ಗೂಢ ವಿದ್ಯೆ ಮತ್ತು ಅಷ್ಟಸಿದ್ಧಿ : ಒಂದು ಅಧ್ಯಾತ್ಮ ಶಾಸ್ತ್ರೀಯ ವಿವೇಚನೆ !

ಸನಾತನ ಭಾರತ : ಸಮಾಜ, ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ಪ್ರಾಸಂಗಿಕ ಅಂಶಗಳ ಮೇಲೆ ಅಂಕಣ

ಫೆಬ್ರವರಿ ೨೦೨೬ ರಲ್ಲಿ ಜಾಗತಿಕ ವೈಜ್ಞಾನಿಕ ವರ್ತುಲದಲ್ಲಿ ‘ಕ್ವಾಂಟಮ್ಎಂಟ್ಯಾಂಗಲ್‌ಮೆಂಟ್’ ವಿಷಯದ (Quantum Entanglement) ಕುರಿತು ಓರ್ವ ಚೀನಾದ ವಿಜ್ಞಾನಿಯಿಂದ ಒಂದು ಕ್ರಾಂತಿಕಾರಿ ಪ್ರಯೋಗ ನಡೆಯಿತು. ಎರಡು ಅಣುಗಳು ಪರಸ್ಪರ ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ಒಂದೇ ಕ್ಷಣದಲ್ಲಿ ಪರಸ್ಪರರಲ್ಲಿ ಚರ್ಚೆ ನಡೆಸಬಲ್ಲವು ಎಂಬುದನ್ನು ಅವರು ಇದರ ಮೂಲಕ ಸಾಬೀತುಪಡಿಸಿದರು. ಈ ಸುದ್ದಿಯಿಂದ ಆಧುನಿಕ ಜಗತ್ತು ಬೆರಗಾಯಿತು; ಆದರೆ ಭಾರತೀಯ ಯೋಗಶಾಸ್ತ್ರದ ಅಭ್ಯಾಸಿಗಳು ಮಾತ್ರ ಮಂದಹಾಸ ಬೀರುತ್ತಿದ್ದರು. ಏಕೆಂದರೆ ಸಾವಿರಾರು ವರ್ಷಗಳ ಹಿಂದೆ ಮಹರ್ಷಿ ಪತಂಜಲಿ ‘ಯೋಗಸೂತ್ರ’ದಲ್ಲಿ ಇದೇ ತತ್ತ್ವವನ್ನು ‘ಪ್ರಾಪ್ತಿ’ ಮತ್ತು ‘ದೂರಶ್ರವಣ’ ಎಂಬ ಸಿದ್ಧಿಗಳ ಮೂಲಕ ಮಂಡಿಸಿದ್ದರು. ಇಂದು ನಾವು ‘ಮೆಟಾವರ್ಸ್’ (ವರ್ಚುವಲ್ ಬ್ರಹ್ಮಾಂಡ), ‘ಟೆಲಿಪೋರ್ಟೇಶನ್’ (ಅದೃಶ್ಯ ಸಾಗಣೆ) ಅಥವಾ ‘ಮೈಂಡ್ ರೀಡಿಂಗ್’ (ಇತರರ ಮನಸ್ಸಿನಲ್ಲಿನ ವಿಚಾರಗಳನ್ನು ತಿಳಿದುಕೊಳ್ಳವುದು) ಬಗ್ಗೆ ಮಾತನಾಡುತ್ತಿರುವಾಗ, ತಿಳಿಯದೆಯೇ ನಾವು ಅದೇ ಗೂಢ ವಿದ್ಯೆಯ ಹೊಸ್ತಿಲಿನ ಮೇಲೆ ನಿಂತಿರುತ್ತೇವೆ, ಇದನ್ನು ನಮ್ಮ ಪೂರ್ವಜರು ‘ಅಷ್ಟಸಿದ್ಧಿ’ ಎಂದು ಕರೆದಿದ್ದರು. ಇದು ಕೇವಲ ಚಮತ್ಕಾರಗಳ ಕಥೆಯಲ್ಲ, ಬದಲಿಗೆ ಮಾನವನ ಪ್ರಜ್ಞೆಯ ಅಪಾರ ಕ್ಷಮತೆಯ ಒಂದು ಪ್ರಗತ ಆಧ್ಯಾತ್ಮಿಕ ಸಮೀಕರಣವಾಗಿದೆ.

‘ಅಧ್ಯಾತ್ಮದಲ್ಲಿ ಸಿದ್ಧಿಗಳನ್ನು ಕೇವಲ ‘ಲೋಕಕಲ್ಯಾಣಕ್ಕಾಗಿ’ ಉಪಯೋಗಿಸುವುದಿರುತ್ತದೆ ಹೊರತು ಸ್ವಾರ್ಥಕ್ಕಲ್ಲ.’
‘ಅಧ್ಯಾತ್ಮವು ಒಂದು ಪ್ರಗತ ವಿಜ್ಞಾನವಾಗಿದೆ, ಇದನ್ನು ತಥಾ ಕಥಿತ ವಿಚಾರವಾದಿಗಳಿಗೆ ಯಾರು ಹೇಳುವುದು ?’

ಶ್ರೀ. ಚೇತನ ರಾಜಹಂಸ

೧. ಗೂಢ ವಿದ್ಯೆ : ಅಡಗಿರುವ ಸತ್ಯದ ಶೋಧ

೧ ಅ. ಗೂಢ ವಿದ್ಯೆಯು ಸಂಶಯಾಸ್ಪದ ಪ್ರಕಾರವಲ್ಲ ! : ಪ್ರಸ್ತುತ ಅಮೆರಿಕಾದಲ್ಲಿ ‘ಎಪ್ಸ್ಟೀನ್ ಫೈಲ್ಸ್’ ಬಹಿರಂಗಗೊಳ್ಳುತ್ತಿರುವಾಗ, ಪ್ರಸಾರ ಮಾಧ್ಯಮಗಳು ಎಪ್ಸ್ಟೀನ್‌ನನ್ನು ‘ಗೂಢ ವಿದ್ಯಾವಾದಿ ”(Occult)” ಎಂದು ಸಂಬೋಧಿಸುತ್ತಿವೆ. ಮೂಲದಲ್ಲಿ ಗೂಢ ಅಥವಾ ಗುಪ್ತ ವಿದ್ಯೆಗಳು ಏನಾಗಿರುತ್ತವೆ ಎಂಬುದರ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ ಅಥವಾ ಈ ಶಬ್ದದ ಕಡೆಗೆ ಸಂಶಯಾಸ್ಪದ ದೃಷ್ಟಿಕೋನದಿಂದ ನೋಡುವ ಮನೋವೃತ್ತಿ ಹೆಚ್ಚುತ್ತಿದೆ.

‘ಗೂಢ’ ‘(Occult)’ ಎಂಬ ಶಬ್ದದ ಅರ್ಥ ‘ಅಡಗಿರುವ’ ಎಂದಾಗಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ‘ಗೂಢ’ ಎಂದರೆ ಯಾವುದು ಚರ್ಮಚಕ್ಷುಗಳಿಗೆ (ಕಣ್ಣಿಗೆ) ಕಾಣಿಸುವುದಿಲ್ಲವೋ, ಆದರೆ ಯಾವುದರ ಅಸ್ತಿತ್ವದ ಅನುಭೂತಿ ಬರುತ್ತದೆಯೋ ಅದು.

ಸೃಷ್ಟಿಯಲ್ಲಿ ಎರಡು ಸ್ತರಗಳಿವೆ – ಒಂದು ಸ್ಥೂಲ (Physical) ಮತ್ತು ಇನ್ನೊಂದು ಸೂಕ್ಷ್ಮ (Subtle) ನಾವು ವಿಜ್ಞಾನದ ಸಹಾಯದಿಂದ ಸ್ಥೂಲ ಜಗತ್ತಿನ ನಿಯಮಗಳಾದ ಗುರುತ್ವಾಕರ್ಷಣೆ ಅಥವಾ ಬೆಳಕಿನ ಬಗ್ಗೆ ತಿಳಿದುಕೊಂಡಿದ್ದೇವೆ. ಗೂಢ ವಿದ್ಯೆಯು ಸೂಕ್ಷ್ಮ ಜಗತ್ತು ಮತ್ತು ಶಕ್ತಿಯ ನಿಯಮಗಳಿಗೆ ಸಂಬಂಧಿಸಿದ್ದಾಗಿದೆ. ಸೃಷ್ಟಿಯಲ್ಲಿನ ಸ್ಥೂಲ ನಿಯಮಗಳು  ವಿಜ್ಞಾನಕ್ಕೆ (PhysicalLaws)ತಿಳಿದಿವೆ;ಆದರೆ ಸೂಕ್ಷ್ಮ ನಿಯಮಗಳನ್ನು  ಕೇವಲ (Metaphysical Laws) ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ತಿಳಿದುಕೊಳ್ಳಬಹುದು.

೧ ಆ. ಗೂಢ ವಿದ್ಯೆಯ ಹಿಂದಿನ ಅಧ್ಯಾತ್ಮಶಾಸ್ತ್ರ : ಗೂಢ ವಿದ್ಯೆ ಎಂದರೆ ಮನುಷ್ಯನು ತನ್ನ ಪಂಚೇಂದ್ರಿಯಗಳ ಮಿತಿಯನ್ನು ಮೀರಿ ವಿಶ್ವದ ಸೂಕ್ಷ್ಮ ಲಹರಿಗಳೊಂದಿಗೆ ಸಂಪರ್ಕ ಸಾಧಿಸಬಲ್ಲ ಶಕ್ತಿಯ ಅಭ್ಯಾಸವಾಗಿದೆ. ಇದರಲ್ಲಿ ಮಂತ್ರಶಕ್ತಿ, ಯಂತ್ರಶಕ್ತಿ ಮತ್ತು ತಂತ್ರಶಕ್ತಿ ಇವುಗಳು ಒಳಗೊಂಡಿವೆ. ತಂತ್ರಶಾಸ್ತ್ರದ ಪ್ರಕಾರ, ಈ ಸಂಪೂರ್ಣ ವಿಶ್ವವು ‘ಶಿವ’ ಮತ್ತು ‘ಶಕ್ತಿ’ಯ (ಪದಾರ್ಥ ಮತ್ತು ಊರ್ಜೆ) ಮಿಲನವಾಗಿದೆ. ಯಾವ ಸಾಧಕನು ತನ್ನ ಶರೀರದಲ್ಲಿನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತಾನೋ, ಅವನಿಗೆ ಈ ವಿಶ್ವದ ಗುಪ್ತ ರಹಸ್ಯಗಳ ಜ್ಞಾನವು ಪ್ರಾಪ್ತವಾಗುತ್ತದೆ.

ಭಾರತೀಯ ಪರಂಪರೆಯಲ್ಲಿ ಗೂಢ ವಿದ್ಯೆಯನ್ನು ‘ಗುಪ್ತ ವಿದ್ಯೆ’ ಎಂದೂ ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅಪಾತ್ರ ವ್ಯಕ್ತಿಯ ಕೈಗೆ ಈ ವಿದ್ಯೆ ಸಿಕ್ಕರೆ ಅದನ್ನು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಮಂತ್ರಗಳಲ್ಲಿನ ಧ್ವನಿ ಲಹರಿಗಳು (Vibrations) ಯಂತ್ರಗಳಲ್ಲಿನ ಭೂಮಿತೀಯ ಊರ್ಜಾ ಮತ್ತು ತಂತ್ರದಲ್ಲಿನ ಪ್ರಾಣಶಕ್ತಿಯನ್ನು ಬಳಸಿಕೊಂಡು ನಿಸರ್ಗದ ಸಾಮಾನ್ಯ ನಿಯಮಗಳನ್ನು ಮೀರುವುದು ಗೂಢ ವಿದ್ಯೆಯ ತಿರುಳಾಗಿದೆ. ಯಾವಾಗ ಒಬ್ಬ ಸಾಧಕನು ತನ್ನ ಶರೀರ ಮತ್ತು ಮನಸ್ಸನ್ನು ಒಂದು ವಿಶಿಷ್ಟ ಶಕ್ತಿಯ ಮಟ್ಟಕ್ಕೆ ಕೊಂಡೊಯ್ಯುತ್ತಾನೋ, ಆಗ ಅವನಿಗೆ ವಿಶ್ವಾತ್ಮಕ ಊರ್ಜೆಯೊಂದಿಗೆ (Cosmic Energy) ನೇರ ಸಂವಾದ ಸಾಧಿಸಲು ಸಾಧ್ಯವಾಗುತ್ತದೆ.

‘ಅಧ್ಯಾತ್ಮದಲ್ಲಿ ಸಿದ್ಧಿಗಳನ್ನು ಕೇವಲ ‘ಲೋಕಕಲ್ಯಾಣಕ್ಕಾಗಿ’ ಉಪಯೋಗಿಸುವುದಿರುತ್ತದೆ ಹೊರತು ಸ್ವಾರ್ಥಕ್ಕಲ್ಲ.’

‘ಅಧ್ಯಾತ್ಮವು ಒಂದು ಪ್ರಗತ ವಿಜ್ಞಾನವಾಗಿದೆ, ಇದನ್ನು ತಥಾ ಕಥಿತ ವಿಚಾರವಾದಿಗಳಿಗೆ ಯಾರು ಹೇಳುವುದು ?’

  • ಶ್ರೀ. ಚೇತನ ರಾಜಹಂಸ

೨. ಅಷ್ಟಸಿದ್ಧಿಗಳ ಯೋಗಶಾಸ್ತ್ರ

ಯೋಗಶಾಸ್ತ್ರದ ಪ್ರಕಾರ ಮಾನವನ ಶರೀರವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳಿಂದ ನಿರ್ಮಾಣವಾಗಿದೆ. ಯಾವಾಗ ಒಬ್ಬ ಯೋಗಿಯು ಧ್ಯಾನ ಮತ್ತು ‘ಸಂಯಮ’ದ ಮೂಲಕ ಈ ೫ ತತ್ತ್ವ್ವಗಳ ಮೇಲೆ ಸಂಪೂರ್ಣ ವಿಜಯವನ್ನು ಸಾಧಿಸುತ್ತಾನೆಯೋ, ಆಗ ಅವನಿಗೆ ೮ ಪ್ರಕಾರದ ಅಲೌಕಿಕ ಶಕ್ತಿಗಳು ಪ್ರಾಪ್ತವಾಗುತ್ತವೆ, ಇವುಗಳನ್ನೇ ‘ಅಷ್ಟಸಿದ್ಧಿ’ ಎಂದು ಕರೆಯಲಾಗುತ್ತದೆ.

೨ ಅ. ಅಷ್ಟಸಿದ್ಧಿಗಳ ವಿಧಗಳು  

೧. ಅಣಿಮಾ (ಸೂಕ್ಷ್ಮತ್ವದ ಅನುಭವ) : ಅಣಿಮಾ ಸಿದ್ಧಿಯನ್ನು ಪಡೆದ ಯೋಗಿಯು ತನ್ನ ಶರೀರವನ್ನು ಅಣುವಿನಷ್ಟು ಸಣ್ಣದಾಗಿ ಮಾಡಿಕೊಳ್ಳಬಲ್ಲನು. ಆಧ್ಯಾತ್ಮಿಕ ಭಾಷೆಯಲ್ಲಿ ಇದು ‘ಅಹಂಕಾರದ ಸಂಪೂರ್ಣ ವಿಸರ್ಜನೆಯ’ ಅವಸ್ಥೆ ಆಗಿದೆ. ಯಾವಾಗ ಮನುಷ್ಯನು ತನ್ನನ್ನು ತಾನು ‘ಶೂನ್ಯ’ ಎಂದು ಭಾವಿಸುತ್ತಾನೋ, ಆಗ ಅವನು ವಿಶ್ವದ ಅತ್ಯಂತ ಸಣ್ಣ ಕಣದೊಳಗೆ ಪ್ರವೇಶಿಸಬಲ್ಲನು. ಹನುಮಂತನು ಲಂಕೆಯನ್ನು ಪ್ರವೇಶಿಸುವ ಸಮಯದಲ್ಲಿ ಇದೇ ಸಿದ್ಧಿಯನ್ನು ಬಳಸಿ ಸೂಕ್ಷ್ಮ ರೂಪವನ್ನು ಧರಿಸಿದ್ದನು.

೨. ಮಹಿಮಾ (ವಿರಾಟ ಸ್ವರೂಪ) : ತನ್ನ ಶರೀರವನ್ನು ಅತಿ ದೊಡ್ಡದಾಗಿಸುವ ಕ್ಷಮತೆ ಎಂದರೆ ಮಹಿಮಾ. ಇದು ಕೇವಲ ದೈಹಿಕ (ಶಾರೀರಿಕ) ವಿಸ್ತರಣೆಯಲ್ಲ, ಬದಲಿಗೆ ‘ಚೇತನದ ವಿಸ್ತರಣೆ’ ಆಗಿದೆ. ಯಾವಾಗ ಯೋಗಿಯು ತನ್ನನ್ನು ಸಂಕುಚಿತ ಶರೀರದ ಆಚೆಗೆ ಕೊಂಡೊಯ್ದು ಸಂಪೂರ್ಣ ವಿಶ್ವದೊಂದಿಗೆ ಏಕರೂಪವಾಗಿ ಕಾಣುತ್ತಾನೋ, ಆಗ ಅವನು ವಿರಾಟನಾಗುತ್ತಾನೆ. ‘ಶ್ರೀಮದ್ಭಗವದ್ಗೀತೆ’ಯಲ್ಲಿ ಭಗವಾನ ಶ್ರೀಕೃಷ್ಣನು ತೋರಿಸಿದ ‘ವಿಶ್ವರೂಪ ದರ್ಶನ’ವು ಮಹಿಮಾ ಸಿದ್ಧಿಯ ಅತ್ಯುನ್ನತ ಆಧ್ಯಾತ್ಮಿಕ ಉದಾಹರಣೆಯಾಗಿದೆ.

೩.ಲಘಿಮಾ (ಗುರುತ್ವಾಕರ್ಷಣೆಯ ಆಚೆಗೆ ಹೋಗುವುದು) : 

ಲಘಿಮಾ ಎಂದರೆ ಶರೀರದ ತೂಕವನ್ನು ಹತ್ತಿಗಿಂತಲೂ ಹಗುರವಾಗಿಸುವುದು. ಯಾವಾಗ ಸಾಧಕನು ತನ್ನ ಶರೀರದಲ್ಲಿನ ‘ಉದಾನ ವಾಯುವಿನ’ ಮೇಲೆ ನಿಯಂತ್ರಣ ಸಾಧಿಸುತ್ತಾನೋ, ಆಗ ಅವನು ಭೂಮಿಯ ಗುರುತ್ವಾಕರ್ಷಣೆಯಿಂದ ಮುಕ್ತನಾಗುತ್ತಾನೆ. ‘ಹವೆಯಲ್ಲಿ ತೇಲುವುದು  ಅಥವಾ (Levitation) ನೀರಿನ ಮೇಲೆ ನಡೆಯುವುದು ಈ ಕ್ರಿಯೆಗಳು ಲಘಿಮಾ ಸಿದ್ಧಿಯಿಂದ ಸಾಧ್ಯವಾಗುತ್ತವೆ’, ಎಂದು ಯೋಗಶಾಸ್ತ್ರ ಹೇಳುತ್ತದೆ.

೪. ಗರಿಮಾ (ಅಭೇದ್ಯ ಸ್ಥಿರತೆ) : ಮಹಿಮಾಗೆ ವಿರುದ್ಧವೆಂದರೆ ಗರಿಮಾ. ಇದರಲ್ಲಿ ಶರೀರವನ್ನು ಎಷ್ಟು ಭಾರವಾಗಿ ಮಾಡಲಾಗುತ್ತದೆ ಎಂದರೆ, ಜಗತ್ತಿನ ಯಾವುದೇ ಶಕ್ತಿ ಆ ಸಾಧಕನನ್ನು ಅಲುಗಾಡಿಸಲು ಸಾಧ್ಯವಿಲ್ಲ. ಇದು ಮನಸ್ಸು ಮತ್ತು ಶರೀರದ ಅಚಲ ಏಕಾಗ್ರತೆ ಹಾಗೂ ಪೃಥ್ವಿ ತತ್ತ್ವದ ಮೇಲಿನ ಹಿಡಿತದ ಪ್ರತೀಕವಾಗಿದೆ.

೫. ಪ್ರಾಪ್ತಿ (ಅಂತರದ ಮಿತಿಯನ್ನು ಕೊನೆಗಾಣಿಸುವುದು) : ಪ್ರಾಪ್ತಿ ಎಂದರೆ ಕೇವಲ ಭೌತಿಕ ವಸ್ತುಗಳನ್ನು ಪಡೆಯುವುದಲ್ಲ, ಬದಲಿಗೆ ‘ಸ್ಪೇಸ್-ಟೈಮ್’ (ಸ್ಥಳ ಮತ್ತು ಕಾಲ)ಗಳನ್ನು ಜಯಿಸುವುದು. ಈ ಸಿದ್ಧಿಯ ಮೂಲಕ ಸಾಧಕನು ಒಂದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಉಪಸ್ಥಿತನಿರಬಹುದು ಅಥವಾ ದೂರದಲ್ಲಿರುವ ವಸ್ತುಗಳನ್ನು ತನ್ನ ಸಂಕಲ್ಪ ಶಕ್ತಿಯಿಂದ ಹತ್ತಿರಕ್ಕೆ ತರಿಸಿಕೊಳ್ಳಬಹುದು.

೬. ಪ್ರಾಕಾಮ್ಯ (ಇಚ್ಛಾಶಕ್ತಿಯ ಸಾಮರ್ಥ್ಯ) : ಪ್ರಾಕಾಮ್ಯ ಎಂದರೆ ಸಾಧಕನ ಶುದ್ಧ ಇಚ್ಛಾಶಕ್ತಿಯು ವಾಸ್ತವದಲ್ಲಿ ರೂಪಾಂತರವಾಗುತ್ತದೆ. ಒಂದು ವೇಳೆ ಅಂತಹ ಸಾಧಕನು ನಿಸರ್ಗದ ಯಾವುದಾದರೂ ನಿಯಮವು ಬದಲಾಗಲಿ ಎಂದು ಮನಸ್ಸಿನಲ್ಲಿ ಅಂದುಕೊಂಡರೆ, ಅವನ ಪ್ರಬಲ ಸಂಕಲ್ಪದ ಮುಂದೆ ಸೃಷ್ಟಿಯು ತಲೆಬಾಗಲೇಬೇಕಾಗುತ್ತದೆ. ಈ ಸಿದ್ಧಿಯನ್ನು ಪಡೆಯಲು ಮನಸ್ಸು ಸಂಪೂರ್ಣ ಶುದ್ಧೀಕರಣವಾಗುವುದು ಆವಶ್ಯಕವಾಗಿರುತ್ತದೆ.

೭. ಈಶಿತ್ವ (ಸೃಷ್ಟಿಯ ಅಧಿಪತ್ಯ) : ಈಶಿತ್ವ ಎಂದರೆ ನಿಸರ್ಗದ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸುವುದು. ಮಳೆ ಬರಿಸುವುದು, ನೈಸರ್ಗಿಕ ವಿಕೋಪಗಳನ್ನು ತಡೆಯುವುದು ಅಥವಾ ಪದಾರ್ಥದ ಸ್ವರೂಪವನ್ನು ಬದಲಿಸುವ ಸಾಮರ್ಥ್ಯವು ಈಶಿತ್ವ ಸಿದ್ಧಿಯಿಂದ ಬರುತ್ತದೆ. ಈ ಸ್ಥಿತಿಯು ಸಾಧಕನನ್ನು ಈಶ್ವರೀಯ ಗುಣಗಳಿಗೆ ಹತ್ತಿರವಾಗಿಸುತ್ತದೆ.

೮. ವಶಿತ್ವ (ವಿಶ್ವದ ಮೇಲೆ ನಿಯಂತ್ರಣ) : ವಶಿತ್ವ ಎಂದರೆ ಸಂಪೂರ್ಣ ಸೃಷ್ಟಿಯನ್ನು ತನ್ನ ಪ್ರಭಾವದ ಅಡಿಯಲ್ಲಿ ತರುವುದು. ಈ ಸಿದ್ಧಿಯನ್ನು ಹೊಂದಿರುವ ಸಾಧಕನು ಹಿಂಸ್ರ ಪ್ರಾಣಿಗಳನ್ನು ಸಹ ಪ್ರೀತಿಯಿಂದ ಶಾಂತಗೊಳಿಸಬಲ್ಲನು. ಇದು ಕೇವಲ ಸಮ್ಮೋಹನವಲ್ಲ, ಬದಲಿಗೆ ಆತ್ಮಬಲದ ದಿವ್ಯ ಪ್ರಭಾವವಾಗಿದ್ದು, ಎದುರಿಗಿರುವ ವ್ಯಕ್ತಿ ಅಥವಾ ವಸ್ತುವು ಸ್ವಯಂಚಾಲಿತವಾಗಿ ಸಾಧಕನ ಆಜ್ಞೆ ಮತ್ತು ಲಹರಿಗಳಲ್ಲಿ ಇರುತ್ತದೆ.

೨ ಆ. ಅಷ್ಟಸಿದ್ಧಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ : ಅಧ್ಯಾತ್ಮಶಾಸ್ತ್ರವು ನಮ್ಮ ಶರೀರವನ್ನು ವಿಶ್ವದ ಒಂದು ಸಣ್ಣ ರೂಪ ಎಂದು ಹೇಳುತ್ತದೆ. ನಮ್ಮ ಶರೀರದಲ್ಲಿ ೭ ಚಕ್ರಗಳಿರುತ್ತವೆ. ಯಾವಾಗ ಸಾಧಕನು ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಪ್ರಾಣಶಕ್ತಿಯನ್ನು ಮೂಲಾಧಾರ ಚಕ್ರದಿಂದ ಆಜ್ಞಾ ಚಕ್ರದ ವರೆಗೆ ಕೊಂಡೊಯ್ಯುತ್ತಾನೆಯೋ, ಆಗ ಅವನ ಶರೀರದಲ್ಲಿನ ಸುಪ್ತ ಕೇಂದ್ರಗಳು (Latent Centers) ಜಾಗೃತಗೊಳ್ಳುತ್ತವೆ. ಈ ಜಾಗೃತಿಯಿಂದ ಮೆದುಳಿನ ಅಂತಹ ಭಾಗಗಳಿಗೆ ಶಕ್ತಿ ದೊರೆಯುತ್ತದೆ, ಅವು ಸಾಮಾನ್ಯವಾಗಿ ಸುಪ್ತವಾಗಿರುತ್ತವೆ. ಇದರಿಂದಲೇ ದೂರದೃಷ್ಟಿ (Clairaudience) ಗಳಂತಹ ಶಕ್ತಿಗಳು ವಿಕಸನಗೊಳ್ಳುತ್ತವೆ. ಸಿದ್ಧಿಗಳು ಪ್ರಾಪ್ತವಾಗುವುದು ಅಂದರೆ ಅದು ಚಮತ್ಕಾರವಲ್ಲ, ಬದಲಿಗೆ ಮಾನವನ ಚೇತನೆ Consciousness) ನಿಸರ್ಗದ ಸೂಕ್ಷ್ಮ ನಿಯಮಗಳೊಂದಿಗೆ ನಡೆಸುವ ಸಂವಾದವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಧ್ಯಾತ್ಮಶಾಸ್ತ್ರವು ಈ ಸಿದ್ಧಿಗಳನ್ನು ಕೇವಲ ಚಮತ್ಕಾರವೆಂದು ನೋಡುವುದಿಲ್ಲ. ಅದರ ಹಿಂದೆ ಒಂದು ವ್ಯವಸ್ಥಿತ ಪ್ರಕ್ರಿಯೆಯಿದೆ. ಅದು ಸಾಧನೆಯಿಂದ ಉಂಟಾದ ೭ ಚಕ್ರಗಳ ಜಾಗೃತಿಯ ಪರಿಣಾಮವಾಗಿದೆ. ಇದರ ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ:

೧. ಕೆಳಗಿನ ಚಕ್ರಗಳು (ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ) : ಈ ಚಕ್ರಗಳ ಶುದ್ಧಿಯಿಂದ ಶಾರೀರಿಕ ಶಕ್ತಿ ಮತ್ತು ಪಂಚೇಂದ್ರಿಯಗಳ ಮೇಲೆ ಹಿಡಿತವನ್ನು ಸಾಧಿಸಬಹುದು.

೨. ಹೃದಯ ಚಕ್ರ (ಅನಾಹತ) : ಇಲ್ಲಿಂದ ಸಾಧಕನಲ್ಲಿ ವಿಶ್ವದ ಬಗ್ಗೆ ಪ್ರೀತಿ ಮತ್ತು ನೈಸರ್ಗಿಕ ಶಕ್ತಿಯೊಂದಿಗೆ ಏಕರೂಪವಾಗುವ ಸಾಮರ್ಥ್ಯ ಬರುತ್ತದೆ.

೩. ಉನ್ನತ ಚಕ್ರಗಳು (ವಿಶುದ್ಧಿ ಮತ್ತು ಆಜ್ಞಾಚಕ್ರ) : ಯಾವಾಗ ಶಕ್ತಿಯು ಆಜ್ಞಾಚಕ್ರವನ್ನು (ಭ್ರೂಮಧ್ಯ) ತಲುಪುತ್ತದೆಯೋ, ಆಗ ಸಾಧಕನಿಗೆ ‘ತ್ರಿಕಾಲದರ್ಶಿ’ಯಾಗುವ ಸಾಮರ್ಥ್ಯ ದೊರೆಯುತ್ತದೆ. ದೂರದೃಷ್ಟಿ ಮತ್ತು ವಿಚಾರ ಸಂಕ್ರಮಣದ  ಶಕ್ತಿಯು(Telepathy)  ಇಲ್ಲಿಂದಲೇ ಉಗಮವಾಗುತ್ತದೆ.

೨ ಇ. ಅಷ್ಟಸಿದ್ಧಿಗಳ ಪ್ರಾಪ್ತಿ ಎಂದರೆ ಸಾಧಕನಿಗೆ ‘ಸುವರ್ಣಪಾಶ’ ! : 

ಅಧ್ಯಾತ್ಮಶಾಸ್ತ್ರದ ಪ್ರಕಾರ ಸಿದ್ಧಿಗಳು ಪ್ರಾಪ್ತವಾಗುವುದು ಸಾಧನೆಯ ಅಂತಿಮ ಧ್ಯೇಯವಲ್ಲ. ಭಗವಾನ ಶ್ರೀಕೃಷ್ಣ ಮತ್ತು ಮಹರ್ಷಿ ಪತಂಜಲಿ ಇವರು ಸ್ಪಷ್ಟವಾಗಿ ಹೇಳಿದ್ದಾರೆ: ‘ಸಿದ್ಧಿಗಳು ಸಾಧಕನ ಮಾರ್ಗದಲ್ಲಿನ ಅತಿದೊಡ್ಡ ‘ಸುವರ್ಣ ಪಾಶ’ಗಳಾಗಿವೆ(Golden Shackles.’ ಇದರ ಕಾರಣಗಳನ್ನು ಮುಂದೆ ಕೊಡಲಾಗಿದೆ .

೧. ಅಹಂಕಾರದ ಅಪಾಯ : ಸಿದ್ಧಿಗಳು ಪ್ರಾಪ್ತವಾದಾಗ ಸಾಧಕನಿಗೆ ‘ನಾನು ದೇವರಂತಿದ್ದೇನೆ’ ಎಂಬ ಭಾಸವಾಗಬಹುದು. ಈ ಅಹಂಕಾರವು ಅವನನ್ನು ಮುಕ್ತಿಯಿಂದ ದೂರ ಒಯ್ಯುತ್ತದೆ.

೨. ಶಕ್ತಿಯ ದುರುಪಯೋಗ : ಒಂದು ವೇಳೆ ಸಾಧಕನು ಸ್ವಾರ್ಥ ಅಥವಾ ಚಮತ್ಕಾರಕ್ಕಾಗಿ (ಪವಾಡಗಳಿಗಾಗಿ) ಈ ಶಕ್ತಿಗಳನ್ನು ಬಳಸಿದರೆ, ಅವನ ಅಧೋಗತಿ ನಿಶ್ಚಿತ.

೩. ಅಂತಿಮ ಧ್ಯೇಯ ‘ಮೋಕ್ಷ’ : ಯೋಗಶಾಸ್ತ್ರದ ಮೂಲ ಉದ್ದೇಶ ಅಥವಾ ಧ್ಯೇಯ ‘ಕೈವಲ್ಯ’ ಅಥವಾ ‘ಮೋಕ್ಷ’. ಸಿದ್ಧಿಗಳು ಈ ಪ್ರಯಾಣದ ನಡುವೆ ಸಿಗುವ ಕೇವಲ ವಿಶ್ರಾಂತಿ ತಾಣಗಳಿದ್ದಂತೆ.

ಇಷ್ಟು ದೊಡ್ಡ ಶಕ್ತಿಗಳು ಪ್ರಾಪ್ತವಾದಾಗ ಯಾವುದೇ ಸಾಮಾನ್ಯ ಮನುಷ್ಯನು ದಾರಿ ತಪ್ಪಬಹುದು. ಆದ್ದರಿಂದಲೇ ಭಾರತೀಯ ಋಷಿಮುನಿಗಳು ಈ ಸಿದ್ಧಿಗಳ ಬಗ್ಗೆ ಅತ್ಯಂತ ಕಠಿಣ ಎಚ್ಚರಿಕೆಗಳನ್ನು ನೀಡಿದ್ದಾರೆ. ಮಹರ್ಷಿ ಪತಂಜಲಿ ಯೋಗಸೂತ್ರದಲ್ಲಿ ಹೀಗೆ ಹೇಳುತ್ತಾರೆ, ‘ತೇ ಸಮಾಧೌ ಉಪಸರ್ಗ್ಗಾ ವ್ಯುತ್ಥಾನೇ ಸಿದ್ಧಯಃ’ (ಪ್ರಕರಣ ೩, ಶ್ಲೋಕ ೩೭). ಇದರ ಅರ್ಥ – ‘ಈ ಶಕ್ತಿಗಳು ಸಾಧನೆಯ ಮಾರ್ಗದಲ್ಲಿನ ‘ಉಪಸರ್ಗ’ ಅಥವಾ ಅಡೆತಡೆಗಳಾಗಿವೆ.’ ಸಾಧಕನು ಈ ಶಕ್ತಿಗಳ ಪ್ರದರ್ಶನದಲ್ಲಿ, ಜನರು ಮಾಡುವ ಹೊಗಳಿಕೆಯಲ್ಲಿ ಅಥವಾ ತನ್ನ ಅಹಂಕಾರದಲ್ಲಿ ಸಿಲುಕಿಕೊಂಡರೆ, ಅವನ ‘ಮೋಕ್ಷ’ ಅಥವಾ ‘ಆತ್ಮಸಾಕ್ಷಾತ್ಕಾರ’ದ ಪ್ರಯಾಣವು ಅಲ್ಲಿಗೇ ಕೊನೆಗೊಳ್ಳುತ್ತದೆ. ಸಿದ್ಧಿಗಳನ್ನು ಪಡೆಯುವುದು ಒಬ್ಬ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಸಿಕ್ಕಿದಂತೆ. ಅದನ್ನು ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿ ಎಂದು ನೀಡಲಾಗುತ್ತದೆ; ಆದರೆ ಅವನು ಆ ಹಣದ ಅಮಲಿನಲ್ಲಿ ತೇಲಿಹೋದರೆ, ಅವನು ಎಂದಿಗೂ ಪದವೀಧರ (ಸಿದ್ಧ ಪುರುಷ) ಆಗಲು ಸಾಧ್ಯವಿಲ್ಲ. ಅಧ್ಯಾತ್ಮದಲ್ಲಿ ಸಿದ್ಧಿಗಳ ಬಳಕೆಯನ್ನು ಕೇವಲ ‘ಲೋಕಕಲ್ಯಾಣಕ್ಕಾಗಿ’ ಮಾಡಬೇಕೇ ಹೊರತು ಸ್ವಾರ್ಥಕ್ಕಲ್ಲ.

೩. ಅಧ್ಯಾತ್ಮವು ಒಂದು ಪ್ರಗತ ವಿಜ್ಞಾನವಾಗಿದೆ !

ಗೂಢ ವಿದ್ಯೆ ಮತ್ತು ಅಷ್ಟಸಿದ್ಧಿಗಳು ಮಾನವ ಸಾಮರ್ಥ್ಯದ ಅಪಾರ ವ್ಯಾಪ್ತಿಯ ಅರಿವನ್ನು ಮಾಡಿಕೊಡುತ್ತವೆ. ನಾವು ಕೇವಲ ಮೂಳೆ-ಮಾಂಸದ ಶರೀರವಲ್ಲ, ಬದಲಿಗೆ ಅನಂತ ಶಕ್ತಿಯ ಅಂಶವಾಗಿದ್ದೇವೆ ಎಂಬುದನ್ನು ಗೂಢ ವಿದ್ಯೆಯು ನೆನಪಿಸುತ್ತದೆ. ಏಕಾಗ್ರತೆ, ಸಂಯಮ ಮತ್ತು ನಿಸ್ವಾರ್ಥ ಭಾವನೆಯಿಂದ ನಾವು ನಮ್ಮ ಮಿತಿಗಳನ್ನು ಮೀರಿಸಬಹುದು. ಅಷ್ಟಸಿದ್ಧಿಗಳು ಮಾನವ ವಿಕಾಸದ ಶಿಖರಗಳಾಗಿವೆ. ವಿಜ್ಞಾನವು ನಮಗೆ ಬಾಹ್ಯ ಜಗತ್ತಿನ ಮೇಲೆ ಹಿಡಿತ ಸಾಧಿಸಲು ಕಲಿಸಿಕೊಟ್ಟಿದ್ದರೆ, ಗೂಢ ವಿದ್ಯೆಯ ಈ ಅಧ್ಯಾತ್ಮಶಾಸ್ತ್ರವು ನಮಗೆ ಅಂತರ್ಜಗತ್ತನ್ನು ಗೆಲ್ಲುವ ದಾರಿಯನ್ನು ತೋರಿಸುತ್ತದೆ. ಇದನ್ನೆಲ್ಲ ಬರೆಯಲು ಕಾರಣವೇನೆಂದರೆ, ಗೂಢ ವಿದ್ಯೆಗಳನ್ನು ಮೂಢನಂಬಿಕೆ ಎಂದು ನೋಡುವವರು ತಮ್ಮನ್ನು ತಾವು ‘ವಿಜ್ಞಾನವಾದಿಗಳು’ ಎಂದು ಭಾವಿಸುತ್ತಾರೆ; ಆದರೆ ಅವರಿಗೆ ವಿಜ್ಞಾನದ ಸುಧಾರಿತ ಹಂತಗಳನ್ನು ಮುಕ್ತವಾಗಿ ನೋಡುವ ದೃಷ್ಟಿ ಇರುವುದಿಲ್ಲ. ಆದ್ದರಿಂದ ವಿಜ್ಞಾನದ ಸಂದರ್ಭದಲ್ಲಿ ಅವರೇ ನಿಜವಾದ ‘ಮೂಢನಂಬಿಕೆ’ ಉಳ್ಳವರಾಗುತ್ತಾರೆ ! ಅಧ್ಯಾತ್ಮವು ಒಂದು ಪ್ರಗತ ವಿಜ್ಞಾನವಾಗಿದೆ ಇದನ್ನು ತಥಾಕಥಿತ ವಿಚಾರವಾದಿಗಳಿಗೆ ಯಾರು ಹೇಳಬೇಕು ?

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.