ಆರ್ಥಿಕ ಶಿಸ್ತು

ಜಗತ್ತು ಇಂದು ಒಂದು ಹೊಸ ಆರ್ಥಿಕ ಮತ್ತು ಭೂ-ರಾಜಕೀಯ ತಿರುವಿನಲ್ಲಿ ಬಂದು ನಿಂತಿದೆ. ಅಮೆರಿಕ-ಇರಾನ್, ಇಸ್ರೇಲ್-ಹಮಾಸ್, ಪಾಕಿಸ್ತಾನ-ಅಫ್ಘಾನಿಸ್ತಾನ ಮತ್ತು ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಕಿಚ್ಚು ಇನ್ನೂ ಆರಿಲ್ಲ. ಒಂದು ಸಣ್ಣ ಕಿಡಿಯಿಂದ ಮೂರನೇ ಮಹಾಯುದ್ಧ ಯಾವಾಗ ಬೇಕಾದರೂ ಆರಂಭವಾಗಬಹುದು. ಕಳೆದ ಕೆಲವು ದಶಕಗಳಲ್ಲಿ ಜಾಗತೀಕರಣ, ಮುಕ್ತವ್ಯಾಪಾರ, ತಂತ್ರಜ್ಞಾನ ಮತ್ತು ವೇಗದ ಆರ್ಥಿಕ ಬೆಳವಣಿಗೆಯ ಬಲದಿಂದ ಜಗತ್ತು ಅಭೂತಪೂರ್ವ ಪ್ರಗತಿಯನ್ನು ಕಂಡಿದೆ; ಆದರೆ ಇಂದು ಜಗತ್ತಿನ ಪ್ರತಿಯೊಂದು ದೇಶವೂ ಪರಸ್ಪರ ಎಷ್ಟು ಬೆಸೆದುಕೊಂಡಿದೆಯೆಂದರೆ, ಒಂದು ಪ್ರದೇಶದಲ್ಲಿ ಉಂಟಾಗುವ ಬಿಕ್ಕಟ್ಟು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಜನಸಾಮಾನ್ಯನ ಜೀವನವನ್ನೂ ಅಲುಗಾಡಿಸ ಬಹುದು. ಅದು ಯುದ್ಧವಿರಲಿ ಅಥವಾ ಸಾಂಕ್ರಾಮಿಕ ರೋಗವಿರಲಿ.

ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತು ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ರಾಜ ತಾಂತ್ರಿಕ ಬಲದಿಂದ ಸ್ವಲ್ಪಮಟ್ಟಿನ ಇಂಧನ ಆಮದು ನಡೆಯುತ್ತಿದ್ದರೂ, ಅದು ಯಾವುದೇ ಕ್ಷಣ ನಿಲ್ಲಬಹುದು ಮತ್ತು ಭಾರತೀಯರ ದೈನಂದಿನ ಜೀವನದ ಮೇಲೆ ಅದರ ನೇರ ಪರಿಣಾಮ ಆಗಬಹುದು. ಇದನ್ನರಿತ ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಇಂಧನ ಉಳಿತಾಯ, ಒಂದು ವರ್ಷ ಚಿನ್ನದ ಖರೀದಿಸದಿರುವುದು ಮತ್ತು ‘ವರ್ಕ್ ಫ್ರಮ್ ಹೋಮ್’ (ಕಚೇರಿ ಕೆಲಸಗಳನ್ನು ಮನೆಯಿಂದಲೇ ಆನ್‌ಲೈನ್ ಮೂಲಕ ಮಾಡುವುದು) ಪದ್ಧತಿಯನ್ನು ಮತ್ತೆ ಅಳವಡಿಸಿಕೊಳ್ಳುವಂತೆ ನೀಡಿರುವ ಕರೆ ವಿಶೇಷ ಮಹತ್ವ ಪಡೆದಿದೆ. ಈ ಕರೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ವಾಸ್ತವದಲ್ಲಿ ಇದು ಒಂದು ದೊಡ್ಡ ಆರ್ಥಿಕ ಸಂಘರ್ಷದ ಪೂರ್ವಸಿದ್ಧತೆಯಾಗಿದೆ. ‘ಕೊರೋನಾ’ ಸಾಂಕ್ರಾಮಿಕದ ಸಂಚಾರ ನಿಷೇಧದ ಸಮಯದಲ್ಲಿ ಭಾರತವು ಶಿಸ್ತು ಮತ್ತು ಸಂಯಮವನ್ನು ಪ್ರದರ್ಶಿಸಿತ್ತು. ಇಂದು ಮತ್ತೆ ಅದೇ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಮಯ ಬಂದಿದೆ. ಕೊರೋನಾ ಸಮಯದಲ್ಲಿ ಸಂಕಟವು ‘ಜೀವದ’ ಮೇಲಿದ್ದರೆ, ಇಂದಿನ ಬಿಕ್ಕಟ್ಟು ‘ಜೇಬಿನ’ ಮೇಲಿದೆ.

ಸೌಲಭ್ಯಗಳ ಅವಲಂಬನೆ

ಕಳೆದ ೨-೩ ದಶಕಗಳಲ್ಲಿ ಭಾರತದಲ್ಲಿ ಭೋಗವಾದ ಹೆಚ್ಚಾಗಿದೆ. ದೊಡ್ಡ ಐಷಾರಾಮಿ ವಾಹನಗಳು, ಭವ್ಯ ವಿವಾಹ ಸಮಾರಂಭಗಳು, ಹೆಚ್ಚುತ್ತಿರುವ ಇಂಧನ ಬಳಕೆ, ವಿಲಾಸಿ ಜೀವನಶೈಲಿ ಮತ್ತು ಸತತವಾಗಿ ಬೆಳೆಯುತ್ತಿರುವ ಗ್ರಾಹಕ ಸಂಸ್ಕೃತಿ ಇವುಗಳು ಆಧುನಿಕ ಭಾರತದ ಗುರುತಾಗುತ್ತಿವೆ; ಆದರೆ ಯುದ್ಧದಂತಹ ಜಾಗತಿಕ ಬಿಕ್ಕಟ್ಟುಗಳು ಅನಿಯಮಿತ ಭೋಗದ ಅಭ್ಯಾಸವನ್ನು ಯಾವುದೇ ರಾಷ್ಟ್ರವು ದೀರ್ಘಕಾಲದ ವರೆಗೆ ಮುಂದುವರಿಸುವುದು ಅಸಾಧ್ಯ ಎಂಬುದನ್ನು ತೋರಿಸಿಕೊಟ್ಟಿವೆ. ಮಾನವನ ಅನುಕೂಲಕ್ಕಾಗಿ ನಿರ್ಮಿಸಲಾದ ಸೌಲಭ್ಯಗಳು ಈಗ ವಿಲಾಸಿಯಾಗಿ ಮಾರ್ಪಟ್ಟಿವೆ. ಹಿಂದೆ ಯಾವುದು ಐಷಾರಾಮಿ ಎಂದು ಪರಿಗಣಿಸಲ್ಪಡುತ್ತಿತ್ತೋ, ಅದು ಇಂದು ಅನಿವಾರ್ಯ ಎಂಬಂತೆ ಭಾಸವಾಗುತ್ತಿದೆ. ಖಾಸಗಿ ವಾಹನ, ಹವಾನಿಯಂತ್ರಿತ ಜೀವನಶೈಲಿ, ಪ್ರವಾಸಕ್ಕಾಗಿ ವಿದೇಶಿ ಪ್ರವಾಸಗಳು, ಭವ್ಯ ವಿವಾಹ ಸಮಾರಂಭಗಳು ಮತ್ತು ‘ಬ್ರಾಂಡೆಡ್’ ವಸ್ತುಗಳ ಬಳಕೆ ಪ್ರತಿಷ್ಠೆಯ ಮಾನದಂಡಗಳಾಗಿ ಬದಲಾಗಿವೆ.

ಇಂದಿನ ಪ್ರಶ್ನೆ ಕೇವಲ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಮಾತ್ರ ಸೀಮಿತವಾಗಿಲ್ಲ. ತೈಲ ಬೆಲೆ ಏರಿಕೆಯಾದರೆ ಸಾರಿಗೆ ವೆಚ್ಚ ಹೆಚ್ಚಾಗುತ್ತದೆ. ಸಾರಿಗೆ ವೆಚ್ಚ ಹೆಚ್ಚಾದಾಗ ಆಹಾರ ಧಾನ್ಯಗಳು, ತರಕಾರಿ, ಔಷಧಿಗಳು, ನಿರ್ಮಾಣ ಸಾಮಗ್ರಿಗಳು ಮತ್ತು ದೈನಂದಿನ ಪ್ರತಿಯೊಂದು ವಸ್ತುವಿನ ಬೆಲೆ ಏರುತ್ತದೆ. ಹಣದುಬ್ಬರ ಹೆಚ್ಚಾದಾಗ ಮಧ್ಯಮ ವರ್ಗದವರ ಆರ್ಥಿಕತೆ ಏರುಪೇರಾಗುತ್ತದೆ. ಉದ್ಯಮಗಳ ಸ್ಪರ್ಧಾತ್ಮಕತೆ ಕಡಿಮೆಯಾಗುತ್ತದೆ. ಸರಕಾರದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ರೂಪಾಯಿಯ ಮೌಲ್ಯ ಕುಸಿಯುತ್ತದೆ ಮತ್ತು ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಉಂಟಾಗುತ್ತದೆ; ಆದ್ದರಿಂದಲೇ ಪ್ರಧಾನಿಯವರು ನೀಡಿದ ಸಂದೇಶವನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ.

ನಾವು ಇಂಧನಕ್ಕಾಗಿ ಇಷ್ಟೊಂದು ಪರಾವಲಂಬಿಗಳಾಗಲು ಕಾರಣವೇನು ? ನಾವು ಪರ್ಯಾಯ ಇಂಧನ ಮೂಲಗಳ ಬಗ್ಗೆ ಯೋಚಿಸಲಿಲ್ಲವೇ ? ಅಥವಾ ಭಾರತದಲ್ಲಿ ಅನಾದಿಕಾಲದಿಂದಲೂ ಇದ್ದ ಸಾಂಪ್ರದಾಯಿಕ ಇಂಧನ ಮೂಲಗಳನ್ನು ನಾವು ನಿರ್ಲಕ್ಷಿಸಿದೆವೇ ? ಎಂಬ ಬಗ್ಗೆ ನಾವು ಆಲೋಚಿಸಬೇಕಾಗಿದೆ. ಭಾರತವು ಅಭಿವೃದ್ಧಿಯ ಶಿಖರಗಳನ್ನು ಏರುತ್ತಿರುವುದಕ್ಕೆ ಪ್ರತಿ ಒಬ್ಬರಿಗೂ ಹೆಮ್ಮೆಯಿದೆ; ಆದರೆ ಇದು ಮೊದಲಿನಿಂದಲೂ ಕೃಷಿ ಪ್ರಧಾನ ದೇಶವಾಗಿದೆ. ಭಾರತದ ಪ್ರತಿಯೊಂದು ಗ್ರಾಮವೂ ಸ್ವಾವಲಂಬಿಯಾಗಿತ್ತು ಮತ್ತು ಅಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೂ ಲಭ್ಯವಿದ್ದವು. ಪಾಶ್ಚಿಮಾತ್ಯ ದೇಶಗಳ ಕೈಗಾರಿಕಾ ಕ್ರಾಂತಿ ಮತ್ತು ಹಸಿರು ಕ್ರಾಂತಿಯನ್ನು ಅಳವಡಿಸಿಕೊಳ್ಳುವಾಗ ಅವು ಭಾರತಕ್ಕೆ ಅಗತ್ಯವೇ ? ಎಂದು ಆಗಲೇ ಯೋಚಿಸಬೇಕಿತ್ತು. ಆದರೆ ಜಾಗತಿಕ ಅನಿಶ್ಚಿತತೆಯ ಕಾಲದಲ್ಲಿ ಪ್ರಧಾನಿಯವರ ‘ನೈಸರ್ಗಿಕ ಕೃಷಿಯತ್ತ ಮುಖ ಮಾಡಿ, ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸಬೇಡಿ, ಸ್ವದೇಶಿ ವಸ್ತುಗಳನ್ನು ಬಳಸಿ’ ಎಂಬ ಕರೆಯನ್ನು ಅಳವಡಿಸಿಕೊಂಡು ಮತ್ತೆ ಮೂಲ ಭಾರತೀಯ ಪರಂಪರೆಯತ್ತ ಸಾಗುವ ಅಗತ್ಯವನ್ನು ನಾವು ಗುರುತಿಸಬೇಕು.

ಮಾನಸಿಕ ಸಿದ್ಧತೆ ಮಾಡಿಕೊಳ್ಳಿ !

ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಭಾರತೀಯ ಸಮಾಜದ ಮಾನಸಿಕ ಸಿದ್ಧತೆ ! ನಾವು ಈ ಬಿಕ್ಕಟ್ಟನ್ನು ಎದುರಿಸಲು ಸಿದ್ಧರಿದ್ದೇವೆಯೇ ? ‘ಅಗತ್ಯ’ ಮತ್ತು ‘ವಿಲಾಸಿ’ ನಡುವಿನ ಗೆರೆಯನ್ನು ನಾವು ಗುರುತಿಸಬಲ್ಲೆವೇ ? ಭಾರತದ ಮಧ್ಯಮವರ್ಗದವರು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿ ಸಾಲಾಧಾರಿತ ಜೀವನಶೈಲಿಯತ್ತ ವಾಲಿದ್ದಾರೆ. ಮನೆ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ‘ಕ್ರೆಡಿಟ್ ಕಾರ್ಡ್’ ಸಂಸ್ಕೃತಿಯಿಂದ ಜನರ ಆದಾಯ ಮತ್ತು ವೆಚ್ಚದ ನಡುವಿನ ಸಮತೋಲನ ತಪ್ಪುತ್ತಿದೆ. ಅಂತಹ ಸಮಯದಲ್ಲಿ ಇಂಧನ ದರ ಮತ್ತು ಬೆಲೆ ಏರಿಕೆಯಾದರೆ ಸಾಮಾನ್ಯ ನಾಗರಿಕರ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗಬಹುದು. ಈ ಕಾರಣಕ್ಕಾಗಿಯೇ ಸರಕಾರ ನಾಗರಿಕರನ್ನು ಮೊದಲೇ ಎಚ್ಚರಿಸುತ್ತಿದೆ. ಇಂಧನ ಉಳಿತಾಯವೆಂದರೆ ಕೇವಲ ಹಣ ಉಳಿಸುವುದಲ್ಲ, ಬದಲಾಗಿ ರಾಷ್ಟ್ರೀಯ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದಾಗಿದೆ. ಚಿನ್ನದ ಖರೀದಿಯನ್ನು ತಪ್ಪಿಸುವುದು ಕೇವಲ ವೈಯಕ್ತಿಕ ತ್ಯಾಗವಲ್ಲ, ಅದು ವಿದೇಶಿ ವಿನಿಮಯ ಮೀಸಲನ್ನು ಉಳಿಸುವ ಪ್ರಯತ್ನವಾಗಿದೆ. ‘ವರ್ಕ್ ಫ್ರಮ್ ಹೋಮ್’ ಇದು ಕೇವಲ ಸೌಕರ್ಯವಲ್ಲ, ಅದು ರಾಷ್ಟ್ರೀಯ ಇಂಧನ ಬಳಕೆ ಕಡಿಮೆ ಮಾಡುವುದಾಗಿದೆ.

ಹಣದುಬ್ಬರ ಹೆಚ್ಚಾದಾಗ ಅದರ ನೇರ ಹೊಡೆತ ಬಡ ಮತ್ತು ಮಧ್ಯಮವರ್ಗದವರಿಗೆ ಬೀಳುತ್ತದೆ. ಶ್ರೀಮಂತ ವರ್ಗವು ಒಂದು ಮಟ್ಟದ ವರೆಗೆ ಹೆಚ್ಚುವರಿ ವೆಚ್ಚವನ್ನು ಭರಿಸಬಲ್ಲದು. ಆದ್ದರಿಂದ, ‘ಮಿತವ್ಯಯ’ ಎಂಬ ಈ ಮಂತ್ರವು ಸಾಮಾನ್ಯ ಜನರ ಮನೆಗಳಂತೆ ಶ್ರೀಮಂತವರ್ಗ, ಜನಪ್ರತಿನಿಧಿಗಳು, ಸರಕಾರಿ ಯಂತ್ರಗಳು ಮತ್ತು ಸರಕಾರಿ ಕಚೇರಿಗಳಿಗೂ ಅನ್ವಯವಾಗಬೇಕು. ರಾಷ್ಟ್ರೀಯ ಶಿಸ್ತು ಎಲ್ಲರಿಗೂ ಸಮನಾಗಿರಬೇಕು.

ಭಾರತೀಯ ಸಮಾಜದ ದೊಡ್ಡ ಶಕ್ತಿಯೆಂದರೆ ಸಂಕಷ್ಟದ ಸಮಯದಲ್ಲಿ ಒಂದಾಗುವ ಸಾಮರ್ಥ್ಯ ! ಯುದ್ಧಕಾಲ, ನೈಸರ್ಗಿಕ ವಿಕೋಪ, ಸಾಂಕ್ರಾಮಿಕ ರೋಗ ಅಥವಾ ಆರ್ಥಿಕ ಬಿಕ್ಕಟ್ಟು; ಪ್ರತಿ ಬಾರಿಯೂ ಸಮಾಜವು ಸಂಯಮವನ್ನು ತೋರಿದೆ. ಪ್ರಧಾನಿಯವರ ಕರೆ ಕೆಲವರಿಗೆ ಕಠಿಣವಾಗಿ ಅಥವಾ ಅತಿಯಾದ ಮುನ್ನೆಚ್ಚರಿಕೆ ಎಂದು ಅನಿಸಬಹುದು; ಆದರೆ ಅದರ ಹಿಂದಿನ ವಾಸ್ತವವನ್ನು ನಿರಾಕರಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಒಂದು ಪ್ರಶ್ನೆ ಕೇಳಿಕೊಳ್ಳಬೇಕು, ‘ನಾನು ದೇಶದ ಇಂಧನ ಮತ್ತು ಆರ್ಥಿಕ ಭದ್ರತೆಗಾಗಿ ಏನು ಕೊಡುಗೆ ನೀಡಬಲ್ಲೆ ?’ ಬಹುಶಃ ಉತ್ತರ ದೊಡ್ಡದಾಗಿರಲಿಕ್ಕಿಲ್ಲ. ಒಂದು ಪ್ರವಾಸವನ್ನು ಕಡಿಮೆ ಮಾಡುವುದು ಅಥವಾ ಅನಗತ್ಯ ವೆಚ್ಚವನ್ನು ತಪ್ಪಿಸುವುದೇ ಅದರ ಉತ್ತರವಾಗಿರಬಹುದು; ಆದರೆ ಈ ಬಿಕ್ಕಟ್ಟಿನಲ್ಲಿ ಅಷ್ಟೂ ದೇಶಕ್ಕೆ ದೊಡ್ಡ ಆಧಾರವಾಗಬಲ್ಲದು. ಅನಿಶ್ಚಿತತೆಯ ಜಾಗತಿಕ ವಾತಾವರಣದಲ್ಲಿ ‘ಶಿಸ್ತು’ ಎಂಬುದೇ ಅತ್ಯಂತ ದೊಡ್ಡ ಶಕ್ತಿಯಾಗಲಿದೆ !