ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts

ಪ್ರಧಾನಿ ಮೋದಿ ಅವರಿಂದ ‘ಎಕ್ಸ್’ ಮೂಲಕ ಮಾಹಿತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ಎಲ್ಲ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ತ್ವರಿತ ಗತಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ದೇಶದ ಯುವಕರ ಹಿತ ಮತ್ತು ಅವರ ಭವಿಷ್ಯವೇ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುವವರನ್ನು ಬಿಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತರ್ ಮಂತರ್‌ ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷದ ಹೋರಾಟದ ಹಿನ್ನೆಲೆಯಲ್ಲಿ ಪ್ರಧಾನಿಯವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನೀವೇ ಯುವಕರ ಭವಿಷ್ಯಕ್ಕೆ ಅತ್ಯಂತ ಹೆಚ್ಚು ಹಾನಿ ಮಾಡಿದ್ದೀರಿ ! – ರಾಹುಲ್ ಗಾಂಧಿ ಟೀಕೆ

ಈ ಬರಹದ ನಂತರ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ, ನೀವೇ ಯುವಕರ ಭವಿಷ್ಯಕ್ಕೆ ಅತ್ಯಂತ ಹೆಚ್ಚು ಹಾನಿ ಮಾಡಿದ್ದೀರಿ. ನೀವು ಶಿಕ್ಷಣ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಬಿಟ್ಟಿರಿ ಮತ್ತು ಇದಕ್ಕೆ ಕಾರಣರಾದ ವ್ಯಕ್ತಿಗಳಿಗೆ ರಕ್ಷಣೆ ನೀಡಿದಿರಿ ಎಂದು ಟೀಕಿಸಿದ್ದಾರೆ.

ದೆಹಲಿಯ ಟಾಲಸ್ಟಾಯ್ ಮಾರ್ಗದಲ್ಲಿ ಪ್ರತಿಭಟನಾಕಾರರಿಂದ ಮತ್ತೆ ಹಿಂಸಾಚಾರ : ಪೊಲೀಸರಿಂದ ಲಾಠಿ ಪ್ರಹಾರ

ಜಂತರ್ ಮಂತರ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜುಲೈ ೨೨ರ ರಾತ್ರಿ ಮತ್ತೆ ಹಿಂಸಾಚಾರ ನಡೆಯಿತು. ಟಾಲಸ್ಟಾಯ್ ಮಾರ್ಗದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು, ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಸೆಲ್ ಸಿಡಿಸಿದರು. ಅಧಿಕಾರಿಗಳು ನೀಡಿದ ಮಾಹಿತಿಯಂತೆ ಜಂತರ್ ಮಂತರ್‌ ನಲ್ಲಿ ೪ ಸಾವಿರ ಜನರ ಸಾಮರ್ಥ್ಯವಿದ್ದರೂ ಅಲ್ಲಿ ಸುಮಾರು ೧೨ ಸಾವಿರ ಜನರು ಜಮಾಯಿಸಿದ್ದರು. ಇದರಿಂದಾಗಿ ಈ ಗುಂಪು ಟಾಲಸ್ಟಾಯ್ ಮಾರ್ಗ ಮತ್ತು ಸಂಸತ್ ಮಾರ್ಗಕ್ಕೆ ಹರಡಿತು.

ದೆಹಲಿ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ, ಕನಾಟ್ ಪ್ಲೇಸ್‌ ನ ಟಾಲಸ್ಟಾಯ್ ಮಾರ್ಗದ ಬಳಿ ರಾತ್ರಿ ಎಂಟೂವರೆ ಗಂಟೆಯ ಸುಮಾರಿಗೆ ಈ ಹಿಂಸಾಚಾರ ನಡೆದಿದೆ. ಅಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಪೊಲೀಸರ ಮೇಲೆ ಕಲ್ಲು ಮತ್ತು ಬಾಟಲಿಗಳಿಂದ ದಾಳಿ ನಡೆಸಿದರು. ಇದರಲ್ಲಿ ಕನಾಟ್ ಪ್ಲೇಸ್‌ ನ ಸಹಾಯಕ ಪೊಲೀಸ್ ಆಯುಕ್ತ ವಿವೇಕ ಭಗತ್ ಗಾಯಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಅವರನ್ನು ಚಿಕಿತ್ಸೆಗಾಗಿ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ನಿಮಿಷಗಳ ಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು; ಆದರೆ ಈಗ ಅಲ್ಲಿ ಮತ್ತೆ ಶಾಂತಿ ನೆಲೆಸಿದೆ ಎಂದು ತಿಳಿಸಿದ್ದಾರೆ.

ಸುರಕ್ಷತಾ ಸಿಬ್ಬಂದಿ ಆರಂಭದಲ್ಲಿ ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಚದುರಿ ಹೋಗುವಂತೆ ವಿನಂತಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಕಾಕ್ರೋಚ್ ಜನತಾ ಪಕ್ಷದ ನಾಯಕರು ಮತ್ತು ಸಂಘಟಕರನ್ನು ಘಟನಾ ಸ್ಥಳಕ್ಕೆ ಕರೆಸಿ ಜನಸಮೂಹಕ್ಕೆ ಶಾಂತಿ ಕಾಪಾಡುವಂತೆ ಮನವಿ ಮಾಡಲು ಹೇಳಿದರು; ಆದರೆ ಪ್ರತಿಭಟನಾಕಾರರು ತಮ್ಮ ಸ್ವಂತ ಸಂಘಟಕರ ಮನವಿಯನ್ನೂ ನಿರ್ಲಕ್ಷಿಸಿದರು.

ಪ್ರತಿಭಟನಾಕಾರರ ಬಳಿ ದೊಣ್ಣೆ ಮತ್ತು ತಲವಾರುಗಳು

ಹಿಂಸಾಚಾರ ಹೆಚ್ಚಾದ ನಂತರ ಭದ್ರತಾ ಸಿಬ್ಬಂದಿಯ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಈ ಘರ್ಷಣೆಯಲ್ಲಿ ಕೆಲವು ಪ್ರತಿಭಟನಾಕಾರರು ದೊಣ್ಣೆಗಳನ್ನು ತಂದಿದ್ದರು, ಇನ್ನು ಕೆಲವರು ತಲವಾರುಗಳನ್ನು ತೋರಿಸಿ ಬೆದರಿಸುತ್ತಿದ್ದರು ಎಂದು ಪೊಲೀಸರು ದಾವೆ ಮಾಡಿದ್ದಾರೆ. ತದನಂತರ ಪೊಲೀಸರು ಸೀಮಿತ ಬಲಪ್ರಯೋಗ ಮಾಡಿದರು. (ಈ ಬಗ್ಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ ಮುಂತಾದವುಗಳು ಬಾಯಿ ಏಕ ತೆರೆಯುವುದಿಲ್ಲ ? ಅಥವಾ ಇದು ಸರಿಯಾಗಿದೆ ಎಂದು ಅವರಿಗೆ ಹೇಳಬೇಕಿದೆಯೇ ? – ಸಂಪಾದಕರು)

ಭಾಜಪ ಗೂಂಡಾಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ ! – ಅಭಿಜಿತ್ ದೀಪ್ಕೆ ಆರೋಪ

ಕಾಕ್ರೋಚ್ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಭಾಜಪ ಕಳುಹಿಸಿದ ಗೂಂಡಾಗಳು ಪ್ರತಿಭಟನಾಕಾರರ ನಡುವೆ ಬಂದು ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಸರಕಾರ ಬೆಳಿಗ್ಗೆ ದೆಹಲಿಯ ೧೬ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಿತು. ಇದರಲ್ಲಿ ಸರ್ವೋಚ್ಚ ನ್ಯಾಯಾಲಯ ಮೆಟ್ರೋ ನಿಲ್ದಾಣವೂ ಸೇರಿದೆ. ಈ ಪ್ರಕರಣವು ಈಗ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮುಂದೆ ತಲುಪಿದೆ. ಮುಖ್ಯ ನ್ಯಾಯಮೂರ್ತಿಗಳು, ಅಗತ್ಯ ಬಿದ್ದರೆ ನಾನು ಹಸ್ತಕ್ಷೇಪ ಮಾಡುತ್ತೇನೆ ಎಂದು ಹೇಳಿದರು.

ಭರವಸೆ ಸಿಕ್ಕರೆ ಇಂದೇ ಉಪವಾಸ ಸತ್ಯಾಗ್ರಹ ಕೈಬಿಡುವೆ ! – ಸೋನಮ್ ವಾಂಗಚುಕ್

ಸೋನಮ್ ವಾಂಗ್‌ಚುಕ್

ಹರಿಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಜಂತರ್ ಮಂತರ್‌ ನಲ್ಲಿನ ಉಪವಾಸ ಸತ್ಯಾಗ್ರಹದ ಕಾರಣದಿಂದ ಉಚ್ಚ ನ್ಯಾಯಾಲಯದ ಆದೇಶದಂತೆ ದಾಖಲಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ವೀಡಿಯೊ ಒಂದನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು, ಉಪವಾಸ ಸತ್ಯಾಗ್ರಹಕ್ಕೆ ೨೫ ದಿನಗಳು ಕಳೆದಿವೆ; ಆದರೆ ನಾನು ಇನ್ನು ಜೀವಂತವಾಗಿದ್ದೇನೆ. ಕೆಲವು ಸಂಸದರು ನನ್ನನ್ನು ಭೇಟಿಯಾಗಲು ಬಂದಿದ್ದರು, ಅವರು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ವಿನಂತಿಸಿದರು. ನನಗೆ ಸರಕಾರದಿಂದ ಭರವಸೆ ಸಿಕ್ಕರೆ, ನಾನು ಇಂದೇ ಉಪವಾಸವನ್ನು ಮುಗಿಸಲು ಸಿದ್ಧನಿದ್ದೇನೆ. ಕೇವಲ ಸರಕಾರವು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಅಷ್ಟೇ ಎಂದಿದ್ದಾರೆ.

ಜುಲೈ ೨೨ರ ಸಂಜೆ ಆಮ್ ಆದ್ಮಿ ಪಾರ್ಟಿ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಸಮಾಜವಾದಿ ಪಾರ್ಟಿಯ ೧೫ ಸಂಸದರು ಮೇದಾಂತ ಆಸ್ಪತ್ರೆಗೆ ತೆರಳಿ ವಾಂಗಚುಕ್ ಅವರನ್ನು ಭೇಟಿಯಾಗಲು ಯತ್ನಿಸಿದರು; ಆದರೆ ಪೊಲೀಸರು ತಡೆದಿದ್ದರು. ಈ ವೇಳೆ ಪೊಲೀಸರು ಮತ್ತು ಸಂಸದರ ನಡುವೆ ವಾಗ್ವಾದ ನಡೆಯಿತು. ಕೆರಳಿದ ಸಂಸದರು ಪ್ರವೇಶದ್ವಾರದಲ್ಲೇ ಧರಣಿ ಸತ್ಯಾಗ್ರಹ ನಡೆಸಿದರು. ಒಂದು ಗಂಟೆ ಕಾಲ ಗೊಂದಲದ ವಾತಾವರಣವಿತ್ತು.

ನಾವು ಚರ್ಚೆಗೆ ಸಿದ್ಧರಿದ್ದೇವೆ ! – ಕೇಂದ್ರ ಸಚಿವ ನಡ್ಡಾ

ಕೇಂದ್ರ ಸಚಿವ ಜೆ.ಪಿ. ನಡ್ಡಾ

ಮತ್ತೊಂದೆಡೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಪತ್ರಿಕಾಗೋಷ್ಠಿ ನಡೆಸಿ, “ವಾಂಗಚುಕ್ ಅವರು ನಮಗೆ ಬಹಿರಂಗ ಪತ್ರ ಬರೆದಿದ್ದಾರೆ. ನಾವು ತ್ವರಿತದಲ್ಲೇ ಆ ಪತ್ರಕ್ಕೆ ಉತ್ತರಿಸುತ್ತೇವೆ. ಕಾಕ್ರೋಚ್ ಜನತಾ ಪಕ್ಷದ ಜನರ ಮಾತುಗಳನ್ನೂ ನಾವು ಶಾಂತವಾಗಿ ಕೇಳಿದ್ದೇವೆ. ಅವರು ತಮ್ಮ ಹೇಳಿಕೆಯನ್ನು ಬರೆದುಕೊಟ್ಟಿದ್ದಾರೆ. ನಾವು ಚರ್ಚೆಗೆ ಸಿದ್ಧರಿದ್ದೇವೆ. ಅವರು ಯಾವಾಗ ಹೇಳುತ್ತಾರೋ ಆಗ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ವಾಂಗಚುಕ್ ಅವರು ಸರಕಾರದ ಮುಂದೆ ೩ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದರಲ್ಲಿ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಂಸತ್ತಿನಲ್ಲಿ ಸುದೀರ್ಘ ಚರ್ಚೆಯಾಗಬೇಕು. ಶಿಕ್ಷಣ ಸಚಿವರ ರಾಜೀನಾಮೆಯನ್ನು ಪರಿಶೀಲಿಸಬೇಕು.

ಸಂಸತ್ತಿನ ಎರಡೂ ಸದನಗಳಲ್ಲಿ ಮತ್ತೆ ಗದ್ದಲ

ಸಂಸತ್ತಿನಲ್ಲಿ ಜುಲೈ ೨೩ ರಂದೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬೇಡಿಕೆಯಿಂದ ಗದ್ದಲ ಉಂಟಾಯಿತು. ಆಡಳಿತ ಮತ್ತು ವಿರೋಧ ಎರಡೂ ಕಡೆಯ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಒಟ್ಟುಗೂಡಿ ತಮ್ಮ ನಿಲುವುಗಳನ್ನು ಮಂಡಿಸಿದರು. ಈ ಪ್ರತಿಭಟನೆ ಮುಗಿದ ನಂತರ ಸಂಸದರು ಸದನಕ್ಕೆ ಮರಳಿದರು. ಲೋಕಸಭೆಯ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದವರು ಗದ್ದಲ ಮಾಡಿದರು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ‘ನೀಟ್’ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟರೆನ್ಸ್ ಟೆಸ್ಟ್, ಅಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆಯ ಪ್ರಕರಣದ ಕುರಿತು ಚರ್ಚೆಯಾಗಬೇಕು ಎಂಬ ಬೇಡಿಕೆಯನ್ನು ಅವರು ಮುಂದುವರಿಸಿದರು. ಪರಿಣಾಮವಾಗಿ ಈ ಗದ್ದಲದಲ್ಲಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು ಸದನದ ಕಲಾಪವನ್ನು ಒಂದು ಗಂಟೆಯ ಕಾಲ ಮುಂದೂಡಿದರು, ಹಾಗೂ ರಾಜ್ಯಸಭೆಯಲ್ಲೂ ವಿರೋಧ ಪಕ್ಷದ ಗಲಾಟೆಯಿಂದಾಗಿ ಕಲಾಪವನ್ನು ಒಂದು ಗಂಟೆಯ ಕಾಲ ತಡೆಹಿಡಿಯಬೇಕಾಯಿತು.

‘ಕಾಕ್ರೋಚ್’ ಪ್ರತಿಭಟನೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಪನ್ನು ಪ್ರವೇಶ

​‘ಮೋದಿ ಅವರನ್ನು ಕೆಳಗೆ ಇಳಿಸಬೇಕಿದೆ, ಅಧಿಕಾರ ಬದಲಾವಣೆ ಆಗೇ ಆಗುತ್ತದೆ !’(ಅಂತೆ)

ಜಂತರ್ ಮಂತರ್‌ ನಲ್ಲಿನ ಪ್ರತಿಭಟನೆಯಲ್ಲಿ ಈಗ ಅಮೆರಿಕದ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ ವಂತ್ ಸಿಂಗ್ ಪನ್ನು ಪ್ರವೇಶಿಸಿದ್ದಾನೆ. ಅವನು ಒಂದು ವೀಡಿಯೊ ಪ್ರಸಾರ ಮಾಡಿ, ತಾನು ಕಾಕ್ರೋಚ್ ಜನತಾ ಪಕ್ಷದ (‘ಸಿಜಿಪಿ’ಯ) ನಾಯಕರೊಂದಿಗೆ ಆನ್‌ ಲೈನ್ ಸಭೆ ನಡೆಸಿರುವುದಾಗಿ ಹೇಳಿಕೊಂಡಿದ್ದಾನೆ. ಇದರಲ್ಲಿ ಪ್ರತಿಭಟನೆಯ ಬಗ್ಗೆ ಚರ್ಚೆಯಾಯಿತು. ಅವನು, ಈ ಸಭೆಯಲ್ಲಿ ಸಿಜಿಪಿ ಮತ್ತು ನಾನು ಮಾಡಿದ ಘೋಷಣೆಯನ್ನು ನೆನಪಿನಲ್ಲಿಡಿ. ದೆಹಲಿಯನ್ನು ಮತ್ತು ಮೋದಿ ಅವರನ್ನು ಕೆಳಗೆ ಇಳಿಸಬೇಕಿದೆ. ಮೋದಿ ಅವರ ಅಧಿಕಾರವನ್ನು ಬುಡಮೇಲು ಮಾಡಲಾಗುವುದು. ಇದು ಖಚಿತ ಪರಿಹಾರವಲ್ಲ. ಇದಕ್ಕೆ ಖಚಿತ ಪರಿಹಾರವೆಂದರೆ ಭಾರತದ ವಿಘಟನೆ ಮಾಡುವುದು, ಭಾರತವನ್ನು ತುಂಡರಿಸುವುದು ಎಂದು ಹೇಳಿದ್ದಾನೆ.

ಸಿಜಿಪಿಯ ಮಾಜಿ ವಕ್ತಾರರಿಂದ ಅಭಿಜಿತ್ ದೀಪ್ಕೆ ಅವರ ಮೇಲೆ ಟೀಕೆ

ಜಂತರ್ ಮಂತರ್‌ ನಲ್ಲಿ ಪ್ರತಿಭಟನೆ ನಡೆಯುತ್ತಿರುವಾಗ ಕಾಕ್ರೋಚ್ ಜನತಾ ಪಕ್ಷದ ವಕ್ತಾರ ವಿಜೇತಾ ದಹಿಯಾ ಅಲ್ಲಿ ಉಪಸ್ಥಿತರಿರದೆ ತಮ್ಮ ‘ಬರ್ಗರ್’ ತಿನ್ನುವ ವೀಡಿಯೊ ಪ್ರಸಾರವಾದ ನಂತರ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಯಿತು. ಇದರ ಬಗ್ಗೆ ದಹಿಯಾ ಅವರು ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಮೇಲೆ ಆರೋಪಗಳನ್ನು ಮಾಡಿದ್ದಾರೆ.

ಅವರು, ನಾನು ಜಂತರ್ ಮಂತರ್ ಹತ್ತಿರ ‘ಬರ್ಗರ್’ ತಿನ್ನುತ್ತಿರುವಾಗ ಮನುವಾದಿ ಜನರು ನನ್ನನ್ನು ಪ್ರಶ್ನಿಸಿದರು. ಬರ್ಗರ್‌ನಿಂದಾಗಿ ಇಡೀ ಗದ್ದಲ ನಡೆಯಿತು. ನಾನು ಮತ್ತೆ ಪ್ರತಿಭಟನೆಗೆ ಹೋಗಲು ಸಿದ್ಧನಾಗುತ್ತಿದ್ದೆ. ಆ ಸಮಯದಲ್ಲಿ ನನಗೆ ಅಭಿಜಿತ್ ದೀಪ್ಕೆ ಅವರ ಕರೆ ಬಂತು. ಅಭಿಜಿತ್ ನನಗೆ, ನೀನು ಹೆದರಬೇಡ. ಪರವಾಗಿಲ್ಲ. ಇಂತಹ ವಿಷಯಗಳು ನಡೆಯುತ್ತವೆ ಎಂದನು. ಹಠಾತ್ತನೆ ಅವನು ನನಗೆ, ನೀನು ಪ್ರತಿಭಟನೆಗೆ ಬರಬೇಡ ಎಂದನು. ನಾನು ‘ಏಕೆ ಬರಬಾರದು?’ ಎಂದು ಕೇಳಿದೆ, ಅದಕ್ಕೆ ಅವನು, ‘ಅಯ್ಯೋ ನಿನ್ನ ಆ ಬರ್ಗರ್‌ ವಾಲಾ ವೀಡಿಯೊ ಸಾಕಷ್ಟು ವೈರಲ್ ಆಗಿದೆ’ ಎಂದನು. ನಾನು ಅವನಿಗೆ ಜನರು ಟೀಕಿಸುತ್ತಿದ್ದಾರೆ ಎಂದರೆ ಸರಿ; ಆದರೆ ನೀನು ನೋಡುತ್ತಿದ್ದೀಯಾ ಅಲ್ವಾ, ಕಳೆದ ೨ ರಾತ್ರಿಗಳಿಂದ ನಾನು ಅಲ್ಲೇ ಇದ್ದೆ. ಪೊಲೀಸರು ಬಂದರೆ ಏನು ಮಾಡಬೇಕು ಎಂದು ನಿರ್ಧರಿಸುತ್ತಿದ್ದೆ ಎಂದು ಹೇಳಿದೆ. ಅಭಿಜಿತ್ ‘ಹೌದು’ ಎಂದನು. ಅಭಿಜಿತ್, ನೀನು ಕಚೋರಿ ತಿನ್ನುತ್ತಿರುವ ಚಿತ್ರ ಪ್ರಸಾರವಾಗಿತ್ತು. ಆ ಸಮಯದಲ್ಲಿ ನಾನು ನಿನ್ನ ಪರವಾಗಿದ್ದೆ. ಬೇರೆ ಸಮಯದಲ್ಲೂ ನಾನು ನಿನ್ನ ಪರವಾಗಿದ್ದೆ. ಪ್ರತಿಭಟನೆಗೆ ಲಾಭವಾಗುವಂತಹ ಕೆಲಸಗಳನ್ನು ನಾನು ಮಾಡುತ್ತಿದ್ದೆ; ಆದರೆ ಈಗ ಹಠಾತ್ತನೆ ಒಂದು ದಿನ ನನಗೆ ತಿಳಿಯುತ್ತದೆ, ನನ್ನದೇ ಜನರು ನನ್ನನ್ನು ಬಲಿಪಶು ಮಾಡಿದ್ದಾರೆ ಎಂದು ಹೇಳಿದರು.

_________________________________________________________________________________________________________

ಕಾಂಗ್ರೆಸ್‌ ನ ಪ್ರತಿಭಟನೆ ಎಂದರೆ ಕೇವಲ ರಾಜಕೀಯ ‘ಸ್ಟಂಟ್’ !

ಸೋನಮ್ ವಾಂಗಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅವರಿಂದ ರಾಹುಲ್ ಗಾಂಧಿ ಮೇಲೆ ಕಠಿಣ ಟೀಕೆ

ಗೀತಾಂಜಲಿ ಆಂಗ್ಮೋ ಮತ್ತು ರಾಹುಲ್ ಗಾಂಧಿ

​ಕಾಂಗ್ರೆಸ್ ೨ ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿತ್ತು. ಇದರ ಬಗ್ಗೆ ಈಗ ಸೋನಮ್ ವಾಂಗಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ. ಅವರು, ಕಾಂಗ್ರೆಸ್‌ನ ಈ ಪ್ರತಿಭಟನೆಯು ಸಂಪೂರ್ಣವಾಗಿ ಕಪಟತನದಿಂದ ಕೂಡಿದ್ದು ಮತ್ತು ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿತ್ತು. ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ವಿದ್ಯಾರ್ಥಿಗಳ ಕಾಳಜಿ ಇದ್ದಿದ್ದರೆ, ಅವರು ಪ್ರಧಾನಿಯವರ ಮನೆಯ ಹೊರಗೆ ‘ಸ್ಟಂಟ್’ ಮಾಡುವ ಬದಲು ಜಂತರ್ ಮಂತರ್‌ ಗೆ ಹೋಗಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಹೇಳಿದ್ದಾರೆ.

ಗೀತಾಂಜಲಿ ಆಂಗ್ಮೊ ಅವರು,

೧. ರಾಜಕೀಯ ಪಕ್ಷಗಳು ಸೋನಮ್ ವಾಂಗಚುಕ್ ಅವರನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ !

ರಾಜಕಾರಣಿಗಳು ಈಗ ಸೋನಮ್ ವಾಂಗಚುಕ್ ಮತ್ತು ಅವರ ಚಿತ್ರಣವನ್ನು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ; ಆದರೆ ಜನತೆ ಹಾಗೂ ಯುವ ವರ್ಗ ಜಾಣರಾಗಿದ್ದು ಯಾರೂ ಅವರನ್ನು ವಂಚಿಸಲು ಸಾಧ್ಯವಿಲ್ಲ. ಈ ಪ್ರತಿಭಟನೆಯು ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದ್ದಲ್ಲ.

೨. ಪ್ರಧಾನಿಯವರ ಮನೆಯ ಹೊರಗಿನ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯ ಕೊರತೆಯಿತ್ತು !

ಪ್ರಧಾನಿಯವರ ಮನೆಯ ಹೊರಗಿನ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯ ಕೊರತೆಯಿತ್ತು. ಇದು ಜಾಗೃತ ಭಾರತವಾಗಿದ್ದು, ಪ್ರತಿಭಟನೆಯನ್ನು ತಮಗಾಗಿ ಬಳಸಿಕೊಳ್ಳುವ ಜನರನ್ನು ದೇಶದ ಯುವಕರು ದೂರ ತಳ್ಳಲಿದ್ದಾರೆ. ನಮಗೆ ಆಡಳಿತ ಅಥವಾ ವಿರೋಧ ಪಕ್ಷ ಎಂಬ ಯಾವುದೇ ಭೇದವಿಲ್ಲ. ನಮಗೆ ಸಂಸತ್ತು ಅತ್ಯುನ್ನತ ಸಂಸ್ಥೆಯಾಗಿದ್ದು, ಸಂಸತ್ತು ಶಿಕ್ಷಣವನ್ನು ಮೂಲಭೂತ ಮತ್ತು ಅತ್ಯಂತ ಪ್ರಮುಖ ವಿಷಯವೆಂದು ನೋಡಬೇಕು.

೩. ಸ್ವಾರ್ಥಕ್ಕಾಗಿ ಬರುವ ಜನರು ತಮ್ಮಷ್ಟಕ್ಕೆ ತಾವೇ ದೂರ ಸರಿಯುತ್ತಾರೆ !

ಯಾವುದೇ ರಾಜಕೀಯ ‘ಅಜೆಂಡಾ’ (ಕಾರ್ಯಸೂಚಿ) ಇಟ್ಟುಕೊಳ್ಳದೆ ಈ ಪ್ರತಿಭಟನೆಗೆ ಬೆಂಬಲ ನೀಡುವ ಪ್ರತಿಯೊಬ್ಬರಿಗೂ ಸ್ವಾಗತವಿದೆ; ಆದರೆ ತಮ್ಮ ಸ್ವಾರ್ಥಕ್ಕಾಗಿ ಬರುವ ಜನರು ತಮ್ಮಷ್ಟಕ್ಕೆ ತಾವೇ ದೂರ ಸರಿಯುತ್ತಾರೆ.

ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ

ಜಂತರ್ ಮಂತರ್‌ ನಲ್ಲಿನ ಹಿಂಸಾಚಾರದ ನಂತರ ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿಯ ಉಪರಾಜ್ಯಪಾಲರು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ದೆಹಲಿಯ ನೂತನ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರಿಗೆ ಯಾವುದೇ ವ್ಯಕ್ತಿಯನ್ನು ನೇರವಾಗಿ ವಶಕ್ಕೆ ಪಡೆಯುವ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಈ ವಿಶೇಷ ಅಧಿಕಾರವು ಜುಲೈ ೧೯, ೨೦೨೬ ರಿಂದ ಅಕ್ಟೋಬರ್ ೧೮, ೨೦೨೬ ರವರೆಗೆ ೩ ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ. ಈ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿಯ ಮೇಲೆ ಅಪರಾಧ ಸಾಬೀತಾಗದೆ ಅಥವಾ ವಿಚಾರಣೆ ನಡೆಸದೆ ೧೨ ದಿನಗಳಿಂದ ೧೨ ತಿಂಗಳವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇಡಬಹುದು.

ಕಳೆದ ವರ್ಷ ಸೆಪ್ಟೆಂಬರ್ ೨೬ ರಂದು ಲಡಾಖ್‌ ನ ಲೇಹ್‌ ನ ಜಿಲ್ಲಾ ದಂಡಾಧಿಕಾರಿಗಳ ಆದೇಶದ ನಂತರ ಪ್ರತಿಭಟನಾಕಾರ ಸೋನಮ್ ವಾಂಗಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧಿಸಲಾಗಿತ್ತು. ಅವರನ್ನು ಬರೋಬ್ಬರಿ ೧೭೦ ದಿನಗಳ ಕಾಲ ಗೃಹ ಬಂಧನದಲ್ಲಿಡಲಾಗಿತ್ತು.