ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ

ಮಾಜಿ ಪ್ರಧಾನಿ ಶೇಖ ಹಸೀನಾ ರವರ ಮಹತ್ವದ ಘೋಷಣೆ

​ನವದೆಹಲಿ – ದೇಶಕ್ಕೆ ಹಿಂತಿರುಗಿದ ನಂತರ ನನ್ನನ್ನು ಜೈಲಿಗೆ ಕಳುಹಿಸಬಹುದು ಮತ್ತು ಗಲ್ಲಿಗೇರಿಸಲೂಬಹುದು, ಎಂಬ ಸಂಪೂರ್ಣ ಕಲ್ಪನೆ ನನಗಿದೆ; ಆದಾಗ್ಯೂ ನಾನು ತಾಯ್ನಾಡಿಗೆ ಹಿಂತಿರುಗಲು ನಿರ್ಧರಿಸಿದ್ದೇನೆ, ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ ಹಸೀನಾ ರವರು ಮತ್ತೊಮ್ಮೆ ಘೋಷಿಸಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು.

​ಶೇಖ ಹಸೀನಾರವರು ಮುಂದೆ ಮಾತನಾಡಿ, ‘೨೦೨೪ ರ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ತಪ್ಪಿತಸ್ಥರೆಂದು ನಿರ್ಧರಿಸುವುದು ಮತ್ತು ಮರಣದಂಡನೆ ವಿಧಿಸುವುದು ರಾಜಕೀಯ ಪ್ರೇರಿತವಾಗಿದೆ’ ಎಂದು ಹೇಳಿದರು. ಈ ಪ್ರತಿಭಟನೆಯಿಂದಾಗಿ ಶೇಖ ಹಸೀನಾ ರವರು ದೇಶ ತೊರೆದು ಓಡಿಹೋಗಬೇಕಾಯಿತು ಮತ್ತು ಅವರಿಗೆ ಭಾರತವು ಆಶ್ರಯ ನೀಡಿತ್ತು. ಅಂದಿನಿಂದ ಅವರು ಭಾರತದಲ್ಲಿಯೇ ವಾಸಿಸುತ್ತಿದ್ದಾರೆ. ​ಬಾಂಗ್ಲಾದೇಶದ ಯುದ್ಧ ಅಪರಾಧಗಳ ನ್ಯಾಯಾಧಿಕರಣವು ನವೆಂಬರ್ ೨೦೨೫ ರಲ್ಲಿ ಅವರ ಗೈರುಹಾಜರಿಯಲ್ಲಿ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿತ್ತು. ಆ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ ರವರ ನೇತೃತ್ವದ ಮಧ್ಯಂತರ ಸರಕಾರ ಅಧಿಕಾರದಲ್ಲಿತ್ತು. ಬಾಂಗ್ಲಾದೇಶವು ಹಸೀನಾ ರವರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ವಿನಂತಿಸಿದೆ. ನವದೆಹಲಿಗೆ ಈ ವಿನಂತಿ ತಲುಪಿದ್ದು, ಕಾನೂನು ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಇತ್ತೀಚೆಗೆ ತಿಳಿಸಿದ್ದಾರೆ.