15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban

ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ಪ್ಯಾರಿಸ್ (ಫ್ರಾನ್ಸ್) – ದೇಶದ ಸಂಸತ್ತು ೧೫ ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸುವ ವಿಧೇಯಕವನ್ನು ಅಂಗೀಕರಿಸಿದೆ. ಇದರಿಂದಾಗಿ ಇಂತಹ ಕಾನೂನನ್ನು ಜಾರಿಗೆ ತಂದ ಯುರೋಪಿಯನ್ ಒಕ್ಕೂಟದ ಮೊದಲ ದೇಶವಾಗಿ ಫ್ರಾನ್ಸ್ ಹೊರಹೊಮ್ಮಿದೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈ ವಿಧೇಯಕವನ್ನು ಬೆಂಬಲಿಸಿದ್ದು, ಸೆಪ್ಟೆಂಬರ್‌ನಿಂದ ಇದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ. ಫ್ರಾನ್ಸ್ ನಂತರ ಬ್ರಿಟನ್, ಸ್ಪೇನ್, ಗ್ರೀಸ್ ಮತ್ತು ಡೆನ್ಮಾರ್ಕ್ ದೇಶಗಳು ಸಹ ಸಾಮಾಜಿಕ ಮಾಧ್ಯಮಗಳ ಬಳಕೆಗಾಗಿ ಕನಿಷ್ಠ ವಯಸ್ಸನ್ನು ನಿಗದಿಪಡಿಸಲು ಸಿದ್ಧತೆ ನಡೆಸುತ್ತಿವೆ.

ಕಾನೂನು ಅಂಗೀಕಾರಗೊಂಡ ನಂತರ ಮಕ್ಕಳ ವಯಸ್ಸನ್ನು ಹೇಗೆ ಪರಿಶೀಲಿಸಲಾಗುತ್ತದೆ?, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫ್ರಾನ್ಸ್‌ನ ಹಲವು ಪೋಷಕರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಕೆಲವು ಕಿಶೋರಾವಸ್ಥೆಯ ಮಕ್ಕಳು ‘ಆನ್‌ಲೈನ್’ ಶೈಕ್ಷಣಿಕ ಸಾಮಗ್ರಿಗಳನ್ನು ಪಡೆಯುವುದು, ಹಾಗೆಯೇ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದ ಕುರಿತು ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ದೇಶದ ಶಿಕ್ಷಣ ಸಚಿವರು ಹಾಗೂ ‘ಆಮ್ನೆಸ್ಟಿ ಇಂಟರ್ನ್ಯಾಷನಲ್’ ಎಂಬ ಮಾನವ ಹಕ್ಕುಗಳ ಸಂಸ್ಥೆಯು ಸಹ, ಕೇವಲ ನಿಷೇಧವೊಂದೇ ಸಾಕಾಗುವುದಿಲ್ಲ, ಬದಲಿಗೆ ಮಕ್ಕಳಿಗೆ ಡಿಜಿಟಲ್ ಜಗತ್ತಿನ ಸುರಕ್ಷಿತ ಬಳಕೆಯ ಬಗ್ಗೆ ಶಿಕ್ಷಣ ನೀಡುವುದು ಅಷ್ಟೇ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲೂ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಕಿಶೋರಾವಸ್ಥೆಯ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿರುವಾಗ, ಸರಕಾರ ಅದರ ಬಳಕೆಯ ಮೇಲೆ ನಿರ್ಬಂಧಗಳನ್ನು ಏಕೆ ವಿಧಿಸುತ್ತಿಲ್ಲ?