ಬೇಸಿಗೆಯಲ್ಲಿ ಈ ಮುಂದಿನಂತೆ ಆರೋಗ್ಯವನ್ನು ಕಾಪಾಡಿಕೊಳ್ಳಿ !

ಎಪ್ರಿಲ್ ಮತ್ತು ಮೇ ತಿಂಗಳೆಂದರೆ ಗ್ರೀಷ್ಮ ಋತು, ಈ ಋತುವಿನಲ್ಲಿ ವಾತಾವರಣದಲ್ಲಿ ತೇವಾಂಶವಿಲ್ಲದೆ ಉಷ್ಣವಾಗಿರುತ್ತದೆ. ಶರೀರದ ಶಕ್ತಿ ಹಾಗೂ ಜೀರ್ಣಶಕ್ತಿಯೂ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಮೂಗಿನಿಂದ ರಕ್ತಸ್ರಾವ ಆಗುವುದು, ಮೂತ್ರದಲ್ಲಿ ಉರಿ ಬರುವುದು, ಬೆವರುಸಾಲೆ, ಸೆಖಬೊಕ್ಕೆ, ಕೆಂಗಣ್ಣು ಇತ್ಯಾದಿ ರೋಗಗಳಾಗುತ್ತವೆ. ಬೇಸಿಗೆಯಲ್ಲಿ ಜಲಾಶಯಗಳು ಬತ್ತಿಹೋಗಿ ನೀರು ಮಲಿನವಾಗುತ್ತದೆ. ಅದರಿಂದಾಗಿ ಭೇದಿ, ವಾಂತಿ, ವಿಷಮಜ್ವರ, ಕಾಮಾಲೆ ಇತ್ಯಾದಿ ರೋಗಗಳು ಕೂಡ ಆಗಬಹುದು. ಬೇಸಿಗೆಯ ರೋಗಗಳಿಂದ ನಮ್ಮ ರಕ್ಷಣೆಯಾಗಬೇಕು ಮತ್ತು ಆರೋಗ್ಯ ಚೆನ್ನಾಗಿರಬೇಕೆಂದು ಈ ಮುಂದಿನ ಜಾಗರೂಕತೆಯನ್ನು ವಹಿಸಬೇಕು.

೧. ‘ಬೆಳಗ್ಗೆ ಹಲ್ಲುಜ್ಜಿದ ನಂತರ ಹಸುವಿನ ತುಪ್ಪ ಅಥವಾ ತೆಂಗಿನ ಎಣ್ಣೆಯ ಎರಡು ಹನಿಗಳನ್ನು ಮೂಗಿಗೆ ಹಾಕಬೇಕು. ಇದಕ್ಕೆ ‘ನಶ್ಯ ಎಂದು ಹೇಳುತ್ತಾರೆ. ಇದರಿಂದ ತಲೆ ಮತ್ತು ಕಣ್ಣುಗಳಲ್ಲಿನ ಉಷ್ಣತೆಯು ಶಮನವಾಗುತ್ತದೆ.

೨. ರುಚಿಕರ, ಒಣಗಿದ, ತಂಗಳು, ಉಪ್ಪು, ಅತೀ ಖಾರ, ಮಸಾಲೆಯುಕ್ತ ಮತ್ತು ತಳಹಿಡಿದ ಪದಾರ್ಥ ಹಾಗೂ ಹುಳಿಪದಾರ್ಥ ಉಪ್ಪಿನಕಾಯಿ, ಹುಣಸೆ ಹಣ್ಣು ಇತ್ಯಾದಿ ಹುಳಿ, ಕಹಿ ಮತ್ತು ಒಗರು ರಸದ ಪದಾರ್ಥಗಳನ್ನು ವರ್ಜಿಸಬೇಕು.

೩. ತಂಪು ಪಾನೀಯ, ಐಸ್ಕ್ರೀಮ್, ಕೆಡದಂತೆ ಜೋಪಾನ ಮಾಡಲು ಬಳಸಿದ ಡಬ್ಬಿಗಳಲ್ಲಿನ ರಾಸಾಯನಯುಕ್ತ ಹಣ್ಣುಗಳ ರಸಗಳನ್ನು ಸೇವಿಸಬಾರದು. ಈ ಪದಾರ್ಥಗಳು ಜೀರ್ಣಶಕ್ತಿಯನ್ನು ಕೆಡಿಸುತ್ತವೆ.

೪. ಮಾವಿನ ಹಣ್ಣಿನ ಸಿಹಿ ಪಾನಕ, ಲಿಂಬು ಶರಬತ್, ಜೀರಿಗೆಯ ಕಷಾಯ, ಎಳನೀರು, ಹಣ್ಣುಗಳ ರಸ, ಹಾಲು ಹಾಕಿ ಮಾಡಿದ ಅಕ್ಕಿಯ ಪಾಯಸ, ಗುಲ್ಕಂದ ಇತ್ಯಾದಿ ತಂಪು ಹಾಗೂ ದ್ರವ ಪದಾರ್ಥಗಳಲ್ಲಿ ಇವುಗಳಲ್ಲಿ ಯಾವುದು ಸಾಧ್ಯವಿದೆಯೋ ಅಥವಾ ದೊರಕಿದೆಯೋ, ಆ ಆಹಾರವನ್ನು ಉಪಯೋಗಿಸಬೇಕು. ಇದರಿಂದ ಸೂರ್ಯನ ಪ್ರಖರ ಉಷ್ಣತೆಯಿಂದ ಶರೀರವನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.

೫. ಈ ಸಮಯದಲ್ಲಿ ಹೆಚ್ಚು ಬಾಯಾರಿಕೆ ಆಗುವುದರಿಂದ ಸಾಕಷ್ಟು ನೀರು ಕುಡಿಯಬೇಕು.

೬. ಈ ಋತುವಿನಲ್ಲಿ ಮೊಸರು ಸೇವಿಸಬಾರದು. ಅದರ ಬದಲು ಸಕ್ಕರೆ ಮತ್ತು ಜೀರಿಗೆ ಹಾಕಿದ ಮಜ್ಜಿಗೆಯನ್ನು ಕುಡಿಯಬಹುದು.

೭. ಈ ಸಮಯದಲ್ಲಿ ಸಡಿಲವಾದ ಹತ್ತಿಯ ಬಟ್ಟೆಗಳನ್ನು ಧರಿಸಬೇಕು ಹಾಗೂ ಕೂದಲನ್ನು ಸ್ವಚ್ಛವಾಗಿಡಬೇಕು. ಪ್ಲಾಸ್ಟಿಕ್‌ನ ಚಪ್ಪಲಿಗಳನ್ನು ಉಪಯೋಗಿಸಬಾರದು.

೮. ಉರಿಬಿಸಿಲಿನಲ್ಲಿ ಹೋಗಲಿಕ್ಕಿದ್ದರೆ, ನೀರು ಕುಡಿದು ಹೊರಡಬೇಕು. ಕಣ್ಣು ಮತ್ತು ತಲೆಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೊಪ್ಪಿ ಮತ್ತು ಗೋಗಲ್ ಉಪಯೋಗಿಸಬೇಕು.

೯. ಉಷ್ಣ ವಾತಾವರಣದಿಂದ ತಂಪು ವಾತಾವರಣಕ್ಕೆ ಬಂದ ತಕ್ಷಣ ನೀರು ಕುಡಿಯಬಾರದು. ೧೦ – ೧೫ ನಿಮಿಷಗಳ ನಂತರ ನೀರು ಕುಡಿಯಬೇಕು.

೧೦. ಈ ದಿನಗಳಲ್ಲಿ ಫ್ರಿಡ್ಜ್‌ಲ್ಲಿನ ಅಥವಾ ಕೂಲರ್‌ನಲ್ಲಿನ ತಣ್ಣಗಿನ ನೀರನ್ನು ಕುಡಿಯುವುದರಿಂದ ಗಂಟಲು, ಹಲ್ಲು ಮತ್ತು ಕರುಳುಗಳಿಗೆ ದುಷ್ಪರಿಣಾಮವಾಗುತ್ತದೆ; ಆದ್ದರಿಂದ ಸಾದಾ ಅಥವಾ ಮಡಕೆಯಲ್ಲಿನ ನೀರು ಕುಡಿಯಬೇಕು.

೧೧. ಲಾವಂಚದ ಬೇರಿನ ಎರಡು ತುಂಡುಗಳನ್ನು ತಂದು ಒಂದನ್ನು ಕುಡಿಯುವ ನೀರಿನಲ್ಲಿ ಹಾಕಬೇಕು ಹಾಗೂ ಇನ್ನೊಂದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಮರುದಿನ ಒಣಗಿಸಿದ ಬೇರನ್ನು ಕುಡಿಯುವ ನೀರಿನಲ್ಲಿ ಹಾಕಿ ನೀರಿನಲ್ಲಿದ್ದ ಬೇರನ್ನು ಬಿಸಿಲಿನಲ್ಲಿಡಬೇಕು. ಪ್ರತಿದಿನ ಹೀಗೆ ಮಾಡಬೇಕು. ಲಾವಂಚದ ನೀರು ಉಷ್ಣತೆಯ ರೋಗಗಳನ್ನು ದೂರ ಮಾಡುತ್ತದೆ.

೧೨. ಹೆಚ್ಚು ವ್ಯಾಯಾಮ, ಹೆಚ್ಚು ಪರಿಶ್ರಮ, ಹೆಚ್ಚು ಉಪವಾಸ, ಬಿಸಿಲಿನಲ್ಲಿ ಅಲೆದಾಡುವುದು ಹಾಗೂ ಬಾಯಾರಿಕೆ-ಹಸಿವೆಯನ್ನು ತಡೆಗಟ್ಟುವುದು ಇತ್ಯಾದಿ ಮಾಡಬಾರದು.

೧೩. ಹಿಮ್ಮಡಿ ಒಡೆಯುವುದು ಮತ್ತು ಉಷ್ಣತೆಯ ತೊಂದರೆ ಆಗುತಿದ್ದರೆ ಕೈ ಕಾಲುಗಳಿಗೆ ಮದರಂಗಿ ಹಚ್ಚಿಕೊಳ್ಳಬೇಕು.

೧೪. ಮೈಥುನ ಮಾಡಬಾರದು. ಮಾಡಲಿಕ್ಕಿದ್ದರೆ ೧೫ ದಿನಕ್ಕೊಮ್ಮೆ ಮಾಡಬಹುದು.

೧೫. ರಾತ್ರಿ ತಡವಾಗಿ ಮಲಗುವುದು ಹಾಗೂ ಬೆಳಗ್ಗೆ ಸೂರ್ಯೋದಯದ ನಂತರವೂ ಮಲಗಿರುವುದನ್ನು ವರ್ಜಿಸಬೇಕು.

– ವೈದ್ಯ ಮೇಘರಾಜ ಪರಾಡಕರ್, ಸನಾತನ ಆಶ್ರಮ, ರಾಮನಾಥಿ ಗೋವಾ.