ಉತ್ತರ ಪ್ರದೇಶ: ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿದ್ದ ಧಾರ್ಮಿಕ ಸ್ಥಳದ ಅತಿಕ್ರಮಣ ತೆರವು!

ಗ್ರಾಮಸ್ಥರ ದೂರಿನ ನಂತರ ಕ್ರಮ

ಮುರಾದಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಧಾರಕಂಗಲಾ (ಭೋಜಪುರ) ಗ್ರಾಮದ ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ಧಾರ್ಮಿಕ ಸ್ಥಳವನ್ನು ಆಡಳಿತ ಮಂಡಳಿಯು ಬುಲ್ಡೋಜರ್ ಸಹಾಯದಿಂದ ಕೆಡವಿದೆ. ಈ ಧಾರ್ಮಿಕ ಸ್ಥಳದ ಅನಧಿಕೃತ ನಿರ್ಮಾಣ ಕಾರ್ಯವು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು ಹಾಗೂ ಅಲ್ಲಿಗೆ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಗಿತ್ತು.

ಈ ಜಾಗದ ಕುರಿತು ದೀರ್ಘಕಾಲದಿಂದ ಎರಡು ಗುಂಪುಗಳ ನಡುವೆ ವಿವಾದ ನಡೆದಿತ್ತು. ಉದ್ವಿಗ್ನತೆ ಸಂಭವಿಸದಂತೆ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ದೇವಸ್ಥಾನದ ಜಾಗದಲ್ಲಿ ಅನಧಿಕೃತ ಧಾರ್ಮಿಕ ಸ್ಥಳವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ತನಿಖೆಯ ನಂತರ ಈ ಜಾಗವು ಚಾಮುಂಡಾ ದೇವಸ್ಥಾನದ ಹೆಸರಿನಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಈ ನಡುವೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಸರಕಾರಿ ಅಥವಾ ಧಾರ್ಮಿಕ ಜಾಗದ ಅತಿಕ್ರಮಣ ಸಹಿಸುವುದಿಲ್ಲವೆಂದು ಆಡಳಿತ ಮಂಡಳಿಯು ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

ಅತಿಕ್ರಮಣವಾಗುವವರೆಗೆ ಆಡಳಿತ ಮಂಡಳಿ ಏನು ಮಾಡುತ್ತಿತ್ತು? ಮತ್ತು ಅತಿಕ್ರಮಣವನ್ನು ತೆರವುಗೊಳಿಸಲು ಗ್ರಾಮಸ್ಥರೇ ಏಕೆ ದೂರು ನೀಡಬೇಕಾಗುತ್ತದೆ? ಅತಿಕ್ರಮಣ ಮಾಡಿದವರು ಹಾಗೂ ಅದಕ್ಕೆ ಕಾರಣರಾದ ಆಡಳಿತಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಿ!