ಯುವಕರಿಗೆ ಭಾರತೀಯ ಸೈನ್ಯದಲ್ಲಿ ನೌಕರಿ ನೀಡುವ ಪ್ರಸ್ತಾಪ : ಒಂದು ಕ್ರಾಂತಿಕಾರಿ ನಿರ್ಣಯ

ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ

ಸಾಮಾನ್ಯ ನಾಗರಿಕರು ೩ ವರ್ಷ ಭಾರತೀಯ ಸೈನ್ಯದಲ್ಲಿ ಅಧಿಕಾರಿ ಅಥವಾ ಸೈನಿಕರೆಂದು ಸೇರಿಕೊಳ್ಳಬಹುದು, ಇಂತಹ ಒಂದು ಒಳ್ಳೆಯ ಪ್ರಸ್ತಾಪವನ್ನು ಭಾರತೀಯ ಸೈನ್ಯವು ಸರಕಾರಕ್ಕೆ ನೀಡಿದೆ. ಇದರಿಂದ ಸೈನ್ಯಕ್ಕೆ, ಹಾಗೆಯೇ ದೇಶಕ್ಕೆ ಹೇಗೆ ಲಾಭವಾಗುವುದು, ಎಂಬ ವಿಷಯದ ವಿವರಣೆಯನ್ನು ನೀಡುವ ಲೇಖನವನ್ನು ನಮ್ಮ ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ.

೧. ನಿವೃತ್ತ ಸೈನಿಕರಿಗಾಗಿ ಖರ್ಚಾಗುವ ಹಣವನ್ನು ಸೈನ್ಯದ ಆಧುನಿಕರಣಕ್ಕಾಗಿ ಉಪಯೋಗಿಸಬಹುದು !

ಸೈನ್ಯದ ಮುಂಗಡಪತ್ರದಲ್ಲಿ ಎರಡು ಭಾಗಗಳಿರುತ್ತವೆ, ‘ಕ್ಯಾಪಿಟಲ್ ಬಜೆಟ್’ ಮತ್ತು ‘ರೆವೆನ್ಯು’ ! ‘ಕ್ಯಾಪಿಟಲ್ ಬಜೆಟ್’ ಅಂದರೆ ಸೈನ್ಯದ ಆಧುನೀಕರಣಕ್ಕಾಗಿ ಆಗುವ ಖರ್ಚು ಮತ್ತು ರೆವೆನ್ಯು ಬಜೆಟ್ ಅಂದರೆ ಸೈನಿಕರ ವೇತನಕ್ಕಾಗಿ ಅಥವಾ ನಿವೃತ್ತಿ ವೇತನಕ್ಕಾಗಿ ಆಗುವ ಖರ್ಚು. ಭಾರತೀಯ ಸೈನ್ಯದ ಮುಂಗಡಪತ್ರದಲ್ಲಿ ಕಳೆದ ೧೦ ವರ್ಷಗಳಿಂದ ಹೆಚ್ಚಳವಾಗಿಲ್ಲ. ಆದ್ದರಿಂದ ಸೈನ್ಯದ ಆಧುನೀಕರಣವು ಸಂಪೂರ್ಣ ಸ್ಥಗಿತಗೊಂಡಿದೆ. ನಿವೃತ್ತಿ ವೇತನದ ಖರ್ಚು ತುಂಬಾ ಹೆಚ್ಚಾಗಿದೆ. ಅದರಿಂದ ಕ್ಯಾಪಿಟಲ್ ಬಜೆಟ್‌ನ ಹೆಚ್ಚಳಕ್ಕೆ ಮಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ನಾವು ೩ ವರ್ಷ ನಾಗರಿಕರನ್ನೂ ಸೈನ್ಯದಲ್ಲಿ ಸೇರಿಸಿಕೊಂಡರೆ ಅವರಿಗೆ ನಿವೃತ್ತಿ ವೇತನ ನೀಡುವ ಅವಶ್ಯಕತೆಯಿಲ್ಲ, ಅವರಿಗೆ ಯಾವುದೇ ‘ಸೆವೆರೆನ್ಸ್ ಪ್ಯಾಕೇಜ್’ (ಕಾರಣಾಂತರಗಳಿಂದ ವ್ಯಕ್ತಿಯನ್ನು ಅವರ ನಿಯೋಜಿತ ನಿವೃತ್ತಿಯ ಸಮಯದ ಮೊದಲು ಕೆಲಸದಿಂದ ಕೈಬಿಟ್ಟಾಗ ನೀಡುವ ಒಂದು ನಿರ್ದಿಷ್ಟ ಮೊತ್ತ) ನೀಡಬೇಕಾಗುವುದಿಲ್ಲ. ನಿವೃತ್ತರಾದ ನಂತರ ಸೈನಿಕರಿಗೆ ಸಿಗುವ ಯಾವುದೇ ಸೌಲಭ್ಯವನ್ನು ಅವರಿಗೆ ಕೊಡಬೇಕಾಗಿಲ್ಲ. ಇದರಿಂದ ಉಳಿಯುವ ಹಣವನ್ನು ಸೈನ್ಯದ ಆಧುನೀಕರಣಕ್ಕಾಗಿ ಬಳಸಬಹುದು.

೨. ನಾಗರಿಕರಲ್ಲಿ ದೇಶಪ್ರೇಮ ಮತ್ತು ಸ್ವಯಂಶಿಸ್ತು ನಿರ್ಮಾಣವಾಗುವುದು !

ಸೈನ್ಯದಲ್ಲಿ ೩ ವರ್ಷ ಸೇವೆ ಮಾಡಿ ಹೋದ ಯುವಕರನ್ನು ಸೈನ್ಯಕ್ಕೆ ಆವಶ್ಯಕತೆ ಉಂಟಾದರೆ ಮೀಸಲು (ರಿಝರ್ವ) ಎಂದು ಅವರ ಸಹಾಯವನ್ನು ಪಡೆಯಬಹುದು. ಇದರಿಂದ ಎಲ್ಲಕ್ಕಿಂತ ಹೆಚ್ಚು ಲಾಭವು ದೇಶಕ್ಕೆ ಆಗಲಿದೆ. ನಾಗರಿಕರು ಸೈನ್ಯದಲ್ಲಿ ೩ ವರ್ಷ ನೌಕರಿ ಮಾಡಿದರೆ ಅವರಲ್ಲಿ ದೇಶಭಕ್ತಿ, ದೇಶಪ್ರೇಮ, ದೇಶಕ್ಕಾಗಿ ಏನಾದರೂ ಮಾಡುವ ಉತ್ಸಾಹ ಮುಂತಾದ ಗುಣಗಳು ನಿರ್ಮಾಣವಾಗುವವು. ಅದಲ್ಲದೆ, ನಾಗರಿಕರಲ್ಲಿ ಸ್ವಯಂಶಿಸ್ತು ನಿರ್ಮಾಣವಾಗುವುದು ಮತ್ತು ಅವರು ಶಿಸ್ತುಪ್ರಿಯರಾಗುವರು. ಎಲ್ಲರ ಶಾರೀರಿಕ ಹಾಗೂ ಮಾನಸಿಕ ಕ್ಷಮತೆಯೂ ಹೆಚ್ಚಾಗುವುದು. ಇದರಿಂದ ಅವರಿಗೆ ಯಾವುದೇ ಕಠಿಣ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಎದುರಿಸಲು ಸಾಧ್ಯವಾಗುವುದು.

೩. ನಾಗರಿಕರ ಶಾರೀರಿಕ ಹಾಗೂ ಮಾನಸಿಕ ಕ್ಷಮತೆ ಹೆಚ್ಚಾಗುವುದು !

ಸದ್ಯ ಕೊರೋನಾದೊಂದಿಗೆ ಹೋರಾಟ ನಡೆಯುತ್ತಿದೆ. ಅನೇಕ ಜನರು, ನಮಗೆ ಮನೆಯಲ್ಲಿ ಕುಳಿತು ಬೇಸರಬಂದಿದೆ. ನಮ್ಮ ಮಾನಸಿಕ ಆರೋಗ್ಯ ಕೆಡುತ್ತಿದೆ’ ಎಂದು ಹೇಳುತ್ತಿದ್ದಾರೆ. ಗಡಿಯಲ್ಲಿರುವ ಭಾರತೀಯ ಸೈನಿಕರು ಅನೇಕ ವರ್ಷಗಳಿಂದ ‘ಲಾಕ್ ಡೌನ್’ನಲ್ಲಿಯೇ ಇದ್ದಾರೆ. ಅವರಿಗೇಕೆ ಏನೂ ಅಗುವುದಿಲ್ಲ ? ಅವರ ಮಾನಸಿಕ ಕ್ಷಮತೆ, ಅವರಲ್ಲಿನ ದುಃಖವನ್ನು ಸಹಿಸಿಕೊಳ್ಳುವ ಕ್ಷಮತೆ ಎಷ್ಟು ಹೆಚ್ಚಾಗಿದೆಯೆಂದರೆ, ಅವರಿಗೆ ‘ತಾವು ಯಾವುದಾದರೊಂದು ದೊಡ್ಡ ಕಾರ್ಯವನ್ನು ಮಾಡುತ್ತಿದ್ದೇವೆ’, ಎಂದು ಅನಿಸುವುದೇ ಇಲ್ಲ. ಇಂತಹ ಮಾನಸಿಕತೆಯು ಎಲ್ಲ ನಾಗರಿಕರಲ್ಲಿ ಹೆಚ್ಚಾಗುವುದು ಆವಶ್ಯಕವಾಗಿದೆ.

೪. ರಾಜಕಾರಣಿಯಾಗಲು ಬಯಸುವವರನ್ನು ೩ ವರ್ಷ ಸೈನ್ಯದಲ್ಲಿ ನೌಕರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು !

ಸೈನ್ಯದಲ್ಲಿ ೩ ವರ್ಷ ಸೇವೆಯನ್ನು ಮಾಡಿ ಹಿಂದಿರುಗಿದ ನಂತರ ಅವರು ಯಾವ ಯಾವ ಕ್ಷೇತ್ರಗಳಲ್ಲಿ ಕಾರ್ಯವನ್ನು ಮಾಡುವರೊ, ಆ ಎಲ್ಲ ಕ್ಷೇತ್ರಗಳಿಗೂ ಇದರಿಂದ ಲಾಭವಾಗುವುದು. ಅದು ಸರಕಾರಿ ಕ್ಷೇತ್ರವಿರಲಿ, ಖಾಸಗಿ ಕ್ಷೇತ್ರವಿರಲಿ ಅಥವಾ ರಾಜಕೀಯ ನೇತಾರರಾಗಿ ಸಮಾಜ ಕಾರ್ಯ ಮಾಡಲಿ, ಎಲ್ಲ ಕಡೆಗಳಲ್ಲಿ ಅವರಿಂದ ಲಾಭವಾಗುವುದು. ಭವಿಷ್ಯದಲ್ಲಿ ರಾಜಕಾರಣದಲ್ಲಿ ಪ್ರವೇಶ ಮಾಡಲು ಬಯಸುವವರಿಗೆ ೩ ವರ್ಷ ಸೈನ್ಯದಲ್ಲಿ ನೌಕರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಅವರಲ್ಲಿ ಸ್ವಯಂಶಿಸ್ತಿನಂತಹ ಗುಣಗಳು ನಿರ್ಮಾಣವಾಗಬಹುದು ಹಾಗೂ ಅವರೂ ಒಳ್ಳೆಯ ರಾಜಕಾರಣಿಗಳೆಂದು ಕಾರ್ಯವನ್ನು ಮಾಡಬಹುದು. ಯುರೋಪ್ ಮತ್ತು ಅಮೇರಿಕಾದಲ್ಲಿ ಹೆಚ್ಚಿನ ರಾಜಕಾರಣಿಗಳು ಸೈನ್ಯದಲ್ಲಿ ನೌಕರಿ ಮಾಡಿರುತ್ತಾರೆ; ಆದ್ದರಿಂದ ಅವರು ಮುಂದಿನ ಜೀವನದಲ್ಲಿಯೂ ಒಳ್ಳೆಯ ಕಾರ್ಯವನ್ನು ಮಾಡುತ್ತಾರೆ.

೫. ಸರಕಾರಿ ಸಿಬ್ಬಂದಿಗಳಿಗೆ ೩ ವರ್ಷ ಸೈನ್ಯದಲ್ಲಿ ನೌಕರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು !

ಸೈನ್ಯವು ಸಾಮಾನ್ಯ ನಾಗರಿಕರಿಗಾಗಿ ಯಾವ ೩ ವರ್ಷಗಳ ‘ಟೂರ್ ಆಫ್ ಡ್ಯೂಟಿ’ ಎಂಬ ಪ್ರಸ್ತಾಪವನ್ನು ತಂದಿದೆಯೋ, ಅದರ ಬಗ್ಗೆ ಸರಕಾರ ಚೆನ್ನಾಗಿ ವಿಚಾರ ಮಾಡುವುದು ಮತ್ತು ಆದಷ್ಟು ಬೇಗ ಅದರ ಕಾರ್ಯ ಪ್ರಾರಂಭವಾಗುವುದು. ಸೈನ್ಯದ ಮುಂಗಡಪತ್ರವು ಯಾವ ರೀತಿ ಬೆಳೆಯಬೇಕಾಗಿತ್ತೊ, ಆ ರೀತಿಯಲ್ಲಿ ಅದು ಬೆಳೆದಿಲ್ಲ. ಇನ್ನೂ ಅನೇಕ ಕ್ಷೇತ್ರಗಳಿವೆ, ಅವುಗಳ ಕಡೆಯೂ ನಮಗೆ ಗಮನ ಹರಿಸಬೇಕಾಗಿದೆ. ಆದ್ದರಿಂದ ಯಾವುದಾದರೂ ‘ಇನೋವೇಟಿವ್’ ವಿಷಯಗಳನ್ನು ಉಪಯೋಗಿಸಿ ಸೈನ್ಯಕ್ಕಾಗುವ ಖರ್ಚನ್ನು ಕಡಿಮೆಗೊಳಿಸಿದರೆ ಆ ಹಣವನ್ನು ಇನ್ನೂ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿ ನಾವು ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸುಧಾರಿಸಬಹುದು. ಈ ಪ್ರಸ್ತಾಪದಿಂದ ನಿರ್ಧಿಷ್ಟವಾಗಿ ಇದುವೇ ಸಾಧ್ಯವಾಗಲಿದೆ. ಅಂದಿನ ಕೇಂದ್ರ ಗೃಹ ಮಂತ್ರಿಗಳಾದ ರಾಜನಾಥ ಸಿಂಹ ಇವರು ಕೇಂದ್ರ ಅಥವಾ ರಾಜ್ಯಸರಕಾರದ ಸೇವೆಯಲ್ಲಿರುವ ಸಿಬ್ಬಂದಿಗಳು ೩ ವರ್ಷ ಸೈನ್ಯದಲ್ಲಿ ನೌಕರಿ ಮಾಡುವುದನ್ನು ಕಡ್ಡಾಯ ಮಾಡುವ ವಿಷಯದಲ್ಲಿ ಒಂದು ಪ್ರಸ್ತಾಪವನ್ನು ೨-೩ ವರ್ಷಗಳ ಹಿಂದೆಯೆ ನೀಡಿದ್ದರು. ಇದರಿಂದ ಕಾರ್ಮಿಕರಲ್ಲಿ ಶಿಸ್ತು ಬರುವುದು ಮತ್ತು ಅದರೊಂದಿಗೆ ಇನ್ನೂ ಕೆಲವು ಮೇಲೆ ಹೇಳಿದಂತಹ ಒಳ್ಳೆಯ ಗುಣಗಳು ಅವರಲ್ಲಿ ವೃದ್ಧಿಯಾಗಲು ಸಾಧ್ಯವಿದೆ. ಈ ಪ್ರಸ್ತಾಪದ ಬಗ್ಗೆಯೂ ಸರಕಾರ ವಿಚಾರ ಮಾಡಬೇಕು. ಇದರಿಂದ ಸೈನ್ಯಕ್ಕೆ ಲಾಭವಂತೂ ಆಗುವುದು ಮತ್ತು ಅದಕ್ಕಿಂತಲೂ ಹೆಚ್ಚು ಲಾಭ ದೇಶಕ್ಕಾಗುವುದು.

೬. ಜವಾಬ್ದಾರ ಮತ್ತು ಶಿಸ್ತುಪ್ರಿಯ ನಾಗರಿಕರಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿಯಾಗುವುದು !

ಈಗ ಯುದ್ಧದ ಸ್ವರೂಪವು ಬದಲಾಗುತ್ತಿದೆ. ಯುದ್ಧಕಲೆಯು ಬದಲಾಗುತ್ತಿದೆ. ಸದ್ಯ ಕೊರೋನಾದೊಂದಿಗೆ ಹೋರಾಟ ನಡೆಯುತ್ತಿದೆ. ಅದರಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಪ್ರತಿಯೊಬ್ಬರೂ ಸೈನಿಕರಾಗಿದ್ದಾರೆ. ನಾವೇನು ಮಾಡಬೇಕು, ಎಂಬುದನ್ನು ಸರಕಾರ ಹೇಳಿದೆ. ಆದರೆ ಅನೇಕ ಜನರು ಅದನ್ನು ಪಾಲಿಸುವುದಿಲ್ಲ. ನಾವು ಜವಾಬ್ದಾರ ನಾಗರಿಕರಾದರೆ, ಶಿಸ್ತುಪ್ರಿಯ ನಾಗರಿಕರಾದರೆ, ನಮಗೆ ಏನು ಮಾಡಬೇಕಾಗಿದೆಯೋ, ಅದನ್ನು ನಾವು ಮಾಡುವೆವು, ವಿವಿಧ ಪ್ರಕಾರದ ಶಿಸ್ತುಗಳ ಪಾಲನೆಯನ್ನು ಮಾಡುವೆವು, ಅದರಿಂದ ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ನಾವು ಪ್ರಗತಿಯನ್ನು ಮಾಡಿಕೊಳ್ಳಬಹುದು. ಸಾರಿಗೆಯ ನಿಯಮಗಳನ್ನು ಪಾಲಿಸುವುದು, ಸಮಯಕ್ಕನುಸಾರ ತೆರಿಗೆಯನ್ನು ತುಂಬಿಸುವುದು ಇತ್ಯಾದಿ. ನಮ್ಮ ಜೀವನಕ್ಕೆ ಶಿಸ್ತು ಬರುವುದು ಒಂದು ಮಹತ್ವದ ವಿಷಯವಾಗಿದೆ ಹಾಗೂ ಅದು ಸೈನ್ಯದಲ್ಲಿ ಸೇರಿಕೊಂಡರೆ ಸಾಧ್ಯವಾಗುತ್ತದೆ.

೭. ಕೆಲವು ಸಮಯ ಸೈನ್ಯದಲ್ಲಿ ನೌಕರಿ ಮಾಡುವುದು ಹೊಸ ವಿಷಯವೇನಲ್ಲ !

ಕೆಲವು ಕಾಲಕ್ಕಾಗಿ ಸೈನ್ಯದಲ್ಲಿ ನೌಕರಿ ಮಾಡುವುದು ಹೊಸ ವಿಷಯವೇನಲ್ಲ. ಭಾರತೀಯ ಸೈನ್ಯದಲ್ಲಿ ‘ಟೆರಿಟೋರಿಯಲ್ ಆರ್ಮಿ’ ಎಂಬ ಹೆಸರಿನ ಒಂದು ಪದ್ಧತಿಯಿದೆ. ಕೇವಲ ಮಹಾರಾಷ್ಟ್ರದ ಜನರ ಬಗ್ಗೆ ಮಾತನಾಡುವುದಾದರೆ, ಪುಣೆ ಮತ್ತು ಕೊಲ್ಹಾಪುರದಲ್ಲಿ ‘ಟಿಎ ಬೆಟಾಲಿಯನ್ಸ್’ ಇದೆ. ‘ಟಿಎ ಬೆಟಾಲಿಯನ್ಸ್’ ಅಂದರೆ ಅವರು ‘ಪಾರ್ಟ್‌ಟೈಮ್ ಸೋಲ್ಜರ‍್ಸ್’ ಆಗಿರುತ್ತಾರೆ. ಅವರು ಸ್ವಲ್ಪ ಸಮಯ ಸೈನ್ಯ ದಲ್ಲಿ ನೌಕರಿ ಮಾಡುತ್ತಾರೆ. ಅವರು ಸೈನ್ಯದಲ್ಲಿ ನೌಕರಿ ಮಾಡುವಾಗ ಅವರಿಗೆ ಸೈನ್ಯದ ವೇತನ ಸಿಗುತ್ತದೆ. ನಂತರ ಅವರನ್ನು ಹೊರಗೆ ಕಳುಹಿಸಲಾಗುತ್ತದೆ. ಯಾವಾಗ ಅವಶ್ಯಕತೆಯಿರುತ್ತದೆಯೋ, ಆಗ ಅವರನ್ನು ಸೈನ್ಯದಲ್ಲಿ ಕರೆಯಲಾಗುತ್ತದೆ. ಯಾವಾಗ ಅವಶ್ಯಕತೆಯಿರುತ್ತದೆಯೋ, ಅದೇ ಸಮಯದಲ್ಲಿ ಅವರನ್ನು ಸೈನ್ಯದಲ್ಲಿ ತೆಗೆದುಕೊಳ್ಳುವುದರಿಂದ ಸೈನ್ಯದ ಖರ್ಚು ಕಡಿಮೆಯಾಗುತ್ತದೆ. – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ