ಭಾರತದ ಮೇಲೆ ಒತ್ತಡ ಹೇರುವ ಚೀನಾದ ಪ್ರಯತ್ನವನ್ನು ಎಲ್ಲ ಭಾರತೀಯರೂ ಸಂಘಟಿತರಾಗಿ ವಿಫಲಗೊಳಿಸಬೇಕು !

ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ

ಪ್ರಸ್ತುತ ಲಡಾಖ್‌ನಲ್ಲಿ ಭಾರತ ಮತ್ತು ಚೀನಾದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಭಾರತೀಯ ಸೈನಿಕರು ೨ ಮಹತ್ವದ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಂದು ಶೋಕ ನದಿಯಿಂದ ದೌಲತ ಬೇಗ ಓಲ್ಡಿಯವರೆಗೆ ಹೋಗುವ ೧೪ ಕೋರಿ ಮುಖ್ಯಾಲಯದಿಂದ ಆರಂಭವಾಗುವ ರಸ್ತೆ ! ಈ ರಸ್ತೆ ಸುಮಾರು ೨೫೦ ಕಿಲೋಮೀಟರ್ ಉದ್ದವಿದೆ. ಕಳೆದ ವರ್ಷ ರಕ್ಷಣಾಸಚಿವ ರಾಜನಾಥ ಸಿಂಹ ಇವರು ಈ ರಸ್ತೆಯ ಉದ್ಘಾಟನೆಯನ್ನು ಮಾಡಿದ್ದರು. ಭಾರತೀಯರು ಎಂದಿಗೂ ಈ ರಸ್ತೆಯನ್ನು ಮಾಡಲಾರರು, ಎಂದು ಚೀನಾಗೆ ಅನಿಸುತಿತ್ತು. ಏಕೆಂದರೆ ಈ ಪ್ರದೇಶವು ಸಮುದ್ರಮಟ್ಟದಿಂದ ೧೭ ಸಾವಿರ ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿದೆ. ಅಲ್ಲಿ ಪ್ರಾಣವಾಯುವಿನ ಪ್ರಮಾಣ ಬಹಳ ಕಡಿಮೆಯಿದೆ. ಆದರೆ ಭಾರತೀಯ ಸೈನಿಕರು ಬಹಳ ಧೈರ್ಯದಿಂದ ಈ ರಸ್ತೆಯನ್ನು ನಿರ್ಮಿಸಿದರು. ಈ ರಸ್ತೆ ತಯಾರಾಗಿದ್ದರಿಂದ ಭಾರತೀಯ ಸೈನಿಕರಿಗೆ ಈ ಪ್ರದೇಶದಲ್ಲಿ ಕಾವಲು ಕಾಯಲು ಸುಲಭವಾಗುವುದು.

ಚೀನಾವು ಈ ಪ್ರದೇಶದಲ್ಲಿ ತನಗೆ ಬೇಕಾಗುವ ಎಲ್ಲ ರಸ್ತೆಗಳನ್ನು ಮೊದಲೇ ಮಾಡಿಟ್ಟುಕೊಂಡಿದೆ. ಚೀನಾವು ಚೀನಾ-ಪಾಕಿಸ್ತಾನ ‘ಎಕನಾಮಿಕ್ ಕಾರಿಡಾರ್ ಎಂಬ ೪ ರಸ್ತೆಗಳ ಹೆದ್ದಾರಿಯನ್ನು ಈ ಹಿಂದೆಯೇ ತಯಾರಿಸಿಕೊಂಡಿದೆ. ಈ ಮಾರ್ಗವು ಗಾಲ್ವಾನ್ ಕಣಿವೆಯಿಂದ ಸ್ವಲ್ಪ ದೂರದಲ್ಲಿದೆ. ಆದರೆ ಭಾರತ ತನ್ನ ಗಡಿಯಲ್ಲಿನ ಇಂತಹ ರಸ್ತೆಗಳನ್ನು ನಿರ್ಮಿಸಲು ಪ್ರಯತ್ನಿಸಿದರೆ ಚೀನಾ ವಿರೋಧಿಸುತ್ತದೆ. ಸದ್ಯ ಚೀನಾದ ಈ ವಿರೋಧವು ತುಂಬಾ ಹೆಚ್ಚಾಗಿದೆ. ೨ ವರ್ಷಗಳ ಹಿಂದೆ ಡೋಕ್ಲಾಮ್‌ನಲ್ಲಿ ಭಾರತ ಮತ್ತು ಚೀನಾ ಸೈನ್ಯಗಳು ಎದುರುಬದುರು ೮೨ ದಿನಗಳವರೆಗೆ ನಿಂತ್ತಿದ್ದವು. ಆಗಲೂ ಹೀಗೆಯೆ ಯುದ್ಧಜನ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿಯ ಪರಿಸ್ಥಿತಿ ಈಗ ಕೂಡ ನಿರ್ಮಾಣವಾಗಿದೆ.

ಚೀನಾ ಸೇನೆಯು ಭಾರತದ ಈ ರಸ್ತೆ ತಯಾರಿಸುವ ಕಾರ್ಯವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ, ಇದು ಭಾರತಕ್ಕೆ ಒಪ್ಪಿಗೆಯಿಲ್ಲ. ಭಾರತ ‘ನಾವು ರಸ್ತೆ ನಿರ್ಮಾಣ ಕಾರ್ಯವನ್ನು ಮುಂದುವರಿಸುವೆವು, ಎಂದು ಚೀನಾಗೆ ದಿಟ್ಟವಾಗಿ ಹೇಳಿದೆ. ಚೀನಾಗೆ ಇದು ಇಷ್ಟವಾಗಲಿಲ್ಲ. ಆದ್ದರಿಂದ ಅದು ಭಾರತದ ಸೈನ್ಯದ ಕಾರ್ಯದಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡಲು ಆರಂಭಿಸಿದೆ.

ಭಾರತೀಯ ಸೈನ್ಯದ ಆಕ್ರಮಕ ಪ್ರತ್ಯುತ್ತರದಿಂದ ಚೀನಾ ಸೈನ್ಯಕ್ಕೆ ಹಿಂದೆ ಸರಿಯಬೇಕಾಯಿತು !

ಭಾರತ-ಚೀನಾದ ಗಡಿಯು ಒಂದು ಶಾಂತಿಪೂರ್ಣ ಗಡಿಯಾಗಿದೆ. ಹೇಗೆ ಭಾರತ-ಪಾಕಿಸ್ತಾನದ ನಿಯಂತ್ರಣ ರೇಖೆಯ ಮೇಲೆ ನಿರಂತರವಾಗಿ ಗುಂಡುಗಳ ಹಾರಾಟ ನಡೆಯುತ್ತಿರುತ್ತದೆಯೊ, ಹಾಗೆ ಇಲ್ಲಿ ಆಗುವುದಿಲ್ಲ. ಸೈನಿಕರು ಕಾವಲು ಕಾಯುತ್ತಿರುವಾಗ ಚೀನಾ ಮತ್ತು ಭಾರತೀಯ ಸೈನಿಕರು ಮುಖಾಮುಖಿಯಾಗುತ್ತಾರೆ. ಆಗ ಇಬ್ಬರೂ ‘ನೀವು ನಮ್ಮ ಪ್ರದೇಶದೊಳಗೆ ಬಂದಿದ್ದೀರಿ, ಎಂದು ಹೇಳಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಅವರಲ್ಲಿ ಘರ್ಷಣೆ ಕೂಡ ಆಗುತ್ತದೆ. ಒಬ್ಬರಿಗೊಬ್ಬರು ‘ತಮ್ಮ ಜಾಗಕ್ಕೆ ಬಂದಿದ್ದೀರಿ ಎಂದು ಹಿಂದೂಡುತ್ತಾರೆ, ಅಂತಹ ಸಮಯದಲ್ಲಿ ಚೀನಾ ಸೈನಿಕರು ‘ನೀವು ಹಿಂದೆ ಹೋಗಿ, ಇದು ನಮ್ಮ ಪ್ರದೇಶವಾಗಿದೆ, ಎಂದು ಗದರಿಸುತ್ತಾರೆ.

ಸದ್ಯ ಲಡಾಖ್‌ನಲ್ಲಿ ಚೀನಾ ಸೈನ್ಯದೊಂದಿಗೆ ನಮ್ಮ ಮೂರನೆಯ ದೊಡ್ಡ ಪ್ರಸಂಗ ನಡೆದಿದೆ. ಈ ಬಾರಿ ಹೊಡೆದಾಟವೂ ಆಗಿದೆ. ಈ ಬಾರಿ ಚೀನಿ ಸೈನಿಕರು ‘ಸ್ಟಡ್ಸ್ ಅಂದರೆ ಮೊಳೆಗಳನ್ನು ಹೊಡೆದಿರುವ ಬಡಿಗೆಗಳನ್ನು ಕೂಡ ತಮ್ಮ ಜೊತೆಗೆ ತಂದಿದ್ದರು. ಇದಕ್ಕೆ ನಮ್ಮ ಭಾರತೀಯ ಸೈನಿಕರು ಆಕ್ರಮಕ ಹಾಗೂ ಯೋಗ್ಯ ಪದ್ಧತಿಯಲ್ಲಿ ಪ್ರತ್ಯುತ್ತರ ನೀಡಿದರು ಹಾಗೂ ಚೀನಾ ಸೈನಿಕರಿಗೆ ಅಲ್ಲಿಂದ ಹಿಂತಿರುಗಿ ಹೋಗುವಂತೆ ಮಾಡಿದ್ದಾರೆ. ಸದ್ಯ ಚೀನಾ ಈ ಪ್ರದೇಶದಲ್ಲಿರುವ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿದೆ. ಅದು ಸುಮಾರು ೮೦ ರಷ್ಟು ಡೇರೆಗಳನ್ನು ನಿರ್ಮಾಣ ಮಾಡಿದೆ. ಇದರ ಅರ್ಥ ಚೀನಾ ಇಲ್ಲಿಯೇ ಹೆಚ್ಚು ಸಮಯ ಇರುವುದಿದೆ.

ಭಾರತ ಮಾತ್ರ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ !

ಇದೇ ರೀತಿಯ ಪ್ರಸಂಗ ಸಿಕ್ಕಿಮ್‌ನ ನಥುಲಾದ ಸಮೀಪ ಘಟಿಸಿತ್ತು. ಭಾರತ ಕೆಲವು ಚೀನೀ ಸೈನಿಕರನ್ನು ವಶದಲ್ಲಿಟ್ಟುಕೊಂಡಿತ್ತು. ನಾವು ಚೀನಿನ ದಾದಾಗಿರಿಗೆ ಪ್ರತ್ಯುತ್ತರವನ್ನು ನೀಡಿರುವುದು ಚೀನಾಕ್ಕೆ ಇಷ್ಟವಾಗಲಿಲ್ಲ; ಆದ್ದರಿಂದ ಅದು ಲಡಾಕ್‌ನ ಪ್ರದೇಶದಲ್ಲಿ ಹೆಚ್ಚು ಒತ್ತಡವನ್ನು ನಿರ್ಮಾಣ ಮಾಡಿದೆ. ‘ಪಾಗೋಂಗ್ ತ್ಸೋ ಲೇಕ್ ಈ ಪ್ರದೇಶದಲ್ಲಿಯೂ ಚೀನಾ ಆಕ್ರಮಕ ಕಾರ್ಯಾಚರಣೆ ಮಾಡಲು ಆರಂಭಿಸಿದೆ. ಇನ್ನೊಂದೆಡೆ ಅಲ್ಲಿನ ‘ಫಿಂಗರ್‌ಏರಿಯಾ ಈ ಭಾಗದಲ್ಲಿಯೂ ಭಾರತ ಅವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಹೇಗೆ ಚೀನಾ ಅದರ ಸೈನ್ಯವನ್ನು ಹೆಚ್ಚಿಸಿದೆಯೋ, ಹಾಗೆಯೆ ಭಾರತವೂ ತನ್ನ ಸೈನ್ಯವನ್ನು ಹೆಚ್ಚಿಸಿದೆ; ಅಂದರೆ ಯಾವುದೆ ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಭಾರತ ಅದನ್ನು ಎದುರಿಸಲು ಸಮಥವಾಗಿದೆ.

ಇಡೀ ಜಗತ್ತು ಸಂಕಟದಲ್ಲಿರುವಾಗ ಪರಿಸ್ಥಿಯ ದುರ್ಲಾಭ ಪಡೆಯುತ್ತಿರುವ ಕಪಟಿ ಚೀನಾ !

ಸದ್ಯ ಕೊರೋನಾದ ವಿಷಾಣು ಅಥವಾ ಚೀನಾ ವಿಷಾಣುವಿನೊಂದಿಗೆ ಸಂಪೂರ್ಣ ಜಗತ್ತು ಹೋರಾಡುತ್ತಿದೆ. ಈ ಪರಿಸ್ಥಿತಿಯ ದುರ್ಲಾಭ ಪಡೆದು ಚೀನಾ ಅನೇಕ ದುಷ್ಕೃತ್ಯಗಳನ್ನು ಮಾಡುತ್ತಿದೆ. ಒಂದು ಉದಾಹರಣೆಯನ್ನು ಕೊಡುವುದಾದರೆ, ಅದು ಆಕ್ರಮಕ ಕಾರ್ಯಾಚರಣೆ ಮಾಡಿ ಹಾಂಗ್‌ಕಾಂಗ್‌ನ್ನು ಹೆಚ್ಚು ಕಡಿಮೆ ವಶಪಡಿಸಿಕೊಂಡಿದೆ. ಚೀನಾದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತ ಉಯಿಗರ ಮುಸಲ್ಮಾನರಿದ್ದಾರೆ. ಚೀನಾ ೨೦ ಲಕ್ಷಕ್ಕಿಂತಲೂ ಹೆಚ್ಚು ಉಯಿಗರ ಮುಸಲ್ಮಾನರನ್ನು ಸೆರೆಮನೆಗೆ ತಳ್ಳಿದೆ. ಟಿಬೇಟ್‌ನಲ್ಲಿ ಅದರ ದಬ್ಬಾಳಿಕೆ ನಡೆದೇ ಇದೆ. ದಕ್ಷಿಣ ಚೀನಾದ ವಿಷಯದಲ್ಲಿಯೂ ಚೀನಾ ಆಕ್ರಮಕವಾಗಿದೆ. ಭಾರತದ ಗಡಿಯಲ್ಲಿಯೂ ಚೀನಾ ಆಕ್ರಮಕವಾಗಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಅದರಲ್ಲಿ ಒಂದು ಈಗಿನ ಹಾಗೂ ಇನ್ನೊಂದು ಸ್ವಲ್ಪ ದೂರದ ಕಾರಣವಿದೆ. ದೂರದ ಕಾರಣವೆಂದರೆ ಚೀನಾಕ್ಕೆ ಈಗ ಕೊರೋನಾ ವಿಷಾಣುವಿನಿಂದಾಗಿ ಜಗತ್ತಿನ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂಬುದು ತಿಳಿದಿದೆ. ಯರೋಪ್‌ನ ಅವಸ್ಥೆ ಎಷ್ಟು ಹದಗೆಟ್ಟಿದೆಯೆಂದರೆ, ಅದು ಈಗ ಯಾವುದೇ ಪರಿಸ್ಥಿತಿಯಲ್ಲಿ ಚೀನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅಮೇರಿಕಾದ ಅರ್ಥವ್ಯವಸ್ಥೆ ಕೂಡ ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿದೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಅನೇಕ ರೀತಿಯ ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ; ಆದರೆ ಅವರು ಮಾತನಾಡುವುದು ಹೆಚ್ಚು ಮಾಡುವುದು ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಒಂದು ದೊಡ್ಡ ರಾಷ್ಟ್ರವಾಗಿದೆ ಹಾಗೂ ಅದು ಚೀನಾದ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ, ಎಂದು ಚೀನಾಕ್ಕೆ ಅನಿಸುತ್ತದೆ. ಇದುವೇ ಚೀನಾಗೆ ಬೇಡವಾಗಿದೆ. ಚೀನಾದ ೨ ಕಾರ್ಖಾನೆಗಳು ಭಾರತಕ್ಕೆ ಬಂದಿದ್ದು ಇನ್ನೂ ಅನೇಕ ಕಾರ್ಖಾನೆಗಳು ಬರಲಿಕ್ಕಿವೆ.

ಚೀನಾದ ವಿಚಾರಣೆಯನ್ನು ಮಾಡಬಾರದೆಂದು ಭಾರತದ ಮೇಲೆ ಚೀನಾದ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ !

ಜಗತ್ತಿನಲ್ಲಿ ಎಲ್ಲಿಯಾದರೂ ದೊಡ್ಡ ಸೋಂಕು ರೋಗ ನಿರ್ಮಾಣವಾದರೆ, ಅದರ ಬಗ್ಗೆ ಜಗತ್ತನ್ನು ಜಾಗೃತಗೊಳಿಸುವುದು ಜಾಗತಿಕ ಆರೋಗ್ಯ ಸಂಘಟನೆಯ ಹೊಣೆಯಾಗಿದೆ; ಆದರೆ ಜಾಗತಿಕ ಆರೋಗ್ಯ ಸಂಘಟನೆಯು ಇಂದಿನವರೆಗೆ ಚೀನಾದ ಕೈಗೊಂಬೆಯಾಗಿತ್ತು ಹಾಗೂ ಚೀನಾ ಏನು ಹೇಳುತ್ತದೆಯೋ, ಅದನ್ನೇ ಜಗತ್ತಿಗೆ ಹೇಳುತ್ತಿತ್ತು. ಯಾವಾಗ ವುಹಾನ್‌ನಲ್ಲಿ ಚೀನಾ ವಿಷಾಣುವಿನ ಸಂಕ್ರಮಣ ಪ್ರಾರಂಭವಾಗಿತ್ತೋ, ಆಗಲೇ ಅದು ಜಗತ್ತನ್ನು ಜಾಗೃತಗೊಳಿಸಬೇಕಿತ್ತು; ಅಂದರೆ ಜಗತ್ತಿಗೆ ಕೆಲವು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತಿತ್ತು, ಈಗ ಲಕ್ಷಗಟ್ಟಲೆ ಜನರು ಮೃತರಾಗಿದ್ದಾರೆ ಹಾಗೂ ಅರ್ಥವ್ಯವಸ್ಥೆಯು ಉಧ್ವಸ್ತವಾಗಿದೆ, ಅದನ್ನು ತಡೆಗಟ್ಟಲು ಜಗತ್ತಿಗೆ ಸಾಧ್ಯವಾಗುತಿತ್ತು. ಆದರೆ ಜಾಗತಿಕ ಆರೋಗ್ಯ ಸಂಘಟನೆಯು ಬಹಳ ಸಮಯ ಮಲಗಿಕೊಂಡಿತ್ತು. ಏಕೆಂದರೆ ಅದು ಚೀನಾದ ಒತ್ತಡದಲ್ಲಿತ್ತು. ಸದ್ಯ ೭೨ ಕ್ಕಿಂತಲೂ ಹೆಚ್ಚು ದೇಶಗಳು ಒಟ್ಟಾಗಿ ಜಾಗತಿಕ ಆರೋಗ್ಯ ಸಂಘಟನೆಯು ಚೀನಾದ ವಿರುದ್ಧ ಸ್ವತಂತ್ರ ವಿಚಾರಣೆಯನ್ನು ಮಾಡಬೇಕು, ಎಂದು ಬೇಡಿಕೆಯನ್ನಿಟ್ಟಿವೆ. ಈ ಚೀನಾವಿಷಾಣು ಚೀನಾದಲ್ಲಿ ಏಕೆ ಹರಡಲಿಲ್ಲ ? ಹಾಗೂ ಸಾವಿರಾರು ಕಿಲೋಮೀಟರ್ ದೂರವಿರುವ ಏಶಿಯಾ, ಆಫ್ರಿಕಾದ ದೇಶಗಳು ಅಥವಾ ಯುರೋಪ್, ಅಮೇರಿಕಾ ಮುಂತಾದ ದೇಶಗಳಲ್ಲಿ ಹೇಗೆ ಹರಡಿತು ? ಎಂಬುದನ್ನು ಪತ್ತೆಹಚ್ಚಬೇಕು, ‘ಜಗತ್ತಿಗೆ ಎಷ್ಟು ಹಾನಿಯಾಗಿದೆ, ಅದನ್ನು ಚೀನಾದಿಂದ ವಸೂಲು ಮಾಡಲು ಒತ್ತಡ ಹೇರಬೇಕು, ಎಂದು ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇವರು ಕೂಡ ಹೇಳಿದ್ದಾರೆ. ಈ ಪ್ರಸಂಗಗಳಿಂದಾಗಿ ಚೀನಾ ಈಗ ಎಲ್ಲೆಡೆ ಬ್ಯಾಕ್‌ಫೂಟ್ನಲ್ಲಿದೆ. ಒಂದು ವೇಳೆ ಭಾರತ ವಿಚಾರಣೆಗಾಗಿ ಪಟ್ಟುಹಿಡಿದರೆ, ಚೀನಾದ ಬಣ್ಣ ಬಯಲಾಗುವುದು, ಎಂಬುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಅಂದರೆ ಚೀನಾ ವಿಷಾಣುಗಳು ಚೀನಾದಿಂದಲೆ ಹರಡಿವೆ ಹಾಗೂ ಜಗತ್ತಿಗೆ ಅಪಾರ ಹಾನಿಯಾಗಿದೆ ಮತ್ತು ಆ ಹಾನಿಯನ್ನು ಚೀನಾವೆ ತುಂಬಿಸಬೇಕು ಎಂಬುದು ಸಿದ್ಧವಾಗುವುದು; ಭಾರತ ಈ ವಿಚಾರಣೆಯನ್ನು ಮಾಡಬಾರದೆಂದು ಈಗ ಚೀನಾ ಭಾರತದ ಮೇಲೆ ಆಕ್ರಮಕ ಕ್ರಮವನ್ನು ತೆಗೆದುಕೊಂಡು ಒತ್ತಡ ಹೇರುತ್ತಿದೆ.

ಚೀನಾದ ಯಾವುದೇ ಒತ್ತಡಕ್ಕೆ ಮಣಿಯದೆ ಭಾರತ ಅದರ ಕಾರ್ಯವನ್ನು ಮುಂದುವರಿಸಬೇಕು !

ಚೀನಾ, ನಾವು ನಮ್ಮ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುವೆವು; ನೀವು ಮಾತ್ರ ನಿಮ್ಮ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಬಾರದು ಎಂದು ಹೇಳುತ್ತಿದೆ. ನಾವು ಗದರಿಸಿದಾಗ ನೀವು ತಲೆತಗ್ಗಿಕೊಂಡು ಹಿಂದೆ ಹೋಗಬೇಕು. ಭಾರತೀಯ ಸೈನಿಕರು ಇದನ್ನು ಒಪ್ಪಲು ಸಿದ್ಧರಿಲ್ಲ. ಆದ್ದರಿಂದ ಉದ್ವಿಗ್ನತೆ ನಿರ್ಮಾಣವಾಗಿದೆ. ಮುಖ್ಯ ಪ್ರಶ್ನೆ ಎಂದರೆ, ಇಂತಹ ಪರಿಸ್ಥಿತಿ ಎಷ್ಟು ದಿನ ನಡೆಯಬಹುದು ? ಪುನಃ ಡೋಕ್ಲಾಮ್ – ೨ ರ ಪರಿಸ್ಥಿತಿ ನಿರ್ಮಾಣವಾಗಬಹುದೆ ? ಎಂಬುದರ ಉತ್ತರವನ್ನು ಬರುವ ಕಾಲವೇ ಹೇಳಬಹುದು. ಒಂದು ಮಾತ್ರ ಸತ್ಯ, ಅಂದರೆ ನಾವು ಬಾಯಿಮುಚ್ಚಿಕೊಂಡು ಹಿಂದೆ ಸರಿದರೆ ಚೀನಾ ಸೈನ್ಯವೂ ಹಿಂದಕ್ಕೆ ಹೋಗುವುದು. ಒಂದು ವೇಳೆ ನಾವು ಚೀನಾದ ವಿಚಾರಣೆ ಮಾಡುವ ವಿಷಯದಲ್ಲಿ ಕೃತಿ ಮಾಡದಿದ್ದರೆ, ಅದರಿಂದ ಚೀನಾ ಸಂತೋಷದಿಂದ ಹಿಂದೆ ಸರಿಯುವುದು; ಆದರೆ ಚೀನಾಕ್ಕೆ ಇಂತಹ ಮೃದು ಭಾಷೆ ತಿಳಿಯುವುದಿಲ್ಲ. ನಂತರ ಅದು ಹೆಚ್ಚು ಪ್ರಮಾಣದಲ್ಲಿ ನಿಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದು. ಮೃದುವಾಗಿ ವರ್ತಿಸಿದರೆ, ಚೀನಾ ಭವಿಷ್ಯದಲ್ಲಿ ಇನ್ನೂ ಹೆಚ್ಚು ತೊಂದರೆ ಕೊಡುವುದು; ಆದ್ದರಿಂದ ಭಾರತ ಲಡಾಖ್‌ನಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಮುಂದುವರಿಸಬೇಕು. ಜಾಗತಿಕ ಆರೋಗ್ಯ ಸಂಘಟನೆಯಲ್ಲಿಯೂ ನಾವು ಚೀನಾದ ವಿರುದ್ಧ ವಿಚಾರಣೆ ಮಾಡುವ ವಿಷಯವನ್ನು ಎತ್ತಿ ಹಿಡಿಯಬೇಕು. ಈಗ ಚೀನಾ ನೇಪಾಳವನ್ನು ಕೂಡ ಪ್ರಚೋದಿಸಲು ಆರಂಭಿಸಿದೆ. ಲಿಪುಲೇಖ್‌ನಿಂದ ಒಂದು ರಸ್ತೆ ಸಿದ್ಧವಾಗಿತ್ತು, ಅಲ್ಲಿ ಅನೇಕ ವರ್ಷಗಳಿಂದ ಭಾರತೀಯ ಸೈನಿಕರಿದ್ದಾರೆ.

ನೇಪಾಳ ಈಗ ಚೀನಾದ ಒತ್ತಡದಲ್ಲಿ ಬೊಬ್ಬೆ ಹೊಡೆಯಲು ಆರಂಭಮಾಡಿದೆ. ಈಗ ನೇಪಾಳ, ಭಾರತ ತಮ್ಮ ಗಡಿಯಲ್ಲಿ  ರಸ್ತೆ ನಿರ್ಮಾಣ ಮಾಡಿದೆ ಎಂದು ಹೇಳುತ್ತಿದೆ. ಇದರ ಅರ್ಥ, ನೇಪಾಳ ಈಗ ಚೀನಾದ ಭಾಷೆಯನ್ನು ಮಾತನಾಡಲು ಪ್ರಾರಂಭಿಸಿದೆ. ನಾವು ಅದರತ್ತ ದುರ್ಲಕ್ಷ ಮಾಡಿದ್ದೇವೆ, ನಾವು ನಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದೇವೆ. ಮುಂಬರುವ ಸಮಯದಲ್ಲಿ ಚೀನಾದ ಒತ್ತಡ ಹೆಚ್ಚಾಗುವುದು.

ಸಂಪೂರ್ಣ ಭಾರತವು ಭಾರತೀಯ ಸೈನ್ಯದ ಬೆಂಬಲಕ್ಕಿದೆ, ಎಂಬುದನ್ನು ಚೀನಾಗೆ ತೋರಿಸಿಕೊಡಬೇಕು !

ಚೀನಾವನ್ನು ಎದುರಿಸುತ್ತಿರುವಾಗಲೆ ನಾವು ಪಾಕಿಸ್ತಾನದ ಗಡಿಯತ್ತವೂ ಗಮನಹರಿಸಬೇಕಾಗುತ್ತದೆ. ಪಾಕಿಸ್ತಾನ ಕಾಶ್ಮೀರದಲ್ಲಿ ನುಸುಳುವುದನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಕರ್ನಲ್ ಅಶುತೋಷ ಮತ್ತು ಮೇಜರ್ ಅನುಜ ಇವರು ಉಗ್ರವಾದಿಗಳನ್ನು ಸಾಯಿಸುವಾಗ ತಮ್ಮ ಪ್ರಾಣದ ಬಲಿದಾನ ಮಾಡಿದ್ದಾರೆ. ಚೀನಾವು ಭಾರತದ ವಿರುದ್ಧ ‘ಡಬಲ್ ಫ್ರಂಟ್ ವಾರ್ ಮಾಡಲು ನೋಡುತ್ತಿದೆ. ಭವಿಷ್ಯದಲ್ಲಿ ಇದು ಹೇಗೆ ರೂಪಾಂತರವಾಗಬಹುದು ? ಇದರಲ್ಲಿ ಹೊಡೆದಾಟ, ಬಡೆದಾಟ ಆಗುವುದೋ ? ಕಾರ್ಗಿಲ್‌ನ ಹಾಗೆ ‘ಶಾರ್ಟ್ ವಾರ್ ಆಗುವುದೋ ಅಥವಾ ದೊಡ್ಡ ಯುದ್ಧವೇ ಆಗುವುದು, ಈ ಎಲ್ಲ ಪ್ರಶ್ನೆಗಳು ಬರುವ ಕಾಲದಲ್ಲಿ ನಮ್ಮ ಮುಂದೆ ಬರಲಿವೆ; ಇಷ್ಟು ಮಾತ್ರ ನಿಜ, ಚೀನಾ ಭಾರತದ ಮುಂದೆ ನಿರ್ಮಾಣ ಮಾಡುವ ‘ಸೈನಿಕ ಸವಾಲನ್ನು ಎದುರಿಸಲು ಭಾರತದ ಸೈನ್ಯ ಸಂಪೂರ್ಣ ಸಿದ್ಧವಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಭಾರತೀಯ ಸಮಾಜ ಭಾರತದ ಸೈನಿಕರ ಹಿಂದೆ ಮತ್ತು ಭಾರತ ಸರಕಾರದ ಹಿಂದೆ ದೃಢವಾಗಿ ನಿಲ್ಲಬೇಕಾಗುತ್ತದೆ. ಚೀನಾಗೆ ನಾವು ಸಂಪೂರ್ಣ ಭಾರತ ಸರಕಾರ ಮತ್ತು ಭಾರತೀಯ ಸೈನ್ಯದ ಬೆಂಬಲಕ್ಕಿದ್ದೇವೆ ಎಂಬುದನ್ನು ತೋರಿಸಬೇಕಾಗಿದೆ. ಒಂದು ವೇಳೆ ನೀವು ಯುದ್ಧಜನ್ಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರೆ, ನಾವೆಲ್ಲರೂ ಸೇರಿ ನಿಮ್ಮೊಂದಿಗೆ ಯುದ್ಧ ಮಾಡುವೆವು, ಎಂದು ಎದೆ ತಟ್ಟಿ ಹೇಳಬೇಕು.

ಭಾರತೀಯ ಸೈನ್ಯಕ್ಕೆ ಸಂಪೂರ್ಣ ದೇಶ ಮತ್ತು ರಾಜಕೀಯ ಪಕ್ಷಗಳ ಧೃಢನಿಶ್ಚಯದ ಬೆಂಬಲದ ಅವಶ್ಯಕತೆಯಿದೆ !

‘ಕೆಲವು ಭಾರತೀಯರು, ಚೀನಾದ ಉತ್ಪಾದನೆಗಳನ್ನು ಬಹಿಷ್ಕರಿಸಿ ಎಂದು ಹೇಳುತ್ತಾರೆ; ಆದರೆ ಭಾರತಕ್ಕೆ ಇದನ್ನು ಮಾಡುವ ಧೈರ್ಯವೇ ಇಲ್ಲ; ಭಾರತವು ಕೇವಲ ಬಡಬಡಿಸುವ ದೇಶವಾಗಿದೆ. ಅವರು ಪರಸ್ಪರರ ಜಗಳದಲ್ಲಿರುತ್ತಾರೆ ಹಾಗೂ ಚೀನಾವನ್ನು ಎದುರಿಸಲು ಅವರಿಗೆ ಅಸಾಧ್ಯವಾಗಿದೆ ಎಂದು ಚೀನಾಕ್ಕೆ ಅನಿಸುತ್ತದೆ. ಸಾಮಾನ್ಯ ಭಾರತೀಯರು ಕೂಡ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸುವ ಆವಶ್ಯಕತೆಯಿದೆ. ‘ಬಿ ಇಂಡಿಯನ್, ಬೈ ಇಂಡಿಯನ್ ಅಂದರೆ ‘ಭಾರತೀಯರಾಗಿರಿ, ಭಾರತೀಯ ವಸ್ತುಗಳನ್ನು ಖರೀದಿಸಿರಿ ಮತ್ತು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ. ಚೀನಾ ಭಾರತದ ಮಾರುಕಟ್ಟೆಯಲ್ಲಿ ಅದರ ಉತ್ಪಾದನೆಗಳನ್ನು ಮಾರಾಟ ಮಾಡಿ ತುಂಬಾ ಹಣವನ್ನು ಗಳಿಸುತ್ತದೆ. ಅದರಿಂದ ಅದರ ಆರ್ಥಿಕ ಬಲ ಹೆಚ್ಚಾಗುತ್ತದೆ ಹಾಗೂ ಅದರ ಸೈನ್ಯದ ಬಜೆಟ್ ಹೆಚ್ಚಾಗುತ್ತಿದೆ. ಕೊರೋನಾ ವಿಷಾಣುವಿನಿಂದ ಅಥವಾ ಚೀನಾದ ವಿಷಾಣುವಿನಿಂದ ಎಲ್ಲ ದೇಶಗಳು ತಮ್ಮ ಸೈನ್ಯದ ಬಜೆಟ್‌ನ್ನು ಕಡಿಮೆ ಮಾಡುತ್ತಿವೆ. ಆದರೆ ಚೀನಾ ಮಾತ್ರ ಸೈನ್ಯದ ಬಜೆಟ್‌ನ್ನು ಹೆಚ್ಚಿಸಿದೆ; ಆದ್ದರಿಂದಲೇ ಚೀನಾದ ಆಕ್ರಮಕತೆಯನ್ನು ತಡೆಗಟ್ಟಲು ಭಾರತೀಯರು ಚೀನಾದ ವಸ್ತುಗಳ ಮೇಲೆ ಬಹಿಷ್ಕಾರ ಹಾಕಬೇಕು. ಅದರಿಂದ ಚೀನಾಕ್ಕೆ ಒಂದು ದೊಡ್ಡ ಆಘಾತವಾಗುವುದು. ಸೈನಿಕ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಬಂದರೆ, ಭಾರತದ ಸೈನಿಕರು ಅದಕ್ಕೆ ಸಿದ್ಧರಿದ್ದಾರೆ; ಆದರೆ ಅವರಿಗೆ ಇಂದು ಸಂಪೂರ್ಣ ದೇಶ ಮತ್ತು ಎಲ್ಲ ರಾಜಕೀಯ ಪಕ್ಷಗಳ ದೃಢವಾದ ಬೆಂಬಲದ ಅವಶ್ಯಕತೆಯಿದೆ. ಚೀನಾದ ಈ ಸವಾಲನ್ನು ಭಾರತ ಎದುರಿಸುವುದೆಂದು ನನಗೆ ವಿಶ್ವಾಸವಿದೆ. – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ