮಾರುಕಟ್ಟೆಯಲ್ಲಿ ಏರಿಳಿತಗಳಾಗಿದ್ದರಿಂದ ಬೆಲೆ ಕೆಳಗಿಳಿದಿರುವ ಸಂದರ್ಭದಲ್ಲಿ ಚೀನಾ ಭಾರತಕ್ಕೆ ಸಾಲ ನೀಡುವ ‘ಹೆಚ್.ಡಿ.ಎಫ್.ಸಿ. ಸಂಸ್ಥೆಯನ್ನು ಖರೀದಿಸಲು ಪ್ರಯತ್ನಿಸಿತು; ಆಗ ಸರಕಾರವು ಸೂಕ್ತ ನಿರ್ಣಯವನ್ನು ತೆಗೆದುಕೊಂಡಿತು. ‘ಎಲ್ಲಿಯವರೆಗೆ ಕೊರೋನಾದ ಕೆಟ್ಟ ದಿನಗಳು ಹೋಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಕಂಪನಿಯ ಸಮಭಾಗವನ್ನು (ಶೇರುಗಳನ್ನು) ಪಕ್ಕದ ರಾಷ್ಟ್ರಗಳು ಖರೀದಿಸದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಭಾರತದಲ್ಲಿ ‘ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ಚಳುವಳಿಯೂ ಪ್ರಾರಂಭವಾಗಿದೆ. ‘ಸಾಮ ದೂರದರ್ಶನ ವಾಹಿನಿಯು ಚೀನಾದ ವಸ್ತುಗಳಿಗೆ ಬಹಿಷ್ಕಾರ ಹಾಕುವ ಚಳುವಳಿಯನ್ನು ಪ್ರಾರಂಭಿಸಿದೆ. ನಮ್ಮ ಸಂಚಾರವಾಣಿಯಲ್ಲಿರುವ ಚೀನಾದ ಅನೇಕ ‘ಅಪ್ಲಿಕೇಶನ್ಗಳನ್ನು ನಾವು ತಕ್ಷಣವೇ ತೆಗೆದು ಹಾಕಬಹುದು. ಚೀನಾದ ಅಪ್ಲಿಕೇಶನ್‌ಗಳಿಗೆ ಅನೇಕ ಪರ್ಯಾಯಗಳಿವೆ. ಅವುಗಳನ್ನು ಬಹಿಷ್ಕರಿಸಿದರೆ ನಮಗೆ ಯಾವುದೇ ಹಾನಿಯಿಲ್ಲ. ಹಬ್ಬಕ್ಕೆ ಬೇಕಾಗುವ ಸಾಮಗ್ರಿ, ವಿಶೇಷವಾಗಿ ದೀಪಾವಳಿ ಹಬ್ಬಕ್ಕೆ ಬೇಕಾಗುವ ಪಟಾಕಿ, ಆಟಿಗೆ ವಸ್ತುಗಳು, ಅಲಂಕಾರಿಕ ಸಾಮಗ್ರಿ, ರಾಖಿಗಳಂತಹ ಚೀನಾದ ವಸ್ತುಗಳನ್ನು ನಾವು ಖಂಡಿತವಾಗಿಯೂ ನಿಷೇಧಿಸಬಹುದು. ಭಾರತದ ೧೩೦ ಕೋಟಿ ಜನರು ನಿರ್ಧರಿಸಿದರೆ ಚೀನಾಗೆ ಖಂಡಿತವಾಗಿಯೂ ದೊಡ್ಡ ಹೊಡೆತ ಬೀಳುವುದು.

೮. ಚೀನಾದ ಸಾಮಗ್ರಿಗಳನ್ನು ಬಹಿಷ್ಕರಿಸಿದರೆ ಚೀನಾವು ಭಾರತದ ಮೇಲೆ ದರ್ಪ ತೋರಲಾರದು

ಚೀನಾ ಭಾರತದ ವಿರುದ್ಧ ಆರ್ಥಿಕ ಹೋರಾಟವನ್ನು ನಡೆಸುತ್ತಿದೆ. ಚೀನಾದ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂದು ನಾವು ಅವುಗಳನ್ನು ಖರೀದಿಸುತ್ತೇವೆ. ಚೀನಾದ ಸಾಮಗ್ರಿಗಳನ್ನು ಖರೀದಿಸುವುದರಿಂದ ಚೀನಾದ ಅರ್ಥವ್ಯವಸ್ಥೆ ಬಲಿಷ್ಠವಾಗುತ್ತದೆ. ಆ ಭರವಸೆಯ ಮೇಲೆ ಚೀನಾ ಲಡಾಖನಲ್ಲಿ ದರ್ಪ ತೋರಲು ಪ್ರಯತ್ನಿಸುತ್ತಿದೆ. ಹಾಗಾಗಿ ಸ್ವದೇಶಿ ವಸ್ತುಗಳಿಗೆ ಪ್ರಾಶಸ್ತ್ಯ ನೀಡುವುದು, ಭಾರತೀಯ ವಸ್ತುಗಳನ್ನು ಖರೀದಿಸುವುದು, ಚೀನಾಗೆ ಪರ್ಯಾಯವನ್ನು ಶೋಧಿಸುವುದು ಹೀಗೆ ಎಲ್ಲ ವಿಷಯಗಳನ್ನು ನಾವು ಒಗ್ಗಟ್ಟಿನಿಂದ ಮಾಡಬೇಕು. ಆದರೆ ಈ ವಿಷಯಗಳು ಒಂದು ಅಥವಾ ಎರಡು ದಿನಗಳಲ್ಲಿ ಆಗುವುದಿಲ್ಲ. ಅವುಗಳಿಗೆ ದೀರ್ಘಾವಧಿ ಬೇಕಾಗುತ್ತದೆ. ಇವೆಲ್ಲದರ ಜೊತೆಯಲ್ಲಿ ಚೀನಾದಿಂದ ಸ್ಥಳಾಂತರಗೊಳ್ಳಲಿರುವ ಉದ್ಯೋಗಗಳನ್ನು ಭಾರತಕ್ಕೆ ತರಬೇಕು. ೨ ಉದ್ಯೋಗಗಳು ಈಗಾಗಲೇ ಇಲ್ಲಿಗೆ ಬಂದಿವೆ. ಈ ಏರ್ಪಾಡನ್ನು ನಾವು ಮುಂದುವರಿಸಬೇಕು. ಇದರಿಂದ ಚೀನಾಗೆ ಭಾರತದ ಎದುರು ಆರ್ಥಿಕ ದಾದಾಗಿರಿ ಮಾಡಲು ಸಾಧ್ಯವಿಲ್ಲವೆಂದು ಅರಿವಾಗುವುದು.

೯. ಈ ಸಮಯದಲ್ಲಿಯೂ ಭಾರತೀಯ ಜನತೆ ಸೈನ್ಯವನ್ನು ಬೆಂಬಲಿಸುವುದು ಮತ್ತು ಚೀನಾದ ಆಕ್ರಮಣವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುವೆವು !

ಭಾರತದ ಎದುರು ಚೀನಾದ ವಿವಿಧ ಸವಾಲುಗಳಿವೆ. ಮಾವೋವಾದಿಗಳಿಗೆ ಸಹಾಯ ಮಾಡುವುದು, ಆರ್ಥಿಕ ನುಸುಳುವಿಕೆ, ಆರ್ಥಿಕ ಆಕ್ರಮಣ, ಕೆಲವು ರಾಜಕೀಯ ಪಕ್ಷಗಳಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವುದು, ಭಾರತದ ತಥಾಕಥಿತ ತಜ್ಞರ ಮನಸ್ಸಿನಲ್ಲಿ ನುಸುಳಲು ಪ್ರಯತ್ನಿಸುವುದು ಹೀಗೆ ಚೀನಾದ ಬಹುವಿಧದ ಸವಾಲುಗಳಿವೆ. ಈ ಸವಾಲುಗಳನ್ನು ನಾವು ಬೇರೆ ಬೇರೆ ರೀತಿಯಲ್ಲಿ ಎದುರಿಸಬೇಕಾಗಿದೆ. ಭಾರತೀಯ ಜನತೆ ಕಠಿಣ ಕಾಲದಲ್ಲಿ ಒಗ್ಗಟ್ಟಾಗುತ್ತದೆ ಮತ್ತು ಸೈನ್ಯವನ್ನು ಬೆಂಬಲಿಸುವುದೆಂದು ನನಗೆ ದೃಢವಿಶ್ವಾಸವಿದೆ. ಅದೇ ರೀತಿ ಈ ಸಂದರ್ಭದಲ್ಲಿಯೂ ಜನತೆ ಒಂದಾಗುವುದು. ಚೀನಾದ ಆಕ್ರಮಣವನ್ನು ಹಿಮ್ಮೆಟ್ಟಿಸುವಲ್ಲಿ ನಮಗೆ ಖಂಡಿತವಾಗಿಯೂ ಯಶಸ್ಸು ಸಿಗುವುದು.- (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.