ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !

ಕ್ಯಾಪ್ಟನ್ ಪ್ರವೀಣ ಚತುರ್ವೇದಿ (ನಿವೃತ್ತ) ಮತ್ತು ಸದ್ಗುರು ಡಾ. ಚಾರುದತ್ತ ಪಿಂಗಳೆ

ಭಾರತದ ಇತಿಹಾಸದಲ್ಲಿ ಅನೇಕ ರಾಜ-ಮಹಾರಾಜರು, ಸಂಘಟನೆಗಳು, ಸಂತರು ಮತ್ತು ವ್ಯಕ್ತಿಗಳು ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ಹೋರಾಟ ಮಾಡಿದ್ದಾರೆ. ಅವರಿಂದಾಗಿಯೇ ಇಂದು ಹಿಂದೂ ಧರ್ಮ ಮತ್ತು ಸಂಸ್ಕೃತಿ ಉಳಿದುಕೊಂಡಿದೆ. ಇದೇ ಸಾಲಿನಲ್ಲಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರೊಂದಿಗೆ ‘ಪ್ರಾಚ್ಯಮ್ ಒಟಿಟಿ ಪ್ಲಾಟ್‌ಫಾರ್ಮ್‌ನ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಕ್ಯಾಪ್ಟನ್ ಪ್ರವೀಣ ಚತುರ್ವೇದಿ (ನಿವೃತ್ತ) ಅವರು ‘ಚೇಂಜ್ ಮೇಕರ್ಸ್ ಕಾರ್ಯಕ್ರಮದ ಅಡಿಯಲ್ಲಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಭಾರತದ ತಥಾಕಥಿತ ಜಾತ್ಯತೀತತೆ ಮತ್ತು ಹಿಂದೂ ರಾಷ್ಟ್ರದ ಕುರಿತು ಮಂಡಿಸಿದ ಪ್ರಬೋಧನಾತ್ಮಕ ವಿಚಾರಗಳನ್ನು ಈ ಲೇಖನದ ಮೂಲಕ ಪ್ರಕಟಿಸುತ್ತಿದ್ದೇವೆ.

ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ನಾವು ಧರ್ಮ ಎಂದರೇನು ?  ಎಲ್ಲಾ ಧರ್ಮಗಳ ನಡುವಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಸಾಧ್ಯ ಮತ್ತು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಅತ್ಯಾವಶ್ಯಕ ಎಂಬ ವಿಷಯಗಳ ಅಂಶಗಳನ್ನು ಓದಿದ್ದೇವೆ. ಈ ವಾರ ಈ ಸಂದರ್ಶನದ ಅಂತಿಮ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದು ಸಾರ್ವಜನಿಕರ ಇಚ್ಛೆ !

ಪ್ರಜಾಪ್ರಭುತ್ವದಲ್ಲಿ ಜನಶಕ್ತಿಗೆ ಮಹತ್ವವಿದೆ. ಹಿಂದೂ ಜನಜಾಗೃತಿ ಸಮಿತಿಯು ೨೦೧೨ ರಲ್ಲಿ ಮೊದಲ ಬಾರಿ ಹಿಂದೂ ರಾಷ್ಟ್ರದ (ಸನಾತನ ರಾಷ್ಟ್ರದ) ಕಲ್ಪನೆಯನ್ನು ಮಂಡಿಸಿದಾಗ, ಇದು ಕೇವಲ ಒಂದು ಕನಸು ಮತ್ತು ವಾಸ್ತವಕ್ಕೆ ಬರಲು ಅಸಾಧ್ಯ ಎಂದು ಅನೇಕರು ಭಾವಿಸಿದ್ದರು. ನೀವು ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದೀರಿ, ಇದು ಅಸಂವಿಧಾನಿಕ ಎಂದು ಅನೇಕರು ಹೇಳುತ್ತಿದ್ದರು. ಇಂದು ಹಿಂದೂ ರಾಷ್ಟ್ರಕ್ಕಾಗಿ ಸಾರ್ವಜನಿಕರ ಭಾವನೆಗಳು ವ್ಯಕ್ತವಾಗುತ್ತಿವೆ, ವಿವಿಧ ‘ಡಿಜಿಟಲ್ ಫುಟ್

ಪ್ರಿಂಟ್‌ಗಳು (ಇಂಟರನೆಟ್‌ನಲ್ಲಿ ಮಾಹಿತಿ ಇಡುವುದು) ಸಿದ್ಧವಾಗುತ್ತಿವೆ ಹಾಗೂ ಜಗತ್ತು ಅದರ ಮಾಹಿತಿಯನ್ನು ವಿಶ್ಲೇಷಿಸುತ್ತಿದೆ ಮತ್ತು ಅಧ್ಯಯನ ಮಾಡುತ್ತಿದೆ. ಇಂದು ಜಗತ್ತು ಭಾರತವನ್ನು ‘ಹಿಂದೂ ಪುನರುತ್ಥಾನದ ಕಾಲ ಎಂದು ನೋಡುತ್ತಿದೆ.

೨೦೧೨ ರಿಂದ ಹಿಂದೂ ಜನಜಾಗೃತಿ ಸಮಿತಿಯು ‘ಹಿಂದೂ ರಾಷ್ಟ್ರ ಜಾಗೃತಿಯ ಅಭಿಯಾನವನ್ನು ಪ್ರಾರಂಭಿಸಿದೆ. ಜನಸಾಮಾನ್ಯರ ಮೇಲೆ ಈ ವಿಷಯದ ತೀವ್ರ ಪ್ರಭಾವ ಬೀರಿದೆ. ಆದ್ದರಿಂದ ಸಾರ್ವಜನಿಕರ ಈ ಭಾವನೆಯನ್ನು ಯಾವುದೇ ರಾಜಕೀಯ ಪಕ್ಷವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಲಿಖಿತ ಭರವಸೆ ನೀಡುತ್ತವೆ; ಆದರೆ ಆ ಭರವಸೆಯನ್ನು ಈಡೇರಿಸುವುದಿಲ್ಲ. ನ್ಯಾಯಾಂಗವು ಅದನ್ನು ಸಾರ್ವಜನಿಕರೊಂದಿಗಿನ ಒಪ್ಪಂದವೆಂದು ಪರಿಗಣಿಸಿ ಮಾನ್ಯತೆ ನೀಡಬೇಕು. ನಿಗದಿತ ಅವಧಿಯಲ್ಲಿ ಸಂಬಂಧಿತ ರಾಜಕೀಯ ಪಕ್ಷಗಳು ಪ್ರಣಾಳಿಕೆಯಂತೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಆ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಒಬ್ಬ ಹಿಂದೂ ಅಥವಾ ಒಬ್ಬ ಭಾರತೀಯನಾಗಿ ನಾನು ನನ್ನ ಸಹವರ್ತಿ ದೇಶವಾಸಿಗಳಿಗೆ ಕರೆ ನೀಡುತ್ತೇನೆ, ನಿಮಗೆ ನಿಜವಾಗಿಯೂ ಧರ್ಮ, ಸಂಸ್ಕೃತಿ, ಭವ್ಯ ಇತಿಹಾಸ, ಮಂದಿರ ಪರಂಪರೆ, ಹಿಂದೂ ತತ್ವಜ್ಞಾನದ ರಕ್ಷಣೆಯಾಗಬೇಕೋ ಬೇಡವೋ ?, ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

– ಸದ್ಗುರು ಡಾ. ಚಾರುದತ್ತ ಪಿಂಗಳೆ, ಹಿಂದೂ ಜನಜಾಗೃತಿ ಸಮಿತಿ.

೧. ಧರ್ಮಕ್ಕೆ ರಾಜಾಶ್ರಯವಿದ್ದರೆ ಮಾತ್ರ ಹಿಂದೂ ರಾಷ್ಟ್ರಕ್ಕೆ ಪರಿಪೂರ್ಣತೆ ಸಿಗುವುದು !

ಸಂವಿಧಾನದಲ್ಲಿ ‘ಸಮಾಜವಾದಿ ಮತ್ತು ‘ಜಾತ್ಯತೀತ ಎಂದು ಬರೆಯಲ್ಪಟ್ಟಿರುವಲ್ಲಿ, ‘ಈ ಸಂವಿಧಾನವು ಭಾರತೀಯ ಸಂಸ್ಕೃತಿ, ಪರಂಪರೆ, ತತ್ತ್ವಜ್ಞಾನ ಮುಂತಾದವುಗಳನ್ನು ರಕ್ಷಿಸುತ್ತದೆ ಎಂದು ಬರೆಯಬಹುದು. ಇದರಿಂದ ನಮಗೆ ಏನು ಬೇಕೋ, ಅದನ್ನು ಸಾಧಿಸುವ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ಸಂಭವಿಸಬಹುದು. ಸರಕಾರವು ಖಂಡಿತವಾಗಿಯೂ ಇದರ ಬಗ್ಗೆ ಯೋಚಿಸಬೇಕು. (ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ)) ದೇಶಗಳು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಿಕೊಂಡವು. ಅದನ್ನು ಯಾರೂ ಆಕ್ಷೇಪಿಸಲಿಲ್ಲ ಮತ್ತು ಇಡೀ ಜಗತ್ತು ಅವುಗಳನ್ನು ಸ್ವೀಕರಿಸಿತು; ಆದರೆ ಹಿಂದೂ ಸನಾತನವನ್ನು ಆತ್ಮವಾಗಿ ಮಾಡಿಕೊಂಡಿರುವ ರಾಷ್ಟ್ರವನ್ನು ನಾವು ‘ಹಿಂದೂ ರಾಷ್ಟ್ರ ಎಂದು ಘೋಷಿಸಲು ನಮ್ಮಿಂದ ಸಾಧ್ಯವಾಗಲಿಲ್ಲ.

‘ಧರ್ಮವು ಬಲದಿಂದ ರಕ್ಷಿಸಲ್ಪಡುತ್ತದೆ ಎಂಬುದು ಧರ್ಮವಚನವಾಗಿದೆ. ರಾಜಧರ್ಮ ದಲ್ಲಿ ಬಲವಿರುತ್ತದೆ, ಆದ್ದರಿಂದ ಎಲ್ಲಿಯ ವರೆಗೆ ಧರ್ಮಕ್ಕೆ ರಾಜಾಶ್ರಯ ದೊರೆಯುವುದಿಲ್ಲವೋ, ಅಂದರೆ ಎಲ್ಲಿಯ ವರೆಗೆ ರಾಜ್ಯವು ‘ಹಿಂದೂ ರಾಜ್ಯವಾಗುವುದಿಲ್ಲವೋ, ಅಲ್ಲಿಯ ವರೆಗೆ ಅದರಲ್ಲಿ ಹಿಂದೂ ರಾಷ್ಟ್ರದ ಪರಿಪೂರ್ಣತೆ ಸಾಧಿಸಲಾಗುವುದಿಲ್ಲ. ಈ ಅರ್ಥದಲ್ಲಿ ನಾವು ರಾಷ್ಟ್ರ-ರಾಜ್ಯದ ದೃಷ್ಟಿಕೋನದಿಂದ ಹಿಂದೂ ರಾಷ್ಟ್ರವು ಒಂದು ಹಿಂದೂ ರಾಜ್ಯವಾಗಿರಬೇಕು ಎಂಬುದನ್ನು ಪರಿಗಣಿಸಬೇಕು.

೨.  ಭಾರತದ ವಿರುದ್ಧ ಒಟ್ಟು ಸೇರಿದ ಮುಸಲ್ಮಾನ ಮತ್ತು ಕ್ರೈಸ್ತ ಶಕ್ತಿಗಳು !

ವಾಸ್ತವದಲ್ಲಿ ಭಾರತವು ‘ದಾರ್ ಉಲ್ ಇಸ್ಲಾಂ (ಇಸ್ಲಾಮಿಕ್ ಪ್ರದೇಶ) ಆಗುತ್ತದೆಯೋ ಅಥವಾ ಕ್ರೈಸ್ತರ ಕೈವಶವಾಗುತ್ತದೆಯೋ ? ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇಸ್ಲಾಂ ಧರ್ಮಕ್ಕೆ ೮೦೦ ವರ್ಷಗಳಲ್ಲಿ ಹಿಂದೂಗಳನ್ನು ಸೋಲಿಸಲು ಸಾಧ್ಯವಾಗಲಿಲ್ಲ ಮತ್ತು ಬ್ರಿಟಿಷರು ಭಾರತವನ್ನು ೨೦೦ ವರ್ಷಗಳ ಕಾಲ ಆಳಿದರೂ ಕ್ರೈಸ್ತ ಧರ್ಮವು ಭಾರತವನ್ನು ಮತಾಂತರಿಸಲು ಸಾಧ್ಯವಾಗಲಿಲ್ಲ ಎಂಬುದು ಅವರಿಗೆ ತಿಳಿದಿದೆ. ಹಿಂದೂಗಳು ಅಜೇಯರಾಗಿದ್ದು ಅವರನ್ನು ಸೋಲಿಸುವುದು ಕಷ್ಟ ಎಂದು ತಿಳಿದಿರುವುದರಿಂದ, ಈ ಎರಡೂ ಶಕ್ತಿಗಳು ಭಾರತದ ವಿರುದ್ಧ ಒಟ್ಟಾಗಿವೆ.

೩. ಭಾರತದಲ್ಲಿ ಹಿಂದುತ್ವಕ್ಕೆ ಪೂರಕ ವಾತಾವರಣ

ಕೆಲವೊಮ್ಮೆ  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಒಂದು ಪಿತೂರಿಯೇನೋ ಎಂದೆನಿಸುತ್ತದೆ; ಏಕೆಂದರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ಕಳೆದ ೬೦ ವರ್ಷಗಳಲ್ಲಿ ನಾವು ಕಳೆದ ೧ ಸಾವಿರ ವರ್ಷಗಳಲ್ಲಿ ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನದ್ದನ್ನು ಕಳೆದು ಕೊಂಡಿದ್ದೇವೆ. ಈ ಸೋಲಿಗೆ ಶಿಕ್ಷಣ ವ್ಯವಸ್ಥೆ ಮತ್ತು ಮನಸ್ಥಿತಿಯೇ ಕಾರಣ. ಏಕೆಂದರೆ ನಮ್ಮ ಆಡಳಿತಗಾರರು ದೇಶವನ್ನು ನಿರ್ಮಿಸಲು ಮಾಡಬೇಕಿದ್ದನ್ನು ಮಾಡಲಿಲ್ಲ. ಖಂಡಿತವಾಗಿ ಈಗ ನಮ್ಮ ರಾಜ್ಯ ಬರಬೇಕು, ನಮ್ಮದೇ ಆದ ದೇಶವಿರಬೇಕು ಮತ್ತು ಹಿಂದೂಗಳಾಗಿ ನಮಗೆ ರಕ್ಷಣೆ ಸಿಗಬೇಕು ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡುತ್ತಿದೆ. ಇದೇ ಭಾವನೆಯಿಂದಾಗಿ ನಾವು ರಾಹುಲ ಗಾಂಧಿಯವರು ಕೆಲವೊಮ್ಮೆ ಗಂಗಾಸ್ನಾನ ಮಾಡುವುದು, ಜನಿವಾರ ಧರಿಸುವುದನ್ನು ನೋಡುತ್ತಿದ್ದೇವೆ; ಏಕೆಂದರೆ ಜನರ ಭಾವನೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅವರಿಗೂ ತಿಳಿದಿದೆ. ಸದ್ಯ ಭಾರತದಲ್ಲಿ ಯುದ್ಧಸ್ಥಿತಿ ಉದ್ಭವಿಸುತ್ತಿದೆ. ಭಾರತವು ಅಪರೂಪದ ಖನಿಜಗಳ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಜಗತ್ತು ನೋಡುತ್ತಿದೆ. ಭಾರತೀಯ ಜನರು ಸಂಘಟಿತರಾಗುತ್ತಿದ್ದಾರೆ. ಆದ್ದರಿಂದ ಭಾರತದ ಪ್ರಗತಿ ನಿಲ್ಲಬೇಕು ಎಂದು ಅಮೇರಿಕಾ ಬಯಸುತ್ತದೆ. ಈ ದೃಷ್ಟಿಕೋನದಿಂದ ನಾವು ‘ಟ್ಯಾರಿಫ್ ವಾರ್ (ಆಮದು ಸುಂಕದ ಯುದ್ಧ) ಅನ್ನು ನೋಡಬೇಕು. ಚೀನಾ ಅವರ ಮೊದಲ ಶತ್ರುವಾಗಿದ್ದರೂ, ಅವರು ಚೀನಾ ಮತ್ತು ಇತರ ದೇಶಗಳನ್ನು ಬಿಟ್ಟು ನೇರವಾಗಿ ಭಾರತವನ್ನು ಗುರಿಯಾಗಿಸುತ್ತಿದ್ದಾರೆ. ಇದಕ್ಕೆ ಒಂದು ಧಾರ್ಮಿಕ ಆಯಾಮವೂ ಇದೆ, ಅದೇನೆಂದರೆ ಕ್ರೈಸ್ತ ಧರ್ಮವು ಜಗತ್ತಿನಾದ್ಯಂತ ಪ್ರಾಬಲ್ಯ ಸಾಧಿಸಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದ ಇದರ ವಿಶ್ಲೇಷಣೆಯೂ

ಆಗಬೇಕು. ಈಗ ನಾವು ‘ವಿಶ್ವಗುರು ಆಗಲು ಪ್ರಯತ್ನಿಸುತ್ತಿರುವಾಗ, ವಿರೋಧಿಗಳಿಗೆ ತಮಗೆ ಹಿಂದೂಗಳನ್ನು ಮತಾಂತರಿಸಲು, ಅವರ ಹಾದಿ ತಪ್ಪಿಸಲು ಸಾಧ್ಯವಾಗುವುದಿಲ್ಲ ಮತ್ತು ಒಂದು ವೇಳೆ ತಾವೇನಾದರೂ ತಪ್ಪು ಮಾಡಿದರೆ ಅವರಿಗೆ ಅಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಭಯ ಕಾಡುತ್ತಿದೆ. ಈ ದೃಷ್ಟಿಕೋನದಿಂದ ನಾವು ನೋಡಬೇಕಾಗಿದೆ.

೪. ಎರಡೂವರೆ ಸ್ತರದಲ್ಲಿನ ಯುದ್ಧವನ್ನು ಮಾಡಲು ಭಾರತವು ಸಿದ್ಧತೆ ಮಾಡಿಕೊಳ್ಳಬೇಕು !

ಪ್ರಭು ಶ್ರೀರಾಮನು ಮೊದಲು ವನವಾಸವನ್ನು ಎದುರಿಸಬೇಕಾಯಿತು. ಅವನು ರಾವಣನೊಂದಿಗೆ ಭೀಕರ ಯುದ್ಧವನ್ನು ಮಾಡಿ ನಂತರ ರಾಮರಾಜ್ಯವನ್ನು ಸ್ಥಾಪಿಸಿದನು. ಪಾಂಡವರ ಬಗ್ಗೆ ಯೋಚಿಸಿದರೆ, ಅವರ ಜೀವನದಲ್ಲಿ ಅನೇಕ ಸಂಕಷ್ಟಗಳು ಬಂದವು. ಅವರು ಪಗಡೆಯನ್ನಾಡಿದರು ಮತ್ತು ಅವರ ಜೀವನದಲ್ಲಿ ಅಜ್ಞಾತವಾಸ ಬಂದಿತು. ಅದರ ನಂತರ ಮಹಾಭಾರತ ಯುದ್ಧ ನಡೆಯಿತು. ಈ ಮಟ್ಟದಲ್ಲಿ ನಮ್ಮ ಸಾಧನೆ ಎಷ್ಟಿದೆ ಎಂಬುದನ್ನು ಯೋಚಿಸುವುದು ಅಗತ್ಯವಾಗಿದೆ. ಮಧ್ಯದಲ್ಲಿ ಭಾರತದ ಭೂಸೇನಾ ಪ್ರಮುಖರು ‘ಒಮ್ಮೆ  ಭಾರತದಲ್ಲಿ ಯುದ್ಧ ನಡೆದರೆ ಅದು ಎರಡೂವರೆ ಸ್ತರದಲ್ಲಿ ನಡೆಯುವುದು ಎಂದು ಹೇಳಿದ್ದರು. ಅವರ ಪ್ರಕಾರ, ‘ದೇಶದೊಳಗೆ ಪಾಕಿಸ್ತಾನ ಬೆಂಬಲಿತ, ಬಾಂಗ್ಲಾದೇಶ ಬೆಂಬಲಿತ ಮತ್ತು ಚೀನಾ ಬೆಂಬಲಿತ ಶಕ್ತಿಗಳ ಮೈತ್ರಿಕೂಟವಿದೆ. ನನ್ನ ಪ್ರಕಾರ ದೇಶದಲ್ಲಿ ಕ್ರೈಸ್ತ ಮಿಷನರಿ ಬೆಂಬಲಿತ ಶಕ್ತಿಗಳೂ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಗಡಿಯಲ್ಲಿ ಎಷ್ಟು ಯುದ್ಧ ನಡೆಯುತ್ತದೆಯೋ, ಅಷ್ಟೇ ಯುದ್ಧ ದೇಶದೊಳಗೂ ನಡೆಯುವುದು ಮತ್ತು ಅದಕ್ಕಾಗಿ ಭಾರತೀಯ ಜನರು ಸಿದ್ಧರಾಗಿರಬೇಕು ಎಂದು ಸೇನಾ ಪ್ರಮುಖರು ಎಚ್ಚರಿಸಿದ್ದರು. ಒಬ್ಬ ಸೇನಾಧಿಕಾರಿ ದೇಶದೊಳಗಿನ ಅಪಾಯಗಳನ್ನು ಆಳವಾಗಿ ಅಧ್ಯಯನ ಮಾಡಿ ಇದನ್ನು ಹೇಳುತ್ತಿದ್ದರೆ, ಮತ್ತೊಮ್ಮೆ ರಾಮಾಯಣ ಮತ್ತು ಮಹಾಭಾರತದ ಪುನರಾವರ್ತನೆ ಆಗುತ್ತಿಲ್ಲ ತಾನೇ ? ಎಂದು ಅನಿಸುತ್ತದೆ.

೫. ಸರಕಾರಿ ವ್ಯವಸ್ಥೆ ಮತ್ತು ಜನರ ಸಮನ್ವಯದಿಂದ ರಾಷ್ಟ್ರದ ರಕ್ಷಣೆ

ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಮುನ್ನ ಜಗತ್ತು ಮೂರನೇ ಮಹಾ ಯುದ್ಧದತ್ತ ಸಾಗುತ್ತಿದೆ. ಪ್ರಸ್ತುತ ಮಾಧ್ಯಮಗಳ ಯುದ್ಧ ನಡೆಯುತ್ತಿದೆ, ನಿರೂಪಣೆಗಳ (‘ನರೇಟಿವ್ಗಳ) ಯುದ್ಧ ನಡೆಯುತ್ತಿದೆ, ಹಾಗೆಯೇ ಟ್ರಂಪ್ ಅವರ ಆಮದು ಸುಂಕಗಳಿಂದಾಗಿ ಆರ್ಥಿಕ ಯುದ್ಧ ಪ್ರಾರಂಭವಾಗಿದೆ. ಇವು ಭಾರತವನ್ನು ಯುದ್ಧದತ್ತ ತಳ್ಳುತ್ತಿವೆ. ‘ಆದ್ದರಿಂದ ಭಾರತ ಸರಕಾರವೂ ಯುದ್ಧದ ಸಿದ್ಧತೆಗಳನ್ನು ಮಾಡುತ್ತಿದೆ ಎಂದು ಅನಿಸುತ್ತದೆ. ಸೇನಾ ಪ್ರಮುಖರು ಹೇಳಿದಂತೆ ಆಂತರಿಕ ಯುದ್ಧದ ಸಾಧ್ಯತೆಯಿದೆ. ಆದ್ದರಿಂದ ಭಾರತೀಯ ಸಾರ್ವಜನಿಕರು ಈ ಸರಕಾರಿ ಸಂಸ್ಥೆಗಳೊಂದಿಗೆ ಒಟ್ಟಾಗಿ ಕುಳಿತು ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಅಥವಾ ಕ್ರೈಸ್ತ ಮಿಷನರಿಗಳಂತಹ ಆಂತರಿಕ ಶತ್ರುಗಳನ್ನು ಹೇಗೆ ನಿಷ್ಕ್ರಿಯಗೊಳಿಸಬೇಕು ಎಂಬುದರ ಕುರಿತು ಚರ್ಚಿಸಬೇಕು.

ನಾವು ನಮ್ಮ ದೇಶ, ಸಮಾಜ, ಊರುಗಳನ್ನು ರಕ್ಷಿಸಬೇಕು. ಅವರಿಗಾಗಿ ನಾವು ಏನು ಮಾಡಬಹುದು ? ಎಂಬುದರ ಕುರಿತು ಚರ್ಚಿಸಬೇಕು. ಸರಕಾರವು ಗ್ರಾಮ ರಕ್ಷಣಾ ಪಡೆ, ನಗರ ರಕ್ಷಣಾ ಪಡೆ, ಪೊಲೀಸ ಮಿತ್ರ ಮತ್ತು ಸೈನಿಕ ಮಿತ್ರದಂತಹ ಸಂಘಟನೆಗಳನ್ನು ಸಿದ್ಧಪಡಿಸಬೇಕು ಮತ್ತು ಅವರಿಗೆ ಯೋಗ್ಯ ತರಬೇತಿಯನ್ನು ನೀಡಬೇಕು. ಆಪತ್ಕಾಲದಲ್ಲಿ ರಾಷ್ಟ್ರದ ಸುರಕ್ಷತೆಗಾಗಿ ಅವುಗಳನ್ನು ಬಳಸಿ ದೇಶದೊಳಗೆ ಅತಿ ಕಡಿಮೆ ಹಾನಿ ಯಾಗುವಂತೆ ಪ್ರಯತ್ನಿಸಬೇಕು. ಬಾಂಗ್ಲಾದೇಶ, ನೇಪಾಳ, ಟರ್ಕಿಯೇ, ಇಂಡೋನೇಷ್ಯಾ ಹಾಗೂ ಫ್ರಾನ್ಸನಂತಹ ವಿವಿಧ ದೇಶಗಳಲ್ಲಿ ಆಡಳಿತ ಬದಲಾವಣೆಗಳು ಆಗುತ್ತಿವೆ. ಶ್ರೀಲಂಕಾದಲ್ಲೂ ಆಗಾಗ ಹೀಗೆಯೇ ಆಗುತ್ತಿದೆ. ಈ ವಿಷಯಗಳು ಭಾರತದ ಒಳಗಿರುವ ಅರ್ಧ ವಲಯದ ಶಕ್ತಿಗಳಿಗೆ ಮುಂದಿನ ದಿನಗಳಿಗಾಗಿ ಶಿಕ್ಷಣ ನೀಡುತ್ತಿಲ್ಲವಷ್ಟೇ ಎಂದು ಅನಿಸುತ್ತದೆ.

ಸೇನಾ ಪ್ರಮುಖರ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜವು ಬೀದಿಗೆ ಇಳಿದು ಅರಾಜಕತೆಯನ್ನು ಸೃಷ್ಟಿಸುತ್ತಿದ್ದರೆ, ರಾಷ್ಟ್ರೀಯ ಆಸ್ತಿ, ಪೊಲೀಸ್ ಆಡಳಿತ ಮತ್ತು ಸರಕಾರಿ ಕಟ್ಟಡಗಳಿಗೆ ಹಾನಿ ಮಾಡುತ್ತಿದ್ದರೆ, ಮುಗ್ಧ ನಾಗರಿಕರಿಗೆ ತೊಂದರೆ ಕೊಡುತ್ತಿದ್ದರೆ, ಅವರ ರಕ್ಷಣೆಗಾಗಿ ಸರಕಾರವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರವು ಒಂದು ದೃಢವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ. ಎರಡೂವರೆ ಸ್ತರಗಳ ಕುರಿತು ಸೇನಾ ಮುಖ್ಯಸ್ಥರು ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರವು ತ್ವರಿತ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ. (ಮುಕ್ತಾಯ)

– ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.